ಸರ್ವವ್ಯಾಪಿ ಕೃಷ್ಣ

ತನ್ನಲ್ಲಿನ ಅತಿಯಾದ ಸ್ವಾರ್ಥದಿಂದಾಗಿ ಕಂಸನು ತನ್ನ ಸಹೋದರಿಯೊಂದಿಗಿನ ಎಲ್ಲ ಸಂಬಂಧಗಳನ್ನೂ ಕಿತ್ತುಹಾಕಿದ್ದನು. ಮೊಣಕಾಲೂರಿ ಕುಳಿತುಕೊಂಡಿದ್ದ ಕಂಸನು ಆಗಷ್ಟೇ ಜನಿಸಿದ್ದ ಹೆಣ್ಣು ಮಗುವಿನ ಕಾಲುಗಳನ್ನು ಹಿಡಿದು ಬಲವಾಗಿ ಎಳೆದನು. ಅನಂತರ, ಆ ಮಗುವನ್ನು ಒಂದು ಕಲ್ಲಿನ ಮೇಲೆ ಹೊಡೆಯಲು ಪ್ರಯತ್ನಿಸಿದನು. ಆದರೆ ಆ ಮಗುವು ಶ್ರೀ ವಿಷ್ಣುವಿನ ತಂಗಿಯಾಗಿದ್ದು, ಅವಳ ಹೆಸರು ಯೋಗಮಾಯಾ ದೇವಿ ಎಂದಾಗಿತ್ತು. ಅವಳು ಕಂಸನ ಕೈಗಳಿಂದ ಜಾರಿ ಮೇಲಕ್ಕೆ ಹೋಗಿ, ಆಕಾಶದಲ್ಲಿ ಅಷ್ಟ ಬಾಹುಗಳುಳ್ಳ, ಸಂಪೂರ್ಣವಾಗಿ ಆಯುಧಗಳಿಂದ ಸನ್ನದ್ಧಳಾದ ದೇವಿಯಾಗಿ ಅಂದರೆ ದುರ್ಗಾ ದೇವತೆಯಾಗಿ ಪ್ರಕಟಗೊಂಡಳು.

ವಿಷ್ಣು ಅಥವಾ ಕೃಷ್ಣನು ದೇವಕಿ ಮತ್ತು ಯಶೋದೆಯರಿಬ್ಬರಿಗೂ ಒಂದೇ ಸಮಯದಲ್ಲಿ ಜನಿಸಿರಬೇಕು. ಇಲ್ಲದೇ ಹೋದರೆ, ಯೋಗಮಾಯೆಯು ಪರಮಾತ್ಮನ ಚಿಕ್ಕ ಸಹೋದರಿಯಾಗಿರಲು ಸಾಧ್ಯವಿಲ್ಲ.

ಈ ಸಂಗತಿಯು ಶ್ರೀಲ ಪ್ರಭುಪಾದರಿಂದ `ಯೋಗಮಾಯಾ ಶಕ್ತಿ’ ಎಂದು ಬಣ್ಣಿಸಲಾಗಿದೆ. ಯೋಗಮಾಯೆಯು ಶ್ರೀ ಕೃಷ್ಣನ ಸಹೋದರಿಯಾಗಿ ಪ್ರಕಟಗೊಂಡಿದ್ದಾಳೆ. ಕೃಷ್ಣನು ಸರ್ವಶಕ್ತ ಮತ್ತು ಯೋಗಮಾಯೆಯು ಸರ್ವಶಕ್ತಿ. ಶಕ್ತಿಯ ವಿಚಾರವಾಗಿ ಹೇಳುವುದಾದರೆ, ಎಲ್ಲವೂ ಅಂದರೆ ಈ ಲೌಕಿಕ ಜಗತ್ತು, ಎಲ್ಲ ದೊಡ್ಡ ಗ್ರಹಗಳು, ನಾವು ಕಾಣುವ ಎಲ್ಲ ಶಕ್ತಿಯು, ವಿವಿಧ ರೂಪಗಳಲ್ಲಿರುವ ಎಲ್ಲ ಜೀವಿಗಳು – ಇವೆಲ್ಲವೂ ಅವನ ಶಕ್ತಿಯೇ ಆಗಿವೆ. ಅವನು ಶಕ್ತಿಶಾಲಿಯಾಗಿದ್ದಾನೆ ಮತ್ತು ಉಳಿದದ್ದೆಲ್ಲವೂ ಅವನ ಶಕ್ತಿಯ ಅಭಿವ್ಯಕ್ತಿಯಾಗಿದೆ. ಆದ್ದರಿಂದಲೇ ಶಾಸ್ತ್ರಗಳು ಸೂರ್ಯನ ಉದಾಹರಣೆ ಕೊಡುತ್ತವೆ. ಏಕೆಂದರೆ, ಸೂರ್ಯನು ಸತತವಾಗಿ ಶಕ್ತಿಯನ್ನು ಹೊರಸೂಸುತ್ತಿದ್ದಾನೆ. ಲಕ್ಷಾಂತರ ವರ್ಷಗಳಿಂದ ಪ್ರಖರವಾಗಿ ಮತ್ತು ಇಂದಿಗೂ ದಣಿಯದೆ ಹಾಗೇ ಇದ್ದಾನೆ. ಹಾಗಾಗಿ, ಪರಮಾತ್ಮನು ಒಂದೇ ಸ್ಥಳದಲ್ಲಿ ವಾಸವಾಗಿದ್ದರೂ, ಅವನ ಶಕ್ತಿಗಳು ಅವನಿಂದ ಬಂದಿವೆ ಎಂಬುದನ್ನು ನಮಗೆ ತಿಳಿದುಕೊಳ್ಳಲು ಸಹಾಯವಾಗಲೆಂದು ಈ ಉದಾಹರಣೆಯನ್ನು ಕೊಡಲಾಗಿದೆ.

ಶ್ರೀಲ ಪ್ರಭುಪಾದರು ಇನ್ನೊಂದೆಡೆ ವಿರಾಟ್-ರೂಪವನ್ನು ಬಹಳ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಪ್ರಜ್ಞೆಯು ನಮ್ಮ ದೇಹದೆಲ್ಲೆಡೆ ಹರಡಿದೆ – ನಾವು ನಡೆದುಕೊಂಡು ಹೋಗುತ್ತಿರುವಾಗ ಮುಳ್ಳು ಚುಚ್ಚಿದರೆ, ತತ್‌ಕ್ಷಣವೇ ನಮಗೆ ನೋವಿನ ಅನುಭವವಾಗುತ್ತದೆ ಮತ್ತು ನಾವು ಅದರೆಡೆಗೆ ಗಮನ ಕೊಡುತ್ತೇವೆ, ಅಥವಾ ನಾವು ಹಾಲು ಕುಡಿಯುತ್ತಿರುವಾಗ, ನಮ್ಮ ನಾಲಗೆಯ ಮೇಲೆ ಒಂದು ಕೂದಲು ಸಿಕ್ಕರೆ ತತ್‌ಕ್ಷಣವೇ ನಮ್ಮ ನಾಲಗೆ ಎಚ್ಚರಗೊಳ್ಳುತ್ತದೆ. ಕಾಲ್ಬೆರಳಿಗೆ, ನಾಲಗೆಗೆ, ತಲೆಗೆ, ದೇಹದ ಎಲ್ಲ ಭಾಗಗಳಿಗೆ ಪ್ರಜ್ಞೆಯು ಹರಡಿಕೊಂಡಿದೆ. ಪ್ರಜ್ಞೆಯು ಎಲ್ಲೆಡೆ ಹರಡಿಕೊಂಡಿದ್ದರೂ, ನಾವು ಏಕ ವ್ಯಕ್ತಿಯಾಗಿದ್ದೇವೆ. ಇದೇ ರೀತಿಯಾಗಿ, ಕೃಷ್ಣನ ಪ್ರಜ್ಞೆ, ಕೃಷ್ಣನ ತಿಳುವಳಿಕೆಯು ಬ್ರಹ್ಮಾಂಡದೆಲ್ಲೆಡೆ ಹರಡಿಕೊಂಡಿದೆ. ಆದರೂ, ಅವನೊಬ್ಬ ವ್ಯಕ್ತಿ. ಅವನ ಪ್ರಜ್ಞೆ ಮತ್ತು ಶಕ್ತಿ ಬ್ರಹ್ಮಾಂಡದಲ್ಲೆಡೆ ಪಸರಿಸಿವೆ. ಹಾಗಾಗಿ, ಅವನು ಬ್ರಹ್ಮಾಂಡದೆಲ್ಲೆಡೆ ಉಪಸ್ಥಿತನಾಗಿರುವುದರಿಂದ, ಅವನು ತನ್ನ ವೈಯಕ್ತಿಕತೆಯನ್ನು ಕಳೆದುಕೊಂಡನೆಂದು, ವ್ಯಕ್ತಿತ್ವ ಕಳೆದುಕೊಂಡನೆಂದು ಅರ್ಥವಲ್ಲ. ನಾವೂ ಸಹ ಹಾಗೆಯೇ. ಅಂದರೆ, ನಾವು ಪ್ರಜ್ಞೆಯನ್ನು ಇಡೀ ದೇಹದಲ್ಲಿ ಪ್ರಕಟಿಸಲು ಸಕ್ಷಮರಾಗಿದ್ದರೂ, ನಾವು ಏಕ ವ್ಯಕ್ತಿಯಾಗಿದ್ದೇವೆ. ನಮಗೆ ಒಂದು ವ್ಯಕ್ತಿತ್ವವಿದೆ.

ಭಾಗವತದಲ್ಲಿ ಶ್ರೀಲ ಪ್ರಭುಪಾದರು ಇದನ್ನು ಶಕ್ತಿಮಾನ್ ಮತ್ತು ಶಕ್ತಿಗಳರ್ಥದಲ್ಲಿ ವಿವರಿಸುತ್ತಾರೆ. ಈ ರೀತಿಯಾಗಿ ಕೃಷ್ಣ ಪ್ರಜ್ಞೆಯು ನಮಗೆ ವಾಸ್ತವಿಕತೆಯ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಏಕೆಂದರೆ, ಈ ಜಗತ್ತಿನಲ್ಲಿ ಅನೇಕ ಸಂಗತಿಗಳು ಜರುಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ಅಗ್ರಗಣ್ಯ ಭೌತಶಾಸ್ತ್ರಜ್ಞರೆಲ್ಲರು ಟಿ.ಓ.ಇ. ಎಂಬುದನ್ನು ಪರಿಚಯಿಸುವ ಪ್ರಯತ್ನದಲ್ಲಿದ್ದಾರೆ. ಟಿ.ಓ.ಇ. ಅಂದರೆ “ಥಿಯರಿ ಆಫ್ ಎವೆರಿಥಿಂಗ್” (ಎಲ್ಲದರ ಸಿದ್ಧಾಂತ) ಎಂದರ್ಥ. ನೊಬೆಲ್ ಪ್ರಶಸ್ತಿ ಪುರಸ್ಕೃತ ಸ್ಟೀಫನ್ ಹಾಕಿಂಗ್‌ರಂತಹ ದೊಡ್ಡ ದೊಡ್ಡ ವಿಜ್ಞಾನಿಗಳಿಗೆ, ಎಲ್ಲವನ್ನೂ ವಿವರಿಸಬಲ್ಲ ಒಂದು ಶುದ್ಧ, ಸಂಕ್ಷಿಪ್ತ, ಸರಳವಾದ ಸಿದ್ಧಾಂತ ಬೇಕಾಗಿದೆ. ವಾಸ್ತವದಲ್ಲಿ, ವಿಜ್ಞಾನಿಗಳು ಹೇಳುವುದೇನೆಂದರೆ, ಎಂದು “ನಾವು ಈ ಎಲ್ಲದರ ಸಿದ್ಧಾಂತವನ್ನು ಶೋಧಿಸುತ್ತೇವೆಯೋ, ಅಂದು ದೇವರ ಮನಸನ್ನು ತಿಳಿದುಕೊಳ್ಳುವುದು ಸಾಧ್ಯವಾಗಲಿದೆ.” ಎಲ್ಲವನ್ನೂ ವಿವರಿಸಿ ಹೇಳಬಲ್ಲ ಒಂದು ಸಿದ್ಧಾಂತ. ಇಲ್ಲಿ ಖಗೋಳೀಯ ಧಾತುಗಳಿವೆ. ಗುರುತ್ವಾಕರ್ಷಣೆ ಏಕಿದೆ? ವಿದ್ಯುದೀಯ ಶಕ್ತಿ ಏಕಿದೆ? ಅಣುಶಕ್ತಿ ಏಕಿದೆ? ಜೀವಿಗಳು ಏಕಿವೆ? ಅವು ಈ ರೀತಿಯಾಗಿ ವರ್ತಿಸುವ ಉದ್ದೇಶವಾದರೂ ಏನು? ಜಟಿಲವಾದ ಅನೇಕ ವರ್ತನೆಗಳಿವೆ. ಈ ಎಲ್ಲ ಸನ್ನಿವೇಶಗಳು ಏಕೆ ಜರುಗುತ್ತಿವೆ? ಈ ಸಿದ್ಧಾಂತವಾದರೂ ಏನು? ಇದಕ್ಕೆಲ್ಲ ಕಾರಣವೇನು? ಅಂದರೆ ಇನ್ನೊಂದು ಅರ್ಥದಲ್ಲಿ, ವಿಜ್ಞಾನಿಗಳು ಈ ವಿವರಣೆಗಾಗಿ ಹುಡುಕುತ್ತಿದ್ದಾರೆ ಎಂದು ಹೇಳಬಹುದು.

ಶ್ರೀಲ ಪ್ರಭುಪಾದರು ಸಹ ಇದೇ ವಿಷಯವನ್ನು ಹೇಳುತ್ತಾರೆ.

ವೇದ್ಯಂ ವಾಸ್ತವಂ ಅತ್ರ ವಸ್ತು
ಶಿವದಂ ತಾಪತ್ರಯ ಉನ್ಮೂಲನಮ್ ||

ಶ್ರೀಲ ಪ್ರಭುಪಾದರ ಪ್ರಕಾರ, ವಾಸ್ತವ ವಸ್ತು ಎಂದರೆ ಸಂಪೂರ್ಣ ಸತ್ಯವಾಗಿದೆ. ಆದ್ದರಿಂದ ನಾವು ಕೃಷ್ಣ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳಲೇಬೇಕು. ಶ್ರೀಲ ಪ್ರಭುಪಾದರು ಅದನ್ನು ಒಂದು ಆಚರಣಾಬದ್ಧ ಧರ್ಮವೆಂದು ಪ್ರಸ್ತುತ ಪಡಿಸಲಿಲ್ಲ. ಕೇವಲ ಕೆಲವು ವಿಧಿವಿಧಾನ, ಧರ್ಮ, ಆಚರಣೆಗಳು, ನಂಬಿಕೆಗಳನ್ನೊಳಗೊಂಡ ಮತವಾಗಿಯೂ ಅಲ್ಲ. ಅವರು ಅದನ್ನು ಒಂದು ಸಂಪೂರ್ಣ ಚಿತ್ರವಾಗಿ ಪ್ರಸ್ತುತಪಡಿಸಿದರು. ಒಮ್ಮೆ ಪ್ರಭುಪಾದರು ವಿಶ್ವವಿದ್ಯಾಲಂಗಳಲ್ಲಿ ಬೋಧಿಸುತ್ತಿದ್ದ ತಮ್ಮ ಶಿಷ್ಯರಿಗೆ ಪತ್ರ ಬರೆದರು. ಕೃಷ್ಣ ಪ್ರಜ್ಞೆಯನ್ನು ಒಂದು ಒಣ ಮತ್ತು ನೀತಿ ನಿಯಮಗಳಿಂದ ಕೂಡಿದ ವಿಷಯವಾಗಿ ಪ್ರಸ್ತುತ ಪಡಿಸಬಾರದೆಂದು ಶ್ರೀಲ ಪ್ರಭುಪಾದರು ಪತ್ರದಲ್ಲಿ ತಿಳಿಸಿದ್ದರು. ಅದು ಶೈಕ್ಷಣಿಕ ಅನುಭವದ ಅತ್ಯುನ್ನತ ಜ್ಞಾನವಾಗಿದೆ. ಎಲ್ಲದರ ಯಥಾರ್ಥ ಸ್ಥಿತಿಯ ಪರಿಪೂರ್ಣ ಮತ್ತು ವೈಜ್ಞಾನಿಕ ತಿಳುವಳಿಕೆಯಾಗಿದೆ. ಎಲ್ಲದರ ಕುರಿತಾದ ಪರಿಪೂರ್ಣ ವೈಜ್ಞಾನಿಕ ತಿಳುವಳಿಕೆಯಾಗಿದೆ. ಇದೇ ಎಲ್ಲದರ ಸಿದ್ಧಾಂತ (ಥಿಯರಿ ಆಫ್ ಎವೆರಿಥಿಂಗ್) ವಾಗಿದೆ. ಇದು ಭಗವದ್ಗೀತೆಯಂತೆಯೇ. ಏಕೆಂದರೆ ಭಗವದ್ಗೀತೆಯು ಸಹ ಎಲ್ಲದರ ಸಿದ್ಧಾಂತವಾಗಿದೆ. ಎಂದಿಗೂ ಕಾಣದ ಮತ್ತು ಕಂಡರಿಯದ ಅದ್ಭುತಗಳನ್ನು ಅದು ವಿವರಿಸುತ್ತದೆ. ಒಂದು ವೇಳೆ ಇದನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗದಿದ್ದರೆ, ನಾವದನ್ನು ಕಳೆದುಕೊಂಡ ಹಾಗೆಯೇ.

ಹೀಗೆ, ಕೃಷ್ಣಪ್ರಜ್ಞೆಯು ಸರ್ವಸ್ವದ ಯಥಾಸ್ಥಿತಿಯ ಪರಿಪೂರ್ಣ ವೈಜ್ಞಾನಿಕ ತಿಳುವಳಿಕೆಯಾಗಿದೆ. ಏಕೆಂದರೆ, ಈ ಜಗತ್ತಿನಲ್ಲಿ ಅನೇಕ ವಂಚಕರಿದ್ದಾರೆ. ಬದ್ಧಜೀವವು ಆ ರೀತಿ ವಂಚಿಸುವ ಪ್ರವೃತ್ತಿ ಹೊಂದಿದೆ. ಹೀಗೆ ಈ ಬದ್ಧಜೀವಿಗಳು ಪರಮೋಚ್ಚ ಜ್ಞಾನವಾದ ಭಗವದ್ಗೀತೆಯನ್ನು ಸಹ ತಪ್ಪಾಗಿ ಪ್ರಸ್ತುತಪಡಿಸುತ್ತವೆ. ಇನ್ನೊಂದೆಡೆ ಪ್ರಭುಪಾದರು ಹೇಳುತ್ತಾರೆ, “ನಾವು ನಮ್ಮ ಸಂಸ್ಕೃತ ಗ್ರಂಥಗಳನ್ನು ಉಲ್ಲೇಖಿಸಲು ಕಲಿಯಬೇಕು. ನಾವು ಉತ್ತಮ ರೀತಿಯಲ್ಲಿ ಬಟ್ಟೆಗಳನ್ನು ಧರಿಸಬೇಕು ಮತ್ತು ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು. ಆಗ ಮಾತ್ರ ನಾವು ಅಂದರೆ ಭಕ್ತರು ವಿಶ್ವವಿದ್ಯಾಯಗಳಲ್ಲಿ ಬೋಧಿಸಲು ಅರ್ಹರಾಗುವೆವು.” ಅಂದರೆ ಕೃಷ್ಣ ಪ್ರಜ್ಞೆಯನ್ನು ಧರ್ಮ ಮತ್ತು ಆಚರಣೆಗಳಿಂದ ತುಂಬಿದ ಒಂದು ಮತಾಚರಣೆಯ ನಂಬಿಕೆಯಾಗಿ ಪ್ರಸ್ತುತಪಡಿಸಬಾರದೆಂಬುದು ಪ್ರಭುಪಾದರ ವಿಚಾರವಾಗಿತ್ತು. ನಿಜದಲ್ಲಿ ಧರ್ಮವೆಂದರೆ, ಜನರ ಒಂದು ಗುಂಪಿನ ಕೆಲವು ಪ್ರಕಾರದ ನಂಬಿಕೆಗಳು. ಇನ್ನು ಕೆಲವು ಗುಂಪಿನ ಜನ ಬೇರೆ ಪ್ರಕಾರದ ನಂಬಿಕೆ ಹೊಂದಿರಬಹುದು. ಅವರೂ ಸರಿಯೇ. ಬೇರೆ ಬೇರೆ ಜನ ವಿವಿಧ ಬಗೆಯ ನಂಬಿಕೆಗಳನ್ನು ಹೊಂದಿದ್ದಾರೆ.

ಕೃಷ್ಣ ಪ್ರಜ್ಞೆಯು ಮೂಲಭೂತವಾದ ಸತ್ಯವಾಗಿದೆ. ಇದೇ ರೀತಿಯಾಗಿ ಶ್ರೀಲ ಪ್ರಭುಪಾದರು ಅದನ್ನು ಪ್ರಸ್ತುತಪಡಿಸಿದರು. ಒಮ್ಮೆ ಶ್ರೀಲ ಪ್ರಭುಪಾದರು ಬೋಧನೆ ನೀಡುತ್ತಿರುವ ಸಂದರ್ಭದಲ್ಲಿ, ಡಾರ್ವಿನ್‌ನ ‘ಅತೀ ಸಮರ್ಥರ ಉಳಿಯುವಿಕೆ’ ಸಿದ್ಧಾಂತವನ್ನು ಉಲ್ಲೇಖಿಸುತ್ತಿದ್ದರು. ಅದನ್ನು ಕುರಿತು ಮಾತನಾಡುತ್ತ ಶ್ರೀಲ ಪ್ರಭುಪಾದರು ಹೇಳುತ್ತಾರೆ, ಅತೀ ಸಮರ್ಥರ ಉಳಿಯುವಿಕೆ ಎಂದು ಡಾರ್ವಿನ್ ಹೇಳಿದ್ದಾನೆ. ಯಾರೂ ಉಳಿಯಲಿಲ್ಲವಾದ್ದರಿಂದ, ಯಾರೂ ಸಮರ್ಥರಲ್ಲ. ನಮ್ಮಲ್ಲಿ ಯಾರೂ ಈ ಭೌತಿಕ ಜಗತ್ತಿನಲ್ಲಿ ಬದುಕಲು ಅಥವಾ ಉಳಿಯಲು ಸಮರ್ಥರಾಗಿಲ್ಲ. ಏಕೆಂದರೆ, ನಾವೆಲ್ಲರೂ ಒಂದು ಆಧ್ಯಾತ್ಮಿಕ ಕಿಡಿಯಾಗಿದ್ದೇವೆ. ಇದು ನಮ್ಮ ಮನೆಯಲ್ಲ. ಆದ್ದರಿಂದಲೇ, ನಾವು ಇಲ್ಲಿ ಉಳಿಯುವುದಿಲ್ಲ. ನಾವು ಬದುಕಲು ಮತ್ತು ಉಳಿಯಲು ಹೋರಾಡುತ್ತಿರಬಹುದು. ಆದರೆ ಅತ್ಯಂತ ಸಮರ್ಥರಾದವರು ಮಾತ್ರ ಉಳಿಯುವರು. ಹಾಗೆ ಯಾರೂ ಉಳಿಯುವುದಿಲ್ಲ. ಯಾರೂ ಸಮರ್ಥರಲ್ಲ. ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ಒಂದು ಪದ್ಯವಿದೆ. ಸಾಮಾನ್ಯವಾಗಿ ಈ ಹದಿನೈದನೆಯ ಅಧ್ಯಾಯವು ಪುರುಷೋತ್ತಮ ಯೋಗ ಎಂದು ಪರಿಚಿತವಾಗಿದೆ. ಶ್ರೀಲ ಪ್ರಭುಪಾದರು ಅದನ್ನು ಪರಮ ಪುರುಷನ ಯೋಗವೆಂದು ಅನುವಾದಿಸುತ್ತಾರೆ. ನಾವು ಹೇಗೆ ಮಹಾಪ್ರಸಾದೇ ಗೋವಿಂದೇ ನಮಃ ಬ್ರಾಹ್ಮಣೋ ವೈಷ್ಣವೇ… ಎಂದು ಪಠಿಸುತ್ತೇವೆಯೋ, ಹಾಗೆಯೇ ಉಡುಪಿಯಲ್ಲಿ ಎಲ್ಲ ಬ್ರಾಹ್ಮಣರೂ ಮಧ್ಯಾಹ್ನದ ಊಟವಾದ ಅನಂತರ ಭಗವದ್ಗೀತೆಯ ೧೫ನೇ ಅಧ್ಯಾಯವನ್ನು ಪಠಿಸುತ್ತಾರೆ. ಕೇವಲ ೨೦ ಶ್ಲೋಕಗಳು. ಇದು ಕೆಲವು ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ ಮತ್ತು ಅವರು ಈ ೧೫ನೇ ಅಧ್ಯಾಯವನ್ನು ಪಠಿಸುತ್ತಾರೆ. ೧೫ನೇ ಅಧ್ಯಾಯದ ಕೊನೆಯ ಭಾಗವಾದ ೧೯ ಮತ್ತು ೨೦ನೇ ಶ್ಲೋಕಗಳು ಸ್ವಾರಸ್ಯಪೂರ್ಣವಾಗಿವೆ. ಕೃಷ್ಣನು ಇದನ್ನು ಎಷ್ಟು ಸೊಗಸಾಗಿ ಸೆರೆಹಿಡಿದಿದ್ದಾನೆಂದರೆ,

ಯೋ ಮಾಮ್ ಏವಂ ಅಸಮ್ಮೂಢೋ |
ಜಾನಾತಿ ಪುರುಷೋತ್ತಮಂ ||

ಈ ಕಾರಣದಿಂದಲೇ ಅದನ್ನು ಪುರುಷೋತ್ತಮ ಯೋಗವೆಂದು ಕರೆಯಲಾಗುತ್ತದೆ. ಜಾನಾತಿ ಅಂದರೆ ಯಾವ ಸಂದೇಹವೂ ಇಲ್ಲದೆ ಸ್ಪಷ್ಟವಾಗಿ ತಿಳಿದುಕೊಳ್ಳುವವನು. `ಮಾಂ’ ಎಂದರೆ ಭಗವಂತನನ್ನು ಪುರುಷೋತ್ತಮನೆಂದು, ಉತ್ತಮ ಪುರುಷನೆಂದು, ಪರಮ ಪುರುಷನೆಂದು ತಿಳಿದುಕೊಳ್ಳುವವನು. ಸ ಸರ್ವ ವಿತ್ ಅಂದರೆ ಭಕ್ತಿಸೇವೆಯಲ್ಲಿ ತೊಡಗಿರುವ ವ್ಯಕ್ತಿಯು ಎಲ್ಲವನ್ನೂ ಬಲ್ಲವನಾಗಿರುತ್ತಾನೆ. ಕೃಷ್ಣನು ಪುರುಷೋತ್ತಮನು ಎಂದು ತಿಳಿದುಕೊಂಡವನು ಎಲ್ಲವನ್ನು ಬಲ್ಲ ವ್ಯಕ್ತಿಯಾಗಿದ್ದಾನೆ. ಎಲ್ಲವನ್ನೂ ಬಲ್ಲವನು ತಿಳಿದುಕೊಂಡ ವ್ಯಕ್ತಿ. ಎಲ್ಲವನ್ನೂ ತಿಳಿದುಕೊಂಡ ಅನಂತರ ಅವನು ತನ್ನ ಭಕ್ತಿಪೂರ್ವಕ ಸೇವೆಯನ್ನು ಕೃಷ್ಣನಿಗೆ ಸಲ್ಲಿಸುತ್ತಾನೆ. ಇತರ ಬೇರೆ ಕೆಲಸಗಳೊಂದಿಗೆ ಅವನು ಭಕ್ತಿಪೂರ್ವಕ ಸೇವೆಯನ್ನು ಸಹ ಮಾಡುತ್ತಾನೆ.

ಯಾರು ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ತಿಳಿದಿರುವರೋ, ಅವರನ್ನು ನಿಸ್ಸಂದೇಹವಾಗಿ ಎಲ್ಲವನ್ನೂ ಬಲ್ಲವರೆಂದು ತಿಳಿಯಬೇಕು. ಹಾಗಾಗಿ ಅಂಥ ವ್ಯಕ್ತಿಯು ತನ್ನನ್ನು ಕೃಷ್ಣನ ಸಂಪೂರ್ಣವಾದ ಭಕ್ತಿ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಕೃಷ್ಣನು ಪರಮ ಪುರುಷನೆಂಬ ಜ್ಞಾನವು ಗುಹ್ಯತಮಂ ಶಾಸ್ತ್ರಂ ಆಗಿದೆ. ಅಂದರೆ ಅದು ವೈದಿಕ ಗ್ರಂಥಗಳ ಅತ್ಯಂತ ಗೌಪ್ಯವಾದ ಭಾಗವಾಗಿದೆ.

ಕೃಷ್ಣ ಹೇಳುವಂತೆ ಎಲ್ಲವೂ ಅವನಿಂದ ಬಹಿರಂಗಪಡಿಸಲಾಗಿದೆ. ಈ ತಿಳುವಳಿಕೆಯಿರುವ ವ್ಯಕ್ತಿಯು ಬುದ್ಧಿವಂತನಾಗುತ್ತಾನೆ. ಅವನು ಜ್ಞಾನಿಯಾಗುತ್ತಾನೆ. ಅವನ ಎಲ್ಲ ಚಟುವಟಿಕೆಗಳು ಪರಿಪೂರ್ಣತೆಯನ್ನು ತಲಪುತ್ತವೆ. ಇದು ವೈದಿಕ ಸಾಹಿತ್ಯದಲ್ಲಿ ಅತ್ಯಂತ ಗೋಪ್ಯವಾದ ಭಾಗವಾಗಿದೆ. ಅದು ಬಹಿರಂಗವಾಗಿರುವುದು ಕೃಷ್ಣನಿಂದ ಮತ್ತದು ತುಂಬ ಉತ್ತಮವಾದುದಾಗಿದೆ. “ಯಾರು ಇದನ್ನು ಅರಿತುಕೊಳ್ಳುವರೋ, ಅವರು ಬುದ್ಧಿವಂತರಾಗುವರು ಮತ್ತು ಅವರ ಪ್ರಯತ್ನಗಳು ಪರಿಪೂರ್ಣತೆಯನ್ನು ಕಾಣುವವು” ಎಂದು ಕೃಷ್ಣ ಹೇಳುತ್ತಾನೆ.

ಇದುವೇ ಕೃಷ್ಣ ಪ್ರಜ್ಞೆಯ, ಕೃಷ್ಣನ ಜ್ಞಾನದ ಸ್ಥಿತಿ ಆಗಿದೆ. ಆದ್ದರಿಂದಲೇ, ನಮ್ಮ ಜೀವನಕ್ಕೆ ಮಾರ್ಗದರ್ಶನಕ್ಕಾಗಿ, ನಮ್ಮಲ್ಲಿ ಅರಿವು ಮೂಡಿಸಲು ಭಗವದ್ಗೀತೆ ಮತ್ತು ಶ್ರೀಮದ್ ಭಾಗವತಗಳು ತುಂಬಾ ಪ್ರಮುಖವಾದ ಗ್ರಂಥಗಳಾಗಿವೆ. ಇದು ವೈದಿಕ ಗ್ರಂಥಗಳ ಅತ್ಯಂತ ಗೋಪ್ಯವಾದ ಭಾಗವಾಗಿರುವುದರಿಂದ, ಈ ವಿಷಯಗಳನ್ನು ಶ್ರೀಲ ಪ್ರಭುಪಾದರು ನಮಗೆ ತಿಳಿಯುವ ರೀತಿಯಲ್ಲಿ ಅತ್ಯಂತ ಸುಂದರವಾಗಿ, ಅತ್ಯಂತ ಆಕರ್ಷಕವಾಗಿ, ಅಷ್ಟೇ ಅಲ್ಲದೇ ವೈಜ್ಞಾನಿಕ ಮತ್ತು ಪರಿಪೂರ್ಣ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi