ಸ್ಥಳ: ಕೊಲಂಬಸ್, ಓಹೈಯೋ, ದಿನಾಂಕ 11ನೇ ಮೇ, 1969
ಶೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುವಾದರು ಮತ್ತು ಕವಿ ಅಲೆನ್‌ಗಿನ್ಸ್‌ಬರ್ಗ್ ಮಧ್ಯೆ ನಡೆದ ಸಂವಾದ ರೂಪ
– ಅನುವಾದ: ಡಾ.ಕೆ.ವೈ.ಬಾಲರಾಜ್
ಶ್ರೀಲ ಪ್ರಭುಪಾದ: ಯಾರೂ ಸೇವೆಯಿಂದ ಮುಕ್ತರಲ್ಲ. ಏಕೆಂದರೆ ಸ್ವಭಾವಜನ್ಯ ನಾವು ಸೇವಕರಾಗಿದ್ದೇವೆ. ನಾವು ಭಗವಂತನ ಅಥವಾ ಮಾಯೆಯ ಸೇವಕರಾಗುತ್ತೇವೆ. ಜೀವನದ ಯಾವುದೇ ಸ್ಥಿತಿಯಲ್ಲಿಯೂ ಕೂಡ ನಾವು ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಪಾಲಿಸದಿದ್ದರೆ ಜೈಲುವಾಸ ಮಾಡಬೇಕಾಗುತ್ತದೆ. ಅದೇ ರೀತಿಯಾಗಿ ಮಾಯೆ ಮತ್ತು ಕೃಷ್ಣ ನಾವು ಕೃಷ್ಣನನ್ನು ಅನುಸರಿಸದಿದ್ದರೆ ಮಾಯೆ ಹತ್ತಿರ ಬರಬೇಕಾಗುತ್ತದೆ. ಆಗ ನಾವು ಮುಕ್ತರಾಗಿರುವುದಿಲ್ಲ. ಅದು ನಮ್ಮ ಸ್ಥಿತಿಯೂ ಕೂಡ ಅಲ್ಲ. ಸ್ವಾತಂತ್ರ್ಯ ನಮ್ಮ ಆಶಾಭಂಗಕ್ಕೆ ಈಡಾಗುತ್ತದೆ.
ಅಲೆನ್ ಗಿನ್ಸ್ ಬರ್ಗ್: ನಿಮಗೆ ರಿಚರ್ಡ್ ಅಲ್ಬರ್ಟ್ ಎಂಬ ಮನುಷ್ಯನ ನೆನಪಿದೆಯೇ? ಅವನು ಬಹಳ ವರ್ಷಗಳ ಹಿಂದೆ ಹಾರ್ವರ್ಡ್‌ನಲ್ಲಿ ತಿಮೂತಿಲೇರಿ (Timothy Leary) ಜೊತೆ ಕೆಲಸ ಮಾಡುತ್ತಿದ್ದ. ಅವನು ಭಾರತಕ್ಕೆ ಹೋಗಿ ಗುರುವೊಬ್ಬನನ್ನು ಹುಡುಕಿ ಹನುಮಾನ್ ಜಿಯ ಅಂದರೆ ಹನುಮಾನ್‌ನ ಭಕ್ತನಾದ. ನಾವು ಮಾಯೆ ಮತ್ತು ಅಮೆರಿಕದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆಗ ಅವನು ಹೇಳಿದ್ದೇನೆಂದರೆ ಭಾರತದಲ್ಲಿರುವ ಅವನ ಗುರು ಅವನಿಗೆ ಕಲಿಯುಗದ ಪಾಶ್ಚಿಮಾತ್ಯರ ಕ್ರೈಸ್ತ ಎಲ್ ಎಸ್ ಡಿ (ಮಾದಕ ಪದಾರ್ಥ) ಎಂದು ತಿಳಿಸಿದ್ದಾನೆ ಎಂದು.
ಶ್ರೀಲ ಪ್ರಭುಪಾದ: ಕ್ರೈಸ್ತನೇ?
ಅಲೆನ್ ಗಿನ್ಸ್ ಬರ್ಗ್: ಕಲಿಯುಗದ ಪಾಶ್ಚಿಮಾತ್ಯರಿಗೆ ಹೇಗೆ ಕಲಿಯುಗ ತೀವ್ರಗೊಳ್ಳುತ್ತಾ ಹೋಗುತ್ತದೆಯೋ ಆಸಕ್ತಿಯೂ ಕೂಡ ಗಾಢವಾಗುತ್ತಾ ಹೋಗುತ್ತದೆ ಮತ್ತು ಮುಕ್ತಿಯು ಸುಲಭವಾಗುತ್ತಾ ಹೋಗುತ್ತದೆ.
ಶ್ರೀಲ ಪ್ರಭುಪಾದ: ಕಲಿಯುಗದಲ್ಲಿ ಮುಕ್ತಿ ತುಂಬಾ ಸುಲಭವಾಗಿರುತ್ತದೆ ಎಂಬುದು ಉತ್ತಮವಾದ ವಾಕ್ಯ. ಅದು ಶ್ರೀಮದ್ಭಾಗವತದ ಶ್ಲೋಕವೂ ಕೂಡ. ಆದರೆ ಮುಕ್ತಿಯ ಪ್ರಕ್ರಿಯೆ ಸಂಕೀರ್ತನೆ (ಭಗವಂತನ ನಾಮಗಳ ಜಪ)ಯೇ ಹೊರತು ಮಾದಕ ಪದಾರ್ಥ (ಎಲ್‌ಎಸ್‌ಡಿ) ಅಲ್ಲ.
ಅಲೆನ್ ಗಿನ್ಸ್ ಬರ್ಗ್: ಯಾರು ಮುಕ್ತಿಯನ್ನು ಶುದ್ಧ ಭೌತಿಕ ರಾಸಾಯನಿಕ ರೂಪದಲ್ಲಿ ಸ್ವೀಕರಿಸುತ್ತಾರೋ ಅಂಥವರಿಗೆ ಕೃಷ್ಣನು ಮಾತ್ರೆಯ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ ಎಂಬುದು ತರ್ಕ ಅದು.
ಶ್ರೀಲ ಪ್ರಭುಪಾದ: ಯಾವುದೇ ಭೌತಿಕ ರೂಪದಿಂದ ಮುಕ್ತಿ ಎಲ್ಲಿದೆ? ಅದು ಭ್ರಮೆ.
ಅಲೆನ್ ಗಿನ್ಸ್ ಬರ್ಗ್: ಆಸಕ್ತಿಯನ್ನು ತೊಲಗಿಸುವುದೇ ಅದರ ಪರಿಣಾಮವಾಗಿರಬಹುದು.

ಶ್ರೀಲ ಪ್ರಭುಪಾದ: ಇಲ್ಲ. ಯಾವುದೇ ಭೌತಿಕ ವಸ್ತುವಿನಲ್ಲಿ ನಿಮಗೆ ಆಸಕ್ತಿಯಿದ್ದರೆ, ಅಸಕ್ತಿಯನ್ನು ಹೇಗೆ ತೊಲಗಿಸಿದ ಹಾಗೆ ಆಗುತ್ತದೆ? ಎಲ್ ಎಸ್ ಡಿ (ಮಾದಕ ಪದಾರ್ಥ) ಭೌತಿಕ, ರಾಸಾಯನಿಕ ವಸ್ತು.
ಅಲೆನ್ ಗಿನ್ಸ್ ಬರ್ಗ್: ಹೌದು.
ಶ್ರೀಲ ಪ್ರಭುಪಾದ: ನೀವು ಮಾದಕ ಪದಾರ್ಥ (ಎಲ್‌ಎಸ್‌ಡಿ)ದ ಆಶ್ರಯವನ್ನು ಪಡೆಯುತ್ತಿದ್ದರೆ ಜಡದಿಂದ ಸಹಾಯ ಪಡೆಯುತ್ತಿದ್ದ ಹಾಗಾಗುತ್ತದೆ. ಅಂದ ಮೇಲೆ ಜಡದಿಂದ ನೀವು ಹೇಗೆ ಮುಕ್ತರಾಗುತ್ತೀರಿ?
ಅಲೆನ್ ಗಿನ್ಸ್ ಬರ್ಗ್: ಬಹುಶಃ ಎಲ್ಎಸ್‌ಡಿಯ (ಮಾದಕ ಪದಾರ್ಥ) ಅಮಲಿನಲ್ಲಿ ನಿಮಗೆ ಎಲ್ ಎಸ್ ಡಿ (ಮಾದಕ ಪದಾರ್ಥ) ಒಂದು ಭೌತಿಕ ಮಾತ್ರೆಯೆಂದು ಅನ್ನಿಸುತ್ತದೆ. ಮತ್ತೆ ಅದು ಅಂತಹ ದೊಡ್ಡ ವಿಚಾರವೇನೂ ಅಲ್ಲ.
ಶ್ರೀಲ ಪ್ರಭುಪಾದ: ಅದು ಅಪಾಯಕರವಾದದ್ದು.
ಅಲೆನ್ ಗಿನ್ಸ್ ಬರ್ಗ್: ಹೌದು, ಎಲ್ಎಸ್ ಡಿ (ಮಾದಕ ಪದಾರ್ಥ) ಭೌತಿಕ ಆಸಕ್ತಿಯಾಗಿದ್ದರೆ ಶಬ್ದವು ಕೂಡ ಭೌತಿಕ ಆಸಕ್ತಿ ಅಲ್ಲವೇ?
ಶ್ರೀಲ ಪ್ರಭುಪಾದ: ಇಲ್ಲ ಶಬ್ದ ಆಧ್ಯಾತ್ಮಿಕವಾದದ್ದು. ಬೈಬಲ್ಲಿನಲ್ಲಿ ‘ಸೃಷ್ಟಿಯಾಗಲಿ’ ಎಂದು ಹೇಳಲಾಗಿದೆ. ಈ ಶಬ್ದವು ಆಧ್ಯಾತ್ಮಿಕ ಶಬ್ದವಾಗಿದೆ. ಮೊದಲಿಗೆ ಸೃಷ್ಟಿಯಾಗಿರಲಿಲ್ಲ, ಶಬ್ದದಿಂದ ಸೃಷ್ಟಿ ಉತ್ಪತ್ತಿಯಾಯಿತು. ಆದ್ದರಿಂದ ಶಬ್ದ ಮೂಲತಃ ಆಧ್ಯಾತ್ಮಿಕವಾದುದು. ಶಬ್ದದಿಂದ ಆಕಾಶ, ಆಕಾಶದಿಂದ ಗಾಳಿ, ಗಾಳಿಯಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಭೂಮಿ ಉತ್ಪತ್ತಿಯಾಯಿತು.
ಅಲೆನ್ ಗಿನ್ಸ್ ಬರ್ಗ್: ಹಾಗಾದರೆ ಶಬ್ದ ಸೃಷ್ಟಿಯ ಮೊದಲನೆಯ ಧಾತುವೇ?
ಶ್ರೀಲ ಪ್ರಭುಪಾದ: ಹೌದು, ಹೌದು.

ಅಲೆನ್ ಗಿನ್ಸ್ ಬರ್ಗ್: ಮೊದಲನೆಯ ಶಬ್ದ ಏನಿತ್ತು?
ಶ್ರೀಲ ಪ್ರಭುಪಾದ : ವೈದಿಕ ಸಾಹಿತ್ಯ ಹೇಳುತ್ತದೆ ‘ಓಂ’ ಎಂದು. ನಿಮ್ಮ ಬೈಬಲ್ ನಲ್ಲಿ ‘ಸೃಷ್ಟಿಯಾಗಲಿ’ ಎಂದು ಹೇಳಿದೆ. ಈ ಶಬ್ದದಿಂದ ಸೃಷ್ಟಿಯಾಯಿತು. ಭಗವಂತ ಮತ್ತು ಅವನ ಶಬ್ದ ಅಭಿನ್ನ ಪರಮವಾಗಿದೆ. ”ಮಿ.ಗಿನ್ಸ್‌ಬರ್ಗ್” ಎಂದು ನಾನು ಹೇಳುತ್ತೇನೆ. ಆಗ ಈ ಶಬ್ದ ಮತ್ತು ನಾನು ಭಿನ್ನವಾಗಿದ್ದೇವೆ.
ಆದರೆ ಭಗವಂತ ಮತ್ತು ಅವನ ಶಕ್ತಿ ಅಭಿನ್ನವಾಗಿದೆ.ಶಕ್ತಿ ಶಕ್ತಿಮತೋರ್ ಅಭೇದಃ ಶಕ್ತಿ ಮತ್ತು ಶಕ್ತಿಮತ ಭಿನ್ನರಲ್ಲ. ಬೆಂಕಿ ಮತ್ತು ಶಾಖ ಭಿನ್ನವಾಗಿಲ್ಲ. ಆದರೆ ಶಾಖ ಬೆಂಕಿಯಲ್ಲ. ಶಾಖವನ್ನು ಬೆಂಕಿಯಿಂದ ಅಥವಾ ಬೆಂಕಿಯಿಂದ ಶಾಖವನ್ನು ಭಿನ್ನಗೊಳಿಸಲು ಸಾಧ್ಯವಿಲ್ಲ. ಆದರೆ ಬೆಂಕಿ ಶಾಖವಲ್ಲ.
ಅಲೆನ್ ಗಿನ್ಸ್ ಬರ್ಗ್: ಮತ್ತು ಶಬ್ದ ಕೃಷ್ಣ…..
ಶ್ರೀಲ ಪ್ರಭುಪಾದ: ಹೌದು ಕೃಷ್ಣನಿಂದ ಅದು ಭಿನ್ನವಿಲ್ಲ.
ಅಲೆನ್ ಗಿನ್ಸ್ ಬರ್ಗ್: ಪ್ರತಿಯೊಂದು ಸಂದರ್ಭಗಳಲ್ಲಿಯೂ?
ಶ್ರೀಲ ಪ್ರಭುಪಾದ: ಹೌದು ಪ್ರತಿಯೊಂದು ಸಂದರ್ಭಗಳಲ್ಲಿಯೂ. ಆದರೆ ಇದು ನನ್ನ ಪರಿಜ್ಞಾನ ಅಥವಾ ನನ್ನ ಸಾಕ್ಷಾತ್ಕಾರದ ಪ್ರಶ್ನೆ. ಅದು ನಿಮ್ಮ ಪರಿಶುದ್ಧತೆಯ ಮೇಲೆ ಅವಲಂಬಿಸುತ್ತದೆ. ಈ ಕೃಷ್ಣ ಶಬ್ದ ಮತ್ತು ಕೃಷ್ಣ ಭಿನ್ನರಲ್ಲ. ಆದ್ದರಿಂದ ಕೃಷ್ಣ ಶಬ್ದವನ್ನು ನಾವು ಹೇಳಿದರೆ, ಕೂಡಲೇ ನಾವು ಅವನ ಸಂಪರ್ಕಕಕ್ಕೆ ಬರುತ್ತೇವೆ.
ಕೃಷ್ಣ ಸಂಪೂರ್ಣವಾಗಿ ಆಧ್ಯಾತ್ಮಿಕನಾಗಿರುವುದರಿಂದ ನಾವು ಕೂಡ ಆಧ್ಯಾತ್ಮಿಕರಾಗುತ್ತೇವೆ. ಹೇಗೆ ವಿದ್ಯುತ್ ನ್ನು ಮುಟ್ಟಿದ ಕೂಡಲೇ ನಾವು ಕೂಡ ವಿದ್ಯುತ್ ಪೂರಣ (Electrified) ರಾಗುತ್ತೇವೆ. ಅದೇ ರೀತಿ ಕೃಷ್ಣ ಶಬ್ದ ಉಚ್ಚರಿಸಿದ ಕೂಡಲೇ ನಾವು ಕೂಡ ಕೃಷ್ಣ ಪೂರಣ ಕೃಷ್ಣಮಯರಾಗುತ್ತೇವೆ.
ಯಾವಾಗ ನೀವು ಕೃಷ್ಣಪೂರಣರಾಗುತ್ತೀರೋ ಆಗ ನೀವು ಕೃಷ್ಣನ ನೆಲೆಯಲ್ಲಿರುತ್ತೀರಿ. ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಇತಿ ಸೋಽರ್ಜುನ. ಆಗ ನೀವು ಈ ಭೌತಿಕ ಅಸ್ತಿತ್ವಕ್ಕೆ ಬರಬೇಕಾಗಿಲ್ಲ. ನೀವು ಕೃಷ್ಣನೊಂದಿಗೆ ಇರುತ್ತೀರಿ.






Leave a Reply