ಆತ್ಮಘಾತುಕ ನಾಗರಿಕತೆ

ದೇಹಕ್ಕಾಗಿ ದುಡಿಯುವುದರಲ್ಲಿ ಮಿತಿಮೀರಿದ ಒತ್ತಡ ಮತ್ತು ಆಧ್ಯಾತ್ಮಿಕ ಜ್ಞಾನ ಸಂಪಾದನೆಗೆ ತೀರ ಕಡಮೆ ಪ್ರಯತ್ನ – ಇವು ಮಾನವ ಸಮಾಜದ ಜೀವಂತಿಕೆಯನ್ನೇ ನಾಶಮಾಡುತ್ತಿವೆ.

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

ಸಂಸ್ಥಾಪಕರು ಮತ್ತು ಆಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ

ಜನವರಿ 1967, ನ್ಯೂಯಾರ್ಕ್‌ನಲ್ಲಿ ನೀಡಿದ ಉಪನ್ಯಾಸ

ಬುದ್ಧಿಃ ಜ್ಞಾನ ಅಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ

ಸುಖಂ ದುಃಖಂ ಭವೋಽಭಾವೋ ಭಯಂ ಚಾಭಯಂ ಏವ ಚ

ಅಹಿಂಸಾ ಸಮತಾ ತುಷ್ಟಿಃ ತಪೋ ದಾನಂ ಯಶೋಽಯಶಃ

ಭವನ್ತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್‌ವಿಧಾಃ

ಬುದ್ಧಿ, ಜ್ಞಾನ, ಸಂದೇಹ ಮತ್ತು ಭ್ರಾಂತಿಗಳಿಂದ ಬಿಡುಗಡೆ, ಕ್ಷಮೆ, ಸತ್ಯ, ಇಂದ್ರಿಯನಿಗ್ರಹ, ಮನೋನಿಗ್ರಹ, ಸುಖದುಃಖಗಳು, ಹುಟ್ಟು, ಸಾವು, ಭಯ, ನಿಭರ್ಯ, ಅಹಿಂಸೆ, ಸಮಚಿತ್ತತೆ, ತುಷ್ಟಿ, ತಪಸ್ಸು, ದಾನ, ಕೀರ್ತಿ ಮತ್ತು ಅಪಕೀರ್ತಿ – ಜೀವಿಗಳ ಈ ಎಲ್ಲ ಗುಣಗಳನ್ನೂ ಸೃಷ್ಟಿಸಿದವನು ನಾನೊಬ್ಬನೇ.

 (ಭಗವದ್ಗೀತೆ 10.4-5)

ಶ್ರೀ ಕೃಷ್ಣನು ಸಮಸ್ತ ವಸ್ತುಗಳ ಮೂಲ ಕಾರಣ. ಆದ್ದರಿಂದ ಅವನು ಎಲ್ಲ ಸದ್ಗುಣಗಳು ಮತ್ತು ಎಲ್ಲ ದುರ್ಗುಣಗಳ ಕಾರಣನಾಗಿರಬೇಕು. ಈ ಐಹಿಕ ಜಗತ್ತಿನಲ್ಲಿ ವಸ್ತುಗಳನ್ನು ನೋಡುವಾಗ ನಾವು “ಇದು ಕೆಟ್ಟದ್ದು, ಅದು ಒಳ್ಳೆಯದು” ಎಂದು ಪರಿಗಣಿಸುತ್ತೇವೆ. ನಾವು ನಮ್ಮ ಲೆಕ್ಕಾಚಾರದ ಪ್ರಕಾರ ಎಲ್ಲವನ್ನೂ ವಿಭಾಗಿಸಿದ್ದೇವೆ. ಆದರೆ ವಾಸ್ತವದಲ್ಲಿ, ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳೂ ಕೃಷ್ಣನ ಗುಣಗಳ ವಿವಿಧ ಪ್ರಕಟರೂಪಗಳಷ್ಟೇ.

ಈ ಶ್ಲೋಕಗಳಲ್ಲಿ ಪ್ರಸ್ತಾವಿಸಿರುವ ಗುಣಗಳು ಕೃಷ್ಣನಲ್ಲಿ ಇರುವುದರಿಂದ, ಅವು ಜೀವಿಗಳಲ್ಲೂ ಇವೆ. ಕೆಲಮಟ್ಟಿಗೆ ಈ ಎಲ್ಲ ಗುಣಗಳು ನಮ್ಮಲ್ಲಿಯೂ ಇವೆ. ಉದಾಹರಣೆಗೆ ಬುದ್ಧಿಯನ್ನೇ ತೆಗೆದುಕೊಳ್ಳಿ. ನಿಜವಾದ ಬುದ್ಧಿ ಯಾವುದು? “ಕೃಷ್ಣನೇ ಪರಮಪ್ರಭು, ನಾನು ಅವನ ವಿಭಿನ್ನಾಂಶ” ಎಂದು ಅರ್ಥಮಾಡಿಕೊಳ್ಳುವುದೇ ನಿಜವಾದ ಬುದ್ಧಿ.

ಉದಾಹರಣೆಗೆ ಒಬ್ಬನು ಕಾರು ಚಲಾಯಿಸುವುದರಲ್ಲಿ ಬಹಳ ನಿಪುಣನಾಗಿರಬಹುದು. ಅದು ಐಹಿಕವಾದ ಬುದ್ಧಿ. ನಿಜವಾದ ಬುದ್ಧಿ ಎಂದರೆ ಐಹಿಕ ಪ್ರಕೃತಿಯ ಸೂಕ್ಷ್ಮವಾದ ಕಾರ್ಯಚಟುವಟಿಕೆಗಳು ಮತ್ತು ದೇವೋತ್ತಮ ಪರಮಪುರುಷನೊಡನೆ ಅದರ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು. ಐಹಿಕ ನೆಲೆಯಲ್ಲಿಯೂ ಕೂಡ ವಸ್ತುಗಳು ಹೇಗೆ ಕೆಲಸಮಾಡುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಒಬ್ಬ ವ್ಯಕ್ತಿಯು ಪ್ರಯತ್ನಪಟ್ಟರೆ ಅವನನ್ನು ಬುದ್ಧಿವಂತ ಎಂದು ಪರಿಗಣಿಸಲಾಗುತ್ತದೆ. ಅವನು ತನ್ನ ಬುದ್ಧಿಶಕ್ತಿಯಿಂದ ವಸ್ತುಗಳ ಹಿಂದಿರುವ ಕ್ರಿಯಾಶೀಲ ಸೂತ್ರಗಳನ್ನು ಅನಾವರಣಗೊಳಿಸಲು ಬಯಸುತ್ತಾನೆ. ಆದರೆ ಒಂದು ಮಗುವು ರಸ್ತೆಯಲ್ಲಿ ಓಡುವ ಕಾರನ್ನು ನೋಡುತ್ತದೆ ಮತ್ತು ತನ್ನದೇ  ಇಚ್ಛೆಯ ಪ್ರಕಾರ ಅದು ಚಲಿಸುತ್ತಿದೆ ಎಂದು ಭಾವಿಸುತ್ತದೆ. ಅದು ಮೂರ್ಖತನ.

ಉದಾಹರಣೆಗೆ, ಇಲ್ಲಿ ಒಂದು ಧ್ವನಿಮುದ್ರಣ ಯಂತ್ರ ಮತ್ತು ಒಂದು ಧ್ವನಿವರ್ಧಕ ಇವೆ. “ಓಹ್‌! ಇವು ಎಂತಹ ಸೊಗಸಾದ ಸಂಶೋಧನೆಗಳು. ಅವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತವೆ.” ಎಂದು ಯಾರಾದರೂ ಉದ್ಗರಿಸಬಹುದು. ಆದರೆ ಈ ಧ್ವನಿಮುದ್ರಣ ಯಂತ್ರ ಮತ್ತು ಧ್ವನಿವರ್ಧಕಗಳು ಒಂದು ಚೇತನಾತ್ಮದ ಸ್ಪರ್ಶವಿಲ್ಲದೆ ಒಂದು ಕ್ಷಣವೂ ಕೆಲಸ ಮಾಡಲಾರವು ಎಂದು ಒಬ್ಬ ಬುದ್ಧಿವಂತನಾದ ಮನುಷ್ಯನು ಅರ್ಥಮಾಡಿಕೊಳ್ಳುತ್ತಾನೆ. ನಾವು ಒಂದು ಯಂತ್ರವನ್ನು ನೋಡಿ ಸುಮ್ಮನೆ ಆಶ್ಚರ್ಯಚಕಿತರಾಗಬಾರದು. ಆ ಯಂತ್ರವನ್ನು ಯಾರು ನಡೆಸುತ್ತಿದ್ದಾರೆ ಎಂದು ಕಂಡುಹಿಡಿಯಲು ಪ್ರಯತ್ನಿಸಬೇಕು. ಅದು ಬುದ್ಧಿವಂತಿಕೆ.

ಸ್ಥೂಲವಾಗಿ ನೋಡುವವನು, “ಈ ವಿಜ್ಞಾನಿಯು ಜೀವಿಸುತ್ತಿದ್ದಾನೆ, ಕೆಲಸ ಮಾಡುತ್ತಿದ್ದಾನೆ ಮತ್ತು ಪುಸ್ತಕಗಳನ್ನು ಬರೆಯುತ್ತಿದ್ದಾನೆ. ಎಂತಹ ಅದ್ಭುತ!” ಎಂದು ಹೇಳುತ್ತಾನೆ. ಆದರೆ ವಿಜ್ಞಾನಿಯ ದೇಹವನ್ನು ಆತ್ಮವು ತೊರೆದು ಹೋದರೆ – ವಿಜ್ಞಾನಿಯೇ ಇನ್ನಿಲ್ಲ. “ನಾನು ಮೃತನಾದಾಗ, ಈ ಚುಚ್ಚುಮದ್ದನ್ನು ನನ್ನ ದೇಹಕ್ಕೆ ಕೊಡಿ, ನಾನು ಮತ್ತೆ ಜೀವ ತಳೆಯುತ್ತೇನೆ” ಎಂದು ಯಾವುದಾದರೂ ವಿಜ್ಞಾನಿಯು ಒಂದು ವಸ್ತುವನ್ನು ಕಂಡು ಹಿಡಿದು, ತನ್ನ ವಿದ್ಯಾರ್ಥಿಯ ಮುಂದಿಟ್ಟು ಹೇಳಬಲ್ಲನೇ? ಯಾವುದೇ ವಿಜ್ಞಾನಿಯು ಅಂತಹ ವಸ್ತುವನ್ನು ಕಂಡುಹಿಡಿದಿದ್ದಾನೆಯೇ? ಇಲ್ಲ. ಯಾವುದೇ ವಿಜ್ಞಾನಿಯು ಅಂತಹ ವಸ್ತುವನ್ನು ಕಂಡು ಹಿಡಿದಿದ್ದರೆ, ವಿಜ್ಞಾನಿಗಳಿಗೆ ಕೊರತೆ ಇರುತ್ತಿರಲಿಲ್ಲ. ಸರ್‌ ಐಸಾಕ್‌ ನ್ಯೂಟನ್‌, ಸರ್‌ಜಗದೀಶಚಂದ್ರ ಬೋಸ್‌, ಥಾಮಸ್‌ ಎಡಿಸನ್‌, ಐನ್‌ಸ್ಟೀನ್‌ ಮತ್ತು ಜಗತ್ತಿನಾದ್ಯಂತ ಇತರ ಅನೇಕ ವಿಜ್ಞಾನಿಗಳು ಇನ್ನೂ ಜೀವಂತವಾಗಿರುತ್ತಿದ್ದರು. ನಾವು ಪಂಥಾಹ್ವಾನ ನೀಡುತ್ತೇವೆ, “ಓಹ್‌ ವಿಜ್ಞಾನಿಗಳೇ, ನೀವು ಅನೇಕ ಅದ್ಭುತ ಸಂಗತಿಗಳನ್ನು ಕಂಡುಹಿಡಿದಿದ್ದೀರಿ. ಹಾಗಾದರೆ ಶ್ರೀಮಾನ್‌ ವಿಜ್ಞಾನಿ, ನೀವು ಸತ್ತಮೇಲೆ ಮತ್ತೆ ನೀವು ಜೀವ ತಳೆದು ಮೇಲೆದ್ದು ಕೆಲಸ ಮಾಡುತ್ತಾ ಹೋಗುವಂತಹ ಒಂದು ಚುಚ್ಚುಮದ್ದನ್ನು ನಿಮ್ಮ ದೇಹಕ್ಕೆ ಚುಚ್ಚುವಂತಹದನ್ನು ನೀವೇಕೆ ಕಂಡುಹಿಡಿಯಬಾರದು?”

ವಾಸ್ತವದಲ್ಲಿ ತತ್ತ್ವಶಾಸ್ತ್ರಜ್ಞ ಮತ್ತು ವಿಜ್ಞಾನಿ ತಮ್ಮ ಇಚ್ಛೆಯ ಪ್ರಕಾರ ಕೆಲಸ ಮಾಡುತ್ತಿಲ್ಲ, ಐಹಿಕ ಪ್ರಕೃತಿಯ ಮೋಹಕ ಶಕ್ತಿಗೆ ಒಳಗಾಗಿ ಮಾಡುತ್ತಿದ್ದಾರೆ. ಭಗವದ್ಗೀತೆಯಲ್ಲಿ (3.27) ಕೃಷ್ಣನು ಹೇಳುವಂತೆ ಪ್ರಕೃತೇ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ “ಪ್ರತಿಯೊಂದೂ ಪ್ರಕೃತಿಯ ನಿಯಮದ ಪ್ರಕಾರ ನಡೆಯುತ್ತಿದೆ.” ವಿಜ್ಞಾನಿಗಳು ಹೇಳುವಂತೆ ಪ್ರತಿಯೊಂದೂ ಆಕಸ್ಮಿಕವಾಗಿದ್ದರೆ ಜೀವಿಜಾತಿಗಳ ನಡುವೆ ಅಷ್ಟೊಂದು ವ್ಯತ್ಯಾಸಗಳು ಏಕಿವೆ? ಇಲ್ಲೊಬ್ಬ ವಿಜ್ಞಾನಿಯಿದ್ದಾನೆ, ಅಲ್ಲೊಬ್ಬ ಮೂರ್ಖನಿದ್ದಾನೆ. ಯಾಕೆ ಈ ವ್ಯತ್ಯಾಸ? ಪ್ರಕೃತಿಯು ಈ ವ್ಯತ್ಯಾಸವನ್ನು ಮಾಡಿದೆ. ಈ ಪ್ರಕೃತಿ ಎಂದರೆ ಏನು? ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್‌: “ನನ್ನ ನಿರ್ದೇಶನದಲ್ಲಿ ಪ್ರಕೃತಿಯು ಕೆಲಸ ಮಾಡುತ್ತದೆ.”

ಹೀಗೆ ಪ್ರಕೃತಿಯು ಪ್ರತಿನಿಧಿಯಾಗಿದೆ, ಕೃಷ್ಣನೇ ನಿಜವಾದ ಕರ್ತೃ. ನಾವು ಕೇವಲ ಉಪಕರಣಗಳು. ಅದೇ ನಮ್ಮ ಸ್ಥಾನ. ನೀವು ಬುದ್ಧಿವಂತರಾಗಿದ್ದರೆ, ನೀವು ಕೇವಲ ಕೃಷ್ಣನ ಉಪಕರಣ ಎಂದು ಅರ್ಥಮಾಡಿಕೊಳ್ಳುತ್ತೀರಿ. ಕೈಯ ಒಡೆಯನಿಗೆ ಹೋಲಿಸಿದರೆ ನಾವು ಒಂದು ಕೈಯ ಹಾಗೆ. ನನ್ನ ಕೈಯಿ ಎಂದರೆ ಏನು? ವಸ್ತುಗಳನ್ನು ಎತ್ತಿಕೊಂಡು ಕೆಲಸ ಮಾಡುವುದಕ್ಕೆ ಅದೊಂದು ಉಪಕರಣ. ಆದ್ದರಿಂದ ಕೆಲಸ ಮಾಡುತ್ತಿರುವವನು ನಾನು, ನನ್ನ ಕೈಯಿ ಅಲ್ಲ.

ಜನರು ತಾವು ಕೇವಲ ಕೃಷ್ಣನ ಪ್ರತಿನಿಧಿಗಳು ಎನ್ನುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆ? ಅಹಂಕಾರ ವಿಮೂಢಾತ್ಮಾ: ಮಿಥ್ಯಾ ಅಹಂಕಾರದಿಂದ ಅವರು ದಿಗ್ಭ್ರಾಂತರಾಗಿದ್ದಾರೆ. ಆದ್ದರಿಂದ ಅವರು ಯೋಚಿಸುತ್ತಾರೆ, “ನಾನೊಬ್ಬ ವಿಜ್ಞಾನಿ”, “ನಾನೊಬ್ಬ ತತ್ತ್ವಶಾಸ್ತ್ರಜ್ಞ”, “ನಾನೊಬ್ಬ ರಾಕೆಫೆಲ್ಲರ್‌”, “ನಾನೊಬ್ಬ ವ್ಯಾಪಾರಿ”, ಅಥವಾ “ನಾನೊಬ್ಬ ಸ್ವಾಮಿ”. ಇಲ್ಲ. ನೀವು ಕೃಷ್ಣನ ಕೈಯಲ್ಲಿ ಒಂದು ಉಪಕರಣ ಮಾತ್ರ. ಆದ್ದರಿಂದ ನೀವು ಕೃಷ್ಣನ ಅಪೇಕ್ಷೆಯಂತೆ ಕೆಲಸ ಮಾಡಬೇಕು. ನೀವು ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡಿದರೆ ಅದು ನಿಜವಾದ ಬುದ್ಧಿವಂತಿಕೆ. ಆದರೆ ನೀವು ಕೃಷ್ಣನ ವಿರುದ್ಧ ಕೆಲಸ ಮಾಡಿದರೆ ಅದು ಮೂರ್ಖತನ. “ಜ್ಞಾನ” ಎಂದರೆ ಅರಿವು. ಈಗ, ಐಹಿಕ ಜ್ಞಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಈ ಬೀಗದ ಕೈ ಗೊಂಚಲನ್ನು ಕೊಂಚ ಪರಿಗಣಿಸಿ. ಈ ಗೊಂಚಲನ್ನು ಮಾಡಿದವರು ಯಾರು, ಇದಕ್ಕೆ ಯಾವ ಯಾವ ವಸ್ತುಗಳನ್ನು ಬಳಸಲಾಗಿದೆ, ಯಾವ ದೇಶದಲ್ಲಿ ಇದನ್ನು ಮೊದಲ ಬಾರಿಗೆ ಬಳಕೆಗೆ ತರಲಾಯಿತು. ಇತ್ಯಾದಿ ವಿಷಯಗಳನ್ನು ಕುರಿತು ನೀವು ಸಂಶೋಧನೆ ಮಾಡಲು ಬಯಸುವುದಾದರೆ ಸಂಪುಟಗಟ್ಟಲೆ ಪುಸ್ತಕಗಳನ್ನು ನೀವು ಬರೆಯಬಹುದು. ಯಾವುದರ ವಿಷಯವಾಗಿಯೂ ನೀವು ಊಹಾಪೋಹ ಮಾಡಿ ಸಂಪುಟಗಟ್ಟಲೆ ಪುಸ್ತಕಗಳನ್ನು ಬರೆಯಬಹುದು. ಆದರೆ ಅದರ ಅರ್ಥ ನೀವು ಜ್ಞಾನಿ ಎಂದಲ್ಲ.

ನಾನು ನಿಮಗೊಂದು ಸೊಗಸಾದ ಉದಾಹರಣೆಯನ್ನು ಕೊಡುತ್ತೇನೆ. ಇದು ಪ್ರಾಯೋಗಿಕವಾದದ್ದು. ನನ್ನ ತಾರುಣ್ಯದಲ್ಲಿ ನಾನು ಒಂದು ದೊಡ್ಡ ರಾಸಾಯನಿಕ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕನಾಗಿದ್ದೆ. ಒಂದು ಸಲ ಗಂಧಕದ ಆಮ್ಲದ ಕೋಷ್ಠದಲ್ಲಿ ಒಂದು ದೋಷ ಕಾಣಿಸಿಕೊಂಡಿತು. ಆ ಕೋಷ್ಠದಲ್ಲಿ ನಾವು ಗಂಧಕವನ್ನು ಇರಿಸಿ ಕರಗಿಸುತ್ತಿದ್ದೆವು. ಆಗ ಆಮ್ಲ ಹೊರಬರುತ್ತಿತ್ತು. ಆದರೆ ಕೋಷ್ಠ ಕೆಲಸ ಮಾಡುತ್ತಿರಲಿಲ್ಲ. ಅದು ಏಕೆ ಕೆಲಸ ಮಾಡುತ್ತಿಲ್ಲ ಎಂದು ನಿರ್ಧರಿಸಲು ಅನೇಕ ವಿಜ್ಞಾನಿಗಳು ಅಲ್ಲಿ ಕುಳಿತು ಪುಸ್ತಕಗಳನ್ನು ಪರಾಮರ್ಶಿಸುತ್ತಾ ಪ್ರಯತ್ನ ಮಾಡುತ್ತಿದ್ದರು. ಆಗ ನಿರ್ವಾಹಕ ನಿರ್ದೇಶಕ ಡಾ॥ ಬೋಸ್‌ (ಅವರು ಬಹಳ ಬುದ್ಧಿವಂತರು) ಇನ್ನೊಂದು ರಾಸಾಯನಿಕ ಸಂಸ್ಥೆಗೆ ಹೋದರು. ಅಲ್ಲೊಬ್ಬ ಸಾಧಾರಣ ಕಾರ್ಮಿಕ ಅವರಿಗೆ ಗೊತ್ತಿದ್ದ. ಅವನು ಬಹಳ ಅನುಭವಿ. ಬೋಸ್‌ ಅವನನ್ನು ಕೂಡಲೇ ಕರೆಸಿ, “ನಮ್ಮ ಕಾರ್ಖಾನೆಗೆ ಬಂದು ನಮ್ಮ ಗಂಧಕದ ಆಮ್ಲದ ಕೋಷ್ಠದಲ್ಲಿ ಏನು ದೋಷವಿದೆ ಎಂದು ತೋರಿಸಿಕೊಡು” ಎಂದು ಕೇಳಿಕೊಂಡರು. ಅವನು ಬಂದು ಕೆಲವು ಕವಾಟಗಳನ್ನು ತಿರುಗಿಸಿದ. ಕೂಡಲೇ ಗಂಧಕದ ಆಮ್ಲ ಮತ್ತೆ ಹೊರಗೆ ಬರಲಾರಂಭಿಸಿತು. ಬರೀ ಸಿದ್ಧಾಂತವನ್ನು ನೆಚ್ಚಿಕೊಂಡಿದ್ದ ಎಲ್ಲ ವಿಜ್ಞಾನಿಗಳೂ ಆಶ್ಚರ್ಯಚಕಿತರಾದರು.

ಆದ್ದರಿಂದ, ಇಂತಹ ಜ್ಞಾನವನ್ನು ನೀವು ಸಾಧಾರಣ ಮನುಷ್ಯನಲ್ಲೂ ಕಾಣಬಲ್ಲಿರಿ. ಪ್ರಾಣಿಪಕ್ಷಿಗಳಲ್ಲಿಯೂ ನೀವು ಅದನ್ನು ಕಾಣುತ್ತೀರಿ. ಅವುಗಳಿಗೆಲ್ಲ ಏನೋ ಒಂದು ವಿಶೇಷವಾದ ಜ್ಞಾನವಿದೆ. ಅದರ ಸಹಾಯದಿಂದ ಅವು ನಾವು ಮಾಡಲಾಗದ ಅದ್ಭುತ ಕಾರ್ಯಗಳನ್ನು ಮಾಡಬಲ್ಲವು. ಆದರೆ ಅದು ನಿಜವಾದ ಜ್ಞಾನವಲ್ಲ. ನಿಜವಾದ ಜ್ಞಾನವೆಂದರೆ ಆತ್ಮ ಮತ್ತು ಜಡವಸ್ತುವನ್ನು ಅರ್ಥಮಾಡಿಕೊಳ್ಳುವುದು.

ಜಡವಸ್ತುವು ಆತ್ಮದ ಸ್ಪರ್ಶದಿಂದ ಕೆಲಸ ಮಾಡುತ್ತಿದೆ. ಜಡವಸ್ತುವು ಆತ್ಮದ ಮೇಲೆ ಅವಲಂಬಿತವಾಗಿದೆ. ಜಡವಸ್ತುವಿಗೆ ಪ್ರಾಧಾನ್ಯಕೊಟ್ಟು ಆತ್ಮವನ್ನು ನಿರ್ಲಕ್ಷಿಸದೇ ಇರುವುದೇ ಜ್ಞಾನ. ಪ್ರಸ್ತುತ ಶಿಕ್ಷಣ ಪದ್ಧತಿಯಲ್ಲಿ ಎಲ್ಲ ಜನರೂ ನಿಜವಾದ ಜ್ಞಾನದಿಂದ ದೂರವಾಗಿದ್ದಾರೆ. ಏಕೆಂದರೆ ಅವರು ಜೀವನದ ಆಧ್ಯಾತ್ಮಿಕ ಮಗ್ಗುಲನ್ನು ನಿರ್ಲಕ್ಷಿಸಿದ್ದಾರೆ. ಅವರು ಐಹಿಕ ಮಗ್ಗುಲನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ಭಗವದ್ಗೀತೆಯ ಪ್ರಕಾರ ಪ್ರಸ್ತುತ ನಾಗರಿಕತೆಯು ಮೂರ್ಖರ ನಾಗರಿಕತೆ. ಅವರು ಮೋಟಾರ್‌ ಕಾರ್‌ ಮೇಲೆ ಬಹಳ ಒತ್ತುಕೊಡುತ್ತಿದ್ದಾರೆ, ಅದರ ಚಾಲಕನ ಮೇಲೆ ಸಾಕಷ್ಟು ಒತ್ತುಕೊಡುತ್ತಿಲ್ಲ. ಚಾಲಕನನ್ನು ನಿರ್ಲಕ್ಷಿಸಲಾಗಿದೆ, ಮನುಷ್ಯನನ್ನು ನಿರ್ಲಕ್ಷಿಸಲಾಗಿದೆ.

ನಾನು ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ನಿಮ್ಮ ದೇಶದಿಂದ ಪ್ರಕಟವಾಗುತ್ತಿದ್ದ ಒಂದು ನಿಯತಕಾಲಿಕವನ್ನು ಓದಿದೆ. ಅದು ಈಗಲೂ ಪ್ರಕಟವಾಗುತ್ತಿದೆ ಎಂದು  ಭಾವಿಸುತ್ತೇನೆ – ಸೈಂಟಿಫಿಕ್‌ ಅಮೆರಿಕನ್‌. ಆ ಕಾಲದಲ್ಲಿ ಗಗನಚುಂಬಿ ಕಟ್ಟಡಗಳು ಆಗಷ್ಟೇ ಪ್ರಾರಂಭವಾಗುತ್ತಿದ್ದವು. ಆ ನಿಯತಕಾಲಿಕದಲ್ಲಿ ಒಬ್ಬ ಮನುಷ್ಯ ಒಂದು ಗಗನಚುಂಬಿ ಕಟ್ಟಡದಲ್ಲಿ ಬಹಳ ಕಷ್ಟಪಟ್ಟು ಕೆಲಸಮಾಡುತ್ತಿರುವ ಚಿತ್ರವನ್ನು ನೋಡಿದೆ. ಹೀಗೆ ಅವನು ಜಡವಸ್ತುವಿನಿಂದ ಏನೋ ಒಂದನ್ನು ತಯಾರು ಮಾಡುವುದಕ್ಕಾಗಿ ಆತ್ಮವನ್ನು ಕೊಲ್ಲುತ್ತಿದ್ದ. ಅರ್ಥವಾಯಿತೆ? ಅದೇ ಐಹಿಕ ನಾಗರಿಕತೆ. ಜನರು ಐಹಿಕ ವಿಭಾಗಕ್ಕೆ ಮಿತಿಮೀರಿದ ಒತ್ತನ್ನು ಕೊಡುತ್ತಿದ್ದಾರೆ ಮತ್ತು ಆತ್ಮವನ್ನು ನಿರ್ಲಕ್ಷಿಸುತ್ತಿದ್ದಾರೆ. ಅದು ನಾಗರಿಕತೆಯಲ್ಲ. ವ್ಯಕ್ತಿಯು ಆಧ್ಯಾತ್ಮಿಕ ಮಗ್ಗುಲಿಗೂ ಹೆಚ್ಚು ಒತ್ತು ಹಾಕಬೇಕು, ಏಕೆಂದರೆ ಅದೇ ಜೀವನದ ಕ್ರಿಯಾಶೀಲ ತತ್ತ್ವ. ಆದ್ದರಿಂದ ಒಬ್ಬ ವ್ಯಕ್ತಿಯು ಜೀವನದ ಆಧ್ಯಾತ್ಮಿಕ ಮಗ್ಗುಲಿಗೆ ಹೆಚ್ಚು ಮಹತ್ವ ಕೊಟ್ಟಾಗ ಅವನು ಜ್ಞಾನದಲ್ಲಿದ್ದಾನೆ ಎಂದು ಹೇಳಲಾಗುತ್ತದೆ. ಅವನನ್ನು ಜ್ಞಾನಿ ಎಂದು ಕರೆಯುತ್ತಾರೆ. ಇಲ್ಲದಿದ್ದರೆ ಅವನೊಬ್ಬ ಮೂರ್ಖ.

ನಿಜವಾದ ಜ್ಞಾನವೆಂದರೆ ಜಡವಸ್ತು ಎಂದರೇನು ಮತ್ತು ಆತ್ಮ ಎಂದರೇನು ಎಂದು ಅರ್ಥಮಾಡಿಕೊಳ್ಳುವುದು. ದಿಟವಾಗಿ ಮುಂದುವರಿದ ನಾಗರಿಕತೆಯಲ್ಲಿ ಜನರಿಗೆ ಈ ಜ್ಞಾನ ಇರುತ್ತದೆ. ಇದೇ ಆರ್ಯರ ನಾಗರಿಕತೆ. ಸಂಸ್ಕೃತ ಶಬ್ದ `ಆರ್ಯನ್‌’ ಎಂದರೆ ಮುಂದುವರಿದವನು. ಆರ್ಯನಾಗಿರುವ ವ್ಯಕ್ತಿಯು ನಿಜವಾದ ಜ್ಞಾನದಲ್ಲಿ ಮುಂದುವರಿದವನು, ನಾಗರಿಕನಾದವನು. ಭಗವದ್ಗೀತೆಯಲ್ಲಿ ಅರ್ಜುನನು ಯುದ್ಧ ಮಾಡಲು ನಿರಾಕರಿಸಿದಾಗ, “ಓಹ್‌ ನೀನೊಬ್ಬ ಅನಾರ್ಯನಂತೆ ಮಾತನಾಡುತ್ತಿದ್ದೀಯೆ” ಎಂದು ಕೃಷ್ಣನು ಟೀಕಿಸುತ್ತಾನೆ.

ಆದ್ದರಿಂದ ನಾವೆಲ್ಲರೂ ಆರ್ಯಕುಲಕ್ಕೆ ಸೇರಿದವರು, ಆದರೆ ನಮ್ಮಲ್ಲಿ ಬಹುಪಾಲು ಮಂದಿ ಜೀವನದ ಆಧ್ಯಾತ್ಮಿಕ ಮಗ್ಗುಲಿಗೆ ಪ್ರಾಮುಖ್ಯವನ್ನು ನೀಡದೆಯೇ ಅನಾರ್ಯರಾಗಿದ್ದೇವೆ. ಒಬ್ಬ ಆರ್ಯನು ಜೀವನದ ಆಧ್ಯಾತ್ಮಿಕ ಮಗ್ಗುಲಿಗೆ ಪ್ರಾಮುಖ್ಯವನ್ನು ಕೊಡುತ್ತಾನೆ ಮತ್ತು ಮಾನವ ಜನ್ಮವು ಎಷ್ಟು ಮುಖ್ಯವಾದದ್ದು ಎಂದು ಪರಿಗಣಿಸುತ್ತಾನೆ. ಮಾನವ ಜನ್ಮವು ಮುಖ್ಯವಾದದ್ದು. ಏಕೆಂದರೆ ಈ ಆಕಾರದಲ್ಲಿ ಚೇತನಾತ್ಮನು, ಐಹಿಕ ಬಂಧನದಲ್ಲಿ ಬದ್ಧಸ್ಥಿತಿಯಲ್ಲಿದ್ದರೂ, ಅಭಿವೃದ್ಧ ಪ್ರಜ್ಞೆಯನ್ನು ಹೊಂದಿರುತ್ತಾನೆ. ಅದನ್ನು ಅವನು ಕ್ರಮಾಗತವಾದ ವಿಕಾಸದಿಂದ ಅಭಿವೃದ್ಧಿಪಡಿಸಿಕೊಂಡಿದ್ದಾನೆ. ಪದ್ಮಪುರಾಣದಲ್ಲಿ ವಿಕಾಸವಾದದ ಸಿದ್ಧಾಂತವನ್ನು ವಿವರಿಸಲಾಗಿದೆ. ಚೇತನಾತ್ಮವು ಜೀವಿಯ ಅತ್ಯಂತ ಕೆಳಸ್ತರದಿಂದ ವಿಕಾಸ ಹೊಂದುತ್ತದೆ. ಜಲಚರಗಳಿಂದ ಪ್ರಾರಂಭವಾಗಿ, ಸಸ್ಯಜೀವನಕ್ಕೆ ಮುಂದುವರಿಯುತ್ತದೆ. ಅಲ್ಲಿಂದ ಕೀಟಗಳು, ಅನಂತರ ಪಕ್ಷಿ ಜನ್ಮ, ಆಮೇಲೆ ಮಾನವ ಜನ್ಮ, ಮತ್ತು ಅಂತಿಮವಾಗಿ ನಾಗರಿಕವಾದ ಮಾನವ ಜನ್ಮ.

ಅದೃಷ್ಟವಶಾತ್‌ ನಾವೀಗ ನಾಗರಿಕವಾದ ಮಾನವ ಜನ್ಮವನ್ನು ಹೊಂದಿದ್ದೇವೆ. ಆದರೆ ದುರದೃಷ್ಟವೆಂದರೆ ನಮ್ಮಲ್ಲಿ ಬಹುಪಾಲು ಜನ ಅದನ್ನು ಕೇವಲ ದೇಹ ಪೋಷಣೆಗೆಂದು ಬಳಸಿಕೊಳ್ಳುತ್ತಿದ್ದೇವೆ. ಆಹಾರ ನಿದ್ರಾ ಭಯ ಮೈಥುನಂ ಚ: ನಮ್ಮ ಅಮೂಲ್ಯವಾದ ಮಾನವ ಜನ್ಮವನ್ನು ಕೇವಲ ಆಹಾರ ಸೇವನೆ, ನಿದ್ದೆ ಮಾಡುವುದು, ಆತ್ಮರಕ್ಷಣೆ ಮತ್ತು ಕಾಮೋಪಭೋಗದಲ್ಲಿ ವ್ಯರ್ಥಮಾಡುತ್ತಿದ್ದೇವೆ. ಈಗ ಚೇತನಾತ್ಮವು ಮುಕ್ತವಾಗುವ ಅವಕಾಶವನ್ನು ಪಡೆದಿದೆ. ಪ್ರಕೃತಿಯ ಸಹಜವಾದ ವಿಧಾನದಿಂದಲೇ ವಿಕಾಸ ಪ್ರಕ್ರಿಯೆಯು ಐಹಿಕ ಬಂಧನದಿಂದ ಮುಕ್ತವಾಗುವ ಅವಕಾಶವನ್ನು ಚೇತನಾತ್ಮಕ್ಕೆ ಕೊಟ್ಟಿದೆ. ಆದರೆ ಜನರು ಜೀವನದ ಆಧ್ಯಾತ್ಮಿಕ ಮಗ್ಗುಲಿಗೆ ಮಹತ್ವವನ್ನು ಕೊಡುತ್ತಿಲ್ಲ. ಆದ್ದರಿಂದ ಮಿತಿಮೀರಿದ ಜನಸಂಖ್ಯೆಯನ್ನು ನಾವು ಕಾಣುತ್ತಿದ್ದೇವೆ.

ಮಿತಿಮೀರಿದ ಜನಸಂಖ್ಯೆ ಏಕಿದೆ? ಉದಾಹರಣೆಗೆ ಒಂದು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಕೆಳಗಿನ ತರಗತಿಗಳಿಂದ ಮೇಲಿನ ತರಗತಿಗಳಿಗೆ ಉತ್ತೀರ್ಣಗೊಳಿಸುತ್ತಾ ಹೋಗಲಾಗುತ್ತಿದೆ ಎಂದುಕೊಳ್ಳೋಣ. ಅಂತಿಮ ತರಗತಿಗೆ ಬಂದಾಗ ಅವರು ಉತ್ತೀರ್ಣರಾಗದಿದ್ದರೆ ಆಗ ಆ ತರಗತಿಯಲ್ಲಿ ಜನಜಂಗುಳಿಯಾಗುತ್ತದೆ. ಅದೇ ರೀತಿಯಲ್ಲಿ, ಪ್ರಸ್ತುತ ನಾಗರಿಕತೆಯಲ್ಲಿ ಕೆಲವು ಸಲ ಮಿತಿಮೀರಿದ ಜನಸಂಖ್ಯೆಯಾಗುತ್ತದೆ. ಏಕೆಂದರೆ ಜನರನ್ನು ಉನ್ನತ ಜೀವನಕ್ಕೆ ತೇರ್ಗಡೆ ಮಾಡಲಾಗುವುದಿಲ್ಲ. ಅವರಿಗೆ ತಡೆಯೊಡ್ಡಲಾಗಿದೆ. ಪ್ರಕೃತಿಯ ವಿಧಾನವೆಂದರೆ ಜನಸಂಖ್ಯೆಯನ್ನು ಕಡಮೆ ಮಾಡಲು ಯಾವುದಾದರೊಂದು ಪಿಡುಗನ್ನೋ ಅಥವಾ ಯುದ್ಧವನ್ನೋ ಉಂಟು ಮಾಡುವುದು.

ಹೀಗೆ, ಜನರು ಬಹಳ ಗರ್ವಪಡುತ್ತಾರೆ, ಆದರೆ ಅವರಿಗೆ ನಿಜವಾದ ಬುದ್ಧಿವಂತಿಕೆಯಾಗಲೀ ಅಥವಾ ನಿಜವಾದ ಜ್ಞಾನವಾಗಲೀ ಇಲ್ಲ. ದೇವರು ನಿಜವಾದ ಜ್ಞಾನವನ್ನು ಕೊಡುತ್ತಾನೆ. ಇಲ್ಲಿ ವಿವರಿಸುವಂತೆ, ಬುದ್ಧಿರ್‌, ಜ್ಞಾನಮ್‌, ಅಸಮ್ಮೋಹಃ : ಬುದ್ಧಿ, ಜ್ಞಾನ, ಸಂದೇಹ ಮತ್ತು ಭ್ರಾಂತಿಗಳಿಂದ ಬಿಡುಗಡೆ – ಇವು ಎಲ್ಲವೂ ದೇವರ ಕೊಡುಗೆಗಳು. ಆದ್ದರಿಂದ ನಾವು ಅವುಗಳನ್ನು ಯುಕ್ತವಾಗಿ ಉಪಯೋಗಿಸಿಕೊಳ್ಳಬೇಕು. ದೇವರ ಕೊಡುಗೆಗಳನ್ನು ಉಪಯೋಗಿಸಿಕೊಳ್ಳುವುದಕ್ಕಾಗಿ ಈ ಮಾನವ ರೂಪವು ವಿಕಾಸಗೊಂಡಿದೆ. ದೇವರು ನಮಗೆ ಸೊಗಸಾದ ಆಹಾರ ವಸ್ತುಗಳನ್ನು ನೀಡಿದ್ದಾನೆ. ದೇವರು ನಮಗೆ ಉತ್ತಮವಾದ ಬುದ್ಧಿಶಕ್ತಿಯನ್ನು ನೀಡಿದ್ದಾನೆ. ದೇವರು ನಮಗೆ ಜ್ಞಾನಗ್ರಂಥಗಳನ್ನು ನೀಡಿದ್ದಾನೆ. ಅವನು ಸ್ವತಃ ಭಗವದ್ಗೀತೆಯ ಮೂಲಕ ಮಾತನಾಡಿದ್ದಾನೆ. ನೀವೇಕೆ ಇವುಗಳನ್ನೆಲ್ಲ ಉಪಯೋಗಿಸಿಕೊಳ್ಳಬಾರದು? ನೀವು ಅವುಗಳನ್ನು ಯುಕ್ತವಾಗಿ ಉಪಯೋಗಿಸಿಕೊಂಡರೆ, ನಿಮ್ಮನ್ನು ನೀವು ಆರ್ಯರೆಂದು ಕರೆದುಕೊಳ್ಳಬಹುದು, ಅಥವಾ ನಾಗರಿಕ ಮಾನವ ಜೀವಿಗಳೆಂದು ಕರೆದುಕೊಳ್ಳಬಹುದು. ಆದರೆ ಹಾಗೆ ಮಾಡದಿದ್ದರೆ ನೀವು ಕೇವಲ ನಿಮ್ಮ ಮೃಗೀಯ ಪ್ರವೃತ್ತಿಗಳನ್ನು ಅನುಸರಿಸುತ್ತೀರಿ. ಹೆಣ್ಣು ನಾಯಿಗಳ ಹಿಂದೆ ಹೋಗುವ ಗಂಡು ನಾಯಿಗಳ ಹಾಗೆ ಅಥವಾ ಹೆಣ್ಣು ಹಂದಿಗಳ ಹಿಂದೆ ಹೋಗುವ ಗಂಡು ಹಂದಿಗಳ ಹಾಗೆ ನೀವು ಇರುತ್ತೀರಿ.

ಇದು ನಾಗರಿಕತೆಯಲ್ಲ. ನಾವು ಸ್ಥಿಮಿತಬುದ್ಧಿಯವರಾಗಬೇಕು. ನಾವು ಪ್ರಾಣಿಗಳಿಗಿಂತ ವಿಭಿನ್ನರಾಗಿರಬೇಕು. ನಮ್ಮ ಮಾನವ ರೂಪದ ಜನ್ಮವನ್ನು ಯುಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಶ್ರೀಮದ್‌ ಭಾಗವತದಲ್ಲಿ (11.9.29) ಹೇಳಿದಂತೆ ಲಬ್ಧ್ವಾ ಸುದುರ್ಲಭಮ್‌ ಇದಂ ಬಹು ಸಂಭವಾಂತೇ – ಅನೇಕಾನೇಕ ಜನ್ಮಗಳ ಅನಂತರ – ಕೋಟ್ಯನುಕೋಟಿ ವರ್ಷಗಳ ಅನಂತರ ಈ ಮಾನವ ದೇಹವು ಲಭಿಸಿದೆ. ಇದ್ದಕ್ಕಿದ್ದಂತೆಯೇ, ಆಕಸ್ಮಿಕವಾಗಿ ಈ ದೇಹ ನಮಗೆ ಲಭಿಸಿದೆ ಎಂದು ಭಾವಿಸಬೇಡಿ. ಇತರ ದೇಹಗಳೂ ಇವೆ – ಬೆಕ್ಕುಗಳು, ನಾಯಿಗಳು ಮತ್ತು ಇತರೆ ಅನೇಕವು – ಅತ್ಯಂತ ದೀರ್ಘವಾದ ವಿಕಾಸಪ್ರಕ್ರಿಯೆಯ ಅನಂತರವಷ್ಟೇ ನಾವು ಈ ಮನುಷ್ಯ ಆಕಾರವನ್ನು ಪಡೆದಿದ್ದೇವೆ. (ಮನುಷ್ಯ ಎಂಬ ಈ ಸಂಸ್ಕೃತ ಶಬ್ದದಿಂದ ಇಂಗ್ಲಿಷ್‌ನ ಮ್ಯಾನ್‌ ಎಂಬ ಶಬ್ಧ ಬಂದಿದೆ). ಈ ಮನುಷ್ಯರೂಪದ ಜನ್ಮದ ಮೌಲ್ಯವೇನು? ಅರ್ಥದಮ್‌ ನೀವು ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಬಹುದು. ಜೀವನದ ನಿಜವಾದ ಸಾರವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಅರ್ಥ ಎಂದರೆ “ಹಣ” ಅಥವಾ “ಮೂಲ ತತ್ತ್ವ”. ಆದ್ದರಿಂದ, ನಾವು ಹಣವನ್ನು ಸಂಪಾದಿಸಲು ನಮ್ಮ ಜೀವನವನ್ನು ಬಳಸಿಕೊಳ್ಳುತ್ತಿದ್ದೇವೆ, ಆದರೆ ನಿಜವಾದ ಮೂಲ ತತ್ತ್ವವನ್ನು ಕಳೆದುಕೊಳ್ಳುತ್ತಿದ್ದೇವೆ.

ಮುಂದೆ ಈ ದೇಹವನ್ನು ಅನಿತ್ಯಂ – ಎಂದರೆ ಅಶಾಶ್ವತವಾದದ್ದು ಎಂದು ವರ್ಣಿಸಲಾಗಿದೆ. ಮೂಲ ತತ್ತ್ವವನ್ನು ಅದು ನೀಡಬಹುದಾದರೂ ಅದು ಶಾಶ್ವತವಲ್ಲ. ಆದ್ದರಿಂದ ಭಾಗವತವು ನೀನು ಧೀರನಾಗಿರು – ಎಂದರೆ ಸ್ಥಿಮಿತ ಮತ್ತು ಬುದ್ಧಿವಂತನಾಗಿರು ಎಂದು ಬೋಧಿಸುತ್ತದೆ. ಹಾಗಾದರೆ ನಿಮ್ಮ ಮಾನವ ಜನ್ಮವನ್ನು ಹೇಗೆ ಬಳಸಿಕೊಳ್ಳಬೇಕು? ತೂರ್ಣಂಯತೇತ ನ ಪತೇದ್‌ ಅನು ಮೃತ್ಯು ಯಾವನ್‌ ನಿಃಶ್ರೇಯಸಾಯ – ಅತ್ಯುನ್ನತ ಮೂಲತತ್ತ್ವವನ್ನು ಅತ್ಯಂತ  ತ್ವರಿತವಾಗಿ ಸಾಧಿಸಲು ನೀವು ನಿಮ್ಮ ಮಾನವ ಜನ್ಮವನ್ನು ಉಪಯೋಗಿಸಿಕೊಳ್ಳಲು ಪ್ರಯತ್ನಿಸಬೇಕು. ಯಾಕೆ ಅತ್ಯಂತ ತ್ವರಿತವಾಗಿ? ಏಕೆಂದರೆ ಮೃತ್ಯು ಯಾವಾಗ ಬರುತ್ತದೆ ಎಂದು ನಿಮಗೆ ಗೊತ್ತಿಲ್ಲ. “ನಾನು ತರುಣ. ಚೆನ್ನಾಗಿ ತಿಂದು, ಕುಡಿದು, ಮೋಜು ಮಾಡಿ ಖುಷಿಪಡೋಣ” ಎಂದು ಯೋಚಿಸಬೇಡಿ. ಇಲ್ಲ. ನೀವು ವಿಳಂಬ ಮಾಡಬಾರದು. ಗರ್ಭದಲ್ಲಿರುವಾಗಲೇ ಪ್ರಹ್ಲಾದ ಮಹಾರಾಜ ನಾರದ ಮುನಿಯಿಂದ ಉಪದೇಶವನ್ನು ಕೇಳಿ ಮಹಾನ್‌ ದೈವಭಕ್ತನಾದನು. ಪ್ರಹ್ಲಾದನು ಕೇವಲ ಐದು ವರ್ಷದ ಬಾಲಕನಾಗಿದ್ದಾಗ ತನ್ನ ಸಹಪಾಠಿಗಳಿಗೆ ಕೂಡಲೇ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುವಂತೆ ಬೋಧಿಸುತ್ತಿದ್ದನು.

ಆದ್ದರಿಂದ ಐನೂರು ವರ್ಷ ಹಳೆಯದಾದ ಮರವಾಗುವುದರಿಂದ ಅಥವಾ ಐದು ದಶಲಕ್ಷ ವರ್ಷ ಹಳೆಯದಾದ ಬಂಡೆಯಾಗುವುದರಿಂದ ಏನೂ ಉಪಯೋಗವಿಲ್ಲ. ಆದರೆ ನೀವು ಕೇವಲ ಐದೇ ವರ್ಷ ಬಾಳಿದರೂ, ದಿವ್ಯಜ್ಞಾನವನ್ನು ಅರ್ಥಮಾಡಿಕೊಂಡರೆ, ನಿಮ್ಮ ಜೀವನವು ಪರಿಪೂರ್ಣವಾಗುತ್ತದೆ. ಈ ವಿಚಾರವನ್ನು ತುಂಬ ಸೊಗಸಾಗಿ ಶ್ರೀಮದ್‌ ಭಾಗವತದಲ್ಲಿ ಚರ್ಚಿಸಲಾಗಿದೆ. “ಓಹ್‌, ನಿಮ್ಮ ದೀರ್ಘಾಯುಷ್ಯದ ಬಗೆಗೆ ನಿಮಗೆ ಬಹಳ ಹೆಮ್ಮೆಯೇ? ನಾಯಿಗಳು ಮತ್ತು ಬೆಕ್ಕುಗಳು ಹತ್ತಿಪ್ಪತ್ತು ವರ್ಷಗಳಲ್ಲಿಯೇ ಸತ್ತುಹೋಗುತ್ತವೆ. ಆದರೆ ನೀವು ಎಪ್ಪತ್ತು ಎಂಬತ್ತು ವರ್ಷ ಬದುಕಿರುತ್ತೀರಿ. ಆದ್ದರಿಂದ ನಿಮಗೆ ಬಹಳ ಹೆಮ್ಮೆಯೇ?” ಶ್ರೀಮದ್‌ ಭಾಗವತವು ಉತ್ತರಿಸುತ್ತದೆ (2.3.18) ತರವಃ ಕಿಂ ನ ಜೀವನ್ತಿ: “ನೀವು ಮರವನ್ನು ನೋಡುತ್ತಿಲ್ಲವೇ? ಅದು ಐನೂರು ವರ್ಷ ಅಥವಾ ಸಾವಿರ ವರ್ಷ ಬಾಳುತ್ತದೆ.”

“ಆದರೆ ಮರವು ಜೀವನ ನಡೆಸಲಾರದು.”

ಭಸ್ತ್ರಾಃ ಕಿಂ ನ ಶ್ವಸನ್ತಿ: “ನೀವು ತಿದಿಯನ್ನು ನೋಡುವುದಿಲ್ಲವೇ? ಅದು ಕೇವಲ ಒಂದು ಚರ್ಮದ ಚೀಲ. ಆದರೂ ಅದು ಉಸಿರಾಡುತ್ತದೆ. `ಭಾಸ್‌, ಭಾಸ್‌, ಭಾಸ್‌’ ಆದ್ದರಿಂದ ನಿಮ್ಮ ಉಸಿರಾಟವು ಒಂದು ಅದ್ಭುತವಾದ ಸಂಗತಿ ಎಂದು ಏಕೆ ಯೋಚಿಸುತ್ತೀರಿ?”

“ತಿದಿ ಉಸಿರಾಡುವುದೇನೋ ಸರಿ, ಆದರೆ ಅದು ತಿನ್ನಲಾರದು, ಕಾಮವನ್ನು ಉಪಭೋಗಿಸಲಾರದು.”

ನ ಖಾದನ್ತಿ ನ ಮೇಹನ್ತಿ ಕಿಂ ಗ್ರಾಮೇ ಪಶವೋಽಪರೇ: “ಆದರೆ ನಾಯಿಗಳು ಮತ್ತು ಹಂದಿಗಳು ಕಾಮವನ್ನು ಉಪಭೋಗಿಸುವುದಿಲ್ಲವೆ? ಅವು ಆಹಾರವನ್ನು ಸೇವಿಸುವುದಿಲ್ಲವೆ?” ಈ ರೀತಿಯಲ್ಲಿ ಭಾಗವತವು ಐಹಿಕವಾದಿಗಳ ಮೂರ್ಖತನದ ಹೆಮ್ಮೆಯನ್ನು ವಿಶ್ಲೇಷಿಸುತ್ತದೆ. ನೀವು ಈ ಮಿಥ್ಯಾಹಂಕಾರವನ್ನು ತ್ಯಜಿಸಿ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಬೇಕು. ಇದೇ ಜೀವನದ ಪರಿಪೂರ್ಣತೆ. ಇಲ್ಲದಿದ್ದರೆ ನೀವು ಬೆಕ್ಕು ನಾಯಿಗಳಂತಿರತ್ತೀರಿ. ನಾನು ನಿಮ್ಮನ್ನು ಟೀಕಿಸುತ್ತಿದ್ದೇನೆ ಎಂದು ಭಾವಿಸಬೇಡಿ. ಸತ್ಯ ಸಂಗತಿಗಳನ್ನು ಮಾತ್ರ ಮಂಡಿಸುತ್ತಿದ್ದೇನೆ ಅಷ್ಟೆ.

ಆದ್ದರಿಂದ ಈ ಮಾನವ ಜನ್ಮವನ್ನು ಬುದ್ಧಿ, ಜ್ಞಾನ ಮತ್ತು ಸಂದೇಹ ಹಾಗೂ ಭ್ರಾಂತಿಗಳಿಂದ ಬಿಡುಗಡೆಯನ್ನು ಸಾಧಿಸಲು ಯುಕ್ತವಾಗಿ ಬಳಸಿಕೊಳ್ಳಬೇಕು. ನೀವು ಭಗವದ್ಗೀತೆಯನ್ನು ನಿಮ್ಮ ಬುದ್ಧಿಶಕ್ತಿ ಮತ್ತು ವಿವೇಚನೆಯಿಂದ ಚೆನ್ನಾಗಿ, ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡಿದರೆ, ನೀವು  ಪರಿಪೂರ್ಣರಾಗುತ್ತೀರಿ. ಇದೇ ಕೃಷ್ಣಪ್ರಜ್ಞೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಿ. ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬೇಡಿ. ಅದೇ ನಮ್ಮ ಪ್ರಾರ್ಥನೆ. ನಿಮಗೆ ಈ ಅವಕಾಶವನ್ನು ಒದಗಿಸುವುದೇ ಈ ಕೃಷ್ಣಪ್ರಜ್ಞಾ ಸಂಘದ ಉದ್ದೇಶ. ನಾವು ನಿಮಗೆ ಸುಳ್ಳು ಹೇಳುತ್ತಿಲ್ಲ. ಇಲ್ಲಿ ಸತ್ತ್ವಪೂರ್ಣವಾದದ್ದು ಏನೋ ಇದೆ. ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

   ನಿಮಗೆ ಅಮಿತ ವಂದನೆಗಳು. ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi