ವ್ಯಕ್ತಿಯು ಮನೆಯನ್ನು ತ್ಯಜಿಸಿ ಆತ್ಮ ಸಂಯಮವನ್ನು ಅಭ್ಯಾಸ ಮಾಡಬೇಕು. ಒಂದು ಪವಿತ್ರ ಸ್ಥಳದಲ್ಲಿ ತಪ್ಪದೇ ಸ್ನಾನಮಾಡಬೇಕು ಮತ್ತು ಶುಚಿಯಾದ ಏಕಾಂತ ಸ್ಥಳದಲ್ಲಿ ಕುಳಿತುಕೊಳ್ಳಬೇಕು. – (ಶ್ರೀಮದ್ ಭಾಗವತ, 2.1.16).
ಸಾಯುತ್ತಿರುವ ಮನುಷ್ಯನ ಕರ್ತವ್ಯಗಳೇನು ಎಂದು ಪರೀಕ್ಷಿತ ಮಹಾರಾಜನು ಶುಕದೇವ ಗೋಸ್ವಾಮಿ ಅವರನ್ನು ಕೇಳಿದ. ಅವರು ನೀಡಿದ ಖಚಿತ ಉತ್ತರವು ಇಡೀ ಭಾಗವತ. ಆದುದರಿಂದ ಎಲ್ಲ ಮಾನವ ಜೀವಿಗಳಿಗಾಗಿಯೇ ಭಾಗವತ ಧರ್ಮ ಇರುವುದು ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ. ಭಾಗವತ ಧರ್ಮವನ್ನು ಇಡೀ ಜಗತ್ತಿನಲ್ಲಿಯೇ ಬೋಧಿಸಿ ಎಂದು ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ.

ಶುಕದೇವ ಗೋಸ್ವಾಮಿ ಅವರು `ಓಂ ನಮೋ ಭಗವತೇ ವಾಸುದೇವಾಯ’ ಎಂಬ ಪ್ರಾರ್ಥನೆಯೊಂದಿಗೆ ಆರಂಭಿಸುತ್ತಾರೆ. ಶ್ರೀಲ ಪ್ರಭುಪಾದರು `ಓಂ’ ಅನ್ನು `ಓ, ನನ್ನ ದೇವರೇ’ ಎಂದು ಅನುವಾದಿಸಿದ್ದಾರೆ. ನಿರಾಕಾರವಾದಿಗಳು ಓಂ ಶಬ್ದವನ್ನು ಉಚ್ಚರಿಸಿದರೆ ಭಕ್ತರು ದೇವೋತ್ತಮನ ದಿವ್ಯ ನಾಮವನ್ನು ಜಪಿಸುತ್ತಾರೆ. ಪವಿತ್ರ ಅಕ್ಷರ ಓಂ ಅನ್ನು ಉಚ್ಚರಿಸಿ ಧ್ಯಾನಿಸಬಹುದು ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ.
ಓಂ ಜಪಿಸಲು ಅನೇಕ ನಿರ್ಬಂಧಗಳಿವೆ. ಆದರೆ ಹರೇ ಕೃಷ್ಣ ಮಂತ್ರವನ್ನು ಜಪಿಸಲು ಅಂತಹ ನಿರ್ಬಂಧಗಳಿಲ್ಲ ಎಂದು ಪ್ರಭುಪಾದರು ಹೇಳುತ್ತಾರೆ. ಓಂ ಜಪಿಸಲು ಇರುವ ಮುಖ್ಯವಾದ ನಿರ್ಬಂಧವೆಂದರೆ ವ್ಯಕ್ತಿಯು ಬ್ರಹ್ಮಚರ್ಯ ವ್ರತವನ್ನು ಆಚರಿಸಬೇಕು. ಆದರೆ ಹರೇ ಕೃಷ್ಣ ಮಂತ್ರ ಜಪಿಸಲು ಈ ನಿರ್ಬಂಧವಿಲ್ಲ. ಭಾಗವತದಲ್ಲಿ ಶುಕದೇವ ಗೋಸ್ವಾಮಿ ಅವರು ಪ್ರಾರ್ಥನೆಯೊಂದಿಗೆ ಆರಂಭಿಸಿದಾಗ ಓಂ ಜಪಿಸುತ್ತ ಕೃಷ್ಣನನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಪ್ರಭುಪಾದರು ಹೇಳುತ್ತಾರೆ. ಪರಮ ಸತ್ಯವನ್ನು ಮೂರು ಅಂಶಗಳಿಂದ ಅರ್ಥಮಾಡಿಕೊಳ್ಳಲಾಗುತ್ತದೆ: ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಬ್ದ್ಯತೇ – ಅಂದರೆ ದೈವ ಸಾಕ್ಷಾತ್ಕಾರದಲ್ಲಿ ಭಗವಾನ್ ಎನ್ನುವುದು ಅಂತಿಮ ಶಬ್ದ. ಅವನು ಪರಮ ಸತ್ಯದ ಅತ್ಯುನ್ನತ ಗ್ರಹಿಕೆ ಮತ್ತು ಶುಕದೇವ ಗೋಸ್ವಾಮಿ ಅವರು ಆ ಭಗವಂತನನ್ನು ಭಗವತೇ ವಾಸುದೇವಾಯ ಎಂದು ಉಲ್ಲೇಖಿಸಿದರು. ವಾಸುದೇವ ಎಂದರೆ ಕೃಷ್ಣ.
ಪರೀಕ್ಷಿತನಿಗೆ ಉತ್ತರಿಸುವ ಮುನ್ನವೇ ಶುಕದೇವ ಗೋಸ್ವಾಮಿ ಅವರು ಆ ಪ್ರಶ್ನೆಯನ್ನು ಶ್ಲಾಘಿಸುತ್ತಾರೆ. ಕೌಟುಂಬಿಕ ಜೀವನ ಅಥವಾ ಲೌಕಿಕ ಕರ್ತವ್ಯಗಳಿಂದ ನಿವೃತ್ತರಾದವರಿಗೆ ಮಾತ್ರವಲ್ಲ, ಎಲ್ಲ ಅಲೌಕಿಕವಾದಿಗಳಿಗೂ ಅದು ಪ್ರಸ್ತುತವಾಗಿದೆ ಎಂದು ಅವರು ಹೇಳುತ್ತ ತಮ್ಮ ಉತ್ತರವನ್ನು ಆರಂಭಿಸುತ್ತಾರೆ – `ನೃಣಾಂ ಸಂತಿ ಸಹಸ್ರಶಃ ಶ್ರೋತವ್ಯಾದೀನಿ ರಾಜೇಂದ್ರ’ ಜನರಿಗೆ ಅನೇಕ ಶ್ರವಣ ವಿಷಯಗಳಿವೆ. ಆದರೆ ಅವರು ಸಾಮಾನ್ಯವಾಗಿ ಕೃಷ್ಣನನ್ನು ಕುರಿತು ಕೇಳುವುದಿಲ್ಲ. ಏಕೆಂದರೆ ಅವರು ಸ್ವಯಂ ಸಾಕ್ಷಾತ್ಕಾರದಲ್ಲಿ ಅಂಧರು – `ಅಪಶ್ಯತಾಂ ಆತ್ಮ ತತ್ತ್ವಂ’– ಏಕೆಂದರೆ ಅವರು `ಗೃಹೇಷು ಗೃಹ ಮೇಧಿನಾಂ’ – ಸೌಲಭ್ಯವುಳ್ಳ ಮನೆಗೆ ಅಂಟಿಕೊಂಡಿರುವವರು.

ಅಸೂಯೆಯ ಗೃಹಸ್ಥ
ಪರೀಕ್ಷಿತ ಮಹಾರಾಜನು ಪರಿಪೂರ್ಣ ಭಕ್ತ. ಹೀಗಾಗಿ ಅವನು ಸಾಮಾನ್ಯ ಜನರ ಪರವಾಗಿ ಈ ಪ್ರಶ್ನೆ ಕೇಳಿದ. ಶುಕದೇವ ಗೋಸ್ವಾಮಿ ಅವರು ಈ ಜನರ ಮನಸ್ಥಿತಿಯನ್ನು ವಿವರಿಸಿದ್ದಾರೆ. ಚರ್ಚೆಗೆ ಬೇರೆ ಬೇರೆ ಶ್ರವಣ ವಿಷಯಗಳಿವೆ, ಆದರೆ ಅವರು ಕೃಷ್ಣನ ಬಗೆಗೆ ಚರ್ಚಿಸುವುದಿಲ್ಲ. ಏಕೆಂದರೆ, ಅವರು ಕುಟುಂಬ ಜೀವನಕ್ಕೆ ಅಂಟಿಕೊಂಡಿರುವುದರಿಂದ ಸ್ವಯಂ ಸಾಕ್ಷಾತ್ಕಾರದಲ್ಲಿ ಅಂಧರಾಗಿದ್ದಾರೆ – ನಿದ್ರಯಾ ಹ್ರಿಯತೇ ನಕ್ತಂ ವ್ಯವಾಯೇನ ಚ ವಾ ವಯಃ – ಪ್ರಭುಪಾದರು ಈ ರೀತಿ ಅನುವಾದಿಸುತ್ತಾರೆ, ಅಂತಹ ಮಾತ್ಸರ್ಯ ಅಥವಾ ಅಸೂಯೆ ಉಳ್ಳ ಗೃಹಸ್ಥ, ಅವರು ಬರೀ ಗೃಹಸ್ಥ ಎನ್ನುವುದಿಲ್ಲ. ನಾವು ಭಾಗವತವನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯ ಕೈಗೊಂಡಿದ್ದಾಗ, ಒಬ್ಬ ಅನುವಾದಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸ್ಕೃತದಲ್ಲಿ ಅಸೂಯೆ ಪದ ಬಳಸಿಲ್ಲ, ಪ್ರಭುಪಾದರೇಕೆ ಅಸೂಯೆವುಳ್ಳ ಗೃಹಸ್ಥ ಎಂದು ಹೇಳುತ್ತಿದ್ದಾರೆ? ವಾಸ್ತವವಾಗಿ ಪ್ರಭುಪಾದರು ಪರಂಪರೆಯ ಗ್ರಹಿಕೆಯನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ ಪ್ರಭುಪಾದರು ಗೃಹಮೇಧಿ ಮತ್ತು ಗೃಹಸ್ಥನ ನಡುವಣ ವ್ಯತ್ಯಾಸವನ್ನು ಹೇಳುತ್ತಾರೆ. ಗೃಹಮೇಧಿಯನ್ನು ಅಸೂಯೆ ಉಳ್ಳ ಗೃಹಸ್ಥ ಎಂದು ವಿವರಿಸಲಾಗಿದೆ. ಏಕೆಂದರೆ, ಅಂತಹ ವ್ಯಕ್ತಿಯು ತನ್ನ ಸೀಮಿತ ಸ್ವಯಂ ಆಸಕ್ತಿಯಲ್ಲಿ ಸದಾ ನಿರತ. ಅಂತಹ ಅಸೂಯೆ ಉಳ್ಳ ಗೃಹಸ್ಥನು ಆಯುಷ್ಯವನ್ನು ರಾತ್ರಿ ವೇಳೆ ನಿದ್ರೆ ಅಥವಾ ಲೈಂಗಿಕ ಭೋಗದಲ್ಲಿ ಕಳೆಯುತ್ತಾನೆ. ಹಗಲಿನ ವೇಳೆ ಹಣ ಸಂಪಾದನೆ ಅಥವಾ ಕುಟುಂಬ ಪಾಲನೆಯಲ್ಲಿ ತೊಡಗಿರುತ್ತಾನೆ. ಭಾಗವತದಲ್ಲಿ ಇಂತಹ ಪ್ರಬಲ ಪದಗಳನ್ನು ಬಳಸಲಾಗಿದೆ. ಸ್ವಯಂ ಸಾಕ್ಷಾತ್ಕಾರಕ್ಕೆ ಅಂಧರಾಗಿರುವ ಅಂತಹ ವ್ಯಕ್ತಿಗಳ ಹೃದಯವನ್ನು ಚುಚ್ಚುವುದೇ ಅದರ ಉದ್ದೇಶ.
ಜನರು ಕಾಲಹರಣ ಮಾಡುತ್ತಾ ಜೀವದ ಅಮೂಲ್ಯ ಅವಕಾಶವನ್ನು ಅರ್ಥಮಾಡಿಕೊಳ್ಳುವುದಿಲ್ಲ, ಅವರು ಸಾವು ಮತ್ತು ಇತರ ಮೂಲಭೂತ ಸಮಸ್ಯೆಗಳನ್ನು ಬದಿಗಿಟ್ಟುಬಿಡುತ್ತಾರೆ ಎಂದೆಲ್ಲ ಈವರೆಗೆ ವಿವರಿಸಲಾಯಿತು. ಆದರೆ ಮಾನವ ಜೀವದ ನಿಜವಾದ ಉದ್ದೇಶದ – ಸ್ವಯಂ ಸಾಕ್ಷಾತ್ಕಾರ, ಅತ್ಮ ತತ್ತ್ವ – ಅರಿವುಳ್ಳ ವ್ಯಕ್ತಿಯ ಬದುಕಿನ ರೀತಿ ಅದಲ್ಲ, ಅಂತಹ ವ್ಯಕ್ತಿಯು ಲೌಕಿಕ ಹೊಂದಾಣಿಕೆ ಮಾಡಿಕೊಂಡು ಬದುಕುವುದಿಲ್ಲ. ಇನ್ನೇನು ಸಾಯುತ್ತಾನೆ ಎಂಬ ವ್ಯಕ್ತಿಯನ್ನು ಉದ್ದೇಶಿಸಿ ಶುಕದೇವ ಗೋಸ್ವಾಮಿ ಅವರು ಮಾತನಾಡುತ್ತಿದ್ದಾರೆ, ಅವನ ಕರ್ತವ್ಯವೇನು? ಎಲ್ಲ ಸಂಕಟಗಳಿಂದ ಮುಕ್ತನಾಗ ಬಯಸಿದರೆ ಅಂತಹ ವ್ಯಕ್ತಿಯು ಮೊದಲು ದುಃಖ ನಿವಾರಕ ದೇವೋತ್ತಮ ಪರಮ ಪುರುಷನನ್ನು ನೆನಪುಮಾಡಿಕೊಳ್ಳಬೇಕು. – ಭಗವಾನ್ ಈಶ್ವರೋ ಹರಿಃ – ದೇವೋತ್ತಮನನ್ನು ನೆನಪುಮಾಡಿಕೊಂಡು ವೈಭವೀಕರಿಸಬೇಕು. ಅವನು ಸರ್ವಾತ್ಮಾ, ಈಶ್ವರಃ ಮತ್ತು ಎಲ್ಲ ಸಂಕಟಗಳನ್ನು ಮುಕ್ತಗೊಳಿಸುವ ಶ್ರೀಹರಿ. ಬದುಕಿನ ಕೊನೆಯ ಹಂತದಲ್ಲಿ ಸಾವಿಗೆ ಹೆದರಬಾರದು. ಅದಕ್ಕಾಗಿ, ಲೌಕಿಕ ಶರೀರವನ್ನು ಎಲ್ಲ ಆಸೆ ಆಕಾಂಕ್ಷೆಗಳಿಂದ ಬಿಡಿಸಿಕೊಳ್ಳಬೇಕು. ಮಾಯಾ ಮುಕ್ತ ಕೃಷ್ಣ ಧಾಮ.
ಆದುದರಿಂದ ಅವನು ಹೇಳುತ್ತಾನೆ: ಗೃಹತ್ ಪ್ರವ್ರಜಿತೋ ಧೀರಃ – ಆತ್ಮ ಸಂಯಮವನ್ನು ಅಭ್ಯಾಸ ಮಾಡಲು ವ್ಯಕ್ತಿಯು ಮನೆಯನ್ನು ತ್ಯಜಿಸಿ ಉತ್ತಮ ಜೀವನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ವಾಸ್ತವ ನೆಲೆಯು ಭಗವಂತನ ರಾಜ್ಯ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ, `ನನ್ನ ಬಳಿಗೆ ಹಿಂತಿರುಗು.’ ಕೃಷ್ಣನ ಧಾಮವು ಮಾಯೆಯಿಂದ ಮುಕ್ತವಾಗಿದೆ. ಈ ಲೌಕಿಕ ಜಗತ್ತು ಮಾಯೆಯ ರಾಜ್ಯ. ಆದುದರಿಂದ ನಾವು ಮಾಯೆಯ ಸಾಮ್ರಾಜ್ಯದಲ್ಲಿ ಇದ್ದೇವೆ. ಮಾಯೆಯ ಶಕ್ತಿ ಎಷ್ಟು ಪ್ರಬಲವಾಗಿದೆ ಎಂದರೆ ವ್ಯಕ್ತಿಯ ಬದುಕಿನ ಎಲ್ಲ ಹಂತದಲ್ಲಿಯೂ ಅದರ ಪ್ರಭಾವಕ್ಕೆ ಒಳಗಾಗಬಹುದು ಎಂದು ಪ್ರಭುಪಾದರು ಹೇಳಿದ್ದಾರೆ.
ನಾವು ಗೃಹಸ್ಥರಲ್ಲದಿರಬಹುದು, ನಾವು ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸಿದ ಮೇಲೂ ಈ ಶರೀರಕ್ಕೆ ಅಂಟಿಕೊಂಡಿರುತ್ತೇವೆ. ಇದು ಅಹಂಕಾರದ ರೂಪದಲ್ಲಿ ಇರುತ್ತದೆ. ಆದುದರಿಂದ ಈ ಅಹಂಕಾರವನ್ನು ನಾಶಪಡಿಸಲು, ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ, ಅಸಂಗ ಶಸ್ತ್ರೇಣ ದೃಢೇನ ಚಿತ್ವ – ನೀವು ಈ ವ್ಯಾಮೋಹವನ್ನು ಬಿಟ್ಟುಬಿಡಬೇಕು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗುವುದರಿಂದ ಏನೂ ಪ್ರಯೋಜನವಿಲ್ಲ. ಈ ಅಹಂಕಾರವು ನಮ್ಮನ್ನು ದೇಹದಿಂದ ದೇಹಕ್ಕೆ ಒಯ್ಯುತ್ತದೆ.
ಶುಕದೇವ ಗೋಸ್ವಾಮಿ ಹೇಳುತ್ತಿದ್ದಾರೆ – ಆತ್ಮ ಸಂಯಮ ಅಭ್ಯಾಸ ಮಾಡಲು ಮನೆಯನ್ನು ತ್ಯಜಿಸಬೇಕು. ಹಾಗೆಂದರೆ ಎಲ್ಲ ಐಹಿಕ ಸೌಕರ್ಯಗಳನ್ನು ಬಿಟ್ಟು ಆಧ್ಯಾತ್ಮಿಕ ತರಂಗದಿಂದ ತುಂಬಿರುವ ಪವಿತ್ರ ಸ್ಥಳದಲ್ಲಿ ಆಸೀನರಾಗುವುದು ಎಂದು ಶ್ರೀಲ ಪ್ರಭುಪಾದರು ವಿವರಿಸಿದ್ದಾರೆ. ಮುಖ್ಯವಾಗಿ, ನಿವೃತ್ತಿ ಅನಂತರ ವೃಂದಾವನದಂತಹ ಸ್ಥಳಕ್ಕೆ ಹೋಗಿ ಧಾರ್ಮಿಕ ಸೇವೆಯಲ್ಲಿ ನಿರತರಾಗಬೇಕು ಮತ್ತು ಮುಂದಿನ ಉತ್ತಮ ಜೀವನಕ್ಕೆ ಸಿದ್ಧತೆ ನಡೆಸಬೇಕು ಎಂದು ಪ್ರಭುಪಾದರು ಸೂಚಿಸುತ್ತಾರೆ.

ಆದುದರಿಂದ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ಮನಸ್ಸಿನ ಪ್ರಸಾದತೆ, ಸರಳತೆ, ಮೌನ, ಆತ್ಮ ಸಂಯಮ ಮತ್ತು ಅಸ್ತಿತ್ವದ ಶುದ್ಧಿ ಇವು ಮನಸ್ಸಿನ ತಪಸ್ಸು. ಎಲ್ಲವನ್ನೂ ನಿರ್ಲಕ್ಷಿಸಿ ಪವಿತ್ರ ಧ್ವನಿ ತರಂಗದತ್ತ ಗಮನ ಹರಿಸಿ ಹರೇ ಕೃಷ್ಣ ಮಂತ್ರವನ್ನು ಜಪಿಸಲು ನೀವು ನಿರ್ಧರಿಸುವುದೇ ಅತ್ಯುತ್ತಮ ಪರಿಸ್ಥಿತಿ. ಈ ತಪಸ್ಸನ್ನೇ ನೀವು ಅಭ್ಯಾಸ ಮಾಡಬೇಕು.
ಮನೆಯನ್ನು ತ್ಯಜಿಸಿದ ಮೇಲೆ ಕ್ರಮವಾಗಿ ಸ್ನಾನ, ಆತ್ಮ ಸಂಯಮ ಅಭ್ಯಾಸ, ಶುಚಿಯಾದ ಏಕಾಂತ ಸ್ಥಳದಲ್ಲಿ ಆಸೀನರಾಗಿ ಭಗವಂತನ ಪವಿತ್ರ ನಾಮ ಪಠಣವನ್ನು ಮಾಡಬೇಕು ಎಂದು ಶುಕದೇವ ಗೋಸ್ವಾಮಿ ಹೇಳುತ್ತಾರೆ. ಎಲ್ಲರಿಗೂ ಮನೆ ಬಿಟ್ಟು ಹೋಗುವುದು ಸಾಧ್ಯವಾಗದ ಕಾಲದಲ್ಲಿ ನಾವಿದ್ದೇವೆ. ಆದುದರಿಂದ ದೈಹಿಕ ಸೌಲಭ್ಯಗಳನ್ನು ಬಿಟ್ಟು ಬಿಡಬೇಕು. ಏಕೆಂದರೆ, ಆಧ್ಯಾತ್ಮಿಕ ಬದುಕಿಗೆ ಬರುವ ಮುನ್ನ ಈ ರೀತಿಯ ಜೀವನ ನಡೆಸಬೇಕೆಂದು ನಾವು ಭಾವಿಸಿದೆವು. ಆದುದರಿಂದ ಶರೀರ ಮತ್ತು ಮನಸ್ಸಿನ ಸೌಲಭ್ಯಗಳನ್ನು ಬಿಟ್ಟು ಆ ಸ್ಥಿತಿಯಲ್ಲಿ ಹರೇ ಕೃಷ್ಣ ಮಂತ್ರವನ್ನು ಜಪಿಸಿ.
ಭಾಗವತದಲ್ಲಿ ಶುಕದೇವ ಗೋಸ್ವಾಮಿ ಅವರ ಬೋಧನೆಯು ವಿಶ್ವವ್ಯಾಪಿ, ಏಕೆಂದರೆ ಪರೀಕ್ಷಿತನ ಪ್ರಶ್ನೆಯು ಸಾರ್ವತ್ರಿಕ. ಭಾಗವತವು ನಮಗೆಲ್ಲ ಪ್ರಾಯೋಗಿಕವಾದ ಬೋಧನೆಯನ್ನು ನೀಡುತ್ತದೆ. ತತ್ಕ್ಷಣ ಅದನ್ನು ಅನುಸರಿಸುವುದು ನಮಗೆ ಸಾಧ್ಯವಾಗದಿರಬಹುದು, ಆದರೆ ನಾವು ಅದರ ಆಚರಣೆಗೆ ಪ್ರಯತ್ನಿಸಬೇಕು.






Leave a Reply