ನಿಮಾಯ್‌ – ಕೃಷ್ಣ!?

ನಿಮಾಯ್ ಮನೆಯಲ್ಲಿ ಯಾವಾಗಲೂ ಪೂಜೆ-ಪುನಸ್ಕಾರಗಳ ಸಡಗರ. ಮನೆಗೆ ಸಾಧು-ಸಂತರನ್ನು ಕರೆದು ಉಪಚರಿಸುವುದೆಂದರೆ ಆತನ ತಂದೆ ತಾಯಿಗಳಿಗೆ ಎಲ್ಲಿಲ್ಲದ ಸಂಭ್ರಮ.

ಒಮ್ಮೆ ಹೀಗೇ ನಿಮಾಯ್ ಮನೆಯಲ್ಲಿ ಪೂಜೆ ನಡೆಯುತ್ತಿತ್ತು. ಪೂಜೆ ನಡೆಸುವುದಕ್ಕಾಗಿ ಬಂದಿದ್ದ ಬ್ರಾಹ್ಮಣರು ನೈವೇದ್ಯಾನ್ನವನ್ನು ತಾನೇ ತಯಾರಿಸಿ, ಅರ್ಪಣೆಗೆ ಇರಿಸಿಕೊಂಡಿದ್ದರು. ಎಲ್ಲ ವಿಧಿಗಳೂ ಸಾಂಗವಾಗಿ ನೆರವೇರಿದವು. ಇನ್ನೇನು ನೈವೇದ್ಯ ಅರ್ಪಿಸಬೇಕು. ಎಲ್ಲರೂ ಶ್ರೀಕೃಷ್ಣ ಸ್ಮರಣೆಯಲ್ಲಿ ತಲ್ಲೀನರಾಗಿದ್ದಾಗ ಬ್ರಾಹ್ಮಣರು ನೈವೇದ್ಯ ಸಮರ್ಪಣ ಮಂತ್ರ ಹೇಳತೊಡಗಿದರು. ಆಗ ಪುಟ್ಟ ನಿಮಾಯ್‌, ದಡದಡನೆ ಓಡಿಬಂದು, ಭಕ್ಷ್ಯಗಳನ್ನು ಒಂದೊಂದಾಗಿ ಭುಂಜಿಸತೊಡಗಿದ.

ಇದನ್ನು ನೋಡಿದ ಬ್ರಾಹ್ಮಣರು ಕೋಪಗೊಂಡರು. ಮನೆಯ ಜನರೂ ಗೊಂದಲಗೊಂಡರು. ನಿಮಾಯ್‌ನನ್ನು ಗದರುತ್ತಾ, ಬ್ರಾಹ್ಮಣ ಮತ್ತೊಮ್ಮೆ ನೈವೇದ್ಯ ತಯಾರಿಸಿ, ತಂದಿಟ್ಟರು.

ಪೂಜೆ ಮುಂದುವರಿಯಿತು, ಆದರೆ, ಈ ಬಾರಿಯೂ ನಿಮಾಯ್ ನೈವೇದ್ಯಕ್ಕೆ ಕೈ ಹಾಕಿದ. ತಂದೆ ತಾಯಿ ಅವನನ್ನು ತಡೆಯುವ ಮೊದಲೇ ತಿಂದುಬಿಟ್ಟ! ಬ್ರಾಹ್ಮಣರ ಕೋಪ ಇಮ್ಮಡಿಸಿತು. ನಿಮಾಯ್ ತಂದೆ ತಮ್ಮ ತುಂಟ ಮಗನನ್ನು ದಂಡಿಸುವ ಸಲುವಾಗಿ ಆತನನ್ನು ಕೋಣೆಯೊಳಗೆ ಕೂಡಿಹಾಕಿದರು. ಮತ್ತೊಮ್ಮೆ ನೈವೇದ್ಯ ತಯಾರಿಸಲಾಯಿತು.

ಈಗ ಯಾವ ಆತಂಕವೂ ಇಲ್ಲದಂತೆ ಪೂಜೆ ನೆರವೇರಿಸಬಹುದೆಂದು ಎಲ್ಲರೂ ಪೂಜಾ ವೇದಿಕೆಯ ಬಳಿ ಕುಳಿತರು. ಆದಾಗಲೇ ಮಧ್ಯರಾತ್ರಿ ಸಮೀಪಿಸುತ್ತಿತ್ತು. ತಂದೆ ಮೆಲ್ಲನೆ ಕಿಟಕಿಯಿಂದ ಹಣಕಿ, ಮಗು ನಿದ್ರಿಸುತ್ತಿದ್ದುದನ್ನು ಖಚಿತ ಪಡಿಸಿಕೊಂಡರು.

ಬ್ರಾಹ್ಮಣರು ಮತ್ತೊಮ್ಮೆ ನೈವೇದ್ಯ ಮಂತ್ರ ಹೇಳಲಾರಂಭಿಸಿದರು. ಅವರ ಗಮನವೆಲ್ಲ ಮಂತ್ರದ ಮೇಲೆ, ಮಂತ್ರ ಮುಗಿಯಿತು. ಬ್ರಾಹ್ಮಣರು ನೋಡುತ್ತಾರೆ – ನಿಮಾಯ್ ಮತ್ತೆ ನೈವೇದ್ಯದೆದುರು ಪ್ರತ್ಯಕ್ಷ! ಅವನು ಆವಾಗಲೇ ಭಕ್ಷಣದಲ್ಲಿ ತೊಡಗಿದ್ದ.

ಈಗ ಬ್ರಾಹ್ಮಣನ ಕೋಪ ಅಸಹಾಯಕತೆಯಾಗಿ, ದುಃಖ ಉಮ್ಮಳಿಸಿತು. ಅವರು ಅಳತೊಡಗಿದರು. ಮಂದಹಾಸ ಬೀರುತ್ತ ಕುಳಿತಿದ್ದ ನಿಮಾಯ್, ಅವರನ್ನು ಸಂತೈಸಿದ. ತನ್ನ ನಿಜಸ್ವರೂಪವನ್ನು ಪ್ರಕಟಿಸಿದ. ತನ್ನ ಕೃಷ್ಣಾವತಾರದ ಕಾಲದಲ್ಲಿ ಇದೇ ಬ್ರಾಹ್ಮಣರು ನಂದರಾಜನ ಮನೆಯಲ್ಲಿ ಪೂಜೆ ನೆರವೇರಿಸಿದ್ದನ್ನು ಪ್ರತಿ ಜನ್ಮದಲ್ಲೂ ತನಗೆ ಭಕ್ತಿಸೇವೆ ಸಲ್ಲಿಸುತ್ತಿರುವುದರಿಂದ ತಾನು ಸಂಪ್ರೀತನಾಗಿರುವುದನ್ನೂ ನೈವೇದ್ಯ ತಿಂದುದಾಗಿ ಹೇಳಿದ.

ಬ್ರಾಹ್ಮಣರ ಒಳಗಣ್ಣು ತೆರೆಯಿತು. ಈತ ಕೃಷ್ಣನೇ ಎಂದು ಮನದಟ್ಟಾಯಿತು. ಈ ಕಾರಣದಿಂದಲೇ, ಬ್ರಾಹ್ಮಣ, ಶ್ರೀ ಕೃಷ್ಣನಿಗೆ ನೈವೇದ್ಯ ಸಮರ್ಪಣ ಮಂತ್ರ ಹೇಳಿದಾಗಲೆಲ್ಲ ಪುಟ್ಟ ನಿಮಾಯ್ ಓಡಿ ಬಂದು ಅದನ್ನು ಸ್ವೀಕರಿಸುತ್ತಿದ್ದುದು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi