ದ್ವಾಪರ ಯುಗದ ಅಸುರರು

ಪೂರ್ವಜನ್ಮದಲ್ಲಿ ಕಾಲನೇಮಿಯೆಂಬ ಅಸುರನಾಗಿದ್ದು ವೈಕುಂಠಾಧಿಪತಿ ವಿಷ್ಣುವಿನಿಂದ ಸಂಹರಿಸಲ್ಪಟ್ಟಿದ್ದವನು ದ್ವಾಪರ ಯುಗದಲ್ಲಿ ಕಂಸನಾಗಿ ಅವತರಿಸಿ ಬಂದ. (ಭಾಗವತ 10ನೇ ಸ್ಕಂಧ). ಈ ಅಸುರನ ಪಾಪಕಾರ್ಯಗಳ ಪಾಲುದಾರರಾಗಿ ಒಂದು ರಾಕ್ಷಸ ಕೂಟವೇ ಜನ್ಮತಾಳಿತು.

ಕಂಸನ ಸಹಾಯಕರಾಗಿ ಅವತರಿಸಿ ಬಂದ ಇತರ ಅಸುರರು ಹಾಗೂ ಕೃಷ್ಣನಿಗೆ ವಿರುದ್ಧವಾಗಿ ನಿಂತು ಸಂಹಾರಗೊಂಡ ದೈತ್ಯರ ಕಿರು ವಿವರ ಇಲ್ಲಿದೆ;

ಪೂತನಾ: ಈಕೆ ವಿಷದ ಮೊಲೆಯೂಡುವ ಮೂಲಕ ಶಿಶು ಕೃಷ್ಣನನ್ನು ಕೊಲ್ಲಲು ಯತ್ನಿಸಿದ್ದಳು.

ಶಕಟಾಸುರ: ಬಂಡಿಯ ರೂಪದಲ್ಲಿದ್ದು, ಬಾಲ ಕೃಷ್ಣನ ಪಾದಾಘಾತದಿಂದ ಸಂಹರಿತನಾದ.

ತೃಣಾವರ್ತ: ಸುಂಟರಗಾಳಿ ರಕ್ಕಸ. ಕೃಷ್ಣನನ್ನು ಅಪಹರಿಸಿ, ಅವನ ಭಾರ ತಾಳಲಾರದೆ ಉಸಿರುಕಟ್ಟಿ ಅಸುನೀಗಿದ.

ಅಘಾಸುರ: ದೈತ್ಯಾಕಾರದ ಹೆಬ್ಬಾವಿನ ರೂಪದಲ್ಲಿ ಕೃಷ್ಣ ಹಾಗೂ ಅವನ ಸ್ನೇಹಿತರನ್ನು ಕಬಳಿಸಲು ಯತ್ನಿಸಿದ. ವಿಫಲನಾಗಿ ಕೃಷ್ಣನಿಂದ ಹತನಾದ.

ಬಕಾಸುರ: ಕೊಕ್ಕರೆ ರೂಪದ ಅಸುರ. ಇವನ ಕೊಕ್ಕುಗಳನ್ನು ಇಬ್ಭಾಗ ಸೀಳಿ, ಕೃಷ್ಣನು ಸಂಹಾರ ಮಾಡಿದನು.

ಧೇನುಕಾಸುರ: ತಾಳವನದಲ್ಲಿ ಕತ್ತೆಯ ರೂಪದಲ್ಲಿದ್ದು ಕೃಷ್ಣನನ್ನು ಕೊಲ್ಲಲು ಹವಣಿಸಿದ್ದ. ಕೃಷ್ಣ ಬಲರಾಮರು ಧೇನುಕಾಸುರನನ್ನೂ ಅವನ ಸಹಚರರನ್ನು ಕೊಂದು ಹಾಕಿದರು.

ಕೇಶಿ: ಕುದುರೆ ರೂಪದಲ್ಲಿ ಕೃಷ್ಣನನ್ನು ಕೊಲ್ಲಲು ಬಂದ ರಾಕ್ಷಸ. ಯಥಾಪ್ರಕಾರ ತಾನೇ ಕೃಷ್ಣನಿಂದ ಹತನಾದ.

ಪ್ರಲಂಬಾಸುರ: ಗೋಪಬಾಲರಲ್ಲೊಬ್ಬರಂತೆ ಸೋಗುಹಾಕಿ ಬಂದು ಕೃಷ್ಣಬಲರಾಮರನ್ನು ಕೊಲ್ಲಲು ಯತ್ನಿಸಿದ. ಆದರೆ ತಾನೇ ಬಲರಾಮನಿಂದ ಹತನಾದ.

ವತ್ಸಾಸುರ: ಕರುವಿನ ರೂಪದಿಂದ ಬಂದು ಕೃಷ್ಣನನ್ನು ಕೊಲ್ಲಲು ಹವಣಿಸಿದ. ಕೃಷ್ಣನು ಇವನನ್ನು ಸಂಹರಿಸಿ ಮರಗಳ ನಡುವೆ ಎಸೆದ.

ಅರಿಷ್ಟಾಸುರ: ಭೀಕರ ರೂಪದ ಹೋರಿಯಾಗಿ ವೃಂದಾವನ ಹೊಕ್ಕ ರಾಕ್ಷಸ. ಕೃಷ್ಣನನ್ನು ಕೊಲ್ಲಲು ಬಂದು ಸ್ವತಃ ಸಂಹರಿತನಾದ.

ಚಾಣೂರ: ಕಂಸನ ಭಂಟ. ಮಲ್ಲಯುದ್ಧ ಪ್ರವೀಣ, ಮಲ್ಲಯುದ್ಧದಲ್ಲಿ ಕೃಷ್ಣನಿಂದ ಹತನಾದ.

ಮುಷ್ಟಿಕ: ಕಂಸನ ಭಂಟ. ಮಲ್ಲಯುದ್ಧ ಪ್ರವೀಣ. ಮಲ್ಲಯುದ್ಧದಲ್ಲಿ ಬಲರಾಮನಿಂದ ಹತನಾದ.

ಜರಾಸಂಧ: ಕಂಸನ ಮಾವ. ಮಥುರಾ ನಗರದ ಮೇಲೆ ದಂಡೆತ್ತಿ ಬಂದು ಕಿರುಕುಳ ಕೊಡುತ್ತಿದ್ದ. ಕೃಷ್ಣನನ್ನು ಕೊಲ್ಲ ಬಯಸಿದ್ದ, ಮುಂದೆ ಭೀಮಸೇನನು ಕೃಷ್ಣನ ಸಲಹೆಯಂತೆ ಇವನ ದೇಹವನ್ನು ಇಬ್ಭಾಗ ಮಾಡಿ ಕೊಂದು ಹಾಕಿದ.

ಶಿಶುಪಾಲ: ಕೃಷ್ಣನ ಸಂಬಂಧಿ. ತ್ರೇತಾಯುಗದಲ್ಲಿ ರಾವಣನಾಗಿ ಜನ್ಮತಳೆದಿದ್ದವನು. ಪಾಂಡವರು ನಡೆಸಿದ ರಾಜಸೂಯಯಾಗದಲ್ಲಿ ಕೃಷ್ಣನಿಗೆ ಮನ್ನಣೆಯಿತ್ತಾಗ ಅದನ್ನು ಖಂಡಿಸಿ ಮೂದಲಿಸಿದ. ಅವನೊಬ್ಬ ದುರುಳನೂ ಕ್ರೂರಿಯೂ ಆಗಿದ್ದು, ಕೃಷ್ಣನಿಂದ ಹತನಾದ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi