ಗಜರಾಜನ ಮೋಕ್ಷ

ತ್ರಿಕೂಟ ಪರ್ವತ ಬಳಿ ಒಂದು ದಟ್ಟವಾದ ಕಾಡಿತ್ತು. ಅದರಲ್ಲಿ ಆನೆಗಳ ಒಂದು ದೊಡ್ಡ ಹಿಂಡು ವಾಸವಾಗಿತ್ತು. ಅವುಗಳಲ್ಲೊಂದು ಬಲಿಷ್ಠ ಸಲಗವೂ ಇತ್ತು.

ಒಂದು ದಿನ ಆ ಆನೆಗಳು ಕಂಡ ಕಂಡ ಕಡೆ ಹುಲುಸಾಗಿ ಬೆಳೆದ ಹುಲ್ಲು, ಮರದ ಎಲೆ, ಸೊಪ್ಪು, ಇತ್ಯಾದಿಗಳನ್ನು ತಿನ್ನುತ್ತಾ ಸಾಗಿದ್ದವು. ಕ್ರಮೇಣ ಬಿಸಿಲಿನ ತಾಪ ಹೆಚ್ಚಾಯಿತು. ಆನೆಗಳಿಗೆ ದಾಹವೂ ಆಗ ತೊಡಗಿತು. ಆಗ ಸಲಗವು ತನ್ನ ಗುಂಪಿನ ಆನೆಗಳನ್ನೆಲ್ಲಾ ಕರೆದುಕೊಂಡು ನೀರು ಕುಡಿಯಲೆಂದು ಒಂದು ಸರೋವರಕ್ಕೆ ಬಂದಿತು. ಸರೋವರ ವಿಶಾಲವಾಗಿತ್ತು. ಅದರ ನೀರು ಸ್ವಚ್ಛವಾಗಿತ್ತು. ರುಚಿಯಾಗಿಯೂ ಇತ್ತು.

ಆನೆಗಳೆಲ್ಲಾ ತಿಳಿಯಾದ ನೀರಿನ ರಾಶಿಯನ್ನು ಕಂಡು ಸಂತೋಷ ಪಟ್ಟವು. ಸಂಭ್ರಮದಿಂದ ಸರೋವರಕ್ಕೆ ನುಗ್ಗಿದವು. ಚೆನ್ನಾಗಿ ನೀರು ಕುಡಿದು ದಾಹ ಅಡಗಿಸಿಕೊಂಡವು.

ಅದೇ ಸರೋವರದಲ್ಲಿ ಒಂದು ದೊಡ್ಡ ಮೊಸಳೆ ವಾಸವಾಗಿತ್ತು. ಆನೆಗಳು ಜಲಕ್ರೀಡೆ ಆಡುತ್ತಿದ್ದಾಗ ಗುಂಪಿನ ಸಲಗವು ಆಕಸ್ಮಿಕವಾಗಿ ಆ ಮೊಸಳೆಯನ್ನು ತುಳಿದು ಗಾಯಗೊಳಿಸಿತು. ಇದರಿಂದ ಕೋಪಗೊಂಡ ಮೊಸಳೆಯು ಗಬಕ್ಕನೆ ಅದರ ಕಾಲನ್ನು ಬಲವಾಗಿ ಕಚ್ಚಿಹಿಡಿದು ಎಳೆಯತೊಡಗಿತು. ಅದರ ಮೊನಚಾದ ಹಲ್ಲುಗಳು ಕಾಲಿಗೆ ನಾಟಿದ್ದರಿಂದ ಆನೆಗೆ ತುಂಬ ಹಿಂಸೆಯಾಯಿತು. ಅದು ಕಾಲನ್ನು ಝಾಡಿಸಿ ಬಿಡಿಸಿಕೊಳ್ಳಲು ಪ್ರಯತ್ನಿಸಿತು; ಸಾಧ್ಯವಾಗಲಿಲ್ಲ.

ಆಗ ಸಲಗವು ಜೀವಭಯದಿಂದಲೂ, ನೋವಿನಿಂದಲೂ ನಡುಗತೊಡಗಿತು. ಆದರೂ ಅದು ಪ್ರಯತ್ನವನ್ನು ನಿಲ್ಲಿಸಲಿಲ್ಲ. ಒಂದು ಸಲ ಅದು ಕೋಪ, ಆವೇಶ ಹಾಗೂ ಬಲವನ್ನು ಪೂರ್ತಿಯಾಗಿ ಬಳಸಿ ಆ ಭಾರೀ ಗಾತ್ರದ ಮೊಸಳೆಯನ್ನು ದಡದವರೆಗೆ ಎಳೆದು ತರುತ್ತಿತ್ತು. ಆದರೆ ಮರುಕ್ಷಣವೇ ಆ ಮೊಸಳೆ ಆನೆಯನ್ನು ಮತ್ತೆ ನೀರಿಗೆ ಎಳೆಯುತ್ತಿತ್ತು. ಈ ಎರಡೂ ಬಲಿಷ್ಠ ಪ್ರಾಣಿಗಳ ಈ ಪರಿಯ ಹೋರಾಟ ಸುಮಾರು ಒಂದು ಸಾವಿರ ವರ್ಷಗಳ ತನಕವೂ ನಡೆಯಿತು. ಕಡೆಕಡೆಗೆ ಈ ಸೆಣೆಸಾಟದಲ್ಲಿ ಗಜೇಂದ್ರನೇ (ಆನೆ) ಸೋತು ಸುಣ್ಣವಾಗಿ ಬಿಟ್ಟಿತು.

ಇದರಿಂದ ಹತಾಶಗೊಂಡ ಸಲಗವು ಈಗೇನು ಮಾಡಲಿ ಎಂದು ಯೋಚಿಸುತ್ತಾ ಕಣ್ಣೀರು ಸುರಿಸತೊಡಗಿತು. ಆಗ ಅದಕ್ಕೆ ಗರುಡ ವಾಹನನಾದ ಮಹಾವಿಷ್ಣುವಿನ ನೆನಪಾಯಿತು. ಕೂಡಲೇ ಅದು, `ಹೇ ದಯಾಮಯನಾದ ಭಗವಂತನೇ, ಈ ಪ್ರಾಣಹಿಂಸೆಯಿಂದ ನನ್ನನ್ನು ಕಾಪಾಡು ತಂದೆ,” ಎಂದು ದೀನಸ್ವರದಲ್ಲಿ ಬೇಡಿಕೊಂಡಿತು.

ಆಗ ಗರುಡನ ಮೇಲೆ ಚಕ್ರಧಾರಿಯಾಗಿ ಕುಳಿತಿದ್ದ ಶ್ರೀಮನ್ನಾರಾಯಣನು ಅಂತರಿಕ್ಷದಲ್ಲಿ ಅದಕ್ಕೆ ಕಾಣಿಸಿಕೊಂಡ. ಭಗವಂತನನ್ನು ಕಂಡು ಸಂತೋಷಗೊಂಡ ಸಲಗವು ಆ ಸರೋವರದಲ್ಲಿ ಬೆಳೆದು ನಿಂತಿದ್ದ ಒಂದು ಸುಂದರವಾದ ಕಮಲ ಪುಷ್ಪವನ್ನು ಸೊಂಡಿಲಿನಿಂದ ಕಿತ್ತು ಭಗವಂತನ ಕಡೆಗೆ ಹಿಡಿಯಿತು. ಭಕ್ತಿಭಾವದಿಂದ ನಮಿಸಿತು. “ನನ್ನನ್ನು ರಕ್ಷಿಸು ತಂದೆ ರಕ್ಷಿಸು,” ಎಂದು ಮತ್ತೊಮ್ಮೆ ಪ್ರಾರ್ಥಿಸಿಕೊಂಡಿತು. ಆಗ ಅದರ ಕಷ್ಟವನ್ನು ಕಂಡು ಮರುಗಿದ ಭಗವಂತನು ತನ್ನ ಚಕ್ರವನ್ನು ಮೊಸಳೆಯ ಮೇಲೆ ಪ್ರಯೋಗಿಸಿದ. ಮೊಸಳೆ ಕತ್ತರಿಸಿ ಬಿದ್ದು ಸತ್ತುಹೋಯಿತು. ಗಜರಾಜನಿಗೆ ಬಿಡುಗಡೆಯಾಯಿತು.

ಈ ಗಜರಾಜನು ತನ್ನ ಪೂರ್ವಜನ್ಮದಲ್ಲಿ ಇಂದ್ರದ್ಯುಮ್ನ ಎಂಬ ರಾಜನಾಗಿದ್ದ. ಅವನು ಮಹಾತ್ಮರಾದ ಅಗಸ್ತ್ಯ ಮುನಿಗಳ ಶಾಪದಿಂದ ಆನೆಯಾಗಿ ಹುಟ್ಟಿದ್ದ. ಹಾಗೆಯೇ ಮೊಸಳೆಯ ರೂಪದಲ್ಲಿದ್ದವನು ಪೂರ್ವದಲ್ಲಿ  ಗಂಧರ್ವ ಪುರುಷನಾಗಿದ್ದ. ಆಗ ಅವನು ಮಾಡಿದ ಒಂದು ದೊಡ್ಡ ಅಪರಾಧಕ್ಕಾಗಿ ಮಹಾತ್ಮರಾದ ದೇವಲ ಎಂಬ ಮಹರ್ಷಿಗಳು, ನೀನು ಮೊಸಳೆಯಾಗು ಎಂದು ಅವನನ್ನು ಶಪಿಸಿದ್ದರು. ಆಗಿನಿಂದ ಅವನು ಮೊಸಳೆಯಾಗಿ ಆ ಸರೋವರದಲ್ಲಿ ವಾಸವಾಗಿದ್ದ. ಭಗವಂತನ ಅವ್ಯಾಜ ಕರುಣೆ ಹಾಗೂ ಹಿಂದೆ ಮಾಡಿದ ಒಳ್ಳೆಯ ಕೆಲಸಗಳು ಮತ್ತು ಭಗವದ್ಭಕ್ತಿ ಅವರಿಬ್ಬರಿಗೂ ಸದ್ಗತಿಯನ್ನು, ವಿಮೋಚನೆಯನ್ನು ನೀಡಿದವು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi