ಭೌತಿಕ ಲೋಕವು ನಮ್ಮ ನಿಜವಾದ ಮನೆಯಲ್ಲ… ಎಷ್ಟೇ ಪ್ರಮಾಣದ ಲೌಕಿಕ ಸುಖವು ನಮಗೆ ತೃಪ್ತಿಯನ್ನು ನೀಡುವುದಿಲ್ಲ…
ಪುರಾತನ ಭಾರತದ ಋಷಿಗಳ ಪ್ರಕಾರ, ನಾವೆಲ್ಲರೂ ನೆಲೆ ತಪ್ಪಿದ್ದೇವೆ. ಮೂಲತಃ ನಾವೆಲ್ಲರೂ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಪ್ರೀತಿಯ ಸೇವೆ ಸಲ್ಲಿಸುತ್ತ ಆಧ್ಯಾತ್ಮಿಕ ಲೋಕದಲ್ಲಿ ಆನಂದದಿಂದ ಇದ್ದೆವು. ಈ ಭೌತಿಕ ಲೋಕವು ನಮ್ಮ ನಿಜವಾದ ಮನೆಯಲ್ಲವಾದುದರಿಂದ ಎಷ್ಟೇ ಪ್ರಮಾಣದ ಲೌಕಿಕ ಸುಖವು ನಮಗೆ ತೃಪ್ತಿಯನ್ನು ನೀಡುವುದಿಲ್ಲ.

ಜನರು ಯಾವಾಗಲೂ ಕೇಳುತ್ತಾರೆ, ನಾವು ಅಷ್ಟು ಆನಂದವಾಗಿದ್ದರೆ ಆಧ್ಯಾತ್ಮಿಕ ಲೋಕವನ್ನು ತ್ಯಜಿಸಿದ್ದೇಕೆ? ದೇವೋತ್ತಮನಿಂದ ದೂರದಲ್ಲಿ ಇನ್ನೂ ಹೆಚ್ಚಿನ ಸುಖವನ್ನು ಅನುಭವಿಸುತ್ತೇವೆ ಎಂದು ನಾವು ತಪ್ಪಾಗಿ ಭಾವಿಸಿದೆವು. ಆಧ್ಯಾತ್ಮಿಕ ಲೋಕದಲ್ಲಿ ಭಗವಂತನು ಎಲ್ಲರ ಆಕರ್ಷಣೆಯ ಕೇಂದ್ರ.
ಅವನಿಗೆ ಸೇವೆ ಸಲ್ಲಿಸಲು ಪ್ರತಿಯೊಬ್ಬರೂ ಸಹಕರಿಸುತ್ತಾರೆ. ಯಾವಾಗ ಜೀವಿಯು ಭಗವಂತನ ಸ್ಥಾನವನ್ನು ಹೊಂದಲು ಪ್ರಯತ್ನಿಸುವನೋ ಆಗ ಅವನು ಭೌತಿಕ ಲೋಕವನ್ನು ಪ್ರವೇಶಿಸಲೇಬೇಕಾಗುತ್ತದೆ.
ಅಲ್ಲಿ ಅವನು ಅತ್ಯುತ್ತಮ ಜನರೊಂದಿಗೆ ಮಿತ್ರನಾಗುತ್ತ, ಅತ್ಯಂತ ಸುಂದರ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುತ್ತ ಮತ್ತು ತನಗೂ, ತನ್ನ ಕುಟುಂಬದವರಿಗೂ ಉತ್ತಮ ಭವಿಷ್ಯದ ಭರವಸೆಗಾಗಿ ಸಾಧ್ಯವಾದುದೆಲ್ಲವನ್ನೂ ಮಾಡುತ್ತ ಸುಖವನ್ನು ಅನುಭವಿಸಲು ಪ್ರಯತ್ನಿಸುತ್ತಾನೆ.
ಅವನು ತನಗೆ ಸಾಧ್ಯವಾದಷ್ಟೂ ಜಾಣ್ಮೆಯಿಂದ ಉಡುಗೆ ತೊಡುತ್ತಾನೆ, ತನಗೆ ಶಕ್ತಿ ಇದ್ದಷ್ಟೂ ಸಾಧ್ಯವಾದ ದುಬಾರಿ ಕಾರನ್ನು ಖರೀದಿಸುತ್ತಾನೆ, ವೈಭವೋಪೇತ ವಿಶ್ರಾಂತಿಧಾಮಗಳಲ್ಲಿ ರಜೆಯನ್ನು ಕಳೆಯುತ್ತಾನೆ ಮತ್ತು ಒಳ್ಳೆಯ ಪ್ರದೇಶದಲ್ಲಿ ಮನೆಯನ್ನು ಕೊಳ್ಳುತ್ತಾನೆ.
ಅವನು ಅತ್ಯುತ್ತಮ ಹೊಟೇಲುಗಳಲ್ಲಿ ಊಟ ಮಾಡುತ್ತಾನೆ, ತನ್ನ ರುಚಿಗೆ ತಕ್ಕಂತಹ ಮದ್ಯವನ್ನು ಆಸ್ವಾದಿಸುತ್ತಾನೆ ಮತ್ತು ಹೊಸ ಚಲನಚಿತ್ರವನ್ನು ಮೊದಲನೆಯ ದಿನವೇ ನೋಡಲು ಹೋಗುತ್ತಾನೆ. ಆದರೆ ಈ ಲೌಕಿಕ ಅಂಶಗಳು ಆತ್ಮದ ಹಂಬಲವನ್ನು ತೃಪ್ತಿಪಡಿಸುವುದಿಲ್ಲ.

ಕೃಷ್ಣನ ಭಕ್ತರು ಲೌಕಿಕ ಸುಖವನ್ನು ತಿರಸ್ಕರಿಸುವುದರಿಂದ ಅವರು ನೀರಸ ಜೀವನವನ್ನು ನಡೆಸಬೇಕು ಎಂದು ಕೆಲವು ಬಾರಿ ಜನರು ಭಾವಿಸುತ್ತಾರೆ. ವಾಸ್ತವವಾಗಿ, ಅಲೌಕಿಕವಾದಿಗಳೇ ಆನಂದದ, ಸುಖದ ಅತ್ಯಂತ ಸೂಕ್ಷ್ಮ ವಿಮರ್ಶಕರು.
ಸ್ವತಃ ಸುಖಿಸುವ ಬಗೆಗೆ ಶ್ರದ್ಧೆ ಉಳ್ಳವರು ಸಹಜವಾಗಿ ಕೀಳು ಮಟ್ಟದ ಆನಂದಗಳನ್ನು ತಿರಸ್ಕರಿಸುತ್ತಾರೆ ಮತ್ತು ಮೇಲ್ಮಟ್ಟದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ನಿಜವಾಗಿ ಹೇಳಬೇಕೆಂದರೆ, ಅವನು ಸಾಧ್ಯವಾದಷ್ಟೂ ಉನ್ನತ ಆನಂದವನ್ನು ಕಾಣಲು ಆಸಕ್ತಿಹೊಂದಬೇಕು. ಕೊನೆಯೆ ಇಲ್ಲದ ಆನಂದವು ಅತ್ಯಂತ ಉನ್ನತ ಮಟ್ಟದ್ದು. ಅಲ್ಲದೆ, ಶುದ್ಧ ಆನಂದವು ಯಾವುದಾದರೂ ರೀತಿಯ ಅಹಿತಕರವಾದುದನ್ನು ಮಿಶ್ರಣ ಮಾಡಿರುವ ಆನಂದಕ್ಕಿಂತ ಮೆಲ್ಪಟ್ಟದ್ದು.
ಅಂತಿಮವಾಗಿ, ಸ್ಥಿರವಾಗಿರುವ ಅಥವಾ ಇಳಿಮುಖಗೊಳ್ಳುವ ಆನಂದಕ್ಕಿಂತ ಸತತವಾಗಿ ಪ್ರಗತಿಹೊಂದುವ ಆನಂದವು ಉನ್ನತ ಮಟ್ಟವಾದುದು.
ಈ ಗುಣಮಟ್ಟವನ್ನು ಬಳಸಿಕೊಂಡು, ಲೌಕಿಕ ವಸ್ತುವಿನಿಂದ ಪಡೆಯುವ ಯಾವುದೇ ರೀತಿಯ ಆನಂದವು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಸೇವೆ ಸಲ್ಲಿಸುವುದರಿಂದ ಪಡೆಯುವ ಆನಂದಕ್ಕಿಂತ ಕೆಳಮಟ್ಟದ್ದು ಎನ್ನುವುದನ್ನು ನಾವು ಕಾಣಬಹುದು, ಈ ಭೌತಿಕ ಲೋಕದಲ್ಲಿ ನಾವು ಆನ೦ದಿಸುವ ಯಾವುದೇ ವಸ್ತು ಕಾಲದ ಪ್ರಭಾವದಿಂದ ಅಂತಿಮವಾಗಿ ನಾಶಗೊಳ್ಳುತ್ತದೆ.
ಹಾಗೆಯೇ ನಾವು ಲೌಕಿಕ ವಸ್ತುಗಳನ್ನು ಆನಂದಿಸಲು ಯತ್ನಿಸುವ ಈ ದೇಹವೂ ನಾಶವಾಗುತ್ತದೆ. ಆದರೆ ಭಗವಂತ ಮತ್ತು ಆತ್ಮ ಎರಡೂ ಕೂಡ ಶಾಶ್ವತವಾಗಿರುವುದರಿಂದ ಕೃಷ್ಣನಿಗೆ ಸಲ್ಲಿಸುವ ಸೇವೆ ನೀಡುವ ಆನಂದವೂ ಶಾಶ್ವತ.

ಇನ್ನೂ ಹೇಳಬೇಕೆಂದರೆ, ಲೌಕಿಕ ವಸ್ತುಗಳಿಂದ ಮತ್ತು ಬಾಂಧವ್ಯಗಳಿಂದ ಪಡೆಯುವ ಆನಂದವು ಯಾವಾಗಲೂ ನೋವು ಮಿಶ್ರಿತ. ಉದಾಹರಣೆಗೆ, ಸ್ತ್ರೀ ಪುರುಷರ ನಡುವಣ ಲೈಂಗಿಕ ಸಂಬಂಧದಲ್ಲಿ ಯಾವುದೋ ಸುಖ, ಆನಂದವಿರುತ್ತದೆ. ಆದರೆ ಅದರೊಂದಿಗೆ ಮದುವೆ, ವಿಚ್ಛೇದನ, ಅಸೂಯೆ, ಗರ್ಭಪಾತ, ಗುಹ್ಯರೋಗ, ವ್ಯಭಿಚಾರದಂತಹ ಹೊರೆ ಮತ್ತು ಕಷ್ಟಗಳು ಬರುತ್ತವೆ. ಆದರೆ ಕೃಷ್ಣನೊಂದಿಗೆ ಆತ್ಮದ ಶುದ್ಧ ಆಧ್ಯಾತ್ಮಿಕ ಬಾಂಧವ್ಯವು ಪರಿಶುದ್ಧವಾದ ಆನಂದವನ್ನು ನೀಡುತ್ತದೆ.
ಅಂತಿಮವಾಗಿ ಹೇಳಬೇಕೆಂದರೆ, ಲೌಕಿಕ ಪರಿಸ್ಥಿತಿಯನ್ನು ಆನ೦ದಿಸುವ ಪ್ರಯತ್ನವು ಅನಿವಾರ್ಯವಾಗಿ ಅವರೋಹಣ ಫಲವನ್ನು ನೀಡುತ್ತದೆ. ಮೊದಲ ಐಸ್ ಕ್ರೀಂ ಕೋನ್ ಅತ್ಯಂತ ಸ್ವಾದಿಷ್ಟವಾಗಿರುತ್ತದೆ. ಎರಡನೆಯದು ಚೆನ್ನಾಗಿರುತ್ತದೆ. ಮೂರನೆಯದನ್ನು ತಿನ್ನುವುದೇ ಕಷ್ಟವಾಗುತ್ತದೆ, ನಾಲ್ಕನೆಯದು ಅಸಹ್ಯ ಉಂಟುಮಾಡುತ್ತದೆ, ಐದನೆಯದು ವಾಂತಿ ಬರುವಂತೆ ಮಾಡುತ್ತದೆ.
ಆದರೆ ಕೃಷ್ಣನನ್ನು ಕುರಿತ ಪ್ರೇಮವು ಸದಾ ವಿಸ್ತರಿಸುತ್ತಿರುವ ಅಲೌಕಿಕ ಆನಂದ ಸಾಗರದಂತೆ ಅದರ ಅಲೆಗಳಲ್ಲಿ ಸದಾ ಮುಳುಗಿರುವಂತೆ ಮಾಡೆಂದು ಭಕ್ತರು ಪ್ರಾರ್ಥಿಸುತ್ತಾರೆ.
ಆ ಆನಂದ ಸಾಗರವನ್ನು ಯಾರು ಬೇಕಾದರೂ ಪ್ರವೇಶಿಸಬಹುದು. ಹೇಗೆ? ವೈದಿಕ ಸಾಹಿತ್ಯವು ತುಂಬ ಸರಳವಾದ ವಿಧಾನವನ್ನು ಶಿಫಾರಸು ಮಾಡಿದೆ: ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಮಂತ್ರವನ್ನು ಜಪಿಸುವುದೇ ಆ ವಿಧಾನ.
ಈ ಮಂತ್ರವನ್ನು ಭಗವಂತನ ನಾಮಗಳಿಂದ ರಚಿಸಲಾಗಿದೆ. ಪರಮ ಸತ್ಯನಾದ ಭಗವಂತನ ಹೆಸರು ಭಗವಂತನಿಂದ ಭಿನ್ನವಲ್ಲ ಮತ್ತು ಅವನ ಎಲ್ಲ ಅಲೌಕಿಕ ಶಕ್ತಿಗಳನ್ನು ಹೊಂದಿದೆ. ಐದು ನೂರು ವರ್ಷಗಳ ಹಿಂದೆ ಕೃಷ್ಣನು ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದನು ಮತ್ತು ಅವನ ಅನುಯಾಯಿಗಳಿಗೆ ಬೋಧಿ ಸಿದನು: “ಭಗವಂತನ ಪವಿತ್ರ ನಾಮದ ಜಪವು ಅಲೌಕಿಕ ಜೀವನದ ಆನಂದ ಸಾಗರವನ್ನು ವಿಸ್ತರಿಸುತ್ತದೆ.’ ನಾವು ನಿಜವಾಗಿಯೂ ಅಲ್ಲಿಗೇ ಸೇರಿರುವುದು. ಲೌಕಿಕ ಅಸ್ತಿತ್ವದ ದಂಡೆಯ ಮೇಲೆ ಅಲ್ಲ.






Leave a Reply