ದಾನಂ ವಿಭೂಷಣಂ ಲೋಕೇ ದಾನಂ ದುರ್ಗತಿವಾರಣಮ್ |
ದಾನಂ ಸ್ವರ್ಗಸ್ಯ ಸೋಪಾನಂ ದಾನಂ ಶಾಂತಿಕರಂ ಶುಭಮ್ ||

ದಾನವೇ ಈ ಜಗತ್ತಿನಲ್ಲಿ ಉತ್ತಮ ಆಭರಣ, ದಾನವೇ ದಾರಿದ್ರ್ಯ ನಿವಾರಕ, ದಾನವು ಸ್ವರ್ಗದ ಮೆಟ್ಟಿಲು, ದಾನವು ಶಾಂತಿಕರವೂ ಹೌದು.
ಹೀಗೆ ಅಮೂಲ್ಯವೆನಿಸುವ ದಾನಕ್ಕೆ ಅನ್ವರ್ಥನೆನಿಸಿದವನು ನೃಗ ಮಹಾರಾಜ. ನೃಗ ಮಹಾರಾಜನು ಇಕ್ಷ್ವಾಕು ರಾಜನ ಮಗ. ಮಹಾದಾನಿಯಾದ ಇವನು ಈ ಧಾತ್ರಿಯ ಧೂಳಿನ ಕಣಗಳ ಸಂಖ್ಯೆಯಷ್ಟು, ನಭೋಮಂಡಲದ ನಕ್ಷತ್ರಗಳ ಸಂಖ್ಯೆಯಷ್ಟು ಮತ್ತು ವರ್ಷಧಾರೆಯ ಹನಿಗಳ ಸಂಖ್ಯೆಯಷ್ಟು ಮೊತ್ತದಲ್ಲಿ ಗೋವುಗಳನ್ನು ದಾನ ನೀಡಿರುತ್ತಾನೆ.
ವೈದಿಕ ಧರ್ಮಕಾರ್ಯಗಳಲ್ಲಿ ದಾನಿಯಾದವನು ಬ್ರಾಹ್ಮಣರಿಗೆ ಗೋದಾನ ಮಾಡಬೇಕಾದುದು ವಿಧಿವತ್ತಾದೆಂದು ಅರಿತು ನಡೆದವನೇ ನೃಗಮಹಾರಾಜ. ದಾನದಿಂದ, ಅರ್ಥಾತ್ ಧರ್ಮಶ್ರದ್ಧೆಯುಳ್ಳ ಕಾರ್ಯದಿಂದ, ಒಬ್ಬ ವ್ಯಕ್ತಿಯು ಉನ್ನತ ಸ್ವರ್ಗಲೋಕದ ಎತ್ತರಕ್ಕೆ ಏರಬಹುದಾದರೂ ಆ ಪದವಿಯೂ ಅನಿಶ್ಚಿತ, ಆ ಸುಖವೂ ಅಶಾಶ್ವತ. ಆದಕಾರಣ, ದಾನದ ಫಲವನ್ನು ಪಡೆಯಬೇಕಾದರೆ ಆ ಕಾಣಿಕೆಗಳನ್ನು ಶ್ರೀಕೃಷ್ಣನ ಸಂಪ್ರೀತಿಯ ಸಲುವಾಗಿ ಸಮರ್ಪಿಸಬೇಕೆಂದು ಸ್ವಯಂ ಭಗವಂತನೇ ನುಡಿದಿದ್ದಾನೆ.
ನೃಗ ಮಹಾರಾಜನು ದಾನ ನೀಡುತ್ತಿದ್ದ ಹಸುಗಳು ಸಾಧಾರಣ ಹಸುಗಳಾಗಿರಲಿಲ್ಲ. ಪ್ರತಿಯೊಂದು ಹಸುವೂ ಒಂದೇ ಕರುವಿಗೆ ಜನ್ಮಕೊಟ್ಟ ವಿಶೇಷತೆಯೊಂದಿಗೆ ಹಾಲು ತುಂಬಿಕೊಂಡು ಆರೋಗ್ಯಭರಿತವಾದ, ಸಾಧು ಸ್ವಭಾವದ, ಎಳೆ ಹರಯದ ಹಸುವಾಗಿದ್ದಿತು. ಅವುಗಳ ಕೋಡುಗಳು ಬ೦ಗಾರದ ತಗಡುಗಳಿ೦ದಲೂ ಮತ್ತು ಗೊರಸುಗಳು ಬೆಳ್ಳಿಯ ತಗಡುಗಳಿ೦ದಲೂ ಸಿಂಗಾರಗೊಂಡಿದ್ದವು. ಹಸುಗಳು ಪದಕಹಾರಗಳಿಂದ ಶೋಭಿಸಿದಲ್ಲದೆ, ಮುತ್ತುಗಳನ್ನು ಒತ್ತಿ ಕುಸುರಿ ಕೆಲಸ ಮಾಡಿದ ರೇಷ್ಮೆವಸ್ತ್ರಗಳಿಂದ ಹೊದಿಸಲ್ಪಟ್ಟಿದ್ದವು.
ಇಷ್ಟು ಅಮೂಲ್ಯವಾಗಿ ಅಲಂಕರಿಸಲ್ಪಟ್ಟ ಹಸುಗಳನ್ನು ಉನ್ನತ ಶ್ರೇಣಿಯ ವಿಪ್ರರಿಗಲ್ಲದೆ ಯಾವುದೇ ಅಪಾತ್ರನಿಗೆ ನೀಡಲಾಗದೆಂದು ರಾಜನು ತಿಳಿಸಿದ್ದನು. ಏಕೆಂದರೆ ನಿಜವಾಗಿಯೂ ಬ್ರಾಹ್ಮಣನೇ ಆದವನು ಹಣವೆನ್ನುವುದು ಸುಜ್ಞಾನದಿಂದ ವಿಮುಖನನ್ನಾಗಿಸಿ ಲೌಕಿಕದೆಡೆಗೆ ಎಳೆದೊಯ್ಯುವುದೆಂದು ಅರಿತು ಬಡತನಕ್ಕೆ ಅಂಟಿಕೊಂಡವನಾಗಿರುತ್ತಾನೆ.
ಈ ಸಿದ್ಧಾಂತಕ್ಕೆ ಬದ್ಧರಾದ ಬ್ರಾಹ್ಮಣರು ವೇದಜ್ಞಾನದಲ್ಲಿ ಔನ್ನತ್ಯವನ್ನು ಸಾಧಿಸಿ ಕಠಿಣ ವ್ರತಪಾಲಕರಾಗಿರುತ್ತಾರೆ. ಜೊತೆಗೆ ಉದಾರಿಗಳೂ, ಸ್ನೇಹಶೀಲರೂ ಆಗಿರುತ್ತಾರೆ. ಈ ನಿಟ್ಟಿನಲ್ಲಿ ಭಕ್ತ ಸುದಾಮನು ಉಲ್ಲೇಖಾರ್ಹನು.
ಶ್ರೀಕೃಷ್ಣನ ಸ್ನೇಹಿತ ಸುದಾಮ ವಿಪ್ರನು ಬಡ ಗೃಹಸ್ಥನಾದರೂ ದೇವೋತ್ತಮ ಪರಮಪುರುಷನ ಸೇವೆಗೆ ತನ್ನ ಬದುಕನ್ನು ಮುಡಿಪಾಗಿರಿಸಿ ಪರಿಪೂರ್ಣ ಜ್ಞಾನದ ಬಿ೦ದುವನ್ನು ಮುಟ್ಟಿದವನಾದ್ದರಿಂದ ಭೌತಿಕ ಸುಖದಲ್ಲಿ ಆಸೆ ಇಲ್ಲದವನಾಗಿದ್ದನು. ಆ ಕಾರಣ ಪ್ರಭುವಿನಿಂದ ಏನನ್ನೂ ಬೇಡದೆ ಅವನ ಪ್ರೀತಿಗೆ ಪಾತ್ರನಾಗಿ ಸ್ವರ್ಗಲೋಕದ ಅರಸನ ಕಲ್ಪನೆಗೂ ಮೀರಿದ ಸಿರಿ ಪಡೆಯುತ್ತಾನೆ! ಅಷ್ಟೇಕೆ? ಪರಮ ಪುರುಷನಿಂದ ಸೇವಿಸಲ್ಪಟ್ಟು ಪೂಜಿಸಲ್ಪಡುವ ಪರಮ ಸುಕೃತ ಅವನದಾಯಿತು!!
ನಮೋ ಬ್ರಹ್ಮಣ್ಯ ದೇವಾಯ ಗೋಬ್ರಾಹ್ಮಣ ಹಿತಾಯಚ |
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||

ಮೇಲಿನ ಕೃಷ್ಣಸ್ತುತಿಯಲ್ಲಿರುವಂತೆ ಬ್ರಾಹ್ಮಣ್ಯ ದೇವನಾದ ಶ್ರೀಕೃಷ್ಣನು ಗೋವುಗಳ, ಬ್ರಾಹ್ಮಣರ ಹಿತವನ್ನು ರಕ್ಷಿಸುತ್ತಾನೆ.
ಹೀಗೆ ವೈದಿಕ ಸಂಸ್ಕೃತಿಯ ಪೋಷಕನಾದ ಪುರುಷೋತ್ತಮನು ನೀಡಿದ ಭಾಗ್ಯವನ್ನು ಅವನಿಗಾಗಿಯೇ ಬಳಸಬೇಕೆಂದು ಬ್ರಾಹ್ಮಣರು ಬಲ್ಲರು.
ಆದ್ದರಿಂದ ಬ್ರಾಹ್ಮಣೋ ವೈಷ್ಣವಃ, ಬ್ರಾಹ್ಮಣ ಪಂಡಿತಃ ಎಂದೆನಿಸಿಕೊಳ್ಳುವ ಸತ್ಪಾತ್ರ ಬ್ರಾಹ್ಮಣರಿಗೆ ನೃಗಮಹಾರಾಜನು ಗೋದಾನ ಮಾಡಿದುದಲ್ಲದೆ ಭೂಮಿ, ಮನೆ, ಚಿನ್ನ ಎಲ್ಲವನ್ನೂ ನೀಡಿದನು. ಅವಿವಾಹಿತರಿಗೆ ಹೆಣ್ಣು, ದಾಸಿ, ದವಸ, ಪಾತ್ರೆ, ವಸ್ತ್ರ, ಆಭರಣ, ರಥ, ಮುಂತಾದುವನ್ನು ಕೊಟ್ಟು ಉಪಕರಿಸಿದನು. ಇಷ್ಟು ಸಾಲದೆಂಬಂತೆ ನಗರದಲ್ಲಿ ಕೆರೆ ಕಟ್ಟಿಸಿ, ಬಾವಿ ತೋಡಿಸಿ, ಸಾಲು ಮರಗಳನ್ನೂ ನಡೆಸುವಂತಹ ಪುಣ್ಯ ಕಾರ್ಯಗಳನ್ನೂ ಮಾಡಿದನು.
ಇದೇ ಹಂತದಲ್ಲಿ ದುರದೃಷ್ಟವೆಂಬಂತೆ ದಾನವಾಗಿ ಕೊಡಲ್ಪಟ್ಟ ಒಂದು ಹಸುವು ನೃಗ ಮಹಾರಾಜನ ಆಕಳ ಹಿಂಡಿನಲ್ಲಿ ಬಂದು ಸೇರಿಕೊಂಡು ಬಿಡುತ್ತದೆ. ಇದರ ಅರಿವಿಲ್ಲದ ರಾಜ ಪುನಃ ಅದನ್ನು ಇನ್ನೊಬ್ಬ ಬ್ರಾಹ್ಮಣನಿಗೆ ಧಾರೆ ಎರೆದು ಕೊಟ್ಟು ಬಿಡುತ್ತಾನೆ. ಸರಿ, ಇದು ಆ ಇಬ್ಬರು ಬ್ರಾಹ್ಮಣರ ಮಧ್ಯೆ ಕಲಹಕ್ಕೆ ನಾಂದಿಯಾಯಿತು.
ಅಲ್ಲದೇ ಬ್ರಾಹ್ಮಣರ ವಿಷಯದಲ್ಲಿ ಕೊಟ್ಟ ದಾನವನ್ನು ಮರಳಿ ಹಿಂದಕ್ಕೆ ಪಡೆಯುವುದು ಮಹಾಪಾಪವೇ ಸರಿ ಎಂದು ಅವರು ಆರೋಪಿಸಿದರು. ರಾಜನು ತನ್ನ ತಪ್ಪಿಗೆ ನರಕ ಪ್ರಾಪ್ತಿಯಾಗದಂತೆ ಅವರ ಕೃಪಾ ಕಟಾಕ್ಷವನ್ನು ಬೇಡಿದರೇನು? ಮನುಕಾಯಿದೆಯ ಪ್ರಕಾರ ಬ್ರಹ್ಮ-ಸ್ವ, ಎಂದರೆ ಬ್ರಾಹ್ಮಣರ ಸ್ವತ್ತು, ಯಾರಿಂದಲೂ, ಯಾವ ಸರಕಾರದಿಂದಲೂ ಸ್ವಾಧೀನಪಡಿಸಿಕೊಳ್ಳಲಾಗದು. ರಾಜನು ಆ ಒಂದು ಆಕಳಿಗೆ ಬದಲಾಗಿ ಒಂದು ಲಕ್ಷ ಆಕಳುಗಳನ್ನು ಕೊಟ್ಟನು. ಆದರೆ ಆ ಬ್ರಾಹ್ಮಣರು ಇದಕ್ಕೆ ಒಪ್ಪದೆ ಕೋಪೋದ್ರಿಕ್ತವಾಗಿ ಅರಮನೆಯಿಂದ ಹೊರಟು ಹೋದರು.
ಮುಂದೆ ಕಾಲಾಂತರದಲ್ಲಿ ರಾಜನು ದೇಹತ್ಯಾಗ ಮಾಡುವ ಸಮಯಕ್ಕೆ ಸಾವಿನ ಸರ್ವಾಧಿಕಾರಿಯಾದ ಯಮನಲ್ಲಿಗೆ ಒಯ್ಯಲ್ಪಟ್ಟಾಗ, ಯಮನು, ”ಮೊದಲು ನಿನ್ನ ಧರ್ಮಶ್ರದ್ಧೆಯುಳ್ಳ ಕಾರ್ಯಗಳ ಫಲಗಳನ್ನು ಅನುಭವಿಸುವೆಯೋ ಅಥವಾ ಅಧಾರ್ಮಿಕ ಕಾರ್ಯಗಳ ಫಲಗಳನ್ನು ಅನುಭವಿಸುವಿಯೋ” ಎಂದು ಕೇಳುತ್ತಾನೆ.
ಅಲ್ಲದೆ ನೃಗಮಹಾರಾಜನ ಅಸಂಖ್ಯ ಧಾರ್ಮಿಕ ಕಾರ್ಯಗಳ ಫಲವಾದ ಅನಂತ ಸುಖಗಳ ಪಾರವನ್ನು ತಾನರಿಯೆನೆಂದು ಯಮನು ಸೂಕ್ಷ್ಮವಾಗಿ ತಿಳಿಸುತ್ತಾನೆ. ಆದರೂ, ಪರಮಾಶ್ಚರ್ಯವೆಂಬಂತೆ, ರಾಜನು ತನ್ನ ಅಧಾರ್ಮಿಕ, ದೈವನಿಷ್ಠೆಯಲ್ಲದ ಕಾರ್ಯಗಳ ಫಲ ಉಣಲು ಸಿದ್ಧನಾಗುತ್ತಾನೆ. ಆ ಕೂಡಲೇ ರಾಜನು ಯಮನ ಇಚ್ಛೆಯಂತೆ ಹಲ್ಲಿಯಾಗಿ ಮಾರ್ಪಾಡಾದನು.
ದ್ವಾರಕೆಯ ಹತ್ತಿರದ ಕಾಡಿನ ಬಾವಿಯೊಂದರಲ್ಲಿ ಸೇರಿಕೊಂಡ ಆ ಬೃಹದಾಕಾರದ ಹಲ್ಲಿಯು ಕೃಷ್ಣ ಪರಮಾತ್ಮನನ್ನು ಧ್ಯಾನಿಸುತ್ತಿದ್ದರೂ ನೃಗ ಮಹಾರಾಜನಾಗಿರುವಲ್ಲಿ ಕೃಷ್ಣ ಪ್ರಜ್ಞನಾಗಿರುವುದಿಲ್ಲ. ಏಕೆಂದರೆ ನಿಜವಾದ ಕೃಷ್ಣಪ್ರಜ್ಞ ವ್ಯಕ್ತಿಯು ಕೃಷ್ಣನನ್ನು ಪ್ರೀತಿಸುತ್ತಾನೆಯೇ ಹೊರತು ಯಾವುದೇ ಕಾರ್ಯಗಳನ್ನೂ, ಅವುಗಳ ಫಲಾಫಲಗಳನ್ನೂ ಅಲ್ಲ.

ರಾಜನಿಗಾದರೋ ಭ್ರಷ್ಟ ಕಾರ್ಯದ ಫಲವನ್ನು ಮೊದಲು ಅನುಭವಿಸಿ ಅನಂತರ ಧರ್ಮಶ್ರದ್ಧೆಯುಳ್ಳ ಕಾರ್ಯದ ಫಲವನ್ನು ಅನುಗಾಲವೂ ನಿರಾತಂಕವಾಗಿ ಅನುಭವಿಸುತ್ತಿರಬಹುದೆಂಬ ಇಚ್ಛೆಯಿರುತ್ತದೆ. ಬ್ರಹ್ಮಸಂಹಿತೆಯ ಅನುಸಾರ, ಭಗವಂತನ ಅನುಗ್ರಹದಿಂದ, ಭಕ್ತನಾದವನು ಫಲದಾಯಕ ಕಾರ್ಯಗಳ ಪ್ರತಿಪರಿಣಾಮಕ್ಕೆ ಒಳಪಡುವುದಿಲ್ಲ.
ಶ್ರೀಕೃಷ್ಣನು, ಬಾವಿಯಲ್ಲಿದ್ದ ಹಲ್ಲಿಯ ವಿಷಯವನ್ನು ವಿಹಾರಾರ್ಥವಾಗಿ ವನಕ್ಕೆ ಹೋಗಿದ್ದ ತನ್ನ ಪರಿವಾರದವರಿಂದ ಗ್ರಹಿಸುತ್ತಾನೆ. ಎಲ್ಲ ಜೀವಿಗಳ ಪರಮ ಮಿತ್ರನಾದ ಆ ದೇವನು ಧಾವಿಸಿ ಬಂದು ತನ್ನ ಎಡಗೈ ನೀಡಿ ಹಲ್ಲಿಯನ್ನು ಹೊರತರಲು, ಭಗವಂತನ ವರದ ಹಸ್ತದ ಸ್ಪರ್ಶದಿಂದ ಅದು ದೇವತಾಪುರುಷನಾಗಿ ಬಿಟ್ಟಿತು!
ಏನೇನು ದಾನವ ಮಾಡಲಿ ಹರಿ।
ಧ್ಯಾನಕೆ ಸಮನಾದ ದಾನಗಳುಂಟೆ ||
ದಿನಕೊಂದು ಸಾವಿರ ಗೋದಾನ ಮಾಡಲಿ |
ಅನುದಿನ ಅನ್ನದಾನವ ಮಾಡಲಿ ||
ಘನವಾಗಿ ಸುವರ್ಣದಾನವ ಮಾಡಲಿ |
ವನಜನಾಭನ ಧ್ಯಾನಕೆ ಸರಿಯುಂಟೆ ||
ಎಂದಿದ್ದಾರೆ ಹರಿದಾಸರಾದ ಪುರಂದರದಾಸರು. ಅಂತೆಯೇ ಜಾತಿ- ಸ್ಮರನಾದ ನೃಗನು ಭಗವಂತನಾದ ಶ್ರೀಕೃಷ್ಣನ ಸ್ಮರಣೆಯಲ್ಲಿದ್ದುದರಿಂದ ಹಲ್ಲಿಯ ರೂಪದಿಂದ ಬೇಗನೆ ಬಿಡುಗಡೆ ಹೊಂದಿ ದೇವ ಮಾನವನಾದನು. ಕೆಲವು ವೇಳೆ ದೇವ ಮಾನವನು ಭಗವಂತನನ್ನು ಮುಖಾಮುಖಿಯಾಗಿ ಸಂದರ್ಶಿಸಿದರೂ ಆಧ್ಯಾತ್ಮ ಸಾಮ್ರಾಜ್ಯ ಎಂದರೆ ವೈಕುಂಠವನ್ನು ಪ್ರವೇಶಿಸಲಾಗದು. ಇವರು ಸದಾಕಾಲವೂ ಕೃಷ್ಣ ಭಕ್ತರೇ ಆಗಿಬಿಟ್ಟರೆ ಮತ್ತೊಂದು ಬಾರಿಗೆ ವೈಕುಂಠವನ್ನು ಪ್ರವೇಶಿಸುವುದು ಖಂಡಿತ.
ದೇವತಾಪುರುಷನಾದ ನೃಗ ಮಹಾರಾಜನು ಪರಮ ಪ್ರಭುವನ್ನು ಪರಿಪರಿಯಾಗಿ ಕೊಂಡಾಡಿದನು. ತನ್ನನ್ನು ಆತನ ಚರಣಕಮಲಗಳಲ್ಲಿ ಯಕಃಶ್ಚಿತ್ ಧೂಳಾಗಿ ಸ್ವೀಕರಿಸಬೇಕೆಂದು ಬಯಸಿದನು. ತದನಂತರ ರಾಜನು ಶ್ರೀಕೃಷ್ಣನಿಗೆ ಪ್ರದಕ್ಷಿಣೆ ಮಾಡಿ, ಪಾದಾರವಿಂದಗಳಿಗೆ ನಮಸ್ಕರಿಸಿ ಸ್ವರ್ಗದಿಂದಿಳಿದ ವಿಮಾನವನ್ನೇರಿ ಆ ಸ್ವರ್ಗಲೋಕಕ್ಕೆ ತೆರಳಿದನು.






Leave a Reply