ಶ್ರೀ ಕೃಷ್ಣ ಪಾಕಶಾಲೆ
ಅನಾನಸ್ ರೈಸ್

ಬೇಕಾಗುವ ಪದಾರ್ಥಗಳು :
ಅಕ್ಕಿ – 1 ಬಟ್ಟಲು
ಅನಾನಸ್ ಹಣ್ಣಿನ ಚೂರು – 2 ಕಪ್
ಸಕ್ಕರೆ – 1 1/2 ಕಪ್
ದ್ರಾಕ್ಷಿ, ಗೋಡಂಬಿ – ತಲಾ 25 ಗ್ರಾಂ
ತುಪ್ಪ – 4 ದೊಡ್ಡ ಚಮಚ
ಚೆರ್ರಿ ಹಣ್ಣು – 5-6 ( ಅಲಂಕಾರಕ್ಕೆ)
ಕೇಸರಿದಳ – 6-7
ಏಲಕ್ಕಿ – 2 ರಿಂದ 3
ಮಾಡುವ ವಿಧಾನ : ಮೂದಲು ಉದುರಾಗಿ ಅನ್ನ ತಯಾರಿಸಿಟ್ಟುಕೊಳ್ಳಿ. ಅನಾನಸ್ ನ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಹೆಚ್ಚಿಟ್ಟುಕೊಳ್ಳಿ. ಈ ಚೂರುಗಳಿಗೆ ಒಂದು ಚಮಚ ತುಪ್ಪ ಹಾಕಿ ಹುರಿದುಕೊಂಡು, ಸ್ವಲ್ಪ ನೀರು ಚಿಮುಕಿಸಿ ಸಣ್ಣ ಉರಿಯಲ್ಲಿ ಬೇಯಿಸಿ.
ಅನಂತರ ಸಕ್ಕರೆ ಹಾಕಿ ಕರಗುವವರೆಗೂ ಬಿಸಿ ಮಾಡಿ, ಅನ್ನ ಸೇರಿಸಿದ ಅನಂತರ ಉಳಿದ ತುಪ್ಪ ಹಾಕಿ, ನೀರಿನಲ್ಲಿ ನೆನೆಸಿದ ಕೇಸರಿ ದಳವನ್ನು ಹಾಕಿ 5-6 ನಿಮಿಷ ಬಿಸಿ ಮಾಡಿ ಇಳಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಬೆರೆಸಿ, ಚೆರ್ರಿಹಣ್ಣಿನಿಂದ ಅಲಂಕರಿಸಿ.
ಚೋಳ ಮತ್ತು ದಾಳಿಂಬೆ ಮೊಸರನ್ನ

ಬೇಕಾಗುವ ಪದಾರ್ಥಗಳು :
ಮೃದುವಾದ ಅನ್ನ -4 ಕಪ್
ಮೊಸರು – 1 ಕಪ್
ಮಜ್ಜಿಗೆ – 1 ½ ಕಪ್
ಬೇಯಿಸಿದ ಜೋಳ (ಅಮೆರಿಕನ್) – 1/2 ಕಪ್
ಬಿಡಿಸಿದ ದಾಳಿಂಬೆ ಹಣ್ಣು – 1/2 ಕಪ್
ಶುಂಠಿ – 1 ಚಿಕ್ಕ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ಸಾಸಿವೆ-1 ಚಿಕ್ಕ ಚಮಚ
ಗೋಡಂಬಿ ಚೂರು – 4 ಚಿಕ್ಕ ಚಮಚ
ಇಂಗು – 2 ಚಿಟಿಕೆ
ಕರಿಬೇವಿನ ಸೊಪ್ಪು – ಸ್ವಲ್ಪ
ಹೆಚ್ಚಿದ ಕೊತ್ತಂಬರಿ ಸೊಪ್ಪು – 4 ಚಿಕ್ಕ ಚಮಚ
ಹಸಿಮೆಣಸಿನಕಾಯಿ – 3-4 (ಹೆಚ್ಚಿದ್ದು)
ಮಾಡುವ ವಿಧಾನ : ಮೊದಲು ಅನ್ನ ಮಾಡಿ ಅಗಲವಾದತಟ್ಟೆಯಲ್ಲಿ ಆರಲು ಬಿಡಿ. ಅದಕ್ಕೆ ಮೊಸರು, ದಾಳಿಂಬೆ, ಜೋಳ ಮತ್ತು ಶುಂಠಿರಸ ಬೆರಸಿ, ಉಪ್ಪು, ಸೇರಿಸಿ ಮುಚ್ಚಿಡಿ. ಅನಂತರ ಒಗ್ಗರಣೆ ಮಾಡಿ ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿ ಪುನಃ ಒಂದು ಬಾರಿ ಚೆನ್ನಾಗಿ ಬೆರಸಿ. ಬೇಕಿದ್ದಲ್ಲಿ ಮಜ್ಜಿಗೆ ಕೊನೆಗೆಸೇರಿಸಿ.
ಹೂಕೋಸು ಮತ್ತು ಹಸಿ ಬಟಾಣಿ ಬಾತ್

ಬೇಕಾಗುವ ಪದಾರ್ಥಗಳು :
ಅಕ್ಕಿ – 2 ಕಪ್
ಟೊಮ್ಯಾಟೋ – 3-4
ಹೂಕೋಸು -1 ( ಹದಗಾತ್ರದ್ದು)
ತೆಂಗಿನಕಾಯಿ ತುರಿ – 1/2 ಕಪ್
ಕೆಂಪುಮೆಣಸಿನಕಾಯಿ ಪುಡಿ – 1 ಚಿಕ್ಕ ಚಮಚ (ರುಚಿಗೆ ತಕ್ಕಷ್ಟು)
ಗರಂ ಮಸಾಲ ಪುಡಿ – 1 ಚಿಕ್ಕ ಚಮಚ ( ರುಚಿಗೆ ತಕ್ಕಷ್ಟು)
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಅಡಿಗೆ ಎಣ್ಣೆ- ದೊಡ್ಡ ಚಮಚ
ನಿಂಬೆಹಣ್ಣು -1 (ಹದಗಾತ್ರದ್ದು)
ಉಪ್ಪು – ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ – 5-6
ಹಸಿಶುಂಠಿ – ಚಿಕ್ಕ ತುಂಡು
ಗೋಡಂಬಿ ಚೂರು – 4 ಚಿಕ್ಕ ಚಮಚ
ಮಸಾಲೆ ತಯಾರಿಕೆ: ಮೊದಲು ಅರ್ಧ ಚಮಚ ಎಣ್ಣೆ ಕಾಯಿಸಿ ಹಸಿಮೆಣಸಿನಕಾಯಿ ಚೂರುಗಳನ್ನು ಹುರಿದು, ಆರಿಸಿ. ಅದರೊಂದಿಗೆ ಶುಂಠಿ ಚೂರುಗಳನ್ನು ಸೇರಿಸಿ ಮಸಾಲೆ ರುಬ್ಬಿಕೊಳ್ಳಿ.
ಮಾಡುವ ವಿಧಾನ: ಟೊಮ್ಯಾಟೋವನ್ನು 10 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ ಅದರ ಸಿಪ್ಪೆ ತೆಗೆದು ರುಬ್ಬಿಟ್ಟುಕೊಳ್ಳಿ. ಈಗ ಶೋಧಿಸಿ ಚರಟವನ್ನು ಬೇರ್ಪಡಿಸಿರಿ. ಹೂಕೋಸನ್ನು ಸಣ್ಣ ತುಂಡುಗಳಾಗಿ ಹೆಚ್ಚಿ. ಅದನ್ನು ಉಪ್ಪು ಮತ್ತು ಅರಿಶಿನಪುಡಿ ಸೇರಿಸಿದ ನೀರಿನಲ್ಲಿ ನೆನೆಸಿ. ಕೆಲ ನಿಮಿಷಗಳ ಅನಂತರ ಹೂಕೋಸನ್ನು ಹೊರತೆಗೆದು ಗರಿಗರಿಯಾಗಿ ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ.
ಹಸಿಬಟಾಣಿಯನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ. ಉದುರಾಗಿ ಅನ್ನ ಮಾಡಿ, ಅದು ಆರುವುದರೊಳಗೆ, ಆಗಲವಾದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ರುಬ್ಬಿಟ್ಟು ಕೊಂಡ ಟೊಮ್ಯಾಟೋ ಹಾಗೂ ಹಸಿಮೆಣಸಿನಕಾಯಿ, ಹಸಿಶುಂಠಿಯ ಮಸಾಲೆ ಸೇರಿಸಿ. ನೀರಿನ ಅಂಶ ಇಂಗುವವರೆಗೆ ಹುರಿಯಿರಿ.
ಈಗ ಉಪ್ಪು, ಕೆಂಪು ಮೆಣಸಿನ ಪುಡಿ, ಗರಂಮಸಾಲೆ ಪುಡಿ ಮತ್ತು ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಕಲೆಸಿರಿ. ಅನಂತರ ಈ ಪಾತ್ರೆಗೆ ಆರಿದ ಅನ್ನ ಮತ್ತು ಅರ್ಧದಷ್ಟು ಹುರಿದಿಟ್ಟ ಹೂಕೋಸನ್ನು ಸೇರಿಸಿ 5-6 ನಿಮಿಷ (ಅನ್ನ ಮತ್ತು ಮಸಾಲೆ ಪದಾರ್ಥಗಳು ಬಿಸಿಯಾಗುವವರೆಗೆ) ಹುರಿಯಿರಿ. ಅನಂತರ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಹುರಿದ ಗೋಡಂಬಿ, ನಿಂಬೆಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಕಲೆಸಿ.
ಉಳಿದ ಹೂಕೋಸು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನಕಾಯಿ ತುರಿಯಿಂದ ಬಾತ್ ಅನ್ನು ಅಲಂಕರಿಸಿ. ಶ್ರೀರಾಧಾಕೃಷ್ಣನಿಗರ್ಪಿಸಿ ಸೇವಿಸಿ.






Leave a Reply