ಹರಿದಾಸ ಪರಂಪರೆ

ಧಾರ್ಮಿಕ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕೊಡುಗೆಗಳು

– ಅನಂತ ಮಾಧವ

ದಾಸ ಪರಂಪರೆಗೆ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ದ್ವೈತ ತತ್ತ್ವದ ಪ್ರತಿಪಾದನೆ, ಭಕ್ತಿಭಾವದ ಬೋಧನೆ, ಶ್ರೀಹರಿ ಪಾರಮ್ಯದ ನಿರೂಪಣೆ, ಸಂಪೂರ್ಣ ಶರಣಾಗತಿಯ ನಿವೇದನೆ – ಇವು ಇದರ ಪ್ರಮುಖ ಲಕ್ಷಣಗಳು.

15ನೇ ಶತಮಾನದಲ್ಲಿ ಅಧಿಕೃತವಾಗಿ ಆರಂಭಗೊಂಡ ದಾಸ ಚಳವಳಿ 18ನೇ ಶತಮಾನದವರೆಗೂ ತನ್ನ ವೈಭವ ಮೆರೆದಿತ್ತು. ಈ ಕಾಲಘಟ್ಟದಲ್ಲಿ ಅದು ನೀಡಿದ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಕೊಡುಗೆಗಳು ಅಪಾರ. ಹರಿದಾಸ ಚಳವಳಿಯ ಕೆಲವು ಮುಖ್ಯ ಅಂಶಗಳನ್ನು ಕಟ್ಟಿಕೊಡುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಕರ್ನಾಟಕದಲ್ಲಿ ಉಚ್ಛ್ರಾಯ ಹಂತ ತಲಪಿದ್ದ ಭಕ್ತಿ ಚಳವಳಿ ಆಧ್ಯಾತ್ಮಿಕ ಭಾರತದ ನಿರ್ಮಾಣಕ್ಕೆ ಕೊಟ್ಟ ಕೊಡುಗೆ ಮಹೋನ್ನತವಾದುದು. ಆಧ್ಯಾತ್ಮಿಕ ವಾತಾವರಣ ನಿರ್ಮಾಣದ ಜೊತೆಯಲ್ಲಿ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳು ಈ ಚಳವಳಿಯೊಂದಿಗೆ ತಳಕುಹಾಕಿಕೊಂಡು ಬಂದವು.

ಕರ್ನಾಟಕದ ರಾಜವಂಶಗಳಾದ ಕದಂಬ, ರಾಷ್ಟ್ರಕೂಟ, ಚಾಲುಕ್ಯ ಹಾಗೂ ವಿಜಯನಗರ ಸಾಮ್ರಾಜ್ಯಗಳು ತಮ್ಮ ನೆರೆ ಹೊರೆಯಷ್ಟೇ ಅಲ್ಲದೆ ಭಾರತದ ಇತರ ಭಾಗಗಳಲ್ಲೂ ತಮ್ಮ ಪ್ರಭಾವ ಬೀರಿದ್ದಂತೆ, ಧಾರ್ಮಿಕ ಕ್ಷೇತ್ರದಲ್ಲಿ ಯತೀವರೇಣ್ಯರಾದ ಶ್ರೀಮಧ್ವಾಚಾರ್ಯ, ವ್ಯಾಸರಾಜರೇ ಮೊದಲಾದವರು ದೂರದೂರದವರೆಗೂ ತಮ್ಮ ಪ್ರಭಾವವನ್ನು ಹೊಂದಿದ್ದರು.

ಇವರ ಮೂಲಕ ದೀಕ್ಷಿತರಾದ ಶಿಷ್ಯರು ರಾಷ್ಟ್ರದ ವಿವಿಧ ಭಾಗಗಳಲ್ಲಿ ಭಕ್ತಿ ಬೀಜಗಳನ್ನು ಬಿತ್ತಿದರು. ಈ ಯತಿವರ್ಯರು ಶ್ರೇಷ್ಠ ತಪಸ್ವಿಗಳಾಗಿದ್ದಂತೆಯೇ ಅಪ್ರತಿಮ ತತ್ತ್ವಜ್ಞಾನಿಗಳೂ ಸಾಹಿತ್ಯ ರಚನೆಕಾರರೂ ಆಗಿದ್ದರು. ಮುಂದೆ ಇವರ ಶಿಷ್ಯ ಪರಂಪರೆಯಲ್ಲಿ ಕೆಲವರು ಸಾಹಿತ್ಯ ರಚನೆಯನ್ನು ಮುಂದುವರಿಸಿಕೊಂಡು ಬಂದರು. ‘ಹರಿದಾಸ’ ದೀಕ್ಷೆ ಪಡೆದು ‘ದಾಸ’ ರಾದವರು ವೈದಿಕ ಸಾಹಿತ್ಯದ ಉನ್ನತ ಜೀವನ ಮೌಲ್ಯಗಳನ್ನು ಜನಸಾಮಾನ್ಯರ ಆಡು ಮಾತಿನಲ್ಲಿ ಸಮಾಜಕ್ಕೆ ತಲಪಿಸಿದರು.

ಹರಿದಾಸ ಚಳವಳಿ ಜಗತ್ತಿಗೆ ಅನೇಕ ಪ್ರತಿಭಾಶಾಲಿ ಕೃತಿಕಾರರನ್ನು ಪರಿಚಯಿಸಿತು. ಇವರೆಲ್ಲರ ಕೃತಿಗಳು ಕೇವಲ ಶಬ್ದ ಜೋಡಣೆಗಳ ಅಲಂಕಾರಗಳಲ್ಲ, ಅವು ಭಗವದ್ ವಿಜ್ಞಾನವನ್ನು ಬೋಧಿಸುವ, ಭಕ್ತಿಯನ್ನು ಬಿಂಬಿಸುವ, ಭಕ್ತಿಸೇವೆಗೆ ಪ್ರೇರೇಪಿಸುವ ಸತ್ತ್ವವನ್ನು ಆತಿ ಮುಖ್ಯವಾಗಿ ಹೊಂದಿದ್ದು, ಮಾನವ ಕುಲಕ್ಕೆ ಪಥದರ್ಶಕವೂ ಆಗಿದ್ದವೆನ್ನುವುದು ಗಮನಿಸಬೇಕಾದ ಅಂಶ.

ಹರಿದಾಸ ಪರಂಪರೆಯ ಉಗಮದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದರೆ ಭಕ್ತಿಗೆ ಸಂಬಂಧಿಸಿದ ಭಾಗವತ ಧರ್ಮ ಅನಾದಿಕಾಲದಿಂದಲೂ ಆಚರಣೆಯಲ್ಲಿತ್ತು. ಭಾರತದ ವಿವಿಧ ಭಾಗಗಳಲ್ಲಿ ಭಕ್ತರು ಭಗವಂತನನ್ನು ಕೊಂಡಾಡುತ್ತಾ ಹಾಡುವುದು, ನರ್ತಿಸುವುದು ರೂಢಿಯಲ್ಲಿತ್ತು.

ಕಾಲಕ್ರಮೇಣ ಭಾರತದಲ್ಲಿ ಪರಕೀಯರ ಆಕ್ರಮಣಗಳಿಂದಾಗಿ ಉಂಟಾದ ರಾಜಕೀಯ ಸ್ಥಿತ್ಯಂತರಗಳ ಪರಿಣಾಮ ಇಲ್ಲಿನ ಆಚಾರ ವಿಚಾರಗಳ ಮೇಲೂ ಪ್ರಭಾವ ಬೀರಿತು. ಅನ್ಯಧರ್ಮಗಳ ಆಗಮನ, ಬಲವಂತದ ಮತಾಂತರಗಳೇ ಮೊದಲಾದ ಕಾರಣಗಳಿಂದಾಗಿ ಆವರೆಗೆ ರೂಢಿಯಲ್ಲಿದ್ದ ಬಹುಮುಖ್ಯ ಆಚರಣೆಗಳು ತೆರೆಮರೆಗೆ ಸೇರತೊಡಗಿದವು. ಬಹುಶಃ ಭಗವಂತನ ಸ್ತುತಿಯಲ್ಲಿ ಕೀರ್ತಿಸುವ, ನರ್ತಿಸುವ ಭಾಗವತ ಧರ್ಮದ ಪದ್ಧತಿ ಅದೃಶ್ಯವಾಗತೊಡಗಿದ್ದು ಈ ಕಾರಣದಿಂದಲೇ.

ಕರ್ನಾಟಕದಲ್ಲಿ ಭಾಗವತ ಧರ್ಮ ಹಾಗೂ ದಾಸ ಪರಂಪರೆಯ ಮೊದಲ ಕುರುಹುಗಳು ನಮಗೆ ದೊರೆಯುವುದು ‘ಭಕ್ತವಿಜಯ’ ದಲ್ಲಿ, ಇದರಲ್ಲಿ ಅಚಲಾನಂದದಾಸ ಎಂಬ ನರಸಿಂಹ ಭಕ್ತರ ಉಲ್ಲೇಖವಿದೆ. ರಾಷ್ಟ್ರಕೂಟರ ಕಾಲದಲ್ಲಿ ಜೀವಿಸಿದ್ದ (9ನೇ ಶತಮಾನ) ಇವರು ಭಾರತದುದ್ದಗಲಕ್ಕೂ ಸಂಚರಿಸಿದ್ದರು.

ಮೂಲತಃ ಬೆಂಗಳೂರು ತಾಲೂಕಿನ ಹೈಗುಣಪುರದ ಅಚಲಾನಂದದಾಸರು ಬಹುಕಾಲ ನೆಲೆಸಿದ್ದು ತುರುವೇಕೆರೆಯಲ್ಲಿ. ಭಾಗವತಧರ್ಮದ ಅನುಷ್ಠಾನಕ್ಕೆ ಸೂಕ್ತ ಸ್ಥಳಗಳನ್ನು ಅರಸುತ್ತಾ ಸಂಚರಿಸುವುದರಲ್ಲೇ ಅವರು ತಮ್ಮ ಜೀವಿತದ ಬಹುಭಾಗವನ್ನು ಕಳೆದರು. ಇವರ ಶಿಷ್ಯರ ಬಗೆಗಾಗಲೀ ಇವರು ಅಧಿಕೃತವಾದ ದಾಸ ಪರಂಪರೆಗೆ ಸೇರಿದವರೆಂಬುದನ್ನು ದೃಢಪಡಿಸಲಾಗಲೀ ಇತರ ಯಾವುದೇ ಐತಿಹಾಸಿಕ ಆಧಾರಗಳಿಲ್ಲ.

ಈ ಉಲ್ಲೇಖದ ಹೊರತಾಗಿ ಕ್ರಿ.ಶ. 1275ರ ಶಿಲಾಶಾಸನಗಳು ದಾಸ ಪರಂಪರೆಯ ಸುಳಿವನ್ನು ಸ್ವಲ್ಪ ಮಟ್ಟಿಗೆ ಬಿಟ್ಟುಕೊಡುತ್ತವೆ. ಅಳಂದಿ ಹಾಗೂ ಪಂಢರಾಪುರದ ವಿಠಲನಾಥ ದೇಗುಲಗಳ ಈ ಶಾಸನಗಳು ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಭಕ್ತರನ್ನು ಅಗಾಧ ಪ್ರಮಾಣದಲ್ಲಿ ಸೆಳೆಯುತ್ತಿದ್ದುದನ್ನು ಸಾರುತ್ತವೆ.

ಈ ಮೇಲೆ ಹೇಳಲಾಗಿರುವ ಅಚಲಾನಂದ ದಾಸರು ಪಂಡರಾಪುರಕ್ಕೆ ಭೇಟಿ ನೀಡಿದ್ದಾಗಿ, ವಿಠ್ಠಲನ ದರ್ಶನದಿಂದ ಆನಂದೋನ್ಮತ್ತರಾಗಿ ತಮ್ಮ ಹಿಂದಿನ ಹೆಸರಾಗಿದ್ದ ನರಸಿಂಹದಾಸ ಎಂಬುದನ್ನು ಬದಲಿಸಿಕೊಂಡು ಆಚಲಾನಂದ ವಿಠ್ಠಲ ಎಂದು ಇರಿಸಿಕೊಂಡಿದ್ದಾಗಿ ಐತಿಹ್ಯವಿದೆ.

ಇದು ದಾಸ ಪರಂಪರೆ ಹಾಗೂ ಪಂಡರಾಪುರದ ವಿಠ್ಠಲನ ನಂಟಿಗೆ ಮೊದಲ ಕೊಂಡಿಯೆಂದು ಭಾವಿಸಬಹುದು. ಅನಂತರದ ಆರು ಶತಮಾನಗಳ ಕಾಲ ಗುಪ್ತಗಾಮಿನಿಯಾಗಿ ಹರಿದು ಶ್ರೀಪಾದರಾಜ ಹಾಗೂ ವ್ಯಾಸರಾಜರ ಜನ್ಮದೊಂದಿಗೆ ಅದು ಪುನರುಜ್ಜೀವನಗೊಂಡಿರಲಿಕ್ಕೂ ಸಾಕು.

ಅದಕ್ಕೆ ಮುನ್ನ 13ನೇ ಶತಮಾನದಲ್ಲಿ ಮಧ್ವಾಚಾರ್ಯರು ವೈಷ್ಣವ ತತ್ತ್ವವನ್ನು ದೇಶದ ಉದ್ದಗಲಕ್ಕೂ ವಿತರಿಸಿದ್ದರು. ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಇವರು ಭಕ್ತಿಯ ಪ್ರಾಮುಖ್ಯವನ್ನು ಉಚ್ಚ ಕಂಠದಲ್ಲಿ ಸಾರಿದರು. ಮುಸ್ಲಿಮ್ ಅರಸರ ಆಡಳಿತ ಪ್ರಭಾವ ಹಾಗೂ ಜನಸಾಮಾನ್ಯರ ಧರ್ಮವಿಮುಖತೆಯಿಂದ ಹದಗೆಡುತ್ತಿದ್ದ ಸಮಾಜವು ಮಧ್ವಾಚಾರ್ಯರ ಪ್ರತಿಪಾದನೆಯಿಂದಾಗಿ ಮತ್ತೆ ತಹಬಂದಿಗೆ ಬರತೊಡಗಿತು.

ಭಕ್ತಿತತ್ತ್ವಗಳ ರೂಢಿ ಹಾಗೂ ಆಚರಣೆಗಳಿಂದಾಗಿ ಭಗವಚ್ಚಿಂತನೆಯತ್ತ ಮುಖ ಮಾಡುವಂತಾಯಿತು. ಹೀಗೆ ಶ್ರೀಮಧ್ವಾಚಾರ್ಯರು ಹಾಕಿಕೊಟ್ಟ ಭೂಮಿಕೆ ಶ್ರೀಪಾದರಾಜರ ಕಾಲದಲ್ಲಿ ಭಕ್ತಿ ಚಳವಳಿಯ ಬೆಳೆ ಹುಲುಸಾಗಿ ಬೆಳೆಯಲು ಪೂರಕವಾಯಿತು. ಮಧ್ವಾಚಾರ್ಯರ ಶಿಷ್ಯರು ಹಾಗೂ ಅನುಯಾಯಿಗಳು ಪ್ರಜ್ಞಾಪೂರ್ವಕ ಭಕ್ತಿಯ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಅದನ್ನು ಸಾಮಾನ್ಯ ಜನಸಮೂಹಕ್ಕೆ ತಲಪಿಸುವ ಸಲುವಾಗಿ ಹಲವಾರು ‘ದೇವರನಾಮ’ಗಳನ್ನು ರಚಿಸಿದರು. ಮಧುರವೂ ಅರ್ಥಗರ್ಭಿತವೂ ಆಗಿರುತ್ತಿದ್ದ ಈ ಭಕ್ತಿಗೀತೆಗಳು ಅಲ್ಪಸಮಯದಲ್ಲಿಯೇ ಜನರನ್ನು ಆಕರ್ಷಿಸಲು, ಭಗವಂತನ ಚಿಂತನೆಗೆ ತೊಡಗಿಸಲು ಯಶಸ್ವಿಯಾದವು.

ಒಂದು ದೃಷ್ಟಿಯಿಂದ ನೋಡಿದರೆ, ಸ್ವತಃ ಮಧ್ವಾಚಾರ್ಯರೇ ದಾಸ ಸಾಹಿತ್ಯದ ಮೂಲಪುರುಷರೆನ್ನಬಹುದು. ಸಂಸ್ಕೃತದಲ್ಲಿ ಅವರು ರಚಿಸಿರುವ ಮನೋಹಾರಿಯಾದ ‘ ದ್ವಾದಶಸ್ತೋತ್ರ’ ವೆಂಬ ಭಕ್ತಿಗೀತೆ ಇದಕ್ಕೆ ನಿದರ್ಶನ. ಅವರ ನೇರ ಶಿಷ್ಯರಾದ ಶ್ರೀನರಸಿಂಹತೀರ್ಥರು ಅಧಿಕೃತವಾಗಿ ಹರಿದಾಸ ಚಳವಳಿ ಹಾಗೂ ಕನ್ನಡ ದಾಸ ಸಾಹಿತ್ಯದ ಪ್ರಥಮ ವಕ್ತಾರರು.

ಶ್ರೀ ನರಸಿಂಹ ತೀರ್ಥರು ಕನ್ನಡದಲ್ಲಿಯೇ ಕೆಲವು ಗೀತೆಗಳನ್ನು ರಚಿಸಿರುವರು. ಆದರೂ ಕೃತಿಗಳ ಸಂಖ್ಯೆ ಹಾಗೂ ಪ್ರೇರಣೆಯ ದೃಷ್ಟಿಯಿಂದ ಶ್ರೀಶ್ರೀಪಾದರಾಜರನ್ನು ‘ಹರಿದಾಸ ಪಿತಾಮಹ’ ಎನ್ನಲಾಗುತ್ತದೆ. ಮಾಧ್ವ ಸಿದ್ಧಾಂತ ಹಾಗೂ ಉನ್ನತ ವೈದಿಕ ಬೋಧನೆಗಳನ್ನು ಸರಳ ಕನ್ನಡದಲ್ಲಿ ಮಧುರ ಗೀತರೂಪದಲ್ಲಿ ರಚಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಮೊದಲ ಬಾರಿ ಇರಿಸಿದವರು ಶ್ರೀಪಾದರಾಜರು.

ಶ್ರೀಪಾದರಾಜರ ಶಿಷ್ಯರಾದ ಶ್ರೀವ್ಯಾಸರಾಜರು ಹರಿದಾಸ ಚಳವಳಿಗೆ ನೀಡಿದ ಕೊಡುಗೆ ಅದ್ವಿತೀಯವಾದುದು. ಹಲವು ಶಿಷ್ಯರಿಗೆ ದಾಸ ದೀಕ್ಷೆ ನೀಡಿದ, ಚಳವಳಿಯನ್ನು ಜನಪ್ರಿಯಗೊಳಿಸಿದ ಶ್ರೇಯ ಇವರಿಗೆ ಸಲ್ಲುತ್ತದೆ.

ಹರಿದಾಸರಲ್ಲೆಲ್ಲ ಅತ್ಯಂತ ಪ್ರಖ್ಯಾತರಾದ ಪುರಂದರದಾಸ ಹಾಗೂ ಕನಕದಾಸರು ಶ್ರೀವ್ಯಾಸರಾಜರ ನೇರ ಶಿಷ್ಯರು, ಅವರಿಂದ ದೀಕ್ಷೆ ಪಡೆದವರು. 15,16ನೇ ಶತಮಾನದಲ್ಲಿ ದಾಸಪರಂಪರೆಯ ಪ್ರಭಾವವನ್ನು ವ್ಯಾಪಕಗೊಳಿಸುವಲ್ಲಿ ಇವರು ನಿರ್ವಹಿಸಿದ ಪಾತ್ರ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು.

ಶ್ರೀಪಾದರಾಜರು ಹಾಗೂ ವ್ಯಾಸರಾಜರಷ್ಟೇ ಪ್ರಾಮುಖ್ಯ ಹೊಂದಿದ್ದು, ಇವರಿಬ್ಬರೊಂದಿಗೆ ‘ಯತಿತ್ರಯ’ರಲ್ಲಿ ಒಬ್ಬರಾಗಿ ಗುರುತಿಸಲ್ಪಡುವವರು ಶ್ರೀವಾದಿರಾಜ ತೀರ್ಥರು. ಶ್ರೀವ್ಯಾಸತೀರ್ಥರ ಸಮಕಾಲೀನವರೂ, ಶಿಷ್ಯರೂ ಆಗಿದ್ದ ಇವರು ಹರಿದಾಸ ಚಳವಳಿಯ ಮತ್ತೊಂದು ಆಧಾರಸ್ತಂಭ.

ಶ್ರೀ ಶ್ರೀಪಾದರಾಜರು ದಾಸ ಪರಂಪರೆಯ ಪಿತಾಮಹರಾದರೆ, ಶ್ರೀವಾದಿರಾಜರು ದಾಸ ಸಾಹಿತ್ಯವನ್ನು ತಮ್ಮ ಪಾಂಡಿತ್ಯಪೂರ್ಣ ಕೊಡುಗೆಗಳಿಂದ ಮುಂಚೂಣಿಯಲ್ಲಿ ನಿಲ್ಲಿಸಿದ ಚಾಲಕ ಶಕ್ತಿಯಾಗಿದ್ದರು. ಶ್ರೀ ವ್ಯಾಸರಾಜರು ತಮ್ಮ ಅನರ್ಘ್ಯ ಶಿಷ್ಯರತ್ನರ ಕಾರಣದಿಂದಲೇ ಜನಪ್ರಿಯರಾದರು.

ಹದಿನೈದು – ಹದಿನಾರನೇ ಶತಮಾನದಲ್ಲಿ ಉಚ್ಛ್ರಾಯದಲ್ಲಿದ್ದ ದಾಸ ಸಾಹಿತ್ಯ ಮತ್ತು ಪರಂಪರೆ ಪುನಃ ತನ್ನ ವೈಭವದ ದಿನಗಳನ್ನು ತಲಪಿದ್ದು 17,18ನೇ ಶತಮಾನಗಳಲ್ಲಿ. ಈ ಕಾಲಘಟ್ಟದಲ್ಲಿ ದಾಸ ಚಳವಳಿಯು ರಾಯಚೂರು ಮತ್ತು ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಬಿರುಸಾಗಿತ್ತು. ಈ ಅವಧಿಯ ಪ್ರಮುಖ ದಾಸರಲ್ಲಿ ಶ್ರೀವಿಜಯ ದಾಸ, ಶ್ರೀಗೋಪಾಲ ದಾಸ, ಶ್ರೀಜಗನ್ನಾಥ ದಾಸ, ಶ್ರೀಪ್ರಸನ್ನವೇಂಕಟ ದಾಸ, ಶ್ರೀಪ್ರಾಣೇಶ ದಾಸ, ಶ್ರೀಮೋಹನ ದಾಸ ಮೊದಲಾದವರನ್ನು ಹೆಸರಿಸಬಹುದು.

ಹರಿದಾಸ ಪರಂಪರೆ ಅಧ್ಯಯನಗಳು ಗುರುತಿಸಿರುವಂತೆ ಹರಿದಾಸ ಚಳವಳಿಯ ಇತಿಹಾಸವನ್ನು 4 ಹಂತಗಳಲ್ಲಿ ವಿಭಾಗಿಸಬಹುದು. ಅದು ಈ ರೀತಿ ಇದೆ:

ಮೊದಲ ಹಂತ : ಶ್ರೀ ನರಹರಿ ತೀರ್ಥರಿಂದ ಶ್ರೀ ಜಯ ತೀರ್ಥರವರೆಗೆ

ಎರಡನೇ ಹಂತ : ಶ್ರೀಪಾದ ರಾಜರಿಂದ ಶ್ರೀಕನಕ ದಾಸರವರೆಗೆ

ಮೂರನೇ ಹಂತ: ಶ್ರೀ ವಿಜಯ ದಾಸರು ಮತ್ತು ಅವರ ಶಿಷ್ಯವರ್ಗ

ನಾಲ್ಕನೇ ಹಂತ : ಶ್ರೀ ಪ್ರಾಣೇಶ ದಾಸರಿಂದ ಇತ್ತೀಚಿನ ಪೀಳಿಗೆವರೆಗೆ

ಹೀಗೆ ಶತಮಾನಗಳ ಕಾಲ ಸಾಗಿ ಬಂದ ದಾಸಚಳವಳಿ ಕರ್ನಾಟಕದ ಆಧ್ಯಾತ್ಮಿಕ ಪರಿಸರ ಮಾತ್ರವಲ್ಲ ಸಾಮಾಜಿಕ ಹಾಗೂ ರಾಜಕೀಯ ಪರಿಸರಗಳ ಮೇಲೆಯೂ ಪ್ರಭಾವ ಬೀರಿತ್ತು. ನೆರೆರಾಜ್ಯಗಳೂ ಕೂಡ ಇದರ ಪ್ರಭಾವಕ್ಕೊಳಗಾಗಿದ್ದವು. ಈ ನಿಟ್ಟಿನಲ್ಲಿ ದಾಸ ಚಳವಳಿಯು ಕರ್ನಾಟಕದ ಇತಿಹಾಸಕ್ಕೆ ಗರಿ ಮೂಡಿಸಿದ ಮಹತ್ತ್ವದ ಸಂಗತಿಯೆನ್ನಲು ಅಡ್ಡಿಯಿಲ್ಲ.

ಚಳವಳಿಯ ರಾಜಕೀಯ ಪ್ರಭಾವಕ್ಕೆ ಕೆಲವು ನಿದರ್ಶನಗಳನ್ನು ನೀಡಬಹುದಾದರೆ: ವಿಜಯನಗರದ ನರಸಿಂಹ ನಾಯಕರು ಪ್ರತಿನಿತ್ಯ ವ್ಯಾಸರಾಜರ ದರ್ಶನ ಪಡೆದು ರಾಜ್ಯಾಡಳಿತದ ಬಗ್ಗೆ ಸಲಹೆ ಕೇಳುತ್ತಿದ್ದುದು, ವ್ಯಾಸರಾಜರು ಧರ್ಮ ಹಾಗೂ ವಿದ್ಯಾಪ್ರಸಾರಕ್ಕೆ ಅಗ್ರಹಾರಗಳನ್ನು ನಿರ್ಮಿಸಿದುದು, ಪೋರ್ಚುಗೀಸ್ ವ್ಯಾಪಾರಿಗಳು, ರಾಯಭಾರಿಗಳು ವ್ಯಾಸರಾಜರಿಗೆ ಕಾಣಿಕೆಗಳನ್ನು ಅರ್ಪಿಸುತ್ತಿದ್ದುದು, ಬಿಜಾಪುರ ಹಾಗೂ ದಿಲ್ಲಿ ಸುಲ್ತಾನರು ಅವರಿಗೆ ಹಸಿರು ಛತ್ರಿ ಗೌರವ ಸಲ್ಲಿಸಿದ್ದು – ಮೊದಲಾದ ಸಂಗತಿಗಳಿವೆ.

ಶ್ರೀವ್ಯಾಸರಾಜರು ಸುಮಾರು 25 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯಕ್ಕೆ ರಾಜಗುರುಗಳೂ, ಅಲ್ಲಿಯ ವಿಶ್ವಪಾವನ ವಿದ್ಯಾಪೀಠದ ಕುಲಪತಿಗಳೂ ಆಗಿದ್ದರು. ಮುಂದೆಯೂ ರಾಜ್ಯದ ವಿವಿಧ ಆಳರಸರು ದಾಸ ಚಳವಳಿಯ ನೇತಾರರನ್ನು, ಹರಿದಾಸರನ್ನು ಸತ್ಕರಿಸಿದ; ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದ ಐತಿಹ್ಯವಿದೆ.

ಹರಿದಾಸ ಸಾಹಿತ್ಯ

ದಾಸ ಸಾಹಿತ್ಯವನ್ನು ರಚನೆಗಳ ಆಶಯದ ಆಧಾರದ ಮೇಲೆ ಮೂರು ಗುಂಪು ಮಾಡಬಹುದು; ಸಾಮಾನ್ಯ, ವಿಶೇಷ ಹಾಗೂ ಪಾಂಥೀಯ. ಆರಂಭ ಕಾಲದ ಮುಖ್ಯ ದಾಸರುಗಳಾದ ಶ್ರೀ ಶ್ರೀಪಾದರಾಜರು, ಶ್ರೀಪುರಂದರ ದಾಸರು, ಹಾಗೂ ಶ್ರೀ ಕನಕ ದಾಸರು ಎಲ್ಲವರ್ಗ ಸಮೂಹಗಳಿಗೆ ತಲಪುವಂತಹ ಸಾಹಿತ್ಯವನ್ನು ರಚಿಸಿದರು.

ಇದು ಮೊದಲನೇ ಗುಂಪು. ಶ್ರೀವ್ಯಾಸರಾಜ ತೀರ್ಥ, ಶ್ರೀಗೋಪಾಲ ದಾಸ ಮತ್ತಿತರರು ನಿರ್ದಿಷ್ಟವಾಗಿ ಬ್ರಾಹ್ಮಣ ಸಮುದಾಯಕ್ಕಾಗಿ ಕೀರ್ತನೆಗಳನ್ನು ರಚಿಸಿದರು. ಇದನ್ನು ಎರಡನೇ ಗುಂಪಿಗೆ ಸೇರಿಸಲಾಗುವುದು. ಮೂರನೆಯದಾಗಿ, ಶ್ರೀವಿಜಯದಾಸ, ಶ್ರೀಜಗನ್ನಾಥದಾಸರೇ ಮೊದಲಾದವರು ಮಾಧ್ವಸಂಪ್ರದಾಯ ಹಾಗೂ ತಾತ್ತ್ವಿಕ ಅಂಶಗಳನ್ನೊಳಗೊಂಡ ಗೀತೆಗಳನ್ನೇ ಹೆಚ್ಚಾಗಿ ರಚಿಸಿದರು.

ಈ ವರ್ಗೀಕರಣಗಳೇನೇ ಇದ್ದರೂ ಒಟ್ಟಾರೆಯಾಗಿ ದಾಸ ಚಳವಳಿಯ, ದಾಸ ಸಾಹಿತ್ಯದ ಉದ್ದೇಶ ಡಂಭಾಚಾರರಹಿತವಾದ ಧಾರ್ಮಿಕತೆ, ನೈಷ್ಕರ್ಮ್ಯ ತತ್ತ್ವ ಹಾಗೂ ಸಂಪೂರ್ಣ ಶರಣಾಗತಿಗಳ ಪ್ರತಿಪಾದನೆಯೇ ಆಗಿತ್ತು. ಈ ಹರಿದಾಸರುಗಳು ತಮ್ಮ ಕೀರ್ತನೆಗಳ ಮೂಲಕ ಗೊಡ್ಡು ಆಚಾರಗಳನ್ನು ಹೀಗಳೆಯುತ್ತ ಭಗವಂತನಲ್ಲಿ ನಿಷ್ಕಲ್ಮಷ ಭಕ್ತಿ ಹೊಂದಿರುವುದು ಹೇಗೆಂಬುದನ್ನು ತೋರಿಸಿಕೊಟ್ಟರು. ಜನಸಾಮಾನ್ಯರೆದುರು ನೈತಿಕ ಜೀವನದ ಮಾದರಿಯನ್ನು ಹಾಕಿಕೊಟ್ಟರು.

ಹರಿದಾಸರುಗಳು ಅತ್ಯಂತ ಸರಳ ಮಾತುಗಳಲ್ಲಿ ಭಗವತ್ ತತ್ತ್ವಗಳನ್ನು ಜನರಿಗೆ ತಲಪಿಸಿದರು. ಭಗವಂತನ ಕರುಣೆ, ಸರ್ವವ್ಯಾಪಕತೆ, ವೈಭವ, ಪಾರಮ್ಯಗಳನ್ನು ಸಾರುತ್ತಾ ಶರಣಾಗತರಿಗೆ ಭಗವಂತನ ಅಭಯ ಹಸ್ತ ದೊರೆಯುವುದೆಂಬ ನಂಬಿಕೆಯನ್ನು ಜನರಲ್ಲಿ ಬಿತ್ತಿದರು. ಅವರು ಬಳಸುತ್ತಿದ್ದ ಭಾಷೆಯ ಮಾಧುರ್ಯ ಎಲ್ಲ ವರ್ಗದವರನ್ನೂ ಸುಲಭವಾಗಿ ಆಕರ್ಷಿಸುತ್ತಿತ್ತು.

ವಿಶೇಷವಾಗಿ ಮಹಿಳೆಯರು ಹರಿದಾಸ ಕೀರ್ತನೆಗಳ ಗೇಯತೆಗೆ ಮಾರುಹೋದರು. ದೇವರನಾಮಗಳನ್ನು ಹಾಡಿಕೊಳ್ಳುವ, ಅದನ್ನು ಪೂಜೆಯ ಒಂದು ಭಾಗವಾಗಿ ಮಾಡಿಕೊಳ್ಳುವ ಪರಿಪಾಠ ಆರಂಭವಾಯಿತು. ಈ ಕೀರ್ತನೆಗಳು ತಲೆಮಾರುಗಳುದ್ದಕ್ಕೆ ಹರಿದುಬಂದುದರಲ್ಲಿ ಮಹಿಳೆಯರ ಸಿಂಹಪಾಲನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಹರಿದಾಸರುಗಳು ಸಮಾಜದ ಕಟುವಾಸ್ತವಕ್ಕೆ ಕನ್ನಡಿ ಹಿಡಿದಂತೆ ಗೀತೆಗಳನ್ನು ರಚಿಸಿದರು. ಅದರ ಕೃತಕತೆ, ಪೊಳ್ಳುತನ ಮತ್ತು ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತ, ಶುದ್ಧ ಭಕ್ತಿಯ ಅವಲಂಬನೆಯಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೆಂದು ಪ್ರತಿಪಾದಿಸಿದರು. ತಮ್ಮ ಮೊನಚಾದ ಚುರುಕು ಗೀತೆಗಳಿಂದ ಅವರು ಪ್ರಭುತ್ವವನ್ನೂ ಟೀಕಿಸದೆ ಬಿಡಲಿಲ್ಲ.

ಆದರೆ ಇವೆಲ್ಲವೂ ಧಾರ್ಮಿಕ ಜೀವನದ ಚೌಕಟ್ಟಿನಲ್ಲಿ ಒಳಗೊಳ್ಳುವಂತೆ, ಪ್ರತಿಯೊಂದಕ್ಕೂ ಹರಿಭಕ್ತಿಯೇ ದಿವ್ಯೌಷಧದಂತೆ ಪೋಣಿಸುವಲ್ಲಿನ ಅವರ ಜಾಣ್ಮೆ ಮತ್ತು ಸಾಹಿತ್ಯ- ಭಾಷೆಗಳ ಮೇಲಿನ ಹಿಡಿತ ಎಂತಹ ವಿದ್ವಾಂಸರೂ ತಲೆದೂಗಬೇಕಾದಂತಹದು.

ದ್ವೈತ ಸಿದ್ಧಾಂತದ ಆದರ್ಶಗಳನ್ನು ಜನಪ್ರಿಯ ಧಾಟಿಯಲ್ಲಿ ಆಕರ್ಷಕವಾಗಿ ಮನದಟ್ಟು ಮಾಡಿಸಿದವರು ಹರಿದಾಸರು. ಈ ಒಂದು ಪ್ರಯತ್ನವೇ ಮಧ್ವ ಚಿಂತನೆಯು ರಾಷ್ಟ್ರದ ಚಾಲಕಶಕ್ತಿಯಾಗಿದ್ದು, ಮಾನವ ಸಮಾಜವನ್ನು ಒಳಿತಿನತ್ತ ಕೊಂಡೊಯ್ಯುವ ಕ್ರಾಂತಿಕಾರಕ ಪಥವಾಗಿತ್ತೆನ್ನುವುದನ್ನು ಸಾರುತ್ತದೆ. ಮಧ್ವ ಚಿಂತನೆಯ ತಳಹದಿಯಿಂದಲೇ ಎದ್ದು ನಿಂತ ದಾಸ ಸಾಹಿತ್ಯದ ಸಾರ್ವಕಾಲಿಕತೆ, ದ್ವೈತ ಸಿದ್ಧಾಂತದ ಸಾರ್ವಕಾಲಿಕತೆಯನ್ನೂ ಸಾರುತ್ತದೆ.

ಸಂಗೀತ

ಶ್ರೀಮಧ್ವಾಚಾರ್ಯರು ಹಾಗೂ ಅವರ ದ್ವೈತ ತತ್ತ್ವದ ಅನುಯಾಯಿಗಳು ಭಗವಂತನನ್ನು ತಲಪಲು ಭಕ್ತಿಯ ʼಕೀರ್ತನ’ ಪ್ರಕಾರವನ್ನು ಅತ್ಯಂತ ಪರಿಣಾಮಕಾರಿಯೆಂದು ಆರಿಸಿಕೊಂಡಿದ್ದರು. ಹರಿದಾಸರ ಮಟ್ಟಿಗೆ ಹೇಳುವುದಾದರೆ ಅವರಿಗೆ ಸಂಗೀತ ಮತ್ತು ಸಾಹಿತ್ಯಗಳು ಒ೦ದರ ಜೊತೆಗೊಂದರಂತೆ ನಾಣ್ಯದ ಎರಡು ಮುಖಗಳಂತೆ ಇರುವ ಸಂಗತಿಯಾಗಿತ್ತು.

ವೈದಿಕ ಸಾಹಿತ್ಯದಲ್ಲಿ ಹೇಳಲಾಗಿರುವ ‘ ಕೃತಯುಗದಲ್ಲಿ ಧ್ಯಾನ, ತ್ರೇತಾಯುಗದಲ್ಲಿ ಯಜ್ಞ, ದ್ವಾಪರದಲ್ಲಿ ಪೂಜೆ, ಕಲಿಯುಗದಲ್ಲಿ ಕೀರ್ತನೆ’ ಎಂಬ ಮಾತನ್ನೇ ಶ್ರೀಪಾದರಾಜರು ತಮ್ಮ ಉಗಾಭೋಗ ಒಂದರಲ್ಲಿ ಪುನರುಚ್ಚರಿಸಿರುವರು.

ಅದರಂತೆ, ಕೀರ್ತನದ ಮೂಲಕವೇ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದು ಹರಿದಾಸ ಪರಂಪರೆಯ ಮುಖ್ಯ ಲಕ್ಷಣ. ಸಾಮಗಾನ ಪ್ರಿಯನಾದ ಭಗವಂತನನ್ನು ಒಲಿಸಿಕೊಳ್ಳಲು ಸಂಗೀತ ಸಾಹಿತ್ಯವನ್ನು ಅವರು ಸಾಧನದಂತೆ ಬಳಸಿದರು. ಸ್ವತಃ ಭಗವಂತನೇ ‘ಮದ್‌ಭಕ್ತ ಯತ್ರ ಗಾಯಂತಿ ತತ್ರ ತಿಷ್ಠಾಮಿ’ ಎಂದಿರುವನು.

ಕೀರ್ತನೆಗಳನ್ನು ರಚಿಸಿದ ಹರಿದಾಸರು ಸಹಜವಾಗಿಯೇ ತಾವು ನೀಡಬಹುದಾದ ಅತ್ಯುತ್ತಮ ಬಗೆಯಲ್ಲಿ ಅವನ್ನು ಹರಿಗೆ ಅರ್ಪಿಸಲು ಮಧುರವಾದ ಸಂಗೀತವನ್ನು ನೀಡಿರುವರು. ಜಗತ್ತಿನಲ್ಲಿ ಮೋಕ್ಷ  ಪ್ರಾಪ್ತಿಗೆ ಕೀರ್ತನ ಭಕ್ತಿಯನ್ನೇ ಅಂದರೆ ಸಂಗೀತವನ್ನೇ ಮಾಧ್ಯಮವನ್ನಾಗಿ ಮಾಡಿಕೊಂಡವರಲ್ಲಿ ಹರಿದಾಸರೇ ಪ್ರಪ್ರಥಮರು ಎನ್ನಲಾಗಿದೆ.

ಶ್ರೀಪುರಂದರದಾಸರು ತಾರತಮ್ಯ ಪದ್ಧತಿ ಎಂದು ವೇದಗಳಲ್ಲಿ ಗುರುತಿಸಲಾಗಿರುವ ಭಜನ ಪದ್ಧತಿಯನ್ನು ಅನುಸರಿಸಿ ಕೀರ್ತನೆಗಳನ್ನು ರಚಿಸಿದರು. ದೇವತಾರತಮ್ಯದಲ್ಲಿ ದೇವತೆಗಳ ಅನುಕ್ರಮಣಿಕೆಯು ಹರಿಸರ್ವೋತ್ತಮನಿಂದ ಮೊದಲುಗೊಂಡು ಲಕ್ಷ್ಮಿ, ಬ್ರಹ್ಮ, ವಾಯು ಮುಖ್ಯಪ್ರಾಣ, ಸರಸ್ವತಿ, ಗಾಯತ್ರಿ, ಭಾರತಿ (ವಾಯುಪತ್ನಿ), ಗರುಡ, ಶೇಷ, ಶಿವ, ಪಾರ್ವತಿ, ವಿನಾಯಕನವರೆಗೆ ಇರುತ್ತದೆ.

ಭಜನೆಯು ಪದ್ಧತಿಯ ಪ್ರಕಾರ ಮಂಗಳಾಚರಣೆಯೊಂದಿಗೆ ಆರಂಭಗೊಂಡು, ದೇವತಾರತಮ್ಯ, ದರ್ಶನ ಕುತೂಹಲ, ಆವಾಹನ, ಆಗಮನ, ಕರ್ಣಯಾಚನೆ, ಸ್ತೋತ್ರ, ದ್ವೈತಭಕ್ತಿಪ್ರಮೇಯ, ಶ್ರೀಕೃಷ್ಣಲೀಲಾ ಸೇವೆ, ನೀತಿ ಬೋಧನೆ, ದೇವರನಾಮಗಳು, ಸುಳಾದಿಗಳು, ಉಗಾಭೋಗಗಳು, ಮಂಗಳ, ಅಂತಿಮವಾಗಿ ಹರಿವಾಣ ಸೇವೆಯಲ್ಲಿ ಮುಕ್ತಾಯಗೊಳ್ಳುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi