ಆತ್ಮದ ಅಸ್ತಿತ್ವವನ್ನು ಕುರಿತು ವಿಜ್ಞಾನವು ಬಹುಶಃ ಅರಿಯದೆಯೇ ಏನನ್ನು ಹೊರಗೆಡವಿದೆ?
ಐದು ಸಾವಿರ ವರ್ಷಗಳ ಹಿಂದೆ, ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ದೇವೋತ್ತಮನಾದ ಶ್ರೀ ಕೃಷ್ಣನು ಅಚ್ಚರಿಯಿಂದ ನಿಂತಿದ್ದಾನೆ. ತನ್ನ ಪರಮ ಮಿತ್ರ ಅರ್ಜುನನು ಸಾವು ಅನಿವಾರ್ಯ ಎಂದು ಗೊತ್ತಿದ್ದರೂ ತನ್ನ ಬಂಧುಗಳು ಸಾಯುತ್ತಾರೆ ಎಂದು ಗೋಳಾಡುತ್ತ ಆತ್ಮ ಶಾಶ್ವತ ಎಂಬ ಬದುಕಿನ ಮೂಲ ಸತ್ಯದ ಬಗೆಗೆ ಅಜ್ಞಾನಿಯಾಗಿರುವುದನ್ನು ಕಂಡು ಕೃಷ್ಣನು ಅಚ್ಚರಿಗೊಂಡನು. ಅವನು ಉದ್ಗರಿಸಿದ, “ನನ್ನ ಪ್ರೀತಿಯ ಅರ್ಜುನ, ಈ ಅಶುದ್ಧ ವಿಚಾರಗಳು ನಿನ್ನಲ್ಲಿ ಹೇಗೆ ಬಂದವು? ಬದುಕಿನ ವೌಲ್ಯವನ್ನು ಅರಿತ ವ್ಯಕ್ತಿಗೆ ಅದು ತಕ್ಕುನಾದುದಲ್ಲ.” ಅರ್ಜುನನಿಗೆ ಅರಿವು ಉಂಟುಮಾಡಲು ಕೃಷ್ಣನು ಬೋಧಕನ ಪಾತ್ರ ನಿರ್ವಹಿಸಿದ. ಆತ್ಮದ ಅಸ್ತಿತ್ವವನ್ನು ಸಾಬೀತುಪಡಿಸಲು ಪ್ರಬಲವಾದ ಕಾರಣ ಮತ್ತು ಸ್ಪಷ್ಟ ಪುರಾವೆಗಳನ್ನು ಉಪಯೋಗಿಸಿ ಕೃಷ್ಣನು ಭಗವದ್ಗೀತೆಯನ್ನು ಹೇಳಲು ಆರಂಭಿಸಿದ.

ಅರ್ಜುನನಂತೆ ಬಹಳ ಜನರು ದೇಹವನ್ನೇ ಆತ್ಮ ಎಂದು ಸ್ವೀಕರಿಸುತ್ತಾರೆ. ಆತ್ಮದ ಅಸ್ತಿತ್ವವನ್ನು ಸಾಬೀತುಪಡಿಸಬೇಕು ಎಂದರೆ, ಆತ್ಮವು ದೇಹಕ್ಕಿಂತ ಭಿನ್ನ ಮತ್ತು ಪರಮ ಎನ್ನುವುದನ್ನು ಮೊದಲು ತೋರಿಸುವುದು ಎಂದು ಆರ್ಥ. ಶ್ರೀ ಕೃಷ್ಣನು ಈ ರೀತಿ ಸಮರ್ಥಿಸುತ್ತಾನೆ : “ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲೇ ಆತ್ಮವು ಸಾವಿನ ಅನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ.”
ನಾವು ಇದನ್ನು ಈ ರೀತಿ ಪರಿಗಣಿಸಬಹುದು : ಮೊದಲು ನಮಗೆ ಮಗುವಿನ ದೇಹವಿತ್ತು. ಆ ದೇಹವು ಇನ್ನು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ನಾವು ಬೇರೆ ದೇಹದಲ್ಲಿ ಇದ್ದೇವೆ. ಅದೇ ರೀತಿ, ಭವಿಷ್ಯದಲ್ಲಿಯೂ ಕೂಡ, ಸಾವಿಗೆ ಮುನ್ನ ನಮಗೆ ವೃದ್ಧರ ದೇಹವಿರುತ್ತದೆ ಮತ್ತು ಈಗ ಹೊಂದಿರುವ ದೇಹವು ಹೊರಟುಹೋಗುತ್ತದೆ. ಶ್ರೀ ಕೃಷ್ಣನ ಸಮರ್ಥನೆ ಸ್ಪಷ್ಟವಾಗಿದೆ. ಈ ಜನ್ಮದಲ್ಲಿಯೇ ನಮ್ಮ ಆತ್ಮವು ವಿವಿಧ ದೇಹದೊಳಗೆ ದೇಹಾಂತರಹೊಂದುತ್ತದೆ. ಆದುದರಿಂದ ನಮ್ಮ ಪ್ರಜ್ಞಾವಂತ ಆತ್ಮಕ್ಕೆ ಶಾಶ್ವತವಾಗಿರುವ ಗುಣವಿದೆ. ಈ ಜನ್ಮದಲ್ಲಿಯೇ ನಮ್ಮ ವಿಭಿನ್ನ ದೇಹಗಳು ನಾಶವಾದರೂ ಆತ್ಮವು ಬದುಕುಳಿದಿದೆ. ನಾನು ನಮ್ಮ ಜೀವಿತಾವಧಿಯಲ್ಲಿ ಭಿನ್ನವಾದ ದೇಹಗಳನ್ನು ಸ್ವೀಕರಿಸುತ್ತಿಲ್ಲ ಎಂದು ಯಾರಾದರೂ ವಾದಿಸಬಹುದು. ನಮ್ಮ ದೇಹವು ಬೆಳೆಯುತ್ತಿದೆಯಷ್ಟೆ ಎನ್ನಬಹುದು. ಆದರೆ, ನಮ್ಮ ದೇಹದ ಜೀವ ಕೋಶಗಳು ಸತತವಾಗಿ ಬದಲಾಗುತ್ತಿವೆ. ಆದುದರಿಂದ ಕ್ಷಣ ಕ್ಷಣಕ್ಕೂ ನಮ್ಮ ದೇಹವು ವ್ಯತ್ಯಾಸವಾಗುತ್ತ ಹೋಗುತ್ತದೆ ಎಂದು ಒಪ್ಪಿಕೊಳ್ಳುತ್ತ ಆಧುನಿಕ ವಿಜ್ಞಾನಿಗಳೂ ಕೂಡ ಭಗವಂತನ ವಾದವನ್ನು ಬೆಂಬಲಿಸುತ್ತಾರೆ. ಒಂದು ನಿರ್ದಿಷ್ಟ ಕಾಲದ ಅನಂತರ ಇಡೀ ದೇಹವು ಬದಲಾಗಿರುತ್ತದೆ.

ವಾಸ್ತವವಾಗಿ, ಭಗವದ್ಗೀತೆಯ ಪ್ರಕಾರ, ದೇಹವನ್ನು `ಅಸ್ತಿತ್ವದಲ್ಲಿ ಇಲ್ಲದ್ದು’ ಎಂದೂ ಪರಿಗಣಿಸಬಹುದು. ಸಾಗರದ ಅಲೆಗಳಂತೆ, ಅದಕ್ಕೆ ಶಾಶ್ವತ ಅಸ್ತಿತ್ವವಿಲ್ಲ ಮತ್ತು ಕಾಲ ಕ್ರಮೇಣ ಅದು ಕಣ್ಮರೆಯಾಗುತ್ತದೆ. ಆದುದರಿಂದ ಕೃಷ್ಣನು ಆತ್ಮ ಮತ್ತು ದೇಹದ ನಡುವಣ ವ್ಯತ್ಯಾಸವನ್ನು ಪರಿಗಣಿಸಬೇಕೆಂದು ಅರ್ಜುನನಿಗೆ ಹೇಳುತ್ತಾನೆ, “ಅಸ್ತಿತ್ವದಲ್ಲಿಲ್ಲದಿರುವುದು (ಐಹಿಕ ದೇಹ) ಉಳಿಯುವುದಿಲ್ಲ, ಮತ್ತು ನಿರಂತರವಾದದ್ದು (ಆತ್ಮ) ಬದಲಾವಣೆ ಹೊಂದುವುದಿಲ್ಲ.”
ಪರಿಶೀಲನೆ
ಆತ್ಮದ ಶಾಶ್ವತ ಗುಣ, ಬದಲಾಗುತ್ತಿರುವ ದೇಹದಿಂದ ಭಿನ್ನವಾಗಿರುವುದನ್ನು, ನಮ್ಮದೇ ಅನುಭವದಿಂದ ಕೂಡ ಪರಿಶೀಲಿಸಬಹುದು. ಶ್ರೀಲ ಪ್ರಭುಪಾದರು ಬರೆಯುತ್ತಾರೆ, “ದೇಹದಂತೆ ಆತ್ಮಕ್ಕೆ ಯಾವ ಕಾಲಕ್ಕೂ ವಯಸ್ಸಾಗುವುದಿಲ್ಲ. ಆದುದರಿಂದ ವೃದ್ಧರೆನ್ನಿಸಿಕೊಳ್ಳುವವರು ತಾವು ಬಾಲ್ಯ ಅಥವಾ ಯೌವನಾವಸ್ಥೆಯಲ್ಲಿ ಇದ್ದ ಸೂರ್ತಿಯನ್ನೇ ಅನುಭವಿಸುತ್ತಾರೆ.”
ವಿವೇಚನೆ ಮತ್ತು ಶಾರೀರಕ ಅನುಭವಗಳು ನಮಗೆ ಆತ್ಮವನ್ನು ಅರ್ಥಮಾಡಿಕೊಳ್ಳಲು ನೆರವಾಗಬಹುದಾದರೂ, ಯಾವುದೇ ಗ್ರಹಿಸಲಾಗದ ವಾಸ್ತವಾಂಶಕ್ಕೆ ಪ್ರಬಲವಾದ ಪುರಾವೆ ಎಂದರೆ, ಅದರ ಪ್ರಭಾವ ಅಥವಾ ಲಕ್ಷಣಗಳು. ಉದಾಹರಣೆಗೆ, ಮೋಡ ಕವಿದ ವಾತಾವರಣವಿದ್ದಾಗ, ನಾವು ಸೂರ್ಯನನ್ನು ನೋಡದಿರಬಹುದು, ಆದರೆ ಸೂರ್ಯನ ಬೆಳಕಿನಿಂದ ನಾವು ಅದರ ಉಪಸ್ಥಿತಿಯನ್ನು ತಿಳಿಯಬಹುದು. ಅರಿಯದೇ ತೆಗೆದುಕೊಂಡ ಔಷಧಿಯನ್ನು ದೇಹದಲ್ಲಿ ಹರಡುವ ಅದರ ಪ್ರಭಾವದಿಂದ ಗುರುತಿಸಬಹುದು. ಅದೇ ರೀತಿ, ಪ್ರಜ್ಞೆಯಾಗಿ ದೇಹವನ್ನು ವ್ಯಾಪಿಸುವ, (ಶ್ವೇತಾಶ್ವತರ ಉಪನಿಷತ್ತಿನ ಪ್ರಕಾರ ಅಣುವಿಗಿಂತಲೂ ಚಿಕ್ಕದಾದ) ಅತಿ ಸೂಕ್ಷ್ಮವಾದ ಆತ್ಮವನ್ನು ಅದರ ಪ್ರಭಾವದಿಂದ ಗ್ರಹಿಸಬಹುದು.
ಆಧಾರ ತತ್ತ್ವ
ಶ್ರೀಲ ಪ್ರಭುಪಾದರು ಭಗವದ್ಗೀತೆಯನ್ನು ಕುರಿತ ತಮ್ಮ ವ್ಯಾಖ್ಯಾನದಲ್ಲಿ ಹೇಳುತ್ತಾರೆ, “ದೇಹವನ್ನೆಲ್ಲ ವ್ಯಾಪಿಸಿರುವುದು ಯಾವುದು ಎಂದು ಎಲ್ಲರಿಗೂ ಗೊತ್ತು. ಇದು ಪ್ರಜ್ಞೆ. ದೇಹವು ಅನುಭವಿಸುವ ನೋವು ಮತ್ತು ಸುಖಗಳ ಪ್ರಜ್ಞೆ ಪ್ರತಿಯೊಬ್ಬರಿಗೂ ಇರುತ್ತದೆ. ಪ್ರಜ್ಞೆಯು ಆವರಿಸಿರುವುದು ಆಯಾ ಮನುಷ್ಯನ ದೇಹದಲ್ಲಿ ಮಾತ್ರ. ಒಂದು ದೇಹದ ನೋವುಗಳು, ಸುಖಗಳು ಇನ್ನೊಂದು ದೇಹಕ್ಕೆ ತಿಳಿಯುವುದಿಲ್ಲ. ಆದುದರಿಂದ ಪ್ರತಿದೇಹದಲ್ಲಿಯೂ ಒಂದು ಪ್ರತ್ಯೇಕ ಆತ್ಮವಿರುತ್ತದೆ; ಆತ್ಮದ ಅಸ್ತಿತ್ವದ ಲಕ್ಷಣವು ವೈಯಕ್ತಿಕ ಪ್ರಜ್ಞೆಯಾಗಿ ಕಾಣಿಸಿಕೊಳ್ಳುತ್ತದೆ.”
ಸಾವಿನ ವಿಷಯವೂ ಕೂಡ ಆತ್ಮವೇ ದೇಹದೊಳಗಿನ ಆಧಾರ ತತ್ತ್ವ ಎನ್ನುವುದನ್ನು ಹೊರಗೆಡಹುತ್ತದೆ. ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ನಾಸ್ತಿಕ ಕೂಡ ಉದ್ಗರಿಸುತ್ತಾನೆ, “ನನ್ನ ತಾಯಿ ಹೊರಟು ಹೋದಳು” ಅಥವಾ “ನನ್ನ ತಂದೆ ಹೊರಟು ಹೋದರು.” ದೇಹವು ತನ್ನೆಲ್ಲ ಅಂಗಾಂಗಗಳಿಂದ ಅಲ್ಲೇ ಇದ್ದರೂ ಈ ರೀತಿ ಉದ್ಗರಿಸುತ್ತಾರೆ.

ಆಧಾರ ತತ್ತ್ವ ಇಲ್ಲದ ದೇಹವು ನಿಷ್ಪ್ರಯೋಜಕ ಎನ್ನುವುದನ್ನು ಯಾರಾದರೂ ಕಾಣಬಹುದು. ಇನ್ನೂ ಮುಂದೆ ಹೇಳಬೇಕೆಂದರೆ, ಯಾವುದೇ ಭೌತಿಕ ಉಪಚಾರ ಅಥವಾ ವೈಜ್ಞಾನಿಕ ತಜ್ಞತೆಯಿಂದ ಸಾವಾದಾಗ ಪ್ರಜ್ಞೆಯನ್ನು ಪುನಶ್ಚೇತನಗೊಳಿಸುವುದು ಸಾಧ್ಯವಿಲ್ಲದ ಕಾರಣ ಪ್ರಜ್ಞೆಯು ಲೌಕಿಕವಲ್ಲದ ಅಪೂರ್ವವಾದ ಶಾಶ್ವತ ಆತ್ಮದ ಕಾರಣದಿಂದಾಗಿ ಎಂದು ನಾವು ತರ್ಕಬದ್ಧವಾಗಿ ನಿರ್ಧರಿಸಬಹುದು.
ವಿಜ್ಞಾನಿಗಳ ಬೆಂಬಲ
ಭೌತಶಾಸ್ತ್ರದ ನಿಯಮಗಳ ಮೂಲಕ ಚೇತನಾತ್ಮದ ಬಗೆಗೆ ವಿವರಿಸಲು ವಿಫಲವಾದ್ದರಿಂದ, ಆಧುನಿಕ ವಿಜ್ಞಾನವು ಅತ್ಮವನ್ನು ಕುರಿತ ಕೃಷ್ಣನ ವಿಶ್ಲೇಷಣೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತದೆ. ಪ್ರಜ್ಞೆಯು ಭೌತವಿಜ್ಞಾನ ಕ್ಷೇತ್ರದ ವಿಷಯವನ್ನು ಮೀರಿದುದು ಎಂದು ಐನ್‌ಸ್ಟೀನ್ ಮತ್ತು ನೀಲ್ಸ್ ಬೋರ್ ಅವರಂತಹ ಶ್ರೇಷ್ಠ ವಿಜ್ಞಾನಿಗಳು ಹೇಳಿದ್ದಾರೆ. ನೊಬೆಲ್ ಪ್ರಶಸ್ತಿ ಪಡೆದ ಖ್ಯಾತ ವೈದ್ಯ ಆಲ್ಬರ್ಟ್ ಜೆಂಟ್ ಗೋರ್ಗಿ ವಿಷಾದಿಸಿದ್ದರು, “ಬದುಕಿನ ರಹಸ್ಯವನ್ನು ಕುರಿತು ಶೋಧಿಸುತ್ತ ನಾನು ಜೀವವೇ ಇಲ್ಲದ ಅಣು ಮತ್ತು ಎಲೆಕ್ಟ್ರಾನ್‌ನಲ್ಲಿ ಸಿಕ್ಕಿಹಾಕಿಕೊಂಡೆ. ಎಲ್ಲೋ ಮಾರ್ಗದಲ್ಲಿ ಬದುಕು ನನ್ನ ಬೆರಳಿನ ಮೂಲಕ ನುಸುಳಿ ಹೋಯಿತು. ಆದುದರಿಂದ, ನನ್ನ ವೃದ್ಧಾಪ್ಯದಲ್ಲಿ ನಾನು ನನ್ನ ಹೆಜ್ಜೆಗಳನ್ನು ಪರಾಮರ್ಶಿಸುತ್ತಿದ್ದೇನೆ.”
ಹೃದಯವು ಶರೀರದ ಜೀವಂತವಾಗಿರುವಿಕೆಯ ಮೂಲ ಎಂಬ ವಾಸ್ತವಾಂಶದಿಂದಲೂ ಕೂಡ ಆತ್ಮದ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳಬಹುದು. ಮುಂಡಕ ಉಪನಿಷತ್ತಿನ ಪ್ರಕಾರ ಆತ್ಮವು ಪ್ರತಿಜೀವಿಯ ಹೃದಯದಲ್ಲಿ ನೆಲೆಸಿದೆ. ಶ್ವಾಸಕೋಶದಿಂದ ಆಮ್ಲಜನಕವನ್ನು ಒಯ್ಯುವ ರಕ್ತಕಣಗಳು ಆತ್ಮದಿಂದ ಶಕ್ತಿಯನ್ನು ಪಡೆಯುತ್ತವೆ. ಈ ಸ್ಥಾನದಿಂದ ಆತ್ಮವು ಹೊರಟು ಹೋದಾಗ ರಕ್ತವನ್ನು ಉತ್ಪತ್ತಿಮಾಡುವ ಸಂಯೋಜನೆಯ ಕ್ರಿಯೆಯು ನಿಂತುಹೋಗುತ್ತದೆ. ಆತ್ಮವೇ ಚೈತನ್ಯದ ಮೂಲ ಎಂದು ವೈದ್ಯ ವಿಜ್ಞಾನಿಗಳು ಕಂಡುಕೊಳ್ಳಲಾರರು. ಹೀಗಿದ್ದರೂ ವೈದ್ಯವಿಜ್ಞಾನವು ಹೃದಯವೇ ದೇಹದ ಎಲ್ಲ ಚೈತನ್ಯಗಳ ಸ್ಥಾನ ಎನ್ನುವುದನ್ನು ಒಪ್ಪಿಕೊಳ್ಳುವ ಮೂಲಕ ಆತ್ಮವೇ ಶಕ್ತಿಯ ಮೂಲ ಎಂಬ ವೈದಿಕ ಶಾಸ್ತ್ರದ ನಿರೂಪಣೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಾರೆ.
ಅಂತಿಮವಾಗಿ, ಆತ್ಮದ ಅಸ್ತಿತ್ವವನ್ನು ಕುರಿತ ನಮ್ಮ ಅರಿವು ನಮ್ಮ ಸಾಮಾನ್ಯ ಮಾತುಗಳಲ್ಲಿಯೂ ಬಿಂಬಿತವಾಗಿದೆ. “ಇದು ನನ್ನ ಬೆರಳು” ಎನ್ನುತ್ತೇವೆಯೇ ವಿನಾ “ನಾನು ಬೆರಳು” ಎಂದು ಹೇಳುವುದಿಲ್ಲ. ಏಕೆಂದರೆ ದೇಹದ ಜ್ಞಾತಾ (ತಿಳಿಯುವವನು) ಅಥವಾ ಭೋಕ್ತ (ಒಡೆಯ), ಮತ್ತು ಸ್ವತಃ ದೇಹದ ನಡುವಣ ವ್ಯತ್ಯಾಸವನ್ನು ನಾವು ಸಹಜವಾಗಿ ಮಾಡುತ್ತೇವೆ.

ಶ್ರೀ ಕೃಷ್ಣನು ಅರ್ಜುನನಿಗೆ ಮಾಡಿದ ಮೊದಲ ಬೋಧನೆಯು ಬದುಕಿನ ಅತ್ಯಂತ ಮುಖ್ಯವಾದ ಮೂಲಾಂಶವಾಗಿದೆ, “ಆತ್ಮಕ್ಕೆ ಎಂದೂ ಹುಟ್ಟು ಎನ್ನುವುದಿಲ್ಲ; ಸಾವು ಎನ್ನುವುದಿಲ್ಲ. ಅದು ಹಿಂದೆ ಹುಟ್ಟಿದ್ದಿಲ್ಲ; ಈಗ ಹುಟ್ಟಿ ಬರುವುದಿಲ್ಲ; ಮುಂದೆ ಹುಟ್ಟುವುದೂ ಇಲ್ಲ. ಅದು ಜನ್ಮರಹಿತವಾದದ್ದು, ನಿತ್ಯವಾದದ್ದು, ಶಾಶ್ವತವಾದದ್ದು, ಪುರಾತನವಾದದ್ದು. ದೇಹವನ್ನು ಕೊಂದಾಗ ಅದು ಸಾಯುವುದಿಲ್ಲ.”






Leave a Reply