ದೇವರನ್ನು ಪ್ರೀತಿಸುವವರು ಯಾರು?

ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹಾಗೂ ಅತಿಥಿಗಳ ನಡುವೆ ನಡೆದ ಸಂವಾದ

ಸ್ಥಳ: ಲಂಡನ್, ದಿನಾಂಕ: ಆಗಸ್ಟ್ 14, 1971

– ಅನುವಾದ : ಚೇತನಾ ತೀರ್ಥಹಳ್ಳಿ

ಶ್ರೀಲ ಪ್ರಭುಪಾದ: ನಾವು ಭಗವತ್ಪ್ರಜ್ಞೆಯನ್ನು ಬೋಧಿಸುತ್ತಿರುವೆವು. ದೇವರೆಂದರೆ ದೇವರು. ಭಗವಂತನು ಕ್ರಿಶ್ಚಿಯನ್ನಾಗಲೀ, ಹಿಂದೂ ಆಗಲೀ ಮುಸಲ್ಮಾನನಾಗಲೀ ಆಗಿರುವುದಿಲ್ಲ. ನಮ್ಮ ಆಂದೋಲನದಲ್ಲಿ ನಾವು ಪರಮಪ್ರಭುವಿನ ಪ್ರೇಮವನ್ನು ಬೋಧಿಸುತ್ತೇವೆ. ಆದ್ದರಿಂದ ಯಾರು ಯಾವ ಧರ್ಮವನ್ನು ಅನುಸರಿಸುತ್ತಿರುವವನೆಂಬುದು ಒಂದು ವಿಷಯವೇ ಅಲ್ಲ. ಅವನು ಭಗವಂತನಲ್ಲಿ ಪ್ರೇಮವಿರಿಸಿದ್ದಾನೆಂಬುದಷ್ಟೆ ನಾವು ನೋಡಬಯಸುವ ಸಂಗತಿ.

ನಮ್ಮ ಭಾಗವತ ಧರ್ಮವು ನೀಡುವ ವಿವರಣೆ ಹೀಗಿದೆ:

ಸವೈ ಪುಂಸಾಮ್ ಪರೋ ಧರ್ಮೋ ಯತೋ ಭಕ್ತಿರಧೋಕ್ಷಜೇ – ‘ಯಾವುದನ್ನು ಅನುಸರಿಸುವುದರಿಂದ ವ್ಯಕ್ತಿಯು ಭಗವತ್ಪ್ರೇಮಿಯಾಗುವನೋ ಅದು ಉನ್ನತ ದರ್ಜೆಯ ಧರ್ಮವಾಗಿರುವುದು.” ಯಾರು, ಯಾವ ಧರ್ಮವನ್ನು ಅನುಸರಿಸುವನೆಂಬುದು ವಿಷಯವಲ್ಲ. ಆದರೆ ಅವನು ಭಗವಂತನ ಪ್ರೇಮಿಯಾಗಿರುವನೇ ಎಂಬುದು ಮುಖ್ಯವಷ್ಟೆ.

ಅತಿಥಿ: ಹಾಗಾದರೆ ನೀವು ಇತರ ಧರ್ಮಗಳ ಜನರನ್ನು ಮತಾಂತರಿಸಲು ಪ್ರಯತ್ನಿಸುತ್ತಿಲ್ಲವೇ?

ಶ್ರೀಲ ಪ್ರಭುಪಾದ: ಇಲ್ಲ. ನಾವು ಭಗವಂತನನ್ನು ಹೇಗೆ ಪ್ರೀತಿಸಬೇಕು ಎಂದು ಕಲಿಸುತ್ತಿರುವೆವು ಅಷ್ಟೆ.

ಅತಿಥಿ: ನಾವು ಕೂಡ ಅದನ್ನೇ ಮಾಡುತ್ತಿರುವೆವು.

ಶ್ರೀಲ ಪ್ರಭುಪಾದ: ಹೌದು. ಆದರೆ ಇಲ್ಲೊಂದು ಪರೀಕ್ಷೆಯಿದೆ – ವ್ಯಕ್ತಿಯು ಇದರಿ೦ದ ಭಗವಂತನ ಪ್ರೇಮಿಯಾದನೋ ಅಥವಾ ನಾಯಿಯ ಪ್ರೇಮಿಯಾದನೋ ಎಂಬುದು. ನೀವು ಆ ವ್ಯಕ್ತಿಯು ನಾಯಿಯ ಪ್ರೇಮಿಯಾದುದನ್ನು ಕಂಡರೆ, ಅಂತಹ ಧರ್ಮವು ನಿರುಪಯುಕ್ತವೇ ಸರಿ.

ಅತಿಥಿ: ಅದು ಹೇಗೆ ತಿಳಿಯುವುದು?

ಶ್ರೀಲ ಪ್ರಭುಪಾದ: ಅವನು ಭಗವಂತನ ಅಥವಾ ನಾಯಿಯ ಪ್ರೇಮಿಯಾಗಿರುವನೆಂಬುದನ್ನು ನೋಡಬಲ್ಲಿರಿ ಅಷ್ಟೇ. ಚೈತನ್ಯ ಮಹಾಪ್ರಭುಗಳು ಹೇಳುವರು:

ಯುಗಾಯಿತಂ ನಿಮೇಷೇಣ ಚಕ್ಷುಷಾ ಪ್ರಾವೃಷಾಯಿತಂ ।

ಶೂನ್ಯಾಯಿತಂ ಜಗತ್ ಸರ್ವಂ ಗೋವಿಂದ-ವಿರಹೇಣ ಮೇ ||

ಯುಗಾಯಿತಂ ನಿಮೇಷೇಣ – ”ಪ್ರತಿ ಘಳಿಗೆಯೂ 12 ವರ್ಷಗಳ ಹಾಗೆ’ ಚಕ್ಷುಷಾ ಪ್ರಾವೃಷಾಯಿತಂ ”ಮಳೆ ಸುರಿದ ಹಾಗೆ ನಾನು ಅಳುತ್ತಿರುವೆನು.’ ಶೂನ್ಯಾಯಿತಂ ಜಗತ್‌ ಸರ್ವಂ ”ಇಡಿಯ ಜಗತ್ತೇ ನನಗೆ ಶೂನ್ಯವಾಗಿ ತೋರುತ್ತಿರುವುದು’ ಗೋವಿಂದ-ವಿರಹೇಣ ಮೇ ‘ಭಗವಂತನ ವಿರಹದಿಂದ ಇದು ಮಾದರಿ ಚಿತ್ರಣ.

ಮತ್ತೊಂದು ಪರೀಕ್ಷೆ: ‘ಭಕ್ತಿಃ ಪರೇಶಾನುಭವೋ ವಿರಕ್ತಿರನ್ಯತ್ರ ಚ” ಯಾರು ಭಗವತ್ಪ್ರೇಮಿಯಾಗಿರುತ್ತಾನೋ ಅವನು ಸಹಜವಾಗಿ ಲೌಕಿಕ ಆನಂದಗಳಲ್ಲಿ ವಿರಕ್ತಿ ಹೊಂದಿರುತ್ತಾನೆ.

ಭಗವಂತನಲ್ಲಿನ ಪ್ರೇಮ ಹಾಗೂ ಲೌಕಿಕ ಸುಖಗಳೆಡೆಗಿನ ಪ್ರೇಮಗಳೆರಡೂ ಒಟ್ಟಿಗೆ ಸಾಗಲಾರವು. ಏಸುಕ್ರಿಸ್ತನು ಎಂದಿಗೂ ಆರ್ಥಿಕ ಪ್ರಗತಿ, ಕೈಗಾರಿಕ ಪ್ರಗತಿಗಳಿಗಾಗಿ ಸಲಹೆ ನೀಡಿರಲಿಲ್ಲ. ಭಗವಂತನಿಗಾಗಿ ಅದೊಂದು ಪರೀಕ್ಷೆ – ”ಇಲ್ಲಿ ಭಗವಂತನ ಪ್ರೇಮಿ ಇರುವನು.” ಏಸುಕ್ರಿಸ್ತನು ಶಿಕ್ಷಿಸಲ್ಪಟ್ಟನು. ”ಈ ಬೋಧನೆಯನ್ನು ನಿಲ್ಲಿಸು” ಎಂದು ಆದೇಶಿಸಲ್ಪಟ್ಟನು. ಆದರೆ ಅವನು ಹಾಗೆ ಮಾಡಲಿಲ್ಲ. ಅದು ಭಗವತ್ಪ್ರೇಮ. ಅವನು ಎಲ್ಲವನ್ನೂ ತ್ಯಾಗ ಮಾಡಿದನು.

ಏಸುಕ್ರಿಸ್ತನಂತೆ ಅವನ ಅನುಯಾಯಿಗಳು ಕೂಡ ಸ್ವಲ್ಪವಾದರೂ ಭಗವತ್ಪ್ರೇಮವನ್ನು ಹೊಂದಿರಬೇಕು, ಅದೇ ಪರೀಕ್ಷೆ. ಆದ್ದರಿಂದ ನಾವು ಹೇಳುತ್ತೇವೆ, ನೀವು ಯಾವುದೇ ಧರ್ಮವನ್ನು ಅನುಸರಿಸಿ, ಯಾವುದು ಎಂಬುದು ಮುಖ್ಯವಲ್ಲ. ನೀವು ಭಗವಂತನ ಪ್ರೇಮಿಗಳೇ ಅಲ್ಲವೇ ಎಂಬುದನ್ನು ನಾವು ನೋಡಬಯಸುತ್ತೇವೆ. ಅದು ನಮ್ಮ ಉದ್ದೇಶ.

ಯಾರಾದರೊಬ್ಬ ವ್ಯಕ್ತಿಯು ಭಗವಂತನನ್ನು ತೀವ್ರವಾಗಿ ಪ್ರೀತಿಸುವ ಇಚ್ಛೆಯಿದ್ದರೆ, ಅವನು ಯಾವ ಬಗೆಯಲ್ಲಿ ಆ ಸುಪ್ತ ಪ್ರೇಮವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾನೆಂಬುದು ಒಂದು ವಿಷಯವೆನಿಸುವುದಿಲ್ಲ. ವ್ಯಕ್ತಿಯೊಬ್ಬ ಗಣಿತದ ಅತ್ಯುತ್ತಮ ವಿದ್ಯಾರ್ಥಿಯಾಗಬೇಕೆಂದು ಬಯಸಿದರೆ, ಅವನು ಯಾವ ವಿಶ್ವವಿದ್ಯಾಲದಿಂದ ಪದವಿಯನ್ನು ಪಡೆಯುವನು ಎಂಬುದು ಮುಖ್ಯವಾಗುವುದಿಲ್ಲ. ಕೆಲವೊಮ್ಮೆ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇತರ ದೇಶಗಳಿಗೂ ಹೋಗುತ್ತಾರೆ.

ಆದ್ದರಿಂದ ವ್ಯಕ್ತಿಯು ಭಗವತ್ಪ್ರೇಮದಲ್ಲಿ ತೊಡಗಲು ತೀವ್ರವಾಗಿ ಇಚ್ಛಿಸಿದ್ದರೆ, ಅವನು ಆ ಕಲೆಯನ್ನು ಯಾವ ಮಾರ್ಗದಲ್ಲಿ ಕಲಿಯುತ್ತಾನೆ. ಎನ್ನುವುದು ಮುಖ್ಯವಾಗುವುದಿಲ್ಲ.

ಅವನು, ”ಓ, ನಾನು ಈ ಕಲೆಯನ್ನು ಇದೇ ವಿಶ್ವವಿದ್ಯಾಲಯದಲ್ಲಿ ಕಲಿಯಬೇಕು” ಎಂದುಕೊಳ್ಳುವುದಿಲ್ಲ. ಇಲ್ಲ. ಯಾವುದೇ ವಿಶ್ವವಿದ್ಯಾಲಯ. ಅದು ವಿಷಯವಲ್ಲ.

ನಮ್ಮ ಧ್ಯೇಯವೆಂದರೆ, ನಾವು ಭಗವಂತನ ಪ್ರೇಮವನ್ನು ಬೋಧಿಸುತ್ತೇವೆ. ಯಾರು ಭಗವಂತನ ಬೆನ್ನು ಹತ್ತಿರುವರೋ ಅವರು ನಮ್ಮ ಬಳಿ ಬರುತ್ತಿದ್ದಾರೆ. ಅವರು ಅಮೆರಿಕದಲ್ಲಿರುವವರೇ, ರಷ್ಯಾದವರೇ, ಆಫ್ರಿಕದವರೇ ಅಥವಾ ಕೆನಡಾದವರೇ ಎನ್ನುವುದು ಮುಖ್ಯವಲ್ಲ. ಅವರು ಬರುತ್ತಿದ್ದಾರೆ.

ವಿಧಾನ ಸರಳವಾಗಿದೆ. ಭಗವಂತನ ಪವಿತ್ರ ನಾಮವನ್ನು ಜಪಿಸುವುದು. ನೀವು ಭಗವಂತನಿಗಾಗಿ ಹೆಸರೊಂದನ್ನು ಹೊಂದಿರುವುದಾದರೆ, ಅದನ್ನು ಜಪಿಸಿ, ನಾವು ಇದನ್ನು ಬೋಧಿಸುತ್ತೇವೆ. ನೀವು ‘ಕೃಷ್ಣ’ನನ್ನೇ ಜಪಿಸಬೇಕೆಂದು ನಾವು ಹೇಳುವುದಿಲ್ಲ. ನಿಮಗೆ ಭಗವಂತನ ಯಾವುದೆ ಹೆಸರು ಗೊತ್ತಿದ್ದರೂ ಅದನ್ನು ಜಪಿಸಿ. ನಿಮ್ಮ ಬಳಿ ಭಗವಂತನ ಯಾವ ಹೆಸರೂ ಇರದಿದ್ದರೆ, ಭಗವಂತನ ಹೆಸರಿನ ಕುರಿತಾದ ನಮ್ಮ, ಗ್ರಹಿಕೆಯಾದ ‘ಕೃಷ್ಣ’ನನ್ನು ಜಪಿಸಿ.

ಭಗವಾನ್‌ ಚೈತನ್ಯರು ಹೇಳುತ್ತಾರೆ, ಭಗವಂತನಿಗೆ ಹಲವು ಹೆಸರುಗಳಿವೆ. ಮತ್ತು ಪ್ರತಿ ಹೆಸರಿನಲ್ಲಿ ಭಗವಂತನ ಸಂಪೂರ್ಣ ಶಕ್ತಿ ಇರುವುದು ಎಂದು. ಭಗವಂತನ ಪವಿತ್ರ ನಾಮವನ್ನು ಜಪಿಸಲು ಯಾವುದೇ ಕಠಿಣವಾದ ನಿಯಮಗಳಿಲ್ಲ. ಯಾರು ಬೇಕಿದ್ದರೂ, ಎಲ್ಲಿಯಾದರೂ, ಯಾವುದೇ ಸನ್ನಿವೇಶದಲ್ಲಿಯೂ ಜಪ ಮಾಡಬಹುದು.

ಭಗವಾನ್‌ ಚೈತನ್ಯರು ಹೇಳುತ್ತಾರೆ, ”ಭಗವನ್! ನೀನು ಬಹಳ ಕರುಣಾಶಾಲಿ, ನಾನು ಕೇವಲ ನಿನ್ನ ಪವಿತ್ರ ನಾಮ ಜಪಮಾತ್ರದಿಂದಲೇ ನಿನ್ನ ಸಾಂಗತ್ಯ ಹೊಂದಬಲ್ಲೆ. ಆದರೆ ನಾನೆಷ್ಟು ಅಭಾಗನೆಂದರೆ, ನನಗೆ ಅದರತ್ತ ಆಕರ್ಷಣೆಯೇ ಇಲ್ಲ.”

ನಾವು ನಮ್ಮ ವಿದ್ಯಾರ್ಥಿಗಳಿಗೆ ಜಪವನ್ನು ಕಲಿಸುತ್ತೇವೆ. ಅವರು ಸದಾಕಾಲ ಜಪ ಚೀಲವನ್ನು ಹಿಡಿದಿರುತ್ತಾರೆ ಮತ್ತು ಅವರು: ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ಹರೇರಾಮ ಹರೇರಾಮ ರಾಮರಾಮ ಹರೇಹರೇ ಎಂದು ಜಪಿಸುತ್ತಾರೆ. ಮತ್ತಿಲ್ಲಿ ನಷ್ಟವೇನಿದೆ? ಸಮಯದ ಅಭಾವವೆಲ್ಲಿದೆ? ದಾರಿಯಲ್ಲಿ ನಡೆಯುವಾಗ ಅವರು ಜಪ ಮಾಡುತ್ತಿರುವರು. ನಾನಿಲ್ಲಿ ಕುಳಿತು ನಿಮ್ಮೊಂದಿಗೆ ಮಾತನಾಡುತ್ತಿರುವೆನು. ಇದು ಮುಗಿದ ಕೂಡಲೇ ನಾನು ಹರೇಕೃಷ್ಣ ಜಪಿಸುವೆನು. ಕಷ್ಟವೆಲ್ಲಿದೆ?

ಆದರೆ ಜನರನ್ನು ಭಗವಂತನ ಪವಿತ್ರ ನಾಮ ಜಪಿಸುವಂತೆ ಕೇಳಿದರೆ ಅವರು ಒಪ್ಪುವುದಿಲ್ಲ. ಅದು ದುರದೃಷ್ಟ. ಜಪಿಸುವುದು ತೀರಾ ಸರಳ ವಿಧಾನ. ನೀವು ಚರ್ಚಿಗಾಗಲೀ, ದೇವಾಲಯಕ್ಕಾಗಲೀ ಅಥವಾ ಸ್ವರ್ಗ ನರಕಗಳಿಗಾಗಲೀ ಹೋಗಬೇಕಿಲ್ಲ.

ಯಾವುದೇ ಸಂದರ್ಭದಲ್ಲಿಯೂ ನೀವು ಭಗವಂತನ ಪವಿತ್ರ ನಾಮವನ್ನು ಜಪಿಸಬಹುದು. ಆದರೆ ಜನರು ಅದೆಷ್ಟು ದುರದೃಷ್ಟರೆಂದರೆ, ಅವರು ಈ ಸಿದ್ಧಾಂತವನ್ನು ಒಪ್ಪುವುದಿಲ್ಲ. ಅಲ್ಲಿ ಯಾವುದೇ ದೇಣಿಗೆ ನೀಡಬೇಕಿಲ್ಲ, ನಷ್ಟವಿಲ್ಲ. ಅಲ್ಲಿ ಹಲವು ಲಾಭಗಳಿವೆ. ಯಾಕೆ ಅದನ್ನು ಪ್ರಯತ್ನಿಸಬಾರದು?

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi