ಸಾವಿರ ಸಾವಿರ ವರ್ಷಗಳ ಹಿಂದೆ ಉತ್ತಾನಪಾದ ಅನ್ನುವ ರಾಜ ಇದ್ದ. ಅವನಿಗೆ ಇಬ್ಬರು ಹೆಂಡತಿಯರು. ದೊಡ್ಡವಳು ಸುನೀತಿ, ಚಿಕ್ಕವಳು ಸುರುಚಿ. ಸುನೀತಿಯ ಮಗ ಧ್ರುವ. ಸುರುಚಿಯ ಮಗ ಉತ್ತಮ. ರಾಜನಿಗೆ ಕಿರಿಯ ಹೆಂಡತಿ ಸುರುಚಿ ಅಂದ್ರೆ ತುಂಬಾ ಪ್ರೀತಿ. ಅದಕ್ಕೇ ಅವಳಿಗೆ ವಿಪರೀತ ಜಂಭ. ಅವಳಿಗೆ ಧ್ರುವನ ಮೇಲೆ ಒಂಥರಾ ತಾತ್ಸಾರ. ರಾಜನಿಗೂ ಅವನನ್ನ ಮುದ್ದಿಸಲಿಕ್ಕೆ ಬಿಡ್ತಿರಲಿಲ್ಲ. ಉತ್ತಮನಿಗೂ ಅವನ ಜೊತೆ ಆಟವಾಡ್ಲಿಕ್ಕೆ ಬಿಡ್ತಿರ್ಲಿಲ್ಲ.

ಒಂದಿನ ಧ್ರುವ ತನ್ನ ತಂದೆ ಇದ್ದಲ್ಲಿಗೆ ಬಂದ. ಆಗ ಉತ್ತಮ, ರಾಜನ ತೊಡೆ ಮೇಲೆ ಆಟವಾಡ್ತಿದ್ದ. ಧ್ರುವನಿಗೂ ಅವನ ತೊಡೆಮೇಲೆ ಕೂರ್ಬೇಕು ಅಂತ ಆಸೆಯಾಯ್ತು. ಉತ್ತಾನಪಾದನಿಗೂ ಅದು ಇಷ್ಟವೇ. ಇನ್ನೇನು ಮಗು ತಂದೆಯ ತೊಡೆ ಮೇಲೆ ಏರ್ಬೇಕು, ಎಲ್ಲಿದ್ಲೋ ಸುರುಚಿ, ಜೋರಾಗಿ ಅಬ್ಬರಿಸಿಬಿಟ್ಲು. “ಧ್ರುವ, ನಿಂಗೆ ರಾಜನ ತೊಡೆ ಮೇಲೆ ಕೂರ್ಲಿಕ್ಕೆ ಯೋಗ್ಯತೆ ಇಲ್ಲ. ನಡಿ ಇಲ್ಲಿಂದ” ಅಂದು ಬಿಟ್ಲು. ಪಾಪ, ಧ್ರುವನಿನ್ನೂ ಐದು ವರ್ಷದ ಪುಟ್ಟ ಹುಡುಗ. ಅವನಿಗೆ ಕೋಪ, ದುಃಖ, ಹಠ ಎಲ್ಲಾ ನುಗ್ಗಿ ಬಂದ್ವು. ಜಂಭಗಾತಿ ಸುರುಚಿ, “ನೀನು ನನ್ನ ಹೊಟ್ಟೇಲಿ ಹುಟ್ಟಿದ್ದಿದ್ರೆ ನಿಂಗೂ ಈ ಅವಕಾಶ ಸಿಗ್ತಿತ್ತು. ನಿಂಗೆ ಆ ಯೋಗ್ಯತೆ ಇಲ್ಲ. ರಾಜನ ತೊಡೆಯೇರ್ಬೇಕು ಅಂದ್ರೆ, ತಪಸ್ಸು ಮಾಡಿ ನನ್ ಹೊಟ್ಟೇಲಿ ಹುಟ್ಟಿ ಬಾ!” ಅಂದಳು.
ಧ್ರುವ ತಂದೆಯ ಮುಖ ನೋಡಿದ. ರಾಜ, ತನ್ನ ಪ್ರೀತಿಯ ಹೆಂಡತಿಗೆ ಎದುರು ಹೇಳುವ ಮನಸ್ಸಿಲ್ದೆ ತಲೆ ತಗ್ಗಿಸಿ ಕುಳಿತುಬಿಟ್ಟಿದ್ದ. ಧ್ರುವನಿಗೆ ಅವಮಾನವಾದಂತಾಯ್ತು. ಸೀದಾ ಅಮ್ಮನ ಬಳಿಗೋಡಿದ. ಸುನೀತಿಯನ್ನ ನೋಡಿದೊಡನೆ `ಹೋ….’ ಅಂತ ಅತ್ತುಬಿಟ್ಟ. ಅಮ್ಮ ಅವನನ್ನ ಮುದ್ದಿಸಿ ಸಮಾಧಾನ ಮಾಡಿದಳು. ಸೇವಕಿಯಿಂದ ನಡೆದ ವಿಷಯವೆಲ್ಲ ಅವಳಿಗೆ ಗೊತ್ತಾಯ್ತು. ಮಗನ ಕಣ್ಣೀರು ಒರೆಸ್ತಾ “ಸುರುಚಿ ಹೇಳಿದ ಹಾಗೆ ನಾರಾಯಣನನ್ನು ಕುರಿತು ತಪಸ್ಸು ಮಾಡು ಮಗೂ” ಅಂತ ಹೇಳಿದಳು ಸುನೀತಿ.
ಅಮ್ಮನ ಮಾತಿಂದ ಧ್ರುವನಿಗೆ ಸಮಾಧಾನವಾಯ್ತು. ಹಿಂದೆ ಮುಂದೆ ನೋಡದೆ ಮನೆಯಿಂದ ಹೊರಟುಬಿಟ್ಟ. ದಾರಿಯಲ್ಲಿ ನಾರದ ಮುನಿಗಳು ಸಿಕ್ಕು, ತಪಸ್ಸು ಮಾಡುವ ವಿಧಾನಗಳನ್ನು ಹೇಳಿಕೊಟ್ಟರು. ಯಮುನಾತೀರದ ಮಧುವನದಲ್ಲಿ ಭಗವಂತನನ್ನ ಧ್ಯಾನಿಸು ಅಂತ ಹೇಳಿದರು.

ನಾರದರ ಮಾತಿನಂತೆ ಧ್ರುವ ಮಧುವನಕ್ಕೆ ಹೋದ. ಮೊದಲು ಉಪವಾಸ ಮಾಡಿ, ಸ್ನಾನ ಮಾಡಿ, ಭಗವಂತನನ್ನ ನೆನೆದ. ಮೊದಲ ತಿಂಗಳಿಡೀ ಒಂದಿಷ್ಟು ಹಣ್ಣು ಹಂಪಲು ತಿನ್ನುತ್ತ ಏಕಾಗ್ರತೆಯಿಂದ ನಾರಾಯಣನ ಧ್ಯಾನ ಮಾಡಿದ. ಎರಡನೇ ತಿಂಗಳಲ್ಲಿ ಆರು ದಿನಕ್ಕೊಮ್ಮೆ ಒಣಹುಲ್ಲು, ಎಲೆಗಳನ್ನು ತಿನ್ನುತ್ತ ಭಗವಂತನನ್ನು ಜಪಿಸಿದ. ಮೂರನೆ ತಿಂಗಳು ಪೂರ್ತಿ ಒಂಬತ್ತು ದಿನಕ್ಕೊಮ್ಮೆ ಕೇವಲ ನೀರು ಕುಡಿಯುತ್ತ ಭಗವಂತನ ತಪಸ್ಸಿನಲ್ಲಿ ನಿರತನಾದ. ನಾಲ್ಕನೆ ತಿಂಗಳಲ್ಲಿ ಹನ್ನೆರಡು ದಿನಕ್ಕೊಮ್ಮೆ ಗಾಳಿಯನ್ನು ಸೇವಿಸುತ್ತ ನಾರಾಯಣನ ಧ್ಯಾನದಲ್ಲಿ ಮುಳುಗಿಹೋದ. ಐದನೆಯ ತಿಂಗಳಲ್ಲಿ ಒಂಟಿ ಕಾಲಿನಲ್ಲಿ ನಿಂತು ಭಗವಂತನ ತಪಸ್ಸಿಗೆ ತೊಡಗಿದ.

ಇನ್ನು ಭಗವಂತನಿಗೆ ತಡೆಯಲಾಗಲಿಲ್ಲ. ಪುಟ್ಟ ಬಾಲಕನ ಬೆಟ್ಟದಂತಹ ಭಕ್ತಿ ಅವನನ್ನು ಸೆಳೆಯಿತು. ಆರು ತಿಂಗಳ ಕಾಲ ಕಠಿಣ ನಿಯಮಗಳಿಂದ ತಪಸ್ಸಿಗೆ ತೊಡಗಿದ್ದ ಬಾಲಕನ ಬಳಿ ಬಂದ. ಧ್ರುವನಿಗೆ ಭಗವಂತ ಬಂದಿರುವ ಸುಳಿವು ತಿಳಿಯಿತು. ದಂಗಾಗಿ ಹೋದ! ಖುಷಿಯಿಂದ ಮಾತೇ ಹೊರಡಲಿಲ್ಲ. ಶ್ರೀ ನಾರಾಯಣ, ತನ್ನ ಶಂಖದಿಂದ ಧ್ರುವನ ಹಣೆ ಮುಟ್ಟಿದ. ಈಗಂತೂ ಧ್ರುವನನ್ನು ಹಿಡಿಯುವವರೇ ಇಲ್ಲ! ಪರಮಾನಂದವೇ ಅವನಿಗೆ ಸಿಕ್ಕಿ ಬಿಟ್ಟಿತ್ತು!! ಭಗವಂತ ಅವನಿಗೆ ಮಧುರವಾದ ದನಿಯಲ್ಲಿ `ಏನು ವರಬೇಕು ಕೇಳು ಮಗೂ’ ಎಂದ.

ಧ್ರುವ ತಪಸ್ಸಿಗೆ ತೊಡಗಿದ್ದ ಕಾರಣಗಳು ಏನೇ ಇದ್ದರೂ ಅವನಿಗೀಗ ಅವೆಲ್ಲ ನಗಣ್ಯವೆನಿಸತೊಡಗಿತು. ಅವನಿಗೆ ಏನೂ ತೋಚಲಿಲ್ಲ. ಕೊನೆಗೆ ಭಗವಂತನೇ ಅವನಿಗೆ ನಕ್ಷತ್ರಲೋಕವನ್ನೂ, 36 ಸಾವಿರ ವರ್ಷ ಕಾಲ ರಾಜ್ಯ ಪದವಿಯನ್ನೂ, ಮುಕ್ತಿಯನ್ನೂ ದಯಪಾಲಿಸಿದ.
ಇತ್ತ ನಾರದರಿಂದ ಉತ್ತಾನಪಾದನಿಗೆ ಧ್ರುವನ ಸಾಧನೆ ತಿಳಿಯಿತು ತಪಸ್ಸಿನಿಂದ ಮರಳುತ್ತಿದ್ದ ಮಗನನ್ನ ತಾನೇ ಹೋಗಿ ಸ್ವಾಗತಿಸಿದ. ಅಪ್ಪಿ ಮುದ್ದಾಡಿದ. ಸುರುಚಿಗೆ ಅವನನ್ನು ತಡೆಯುವ ಬಲವೇ ಉಳಿದಿರಲಿಲ್ಲ! ಉತ್ತಮನೂ ಧ್ರುವನ ಜೊತೆ ಆಡಲು ತೊಡಗಿದ. ಭಕ್ತ ಧ್ರುವನ ಬಾಲ್ಯ ಜೀವನ ಸಂತೋಷದಿಂದ ತುಂಬಿಹೋಯ್ತು. ಅವನ ತಾಯಿ ಸುನೀತಿಗೂ ಗೌರವ ಮರ್ಯ್ದೆಗಳು ದೊರೆತವು. ಅವರೆಲ್ಲರೂ ದೀರ್ಘ ಕಾಲ ಸುಖವಾಗಿದ್ದರು.
ಮುಂದೆ ಉತ್ತಾನಪಾದ ರಾಜ್ಯವನ್ನು ಧ್ರುವನಿಗೊಪ್ಪಿಸಿ ಕಾಡಿಗೆ ಹೋದ. ಧ್ರುವ ಮಹಾರಾಜ 36 ಸಾವಿರ ವರ್ಷಕಾಲ ರಾಜ್ಯವಾಳಿ, ವಿಷ್ಣುದೂತರು ತಂದ ವಿಮಾನವನ್ನೇರಿ ಶ್ರೀಮನ್ನಾರಾಯಣನು ದಯಪಾಲಿಸಿದ ಧ್ರುವ ಎಂಬ ನಕ್ಷತ್ರ ಲೋಕಕ್ಕೆ ತೆರಳಿದ. ಅವನಮ್ಮ ಸುನೀತಿಗೂ ಆ ಭಾಗ್ಯ ಲಭಿಸಿತು.
ಭಗವಂತನ ಕೋಪಕ್ಕೆ ತುತ್ತಾಗಿದ್ದ ಉತ್ತಮ, ಬೇಟೆಗೆ ಹೋದಾಗ ಕಾಡುಪ್ರಾಣಿಗಳಿಂದ ಹತನಾದ. ಸುರುಚಿ ಕಾಳ್ಗಿಚ್ಚಿಗೆ ಬಲಿಯಾದಳು.
ಇಂದಿಗೂ ನಾವು ಆಕಾಶದಲ್ಲಿ ಧ್ರುವನಕ್ಷತ್ರವನ್ನು ನೋಡಬಹುದು. ಧ್ರುವ ಮಹಾರಾಜ ತನ್ನ ಕಥೆಯನ್ನು ನೆನಪಿಸುತ್ತ ಅಲ್ಲಿ ವಾಸಿಸಿರುವನು.






Leave a Reply