– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸರೇಶ್ ಮೂನ
ಯಮುನೆಯ ಒಡಲಲ್ಲಿ ಸೇರಿ ವಿಷ ಕಕ್ಕುತ್ತಿದ್ದ ಕಾಳೀಯನನ್ನು ಕೃಷ್ಣ ಮರ್ದಿಸಿದ. ಅವನ ಹೆಡೆಗಳ ಮೇಲೆ ನರ್ತಿಸಿ, ಮಣಿಸಿದ. ನಾಗಪತ್ನಿಯರು ಕೃಷ್ಣನಿಗೆ ಶರಣಾಗಿ ತಮ್ಮ ಪತಿಯನ್ನು ಉಳಿಸಿಕೊಂಡರು. ವೃಂದಾವನದ ಜನರು ತಮ್ಮ ಕಣ್ಮಣಿಯ ಸಾಹಸಗಳನ್ನು ಬೆರಗಿನಿಂದ ನೋಡುತ್ತಿದ್ದರು. ಆದರೂ, ಅವರ ಪಾಲಿಗೆ ಕೃಷ್ಣ ಇನ್ನೂ ಬಾಲಕನೇ, ತಮ್ಮ ಮುದ್ದಿನ ಮಗುವೇ! (ಮುಂದೆ ಓದಿ)

ಆಗಲೇ ರಾತ್ರಿಯಾಗುತ್ತಾ ಬಂದಿತ್ತು. ವೃಂದಾವನ ವಾಸಿಗಳಿಗೂ, ಗೋವುಗಳಿಗೂ, ಕರುಗಳಿಗೂ ಆಯಾಸವಾಗಿತ್ತು. ಅವರೆಲ್ಲರೂ ನದೀ ತೀರದಲ್ಲಿ ವಿಶ್ರಮಿಸಲು ನಿರ್ಧರಿಸಿದರು. ಅವರೆಲ್ಲರೂ ನಿದ್ರೆಯಲ್ಲಿದ್ದಾಗ ನಡುರಾತ್ರಿಯಲ್ಲಿ ದೊಡ್ಡ ಕಾಳ್ಗಿಚ್ಚು ಕಾಣಿಸಿಕೊಂಡಿತು.
ಅದು ಸ್ವಲ್ಪ ಹೊತ್ತಿನಲ್ಲೇ ವೃಂದಾವನ ವಾಸಿಗಳನ್ನೆಲ್ಲಾ ಕಬಳಿಸಿ ಬಿಡುವಂತೆ ಕಾಣಿಸಿತು. ಬೆಂಕಿಯ ಕಾವಿನ ಅನುಭವವಾಗುತ್ತಲೇ ದೇವೋತ್ತಮ ಪರಮ ಪುರುಷನಾದ ಕೃಷ್ಣನು ತಮ್ಮ ಮಗುವಿನಂತೆ ಆಡುತ್ತಿದ್ದರೂ ಅವರೆಲ್ಲರೂ ಅವನ ಆಶ್ರಯ ಪಡೆದರು.
ಅವರೆಲ್ಲರೂ, “ನಮ್ಮ ಪ್ರೀತಿಯ ಕೃಷ್ಣ! ದೇವೋತ್ತಮ ಪರಮಪುರುಷನೇ!, ನಮ್ಮ ಪ್ರೀತಿಯ ಬಲರಾಮ, ಎಲ್ಲ ಶಕ್ತಿಯ ಆಗರವೇ! ಎಲ್ಲವನ್ನು ನುಂಗುತ್ತಿರುವ ಈ ವಿನಾಶಕ ಬೆಂಕಿಯಿಂದ ನಮ್ಮನ್ನು ಕಾಪಾಡಿ. ನಿಮ್ಮನ್ನು ಬಿಟ್ಟರೆ ನಮಗೆ ಬೇರೆ ಆಶ್ರಯವಿಲ್ಲ. ಈ ವಿನಾಶಕ ಉರಿಯು ನಮ್ಮೆಲ್ಲರನ್ನೂ ನುಂಗಿ ಬಿಡುವುದು!” ಎಂದು ಹೇಳಿದರು ಹಾಗೂ ಕೃಷ್ಣನ ಚರಣಕಮಲಗಳನ್ನು ಬಿಟ್ಟು ತಾವೆಲ್ಲೂ ರಕ್ಷಣೆ ಪಡೆಯುವುದಿಲ್ಲವೆಂದು ಹೇಳಿ ಪ್ರಾರ್ಥನೆ ಮಾಡಿದರು.
ತನ್ನ ಊರಿನ ಜನರ ಮೇಲಿನ ಅನುಕಂಪದಿಂದ ಕೃಷ್ಣನು ಕೂಡಲೇ ಕಾಳ್ಗಿಚ್ಚನ್ನು ನುಂಗಿಬಿಟ್ಟನು. ಇದು ಕೃಷ್ಣನಿಗೆ ಅಸಾಧ್ಯವಾದುದಲ್ಲ. ಏಕೆಂದರೆ ಅವನಿಗೆ ಮಿತಿಯೇ ಇಲ್ಲ. ತಾನು ಬಯಸಿದ್ದನ್ನು ಮಾಡಲು ಅಪರಿಮಿತವಾದ ಶಕ್ತಿಯುಳ್ಳವನು ಶ್ರೀಕೃಷ್ಣ.
ಹೀಗೆ ವಿನಾಶಕ ಉರಿಯನ್ನು ಆರಿಸಿದ ಅನಂತರ ಕೃಷ್ಣನು ತನ್ನ ನೆಂಟರು, ಸ್ನೇಹಿತರು, ಹಸುಕರುಗಳು, ಎತ್ತುಗಳು ಇವರೆಲ್ಲರೊಂದಿಗೆ ಸಂತೋಷದಿಂದ ಹಾಡುತ್ತಾ ವೃಂದಾವನವನ್ನು ಪ್ರವೇಶಿಸಿದ. ಗೋಪಬಾಲರು, ಗೋಪಿಯರು, ಬಲರಾಮ ಹೀಗೆ ತನ್ನವರೆಲ್ಲರೊಡನೆ ಕೃಷ್ಣನು ಸಂತೋಷದಲ್ಲಿರುವಾಗಲೇ ಬೇಸಿಗೆ ಕಾಲವೂ ಪ್ರಾರಂಭವಾಯಿತು.
ಭಾರತದಲ್ಲಿ ಬೇಸಿಗೆಯನ್ನು ಜನರು ಅಷ್ಟಾಗಿ ಇಷ್ಟಪಡುವುದಿಲ್ಲ. ಏಕೆಂದರೆ ಆಗ ಬಹಳ ಸೆಕೆಯಾಗುತ್ತದೆ. ಆದರೆ ವೃಂದಾವನದಲ್ಲಿ ಮಾತ್ರ ಎಲ್ಲರಿಗೂ ಸಂತೋಷವಾಗಿತ್ತು. ಏಕೆಂದರೆ ಅಲ್ಲಿ ಬೇಸಿಗೆಯೂ ವಸಂತ ಋತುವಿನಂತೆಯೇ ಇತ್ತು. ಕೃಷ್ಣ ಮತ್ತು ಬಲರಾಮರು ಬ್ರಹ್ಮ ಮತ್ತು ಶಿವ ಇವರನ್ನು ನಿಯಂತ್ರಿಸಬಲ್ಲರು.

ಅವರು ವೃ೦ದಾವನದಲ್ಲಿ ಇದ್ದುದರಿಂದ ಬೇಸಿಗೆಯೂ ವಸಂತ ಋತುವಿನಂತೆ ಹಿತವಾಗಿತ್ತು. ಅಲ್ಲಿ ಸದಾ ನೀರು ಧುಮುಕುತ್ತಿರುವ ಅನೇಕ ಜಲಪಾತಗಳಿದ್ದವು. ಅವುಗಳ ಶಬ್ದವು ಎಷ್ಟು ಮಧುರವಾಗಿತ್ತೆಂದರೆ ಚಿಮ್ಮೆಂಡೆಗಳ ಶಬ್ದವನ್ನೂ ಅವು ಮುಚ್ಚಿ ಬಿಡುತ್ತಿದ್ದವು. ಎಲ್ಲೆಡೆಯಲ್ಲಿಯೂ ನೀರು ಹರಿಯುವುದರಿಂದ ಕಾಡು ಸದಾ ಹಸಿರಾಗಿ ಸು೦ದರವಾಗಿ ಕಾಣುತ್ತಿತ್ತು.
ಅಲ್ಲಿ ಕಲ್ಹಾರ, ಕಂಜೋತ್ಫಲದಂತಹ ಬಗೆ ಬಗೆಯ ತಾವರೆ ಹೂಗಳು ಅರಳುತ್ತಿದ್ದವು. ಅಲ್ಲಿ ಸುಳಿಯುವ ಗಾಳಿ ಈ ಹೂವುಗಳ ಸುವಾಸನೆಯನ್ನು ಎಲ್ಲೆಡೆಗೂ ಒಯ್ಯುತ್ತಿತ್ತು. ಹಾಗೆಯೇ ನವಿಲುಗಳು ಕೇಕೆ ಹಾಕುತ್ತಿದ್ದವು, ಕುಣಿಯುತ್ತಿದ್ದವು. ದುಂಬಿಗಳು ಝೇಂಕಾರ ಮಾಡುತ್ತಿದ್ದವು. ಕೋಗಿಲೆಗಳು ಐದು ರಾಗದಲ್ಲಿ ಸೊಗಸಾಗಿ ಹಾಡುತ್ತಿದ್ದವು.
ಸಂತೋಷದ ಆಗರವಾದ ಕೃಷ್ಣನು ತನ್ನ ಅಣ್ಣ ಬಲರಾಮ ಮತ್ತು ಇತರ ಗೋಪಾಲರೊಂದಿಗೆ ಕೊಳಲನ್ನು ನುಡಿಸುತ್ತಾ ಹವೆಯನ್ನು ಸವಿಯುತ್ತಾ ವೃಂದಾವನದ ಸುಂದರ ಅರಣ್ಯವನ್ನು ಪ್ರವೇಶಿಸಿದನು. ನವಿಲುಗರಿಗಳನ್ನು ಹೋಲುವ ಹೊಸ ಎಲೆಗಳನ್ನು ತಳೆದ ಗಿಡಮರಗಳ ನಡುವೆ ಅವರು ನಡೆದರು.
ಈ ಹೂವುಗಳು ಅವರಿಗೆ ಮಾಲೆ ಅರ್ಪಿಸಿದವು ಮತ್ತು ಕೇಸರಿ ಹುಡಿಯಿಂದ ಅಲಂಕಾರ ಮಾಡಿದವು. ಒಮ್ಮೊಮ್ಮೆ ಅವರು ಕುಣಿದರು, ಹಾಡಿದರು. ಮತ್ತೊಮ್ಮೆ ಒಬ್ಬರೊಡನೊಬ್ಬರು ಕುಸ್ತಿಯಾಡಿದರು. ಕೃಷ್ಣನು ನರ್ತಿಸಿದಾಗ ಗೋಪಾಲರು ಹಾಡಿದರು. ಇನ್ನು ಕೆಲವರು ಕೊಳಲನ್ನು ನುಡಿಸಿದರು.
ಕೆಲವರು ಎಮ್ಮೆಯ ಕೊಂಬುಗಳನ್ನು ನುಡಿಸಿದರು. ಕೆಲವರು ಅಣ್ಣ “ನೀನು ತುಂಬಾ ಚೆನ್ನಾಗಿ ನರ್ತನ ಮಾಡುತ್ತೀ.” ಎಂದು ಹೊಗಳುತ್ತಾ ಚಪ್ಪಾಳೆ ತಟ್ಟಿದರು. ವಾಸ್ತವವಾಗಿ ಇವರೆಲ್ಲರೂ ಕೃಷ್ಣನ ಲೀಲೆಗಳಲ್ಲಿ ನೆರವಾಗಲು ಮೇಲಿನ ಲೋಕದಿಂದ ಬಂದ ದೇವತೆಗಳೇ. ಒಬ್ಬ ಕಲಾವಿದನು ಮತ್ತೊಬ್ಬ ಕಲಾವಿದನನ್ನು ಹೊಗಳಿ ಪ್ರೋತ್ಸಾಹಿಸುವಂತೆ ಗೋಪಬಾಲರ ಉಡುಪಿನಲ್ಲಿದ್ದ ಈ ದೇವತೆಗಳು ಕೃಷ್ಣನ ನರ್ತನವನ್ನು ಕಂಡು ಪ್ರೋತ್ಸಾಹಿಸುತ್ತಿದ್ದರು.
ಆವರೆಗೆ ಬಲರಾಮನಿಗಾಗಲಿ, ಕೃಷ್ಣನಿಗಾಗಲಿ ಚೂಡಾಕರ್ಮ (ಹುಟ್ಟು ಕೂದಲು ಕತ್ತರಿಸುವುದು) ಆಗಿರಲಿಲ್ಲ. ಆದ್ದರಿಂದ ಅವರ ಕೂದಲು ಹಕ್ಕಿಯ ಗರಿಗಳಂತೆ ಗುಂಪಾಗಿದ್ದವು. ಅವರು ತಮ್ಮ ಸ್ನೇಹಿತರೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿದ್ದರು. ಕುಣಿದು ಕುಪ್ಪಳಿಸುತ್ತಿದ್ದರು. ಇಲ್ಲವೆ ಒಬ್ಬರೊಡನೊಬ್ಬರು ಕುಸ್ತಿಯಾಡುತ್ತಿದ್ದರು.

ಕೆಲವೊಮ್ಮೆ ಅವರ ಸ್ನೇಹಿತರು ಹಾಡುತ್ತಾ ಕುಣಿಯುತ್ತಿದ್ದಾಗ ಕೃಷ್ಣನು “ಪ್ರೀತಿಯ ಗೆಳೆಯರೇ, ನೀವು ತುಂಬ ಸೊಗಸಾಗಿ ಕುಣಿಯುತ್ತಿದ್ದೀರಿ ಮತ್ತು ಹಾಡುತ್ತಿದ್ದೀರಿ” ಎಂದು ಹೊಗಳುತ್ತಿದ್ದನು. ಅವನ ಗೆಳೆಯರು ಗಂಟೆಯಾಕಾರದ ಹಣ್ಣುಗಳು ಮತ್ತು ಗುಂಡು ಅವಲಕ್ಕಿಗಳಿಂದ ಚೆಂಡಾಟವಾಡುತ್ತಿದ್ದರು.
ಒಮ್ಮೊಮ್ಮೆ ಅವರು ಒಬ್ಬರಿಗೊಬ್ಬರು ಸವಾಲು ಹಾಕುತ್ತಾ ಮುಟ್ಟುವ ಆಟವಾಡುತ್ತಿದ್ದರು. ಕಾಡಿನ ಜಿಂಕೆಗಳನ್ನು ವಿವಿಧ ಪಕ್ಷಿಗಳನ್ನು ವಟಗುಟ್ಟುವ ಕಪ್ಪೆಗಳನ್ನು ಅನುಕರಿಸುತ್ತಿದ್ದರು. ಒಬ್ಬರನ್ನೊಬ್ಬರು ರೇಗಿಸಿ ನಗುವರು, ಮರಗಳ ಕೊಂಬೆಗಳಿಗೆ ಹಗ್ಗ ಕಟ್ಟಿ ಉಯ್ಯಾಲೆಯಾಡುವರು. ರಾಜ ಮತ್ತು ಪ್ರಜೆಗಳ ಆಟವಾಡುವರು. ಹೀಗೆ ಕೃಷ್ಣ ಬಲರಾಮ ಮತ್ತು ಅವರ ಗೋಪಬಾಲ ಗೆಳೆಯರು ವೃಂದಾವನದ ಪ್ರಕೃತಿ ಸಿರಿಯ ವಾತಾವರಣವನ್ನು ಸವಿಯುತ್ತಾ ಆನಂದದಿಂದಿದ್ದರು.
ಹೀಗೆ ಅವರೆಲ್ಲರೂ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದಾಗ ಪ್ರಲಂಬಾಸುರ ಎಂಬ ದೊಡ್ಡ ರಾಕ್ಷಸನು ಕೃಷ್ಣ ಮತ್ತು ಬಲರಾಮರನ್ನು ಅಪಹರಿಸುವ ಉದ್ದೇಶದಿಂದ ಒಬ್ಬ ಬಾಲಕನ ರೂಪದಲ್ಲಿ ಅವರೊಂದಿಗೆ ಸೇರಿಕೊಂಡನು. ದೇವೋತ್ತಮ ಪರಮ ಪುರುಷನಾದ ಕೃಷ್ಣನು ಗೆಳೆಯರೊಂದಿಗೆ ಹುಡುಗನಂತೆ ಆಟವಾಡಿಕೊಂಡಿದ್ದರೂ, ಇವೆಲ್ಲವೂ ಅರ್ಥವಾಗುತ್ತಿತ್ತು. ಪ್ರಲಂಬಾಸುರನು ತನ್ನ ಗೆಳೆಯರ ಗುಂಪಿನಲ್ಲಿದ್ದಾನೆಂದು ತಿಳಿದ ಕೃಷ್ಣನು ಅವನನ್ನು ಸಂಹರಿಸುವ ಬಗೆ ಹೇಗೆಂದು ಯೋಚಿಸ ತೊಡಗಿದನು.
ಆದರೆ ಬಹಿರಂಗವಾಗಿ ಅದನ್ನು ತೋರಿಸಿಕೊಳ್ಳದೆ ಬಾಲಕನ ರೂಪದಲ್ಲಿದ್ದ ಪ್ರಲಂಬಾಸುರನನ್ನು ಕುರಿತು ”ಪ್ರೀತಿಯ ಗೆಳೆಯಾ, ನಮ್ಮ ಆಟಗಳಲ್ಲಿ ಭಾಗವಹಿಸಲು ನೀನು ಬಂದದ್ದು ಒಳ್ಳೆಯದಾಯಿತು” ಎಂದನು. ತನ್ನ ಸ್ನೇಹಿತರನ್ನೆಲ್ಲಾ ಕರೆದು ”ನಾವು ಜೋಡಿಗಳಾಗಿ ಆಡೋಣ, ಒಬ್ಬರಿಗೊಬ್ಬರು ಸವಾಲು ಹಾಕೋಣ” ಎಂದನು. ಇದಕ್ಕೊಪ್ಪಿದ ಹುಡುಗರೆಲ್ಲರೂ ಎರಡು ಗುಂಪುಗಳಾದರು.
ಕೆಲವರು ಕೃಷ್ಣನ ಪಕ್ಷವನ್ನು ಸೇರಿದರೆ ಇನ್ನು ಕೆಲವರು ಬಲರಾಮನ ಪಕ್ಷವನ್ನು ಸೇರಿದರು. ಸೋತವರು ಗೆದ್ದವರನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ಹೋಗಬೇಕೆಂದು ಒಪ್ಪಂದವಾಯಿತು. ಅವರೆಲ್ಲ ಆಟವನ್ನು ಪ್ರಾರಂಭಿಸಿ ಭಾಂಡೀರವನ ಕಾಡಿನಲ್ಲಿ ಸಾಗಿದರು. ಶ್ರೀಧಾಮ ಮತ್ತು ವೃಷಭರಿದ್ದ ಬಲರಾಮನ ಪಕ್ಷವು ಗೆದ್ದಿತು.
ಕೃಷ್ಣನ ಪಕ್ಷವು ಸೋತದ್ದರಿಂದ ಗೆದ್ದವರನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ಭಾಂಡೀರವ ಕಾಡಿನಲ್ಲಿ ಕರೆದೊಯ್ಯಬೇಕಾಗಿತ್ತು. ದೇವೋತ್ತಮ ಪರಮ ಪುರುಷನಾದ ಕೃಷ್ಣನು ಶ್ರೀಧಾಮನನ್ನು ಬೆನ್ನಿನ ಮೇಲೆ ಕರೆದೊಯ್ಯಬೇಕಾಗಿತ್ತು. ಭದ್ರಸೇನನು ವೃಷಭನನ್ನು ಕರೆದೊಯ್ದನು. ಅವರ ಆಟದಲ್ಲಿ ಭಾಗಿಯಾಗಿದ್ದು ಸೋತ ಪಕ್ಷದಲ್ಲಿದ್ದ ಪ್ರಲಂಬಾಸುರನು ಬಲರಾಮನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೊರಟನು.

ಪ್ರಲಂಬಾಸುರನು ರಾಕ್ಷಸರಲ್ಲೆಲ್ಲ ಬಹಳ ದೊಡ್ಡವನು. ಅವನು ಗೋಪಬಾಲರಲ್ಲಿ ಕೃಷ್ಣ ಬಹಳ ಬಲಶಾಲಿ ಎಂದು ತಿಳಿದಿದ್ದನು. ಕೃಷ್ಣನ ಸಹವಾಸವನ್ನು ತಪ್ಪಿಸಿ ಬಲರಾಮನನ್ನು ಬಹುದೂರ ಕರೆದೊಯ್ದನು. ಅವನಿಗೆ ಬಲರಾಮನ ಶಕ್ತಿಯ ಪರಿಚಯವಿರಲಿಲ್ಲ. ಹೀಗಾಗಿ ಸುಲಭವಾಗಿ ಅವನನ್ನು ಅಪಹರಿಸಬಹುದೆಂದುಕೊಂಡ ಅವನಿಗೆ ಬಲರಾಮನು ಬಹಳ ಭಾರವಾಗಿ ತೋರಿದನು.
ಆಗ ಅವನು ತನ್ನ ರಾಕ್ಷಸನ ನಿಜರೂಪವನ್ನು ತಳೆದನು. ಆ ರೂಪದಲ್ಲಿ ಅವನು ಬಂಗಾರದ ಶಿರಸ್ತ್ರಾಣ ಮತ್ತು ಕರ್ಣಾಭರಣಗಳಿಂದ ಅಲಂಕೃತನಾಗಿದ್ದ ಚಂದ್ರನನ್ನು ಕೋರೈಸುವ ಮಿಂಚು ಸೇರಿದ ಮೋಡದಂತೆ ಕಾಣುತ್ತಿದ್ದ. ಈ ರಾಕ್ಷಸನು ಆಕಾಶದೆತ್ತರವಾದುದನ್ನು ಬಲರಾಮನೂ ಗಮನಿಸಿದ.
ಅವನ ಕಣ್ಣುಗಳು ಉರಿಯುವಂತೆ ಕಾಣುತ್ತಿದ್ದವು. ಬಾಯಿಯಿಂದ ಭಯಂಕರವಾದ ಮತ್ತು ಹರಿತವಾದ ಹಲ್ಲುಗಳು ಕಾಣುತ್ತಿದ್ದವು. ಮೊದಲು ಬಲರಾಮನಿಗೆ ಈ ರಾಕ್ಷಸನ ರೂಪವನ್ನು ಕಂಡು ಆಶ್ಚರ್ಯವಾಯಿತು. ತನ್ನನ್ನು ಹೊತ್ತು ಸಾಗುತ್ತಿದ್ದ ಹುಡುಗ ಈ ಭಯಂಕರ ರೂಪ ತಳೆದುದು ಹೇಗೆ ಎಂದು ಯೋಚಿಸಿದ.
ತನ್ನನ್ನು ಕೊಲ್ಲಲೆಂದೇ ಈ ರಾಕ್ಷಸನು ಹೀಗೆ ಬಹುಬೇಗ ಕೃಷ್ಣ ಮತ್ತು ಇತರ ಗೆಳೆಯರಿಂದ ತನ್ನನ್ನು ಬೇರ್ಪಡಿಸಿ ಬಹುದೂರ ಕರೆದೊಯ್ಯುತ್ತಿದ್ದಾನೆ ಎಂದು ಅವನಿಗೆ ತಿಳಿಯಿತು. ಕೂಡಲೆ ಬಲರಾಮನು ಸ್ವರ್ಗಲೋಕಗಳ ಅರಸನು ಪರ್ವತವನ್ನು ತನ್ನ ಸಿಡಿಲಿನಿಂದ ಪ್ರಹಾರ ಮಾಡುವಂತೆ ರಾಕ್ಷಸನ ತಲೆಗೆ ಹೊಡೆದನು.
ಬಲರಾಮನ ಮುಷ್ಟಿಯ ಹೊಡೆತವನ್ನು ತಡೆಯಲಾರದೆ ರಾಕ್ಷಸನು ಸತ್ತು ಕೆಳಗೆ ಬಿದ್ದನು. ಅವನ ತಲೆಯು ಜಜ್ಜಿ ಹೋಗಿ ಬಾಯಿಂದ ರಕ್ತ ಹರಿಯುತ್ತಾ ಸತ್ತ ಹಾವಿನಂತೆ ಬಿದ್ದಿದ್ದನು. ಹಾಗೆ ಅವನು ಬೀಳುವಾಗ ಭಯಂಕರವಾದ ಶಬ್ದವಾಯಿತು. ದೇವಲೋಕದ ಅರಸ ಇಂದ್ರನ ಸಿಡಿಲಿನ ಹೊಡೆತದಿಂದ ದೊಡ್ಡಬೆಟ್ಟವೊಂದು ಉರುಳಿದಂತೆ ಶಬ್ದವಾಯಿತು.
ಇದನ್ನು ಕೇಳಿದ ಹುಡುಗರೆಲ್ಲಾ ಕೂಡಲೇ ಆ ಸ್ಥಳಕ್ಕೆ ಓಡಿ ಬಂದರು. ಆ ಭಯಂಕರ ದೃಶ್ಯವನ್ನು ನೋಡಿ ಬಲರಾಮನು ರಾಕ್ಷಸನನ್ನು ಕೊಂದು ಹಾಕಿದ್ದಾನೆಂಬುದು ಅವರಿಗೆ ತಿಳಿಯಿತು. ಅವರಲ್ಲೆರೂ ಬಲರಾಮನ ಸಾಹಸವನ್ನು ಮೆಚ್ಚಿ ಭಲೆ ಭಲೆ ಎಂದು ಅಭಿನಂದಿಸಿದರು. ಸಾವಿನ ದವಡೆಯಿಂದ ಅವನು ತಪ್ಪಿಸಿಕೊಂಡನೆಂದು ಯೋಚಿಸುತ್ತಾ ಅವರೆಲ್ಲರೂ ಬಹು ಪ್ರೀತಿಯಿಂದ ಬಲರಾಮನನ್ನು ಆಲಂಗಿಸಿದರು ಮತ್ತು ಅಭಿನಂದನೆಗಳನ್ನು, ಆಶೀರ್ವಾದಗಳನ್ನು ತಿಳಿಸಿದರು.

ಸ್ವರ್ಗಲೋಕದ ದೇವತೆಗಳೂ ಮನಃಪೂರ್ವಕ ಸಂತುಷ್ಟರಾಗಿ ಬಲರಾಮನ ದಿವ್ಯ ದೇಹದ ಮೇಲೆ ಹೂಮಳೆಗರೆದರು ಹಾಗೂ ಪ್ರಲಂಬಾಸುರನಂತಹ ಮಹಾ ರಾಕ್ಷಸನನ್ನು ಕೊಂದುದಕ್ಕಾಗಿ ಅವನನ್ನು ಅಭಿನಂದಿಸಿ ಆಶೀರ್ವದಿಸಿದರು.
ಕೃಷ್ಣ ಮತ್ತು ಬಲರಾಮರು ಪ್ರಲಂಬಾಸುರನನ್ನು ಕೊಂದದ್ದು ಮತ್ತೆ ವಿನಾಶಕ ಕಾಡ್ಗಿಚ್ಚನ್ನು ನುಂಗಿದ್ದು ವೃಂದಾವನದಲ್ಲಿ ಮನೆ ಮಾತಾಯಿತು. ಗೋಪಾಲಕರು ಈ ಅದ್ಭುತಗಳನ್ನು ತಮ್ಮ ಪತ್ನಿಯರಿಗೆ ಹಾಗೂ ಎಲ್ಲರಿಗೂ ವರ್ಣಿಸಿದರು. ಇದರಿಂದ ಅವರಿಗೆ ಆಶ್ಚರ್ಯ ಸಂತೋಷಗಳಾದುದಲ್ಲದೆ ಕೃಷ್ಣ ಮತ್ತು ಬಲರಾಮರು ತಮ್ಮ ಮೇಲೆ ಕೃಪೆಯಿಟ್ಟು ವೃಂದಾವನದ ಮಕ್ಕಳಾಗಿ ಬಂದ ದೇವತೆಗಳೆಂದು ಬಹಳ ಆನಂದಪಟ್ಟರು.
ಈ ಮಧ್ಯೆ ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಯಿತು. ಭಾರತದಲ್ಲಿ ಮಳೆಗಾಲವನ್ನು ಜನರು ಬಹಳ ಉತ್ಸಾಹದಿಂದ ಸ್ವಾಗತಿಸುತ್ತಾರೆ. ಸೂರ್ಯ ಚಂದ್ರರನ್ನು ಮರೆ ಮಾಡುತ್ತಾ ಆಕಾಶದಲ್ಲಿ ದಟ್ಟವಾಗಿ ಕವಿಯುವ ಮೋಡಗಳು ಜನರಲ್ಲಿ ಆಶಾಭಾವವನ್ನು ಮೂಡಿಸುತ್ತವೆ. ಇದನ್ನು ಕಾಣುವ ಅವರು ಪ್ರತಿಕ್ಷಣವೂ ಮಳೆಗಾಗಿ ನಿರೀಕ್ಷಿಸುತ್ತಾರೆ. ಗುಡುಗು ಮಿಂಚುಗಳೊಂದಿಗೆ ಬರುವ ಮಳೆಯು ಜನರ ಪಾಲಿಗೆ ಪ್ರಾಣದಾಯಕವಾಗಿರುತ್ತದೆ.
ಇಂತಹ ಮಳೆಯ ಆಗಮನದಿಂದಾಗಿ ವೃಂದಾವನದ ಅರಣ್ಯವೂ ಮತ್ತಷ್ಟು ಪ್ರಕೃತಿಯ ಸೌ೦ದರ್ಯದಿಂದ ಕಂಗೊಳಿಸತೊಡಗಿತು. ಕಾಡಿನ ಮರಗಳು ಖರ್ಜೂರ, ಮಾವು, ನೇರಳೆ ಹೀಗೆ ನಾನಾ ರೀತಿಯ ರುಚಿಕರವಾದ ಹಣ್ಣುಗಳಿಂದ ತುಂಬಿಹೋದವು. ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ, ಅವನ ಸಂಗಾತಿಗಳೂ, ಬಲರಾಮನೂ ಹೊಸ ಋತುವಿನ ವಾತಾವರಣವನ್ನು ಕಾಣಲು ಕಾಡಿಗೆ ತೆರಳಿದರು.
ಅವರೊಂದಿಗೆ ಬಂದ ಹಸುಗಳು ಹೊಸದಾಗಿ ಮೂಡಿ ಬ೦ದ ಹುಲ್ಲನ್ನು ತಿಂದು ಆರೋಗ್ಯವಾಗಿದ್ದವು. ಅವುಗಳ ಕೆಚ್ಚಲುಗಳು ಹಾಲಿನಿಂದ ತುಂಬಿ ಹೋಗಿದ್ದವು. ಯಮುನಾ ನದಿಯ ತೀರದಲ್ಲಿ ಜೇನನ್ನು ಸುರಿಸುವ ಜೇನುಗಳಿಂದ ಮರಗಳು ತುಂಬಿ ಹೋಗಿದ್ದವು. ಗೋವರ್ಧನ ಗಿರಿಯಲ್ಲಿ ಅನೇಕ ಜಲಪಾತಗಳಿದ್ದವು.
ಅವುಗಳಲ್ಲಿ ಬೀಳುವ ನೀರು ಹಾಗೂ ಅದು ಹರಿಯುವ ಶಬ್ದಹಿತಕರವಾಗಿತ್ತು. ಹೀಗೆ ಎಲ್ಲ ರೀತಿಯಲ್ಲೂ ವನದೇವತೆಯ ಸೊಬಗನ್ನು ಕಾಣುತ್ತಾ ಕೃಷ್ಣ ಬಲರಾಮ ಮತ್ತು ಅವರ ಗೆಳೆಯರು ಕಾಡಿನಲ್ಲಿ ಓಡಾಡಿದರು. ಅವರೂ ಮರದ ಕೆಳಗೋ, ಗವಿಯ ಒಳಗೋ ಕುಳಿತು ಮರಗಳಿಂದ ಪಡೆದ ಪಕ್ವವಾದ ಫಲಗಳನ್ನು ತಿನ್ನುತ್ತಿದ್ದರು.

ಕೃಷ್ಣ ಮತ್ತು ಬಲರಾಮರು ಕಾಡಿಗೆ ಹೊರಟಾಗ ತಾಯಿ ಯಶೋದೆ ಅವರಿಗೆ ತಿನ್ನಲು ಮೊಸರನ್ನವನ್ನೂ, ಹಣ್ಣುಗಳನ್ನೂ, ಸಿಹಿ ತಿಂಡಿಗಳನ್ನೂ ಕಳುಹಿಸಿ ಕೊಡುತ್ತಿದ್ದಳು. ಕೃಷ್ಣ ಮತ್ತು ಬಲರಾಮರು ತಮ್ಮ ಗೆಳೆಯರೊಂದಿಗೆ ಅದನ್ನು ಯಮುನಾ ನದಿಯ ತೀರದಲ್ಲಿ ಕುಳಿತು ತಿನ್ನುತ್ತಿದ್ದರು. ಹಾಗೆಯೇ ತಮ್ಮ ದನಕರುಗಳನ್ನು ಗಮನಿಸುತ್ತಿದ್ದರು.
ನಿಂತಾಗ ತಮ್ಮ ಹಾಲಿನಿಂದ ತುಂಬಿದ ಕೆಚ್ಚಲನ್ನು ಹೊರುವುದು ಅವುಗಳಿಗೆ ಆಯಾಸವಾದಂತೆ ಕಂಡರೂ ಕುಳಿತಾಗ ಸಂತೋಷದ ಭಾವ ಅವುಗಳಲ್ಲಿ ಕಂಡು ಬರುತ್ತಿತ್ತು. ಕಾಡಿನ ಸೌಂದರ್ಯ ತನ್ನ ದನ ಕರುಗಳ ಸಂತೃಪ್ತಿ ಗೆಳೆಯರೊಡನೆ ಒಡನಾಟ ಇವೆಲ್ಲಾ ಕೃಷ್ಣನಿಗೆ ಬಹಳ ಸಂತೋಷ ತಂದಿದ್ದವು. ಅವೆಲ್ಲ ಅವನ ಚೈತನ್ಯದ ಅಭಿವ್ಯಕ್ತಿಯೇ ಹೊರತು ಬೇರೇನೂ ಅಲ್ಲ.
ಶರತ್ಕಾಲದಲ್ಲಿ ಕೆರೆಗಳಲ್ಲಿ ತಾವರೆಗಳು ಅಧಿಕ ಸಂಖ್ಯೆಯಲ್ಲಿ ಬೆಳೆಯುತ್ತವೆ. ಏಕೆಂದರೆ ಆಗ ನೈದಿಲೆ ಹೂಗಳಿರುವುದಿಲ್ಲ. ನೈದಿಲೆ ಮತ್ತು ತಾವರೆ ಎರಡೂ ಸೂರ್ಯಪ್ರಕಾಶದಿಂದ ಬೆಳೆಯುತ್ತವೆ. ಆದರೆ ಶರದೃತುವಿನಲ್ಲಿ ಸುಡುವ ಬಿಸಿಲು ತಾವರೆಗೆ ಮಾತ್ರ ನೆರವಾಗುತ್ತದೆ. ಈ ಪರಿಸ್ಥಿತಿಯನ್ನು ಸರಕಾರ ಅಥವಾ ರಾಜ ಬಲಶಾಲಿಯಾಗಿರುವ ದೇಶಕ್ಕೆ ಹೋಲಿಸುತ್ತಾರೆ.
ಇಂಥ ದೇಶದಲ್ಲಿ ಕಳ್ಳಕಾಕರ ಹಾಗೆ ಬೇಡದ ವ್ಯಕ್ತಿಗಳು ವಾಸಿಸಲು ಸಾಧ್ಯವಿಲ್ಲ. ಕಳ್ಳರು ತಮ್ಮ ಮೇಲೆ ಹಲ್ಲೆ ಮಾಡುವುದಿಲ್ಲ ಎಂಬ ಭರವಸೆ ಪ್ರಜೆಗಳಿಗೆ ಬಂದಾಗ ಅವರು ಬಹಳ ಶಾಂತಿ, ಸಮಾಧಾನದಿಂದ ಬಾಳುತ್ತಾರೆ. ಬಲಶಾಲಿಯಾದ ಸರಕಾರವನ್ನು ಶರದೃತುವಿನ ಸುಡುವ ಸೂರ್ಯನ ಪ್ರಕಾಶಕ್ಕೆ ಹೋಲಿಸುತ್ತಾರೆ.
ಲಿಲಿಗಳನ್ನು ಕಳ್ಳರ ರೀತಿಯ ಬೇಡದ ಜನರಿಗೆ ಹೋಲಿಸುತ್ತಾರೆ ಮತ್ತು ತಾವರೆ ಹೂಗಳನ್ನು ತೃಪ್ತಿಯಿಂದ ಬಾಳುವ ಜನರಿಗೆ ಹೋಲಿಸುತ್ತಾರೆ. ಹೀಗೆ ಇರುವ ಶರದೃತುವು ವೃಂದಾವನದಲ್ಲಿ ವಿಶೇಷವಾಗಿ ಕಂಗೊಳಿಸುತ್ತಿತ್ತು. ಅದಕ್ಕೆ ಕಾರಣ ದೇವೋತ್ತಮ ಪರಮ ಪುರುಷನಾದ ಕೃಷ್ಣನೂ ಹಾಗೂ ಬಲರಾಮನೂ ಅಲ್ಲಿ ವಾಸಿಸುತ್ತಿದ್ದುದು.
ಶರದೃತುವಿನ ಆಗಮನದೊಂದಿಗೆ ಶುದ್ಧವಾದ ನೀರಿನಿಂದ ತುಂಬಿದ ಕೆರೆ, ಸರೋವರಗಳಲ್ಲಿ ಸುವಾಸನೆಯುಳ್ಳ ಕಮಲ ಪುಷ್ಪಗಳು ಅರಳಿದವು. ಎಲ್ಲೆಡೆಯೂ ಹಿತಕರವಾದ ವಾತಾವರಣ ಉಂಟಾಗಿತ್ತು. ಕೃಷ್ಣನು ಬಲರಾಮ ಮತ್ತು ತನ್ನ ಗೋಪಬಾಲ ಗೆಳೆಯರೊಂದಿಗೆ ಗೋವುಗಳನ್ನು ಕಾಯುವಾಗ ಬಹಳ ಸಂತೋಷದಿಂದ ಕೊಳಲನ್ನು ನುಡಿಸುತ್ತಿದ್ದನು.

ಈ ಕೊಳಲಿನ ನಾದವನ್ನು ಕೇಳಿ ವೃಂದಾವನದ ಗೋಪಿಯರು ಅವನನ್ನು ನೆನೆಯುತ್ತಾ ಕೃಷ್ಣನು ಎಷ್ಟು ಚೆನ್ನಾಗಿ ಕೊಳಲನ್ನು ನುಡಿಸುತ್ತಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆ ಮಧುರನಾದವು ಅವರ ಮನಸ್ಸನ್ನು ಕಲಕಿಬಿಟ್ಟಿತ್ತು. ಆ ನಾದದ ರೀತಿಯನ್ನು ಅವರು ವರ್ಣಿಸಲೂ ಸಾಧ್ಯವಾಗುತ್ತಿರಲಿಲ್ಲ.
ಈ ದಿವ್ಯನಾದದ ಬಗ್ಗೆ ಮಾತನಾಡುವಾಗ ನೃತ್ಯ ಪಟುವಿನಂತೆ ಕೃಷ್ಣನು ತಲೆಗೆ ನವಿಲುಗರಿಯನ್ನು ಸಿಕ್ಕಿಸಿಕೊಂಡು ಕಿವಿಗಳ ಮೇಲೆ ನೀಲಿ ಹೂಗಳನ್ನು ಇಟ್ಟುಕೊಂಡು ಹೇಗೆ ಉಡುಪು ಧರಿಸುತ್ತಿದ್ದನು ಎಂಬುದನ್ನು ಸ್ಮರಿಸಿಕೊಂಡರು. ಅವನ ಉಡುಪು ಹಳದಿಯ ಚಿನ್ನದಂತೆ ಪ್ರಕಾಶಮಾನವಾಗಿತ್ತು.
ಅವನು ಧರಿಸಿದ ವೈಜಯಂತಿ ಮಾಲೆ ಶೋಭಿಸುತ್ತಿತ್ತು. ಹೀಗೆ ಸುಂದರವಾದ ಉಡುಪನ್ನು ತೊಟ್ಟ ಕೃಷ್ಣನು ಅಮೃತವನ್ನು ಹೊರಸೂಸುತ್ತಿರುವ ತುಟಿಗಳಿಂದ ಕೊಳಲಿನ ರಂಧ್ರಗಳಲ್ಲಿ ಉಸಿರನ್ನು ತುಂಬಿದನು. ಹೀಗೆ ಕೃಷ್ಣನ ಕೊಳಲಿನ ನಾದವನ್ನು ಸ್ಮರಿಸಿಕೊಳ್ಳುತ್ತಾ ಗೋಪಿಯರು ಕಾಡನ್ನು ಪ್ರವೇಶಿಸಿದರು.
ಹೀಗೆ ಹೋಗುತ್ತಿರುವಾಗ ಒಬ್ಬ ಗೋಪಿಯು “…. ಕೃಷ್ಣ ಬಲರಾಮರು ಕಾಡನ್ನು ಪ್ರವೇಶಿಸುತ್ತಾ ಕೊಳಲನ್ನು ನುಡಿಸುತ್ತಾ ತಮ್ಮ ಗೆಳೆಯರೊಂದಿಗೆ ಗೋವುಗಳನ್ನು ಕಾಯುವುದನ್ನು ನೋಡುವುದೇ ಕಣ್ಣುಗಳ ಪರಮ ಭಾಗ್ಯ’ ಎಂದಳು. ಮತ್ತೊಬ್ಬ ಗೋಪಿಯು ”ಕೃಷ್ಣ ಬಲರಾಮರು ಗೋವುಗಳನ್ನು ಕಾಯುತ್ತಿರುವಾಗ ರಂಗ ಭೂಮಿಯ ಮೇಲೆ ನಟಿಸಲು ಹೋಗುವ ನಟರಂತೆ ಕಾಣುತ್ತಾರೆ’ ಎಂದಳು.
ಕೃಷ್ಣನದು ಹೊಳೆಯುವ ಪೀತಾಂಬರ, ಬಲರಾಮನದು ನೀಲಿ ಉಡುಪು. ತಮ್ಮ ಕೈಯಲ್ಲಿ ಅವರು ಮಾವಿನ ಚಿಗುರುಗಳನ್ನು ನವಿಲುಗರಿಗಳನ್ನು, ಹೂವಿನ ಗೊಂಚಲನ್ನು ಹಿಡಿದಿರುತ್ತಿದ್ದರು. ಕಮಲದ ಹಾರಗಳನ್ನು ಧರಿಸಿ ಒಮ್ಮೊಮ್ಮೆ ಅವರು ಇಂಪಾಗಿ ಹಾಡುತ್ತಿದ್ದರು. ಒಬ್ಬ ಗೋಪಿಯು ತನ್ನ ಸ್ನೇಹಿತೆಗೆ “ಕೃಷ್ಣ ಮತ್ತು ಬಲರಾಮರು ಇಷ್ಟು ಸುಂದರವಾಗಿ ಹೇಗೆ ಕಾಣುತ್ತಾರೆ’? ಎಂದು ಕೇಳಿದಳು.
ಮತ್ತೊಬ್ಬ ಗೋಪಿಯು ” ಪ್ರೀತಿಯ ಗೆಳತಿ, ಅವನ ಬಿದಿರಿನ ಕೊಳಲನ್ನು ನಾವು ಯೋಚಿಸಲೂ ಸಾಧ್ಯವಿಲ್ಲ. ಕೃಷ್ಣನ ತುಟಿಯ ಅಮೃತವನ್ನು ಸವಿಯುವ ಆ ಕೊಳಲು ಎಂತಹ ಪುಣ್ಯ ಕಾರ್ಯಗಳನ್ನು ಮಾಡಿರಬೇಕು” ಎಂದಳು. ಕೊಳಲು ಬಿದಿರಿನ ಕೋಲು ಅಷ್ಟೆ. ಆದರೂ ಅದು ಸದಾ ಕೃಷ್ಣನ ಅಧರಾಮೃತವನ್ನು ಸವಿಯುತ್ತಿರುವುದು ಹೇಗೆ? ಕೊಳಲು ಪರಮ ಪ್ರಭುವಿನ ಸೇವೆಯಲ್ಲಿ ನಿರತವಾಗಿರುವುದರಿಂದ ಅವರ ತಂದೆ ತಾಯಿಯರಿಗೆ ಬಹಳ ಸಂತೋಷವಾಗಿರಬೇಕು” ಎಂದು ಅವರು ಮಾತನಾಡಿಕೊಂಡರು.

ಗಿಡ ಮರಗಳು ನೀರನ್ನು ಪಡೆದೇ ಬದುಕುತ್ತವೆ. ಆದ್ದರಿಂದ ನೀರನ್ನು ತುಂಬಿಕೊಂಡಿರುವ ನದಿ ಕೆರೆಗಳು ಈ ಗಿಡಮರಗಳ ತಾಯಿಯರು ಎಂದು ಹೇಳಬಹುದು. ವೃಂದಾವನದ ನದಿಗಳ ಮತ್ತು ಕೆರೆಗಳ ನೀರು ಸಂತೋಷದಿಂದ ನಲಿಯುತ್ತಿದ್ದ ತಾವರೆಗಳಿಂದ ತುಂಬಿ ಹೋಗಿತ್ತು. ಹಾಗೆಯೇ ನೀರೂ ಸಹ ಆನಂದದಿಂದ “ನನ್ನ ಮಗನಾದ ಈ ಬಿದಿರು ಕೊಳಲು ಕೃಷ್ಣನ ತುಟಿಯ ಅಮೃತವನ್ನು ಸವಿಯುತ್ತಿದೆ” ಎಂದು ಯೋಚಿಸುತ್ತಿತ್ತು.
ತಮ್ಮ ಪೀಳಿಗೆಯವರು ಜ್ಞಾನಾರ್ಜನೆ ಮಾಡಿ ಪ್ರಭುವಿನ ಸೇವೆಯಲ್ಲಿ ನಿರತರಾಗುವುದನ್ನು ಕಂಡು ಸಂತೋಷ ಪಡುವ ಹಿರಿಯರಂತೆ ನದಿ ಮತ್ತು ಕೆರೆಗಳ ದಡದಲ್ಲಿದ್ದ ಬೊಂಬಿನ ಮರಗಳು ತಮ್ಮ ವಂಶಜನು ಕೃಷ್ಣನ ತುಟಿಗಳ ಅಮೃತವನ್ನು ಪಡೆಯುತ್ತಿರುವುದನ್ನು ಕಂಡು ಬಹಳ ಆನಂದಪಟ್ಟವು.
ಅವುಗಳಲ್ಲಿ ಕಟ್ಟಿದ ಜೇನುಗೂಡಿನಿಂದ ತೊಟ್ಟಿಕ್ಕುವ ಜೇನು ಈ ಮರಗಳೇ ಸಂತಸದಿಂದ ಸುರಿಸುತ್ತಿರುವ ಜೇನಿನಂತೆ ಕಂಡುಬರುತ್ತಿತ್ತು. ಆಧ್ಯಾತ್ಮಿಕ ಲೋಕದಲ್ಲಿ ಗಿಡಮರಗಳಿಗೆ ನದಿ ಕೆರೆಗಳಿಗೆ ಹಾಗೂ ಎಲ್ಲ ವಸ್ತುಗಳಿಗೂ ಪ್ರಜ್ಞೆಯೆಂಬುದಿರುತ್ತದೆ.
ಕೃಷ್ಣನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ಗೋಪಿಯರಲ್ಲೊಬ್ಬಳು ಹೇಳಿದಳು, “”ಗೋವಿಂದನು ಕೊಳಲನ್ನು ನುಡಿಸಿದಾಗ ಕೂಡಲೆ ನವಿಲುಗಳು ಉನ್ಮತ್ತವಾಗುತ್ತವೆ. ಗೋವರ್ಧನ ಗಿರಿಯ ಮೇಲೆ ಇರುವ ಪ್ರಾಣಿಗಳು, ಗಿಡಮರಗಳು, ಕುಣಿಯುವ ನವಿಲುಗಳನ್ನು ನೋಡಿದಾಗ ಅವೆಲ್ಲವೂ ಕೊಳಲಿನ ನಾದವನ್ನು ಆಲಿಸುವುದರಲ್ಲಿ ಮಗ್ನವಾಗಿವೆ ಎಂಬುದು ಕಂಡು ಬರುತ್ತದೆ.
ಬೇರಾವ ಲೋಕದಲ್ಲಿ ಈ ಭಾಗ್ಯ ಸಾಧ್ಯವಿಲ್ಲ.” ಗೋಪಿಯರು ಹಳ್ಳಿಯ ಸ್ತ್ರೀಯರೂ, ಬಾಲಕಿಯರೂ ಆಗಿದ್ದರೂ ಅವರಿಗೆ ವೇದಜ್ಞಾನವಿತ್ತು. ವೇದಕಾಲದ ಸಂಸ್ಕೃತಿಯೇ ಹಾಗಿತ್ತು.






Leave a Reply