ಕುವಲಯಾಪೀಡ ಸಂಹಾರ

ಮಥುರೆಯಲ್ಲಿ ಪ್ರತಿವರ್ಷ ಬಿಲ್ಲು ಹಬ್ಬದ ಅಂಗವಾಗಿ ಕೆಲವು ಜನರಂಜನೆಯ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುತ್ತಿದ್ದರು. ಅದರಲ್ಲಿ ಮಲ್ಲರ ಹೋರಾಟ (ಕುಸ್ತಿ)ವೂ ಒಂದು. ಮಲ್ಲ-ಮಲ್ಲರ ನಡುವೆ ನಡೆಯುತ್ತಿದ್ದ ಈ ಕುಸ್ತಿ ಪಂದ್ಯವು ತುಂಬ ಕುತೂಹಲಕಾರಿಯೂ, ರೋಮಾಂಚನಕಾರಿಯಾಗಿಯೂ ಇರುತ್ತಿತ್ತು. ಆ ಪಂದ್ಯದಲ್ಲಿ ಭಾಗವಹಿಸಲು ದೇಶ, ವಿದೇಶಗಳಿಂದ ಸಾಕಷ್ಟು ಮಲ್ಲರು ಬರುತ್ತಿದ್ದರು. ಪಂದ್ಯದಲ್ಲಿ ಜಯಿಸಿದವರಿಗೆ ದೊಡ್ಡ-ದೊಡ್ಡ ಬಹುಮಾನಗಳನ್ನು ಕೊಟ್ಟು ಗೌರವಿಸುತ್ತಿದ್ದರು.

ಪ್ರತಿವರ್ಷದಂತೆ ಈ ವರ್ಷವೂ ಕುಸ್ತಿ ಪಂದ್ಯದ ವ್ಯವಸ್ಥೆಯಾಗಿತ್ತು. ಅದಕ್ಕಾಗಿ ಒಂದು ವಿಶೇಷ ಅಖಾಡ (ಕುಸ್ತಿ ಆಡುವ ಸ್ಥಳ) ವನ್ನೇ ನಿರ್ಮಿಸಲಾಗಿತ್ತು. ಕುಸ್ತಿ ಮಾಡಲು ಅನೇಕ ಮಲ್ಲರು ಸಿದ್ಧರಾಗಿ ಬಂದಿದ್ದರು. ಅಖಾಡದ ಸುತ್ತಲೂ ಜನ ಕಿಕ್ಕಿರಿದು ತುಂಬಿದ್ದರು. ಪಂದ್ಯವನ್ನು ಉದ್ಘಾಟಿಸಲು ಸ್ವತಃ ಕಂಸಾಸುರನೇ ಅಲ್ಲಿಗೆ ಬಂದಿದ್ದ.

ಕುಸ್ತಿ ಪಂದ್ಯ ನೋಡಲು ಕೃಷ್ಣ-ಬಲರಾಮರೂ ಬರುತ್ತಿದ್ದಾರೆ ಎಂಬ ಸುದ್ದಿಯನ್ನು ಮೊದಲೇ ತಿಳಿದಿದ್ದ ಮಾವಟಿಗನು ಕಂಸನ ಆದೇಶದಂತೆ ಕುವಲಯಾಪೀಡನೆಂಬ ಆನೆಯನ್ನು ಕರೆತಂದು ಬೇಕೆಂದೇ ದ್ವಾರಕ್ಕೆ ಅಡ್ಡಲಾಗಿ ನಿಲ್ಲಿಸಿಕೊಂಡ.

ಕುವಲಯಾಪೀಡ ಒಂದು ಭಾರೀ ಗಾತ್ರದ ಆನೆ. ಅದಕ್ಕೆ ಸಾವಿರ ಆನೆಗಳ ಬಲವಿತ್ತು. ಅದು ಕಂಸನಿಗೆ ತುಂಬ ಅಚ್ಚುಮೆಚ್ಚಿನ ಆನೆಯಾಗಿತ್ತು. ಅದನ್ನು ಚೆನ್ನಾಗಿ ನೋಡಿಕೊಳ್ಳಲು ಅವನು ಒಂದು ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಿಸಿದ್ದ. ಮಾವಟಿಗ ಅದನ್ನು ಚೆನ್ನಾಗಿ ತರಬೇತುಗೊಳಿಸಿದ್ದ. ಆ ಆನೆಯಿಂದ ಕೃಷ್ಣ -ಬಲರಾಮರನ್ನು ತುಳಿಸಿ ಸಾಯಿಸು ಎಂದು ಕಂಸನು ಅಪ್ಪಣೆ ಮಾಡಿದ್ದರಿಂದ ಮಾವಟಿಗ ಅದನ್ನು ಅಲ್ಲಿಗೆ ಕರೆತಂದಿದ್ದ. “ಈಗ ಕೃಷ್ಣ-  ಬಲರಾಮರು ಇಲ್ಲಿಗೆ ಬರಬಹುದು. ಅವರನ್ನು ಯಾವುದಾದರೂ ನೆಪದಲ್ಲಿ ಕೆಣಕಿ, ಕೆರಳಿಸಿ ಜಗಳಕ್ಕೆ ಬರುವಂತೆ ಮಾಡಬೇಕು. ಅವರು ತನ್ನ ಮೇಲೆ ಜಗಳಕ್ಕೆ ಬಂದಾಗ ಆನೆಯಿಂದ ತುಳಿಸಿ ಕೊಲ್ಲಬೇಕು,” ಇದು ಅವನ ಲೆಕ್ಕಾಚಾರವಾಗಿತ್ತು.

ಆ ಮಾವಟಿಗ ಅಂದುಕೊಂಡಂತೆ ಕೃಷ್ಣ -ಬಲರಾಮರು ತಮ್ಮ ಗೆಳೆಯರೊಂದಿಗೆ ಅಲ್ಲಿಗೆ ಬಂದೇ ಬಂದರು. ಮಾವಟಿಗ ಆನೆಯನ್ನು ದ್ವಾರಕ್ಕೆ ಅಡ್ಡವಾಗಿ ನಿಲ್ಲಿಸಿದ್ದನ್ನು ಅವರು ಆಕ್ಷೇಪಿಸಿದರು. “ಆನೆಯನ್ನು ಪಕ್ಕಕ್ಕೆ ನಿಲ್ಲಿಸು, ನಾವು ಮಲ್ಲಯುದ್ಧ ನೋಡಲು ಒಳಗೆ ಹೋಗಬೇಕು,” ಎಂದು ಕೃಷ್ಣ ಹೇಳಿದ. ಅದಕ್ಕೆ ಮಾವಟಿಗನು – “ಎಲವೋ ಅಧಿಕಪ್ರಸಂಗಿಯಾದ ಬಾಲಕನೆ, ನೀನು ಹೇಳಿದ ಮಾತ್ರಕ್ಕೆ ನಾನು ಆನೆಯನ್ನು ಪಕ್ಕಕ್ಕೆ ಸರಿಸಿಬಿಡಬೇಕೆ? ನನಗೆ ಅಪ್ಪಣೆ ಮಾಡಲು ನೀನೇನು ನಮ್ಮ ಮಹಾರಾಜನೆ?…. ಹೋಗಯ್ಯಾ ಹೋಗು….” ಎಂದು ರೇಗಿದ. ಆಗ ಕೃಷ್ಣನು – “ಎಲವೋ ಮೂರ್ಖ ಮಾವಟಿಗ, ನೀನು ಆನೆಯನ್ನು ಪಕ್ಕಕ್ಕೆ ನಿಲ್ಲಿಸಿ ನಮಗೆ ಒಳಗೆ  ಹೋಗಲು ಅವಕಾಶಕೊಡದಿದ್ದರೆ ನೀನು, ನಿನ್ನ ಆನೆ ಇಬ್ಬರೂ ಯಮಲೋಕದ ಹಾದಿ ಹಿಡಿಯಬೇಕಾದೀತು,” ಎಂದು ಗುಡುಗಿದ. ಮಾವಟಿಗನಿಗೆ ಇಷ್ಟು ನೆಪ ಸಾಕಾಯಿತು. ಅವನು ಆನೆಯನ್ನು ಅಂಕುಶದಿಂದ ಚೆನ್ನಾಗಿ ಚುಚ್ಚಿ, ಚೆನ್ನಾಗಿ ಕೆರಳಿಸಿ ಕೃಷ್ಣನ ಮೇಲೆ ಬಿಟ್ಟ.

ಆನೆ ಕೃಷ್ಣನನ್ನು ಹಿಡಿಯಲು ಭಯಂಕರವಾಗಿ ಘೀಳಿಡುತ್ತಾ ಓಡಿತು. ಕೃಷ್ಣ ಅದರ ಹಿಡಿತಕ್ಕೆ ಸಿಕ್ಕದಂತೆ ತಪ್ಪಿಸಿಕೊಳ್ಳುತ್ತಲೇ ಇದ್ದ. ಅಲ್ಲಿ ಸ್ಥಳ ಸಾಕಷ್ಟು ವಿಶಾಲವಾಗಿತ್ತು. ಕೃಷ್ಣ ಎಲ್ಲ ಕಡೆಗೂ ಓಡುತ್ತಿದ್ದ. ಆನೆ ರೋಷಾವೇಶದಿಂದ ಅವನನ್ನು ಹಿಡಿಯಲು ಹೆಣಗುತ್ತಲೇ ಇತ್ತು.

ಕೃಷ್ಣ ಒಮ್ಮೆ ಅದರ ಬಾಲ ಹಿಡಿದು ಎಳೆಯುತ್ತಿದ್ದ. ಒಮ್ಮೆ ಅದರ ಸೊಂಡಿಲಿಗೆ ಬಲವಾಗಿ ಗುದ್ದುತ್ತಿದ್ದ. ಒಮ್ಮೆ ಅದರ ಕೆಳಗೆ ನುಸುಳಿ ಅದರ ಹೊಟ್ಟೆಗೆ ಜೋರಾಗಿ ಚುಚ್ಚುತ್ತಿದ್ದ. ಹೀಗೆ ಬಹಳ ಹೊತ್ತು ಅದನ್ನು ಆಟ ಆಡಿಸಿ ಅದು ಸಾಕಷ್ಟು ಆಯಾಸಗೊಳ್ಳುವಂತೆ ಮಾಡಿದ. ಒಂದೆರಡು ಸಲ ಅದು ಧುಡುಮ್ಮನೆ ನೆಲಕ್ಕುರುಳಿ ಗಾಯಗೊಳ್ಳುವಂತೆಯೂ ಮಾಡಿದ. ಕಡೆಗೆ ಅದರ ಭಾರೀ ಸೊಂಡಿಲನ್ನು ಹಿಡಿದು ಚೆನ್ನಾಗಿ ಎಳೆದಾಡಿ ನೆಲಕ್ಕೆ ಬೀಳುವಂತೆ ಮಾಡಿದ. ಮತ್ತು ಅವನ ವಜ್ರಮುಷ್ಟಿಯಿಂದ ಅದರ ನೆತ್ತಿಗೆ ಹತ್ತಾರು ಬಾರಿ ಗುದ್ದಿದ. ಬಳಿಕ ಅದರ ಮಾರುಮಾರುದ್ದದ ಎರಡೂ ದಂತಗಳನ್ನು ಕಿತ್ತು ಅದರಿಂದಲೂ ಚೆನ್ನಾಗಿ ಬಾರಿಸಿದ. ಅದೇ ದಂತದಿಂದ ಅದರ ಮಾವಟಿಗನಿಗೂ ಥಳಿಸಿದ. ಆ ಬಿರುಸು ಹೊಡೆತಗಳಿಂದ ಆನೆ ಮತ್ತು ಮಾವಟಿಗ ಇಬ್ಬರೂ ತತ್ತರಿಸಿದರು. ಕೊನೆಗೂ ರಕ್ತಕಾರಿ ಜೀವತೆತ್ತರು.

ಸಾವಿರ ಆನೆ ಬಲವನ್ನು ಹೊಂದಿದ್ದ ಆ ಮಹಾಗಜವನ್ನು ಕೃಷ್ಣ ಇಷ್ಟು ಸುಲಭವಾಗಿ ಕೊಂದಿದ್ದನ್ನು ಕಣ್ಣಾರೆ ಕಂಡ ಜನ ಸಂತೋಷದಿಂದ ಹುಚ್ಚೆದ್ದು ಕುಣಿದಾಡಿದರು. ಗೊಲ್ಲ ಬಾಲಕರ ಸಂತೋಷಕ್ಕಂತೂ ಇತಿಮಿತಿಯೇ ಇಲ್ಲವಾಗಿತ್ತು. ಅಲ್ಲಿ ನೆರೆದಿದ್ದ ನೂರಾರು ಜನ ಏಕಕಂಠದಿಂದ ಕೃಷ್ಣನ ಹೆಸರಿಗೆ ಜಯಘೋಷ ಮಾಡುತ್ತಿದ್ದರು. ಆ ಕೂಗು ದಶ ದಿಕ್ಕುಗಳಲ್ಲು ಪ್ರತಿಧ್ವನಿಸಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi