ಕರ್ಮಯೋಗದ ಅನುಭವ

ಭಗವದ್ಗೀತೆಯ ತತ್ವಗಳು

– ಆಂಗ್ಲಮೂಲ: ಸತ್‌ಸ್ವರೂಪದಾಸ

‘ಕರ್ಮ’ ಎಂದರೆ ಕ್ರಿಯೆಗಳು ಎಂದರ್ಥ. ಕರ್ಮದ ಪ್ರತಿಫಲವು ನಮ್ಮನ್ನು ನಮ್ಮ ಪ್ರತಿಯೊಂದು ಕ್ರಿಯೆಯೊಂದಿಗೆ ಬಂಧಿಸುತ್ತದೆ. “ಯೋಗ” ಎಂದರೆ ”ಪರಮಪ್ರಭುವಿನೊಂದಿಗೆ ನಮ್ಮನ್ನು ಬೆಸೆಯುವಂಥದ್ದು” ಯೋಗವು ಮುಕ್ತಿಯ ಪ್ರಕ್ರಿಯೆ. ಆತ್ಮಜ್ಞಾನ ಅಥವಾ ಮೋಕ್ಷ ಸಾಧನೆಯು, ನಮ್ಮ ಕ್ರಿಯೆಯ ಮೂಲಕ ನೆರವೇರುವ ಪ್ರಕ್ರಿಯೆಗೆ “ಕರ್ಮಯೋಗ” ಎನ್ನಲಾಗುತ್ತದೆ. ಪ್ರತಿಯೊಬ್ಬನೂ ಕ್ರಿಯಾಶೀಲವಾಗಿರಬೇಕು. ಭಗವಾನ್ ಶ್ರೀಕೃಷ್ಣನು ಹೇಳಿರುವಂತೆ :

ನ ಹಿ ಕಶ್ಚಿತ್ ಕ್ಷಣಮಪಿ ಜಾತು ಹಿಷ್ಠತ್ಯಕರ್ಮಕೃತ್ |

ಕಾರ್ಯತೇ ಹ್ಯೆವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ || (ಗೀತಾ 3.5)

ಪ್ರಕೃತಿಯಿಂದ ಬಂದ ಗುಣಗಳಿಗೆ ಅನುಗುಣವಾಗಿ ಕರ್ಮವನ್ನು ಪ್ರತಿಯೊಬ್ಬನೂ ಮಾಡಲೇಬೇಕಾಗುತ್ತದೆ. ಆದುದರಿಂದ ಯಾರೂ ಒಂದು ಕ್ಷಣವಾದರೂ ಏನನ್ನೂ ಮಾಡದೆ ಇರಲು ಸಾಧ್ಯವಿಲ್ಲ.

ಪ್ರತಿಯೊಬ್ಬರೂ ಏನಾದರೊಂದು ಚಟುವಟಿಕೆಯಲ್ಲಿ ಮಗ್ನರಾಗಿರಬೇಕು. ಕೃಷ್ಣನ ಕರುಣೆಯೊಂದಿದ್ದರೆ ಸಾಕು, ಯಾವ ಕ್ರಿಯೆಯೂ ನಮ್ಮನ್ನು ಬಂಧನಕ್ಕೊಳಪಡಿಸಲಾಗದಂಥ ಸ್ಥಳವನ್ನು ಸೇರಿ, ಕರ್ಮಬಂಧನಕ್ಕೊಳಪಡಿಸುವ ಸ್ಥಳದಿಂದ ಮುಕ್ತರಾಗಬಹುದು. ಮನುಷ್ಯನು ಎಲ್ಲಿಯವರೆಗೆ ಭಗವತ್ಪ್ರಜ್ಞೆಯನ್ನು ಹೊಂದಿರುವನೋ ಅಲ್ಲಿಯವರೆಗೆ ಆತನು ಅನಗತ್ಯ ಪ್ರಮಾಣದ ಆಹಾರೋತ್ಪನ್ನ, ಅನೈತಿಕ ಲೈಂಗಿಕತೆ, ಮಾದಕದ್ರವ್ಯ ಸೇವನೆಯಂತಹ ಕರ್ಮಬಂಧನದ ಕ್ರಿಯೆಗಳಲ್ಲಿ ತೊಡಗಿಕೊಳ್ಳುವುದಿಲ್ಲ.

ಯೋಗದಿಂದ ಹೊರತಾದ ಕರ್ಮವು ಬಂಧನಕ್ಕೊಳಪಡಿಸುವಂತಹದು. ನಾವು ಯಾವ ಕ್ರಿಯೆಯನ್ನು ಮಾಡುತ್ತೇವೆಯೋ ಅದಕ್ಕೆ ಪ್ರತಿಯಾಗಿ ಕರ್ಮಬಂಧನದ ಪ್ರತಿಕ್ರಿಯೆಯು ನಿರಂತರವಾಗಿ ದಾಖಲಾಗುತ್ತಿರುತ್ತದೆ. ಇದರಿಂದ ಸುಖ ಅಥವಾ ದುಃಖದ ಪ್ರತಿಫಲಗಳು ದೊರೆಯುತ್ತ ಹೋಗುತ್ತವೆ.

ಇಂತಹ ಕರ್ಮಿಗಳ ಜೀವನವು ಗೊತ್ತುಗುರಿಯಿಲ್ಲದ ನಿರಂತರ ಜನನ ಮರಣ ಚಕ್ರಕ್ಕೆ ಸಿಲುಕಿ ಯಾತನೆ ಹೊಂದುತ್ತಿರುತ್ತದೆ ಅಥವಾ ನೇರವಾಗಿ ನರಕಕ್ಕೆ ದೂಡಲ್ಪಡುತ್ತದೆ. ಇಂತಹ ಪ್ರತಿಕ್ರಿಯೆಗಳ ಆತಂಕದಿಂದ ತಪ್ಪಿಸಿಕೊಳ್ಳಲು ಇರುವ ಒಂದು ಮಾರ್ಗ, ‘ಕರ್ಮಯೋಗ.’

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳುತ್ತಾನೆ, “…. ವ್ಯಕ್ತಿಯು ತನ್ನ ಇಂದ್ರಿಯಗಳನ್ನು ನಿಗ್ರಹಿಸಿ, ಯಾವುದಕ್ಕೂ ಅಂಟಿಕೊಳ್ಳದಂತೆ ಕೃಷ್ಣಪ್ರಜ್ಞೆಯಲ್ಲಿ ಕರ್ಮಯೋಗವನ್ನು ಆರಂಭಿಸುವನಾದರೆ, ಅವನು ಹೆಚ್ಚು ಉತ್ತಮನು.” (ಗೀತಾ:3.7)

ಅವನು ‘ಹೆಚ್ಚು ಉತ್ತಮ’ನು. ಅವನು ‘ದುಃಖ ಹೀನ’ನು, ಏಕೆಂದರೆ, ಅವನು ತನ್ನ ಕ್ರಿಯೆಗಳ ಪ್ರತಿಫಲಗಳ ಯಾತನೆಯಿಂದ ಮುಕ್ತನಾಗಿರುತ್ತಾನೆ.

ಇದನ್ನು ಆರಂಭಿಸಲು ಸುಲಭ ಮಾರ್ಗವೆಂದರೆ, ನಿಮ್ಮ ಗಳಿಕೆಯನ್ನು ಕೃಷ್ಣನಿಗೆ ಅರ್ಪಿಸುವುದು. ಅದು ಪ್ರಾರಂಭ. ಇದು ನಿಮ್ಮನ್ನು ಒಂದೇ ಬಾರಿಗೆ ಮುಕ್ತರನ್ನಾಗಿಸುತ್ತದೆ. ನಿಮ್ಮ ಗಳಿಕೆಯನ್ನು ಕೃಷ್ಣನಿಗೆ ಸಲ್ಲಿಸುವಿರಾದರೆ, ನೀವು ಲೌಕಿಕತೆಯ ವ್ಯಾಪ್ತಿಯಿಂದ ರಕ್ಷಿಸಲ್ಪಟ್ಟಿರುವಿರೆಂದೇ ಅರ್ಥ. ನಿಮ್ಮ ಕೈ ಸೇರುತ್ತಿರುವ ಯಾವುದೇ ಸಂಪತ್ತು ಕೃಷ್ಣನಿಗೆ ಸಲ್ಲುತ್ತಿದೆಯೆಂದು ಜಗತ್ತಿಗೆ ಅರಿವಾಗಲಿ – ನೀವು ದೊಡ್ಡ ಅಪಾಯದಿಂದ ಪಾರಾಗುವಿರಿ.

ಕರ್ಮಯೋಗದ ಪ್ರಕಾರ ನೀವು ಕೃಷ್ಣನಿಗಾಗಿ ಕೆಲಸ ಮಾಡುತ್ತಿರುವಾಗ – ನೀವು ನಿಮ್ಮ ಕಚೇರಿಯ ಕೆಲಸಗಳನ್ನು ಮಾಡಬಹುದು, ವ್ಯವಹಾರದ ಕುರಿತು ಜನರೊಂದಿಗೆ ಚರ್ಚಿಸಬಹುದು. ಏನೇನು ಅಗತ್ಯವಿದೆಯೋ ಅವೆಲ್ಲ ಕರ್ತವ್ಯಗಳನ್ನೂ ಮಾಡಬಹುದು. ಏಕೆಂದರೆ, ಅವೆಲ್ಲವೂ ನಿಮ್ಮ ಏಕಮೇವ ಧ್ಯೇಯ: ಮರಳಿ ಭಗವಂತನೆಡೆಗೆ ತೆರಳುವುದು – ಇದರ ಭಾಗವೇ ಆಗಿರುತ್ತವೆ.

ಆಧ್ಯಾತ್ಮಿಕ ಯತ್ನದಲ್ಲಿ ನೀವೆಷ್ಟು ಶ್ರಮಿಸುತ್ತೀರೋ, ಅಷ್ಟು ಯಶಸ್ವಿಯಾಗುವಿರಿ. ನೀವು ಕೆಲಸ ಮಾಡುವಾಗ “ಹರೇಕೃಷ್ಣ ಹರೇ ಕೃಷ್ಣ ಕೃಷ್ಣಕೃಷ್ಣ ಹರೇಹರೇ” ಎಂದು ಜಪಿಸಿ, ನೀವು ಯಾವುದೇ ಕೆಲಸ ಮಾಡುತ್ತಿರಿ, ಕೃಷ್ಣನನ್ನು ನೆನೆಯುತ್ತಿರಿ. ನೀವೊಬ್ಬ ಕರ್ಮಯೋಗಿಯಾಗಿರುವಿರಾದಲ್ಲಿ, ನಿಮ್ಮ ಮನಸ್ಸನ್ನು ಅಲೆಯಲು ಬಿಡಬೇಡಿ.

ನೀವು ಇಲ್ಲಿಗೇಕೆ ಬಂದಿರುವಿರಿ? ಕೆಲಸವನ್ನೇಕೆ ಮಾಡುತ್ತಿರುವಿರಿ? ಏಕೆ ಜೀವಿಸುತ್ತಿರುವಿರಿ? ಯಾರನ್ನು ಪ್ರೀತಿಸುವಿರಿ? – ಈ ಎಲ್ಲ ಪ್ರಶ್ನೆಗಳಿಗೆ ‘ಕೃಷ್ಣ ನೊಬ್ಬನನ್ನೇ ಉತ್ತರವಾಗಿಸಿಕೊಂಡು ಸ್ಮರಿಸುತ್ತಿರಿ. ನಿಮ್ಮ ಸ್ಥಾನದ ಬಗೆ ಅರಿವು ಹೊಂದಿದಾಗ ನಿಯಂತ್ರಣವು ಸುಲಭ ಸಾಧ್ಯವಾಗುತ್ತದೆ.

ಭಗವದ್ಗೀತೆಯಲ್ಲಿ ಹೇಳಿರುವಂತೆ, ನಾವು ಇಂದ್ರಿಯ ಸುಖ ಅನುಭವಿಸಬೇಕೆಂದು ಬಯಸಿದುದರಿಂದಲೂ ಹಾಗೂ ಭಗವಂತನೆಡೆಗಿನ ಮತ್ಸರದಿಂದಲೂ ಈ ದೇಹವನ್ನು ಹೊತ್ತಿದ್ದೇವೆ. ಭಗವಂತನು ಹೇಳುತ್ತಾನೆ:

ಇಚ್ಛಾದ್ವೇಷಸಮುತ್ಥೇನ ದ್ವನ್ದ್ವ ಮೋಹೇನ ಭಾರತ ।

ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾನ್ತಿ ಪರನ್ತಪ ॥ (ಗೀತಾ:7.27)

“ಭರತವಂಶಜನಾದ ಅರ್ಜುನನೆ, ಶತ್ರುಗಳನ್ನು ಜಯಿಸುವವನೆ, ಆಸೆ ದ್ವೇಷಗಳಿಂದ ಹುಟ್ಟಿದ ದ್ವಂದ್ವಗಳಿಂದಾಗಿ ಎಲ್ಲ ಜೀವಿಗಳೂ ಹುಟ್ಟುವಾಗಲೇ ಭ್ರಾಂತಿಯನ್ನು ಹೊಂದಿರುತ್ತವೆ.”

ಕರ್ಮಯೋಗವು ಪ್ರಗತಿ ಹೊಂದಿದಾಗ ಅದು ಭಕ್ತಿಯೋಗದ ರೂಪ ತಾಳುತ್ತದೆ. ಯಾವಾಗ ವ್ಯಕ್ತಿಯು ತನ್ನ ತನು, ಮನ, ಬುದ್ಧಿಶಕ್ತಿಗಳಿಂದ ಭಗವಂತನಿಗೆ ಸೇವೆ ಸಲ್ಲಿಸುತ್ತಾನೋ, ಅವತೀರ್ಣಗೊಂಡ ವೈದಿಕ ಶಾಸ್ತ್ರಗಳ ನಿರ್ದೇಶನದಂತೆ ನಡೆಯುತ್ತಾನೋ, ಆಗ ಕರ್ಮ ಅಥವಾ ಭಕ್ತಿಯೋಗಿಯು ಪರಮ ಪ್ರಭುವಿನೊಂದಿಗೆ ವೈಯಕ್ತಿಕ ಸಂಬಂಧ ಬೆಳೆಸಿಕೊಳ್ಳತೊಡಗುತ್ತಾನೆ. ಅವನು ತನ್ನ ಗಳಿಕೆಗಾಗಿ ದುಡಿಯುವುದಿಲ್ಲ ಅಥವಾ ನಿರಾಕಾರವಾದ ಯಾವುದೋ ತತ್ತ್ವಕ್ಕಾಗಿಯೂ ಅಲ್ಲ. ಅವನು ದೇವೋತ್ತಮ ಪರಮಪುರುಷನಿಗಾಗಿ ಕ್ರಿಯಾಶೀಲನಾಗಿರುತ್ತಾನೆ.

ಈ ಪ್ರಕ್ರಿಯೆಯು ವ್ಯಕ್ತಿಯನ್ನು ಕೃಷ್ಣನೆಡೆಗೆ ಕರೆದೊಯ್ಯುತ್ತದೆ. ಇದು ಪರಮ ಪ್ರಭುವಿನ ಕುರಿತಾದ ಅರಿವಿನ ಪ್ರಶ್ನೆ. ಭಗವಂತನನ್ನು ಕೇವಲ ಅವನ ಕರುಣೆಯಿಂದ ಮಾತ್ರ ಅರಿಯಬಹುದಾದ್ದರಿಂದ, ಈ ಕರುಣೆಯು ನಿಮ್ಮ ಮೇಲಿದೆಯೋ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನವನ್ನಾದರೂ ನೀವು ಮಾಡಲೇಬೇಕು. ಭಾಗವತದಲ್ಲಿ ಹೇಳಿರುವಂತೆ –

ಈ ಮಹಾಜ್ಞಾನದ ಅರಿವಿಲ್ಲದವರು ಭಗವಂತನ ಪಾರಮಾರ್ಥಿಕ ಲೀಲೆಗಳನ್ನು ತಪ್ಪಾಗಿ ಅರ್ಥೈಸಿಕೊಂಡು, ಅದನ್ನೇ ನಿರೂಪಿಸುತ್ತ ಇತರರನ್ನೂ ತಪ್ಪು ಹಾದಿಗೆಳೆಸಲು ಯತ್ನಿಸುತ್ತಾರೆ.

ನೀವು ಭಗವಂತನಿಗಾಗಿ ಕ್ರಿಯಾಶೀಲರಾಗುವುದರಿಂದ, ಅವನ ಅರಿವನ್ನು ಹೊಂದುವ ಸಾಮರ್ಥ್ಯವು ಪ್ರತಿಫಲವಾಗಿ ದೊರೆಯುತ್ತದೆ. ನಮ್ಮ ಮೆದುಳು ಅತ್ಯಂತ ಚಿಕ್ಕದು. ದೇವೋತ್ತಮ ಪರಮಪುರುಷನನ್ನು ಅರಿಯುವುದು ಅತ್ಯಂತ ಕಠಿಣ ಸಂಗತಿ.

ನಾವು ಸ್ವತಃ ಭಗವಂತನ ಬೋಧನೆಗಳನ್ನು (ಶಾಸ್ತ್ರಗ್ರಂಥಗಳು), ಅವನ ಸ್ವರೂಪ (ಶ್ರೀಕೃಷ್ಣ), ಅವನ ಭಕ್ತರು (ಶ್ರೀಚೈತನ್ಯ ಮಹಾಪ್ರಭು ಹಾಗೂ ಶಿಷ್ಯ ಪರಂಪರೆ), ಮತ್ತು ಅತ್ಯಂತ ಸುಲಭ ಲಭ್ಯವಿರುವ ಹಾಗೂ ರಕ್ಷಣಾ ಕವಚದಂತಿರುವ ಹರೇಕೃಷ್ಣ ಮಂತ್ರ – ಇವೆಲ್ಲವನ್ನೂ ಹೊಂದಿದ್ದೇವೆ.

ಆದರೆ ಕಲ್ಮಷಗಳಿಂದ ಆವೃತರಾಗಿರುವ ನಮಗೆ ಇವನ್ನು ಬಳಸಿಕೊಂಡು ಭಗವಂತನನ್ನು ಅರಿಯುವುದು ತಿಳಿದಿಲ್ಲ. ಭಗವಂತನ ಕೃಪೆಯಿಲ್ಲದೆ ಅದು ಸಾಧ್ಯವಿಲ್ಲ. ಭ್ರಮೆಯ ತರ೦ಗಗಳು ನಮ್ಮ ಸುತ್ತ ನೊಣಗಳ ಹಾಗೆ ಜೀರ್ಗುಡುತ್ತ ಹಾರಾಡುತ್ತಿವೆ. ಅವೆಲ್ಲವನ್ನೂ ದೂರತಳ್ಳಿ, ನಾವು ಕೇವಲ ಪರಮಪ್ರಭುವಿನ ಪಾದಗಳಲ್ಲಿ ಆಶ್ರಯಪಡೆಯಬೇಕು.

ಈ ಭೌತಿಕ ಪ್ರಕೃತಿಯೊಂದಿಗೆ ಮುಖಾಮುಖಿಯಾಗಿದ್ದರೂ ದಿವ್ಯಪ್ರಭೆಯ ದೃಷ್ಟಿ ಪಡೆದ ಕರ್ಮಯೋಗಿಯು, “ನಾನು ಅವನಿಗಾಗಿ ಕೆಲಸ ಮಾಡುವೆ. ಭಗವಂತನು ನನ್ನ ಹಾಗೆಯೇ ಇರುವ ಸಾಮಾನ್ಯ ವ್ಯಕ್ತಿಯಲ್ಲ. ಅವನೊಬ್ಬ ಉನ್ನತ ವ್ಯಕ್ತಿ. ಅವನ ಕೆಲಸಗಳನ್ನು ನಾನಿಲ್ಲಿ ಮಾಡುವೆ. ನಾನು ಕೆಲಸಗಳನ್ನು ಮಾಡಲೇಬೇಕಿರುವುದರಿಂದ, ನನ್ನೆಲ್ಲ ಕ್ರಿಯೆಗಳು ಕೇವಲ ಅವನಿಗಾಗಿಯೇ ಇರುವುದು – ನಾನೊಬ್ಬ ಮೂಢ.

ಅದರೆ ಅವನು ಭೂಮಿಯ ಮೇಲೆ ಯಾವುದೆಲ್ಲವೂ ದೋಷಪೂರಿತ ಪ್ರತಿಬಿಂಬವಾಗಿ ವ್ಯಾಪಿಸಿರುವುದೋ ಅದರ ನೈಜ ವಾಸ್ತವ” – ಎಂದು ಯೋಚಿಸುವನು.

ಕರ್ಮಯೋಗಿಯು ಹತಾಶನಾಗುವುದಿಲ್ಲ. ಶ್ರಮದಿಂದ ಆತನು ಸೋತು ಹೋಗುವುದೂ ಇಲ್ಲ. ಅವನ ಕಾರ್ಯಗಳ ಫಲಾಫಲಗಳ ಬಗ್ಗೆ ಚಿಂತಿಸಬೇಕಿಲ್ಲ. ಅವನಿಗೆ ಯಮರಾಜನ ದಂಡನೆಗಳ ಭಯವಿರುವುದಿಲ್ಲ. ಕರ್ಮಯೋಗಿಯು ತನ್ನಿಂದ ಸಾಧ್ಯವಿರುವುದನ್ನು ಮಾಡುತ್ತಾನೆ, ಮತ್ತು ಅದರಾಚೆ ಭಗವಂತನು ನೀಡುತ್ತಾನೆ.

ಭಗವದ್ಗೀತೆಯ ಮೂಲಕ ಭಗವಾನ್ ಶ್ರೀಕೃಷ್ಣನು ಇಂತಹ ಭಕ್ತರಿಗೆ ರಕ್ಷಣೆ ಹಾಗೂ ಮುಕ್ತಿಯನ್ನು ನೀಡುವುದಾಗಿ ಭರವಸೆಯಿತ್ತಿದ್ದಾನೆ. ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಮ್ ಶರಣಮ್ ವ್ರಜ ” ಎಲ್ಲ ಧರ್ಮವನ್ನೂ ಪರಿತ್ಯಜಿಸಿ ಕೇವಲ ನನಗೆ ಶರಣಾಗು. ನಾನು ನಿನ್ನೆಲ್ಲ ಪಾಪಗಳಿಂದಲೂ ಮುಕ್ತನನ್ನಾಗಿಸುವೆ. ಭಯಪಡದಿರು” ಎಂದು.

ಕರ್ಮಯೋಗವು ಈ ಭರವಸೆಯ ಈಡೇರಿಕೆಯ ಒಂದು ಪ್ರಕ್ರಿಯೆಯಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi