ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
– ಸಂಗ್ರಹಾನುವಾದ: ಡಾ.ಕೆ. ವೈ. ಬಾಲರಾಜ್, ಆಧಾರ : ಶ್ರೀ ಈಶೋಪನಿಷದ್ (ಮಂತ್ರ 14)
ಈ ಐಹಿಕ ಪ್ರಕೃತಿಯಲ್ಲಿನ ಸಮಸ್ತ ಚಟುವಟಿಕೆಗಳು ಭೌತದ್ರವ್ಯಗಳ ಕಠೋರ ನಿಯಮಗಳಿಗೆ ಒಳಪಟ್ಟಿವೆ. ಅವು ಹುಟ್ಟು, ಬೆಳವಣಿಗೆ, ಸ್ಥಿತಿ, ಬದಲಾವಣೆ, ಅವನತಿ ಮತ್ತು ಸಾವು ಎಂಬ ಆರು ಬಗೆಯ ಬದಲಾವಣೆಗಳಿಗೆ ಒಳಗಾಗಿವೆ. ಐಹಿಕ ಸಂಪರ್ಕಕ್ಕೆ ಒಳಗಾದ ಯಾವುದೇ ವಸ್ತು ವಿಷಯಗಳು ಈ ಪರಿವರ್ತನ ನಿಯಮಗಳನ್ನು ಮೀರುವಂತಿಲ್ಲ. ಈ ಅರ್ಥದಲ್ಲಿ ಐಹಿಕ ಜಗತ್ತಿನಲ್ಲಿ ಜಡವಾಗಲಿ, ಮರವಾಗಲಿ, ಪ್ರಾಣಿಯಾಗಲಿ, ಮನುಷ್ಯನಾಗಲಿ, ದೇವತೆಯಾಗಲಿ ಎಲ್ಲ ಕಾಲಕ್ಕೂ ಉಳಿಯಲಾರರು.

ಜ್ಞಾನದ ಮುನ್ನಡೆಯ ಹೆಸರಿನಲ್ಲಿ ಮಾನವ ಸಂಸ್ಕೃತಿಯು ಗಗನನೌಕೆ ಪರಮಾಣುಶಕ್ತಿಗಳು ಸೇರಿದಂತೆ ಅನೇಕ ಭೌತ ವಸ್ತುಗಳನ್ನು ಸೃಷ್ಟಿಸಿದೆ. ಆದರೂ ಜನನ, ಮುಪ್ಪು, ರೋಗ, ಸಾವುಗಳಿಂದ ಮನುಷ್ಯ ಬಿಡುಗಡೆಯನ್ನು ಹೊಂದಲು ಸಾಧ್ಯವಾಗಿಲ್ಲ.
ಬುದ್ಧಿವಂತ ವಿಜ್ಞಾನಿಯೆನಿಸಿಕೊಂಡವನೆದುರು ಮಾನವನ ಕ್ಲೇಶಗಳ, ದುಃಖಗಳ ಬಗ್ಗೆ ಕೇಳಿದಾಗ ಆ ವಿಜ್ಞಾನಿಯು, ವಿಜ್ಞಾನ ಮುಂದುವರಿಯುತ್ತಿದೆ, ಮುಂದೆ ಮಾನವನಿಗೆ ಸಾವಿಲ್ಲದಂತೆ, ಮುಪ್ಪಿಲ್ಲದಂತೆ ಮಾಡುವುದು ಸಾಧ್ಯವೆ೦ಬ ತುಂಬ ಜಾಣತನದ ಉತ್ತರ ನೀಡುತ್ತಾನೆ. ಇದು ಐಹಿಕ ಶಕ್ತಿಗಳ ಬಗ್ಗೆ ವಿಜ್ಞಾನಿಗಳಿಗೆ ಇರುವ ಪರಮ ಅಜ್ಞಾನವನ್ನು ತೋರಿಸುತ್ತದೆ.
ಈ ಜಗತ್ತಿನಲ್ಲಿ ಸಣ್ಣ ಜೀವಿಯಿಂದ ಹಿಡಿದು ಪರಬ್ರಹ್ಮನ ತನಕ ಅವರವರದೇ ಆದ ಆಯುರ್ಮಾನವನ್ನು ಹೊಂದಿವೆ. ಕೆಲವು ಜೀವಿಗಳು ಕ್ಷಣ, ನಿಮಿಷ, ಘಂಟೆಗಳ ಕಾಲ ಜೀವಿಸಬಹುದು, ಇನ್ನೂ ಕೆಲವು ಜೀವಿಗಳು ದಿನಗಳು, ತಿಂಗಳು, ವರ್ಷಗಳ ಕಾಲ ಜೀವಿಸಬಹುದು, ಮತ್ತೆ ಕೆಲವು ಜೀವಿಗಳು, ಮನುಷ್ಯರು ನೂರು ವರ್ಷಗಳ ಕಾಲ ಜೀವಿಸಬಹುದು, ಪರಮ ಜೀವಿಗಳು, ಬ್ರಹ್ಮರು ಸಾವಿರಾರು, ಲಕ್ಷಾಂತರ ವರ್ಷಗಳ ಕಾಲ ಜೀವಿಸಬಹುದು.

ಎಷ್ಟೇ ವರ್ಷಗಳ ಆಯಸ್ಸನ್ನು ಹೊಂದಿದ್ದರೂ ಅಂತಿಮವಾಗಿ ಸಾವು ಮತ್ತು ಈ ದೇಹವು ನಾಶವೆಂಬುದು ಇರಲೇಬೇಕು. ಈ ಬ್ರಹ್ಮಾಂಡದಲ್ಲಿ ಯಾವುವೂ ಶಾಶ್ವತವಾದವುಗಳಲ್ಲ, ಅಮರವಲ್ಲವೆಂಬುದನ್ನು ಗಮನಿಸಬೇಕು. ಐಹಿಕಲೋಕ, ಸೂರ್ಯ, ಚಂದ್ರ, ಊರ್ಧ್ವ, ಅಧೋ, ಮಧ್ಯ ಲೋಕಗಳೆಲ್ಲವೂ ಬ್ರಹ್ಮನ ಜೀವಿತಾವಧಿಯಲ್ಲಿ ಮಾತ್ರ ಇರುತ್ತವೆ.
ಈ ಅವಧಿಯ ಕೊನೆಯಲ್ಲಿ ಇಡೀ ಜಗತ್ತೇ ನಾಶವಾಗುತ್ತದೆ. ಅದೇ ಪ್ರಳಯ. ಇಡೀ ವಿಶ್ವ ನಾಶವಾದಾಗ ಇನ್ನೊಂದು ಅವ್ಯಕ್ತ ಆಧ್ಯಾತ್ಮಿಕ ಸ್ಥಿತಿ ಇರುತ್ತದೆ. ಇವು ಶಾಶ್ವತವಾಗಿ ಅಸ್ತಿತ್ವದಲ್ಲಿರುವಂತಹ ಆಧ್ಯಾತ್ಮಿಕ ಲೋಕಗಳಾಗಿವೆ. ಐಹಿಕ ಲೋಕ ಪರಮಾತ್ಮ ಶಕ್ತಿಯ ಕಾಲುಭಾಗವಿದ್ದರೆ, ಮುಕ್ಕಾಲು ಭಾಗದ ಶಕ್ತಿಯು ಈ ಆಧ್ಯಾತ್ಮಿಕಲೋಕದ ಶಕ್ತಿಯಾಗಿದೆ.
ಈ ಆಧ್ಯಾತ್ಮಿಕ ಲೋಕದಲ್ಲಿರುವ ಪರಮ ಪುರುಷನೇ ಶ್ರೀಕೃಷ್ಣ. ನಿಷ್ಕಲ್ಮಷ ಭಕ್ತಿಸೇವೆಯಿಂದ ಮಾತ್ರ ಅವನ ಬಳಿ ಹೋಗಬಹುದು. ಕರ್ಮ, ಜ್ಞಾನ, ಯೋಗ ಯಾವುದೂ ಪರಮ ಪುರುಷ ಕೃಷ್ಣನ ಬಳಿ ಹೋಗಲು ಸಾಧನಗಳಲ್ಲ, ಕರ್ಮಗಳಿಂದ ಸ್ವರ್ಗಲೋಕಗಳನ್ನು, ಜ್ಞಾನ ಯೋಗಗಳಿಂದ ಬ್ರಹ್ಮಲೋಕಗಳನ್ನು ಮಾನವನ್ನು ಪಡೆಯಬಹುದು. ಭಕ್ತಿಯೊಂದೇ ಆಧ್ಯಾತ್ಮಿಕ ಲೋಕ, ಬ್ರಹ್ಮತೇಜಸ್ಸನ್ನು ಹೊಂದಿರುವ ವೈಕುಂಠ ಲೋಕಗಳನ್ನು ತಲುಪಿಸುವಂತಹ ಅರ್ಹತೆಯನ್ನು ಕೊಡುತ್ತದೆ.
ಈ ಐಹಿಕ ಲೋಕದಲ್ಲಿ ಬ್ರಹ್ಮನಿಂದ ಹಿಡಿದು ಇರುವೆಯ ತನಕ ತನ್ನ ಪ್ರಭುತ್ವವನ್ನು ಸಾಧಿಸಲು ಪ್ರಯತ್ನಿಸುತ್ತಿವೆ. ಆದರೂ ಅವರು ಜನನ-ಮರಣ ಚಕ್ರದಲ್ಲಿ ಸಿಲುಕಲೇಬೇಕು, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಈ ಕ್ಲೇಶಗಳಿಂದ ಬಿಡುಗಡೆ ಹೇಗೆ ಸಾಧ್ಯ? ಪರಮ ಒಡೆಯನಾದ ಕೃಷ್ಣನಲ್ಲಿ ಶರಣಾಗತರಾಗುವ ಮೂಲಕ, ಬುದ್ಧಿಯನ್ನು ಮೂಲಭೂತವಾಗಿ ಬೆಳೆಸಿಕೊಳ್ಳುವ ಮೂಲಕ ಮಾನವ ಬೆಳೆಯಬೇಕು.

ಭಕ್ತಿ ಸೇವೆಯಿಂದ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಪಡೆಯಬಹುದೆಂಬ ಶಿಕ್ಷಣವನ್ನು ಯಾವ ಸಂಸ್ಥೆಗಳು ಕೂಡ ನೀಡುತ್ತಿಲ್ಲ. ಕೇವಲ ತಾತ್ಕಾಲಿಕ ಪರಿಹಾರ ಕಾರ್ಯದಲ್ಲಿ ಆಸಕ್ತಿ ವಹಿಸುವಂತೆ ಅವರಿಗೆ ಶಿಕ್ಷಣ ನೀಡಲಾಗುತ್ತದೆ. ಇದು ಜೀವಿಗೆ ನಿಜವಾದ ಸಂತೋಷವನ್ನು ನೀಡದು. ಪ್ರಕೃತಿಯ ವಿನಾಶಕಾರಿ ಶಕ್ತಿಯನ್ನು ಎದುರಿಸಲು ನಾನಾ ರೀತಿಯ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳನ್ನು ಆರಂಭಿಸುತ್ತಾರೆ.
ಆದರೆ ಪ್ರಕೃತಿಯನ್ನು ಸಮಾಧಾನ ಮಾಡುವುದು ಹೇಗೆ ಎಂಬುದನ್ನು ತಿಳಿಯಲಾರರು. ಭಗವತ್ಪ್ರಜ್ಞೆಯನ್ನು ಜಾಗೃತಗೊಳಿಸುವುದರಿಂದ ಮಾತ್ರ ಪ್ರಬಲ ಪ್ರಕೃತಿಯನ್ನು ಶಾಂತಗೊಳಿಸಬಹುದು. ತಾತ್ಕಾಲಿಕ ಐಹಿಕ ಅಭಿವ್ಯಕ್ತಿಯನ್ನು ತಿಳಿಯುವುದರಿಂದಲೋ ಅಥವಾ ಧರ್ಮಛತ್ರ, ಆಸತ್ರೆ, ಔಷಧಿ, ತಂತ್ರಜ್ಞಾನದಿಂದಲೋ ಏನನ್ನೂ ಉಳಿಸಲು ಸಾಧ್ಯವಿಲ್ಲ.
ಪ್ರಕೃತಿಯು ಯಾರಿಗೂ ಬಾಗದೆ ತನ್ನ ಕೃತ್ಯದಲ್ಲಿ ತಾನು ತೊಡಗಿರುತ್ತದೆ. ಇದರೊಂದಿಗೆ ಇಂದ್ರಿಯಗಳ ಆಕರ್ಷಣೆಗಳ ತಪ್ಪುದಾರಿಯಿಂದ ಮಾನವನನ್ನು ವಿಮುಖಗೊಳಿಸಬೇಕಾದರೆ ವೈದಿಕ ವಾಙ್ಮಯದ ಶಿಕ್ಷಣವನ್ನು ನೀಡಬೇಕು. ಅದಕ್ಕಾಗಿ ಭಕ್ತಿಸೇವೆಯನ್ನು ಅವಲಂಬಿಸಲೇಬೇಕು. ಇಲ್ಲಿ ರಾಜಿಮಾಡಿಕೊಳ್ಳುವ ಸೂತ್ರವಿಲ್ಲ. ಏಕೆಂದರೆ ಇದು ಅತ್ಯವಶ್ಯಕ.






Leave a Reply