ಪ್ರತಿವರ್ಷವೂ ಹೊಸ ಬೆಳೆ ಬಂದಾಗ ಬೃಂದಾವನದ ಜನರೆಲ್ಲಾ ಸೇರಿ ಒಂದು ದೊಡ್ಡ ಉತ್ಸವವನ್ನೇ ಆಚರಿಸುತ್ತಿದ್ದರು. ಈ ಉತ್ಸವದ ಅಂಗವಾಗಿ, ದೇವೇಂದ್ರನ ಸಂತೋಷಕ್ಕಾಗಿ ಒಂದು ಯಜ್ಞವನ್ನೂ ನಡೆಸುತ್ತಿದ್ದರು. ಬಲು ಸಡಗರ, ಸಂಭ್ರಮ, ಹರ್ಷ, ಉಲ್ಲಾಸಗಳಿಂದ ನಡೆಯುತ್ತಿದ್ದ ಈ ಧಾರ್ಮಿಕ ಉತ್ಸವವು ಒಂದು ದೊಡ್ಡ ಊರ ಹಬ್ಬವೇ ಆಗಿರುತ್ತಿತ್ತು.
ಬೃಂದಾವನದ ಪ್ರಜೆಗಳು ತನ್ನ ಹೆಸರಿನಲ್ಲಿ ಇಷ್ಟು ದೊಡ್ಡ ಉತ್ಸವವನ್ನು ಯಜ್ಞವನ್ನು ನಡೆಸುತ್ತಿದ್ದುದರಿಂದ ದೇವತೆಗಳ ಒಡೆಯನಾದ ದೇವೇಂದ್ರನು ಬಹಳ ಹೆಮ್ಮೆ ಪಡುತ್ತಿದ್ದ. ಸರ್ವವನ್ನೂ ಬಲ್ಲವನಾದ ಕೃಷ್ಣನಿಗೆ ಇದೆಲ್ಲಾ ತಿಳಿದಿತ್ತು. ಆದುದರಿಂದ ಅವನು ಈ ವರ್ಷದಿಂದ ಅವನ ಹೆಸರಿನಲ್ಲಿ ಯಜ್ಞ ನಡೆಯದಂತೆ ಮಾಡಿ, ಅವನ ಅಹಂಕಾರವನ್ನು ಇಳಿಸಬೇಕು ಎಂದು ನಿರ್ಧರಿಸಿದ.
ಒಂದು ದಿನ ನಂದಗೋಪನು ಸೇರಿದಂತೆ ಊರಿನ ಇನ್ನಿತರೆ ಹಿರಿಯರೂ ಸೇರಿ ಆ ವರ್ಷದ ಉತ್ಸವದ ಬಗ್ಗೆ ಚರ್ಚೆ ನಡೆಸಿದ್ದರು. ಆ ಸಭೆಗೆ ಗ್ರಾಮದ ಅನೇಕ ಮಂದಿ ಸ್ತ್ರೀ – ಪುರುಷರೂ ಬಂದಿದ್ದರು. ಅವರೆಲ್ಲಾ ಸೇರಿ ಉತ್ಸವವನ್ನು ನಡೆಸಬೇಕು ಎನ್ನುವ ಬಗ್ಗೆ ಮಾತನಾಡಿದ ಮೇಲೆ ಯಜ್ಞದ ವಿಷಯ ಚರ್ಚೆಗೆ ಬಂದಿತು. ಆಗ ಕೃಷ್ಣನು ತನ್ನ ತಂದೆಯನ್ನು ಕುರಿತು – “ಅಪ್ಪ, ನಾವು ದೇವೇಂದ್ರನ ಹೆಸರಿನಲ್ಲಿ ಯಜ್ಞವನ್ನೇಕೆ ಮಾಡಬೇಕು? ಈ ಉತ್ಸವಕ್ಕೂ ದೇವೇಂದ್ರನಿಗೂ ಏನು ಸಂಬಂಧ?” ಎಂದು ಕೇಳಿದ.

ಕೃಷ್ಣ ಇನ್ನೂ ಬಾಲಕ. ಆದರೂ ಅವನು ಇಂತಹ ಗಂಭೀರ ಪ್ರಶ್ನೆ ಕೇಳಿದ್ದನ್ನು ಕಂಡು ನಂದನಿಗೆ ಆಶ್ಚರ್ಯವೇ ಆಯಿತು. ಅವನು ಕೃಷ್ಣನ ತಲೆಯನ್ನು ಪ್ರೀತಿಯಿಂದ ಸವರುತ್ತಾ – “ಮಗು ಕೃಷ್ಣ, ನಾವು ಪ್ರತಿವರ್ಷವೂ ರಾಶಿ ರಾಶಿ ದವಸ, ಧಾನ್ಯಗಳನ್ನು ಪಡೆದುಕೊಳ್ಳುತ್ತೇವೆ. ಅದಕ್ಕೆ ಮಳೆಯೇ ಕಾರಣ. ಆ ಮಳೆ ಮೋಡಗಳಿಂದ ಸುರಿಯುತ್ತದೆ. ಆ ಮೋಡಗಳಿಗೆ ದೇವೇಂದ್ರನೇ ಯಜಮಾನ. ಅಂದರೆ ಆ ದೇವೇಂದ್ರನ ಕೃಪೆಯಿಂದಲೇ ನಾವು ಮಳೆ – ಬೆಳೆ ಕಾಣುತ್ತೇವೆ. ಹೀಗೆ ಕಾಲಕಾಲಕ್ಕೆ ನಮಗೆ ಮಳೆ ಬೆಳೆಯನ್ನು ಕರುಣಿಸುವ ಆ ದೇವೇಂದ್ರನು ನಮಗೆಲ್ಲಾ ಪೂಜ್ಯನಾಗಿದ್ದಾನೆ. ಆದುದರಿಂದಲೇ ನಾವು ಆತನ ಹೆಸರಿನಲ್ಲಿ ಯಜ್ಞವನ್ನು ಮಾಡಿ, ಆತನನ್ನು ಸಂತೋಷಪಡಿಸುತ್ತೇವೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ,” ಎಂದು ವಿವರಣೆ ನೀಡಿದ. ಆದರೆ ಅವನ ವಿವರಣೆಯಿಂದ ಕೃಷ್ಣನಿಗೆ ತೃಪ್ತಿಯಾಗಲಿಲ್ಲ. ಅವನು ಎಲ್ಲರ ಮನ ಒಲಿಸತೊಡಗಿದ.
“ಈಗ ಈ ಯಜ್ಞಕ್ಕಾಗಿ, ಉತ್ಸವಕ್ಕಾಗಿ ಸಂಗ್ರಹಿಸಿರುವ ವಸ್ತು, ಪದಾರ್ಥಗಳಿಂದ ನಮಗೆ ಹಾಲು ಕೊಡುವ ಗೋವುಗಳನ್ನು ಪೂಜಿಸೋಣ. ನಮಗೆ ನಾನಾ ಬಗೆಯಲ್ಲಿ ಉಪಕಾರ ಮಾಡುತ್ತಿರುವ ಆ ಗೋವರ್ಧನ ಬೆಟ್ಟಕ್ಕೆ ಪೂಜೆ ಸಲ್ಲಿಸೋಣ. ಬ್ರಾಹ್ಮಣರಿಗೆ, ಬಡ – ಬಗ್ಗರಿಗೆ ದಾನ, ಧರ್ಮಗಳನ್ನು ಮಾಡೋಣ. ನನ್ನ ಅಭಿಪ್ರಾಯದಲ್ಲಿ ನಾವೆಲ್ಲಾ ಹೀಗೆ ಮಾಡುವುದೇ ಸರಿ. ಇದರ ಮೇಲೆ ನಿಮ್ಮ ಇಷ್ಟ,” ಎಂದು ಹೇಳಿ ಸುಮ್ಮನಾಗಿಬಿಟ್ಟ.
ಕೃಷ್ಣ ಬಾಲಕನಾದರೂ ಮಹಾ ಮೇಧಾವಿಯಂತೆ, ಮಹಾಜ್ಞಾನಿಯಂತೆ ಆಡಿದ ಮಾತುಗಳನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು. ಅವನ ಮೇಲಿದ್ದ ಆದರ, ಅಭಿಮಾನ ಇಮ್ಮಡಿಯಾಯಿತು. ಅವನು ನೀಡಿದ ಸಲಹೆ ಎಲ್ಲರಿಗೂ ಸರಿ ಎನಿಸಿತು. ಆದುದರಿಂದ ಊರಿನ ಹಿರಿಯರು ಏಕ ಕಂಠದಿಂದ ನಾವು ಈ ವರ್ಷದಿಂದ ನಮ್ಮ ಕೃಷ್ಣನು ಹೇಳಿದ ರೀತಿಯಲ್ಲೇ ಉತ್ಸವವನ್ನು ಆಚರಿಸೋಣ ಎಂದು ಸಾರಿಬಿಟ್ಟರು. ಆಗ ಊರಿನ ಜನ, ಅದರಲ್ಲೂ ಗೋಪಾಲಕರು ಹಾಗೂ ಗೋಪಿಯರು ಅತಿಯಾದ ಹರ್ಷದಿಂದ ಕೃಷ್ಣನ ಹೆಸರಿಗೆ ಜಯಕಾರ ಮಾಡಿದರು.
ಮರುದಿನದಿಂದಲೇ ಉತ್ಸವದ ಸಿದ್ಧತೆಗಳು ಭರದಿಂದ ಸಾಗತೊಡಗಿದವು. ಇಡೀ ಗ್ರಾಮವನ್ನು ಸ್ವಚ್ಛವಾಗಿ ತೊಳೆದು ತಳಿರು ತೋರಣಗಳಿಂದ ಅಲಂಕರಿಸಲಾಯಿತು. ಮನೆ – ಮನೆಯ ಅಂಗಳ ಹಾಗೂ ದನದ ಕೊಟ್ಟಿಗೆಗಳನ್ನು ಸಾರಿಸಿ ರಂಗವಲ್ಲಿಯನ್ನಿಟ್ಟು ಅಂದಗೊಳಿಸಲಾಯಿತು. ಬೃಂದಾವನಕ್ಕೆ ಸಮೀಪದಲ್ಲಿದ್ದ ಗೋವರ್ಧನ ಗಿರಿಯನ್ನು ಪೂಜಿಸಿ, ಬಲಿಯನ್ನು ಅರ್ಪಿಸಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಲಾಯಿತು. ಗ್ರಾಮದ ಎಲ್ಲ ಗೋವುಗಳಿಗೂ ಪೂಜೆ ಸಂದಿತು. ಗೋವುಗಳಿಗೆ ಮೆರವಣಿಗೆ, ಧಾನ್ಯ ರಾಶಿಗಳ ಪೂಜೆ, ದಾನ – ಧರ್ಮ ಮುಂತಾದ ಎಲ್ಲ ಶುಭಕಾರ್ಯಗಳೂ ವೈಭವದಿಂದಲೇ ನಡೆದವು.
ಬೃಂದಾವನದ ಜನರು ತನ್ನ ಹೆಸರಿನಲ್ಲಿ ನಡೆಯುತ್ತಿದ್ದ ಯಜ್ಞವನ್ನು ಈಗ ನಿಲ್ಲಿಸಿದ್ದನ್ನು ತಿಳಿದು ದೇವೇಂದ್ರನಿಗೆ ಮಹಾ ಕೋಪವೇ ಬಂದಿತು ಅವರಿಗೆಲ್ಲ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿಕೊಂಡ. ಮರುಕ್ಷಣವೇ ಅವನು ಮೋಡಗಳಿಗೆ – “ಎಲೈ ಮೇಘಗಳೆ, ನೀವು ಈಗಿಂದೀಗಲೇ ನಂದಗೋಪನ ಗ್ರಾಮದ ಮೇಲೆ ಹರಡಿಕೊಳ್ಳಿ. ಭಯಂಕರ ಮಳೆಯನ್ನು ಸುರಿಸಿ. ಎಲ್ಲ ದನ, ಕರುಗಳೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುವಂತೆ ಮಾಡಿರಿ. ಆ ಪ್ರವಾಹಕ್ಕೆ ಸಿಕ್ಕಿ ನನಗೆ ದ್ರೋಹ ಬಗೆದ ಆ ಮೂರ್ಖ ಮಾನವರೂ ಸಹ ಪಡಬಾರದ ಪಾಡು ಪಡಲಿ!” ಎಂದು ಆವೇಶದಿಂದ ಅಪ್ಪಣೆ ಮಾಡಿದ.
ಸ್ವಲ್ಪ ಹೊತ್ತಿನಲ್ಲೇ ಗುಡುಗು – ಸಿಡಿಲುಗಳು ಭಯಂಕರವಾಗಿ ಆರ್ಭಟಿಸಿದವು. ಬಳಿಕ ಧಾರಾಕಾರವಾಗಿ ಮಳೆ ಸುರಿಯತೊಡಗಿತು. ಅತಿ ರಭಸದಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಗ್ರಾಮದಲ್ಲಿ ಒಂದು ದೊಡ್ಡ ಪ್ರವಾಹವೇ ಉಂಟಾಯಿತು. ಇಂದ್ರ ದೇವನು ಬಯಸಿದಂತೆ ದನ, ಕರುಗಳು ಕೊಚ್ಚಿ ಹೋಗತೊಡಗಿದವು. ಕಲ್ಲು, ಮಣ್ಣಿನ ಮನೆಗಳು ಕುಸಿಯತೊಡಗಿದವು. ಗುಡಿಸಲುಗಳು ನೆಲಸಮವಾದವು. ಗ್ರಾಮವಾಸಿಗಳು ಪ್ರಾಣಭೀತಿಯಿಂದ ತತ್ತರಿಸಿದರು.
ಇದು ದೇವೇಂದ್ರನ ಕೋಪದ ಪ್ರಭಾವ ಎಂದು ತಿಳಿಯಲು ಆ ಹಳ್ಳಿಯ ಜನರಿಗೆ ಹೆಚ್ಚುಕಾಲ ಬೇಕಾಗಲಿಲ್ಲ. ಈಗ ಅವರೆಲ್ಲಾ ಶ್ರೀಕೃಷ್ಣನನ್ನೇ ನಂಬಿದರು. “ಈಗ ನಮಗೆಲ್ಲಾ ನೀನೇ ಗತಿ. ಕನಿಕರವಿಟ್ಟು ಕಾಪಾಡು… ಕಾಪಾಡು…,” ಎಂದು ಗ್ರಾಮದವರೆಲ್ಲಾ ಬೇಡಿಕೊಂಡರು.
ಕೃಷ್ಣ ಓಡೋಡಿ ಗೋವರ್ಧನ ಗಿರಿಯ ಬಳಿ ಬಂದ. ಕೇವಲ ತನ್ನ ಎಡಗೈ ಕಿರುಬೆರಳಿನ ಮೇಲೆಯೇ ಅದನ್ನು ನಿಲ್ಲಿಸಿಕೊಂಡ. ಬಳಿಕ ಎಲ್ಲರನ್ನೂ ಕೈಬೀಸಿ ಕರೆಯುತ್ತಾ, ನೀವು ಯಾರೂ ಹೆದರಬೇಡಿ. ಇಲ್ಲಿ ನಿಮ್ಮೆಲ್ಲರನ್ನೂ ನಾನು ರಕ್ಷಿಸುತ್ತೇನೆ,” ಎಂದು ಕೂಗಿ ಹೇಳಿದ. ಜನರೆಲ್ಲ ಗೋವರ್ಧನ ಗಿರಿಯ ಕೆಳಭಾಗದಲ್ಲಿ ಬಂದು ಸೇರಿದರು. ಆ ಮಹಾ ಜಲಪ್ರಳಯವು ಒಟ್ಟು ಏಳು ದಿನಗಳ ಕಾಲವೂ ಇತ್ತು. ಶ್ರೀಕೃಷ್ಣನು ಅಷ್ಟು ದಿನವೂ ಆ ಬೆಟ್ಟವನ್ನು ತನ್ನ ಬೆರಳ ಮೇಲೆಯೇ ನಿಲ್ಲಿಸಿಕೊಂಡು ಶಿಲಾವಿಗ್ರಹದಂತೆ ನಿಂತುಬಿಟ್ಟಿದ್ದ.

ಶ್ರೀಕೃಷ್ಣನ ಈ ಅದ್ಭುತ ಮಹಿಮೆಯನ್ನು ಕಂಡು ದರ್ಪಿಷ್ಟನಾದ ದೇವೇಂದ್ರನಿಗೆ ತುಂಬ ಆಶ್ಚರ್ಯವಾಯಿತು. ಅವನಿಗೆ ಕೃಷ್ಣ ಸಾಮಾನ್ಯ ಮಾನವ ಬಾಲಕನಲ್ಲ. ಸಾಕ್ಷಾತ್ ವೈಕುಂಠಪತಿ ಎಂಬುದೂ ತಿಳಿಯಿತು. ಆಗ ಅವನು ತಾನು ಮಾಡಿದ ದುಷ್ಟ ಕಾರ್ಯಕ್ಕಾಗಿ ಪರಿತಾಪಗೊಂಡ. ನಿಂತಲ್ಲಿಂದಲೇ ಕೃಷ್ಣ ಪರಮಾತ್ಮನಿಗೆ ಕೈಮುಗಿದು ಮನಸ್ಸಿನಲ್ಲಿ ಕ್ಷಮೆಯನ್ನು ಬೇಡಿಕೊಂಡ.
ಮಳೆ ಸುರಿಸುವುದನ್ನು ನಿಲ್ಲಿಸಿದ. ಪ್ರಾಯಶ್ಚಿತ್ತಪಟ್ಟ ಇಂದ್ರನನ್ನು ಕೃಷ್ಣನು ಕ್ಷಮಿಸಿದ. ಗೋವರ್ಧನ ಗಿರಿ ಎತ್ತಿ ಹಿಡಿದುದರಿಂದ `ಗಿರಿಧಾರಿ’ ಎನಿಸಿಕೊಂಡ.






Leave a Reply