ನಾವು ಪ್ರವಾಸ ಮಾಡುತ್ತಾ ಹೋದಂತೆ, ಅನೇಕ ಪ್ರಾಚೀನ, ಅಪರೂಪದ ದೇವಾಲಯಗಳು ಬೆಳಕಿಗೆ ಬರುತ್ತವೆ. ನಾವು ನೋಡಹೋಗುವ ಪ್ರಸಿದ್ಧ ಸ್ಥಳಗಳ ಬಳಿಯೇ ಎಷ್ಟೋ ದೇವಾಲಯಗಳು ಅಪ್ರಸಿದ್ಧವಾಗಿ ಅಡಗಿಕೊಂಡಿರುತ್ತವೆ! ಅಂಥ ಒಂದು ದೇವಾಲಯ, ಶ್ರೀ ನದೀ ನರಸಿಂಹ ದೇವಾಲಯ. ಇದು ಬೆಂಗಳೂರು-ಮೈಸೂರು ಹೆದ್ದಾರಿಯ ಬಳಯಿರುವ ಚೆನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರಿನ ಬಳಿಯ ಚಿಕ್ಕಮಳೂರಿನಲ್ಲಿದೆ. ದೊಡ್ಡಮಳೂರಿನ ಸುಪ್ರಸಿದ್ಧ ಅಪ್ರಮೇಯಸ್ವಾಮಿ ದೇವಾಲಯದ ಎದುರು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ. ದೂರ ಹೋದರೆ, ಹೊಲಗಳ ಮಧ್ಯೆ ಈ ದೇವಾಲಯ ಸಿಗುತ್ತದೆ. ಈ ಜಾಗವನ್ನು ಚಿಕ್ಕಮಳೂರು ಎನ್ನುತ್ತಾರೆ.

ಹಿಂದೆ ಈ ದೇವಾಲಯದ ಎದುರು ನಿರ್ಮಲಾ ಎಂಬ ನದಿ ಹರಿಯುತ್ತಿತ್ತು ಎಂದು ಹೇಳುತ್ತಾರೆ. ಕಣ್ವ ಮಹರ್ಷಿಗಳು ಇಲ್ಲಿ ಬಂದು ತಪಸ್ಸು ಮಾಡಿದುದರಿಂದ ಈ ನದಿಗೆ ಕಣ್ವನದಿ ಎಂದು ಹೆಸರಾಯಿತು. ಕಣ್ವ ಮಹರ್ಷಿಗಳೇ ಇಲ್ಲಿ ಶ್ರೀ ಲಕ್ಷ್ಮೀ ನರಸಿಂಹ ವಿಗ್ರಹವನ್ನು ಸ್ಥಾಪಿಸಿದರೆಂದು ಹೇಳುತ್ತಾರೆ. ನದಿಯ ಪ್ರವಾಹ ಇಲ್ಲಿನ ಹೊಲಗಳಿಗೆ ಹಾನಿ ಮಾಡುತ್ತಿದ್ದು, ಅದನ್ನು ತಪ್ಪಿಸಲು ಅವರು ವಿಗ್ರಹ ಸ್ಥಾಪಿಸಿದರೆಂದು ಹೇಳುತ್ತಾರೆ. ಮೈಸೂರು ಮಹಾರಾಜರು ದೇವಾಲಯಕ್ಕಾಗಿ ಸುತ್ತಲಿನ ಜಾಗವನ್ನು ಬಿಟ್ಟುಕೊಟ್ಟರು. ಹೀಗೆ ನದಿಯ ದಂಡೆಯ ಮೇಲಿದ್ದುದರಿಂದ ಈ ದೇವಾಲಯ, ನದೀ ನರಸಿಂಹ ದೇವಾಲಯವೆಂದು ಹೆಸರಾಯಿತು. ಈಗ ಈ ನದಿ, ಈ ಭಾಗದಲ್ಲಿಲ್ಲ. ಹಾಗಾಗಿ ಇಲ್ಲಿ ನದಿ ಕಾಣುವುದಿಲ್ಲ. ಇದು ಸುಮಾರು 1200-1500 ವರ್ಷಗಳಷ್ಟು ಹಳೆಯದಾಗಿದೆ. ಆದರೆ ದುರಸ್ಥಿಪಡಿಸಿರುವುದರಿಂದ, ಇದು ಅಷ್ಟು ಹಳೆಯದಾಗಿ ಕಾಣುವುದಿಲ್ಲ. ದೇವಾಲಯವು ಬಹಳ ಪುಟ್ಟದಾದುದೂ ಆಗಿದೆ. ಗರ್ಭಗುಡಿಯಲ್ಲಿ ಲಕ್ಷ್ಮಿದೇವಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವ ಶ್ರೀ ನರಸಿಂಹದೇವರ ಸುಂದರವಾದ ವಿಗ್ರಹವಿದೆ. ಇದು ಬಹಳ ಶಕ್ತಿಯುತವಾದ ವಿಗ್ರಹವೆಂದು ಹೇಳುತ್ತಾರೆ. ಹೊರಗೆ, ಶ್ರೀ ಲಕ್ಷ್ಮಿ ನರಸಿಂಹರ ಸುಂದರ ಕೆತ್ತನೆಗಳಿವೆ.

ಇಲ್ಲಿ ಒಂದು ವಿಶೇಷ ನಂಬಿಕೆಯಿದೆ. ಇಲ್ಲಿನ ಫಲಕಗಳಲ್ಲಿ ಮುದ್ರಿಸಿರುವ, `ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯೋಃ ಮೃತ್ಯುಂ ನಮಾಮ್ಯಹಮ್’ ಎಂಬ ಮೂಲ ಮಂತ್ರವನ್ನು ಜಪಿಸುತ್ತಾ ಒಂದು ತೆಂಗಿನಕಾಯಿಯನ್ನೂ ನಿಂಬೆಹಣ್ಣನ್ನೂ ಇಟ್ಟುಕೊಂಡು ನಲವತ್ತೆಂಟು ಬಾರಿ ದೇವಾಲಯವನ್ನು ಪ್ರದಕ್ಷಿಣೆ ಮಾಡಿ ತೆಂಗಿನಕಾಯನ್ನು ಒಂದು ಕಡೆ ಕಟ್ಟಿ ನಿಂಬೆಹಣ್ಣನ್ನು ದೇವರಿಗೆ ಅರ್ಪಿಸುವುದರಿಂದ ಯಾವುದೇ ಕೋರಿಕೆಗಳು ಬೇಗನೆ ನೆರವೇರುತ್ತವೆಯೆಂಬುದೇ ಆ ನಂಬಿಕೆ. ಸಾಮಾನ್ಯವಾಗಿ, ಮದುವೆ, ಸಂತಾನ, ಅಭಿವೃದ್ಧಿ, ಉದ್ಯೋಗ, ಮೊದಲಾದ ಅಪೇಕ್ಷೆಗಳನ್ನಿಟ್ಟುಕೊಂಡು ಜನರು ಈ ಆಚರಣೆ ನಡೆಸುತ್ತಾರೆ.
ಹೀಗೆ ಈ ದೇವಾಲಯ ನೋಡಬೇಕಾದುದಾಗಿದೆ. ಬೆಂಗಳೂರಿನಿಂದ ಸುಮಾರು 65 ಕಿ.ಮೀ. ದೂರದಲ್ಲಿದೆ ಇದು. ಚೆನ್ನಪಟ್ಟಣಕ್ಕೆ ಬಸ್ಸುಗಳಿದ್ದು ದೊಡ್ಡಮಳೂರಿನಲ್ಲಿಳಿದುಕೊಂಡು ಇಲ್ಲಿಗೆ ಹೋಗಬಹುದು. ಆದರೆ ಸ್ವಂತ ಇಲ್ಲವೇ ಖಾಸಗಿ ವಾಹನದಲ್ಲಿ ಹೋಗುವುದು ಒಳ್ಳೆಯದು. ಬೆಂಗಳೂರು-ಮೈಸೂರು ಹೆದ್ದಾರಿಯ ಎಡಗಡೆಯಲ್ಲಿ ದೊಡ್ಡಮಳೂರಿನ ಅಪ್ರಮೇಯಸ್ವಾಮಿ ದೇವಾಲಯದ ದ್ವಾರ ಕಾಣಲು, ಅದರ ಎದುರು ರಸ್ತೆಯಲ್ಲಿ, ಅಂದರೆ ಬಲಗಡೆಯಲ್ಲಿ ತಿರುಗಿ ಸುಮಾರು ಎರಡು ಕಿ.ಮೀ. ದೂರ ಹೋದರೆ ಈ ದೇವಾಲಯ ಸಿಗುತ್ತದೆ.






Leave a Reply