ಆಸ್ತಿ ಮತ್ತು ಪ್ರಾಪ್ತಿ ಎಂಬುವರು ಕಂಸನ ರಾಣಿಯರು. ಇವರು ಮಗಧ ದೇಶದ ರಾಜನಾದ ಜರಾಸಂಧನ ಮಕ್ಕಳು. ಕಂಸನು ಶ್ರೀಕೃಷ್ಣನಿಂದ ಹತನಾದ ಮೇಲೆ ಆಸ್ತಿ-ಪ್ರಾಪ್ತಿ ವಿಧವೆಯರಾದರು. ಜರಾಸಂಧ ತುಂಬಾ ಬಲಾಢ್ಯ ದೈತ್ಯ ರಾಜನಾಗಿದ್ದ. ಭುಜಬಲ ಪರಾಕ್ರಮದಲ್ಲಿ ನಿಸ್ಸೀಮನಾಗಿದ್ದ. ಕಂಸನಂತೆ ಅವನೂ ಸಹ ಯಾದವರ ಪರಮ ದ್ವೇಷಿಯಾಗಿದ್ದ. ಹಿಂದೆ ಅವನು `ಕೃಷ್ಣ-ಬಲರಾಮರ ನಾಶಕ್ಕೆ ನೀನು ಪ್ರಯತ್ನಿಸು. ನಿನಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಕಂಸನಿಗೆ ತಿಳಿಸಿದ್ದ.
ಈಗ ಕೃಷ್ಣ-ಬಲರಾಮರ ವಿಚಾರದಲ್ಲಿ ಅವನ ರೋಷ-ದ್ವೇಷಗಳು ಇಮ್ಮಡಿಗೊಂಡವು. ಯಾದವ ವಂಶವನ್ನೇ ನಿರ್ಮೂಲನ ಮಾಡಬೇಕು ಎಂದು ಶಪಥ ಮಾಡಿಕೊಂಡ.
ಅವನು ಹದಿನೇಳು ಸಲ ಯಾದವರ ಮೇಲೆ ಯುದ್ಧಕ್ಕೆ ಬಂದ. ಆದರೆ ಅಷ್ಟು ಸಲವೂ ಸೋತು, ತನ್ನ ಸೈನ್ಯ ಶಕ್ತಿಯನ್ನು ನೀಗಿಕೊಂಡು ಏಕಾಂಗಿಯಾಗಿ ಮಗಧಕ್ಕೆ ಹಿಂದಿರುಗಬೇಕಾಯಿತು. ಕಡೆಗೆ ಅವನು ಭಂಡ ಧೈರ್ಯ ಮಾಡಿ ಹದಿನೆಂಟನೆಯ ಸಲವೂ ಮುತ್ತಿಗೆ ಹಾಕಲು ಸೇನಾ ಸಮೇತನಾಗಿ ಮಥುರೆಗೆ ಹೊರಟ.
ಅದೇ ಸಮಯದಲ್ಲಿ ನಾರದ ಮುನಿಗಳಿಂದ ಪ್ರೇರಣೆ ಪಡೆದ ಕಾಲಯವನನೆಂಬ ಮಹಾ ಬಲಿಷ್ಠನಾದ ದೈತ್ಯನು ಯಾದವರ ವಿರುದ್ಧ ಹೋರಾಡಲು ಅಲ್ಲಿಗೆ ಬಂದ. ಇದು ಭಗವಂತನ ಸಂಕಲ್ಪವೇ ಆಗಿತ್ತು. ಕೃಷ್ಣನು ಸಮುದ್ರದ ನಡುಭಾಗದಲ್ಲಿ ದ್ವಾರಕಾ ನಗರವನ್ನು ನಿರ್ಮಾಣ ಮಾಡಿಸಿದ. ಮಥುರೆಯಲ್ಲಿದ್ದ ಸಮಸ್ತ ಯಾದವರನ್ನೂ ದ್ವಾರಕೆಗೆ ತಂದು ಬಿಟ್ಟ. ಅಲ್ಲಿ ಎಲ್ಲರೂ ಸುರಕ್ಷಿತವಾಗಿ ಇರತೊಡಗಿದರು. ಆ ವೇಳೆಗಾಗಲೇ ಕಾಲಯವನನು ಮಥುರೆಗೆ ಬಂದು ಸೇರಿದ್ದ. ಅಲ್ಲಿ ಯಾದವರು ಕಾಣದಿರುವುದನ್ನು ನೋಡಿ ಅವನು ಆಶ್ಚರ್ಯಪಡುತ್ತಿದ್ದ. ಅಷ್ಟರಲ್ಲಿ ಶ್ರೀಕೃಷ್ಣನು ಬೇಕೆಂದೇ ಅವನಿಗೆ ಕಾಣಿಸುವಂತೆ ಮಥುರೆಯ ಮಹಾದ್ವಾರದಿಂದ ನಡೆದು ಹೊರಟ. ಕಾಲಯವನನು ಕೃಷ್ಣನನ್ನು ನೋಡಿ ಅವನೇ ಕೃಷ್ಣ ಎಂದು ಗುರುತಿಸಿದ. ಅವನೊಡನೆ ಯುದ್ಧಮಾಡಿ, ಅವನನ್ನು ಸಂಹರಿಸಬೇಕು ಎಂದು ಯೋಚಿಸಿದ. ಬಳಿಕ ಅವನು ಬೇಗ ಬೇಗ ಹೆಜ್ಜೆ ಹಾಕುತ್ತಾ ಹೊರಟಿದ್ದ ಕೃಷ್ಣನನ್ನು ಹಿಡಿಯಲು ಹಿಂದಿನಿಂದ ಓಡತೊಡಗಿದ. ಕೃಷ್ಣನು ಅವನ ಕಣ್ಣಿಗೆ ತುಂಬಾ ಹತ್ತಿರದಲ್ಲಿ ಹೋಗುತ್ತಿರುವಂತೆ ಕಾಣಿಸುತ್ತಿದ್ದ. ಕಾಲಯವನನು ಕೃಷ್ಣ ಸಿಕ್ಕಿದ… ಸಿಕ್ಕಿದ, ಎಂದುಕೊಳ್ಳುತ್ತಾ ಅಲ್ಲಿಗೆ ಹೋಗುವಷ್ಟರಲ್ಲಿ ಕೃಷ್ಣ ಇನ್ನೂ ಮುಂದೆ ಇರುತ್ತಿದ್ದ. ಕೃಷ್ಣನು ಹೀಗೆಯೇ ಆ ಅಸುರನನ್ನು ನಡೆಸಿಕೊಂಡು ಬಹುದೂರ ಹೋಗಿ ಒಂದು ಕಾಡನ್ನು ತಲಪಿದ. ಅಲ್ಲಿ ಕಾಲಯವನನು ನೋಡು ನೋಡುತ್ತಿದ್ದಂತೆ ಅವನು ಒಂದು ಗುಹೆಯನ್ನು ಹೊಕ್ಕ.

ಅಲ್ಲಿಯೂ ಕಾಲಯವನ ಹಿಂಬಾಲಿಸಿದ. ಆದರೆ ಅವನು ಗುಹೆಯ ಒಳಗೆ ಹೋಗಿ ನೋಡಿದಾಗ ಅಲ್ಲಿ ಕೃಷ್ಣ ಕಾಣಿಸಲಿಲ್ಲ. ಸ್ವಲ್ಪ ದೂರದಲ್ಲಿ ಒಬ್ಬ ವ್ಯಕ್ತಿ ಮಲಗಿರುವುದು ಅಸ್ಪಷ್ಟವಾಗಿ ಕಾಣಿಸಿತು. ಕಾಲಯವನನು ಅಲ್ಲಿ ಮಲಗಿರುವ ವ್ಯಕ್ತಿ ಕೃಷ್ಣನೆಂದೇ ತಿಳಿದು ಕೋಪದಿಂದ ಅವನನ್ನು ಬಲವಾಗಿ ಒದ್ದುಬಿಟ್ಟ. ಆ ಒದೆತದಿಂದ ಎಚ್ಚರಗೊಂಡ ವ್ಯಕ್ತಿ ಎದ್ದು ಕುಳಿತ. ಅವನ ದೃಷ್ಟಿ ಕಾಲಯವನನ ಮೇಲೆ ಬೀಳುವುದೇ ತಡ, ಕಾಲಯವನನ ಮೈಯಲ್ಲಿ ಭಯಂಕರ ಬೆಂಕಿಯ ಜ್ವಾಲೆಗಳೆದ್ದವು. ಆ ಜ್ವಾಲೆಗಳು ಒಂದೆರಡು ಕ್ಷಣಗಳಲ್ಲೇ ಅವನನ್ನು ಸುಟ್ಟು ಬೂದಿಮಾಡಿಬಿಟ್ಟವು. ಹಾಗೆ ಕಣ್ಣು ಬಿಟ್ಟು ನೋಡಿದ ವ್ಯಕ್ತಿಯ ಹೆಸರು ಮುಚುಕುಂದ ಎಂದು.
ಪುರಾಣ ಯುಗದಲ್ಲಿ ಇಕ್ಷ್ವಾಕು ಕುಲದಲ್ಲಿ ಮಾಂಧಾತ ಎಂಬ ರಾಜನಿದ್ದ. ಅವನ ಹೆಸರೇ ಮುಚುಕುಂದ. ಈ ಮುಚುಕುಂದ ಪರಮ ದೈವಭಕ್ತನಾಗಿದ್ದ. ಅತಿ ಬಲಾಢ್ಯನೂ ಹಾಗೂ ಸಮರಶೂರನೂ ಆಗಿದ್ದ.
ಆಗ ಬಲಿಷ್ಠ ರಾಕ್ಷಸರಿಂದ ದೇವತೆಗಳು ದಿನನಿತ್ಯವೂ ಉಪದ್ರವಗಳನ್ನು ಸಹಿಸುತ್ತಿದ್ದರು. ಅವರು ತಮ್ಮ ರಕ್ಷಣೆಗಾಗಿ ಬರಬೇಕೆಂದು ಮುಚುಕುಂದನನ್ನು ಕೋರಿಕೊಂಡರು. ಮುಚುಕುಂದನು ಆ ರಕ್ಕಸರ ಸೊಕ್ಕು ಮುರಿಯಲು ಸಮರ್ಥನಾಗಿದ್ದ.
ಅವನು ಸ್ವರ್ಗಕ್ಕೆ ಹೋದಮೇಲೆ ದೇವತೆಗಳ ರಕ್ಷಣೆಗಾಗಿ ಎಷ್ಟೋ ವರ್ಷಗಳ ಕಾಲ ನಿದ್ದೆಗೆಟ್ಟು, ಸಾಕಷ್ಟು ಸಲ ಯುದ್ಧಗಳನ್ನು ಮಾಡಿ ತುಂಬಾ ಆಯಾಸಗೊಂಡಿದ್ದ. ನಿದ್ದೆಯೇ ಇಲ್ಲದೆ ತುಂಬಾ ಕಂಗಾಲಾಗಿ ಹೋಗಿದ್ದ. ಆದುದರಿಂದ ಅವನು ತಾನು ಭೂಲೋಕಕ್ಕೆ ಹೋದಮೇಲೆ ಹಾಯಾಗಿ ಮಲಗಿ ದೀರ್ಘಕಾಲ ನಿದ್ರಿಸುವಂತೆಯೂ,ತನ್ನನ್ನು ಎಚ್ಚರಗೊಳಿಸುವ ವ್ಯಕ್ತಿಯನ್ನು ತಾನು ದಿಟ್ಟಿಸಿ ನೋಡಿದ ಕೂಡಲೇ ಅವನು ಸುಟ್ಟು ಬೂದಿಯಾಗುವಂತೆಯೂ ವರವನ್ನು ಕೇಳಿ ಪಡೆದುಕೊಂಡ. ಬಳಿಕ ಭೂಲೋಕಕ್ಕೆ ಬಂದು ಒಂದು ಪರ್ವತದ ಗುಹೆಯಲ್ಲಿ ಹಾಯಾಗಿ ಮಲಗಿಬಿಟ್ಟ.
ಅವನು ಅಲ್ಲಿ ಮಲಗಿ ಎಷ್ಟೋ ವರ್ಷಗಳು ಉರುಳಿಹೋಗಿದ್ದವು. ಒಮ್ಮೆಯೂ ಅವನಿಗೆ ಎಚ್ಚರವಾಗಲಿಲ್ಲ. ಕಾಲಯವನನು ಒದ್ದು ಎಚ್ಚರಗೊಳಿಸಿದ್ದು ಇವನನ್ನೇ. ಒಟ್ಟಿನಲ್ಲಿ ಈ ಮುಚುಕುಂದನ ನೆಪದಲ್ಲಿ ಮಹಾ ಉಪದ್ರವಿಯಾಗಿದ್ದ ಕಾಲಯವನನು ನಾಶಗೊಂಡಂತಾಯಿತು. ಅವನು ನಾಶಗೊಂಡ ಮೇಲೆ ಭಗವಂತನು ಮುಚುಕುಂದನಿಗೆ ತನ್ನ ದಿವ್ಯ ಸ್ವರೂಪವನ್ನು ತೋರಿಸಿ ಮುಕ್ತಿಯನ್ನು ಕರುಣಿಸಿದ.






Leave a Reply