ಆಧಾರ: ಪದ್ಮಪುರಾಣ

ವೈದಿಕ ಸಂಪ್ರದಾಯದಲ್ಲಿ ಕಾಲಗಣನೆಗಾಗಿ ಅಪೌರುಷೇಯ ಗ್ರಂಥಗಳು ಒಂದು ವಿಶಿಷ್ಟವಾದ ಪದ್ಧತಿಯನ್ನು ನೀಡಿವೆ. ಪ್ರಕೃತಿಯಲ್ಲಿ ಸಂಭವಿಸುವ ಘಟನೆಗಳನ್ನು ಆಧರಿಸಿ ನೀಡಲಾಗಿರುವ ಈ ಪದ್ಧತಿಯು ನಿರ್ದಿಷ್ಟ ಬೆಲೆ ಕಟ್ಟಲಾರದಂತಹ ಒಂದು ಅಮೂಲ್ಯ ಕೊಡುಗೆಯಾಗಿದೆ.
ಕಾಲಗಣನೆಗಾಗಿ ನಾವು ಪ್ರಸ್ತುತ ಅನುಸರಿಸುತ್ತಿರುವ ಸಾಮಾನ್ಯ ಪದ್ಧತಿಯಲ್ಲಿ ಒಂದು ದಿನವನ್ನು ತಿಥಿ ಎಂದೂ, ಒಂದು ಮಾಹೆಯನ್ನು ಮಾಸವೆಂದೂ, ಒಂದು ವರ್ಷವನ್ನು ಸಂವತ್ಸರವೆಂದೂ ವೈದಿಕ ಸಂಪ್ರದಾಯವು ನೀಡಿರುವ ಪದ್ಧತಿಯಲ್ಲಿ ಕರೆಯಲಾಗಿದೆ. ಒಂದು ಸಂವತ್ಸರವನ್ನು ಉತ್ತರಾಯಣ ಮತ್ತು ದಕ್ಷಿಣಾಯಣವೆಂದು ಎರಡು ಭಾಗಗಳಾಗಿಯೂ ಆರು ಋತುಗಳನ್ನಾಗಿಯೂ ವಿಂಗಡಿಸಲಾಗಿದೆ. ಪ್ರತಿಯೊಂದು ಮಾಸವನ್ನು ಶುಕ್ಲಪಕ್ಷ ಮತ್ತು ಕೃಷ್ಣಪಕ್ಷ ಎಂದು ಎರಡು ಪಕ್ಷಗಳನ್ನಾಗಿ ವಿಂಗಡಿಸಲಾಗಿದ್ದು ಪ್ರತಿ ಪಕ್ಷವೂ 15 ತಿಥಿಗಳನ್ನು ಒಳಗೊಂಡಿದೆ.
ಒಂದು ಸಂವತ್ಸರದಲ್ಲಿ ಬರುವ 12 ಮಾಸಗಳನ್ನು ಕ್ರಮವಾಗಿ ಚೈತ್ರ, ವೈಶಾಖ, ಜೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಮತ್ತು ಪಾಲ್ಗುಣ ಎಂದೂ ಕಾಲಗಣನೆಯಲ್ಲಿ ಹೆಚ್ಚುವರಿಯಾಗಿ ಬರುವ ಮಾಸವನ್ನು ಅಧಿಕ ಮಾಸವೆಂದು ಹೆಸರಿಸಲಾಗಿದೆ. ಪ್ರತಿ ಮಾಸದ 15 ತಿಥಿಗಳನ್ನು ಕ್ರಮವಾಗಿ ಪ್ರಥಮ ಅಥವಾ ಪ್ರತಿಪದ, ದ್ವಿತೀಯ, ತೃತೀಯಾ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶೀ, ದ್ವಾದಶಿ, ತ್ರಯೋದಶಿ, ಚತುರ್ದಶಿ ಹಾಗೂ ಅಮಾವಾಸ್ಯೆ ಅಥವಾ ಪೌರ್ಣಮಿ ಎಂದು ಕರೆಯಲಾಗಿದೆ.
ಕಾಲಗಣನೆಯ ಈ ಪದ್ಧತಿಯು ಸೂರ್ಯ ಮತ್ತು ಚಂದ್ರಗ್ರಹಗಳ ಚಲನೆಯನ್ನು ಆಧರಿಸಿದ್ದು ಅವುಗಳನ್ನು ಕ್ರಮವಾಗಿ ಸೌರಮಾನ ಪದ್ಧತಿ ಹಾಗೂ ಚಾಂದ್ರಮಾನ ಪದ್ಧತಿ ಎಂದು ಕರೆಯುತ್ತೇವೆ. ಚಾಂದ್ರಮಾನ ಪದ್ದತಿಯಲ್ಲಿ ಪೌರ್ಣಿಮೆಯ ನಂತರವೂ, ಸೌರಮಾನ ಪದ್ಧತಿಯಲ್ಲಿ ಅಮಾವಾಸ್ಯೆಯ ನಂತರವೂ ಮಾಸಾಚರಣೆಗಳನ್ನು ಮಾಡಲಾಗುವುದು.
ಅಮಾವಾಸ್ಯೆಯಿಂದ ಪೌರ್ಣಮಿಯವರೆಗಿನ 15 ದಿನಗಳನ್ನು ಶುಕ್ಲಪಕ್ಷವೆಂತಲೂ ಪೌರ್ಣಮಿಯಿಂದ ಅಮಾವಾಸ್ಯೆಯವರೆಗಿನ 15 ದಿವಸಗಳನ್ನು ಕೃಷ್ಣಪಕ್ಷವೆಂದೂ ಕರೆಯಲಾಗಿದೆ.
ಏಕಾದಶೀ ವ್ರತವನ್ನು ಆಚರಿಸುವ ಆವಶ್ಯಕತೆಯನ್ನು, ಅದರ ವೈಭವವನ್ನು ಸ್ಥಾಪಿಸುವುದಕ್ಕಾಗಿ `ಹರಿ ಭಕ್ತಿ ವಿಲಾಸ’ದಲ್ಲಿ ಅನೇಕ ಗ್ರಂಥಗಳಿಂದ ಆಯ್ದ ಉಲ್ಲೇಖಗಳನ್ನು ಕೊಡಲಾಗಿದೆ ಮತ್ತು ವ್ರತಾಚರಣೆಗೆ ಸರಿಯಾದ ವಿಧಾನವನ್ನು ತಿಳಿಸಲಾಗಿದೆ. ಏಕಾದಶೀ ವ್ರತವನ್ನು ಪಾಲಿಸುವುದು ವಿಷ್ಣು ಭಕ್ತರ ಪ್ರಮುಖ ಕರ್ತವ್ಯಗಳಲ್ಲಿ ಒಂದು. ಅದರ ಆಚರಣೆಯಲ್ಲಿ ತಪ್ಪಿದರೆ ಅದು ಮಹಾಪರಾಧವಾಗುವುದು.
ಭಕ್ತಿವಿನೋದ ಠಾಕುರರು ಹಾಡಿರುವಂತೆ, `ಮಾಧವ-ತಿಥಿ ಭಕ್ತಿ-ಜನನೇ ಜತನೇ ಪಾಲನ ಕರಿ’: “ಏಕಾದಶೀ ಮತ್ತು ಜನ್ಮಾಷ್ಟಮಿಗಳು ಭಕ್ತಿಯ ತಾಯಿಯೆನಿಸಿರುವುದರಿಂದ, ನಾನು ಬಹಳಷ್ಟು ಕಾಳಜಿಯಿಂದ ಈ ಪವಿತ್ರ ದಿನಗಳನ್ನು ಆಚರಿಸುತ್ತೇನೆ.”
ಸ್ತ್ರೀ-ಪುರುಷರು ಎಂಬ ಭೇದ ಭಾವವಿಲ್ಲದೆ, ಎಲ್ಲ ಜಾತಿ ಮತ್ತು ವಯಸ್ಸಿನ ಸಕಲ ಭಕ್ತ ಸಮೂಹವು ಎಲ್ಲ ಪರಿಸ್ಥಿತಿಗಳಲ್ಲಿ ಏಕಾದಶೀ ವ್ರತವನ್ನು ಪಾಲಿಸಬೇಕು. ಈ ನಿಯಮವು ಕೃಷ್ಣಪಕ್ಷದ ಏಕಾದಶೀ ಮತ್ತು ಶುಕ್ಲಪಕ್ಷದ ಏಕಾದಶೀ ಎರಡಕ್ಕೂ ಅನ್ವಯಿಸುತ್ತದೆ.
ವೈದಿಕ ಪದ್ಧತಿಯಲ್ಲಿ ಎಲ್ಲ ತಿಥಿಗಳೂ ತಮ್ಮವೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಎಲ್ಲ ತಿಥಿಗಳ ಪೈಕಿ ಏಕಾದಶೀಯು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನಿಗೆ ಅತ್ಯಂತ ಪ್ರೀತಿಪಾತ್ರವಾಗಿದ್ದು ಪ್ರತಿ ಏಕಾದಶೀಯೂ ತನ್ನದೇ ಆದ ಮಹತ್ವವನ್ನು ಪಡೆದಿದ್ದು ಪ್ರತ್ಯೇಕವಾದ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಒಟ್ಟು 26 ಏಕಾದಶೀ ತಿಥಿಗಳಿದ್ದು , ಆಚರಣೆಯ ವಿಧಿವಿಧಾನಗಳನ್ನು ಮತ್ತು ಮಹಾತ್ಮೆಯನ್ನು ಅರಿಯೋಣ.
ಏಕಾದಶೀಯ ಆವಿರ್ಭಾವ
ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಅರ್ಜುನನಿಗೆ ಪವಿತ್ರವಾದ ಏಕಾದಶೀ ಮಹಾತ್ಮೆಯನ್ನೂ, ಈ ಪವಿತ್ರ ದಿನದಂದು ಉಪವಾಸ ವ್ರತವನ್ನು ಆಚರಿಸುವ ವಿಧಿವಿಧಾನಗಳನ್ನೂ ಹಿಂದೊಮ್ಮೆ ವಿವರಿಸಿದನು. ಯಾರು ಏಕಾದಶೀ ಮಹಾತ್ಮೆಯನ್ನು ಶ್ರವಣ ಮಾಡುವರೋ ಅವರು ಈ ಐಹಿಕ ಜಗತ್ತಿನಲ್ಲಿ ಅನೇಕ ರೀತಿಯ ಸುಖಭೋಗಗಳನ್ನು ಅನುಭವಿಸಿ ನಂತರ ನೇರವಾಗಿ ಪ್ರಭು ವಿಷ್ಣುವಿನ ಧಾಮವನ್ನು ಸೇರುತ್ತಾರೆ.

ಭಗವಾನ್ ಕೃಷ್ಣನು ಹೇಳಿದನು, “ಓ ಅರ್ಜುನ, ಮಾರ್ಗಶಿರ ಮಾಸದ ಕೃಷ್ಣಪಕ್ಷದಲ್ಲಿ ಬರುವ ಏಕಾದಶೀಯಂದು ಹೊಸಬರು ಉಪವಾಸ ವ್ರತವನ್ನು ಪ್ರಾರಂಭಿಸಬೇಕು.
ಏಕಾದಶೀಯಂದು ಇಡೀ ದಿನ ಉಪವಾಸ ವ್ರತ ಮಾಡುವುದರಿಂದ ಸಿಗುವ ಫಲವನ್ನು ಅಳೆಯಲು ಸಾಧ್ಯವಿಲ್ಲ. ಓ ಅರ್ಜುನನೇ, ಇದರಿಂದ ಸಿಗುವ ಫಲವನ್ನು ಲೆಕ್ಕ ಹಾಕಲು ದೇವತೆಗಳಿಗೂ ಸಾಧ್ಯವಾಗದು. ಸಾವಿರ ವೈದಿಕ ಯಾಗಗಳು ಕೂಡಾ ಒಂದು ಏಕಾದಶೀ ವ್ರತದ ಫಲದ ಸಮಾನವಲ್ಲ.
ಆದ್ದರಿಂದ ಏಕಾದಶೀ ದಿನದಂದು ಕೇವಲ ಒಂದು ಹೊತ್ತು ಧಾನ್ಯ ವರ್ಜಿತ ಆಹಾರ ಸೇವಿಸಬಹುದು. ಅಥವಾ ಇಡೀ ದಿನ ಉಪವಾಸ ಮಾಡಬಹುದು. ತೀರ್ಥಸ್ಥಳಗಳಲ್ಲಿ ತಂಗುವುದು, ದಾನ ಧರ್ಮಗಳನ್ನು ಮಾಡುವುದು ಮತ್ತು ಯಾಗಾದಿಗಳನ್ನು ಆಚರಿಸುವುದು – ಇವೆಲ್ಲವುದಕ್ಕಿಂತಲೂ ಏಕಾದಶೀ ವ್ರತವು ಬಹಳ ಉತ್ತಮ. ಆದ್ದರಿಂದ ಈ ಐಹಿಕ ದುಃಖಗಳಿಂದ ಬಿಡುಗಡೆ ಹೊಂದಬೇಕಾದಲ್ಲಿ ಏಕಾದಶೀ ವ್ರತಾಚರಣೆಯನ್ನು ಮಾಡಬೇಕು.”
ಇದನ್ನು ಕೇಳಿದ ಅರ್ಜುನನು, “ಓ ಪ್ರಭುವೇ, ಒಂದು ಸಾವಿರ ಯಜ್ಞಗಳೂ ಸಹಾ ಒಂದು ಏಕಾದಶೀ ವ್ರತವನ್ನು ಸರಿಗಟ್ಟಲಾರವು ಎಂದು ಹೇಳಿದೆಯಲ್ಲಾ, ಅದು ಹೇಗೆ? ಇತರ ದಿನಗಳಿಗಿಂತ ಏಕಾದಶೀ ದಿನವು ಅದು ಹೇಗೆ ಅಷ್ಟೊಂದು ಮಹತ್ವವನ್ನು ಪಡೆಯಿತು?” ಎಂದು ಪ್ರಶ್ನಿಸಿದನು. ಶ್ರೀಕೃಷ್ಣನು ಉತ್ತರಿಸುತ್ತಾ, “ಇತರ ಎಲ್ಲ ದಿನಗಳಿಗಿಂತಲೂ ಏಕಾದಶೀಯು ಏಕೆ ಅತ್ಯಂತ ಪವಿತ್ರವಾದುದಾಗಿದೆ ಎಂಬುದನ್ನು ಹೇಳುವೆ, ಕೇಳು” ಎಂದನು.

“ಹಿಂದೆ ಸತ್ಯಯುಗದಲ್ಲಿ `ಮುರ’ ಎಂಬ ಒಬ್ಬ ಭಯಂಕರ ರಾಕ್ಷಸನಿದ್ದನು. ತುಂಬ ಕೋಪಿಷ್ಠನಾಗಿದ್ದ ಅವನು ಸ್ವರ್ಗಲೋಕದ ರಾಜನಾದ ಇಂದ್ರನನ್ನು ಒಳಗೊಂಡಂತೆ ಇಡೀ ದೇವತಾ ಸಮೂಹವನ್ನೇ ತನ್ನ ಬಲದಿಂದ ಜಯಿಸಿದನು. ಆಗ ದೇವತೆಗಳೆಲ್ಲರೂ ಶಿವನ ಬಳಿ ಹೋಗಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದರು. ಶಿವನು ಅವರನ್ನು ಸಂತೈಸಿ ವಿಷ್ಣುವಿನ ಬಳಿ ಕರೆದೊಯ್ದನು. ವಿಷ್ಣುವು ದೇವತೆಗಳ ಪ್ರಾರ್ಥನೆಯನ್ನು ಕೇಳಿ `ಮುರ’ನನ್ನು ಸಂಹರಿಸಲು ಒಪ್ಪಿ ಅವರನ್ನು ಮುರನ ರಾಜಧಾನಿಯಾದ ಚಂದ್ರಾವತಿ ನಗರದ ಮೇಲೆ ದಂಡೆತ್ತಿ ಹೋಗಲು ಹುರಿದುಂಬಿಸಿದನು. ಹೀಗೆ ಶ್ರೀಹರಿಯ ಮುಂದಾಳತ್ವದಲ್ಲಿ ದೇವತೆಗಳು ನವೋತ್ಸಾಹದಿಂದ ಚಂದ್ರಾವತಿ ನಗರದ ಆಕ್ರಮಣಕ್ಕಾಗಿ ಮುನ್ನಡೆದರು.
ದೇವತೆಗಳಿಗೂ ಮುರಾಸುರನಿಗೂ ಘನಘೋರವಾದ ಯುದ್ಧವು ಆಯಿತು. ಆಗ ಮುರಾಸುರನು ತನ್ನ ಪ್ರಚಂಡವಾದ ಪರಾಕ್ರಮದಿಂದ ಮತ್ತೆ ಎಲ್ಲ ದೇವತೆಗಳನ್ನೂ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸಿ ಪರಾಜಯಗೊಳಿಸಿದ ಮತ್ತು ಶ್ರೀಹರಿಯ ಮೇಲೆ ಕ್ರೋಧದಿಂದ ಕೆಂಪಾದ ಕಣ್ಣಿನ ಕಿಡಿಗಳನ್ನು ತೂರಿ ಗರ್ಜಿಸಿದ. `ಎಲೈ ವಿಷ್ಣುವೇ, ನಿಲ್ಲು ನಿಲ್ಲು ನಿನ್ನನ್ನೂ ಒಂದು ಕೈ ನೋಡಿಯೇ ಬಿಡುತ್ತೇನೆ’ ಎಂದು ಅಭಿಕ್ಷೇಪಿಸಿದ. ಅದರಿಂದ ರುಷ್ಟನಾದ ಭಗವಂತನು ದೈತ್ಯಸೇನೆಯ ಮೇಲೆ ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿದ. ಅದರಿಂದ ದಾನವರೆಲ್ಲರೂ ಹತಪತಿತರಾಗಿ ಬಿದ್ದರು. ಅದನ್ನು ನೋಡಿ ಮತ್ತಿಷ್ಟು ರೊಚ್ಚಿಗೆದ್ದ ಆ ದೈತ್ಯನು ಏಕಾಕಿಯಾಗಿ ಶ್ರೀ ವಿಷ್ಣುವಿನೊಡನೆ ಹೋರಾಡಿದ. ಅವನ ಶಸ್ತ್ರಾಸ್ತ್ರಗಳನ್ನೆಲ್ಲ ತುಂಡರಿಸಿದ.
ಅನಂತರ ಮುರಾಸುರನಿಗೂ ಮಧುಸೂದನನಿಗೂ ಬಾಹು ಯುದ್ಧ ಪ್ರಾರಂಭವಾಯಿತು. ಅವರ ಈ ದ್ವಂದ್ವ ಯುದ್ಧ ದೇವತೆಗಳ ಒಂದು ಸಾವಿರ ವರ್ಷಗಳವರೆಗೆ ನಡೆಯಿತು. ಎಲ್ಲ ದೇವತೆಗಳೂ ಆ ದೈತ್ಯನ ಭೀತಿಯಿಂದ ಹೆದರಿ ಓಡಿಹೋದರು. ಕೊನೆಗೆ ಶ್ರೀಹರಿಯು ಕೂಡ ಅವನಿಂದ ಮೇಲ್ನೋಟಕ್ಕೆ ಪರಾಜಿತನಾದ. ಹೀಗೆ (ಲೋಕದೃಷ್ಟಿಯಿಂದ) ಸೋತು ನಿರ್ವಿಣ್ಣ್ಯನಾದ ಮಹಾವಿಷ್ಣುವು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ಇರುವ 96 ಮೈಲಿ ಉದ್ದವಾದ `ಸಿಂಹಾಪತಿ’ ಎಂಬ ಗುಹೆಯಲ್ಲಿ ಮಲಗಿದ.
ಯುದ್ಧಮಾಡಿ ದಣಿದಾಗಲೇ ವಿಷ್ಣುವನ್ನು ಕೊಂದುಬಿಡಬೇಕು ಎಂದು ಬೆಂಬತ್ತಿ ಓಡಿ ಬಂದಿದ್ದ ಆ ದೈತಾಧಮ. ಆ ಗುಹಾ ಮಧ್ಯದಲ್ಲಿ ಶ್ರೀಹರಿಯು ಶಯನ ಮಾಡಿದ್ದನ್ನು ಕಂಡು ಮುರಾಸುರನಿಗೆ ಪರಮ ಪ್ರಹರ್ಷವಾಯಿತು. ಮೈಮರೆತು ಮಲಗಿಕೊಂಡ ಮಧುಸೂದನನನ್ನು ತಾನು ಇನ್ನು ಸುಲಭವಾಗಿ ಹೊಡೆದು ಕೊಲ್ಲಬಹುದು ಎಂದು ಆವೇಶದಿಂದ ನುಗ್ಗಿ ಬಂದ. ಶಯನ ಮಾಡಿದ್ದ ಶ್ರೀಮನ್ನಾರಾಯಣನ ಶರೀರದಿಂದ ಕೂಡಲೇ ಓರ್ವ ರೂಪಸಂಪನ್ನಳಾದ ಕನ್ಯಾಮಣಿಯು ಹೊರಹೊಮ್ಮಿ ಬಂದಳು.
ವಿಷ್ಣುವಿನ ತೇಜಸ್ಸಿನ ಅಂಶದಿಂದ ಹುಟ್ಟಿಬಂದ ಆ ಕನ್ಯೆಯು ಕೈಯಲ್ಲಿ ದಿವ್ಯವಾದ ಆಯುಧವನ್ನು ಹಿಡಿದಿದ್ದಳು ಮತ್ತು ಅವಳು ಲೋಕೋತ್ತರ ಸೌಂದರ್ಯಶಾಲಿನಿ, ಅಷ್ಟೇ ಪರಾಕ್ರಮಶಾಲಿನಿ. ಆ ಕನ್ನಿಕೆಯು ಕೆಂಗಣ್ಣಿನಿಂದ ದೈತ್ಯಕುಲಕಲಂಕನಾದ ಮುರಾಸುರನನ್ನು ಒಮ್ಮೆ ನೋಡಿ ತನ್ನೊಡನೆ ಯುದ್ಧ ಮಾಡಲು ಅವನನ್ನು ಆಹ್ವಾನಿಸಿದಳು. ಆಗ ದರ್ಪಿಷ್ಠನಾದ ಆ ದೈತ್ಯನು ಆ ಕನ್ಯಾಮಣಿಯ ಲೋಕವಿಲಕ್ಷಣವಾದ ಲಾವಣ್ಯವನ್ನು ಕಂಡು ಮುಗ್ಧನಾದರೂ ಅವಳ ಆಹ್ವಾನವನ್ನು ಅಂಗೀಕರಿಸಿ ಯುದ್ಧಕ್ಕೆ ಸಿದ್ಧನಾಗಿ ನಿಂತ. ಘೋರಾಯುಧವನ್ನು ಎತ್ತಿಕೊಂಡು ಅವಳನ್ನು ಪ್ರಹರಿಸಲು ಮುಂದೆ ಬಂದ. ಅವಳು ನಿಂತಲ್ಲಿಯೇ ಹೂಂಕಾರ ಧ್ವನಿಗೈದಳು. ಅವಳ ಹೂಂಕಾರ ಸ್ವರದಿಂದಲೇ ಆ ಮುರಾಸುರನು ಸುಟ್ಟು ಭಸ್ಮೀಭೂತನಾಗಿ ಬಿದ್ದುಕೊಂಡ. ಆ ದೈತ್ಯನು ಬೂದಿಯಾಗಿ ಬಿದ್ದ ಬಳಿಕ, ವಿಷ್ಣು ಎದ್ದು ಕುಳಿತ ಮತ್ತು ಕೇಳಿದ:
ವಿಷ್ಣು: ಈ ದುಷ್ಟನನ್ನು ಯಾರು ಕೊಂದರು? ನನ್ನ ಮೇಲಿನ ಕರುಣೆಯಿಂದ ಈ ದುರುಳ ದಾನವನ ದಮನವನ್ನು ಮಾಡಿದ ಪುಣ್ಯಾತ್ಮರು ಯಾರು?
ಕನ್ಯೆ: ಸ್ವಾಮಿ, ಈ ಮುರಾಸುರನು ಇಂದ್ರಾದಿ ದೇವತೆಗಳನ್ನು ಗೆದ್ದು ಅವರನ್ನು ಸ್ಥಾನಭ್ರಷ್ಟರನ್ನಾಗಿ ಮಾಡಿದ. ನೀನು ಈ ಗುಹೆಯಲ್ಲಿ ಮಲಗಿದ್ದನ್ನು ನಾನು ನೋಡಿದೆ. ನಿನ್ನನ್ನು ಕೊಲ್ಲಬೇಕೆಂಬ ದುರ್ಬುದ್ಧಿಯಿಂದ ಈ ದೈತ್ಯಾಧಮ ನಿನ್ನ ಹಿಂದೆಯೇ ಬಂದ. ಆದುದರಿಂದ ನಾನೇ ಇವನನ್ನು ವಧಿಸಿದೆ.
ವಿಷ್ಣು: ಈ ದೈತ್ಯ, ನನ್ನನ್ನು ಕೂಡ ಗೆದ್ದಿದ್ದ. ಇಂಥ ಕ್ರೂರ ಶೂರ ದೈತ್ಯನನ್ನು ನೀನು ಹೇಗೆ ಗೆದ್ದೆ?
ಕನ್ಯೆ: ಪ್ರಭು, ಇದೆಲ್ಲವೂ ನಿನ್ನ ಪ್ರಸಾದ. ನೀನು ಲೋಕವಿಡಂಬನೆಗಾಗಿ ಪರಾಜಿತನಾದಂತೆ ನಟಿಸಿರುವೆ. ನಿನ್ನ ಪ್ರಸಾದದಿಂದಲೇ ನಾನು ಈ ದುರ್ದಾನವನನ್ನು ಮರ್ದನಮಾಡಿ ಕೊಂದುಹಾಕಿದೆ.
ವಿಷ್ಣು: ಭದ್ರೆ, ನಿನ್ನ ಈ ಕಾರ್ಯದಿಂದ ಜಗತ್ತೆಲ್ಲವೂ ನಿರ್ಭಯವಾಗಿದೆ. ದೇವತೆಗಳು ಆನಂದಪಟ್ಟಿದ್ದಾರೆ. ಋಷಿ ಮುನಿಗಳಿಗೂ ಸಮಾಧಾನವಾಗಿದೆ. ನಾನೂ ಪ್ರೀತನಾಗಿದ್ದೇನೆ. ನಿನ್ನ ಮನಸ್ಸಿನಲ್ಲಿ ಯಾವ ಅಪೇಕ್ಷೆ ಇದೆಯೋ ಅದನ್ನು ಬೇಡು. ನೀನು ಬಯಸಿದ ವರಗಳನ್ನು ನೀಡುತ್ತೇನೆ.
ಕನ್ಯೆ: ಸ್ವಾಮಿ, ನೀನು ನನ್ನ ಮೇಲೆ ಸಂತುಷ್ಟನಾಗಿದ್ದರೆ ನನಗೆ ಮೂರು ವರಗಳನ್ನು ಕರುಣಿಸು. ನಾನು ಸರ್ವ ತಿಥಿಗಳಲ್ಲಿ ಪ್ರಧಾನಳಾಗಬೇಕು. ಸರ್ವರ ವಿಘ್ನವಿನಾಶಿನಿಯೂ ಆಗಬೇಕು. ಸರ್ವಸಿದ್ಧಿಪ್ರದಳಾದ ದೇವಿಯೂ ಆಗಬೇಕು. ನನ್ನನ್ನು ಉದ್ದೇಶಿಸಿ ಉಪವಾಸ ಮಾಡಿ ನಿನ್ನನ್ನು ಭಕ್ತಿಯಿಂದ ಆರಾಧಿಸಿದವರಿಗೆ ಸರ್ವಸಿದ್ಧಿಗಳೂ ಪ್ರಾಪ್ತವಾಗಬೇಕು. ದಶಮಿಯ ದಿನ ಏಕಭುಕ್ತ, ಅಥವಾ ನಕ್ತ, ಏಕಾದಶೀಯ ದಿನ ಉಪವಾಸ ಮತ್ತು ದ್ವಾದಶಿ ಪಾರಣೆ ಮಾಡಿದವರಿಗೆ ಪುಣ್ಯ ಮತ್ತು ಐಶ್ವರ್ಯವನ್ನೂ ನೀನು ಪ್ರದಾನ ಮಾಡಬೇಕು.
ವಿಷ್ಣು: ನೀನು ಕೇಳಿದಂತೆ ಆಗಲಿ. ಹನ್ನೆರಡು ತಿಂಗಳಲ್ಲಿಯೂ, ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಏಕಾದಶೀ ವ್ರತವನ್ನು ಮಾಡಿ ನನ್ನ ಪೂಜೆ ಮಾಡಿದವರು ಮೋಕ್ಷವನ್ನು ಹೊಂದುತ್ತಾರೆ. ಏಕಾದಶೀ ನನಗೆ ಅತ್ಯಂತ ಪ್ರಿಯ. ಎಲ್ಲ ತೀರ್ಥಸ್ನಾನಗಳಿಗಿಂತ ಎಲ್ಲ ವ್ರತಾಚರಣೆಗಳಿಗಿಂತ ಎಲ್ಲ ಧರ್ಮಕರ್ಮಾನುಷ್ಠಾನಗಳಿಗಿಂತ ಮಿಗಿಲಾದ ಅತ್ಯಧಿಕ ಪುಣ್ಯವು ಏಕಾದಶೀ ಉಪವಾಸದಿಂದ ಬರುವುದು.
ಶ್ರೀ ಹರಿಯ ತೇಜಸ್ಸಿನಿಂದ ಹುಟ್ಟಿ ಅವನ ಪ್ರಾಣರಕ್ಷಣೆಯನ್ನು ಮಾಡಿದ ಆ ಕನ್ಯೆಯೇ ಏಕಾದಶೀ ತಿಥಿಗೆ ಅಭಿಮಾನಿ ದೇವಿಯಾಗಿ, ಅಂದು ಉಪವಾಸ ಮಾಡಿದವರ ಸರ್ವಪಾಪಗಳನ್ನು ಪರಿಹರಿಸಿ, ಸರ್ವಸಿದ್ಧಿಗಳನ್ನು ಪ್ರದಾನ ಮಾಡುವಳು. ಏಕಾದಶೀಯಂದು ಉಪವಾಸ ಮಾಡುವವರು ಶ್ರೀಹರಿಯು ವಾಸಮಾಡುವ ವಿಷ್ಣು ಲೋಕಕ್ಕೆ ಪ್ರಯಾಣ ಮಾಡುವರು. ಏಕಾದಶೀಗೆ ಸಮಾನವಾದ ವ್ರತ ಬೇರೊಂದಿಲ್ಲ.
ಪಾಪ ಪುರುಷನ ಕಥೆ
ಲೋಕ ಸೃಷ್ಟಿಯ ಪ್ರಾರಂಭದಲ್ಲಿ, ಸರ್ವಶ್ರೇಷ್ಠ ಭಗವಂತನು ಪಂಚಭೂತಗಳಿಂದ ತಯಾರಾದ ಈ ಜಗತ್ತಿನೊಳಗಡೆ ಚಲಿಸುವ ಮತ್ತು ನಿಶ್ಚಲ ಜೀವಿಗಳನ್ನು ಸೃಷ್ಟಿಸಿದನು. ಅದೇ ಸಮಯಕ್ಕೆ ಮಾನವರನ್ನು ಶಿಕ್ಷಿಸುವ ಉದ್ದೇಶದಿಂದ ಅವನು ಪಾಪ ಪೂರಿತವಾದ ಒಬ್ಬ ವ್ಯಕ್ತಿಯನ್ನು (ಪಾಪಪುರುಷ) ಸೃಷ್ಟಿಸಿದನು. ಈ ವ್ಯಕ್ತಿಯ ಅಂಗಗಳು ಅನೇಕ ಪ್ರಕಾರದ ಪಾಪಕೃತ್ಯಗಳಿಂದ ನಿರ್ಮಿಸಲ್ಪಟ್ಟಿದ್ದವು.
ಅವನ ತಲೆಯು ಒಬ್ಬ ಬ್ರಾಹ್ಮಣನನ್ನು ಕೊಂದ ಪಾಪದಿಂದ, ಅವನ ಎರಡು ಕಣ್ಣುಗಳು ನಶೆಯ ಪದಾರ್ಥಗಳ ಸೇವನೆಯ ಪಾಪದಿಂದ, ಅವನ ಬಾಯಿಯು ಬಂಗಾರ ಕದ್ದ ಪಾಪದಿಂದ, ಅವನ ಕಿವಿಗಳು ತನ್ನ ಆಧ್ಯಾತ್ಮಿಕ ಗುರುವಿನ ಹೆಂಡತಿಯೊಂದಿಗೆ ಅನೈತಿಕ ಸಂಬಂಧದ ಪಾಪದಿಂದ, ಅವನ ಮೂಗು ಹೆಂಡತಿಯನ್ನು ಕೊಂದ ಪಾಪದಿಂದ, ಅವನ ತೋಳುಗಳು ಒಂದು ಆಕಳನ್ನು ಕೊಂದ ಪಾಪದಿಂದ, ಅವನ ಕುತ್ತಿಗೆಯು ಕೂಡಿಸಿಟ್ಟ ಸಂಪತ್ತಿನ ಕಳುವು ಮಾಡಿದ ಪಾಪದಿಂದ, ಅವನ ಎದೆಯು ಗರ್ಭಪಾತದಂತಹ ಪಾಪದಿಂದ, ಅವನ ಕೆಳಭಾಗದ ಎದೆಯು ಬೇರೊಬ್ಬರ ಹೆಂಡತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದ ಪಾಪದಿಂದ, ಅವನ ಹೊಟ್ಟೆಯು ಸಂಬಂಧಿಕರನ್ನು ಕೊಂದ ಪಾಪದಿಂದ, ಅವನ ಹೊಕ್ಕಳು ಅವಲಂಬಿತರಾಗಿರುವಂಥವರನ್ನು ಕೊಂದ ಪಾಪದಿಂದ, ಅವನ ಸೊಂಟವು ಸ್ವಪ್ರಶಂಸೆಯ ಪಾಪದಿಂದ, ಅವನ ತೊಡೆಗಳು ಗುರುವಿನ ನಿಂದನೆಯಂಥ ಪಾಪದಿಂದ, ಅವನ ಜನನಾಂಗವು ಸ್ವಂತ ಮಗಳನ್ನೇ ಮಾರಿದ ಪಾಪದಿಂದ, ಅವನ ನಿತಂಬಗಳು ರಹಸ್ಯ ವಿಷಯಗಳನ್ನು ಬಹಿರಂಗ ಪಡಿಸಿದ ಪಾಪದಿಂದ, ಅವನ ಪಾದಗಳು ಸ್ವಂತ ತಂದೆಯನ್ನು ಕೊಂದ ಪಾಪದಿಂದ, ಅಲ್ಲದೇ ಅವನ ಕೇಶವು ಅತಿ ಕೀಳು ಮಟ್ಟದ ಪಾಪಕೃತ್ಯಗಳಿಂದ ಸೃಷ್ಟಿಸಲ್ಪಟ್ಟಿದ್ದವು. ಹೀಗೆ, ಎಲ್ಲ ಪಾಪಕೃತ್ಯಗಳನ್ನು ಮತ್ತು ದುರ್ಗುಣಗಳನ್ನು ಒಳಗೊಂಡ ಭಯಂಕರ ರೂಪವೊಂದರ ಸೃಷ್ಟಿಯಾಯಿತು. ಅವನ ಬಣ್ಣ ಕಪ್ಪು. ಅವನ ಕಣ್ಣುಗಳ ಬಣ್ಣ ಹಳದಿ.ಅತಿಯಾದ ಪಾಪಿಗಳು ಇವನಿಂದ ಅತೀಯಾದ ದುಃಖವನ್ನನುಭವಿಸಬೇಕಾಗುತ್ತದೆ.
ನಂತರ ಭಗವಂತನು ಯಮರಾಜನೆಂಬ ವ್ಯಕ್ತಿಯನ್ನು ಸೃಷ್ಟಿಸಿದನು. ಅವನೊಂದಿಗೆ ವಿವಿಧ ಪ್ರಕಾರದ ನರಕ ಸದೃಶ ಗೃಹ ವ್ಯವಸ್ಥೆಗಳನ್ನು ತಯಾರಿಸಿದನು. ಯಾರು ಅತಿ ಪಾಪಿಗಳೋ ಅಂಥವರನ್ನು ಮರಣದ ನಂತರ ಯಮರಾಜನ ಹತ್ತಿರ ಕಳುಹಿಸಲಾಗುತ್ತದೆ. ಅವನು ಅವರ ಪಾಪಗಳಿಗನುಗುಣವಾಗಿ ನರಕಕ್ಕೆ ಯಾತನೆ ಅನುಭವಿಸಲು ಕಳುಹಿಸುತ್ತಾನೆ.

ಇದಾದ ಮೇಲೆ ಭಗವಂತನು ಪಕ್ಷಿಗಳ ರಾಜನಾದ ಗರುಡನ ಬೆನ್ನೇರಿ ಯಮರಾಜನ ಹತ್ತಿರ ತೆರಳಿದನು. ಶ್ರೀ ವಿಷ್ಣುವು ತನ್ನ ಹತ್ತಿರ ಬಂದದ್ದನ್ನು ಕಂಡ ಯಮರಾಜನು ವಿಷ್ಣುವಿನ ಪಾದಗಳನ್ನು ತೊಳೆದು ಅವನಿಗೆ ನಮನ ಸಲ್ಲಿಸಿದನು. ಸರ್ವಶ್ರೇಷ್ಠನಾದ ಭಗವಾನ್ ವಿಷ್ಣುವು ಸಿಂಹಾಸನಾರೂಢನಾದನು. ಆಗ ಅವನಿಗೆ ದಕ್ಷಿಣ ದಿಕ್ಕಿನಿಂದ ಜೋರಾಗಿ ಅಳುವ ಧ್ವನಿಗಳು ಕೇಳಿಬಂದವು. ಇದರಿಂದ ಆಶ್ಚರ್ಯಚಕಿತನಾದ ವಿಷ್ಣುವು ಯಮರಾಜನನ್ನು ಕುರಿತು ಕೇಳಿದನು, `ಈ ತೀವ್ರವಾದ ದುಃಖದ ಧ್ವನಿಗಳು ಎಲ್ಲಿಂದ ಕೇಳಿಬರುತ್ತಿವೆ?’ ಯಮರಾಜನು, `ಓ ದೇವಾ, ಭೂಲೋಕದಿಂದ ಬಂದಂತಹ ವಿವಿಧ ಜೀವಿಗಳು ತಾವು ಮಾಡಿದ ತಪ್ಪುಗಳಿಗಾಗಿ ಬಳಲುತ್ತಿದ್ದಾರೆ. ಈ ಭಯಾನಕ ಆಕ್ರಂದನವು ಅವರ ಪೂರ್ವಜನ್ಮದ ಪಾಪಕರ್ಮಗಳ ನೋವಿನ ಅನುಭವದಿಂದಾಗಿ ಕೇಳಿಬರುತ್ತಿದೆ’ ಎಂದು ಉತ್ತರಿಸಿದನು.
ಇದನ್ನು ಕೇಳಿದ ನಂತರ ಶ್ರೀ ವಿಷ್ಣುವು ದಕ್ಷಿಣದಲ್ಲಿದ್ದ ನರಕ ಪ್ರದೇಶಕ್ಕೆ ಹೋದನು. ನರಕದಲ್ಲಿದ್ದ ಜೀವಿಗಳು ಭಗವಂತನನ್ನು ಕಂಡು ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿದರು. ಶ್ರೀ ವಿಷ್ಣುವಿನ ಹೃದಯವು ಕರುಣೆಯಿಂದ ತುಂಬಿಕೊಂಡಿತು.
ದೇವೋತ್ತಮ ಪರಮ ಪುರುಷನಾದ ಶ್ರೀವಿಷ್ಣುವು ಯೋಚಿಸಿದನು: “ನಾನು ಈ ಪಾಪಿಗಳಿಗೂ ಮೋಸಗಾರರಿಗೂ ದುಃಖವುಂಟು ಮಾಡುವ ಈ ಪಾಪಪುರುಷನನ್ನು ಸೃಷ್ಟಿಸಿದ್ದೇನೆ. ಈಗ ನಾನು ಈ ಪಾಪ ಪುರುಷನನ್ನು ನಿಗ್ರಹಿಸುವ ಒಬ್ಬ ವ್ಯಕ್ತಿಯನ್ನು ಸೃಷ್ಟಿಸಬೇಕು.” ಕರುಣಾಮಯಿ ಭಗವಂತನು ತನ್ನ ಅವತಾರದಿಂದಲೇ `ಏಕಾದಶೀ’ಯೆಂಬ ದೈವಸ್ವರೂಪವನ್ನು ಸೃಷ್ಟಿಸಿದನು. ಇದಾದ ಮೇಲೆ ಪಾಪದಲ್ಲಿ ಮುಳುಗಿದ್ದ ಜೀವಿಗಳು ಏಕಾದಶೀ ವ್ರತ ಪಾಲಿಸಿ ಪಾಪಮುಕ್ತರಾಗಿ ಬಹುಬೇಗ ವೈಕುಂಠಕ್ಕೆ ಪ್ರಯಾಣಿಸತೊಡಗಿದರು.
ಶ್ರೀ ಏಕಾದಶೀಯ ಆವಿರ್ಭಾವದ ನಂತರ, ಪಾಪಪುರುಷನಿಗೆ ಅವಳ ಶಕ್ತಿಯ ಅರಿವಾಯಿತು. ಅವನು ತನ್ನ ಸಂದೇಹಗಳೊಂದಿಗೆ ಶ್ರೀ ವಿಷ್ಣುವಿನ ಹತ್ತಿರ ಹೋಗಿ, ಅನೇಕ ಪ್ರಾರ್ಥನೆಗಳನ್ನು ಸಲ್ಲಿಸಲು ಪ್ರಾರಂಭಿಸಿದನು. ಇದರಿಂದ ಪ್ರಸನ್ನನಾದ ವಿಷ್ಣುವು, `ನಿನ್ನ ಉತ್ತಮ ಪ್ರಾರ್ಥನೆಗಳಿಂದ ನಾನು ತುಂಬ ಪ್ರಸನ್ನನಾಗಿದ್ದೇನೆ. ನಿನಗೆ ಏನು ವರ ಬೇಕು?’ ಎಂದು ಕೇಳಿದನು.
ಇದಕ್ಕೆ ಪಾಪಪುರುಷನು, “ನಾನು ನಿನ್ನದೇ ಆದ ಸೃಷ್ಟಿ. ಪಾಪ ಮಾಡುವ ಜೀವಿಗಳು ನನ್ನ ಮೂಲಕ ಯಾತನೆ ಪಡಲಿ ಎಂಬುದು ನಿನ್ನ ಇಚ್ಛೆಯಾಗಿತ್ತು. ಆದರೆ ಈಗ ಶ್ರೀ ಏಕಾದಶೀಯ ಪ್ರಭಾವದಿಂದಾಗಿ ನಾನು ಸರ್ವನಾಶವಾಗಿದ್ದೇನೆ. ಈ ರೀತಿ ಎಲ್ಲ ಜೀವಿಗಳ ವಿಮೋಚನೆ ಆದರೆ ನಿನ್ನ ಚಟುವಟಿಕೆಗಳನ್ನು ಮುಂದುವರಿಸುವವರು ಯಾರು? ಯಾವುದೇ ಪ್ರಕಾರದ ಪವಿತ್ರ ಕಾರ್ಯವು ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಆದರೆ ಏಕಾದಶೀಯು ನಿನ್ನ ಅವತಾರವಾಗಿರುವುದರಿಂದ ನನ್ನನ್ನು ಸದೆ ಬಡಿಯಲು ಸಾಧ್ಯವಿದೆ. ಶ್ರೀ ಏಕಾದಶೀಯ ಭಯದಿಂದ ಮುಕ್ತಿ ಹೊಂದಲು ಒಂದು ಸ್ಥಳ ಹುಡುಕಲೂ ಸಹ ನನ್ನಿಂದ ಸಾಧ್ಯವಿಲ್ಲ. ಓ ನನ್ನ ಒಡೆಯನೇ, ನಾನು ನಿನ್ನ ಸೃಷ್ಟಿಯ ಉತ್ಪನ್ನವಾಗಿದ್ದೇನೆ. ದಯಮಾಡಿ ನಾನು ನಿರ್ಭೀತನಾಗಿ ಅಡಗಿಕೊಳ್ಳಲು ಒಂದು ಸ್ಥಳವನ್ನು ನನಗೆ ಸೂಚಿಸು.”

ಪಾಪ ಪುರುಷನ ಈ ಸ್ಥಿತಿಯನ್ನು ಕಂಡು ಶ್ರೀ ವಿಷ್ಣುವು ನಗುತ್ತ ಹೀಗೆ ನುಡಿದನು:
“ಓ ಪಾಪಪುರುಷನೇ, ಮೇಲಕ್ಕೇಳು. ಸಾಕು ನಿನ್ನ ರೋದನ. ಇಲ್ಲಿ ಕೇಳು. ಏಕಾದಶೀಯ ದಿನದಂದು ನೀನು ಎಲ್ಲಿ ತಂಗಬಹುದು ಎಂದು ನಾನು ಹೇಳುವೆ. ಮೂರು ಲೋಕಗಳಿಗೂ ಕಲ್ಯಾಣಕಾರಕವಾಗಿರುವ ಏಕಾದಶೀಯ ದಿನದಂದು ನೀನು ಆಹಾರ ಪದಾರ್ಥಗಳಾದ ಧಾನ್ಯಗಳಲ್ಲಿ ಆಶ್ರಯ ಪಡೆದುಕೋ. ಇನ್ನು ಚಿಂತಿಸಬೇಡ. ಏಕೆಂದರೆ ನನ್ನ ಅವತಾರವಾದ ಶ್ರೀ ಏಕಾದಶೀಯು ನಿನ್ನನ್ನು ತಡೆಯಲು ಸಾಧ್ಯವಿಲ್ಲ.”
ಆದ್ದರಿಂದ ಏಕಾದಶೀಯಿಂದ ಯಾರು ಆತ್ಮದ ಪರಿಪೂರ್ಣ ಲಾಭ ಪಡೆಯಲು ಇಚ್ಛಿಸುವರೋ ಅಂಥವರು ಏಕಾದಶೀ ತಿಥಿಯಂದು ಧಾನ್ಯಗಳನ್ನು ಸೇವಿಸುವುದಿಲ್ಲ. ವಿಷ್ಣುವಿನ ಪ್ರಕಾರ ಈ ಲೌಕಿಕ ಜಗತ್ತಿನಲ್ಲಿ ಕಂಡು ಬರುವ ಎಲ್ಲ ಪಾಪಕೃತ್ಯಗಳೂ ಏಕಾದಶೀ ದಿನ ಧಾನ್ಯಗಳಲ್ಲಿ ಆಶ್ರಯ ಪಡೆಯುತ್ತವೆ.
ಏಕಾದಶೀ ಕುರಿತಂತೆ ಪಾಲಿಸಬೇಕಾದ ನಿಯಮಗಳು
ಶ್ರೀ ಚೈತನ್ಯ ಮಹಾಪ್ರಭುಗಳು ಶ್ರೀಲ ಸನಾತನ ಗೋಸ್ವಾಮಿಯವರಿಗೆ ಈ ರೀತಿಯಾಗಿ ಬೋಧಿಸಿದ್ದಾರೆ:
“ಮಿಶ್ರ ಏಕಾದಶೀಯ ಬದಲು ಶುದ್ಧ ಏಕಾದಶೀಯ ಆಚರಣೆ ಮಾಡುವಂತೆ ಸೂಚಿಸಬೇಕು. ಅಲ್ಲದೆ ಇದನ್ನು ಆಚರಿಸದೇ ಹೋದರೆ ಉಂಟಾಗುವ ದೋಷಗಳನ್ನು ಸಹ ನೀವು ವಿವರಿಸಬೇಕು. ಏಕಾದಶೀ ಆಚರಿಸುವ ಯಾರೇ ಆಗಲಿ ಈ ಅಂಶಗಳ ಬಗ್ಗೆ ಬಹಳಷ್ಟು ಮುತುವರ್ಜಿ ವಹಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ, ಭಕ್ತಿ ಸೇವೆಗೆ ಧಕ್ಕೆಯಾಗುವುದು.” (ಚೈ.ಚ. ಮಧ್ಯ 9.24.342)
1. ಆ ದಿನ ಸೂರ್ಯೋದಯದ ಸಮಯದ ತಿಥಿಯು ಆ ಇಡೀ ದಿನವನ್ನು ಆಳುತ್ತದೆ.
2. ಒಂದು ವೇಳೆ ತಿಥಿಯು ಸೂರ್ಯೋದಯದ ನಂತರ ಪ್ರಾರಂಭವಾಗುತ್ತಿದ್ದು, ಮರುದಿನದ ಸೂರ್ಯೋದಯಕ್ಕಿಂತ ಮುಂಚೆ ಮುಕ್ತಾಯವಾಗುತ್ತಿದ್ದರೆ ಅದನ್ನು ನಂತರದ ತಿಥಿಯೊಂದಿಗೆ ಸಂಯೋಜಿಸಲಾಗುವುದು / ಪರಿಗಣಿಸಲಾಗುವುದು.
3. ಏಕಾದಶೀಯು ಅರುಣೋದಯ ವಿಧಿಯ ಮುಂಚೆ ಬರಬೇಕು (ಸೂರ್ಯೋದಯಕ್ಕಿಂತ 1 ಗಂಟೆ 12 ನಿಮಿಷಗಳ ಮುಂಚೆ). ಈ ರೀತಿಯಾಗಿ ಅದು ಕೂಡಿ ಬಂದರೆ ಅದನ್ನು ಶುದ್ಧ ಏಕಾದಶೀ ಎಂದು ಕರೆಯುತ್ತಾರೆ. ಒಂದು ವೇಳೆ ಆ ಸಮಯದ ನಂತರ ಪ್ರಾರಂಭವಾದರೆ, ಅದನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅದನ್ನು ಮಾರನೆಯ ದಿನದಂದು ದ್ವಾದಶಿಯ ಸಂದರ್ಭದಲ್ಲಿ ಆಚರಿಸಬೇಕಾಗುತ್ತದೆ. (ಮಹಾದ್ವಾದಶಿ )
4. ಒಂದು ವೇಳೆ ಸತತವಾಗಿ ಎರಡು ದಿನಗಳವರೆಗೆ ಅದೇ ತಿಥಿಯು ಸರಿಯಾಗಿ ಸೂರ್ಯೋದಯದ ಸಮಯದಲ್ಲಿ ಬಂದರೆ, ಆಚರಣೆಯ ವಿಧಿವಿಧಾನಗಳ ವೇಳೆಯನ್ನು ಮೊದಲನೆಯ ದಿನಕ್ಕಾಗಿ ನಿರ್ಧರಿಸಲಾಗುತ್ತದೆ. ಆದರೆ ಏಕಾದಶೀ, ಅಮಾವಾಸ್ಯೆ ಅಥವಾ ಪೂರ್ಣಿಮಾ ತಿಥಿಗಳು ಎರಡನೆಯ ದಿನದಂದು ಆಚರಿಸಲಾಗುತ್ತವೆ.
5. ಒಂದು ವೇಳೆ ಏಕಾದಶೀಯು ಸತತವಾಗಿ ಎರಡು ದಿನಗಳವರೆಗೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಬಂದರೆ, ಎರಡನೆಯ ದಿನದಂದು ಉಪವಾಸವನ್ನು ಆಚರಿಸಲಾಗುತ್ತದೆ.
ಮಹಾದ್ವಾದಶಿ
(ಮಹಾದ್ವಾದಶಿಯು ಪ್ರಬಲವಾಗಿದ್ದ ಪಕ್ಷದಲ್ಲಿ ಏಕಾದಶೀಯಂದು ಉಪವಾಸವನ್ನು ಮಾಡುವಂತಿಲ್ಲ. ಆದರೆ ದ್ವಾದಶಿಯಂದು ಉಪವಾಸ ಮಾಡಲಾಗುತ್ತದೆ.)
1. ಒಂದು ವೇಳೆ ಏಕಾದಶೀಯು ಸೂರ್ಯೋದಯದ ನಂತರ ಪ್ರಾರಂಭವಾಗಿ ಮರುದಿನದ ಸೂರ್ಯೋದಯಕ್ಕಿಂತ ಮುಂಚೆ ಮುಕ್ತಾಯಗೊಂಡರೆ ಅದನ್ನು ಗತ, ಅತೀ ಚಿಕ್ಕದಾದ, ಹಾಗಾಗಿ ಪರಿಪೂರ್ಣವಲ್ಲದ ಮತ್ತು ಅಶುದ್ಧವಾದದ್ದೆಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಆ ಮರುದಿನವನ್ನು ಉನ್ಮೀಲನಿ ಮಹಾದ್ವಾದಶಿ ಎಂದು ಕರೆಯಲಾಗುತ್ತದೆ.
2. ಒಂದು ವೇಳೆ ದ್ವಾದಶಿಯು ಸೂರ್ಯೋದಯದ ನಂತರ ಪ್ರಾರಂಭಗೊಂಡು ಮರುದಿನದ (ತ್ರಯೋದಶಿ) ಸೂರ್ಯೋದಯಕ್ಕಿಂತ ಮುಂಚೆ ಮುಗಿದರೆ, ಅದೂ ಕೂಡ ಗತವೆಂದಾಗುತ್ತದೆ. ಅದನ್ನು ತ್ರಿ-ಸ್ಪೃಶಾ-ಮಹಾದ್ವಾದಶಿಯಾಗಿ ಆಚರಿಸಲಾಗುತ್ತದೆ.
3. ಒಂದು ವೇಳೆ ದ್ವಾದಶಿಯು ಸತತವಾಗಿ ಎರಡು ದಿನಗಳವರೆಗೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಬಂದರೆ, ಮೊದಲನೇ ದ್ವಾದಶಿಯು ವ್ಯಂಜುಲಿ ಮಹಾದ್ವಾದಶಿ ಆಗುತ್ತದೆ.
4. ಅನಂತರ ಬರುವ ಅಮಾವಾಸ್ಯೆ ಅಥವಾ ಪೂರ್ಣಿಮೆಯು ಸತತವಾಗಿ ಎರಡು ದಿನಗಳವರೆಗೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಬಂದರೆ, ಅದರ ಮುಂಚೆ ಬರುವ ದ್ವಾದಶಿಯು ಪಕ್ಷ-ವರ್ಧಿನಿ-ಮಹಾದ್ವಾದಶಿಯಾಗುತ್ತದೆ.
ಉಪವಾಸದ ಸಮಯ/ವೇಳೆ
ಏಕಾದಶೀ ವ್ರತಾಚರಣೆಯು ಸೂರ್ಯೋದಯದೊಂದಿಗೆ ಪ್ರಾರಂಭವಾಗುವುದೆಂದು ಲೆಕ್ಕ ಹಾಕಲಾಗಿದೆ. ಸೂರ್ಯೋದಯಕ್ಕಿಂತ ಮುಂಚಿನ ಸಮಯವನ್ನು ಹಿಂದಿನ ದಿನದ ಭಾಗವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಏಕಾದಶೀಯು ಸೂರ್ಯೋದಯಕ್ಕೆ ಸರಿಯಾಗಿ ಪ್ರಾರಂಭವಾಗಿ, ಮರುದಿನದ ಸೂರ್ಯೋದಯದವರೆಗೂ ಮುಂದುವರಿಯುತ್ತದೆ. ನಾವು ಏಕಾದಶೀಯನ್ನು ಸೂರ್ಯೋದಯದಿಂದ ಸೂರ್ಯೋದಯದವರೆಗೆ ಪಾಲಿಸುತ್ತೇವೆ. ಮಧ್ಯರಾತ್ರಿಯ ಹನ್ನೆರಡು ಗಂಟೆಯು ಪಾಶ್ಚಾತ್ಯ ಖಗೋಳ ಶಾಸ್ತ್ರೀಯ ಲೆಕ್ಕಾಚಾರವಾಗಿದೆ. ಆದರೆ ವೈದಿಕ ಖಗೋಳಶಾಸ್ತ್ರೀಯ ಲೆಕ್ಕಾಚಾರವು ಸೂರ್ಯೋದಯ ಅಥವಾ ಚಂದ್ರೋದಯದ ಸಮಯದಿಂದ ಪ್ರಾರಂಭವಾಗುತ್ತದೆ; ಸಾಮಾನ್ಯವಾಗಿ ಸೂರ್ಯೋದಯದಿಂದಲೇ.
ಒಂದು ವೇಳೆ ಒಬ್ಬ ವ್ಯಕ್ತಿಯು ಸೂರ್ಯೋದಯದಿಂದ ಸೂರ್ಯೋದಯದವರೆಗಿನ ಅವಧಿಯಲ್ಲಿ ಧಾನ್ಯಗಳನ್ನು ಸೇವಿಸಿದರೆ ವ್ರತವನ್ನು ಮುರಿದಂತೆ. ಅಂಥವರಿಗೆ ಉಪವಾಸದ ಯಾವ ಫಲಗಳೂ ಲಭಿಸದು ಮತ್ತು ದುಷ್ಪರಿಣಾಮಗಳುಂಟಾಗುತ್ತವೆ. ವೈದಿಕ ಸಂಸ್ಕೃತಿಯಲ್ಲಿ ಚಾಂದ್ರಮಾನವು ಯಾವಾಗಲಾದರೂ ಪ್ರಾರಂಭವಾಗಲಿ, ಆದರೆ ದಿನವು ಮಾತ್ರ ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತದೆ. ಆದ್ದರಿಂದ, ನಿಯಮಾನುಸಾರವಾಗಿ, ಏಕಾದಶೀ ಅಥವಾ ಬೇರೆ ದಿನವು ಸೂರ್ಯೋದಯಕ್ಕಿಂತ ಮುಂಚೆ ಪ್ರಾರಂಭವಾಗುವುದಿಲ್ಲವಾದ್ದರಿಂದ ಧಾನ್ಯಗಳನ್ನು ಸೂರ್ಯೋದಯಕ್ಕಿಂತ ಮುಂಚೆ ಸೇವಿಸಬಹುದಾಗಿದೆ. ಆದರೆ, ಸಾಮಾನ್ಯವಾಗಿ ಬೆಳಗಾಗುವ ಮುಂಚಿನ ಅವಧಿಯಲ್ಲಿ ಆಹಾರ ಸೇವಿಸಬಾರದು. ವಿಶೇಷವಾಗಿ ಏಕಾದಶೀಯಂದು ಹಾಗೆ ಮಾಡಬಾರದು. ಹೀಗಾಗಿ ಏಕಾದಶೀ ಉಪವಾಸ ಮತ್ತು ಅದರ ಆಚರಣೆಗಳನ್ನು ಏಕಾದಶೀ ವ್ರತದ ದಿನದಂದು ನಿದ್ರೆಯಿಂದೆದ್ದ ನಂತರದ ವೇಳೆಯಿಂದಲೇ ಪ್ರಾರಂಭಿಸಬೇಕು. ಕೆಲವು ವೈಷ್ಣವರು ಸೂರ್ಯ್ಸ್ತದ ನಂತರ ಹಿಂದಿನ ರಾತ್ರಿ ಏನನ್ನೂ ಸೇವಿಸಬಾರದೆಂಬ ಕಠಿಣ ನಿಯಮ ಪಾಲಿಸುವುದರಲ್ಲಿ ತುಂಬ ಕಟ್ಟುನಿಟ್ಟು. ಈ ರೀತಿ ಮಾಡುವುದರಿಂದ ಏಕಾದಶೀ ದಿನದಂದು ಹೊಟ್ಟೆಯಲ್ಲಿ ಅಜೀರ್ಣವಾದ ಆಹಾರವು ಉಳಿಯದಂತೆ ನೋಡಿಕೊಳ್ಳಲು ಸಹಾಯವಾಗುವುದು.
ಶ್ರೀ ಚೈತನ್ಯ ಮಹಾಪ್ರಭುಗಳಿಂದ ಏಕಾದಶೀಯ ಆಚರಣೆ
(ಚೈತನ್ಯ ಚರಿತಾಮೃತ, ಆದಿಲೀಲಾ 15.8-10)
ಏಕ ದಿನ ಮಾತಾರ ಪದೇ ಕರಿಯಾ ಪ್ರಣಾಮ ।
ಪ್ರಭು ಕಹೇ, – ಮಾತಾ, ಮೋರೇ ದೇಹ ಏಕ ದಾನ ॥8॥
ಒಂದು ದಿನ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸಿ ತಮಗೆ ಆಕೆಯಿಂದ ಒಂದು ದಾನವು ಬೇಕಾಗಿದೆಯೆಂದು ವಿನಂತಿಸಿಕೊಂಡರು.
ಮಾತಾ ಬಲೇ, – ತಾಇ ದಿಬ, ಯಾ ತುಮಿ ಮಾಗಿಬೇ ।
ಪ್ರಭು ಕಹೇ, – ಏಕಾದಶೀತೇ ಅನ್ನ ನಾ ಖಾಇಬೇ ॥9॥
ಚೈತನ್ಯರ ತಾಯಿ ಉತ್ತರಕೊಟ್ಟರು, “ಪ್ರೀತಿಯ ಮಗನೆ, ನೀನು ಏನನ್ನಾದರೂ ಕೇಳು. ನಾನು ಅದನ್ನು ಕೊಡುವೆ.” ತರುವಾಯ ಪ್ರಭುಗಳು ನುಡಿದರು, “ಅಮ್ಮ, ಏಕಾದಶೀಯ ದಿನ ಅನ್ನ ಉಣ್ಣಬೇಡ.”

ತುಂಬ ಚಿಕ್ಕ ವಯಸ್ಸಿನವರಾಗಿದ್ದಾಗಲೇ ಶ್ರೀ ಚೈತನ್ಯ ಮಹಾಪ್ರಭುಗಳು ಏಕಾದಶೀಯ ದಿನ ಉಪವಾಸ ಮಾಡುವ ಪರಿಪಾಠವನ್ನು ಪಾಲಿಸುತ್ತಾ ಬಂದರು. ಶ್ರೀಲ ಜೀವ ಗೋಸ್ವಾಮಿಯವರು `ಭಕ್ತಿಸಂದರ್ಭ’ ಎನ್ನುವ ಗ್ರಂಥದಲ್ಲಿ ಸ್ಕಾಂದಪುರಾಣದಿಂದ ಮಾಡಿರುವ ಒಂದು ಉಲ್ಲೇಖವಿದೆ. ಏಕಾದಶೀಯ ದಿನ ಅನ್ನ ಉಣ್ಣುವುದನ್ನು ಆ ಉಲ್ಲೇಖವು ಖಂಡಿಸುತ್ತದೆ; ಅಷ್ಟೇ ಅಲ್ಲ ಏಕಾದಶೀಯ ದಿನ ಅನ್ನ ಉಣ್ಣುವವನು ತನ್ನ ತಾಯಿ, ತಂದೆ, ಸಹೋದರ ಹಾಗೂ ಗುರುವಿನ ಹತ್ಯಾಕಾರಿಯಾಗುತ್ತಾನೆ ಎನ್ನುತ್ತದೆ. ಅಂತಹ ವ್ಯಕ್ತಿಯು ವೈಕುಂಠ ಗ್ರಹಲೋಕಗಳಿಗೆ ಹೋದರೂ ಪತಿತನಾಗುತ್ತಾನೆ. ಏಕಾದಶೀಯ ದಿನ ಅನ್ನ ಹಾಗೂ ಬೇಳೆಯಂತಹ ಧಾನ್ಯಪದಾರ್ಥವನ್ನು ಬೇಯಿಸುವುದೂ ಸೇರಿದಂತೆ ಎಲ್ಲ ಬಗೆಯ ಖಾದ್ಯ ವಸ್ತುಗಳನ್ನು ವಿಷ್ಣುವಿಗಾಗಿ ತಯಾರಿಸಲಾಗುತ್ತದೆ. ಆದರೆ ವೈಷ್ಣವನು ಏಕಾದಶೀಯ ದಿನ ಆ ವಿಷ್ಣುಪ್ರಸಾದವನ್ನು ಕೂಡ ಸ್ವೀಕರಿಸಬಾರದೆಂಬ ನಿಯಮವಿದೆ. ವೈಷ್ಣವನು ವಿಷ್ಣುವಿಗೆ ನಿವೇದಿತವಾಗದ ಯಾವುದೇ ಖಾದ್ಯ ಪದಾರ್ಥವನ್ನು ಸ್ವೀಕರಿಸಬಾರದೆಂಬ ಪ್ರತಿಬಂಧಕವಿದೆ. ಆದರೆ ಏಕಾದಶೀಯ ದಿನ ವಿಷ್ಣುವಿಗೆ ಅರ್ಪಿತವಾದ ಮಹಾಪ್ರಸಾದವನ್ನು ಕೂಡ ಮುಟ್ಟಬಾರದೆಂಬ ಕಟ್ಟಳೆಯುಂಟು. ಹೀಗಿರುತ್ತ ಅಂತಹ ಪ್ರಸಾದವನ್ನು ಮರುದಿನ ಉಣ್ಣಲು ಉಳಿಸಿಕೊಳ್ಳಬಹುದು. ವಿಷ್ಣುವಿಗೆ ಅರ್ಪಿತವಾದದ್ದೇ ಆದರೂ ವ್ಯಕ್ತಿಯು ಏಕಾದಶೀಯ ದಿನ ಯಾವುದೇ ಬಗೆಯ ಧಾನ್ಯ ಆಹಾರ ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ.
ಶಚೀ ಕಹೇ, – ನಾ ಖಾಇಬ, ಭಾಲ-ಇ ಕಹಿಲಾ ।
ಸೇಇ ಹೈತೇ ಏಕಾದಶೀ ಕರಿತೇ ಲಾಗಿಲಾ ॥10॥
ತಾಯಿ ಶಚಿ ನುಡಿದರು : “ನೀನು ತುಂಬ ಒಳ್ಳೆಯದನ್ನೇ ಹೇಳಿದೆ. ಏಕಾದಶೀಯ ದಿನ ನಾನು ಧಾನ್ಯವನ್ನು ಉಣ್ಣುವುದಿಲ್ಲ.” ಆ ದಿನದಿಂದ ಆಕೆಯು ಏಕಾದಶೀಯ ದಿನ ಉಪವಾಸ ಮಾಡುವುದನ್ನು ಆರಂಭಿಸಿದರು.
ವಿಧವೆಯಾದ ಹೆಂಗಸು ಏಕಾದಶೀಯ ದಿನ ಉಪವಾಸ ಮಾಡಬೇಕೆಂತಲೂ, ಅದೇ ಸಧವೆಯು ಗಂಡನಿರುವಾಕೆ ಏಕಾದಶೀ ಉಪವಾಸ ಆಚರಿಸಬೇಕಿಲ್ಲವೆಂತಲೂ ಸ್ಮಾರ್ತರಲ್ಲಿ ಒಂದು ದುರಾಗ್ರಹಪೂರ್ವಕವಾದ ಅಭಿಪ್ರಾಯವುಂಟು. ಚೈತನ್ಯರ ತಾಯಿ ಶಚೀದೇವಿಯು ಸಧವೆ (ಗಂಡನಿರುವಾಕೆ). ಚೈತನ್ಯರು ಕೇಳಿಕೊಳ್ಳುವತನಕ ಆಕೆ ಏಕಾದಶೀಯ ದಿನ ಉಪವಾಸ ಮಾಡುತ್ತಿರಲಿಲ್ಲವೆಂದು ತೋರುತ್ತದೆ. ಏನೇ ಇದ್ದಿರಲಿ, ಒಬ್ಬ ಹೆಂಗಸು ವಿಧವೆಯಲ್ಲದಿದ್ದರೂ ಏಕಾದಶೀಯ ದಿವಸ ಉಪವಾಸ ಮಾಡಬೇಕು ಹಾಗೂ ವಿಷ್ಣುವಿಗೆ ಅರ್ಪಿತವಾದದ್ದೇ ಆದರೂ ಯಾವುದೇ ತರಹದ ಧಾನ್ಯಗಳನ್ನು ಸ್ವೀಕರಿಸಬಾರದೆಂಬ ಕಟ್ಟಳೆಯನ್ನು ಶ್ರೀ ಚೈತನ್ಯ ಮಹಾಪ್ರಭುಗಳು ಜಾರಿಗೆ ತಂದರು.
ಏಕಾದಶೀ ಉಪವಾಸ ಕುರಿತು ಶ್ರೀಲ ಪ್ರಭುಪಾದರು

“ನಿಜವಾಗಿಯೂ ನೋಡಿದರೆ ಏಕಾದಶೀ ದಿನಗಳಲ್ಲಿ ನಾವು ಆಹಾರ ತೆಗೆದುಕೊಳ್ಳ ಕೂಡದಲ್ಲದೇ ನೀರು ಸಹ ಕುಡಿಯಬಾರದು. ಆದರೆ ನಮ್ಮ ಸಂಘದಲ್ಲಿ ಅದನ್ನು ನಾವು ಅಷ್ಟೊಂದು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ನಾವು `ಏಕಾದಶೀಯಂದು ಧಾನ್ಯಗಳನ್ನು ತೆಗೆದುಕೊಳ್ಳಬೇಡಿ, ಸ್ವಲ್ಪ ಹಣ್ಣು ಮತ್ತು ಹಾಲು ತೆಗೆದುಕೊಳ್ಳಿ’ ಎಂದು ಹೇಳುತ್ತೇವೆ. ಏಕಾದಶೀ ದಿನದಂದು ಹೊಟ್ಟೆತುಂಬ ತಿನ್ನಬಾರದು. ಕೇವಲ ಸ್ವಲ್ಪ ಹಣ್ಣು ತೆಗೆದುಕೊಂಡರೆ ಸಾಕು. ಇದನ್ನೂ ಸಹ ವರ್ಜಿಸಲು ಪ್ರಯತ್ನಿಸಬೇಕು. ನೀರನ್ನೂ ಸಹ ನೀವು ಸೇವಿಸಬಾರದು. ಅದೇ ನಿಜವಾದ ಏಕಾದಶೀ. ಆದರೆ, ಕಲಿಯುಗದಲ್ಲಿ ಸಮಯ ಬದಲಾಗಿರುವುದರಿಂದ ನಮ್ಮಿಂದ ಅದನ್ನು ಪಾಲಿಸಲು ಸಾಧ್ಯವಿಲ್ಲ. ಹಾಗಾಗಿ ಸ್ವಲ್ಪ ಹಣ್ಣು ಮತ್ತು ಹಾಲು ತೆಗೆದುಕೊಳ್ಳಲು ಅವಕಾಶವಿದೆ. ಇದನ್ನು `ಅನುಕಲ್ಪ’ ಎನ್ನುತ್ತಾರೆ.”
ಏಕಾದಶೀಯಂದು ವಹಿಸಬೇಕಾದ ಕಾಳಜಿ
ಎಲ್ಲ ಭಕ್ತರೂ ಏಕಾದಶೀಯಂದು ಈ ಕೆಳಗೆ ತಿಳಿಸಿರುವ ಆಹಾರ ಪದಾರ್ಥಗಳನ್ನು ವರ್ಜಿಸಬೇಕು: ಧಾನ್ಯಗಳು (ಗೋಧಿ, ಅಕ್ಕಿ ಇತ್ಯಾದಿ) ಬೇಳೆ, ಕಡಲೆ, ಹುರುಳಿಕಾಯಿ ತರಹದ ತರಕಾರಿಗಳು, ಸಾಸಿವೆ, ಎಳ್ಳು (ಸತ್-ತಿಲ್ ಏಕಾದಶೀ ಸಂದರ್ಭವನ್ನು ಹೊರತುಪಡಿಸಿ, ಏಕೆಂದರೆ ಈ ದಿನ ಎಳ್ಳನ್ನು ಅರ್ಪಿಸಬಹುದು ಮತ್ತು ತಿನ್ನಬಹುದು). ಈ ಪದಾರ್ಥಗಳಿಂದ ತಯಾರಿಸಿದ ಇತರ ತಿನಿಸುಗಳು (ಗೋಧಿಹಿಟ್ಟು, ಸಾಸಿವೆ ಎಣ್ಣೆ, ಸೋಯಬೀನ್ ಎಣ್ಣೆ ಇತ್ಯಾದಿ) ಮತ್ತು ಈ ಪದಾರ್ಥಗಳನ್ನು ಹೊಂದಿರುವ ತಿನಿಸುಗಳು. ಉದಾ: ಪುಡಿ ಮಾಡಿದ ಮಸಾಲೆ ಪದಾರ್ಥಗಳನ್ನು ಬಳಸುವುದರಲ್ಲಿ ಕಾಳಜಿ ವಹಿಸಬೇಕು. ಮಸಾಲೆಗಳು ಒಂದು ವೇಳೆ ಹಿಟ್ಟಿನಲ್ಲಿ ಮಿಶ್ರಿತವಾಗಿದ್ದರೆ ಅದನ್ನು ಏಕಾದಶೀಯಂದು ಬಳಸಬಾರದು. ಮುಖ್ಯವಾಗಿ ವಾಣಿಜ್ಯ ಬಳಕೆಯ ದೃಷ್ಟಿಯಿಂದ ತಯಾರಿಸಿದ ಇಂಗು ಸಹ ಹಿಟ್ಟಿನೊಂದಿಗೆ ಮಿಶ್ರಿತವಾಗಿರುವುದರಿಂದ ಅದನ್ನು ಏಕಾದಶೀಯಂದು ಬಳಸುವಂತಿಲ್ಲ. ಒಂದು ವೇಳೆ ಆಕಸ್ಮಿಕವಾಗಿಯೂ ಧಾನ್ಯದ ಒಂದು ಕಾಳು ಸಹ ಬೆರೆತರೆ ಏಕಾದಶೀ ಉಪವಾಸ ಭಂಗವಾಗುತ್ತದೆ.
ಒಂದು ವೇಳೆ ಭಕ್ತರು ಏಕಾದಶೀಯಂದು ಆಕಸ್ಮಿಕವಾಗಿ ಉಪವಾಸ ವ್ರತವನ್ನು ಮುರಿದರೆ, ಮರುದಿನ ಅವರು ಉಪವಾಸವನ್ನು ಪಾಲಿಸಬೇಕು. ಭಕ್ತರೊಬ್ಬರು ಒಂದು ಸಂದರ್ಭವನ್ನು ಜ್ಞಾಪಿಸಿಕೊಳ್ಳುತ್ತಾರೆ – “ಅಡಿಗೆ ಮಾಡುತ್ತಿದ್ದ ಭಕ್ತನು ಆಹಾರದಲ್ಲಿ ತಪ್ಪಿ ಬಟಾಣಿ ಕೂಡಿಸಿದ್ದರಿಂದಾಗಿ ಭಕ್ತರು ತಮಗೆ ಅರಿವಿಲ್ಲದೇ ಏಕಾದಶೀ ಉಪವಾಸವನ್ನು ಮುರಿದರು. ಆಗ ಶ್ರೀಲ ಪ್ರಭುಪಾದರು ಕೋಪದಿಂದ ಬೈದು ಹೇಳಿದರು, “ಇನ್ನು ನೀವೆಲ್ಲರೂ ಮೂರು ದಿನಗಳವರೆಗೆ ಉಪವಾಸ ಮಾಡಬೇಕು!” ಎಲ್ಲರೂ ಈ ಮಾತು ಕೇಳಿ ದಂಗಾದರು. “ಹೌದು ಅದೇ ನಿಯಮ” ಎಂದು ಖಚಿತಪಡಿಸಿದರು ಪ್ರಭುಪಾದರು. ದಿಗ್ಭ್ರಾಂತಗೊಂಡ ನಮ್ಮ ಮುಖಗಳನ್ನು ನೋಡಿದ ನಂತರ ಪ್ರಭುಪಾದರು ತಮ್ಮ ಮನಸ್ಸು ಬದಲಾಯಿಸಿ ನಾವೆಲ್ಲರೂ ಏಕಾದಶೀಯನ್ನು ಆ ದಿನವಿಡೀ ಆಚರಿಸಬೇಕು ಮತ್ತು ನಾಳೆ ದ್ವಾದಶಿಯಂದು ಮತ್ತೆ ಏಕಾದಶೀ ಪಾಲಿಸಬೇಕು ಎಂದು ಹೇಳಿದರು.”

ಇಲ್ಲಿ ಮುಖ್ಯ ಸಿದ್ಧಾಂತವು ಬರೀ ಉಪವಾಸ ಮಾಡುವುದು ಮಾತ್ರವಲ್ಲ. ಆದರೆ ಗೋವಿಂದ ಅಥವಾ ಕೃಷ್ಣನ ಪ್ರತಿ ನಮ್ಮ ನಂಬಿಕೆಯನ್ನು ಹೆಚ್ಚಿಸಿಕೊಳ್ಳುವುದಾಗಿದೆ. ಏಕಾದಶೀಯಂದು ಉಪವಾಸವನ್ನಾಚರಿಸುವುದಕ್ಕೆ ನಿಜವಾದ ಕಾರಣವೆಂದರೆ ನಮ್ಮ ಶರೀರದ ಬೇಡಿಕೆಗಳನ್ನು ಕಡಮೆ ಮಾಡಿ ಮಂತ್ರ ಪಠನ ಅಥವಾ ಭಕ್ತಿಸೇವೆಯಿಂದ ಚಟುವಟಿಕೆಗಳ ಮೂಲಕ ಭಗವಂತನ ಸೇವೆಯಲ್ಲಿ ಸಮಯ ಕಳೆಯುವುದಾಗಿದೆ. ಉಪವಾಸದ ದಿನಗಳಲ್ಲಿ ಮಾಡಬಹುದಾದ ಅತ್ಯುತ್ತಮ ಕಾರ್ಯವೆಂದರೆ ಗೋವಿಂದನ ಲೀಲೆಗಳನ್ನು ನೆನೆಯುವುದು ಮತ್ತು ಅವನ ಪವಿತ್ರ ಹೆಸರನ್ನು ಸತತವಾಗಿ ಶ್ರವಣ ಮಾಡುವುದು.






Leave a Reply