ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಪತ್ರಿಕಾ ವರದಿಗಾರನೊಬ್ಬನ ನಡುವೆ 1975ರ ಜುಲೈನಲ್ಲಿ ಫಿಲಿಡೆಲ್ಫಿಯಾದಲ್ಲಿ ನಡೆದ ಸಂವಾದ.
ವರದಿಗಾರ: ನೀವು ಕೆಲವು ಗುಣಗಳನ್ನು ಸ್ತ್ರೀಯರ ಮೇಲೆ ಆರೋಪಿಸಿರುವ ಕಾರಣ ಕೃಷ್ಣಪ್ರಜ್ಞಾ ಅಭಿಯಾನ ಲಿಂಗಭೇದ ಭಾವದಿಂದ ಕೂಡಿದೆ; ನನಗೆ ಸ್ಪಷ್ಟ ಅರಿವಿಲ್ಲ. ಕೆಲವು ವೇದ ಶಾಸ್ತ್ರಾಧ್ಯಾಯಿಗಳು ಇದರ ವ್ಯಾಖ್ಯೆ ನೀಡಿದ್ದಾರೆ; ಹಾಗಾಗಿ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ಕೋರುತ್ತಿದ್ದೇನೆ. ಕೃಷ್ಣಪ್ರಜ್ಞಾ ಪ್ರಚಾರ ಸ್ತ್ರೀವಿರೋಧಿ ಎಂದು ಆರೋಪಿಸಿಲ್ಲವಾದರೂ, ಸಹಜವಾದ ಲಕ್ಷಣಗಳ ಕಾರಣ ಅವರ ಪಾತ್ರವನ್ನು ಸಂಕುಚಿತಗೊಳಿಸಲಾಗಿದೆ.

ಶ್ರೀಲ ಪ್ರಭುಪಾದ: ಆಧ್ಯಾತ್ಮಿಕವಾಗಿ ಸಮಾನಾವಕಾಶ ಕಲ್ಪಿಸಿಕೊಡುತ್ತೇವೆ. ಭೌತಿಕವಾಗಿ ಒಬ್ಬಾತ, ಸಹಾಯಕ, ಮತ್ತೊಬ್ಬ ನಿರ್ವಾಹಕ. ಅದನ್ನು ಕೈಬಿಡುವುದು ಹೇಗೆ? ಪ್ರತಿಯೊಬ್ಬರೂ ಆಡಳಿತ ನಿರ್ವಾಹಕನಾಗಲು ಸಾಧ್ಯವೇ? ಲೌಕಿಕದಲ್ಲಿ ಇದು ಸಾಧ್ಯವೆ? ಭೌತಿಕವಾಗಿ ಪರಿಭಾವಿಸುವಾಗ ಒಬ್ಬರು ತಂದೆ, ಇನ್ನೊಂದು ಮಗು. ಒಬ್ಬರು ಸಹಾಯಕರು, ಮತ್ತೊಬ್ಬರು ಆಡಳಿತ ನಿರ್ವಾಹಕ. ಒಬ್ಬರು ಮಹಿಳೆ ಮತ್ತೊಬ್ಬರು ಪುರುಷ. ಇದನ್ನು ನೀವು ಹೇಗೆ ತಡೆಯುತ್ತೀರಿ? ಆದರೆ ಆಧ್ಯಾತ್ಮಿಕವಾಗಿ ಎಲ್ಲರೂ ಒಂದೆ.
ವರದಿಗಾರ: ಲೌಕಿಕವಾಗಿ ಏನು ನಡೆಯುತ್ತಿದೆ ಎಂಬುದು ಅಮುಖ್ಯವೆ?
ಶ್ರೀಲ ಪ್ರಭುಪಾದ: ವಿಷಯವೇನೆಂದರೆ, ನೀವು ಅಧ್ಯಾತ್ಮ ಭೂಮಿಕೆಯಲ್ಲಿ ಕಾಲಿಟ್ಟಾಗ ಪ್ರತಿಯೊಬ್ಬರಲ್ಲೂ ಚೇತನರನ್ನು, ಆತ್ಮನನ್ನು ಕಂಡಾಗ ಅಲ್ಲಿಗೆ ಅದೇ ಸಮಾನತೆ. ಉದಾಹರಣೆಗೆ ನೀವು ವಿಭಿನ್ನ ರೀತಿಯಲ್ಲಿ ಉಡುಗೆ ತೊಟ್ಟಿದ್ದೀರಿ. ಕೆಂಪು ರವಿಕೆ ಧರಿಸಿದ್ದೀರಿ, ಆದರೆ ನನ್ನ ಪೋಷಾಕೆ ಬೇರೆ. ಈ ವ್ಯತ್ಯಾಸ ಇರಲೇಬೇಕು. ಇಲ್ಲಿ ಅನೇಕ ಸ್ತ್ರೀ ಪುರುಷರಿದ್ದಾರೆ – ಅವರೆಲ್ಲರೂ ಬೇರೆ ಬೇರೆ ಬಟ್ಟೆಗಳನ್ನು ಧರಿಸಿದ್ದಾರೆ. ಉಡುಗೆಯ ಆಧಾರದ ಮೇಲೆ ಎಲ್ಲರೂ ಸಮಾನರೆನ್ನಲಾಗದು.

ಆದರೆ ಈ ಪೋಷಾಕಿನ ಒಳಗಡೆ ಆಧ್ಯಾತ್ಮಿಕ ಚೇತನರಾಗಿ ಎಲ್ಲರೂ ಒಂದೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ – “ಆಧ್ಯಾತ್ಮಿಕ ದೃಷ್ಟಿಕೋನದಿಂದ ನಾವು ಜ್ಞಾನಿಯನ್ನು, ಒಂದು ಹಸು, ಆನೆ, ನಾಯಿ, ನಾಯಿಭಕ್ಷಕರೂ ಸಹ ಎಲ್ಲರೂ ಸಮಾನರೆ ಎಂದು ಕಾಣಬಹುದು. ಆದರೆ ಭೌತಿಕವಾಗಿ ಅವರು ಹೇಗೆ ಸಮಾನರು?
ನಾನೊಬ್ಬ ವಿದ್ವಾಂಸನನ್ನು ಆಮಂತ್ರಿಸಿ – “ಈ ನಾಯಿಯ ಪಕ್ಕ ಕೂರಿ” ಎಂದರೆ ಅವರಿಗೆ ಸಮಾಧಾನ ತರುತ್ತದೆಯೇ? ಆತ ಅವಮಾನಿತರಾಗುತ್ತಾರೆ. ನಾನು “ನಾಯಿಯೊಳಗೆ ಒಂದು ಆತ್ಮನನ್ನು ಕಾಣಬಹುದು; ಮತ್ತು ಜ್ಞಾನಿಯೊಳಗೂ ಒಂದು ಜೀವಾತ್ಮನನ್ನು ಕಾಣಬಹುದು. ಆದರೆ – ನೀವು ಪರಮಜ್ಞಾನಿಯೆಂಬ ಭಾವನೆ ನಿಮಗಿರಬಹುದು, ನಾಯಿ ನಿಮಗೆ ಯಃಕಶ್ಚಿತ್ ಎಂದು ತೋರಬಹುದು. ಆದರೆ ನನ್ನ ದೃಷ್ಟಿಯಲ್ಲಿ ನೀವಿಬ್ಬರೂ ಒಂದೆ.” ಎಂದರೆ ಅದು ಅವಮಾನಕರ. ಆದುದರಿಂದ ಭೌತಿಕ ವ್ಯವಸ್ಥೆಯ ವೈವಿಧ್ಯವನ್ನು ನಾವು ಕದಲಿಸಬಾರದು. ಅದೇ ವೇಳೆ ಆಧ್ಯಾತ್ಮಿಕ ಸ್ತರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕೃತಕವಾಗಿ ಭೌತಿಕ ಶರೀರದ ವೇದಿಕೆಯ ಮೇಲೆ ನೀವು ಸ್ತ್ರೀಪುರುಷರನ್ನು ಸಮಾನರಂತೆ ಕಂಡರಿಸಬಹುದು. ಆದರೆ ಅದು ನಿಜವಲ್ಲ.
ಭಗವದ್ಗೀತೆಯಲ್ಲಿ ಒಂದೆಡೆ, ಪರಮಪುರುಷ ಭಗವಂತ, ಆಧ್ಯಾತ್ಮಿಕ ದೃಷ್ಟಿಕೋನದಿಂದ ಎಲ್ಲರನ್ನು ಸಮಾನಭಾವದಿಂದ ಕಾಣಬಹುದೆಂದು ಹೇಳುತ್ತಾನೆ. ಮತ್ತೊಂದೆಡೆ (ಶ್ರೀಕೃಷ್ಣ) ಹೇಳುತ್ತಾನೆ – ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಙ್ಕರಃ ನೀವು ಸ್ತ್ರೀಯರನ್ನು ಸಂರಕ್ಷಿಸಬೇಕು. ಇಲ್ಲವಾದಲ್ಲಿ ಕೆಳವರ್ಗದ ಜನರು ಶೀಲಭಂಗಕ್ಕೆ ಯತ್ನಿಸುತ್ತಾರೆ. ಸಮಾಜದಲ್ಲಿ ಅನಪೇಕ್ಷಿತ ಶಿಶುಗಳ ಜನನದಿಂದ ಹೊರೆಯಾಗುತ್ತದೆ. `ನೀವು ಸ್ತ್ರೀ ವಿಮೋಚನಾ ಆಂದೋಳನವನ್ನು ಗಮನಿಸಿ’ ಇದು ಪುರುಷರ ಹುನ್ನಾರ. ಈಗ ಪುರುಷರಿಗೆ ಪುಕ್ಕಟೆ ವೇಶ್ಯೆಯರು ಸಿಗುತ್ತಾರೆ; ಅಷ್ಟೆ. ಒಮ್ಮೆ ಒಬ್ಬಾತ, ಒಬ್ಬಾಕೆಯನ್ನು ಗರ್ಭಿಣಿಯನ್ನಾಗಿ ಮಾಡಿದರಾಯಿತು, ಆತ ಕೈಕೊಟ್ಟು ಹೋಗುತ್ತಾನೆ. ಆ ಹೆಣ್ಣಿಗೆ ಇರುವುದು ಎರಡೇ ಆಯ್ಕೆ: ಸರ್ಕಾರಿ ಸವಲತ್ತುಗಳಿಗೆ ಕೈಯೊಡ್ಡುವುದು, ಇಲ್ಲವೆ ಆ ಮಗುವನ್ನು ಕೊಲ್ಲುವುದು…. ಗರ್ಭಪಾತ. ನಿಮಗೆ ಅದನ್ನು ಕೇಳಲಿಷ್ಟವಿಲ್ಲ, ಆದರೆ `ಸ್ತ್ರೀವಿಮೋಚನಾ ಚಳವಳಿ’ ಎಂದರೆ, ಪುರುಷರು ನಿಮ್ಮ ಮೇಲೆ ಬಲೆ ಬೀಸಿದ್ದಾರೆಂದು ಅರ್ಥ. ಹೀಗಾಗಿ ನಮ್ಮ ಅಧ್ಯಾತ್ಮ ಗುರಿಸಾಧನೆಗಾಗಿ, ನಾವು ಭೌತಿಕ ಸ್ತರದಲ್ಲಿ ಕೆಲವೊಂದು ಲಘುವಾದ ಲೌಕಿಕ ಭೇದವನ್ನು ಮಾಡಬೇಕಾಗುತ್ತದೆ. ಸ್ತ್ರೀಯರನ್ನು ರಕ್ಷಿಸುವ ಉದ್ದೇಶದಿಂದ.
ನಾವು ಹಾಗೆ ಭೇದವೆಣಿಸುವವರೆ ಆಗಿದ್ದರೆ, ನಮ್ಮ ಮಂದಿರದಲ್ಲಿ ನಾವೆಲ್ಲರೂ ಒಟ್ಟಿಗೆ ಸುಖವನ್ನು ಅನುಭವಿಸುತ್ತಿರುವೆವು. ಇದು ಹೇಗೆ? ನಾವು ಸಮಾನರೀತಿಯಲ್ಲಿ ಸುಖಸವಲತ್ತುಗಳನ್ನು ಅನುಭವಿಸುತ್ತಿರುವುದೇಕೆಂದರೆ ನಾವೆಲ್ಲರೂ ಸಮಾನರು – ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಮಾನರು. `ನೀನು ಮಹಿಳೆ, ನೀನು ಭಕ್ತೆಯಾಗಲಾರೆ’ ಎಂದು ನಾವು ಹೇಳಲಾರೆವು. ಇಲ್ಲ. ನಾವು ಎಲ್ಲರನ್ನು ಸ್ವಾಗತಿಸುತ್ತೇವೆ. ಎಲ್ಲರನ್ನು ಕೇಳುತ್ತೇವೆ. “ಆಧ್ಯಾತ್ಮಿಕ ನೆಲೆಗೆ ಬನ್ನಿ. ಎಲ್ಲವೂ ಇಲ್ಲಿ ಚೆನ್ನು”. ಒಬ್ಬ ವ್ಯಕ್ತಿಗೆ ಆಧ್ಯಾತ್ಮಿಕ ಅನುಭವವಾಗುತ್ತಿದ್ದಂತೆ, ತನಗೂ ಮಿಕ್ಕವರಿಗೂ ವ್ಯತ್ಯಾಸವಿಲ್ಲ ಎಂಬುದನ್ನು ತಿಳಿಯುತ್ತಾನೆ. ಹಾಗಾಗಿ, ಅವನು ಸುಖಿ. ಭೌತಿಕ ಪರಿಕಲ್ಪನೆಯಲ್ಲಿ ಒಬ್ಬ ಮತ್ತೊಬ್ಬನ ಸ್ಥಾನವನ್ನು ಆಕ್ರಮಿಸಿಕೊಳ್ಳಬಯಸುತ್ತಾನೆ. ಅಧ್ಯಾತ್ಮದಲ್ಲಿ ಹಾತೊರೆತಕ್ಕೆ ಕೊರಗಿಗೆ ಆಸ್ಪದವಿಲ್ಲ. ನಾವೆಲ್ಲರೂ ಆಧ್ಯಾತ್ಮಿಕವಾಗಿ ಸಮಾನರೆ ಎಂಬುದು ಅವನಿಗೆ ಅರಿವಾಗುತ್ತದೆ.

ನೀವು ನಮ್ಮ ದೇವಮಂದಿರದಲ್ಲಿ ಕಣ್ಣಾರೆ ಕಾಣಬಹುದು. ಹುಡುಗ ನರ್ತಿಸುತ್ತಿದ್ದಾನೆ. ತಂದೆ ನರ್ತಿಸುತ್ತಾರೆ, ಕರಿಯ ಕುಣಿಯುತ್ತಾನೆ, ಬಿಳಿಯನೂ ಕುಣಿಯುತ್ತಾನೆ, ಅಂತೆಯೇ ವೃದ್ಧರೂ ಸಹ. ಅವರೇನೂ ಕೃತಕ ನರ್ತನ ಮಾಡುತ್ತಿಲ್ಲ – ನಾಯಿಗಳಂತೆ. ಅವರಿಗೆ ಭಗವದ್ಧ್ಯಾನದ ಭಾವಾತಿರೇಕ. ಇದು ಆಧ್ಯಾತ್ಮಿಕ ವೇದಿಕೆ; “ನೃತ್ಯರಂಗ”. ಅವರು ಸ್ವಭಾವತಃ ನರ್ತಿಸುತ್ತಿದ್ದಾರೆ, ಏಕಾಏಕಿ ಭಾವೋತ್ಪೂರಿತರಾಗಿ; ಏಕೆಂದರೆ ಅವರಿಗೆ ಭಗವತ್ ಸಾಕ್ಷಾತ್ಕಾರವಾಗುತ್ತಿದೆ. ಭಗವಂತನೊಡನೆ ತಾದಾತ್ಮ್ಯ ಹೊಂದಿದ್ದಾರೆ. “ನಾವೆಲ್ಲ ಕೃಷ್ಣದಾಸ”ರೆಂಬ ಭಾವೋನ್ಮಾದ.
ಮತ್ತೆ ಇದು ಎಲ್ಲ ಭೌತಿಕ ತಾರತಮ್ಯಗಳ ನಡುವೆ ಕಾಣುವ ನೋಟ. ಪುರುಷರ ದೇಹದ ಅಂಗರಚನೆ, ಸ್ತ್ರೀಯದೇಹದ ಅಂಗರಚನೆ ಎರಡೂ ಪರಸ್ಪರ ಭಿನ್ನ. ಅವೆರಡೂ ಒಂದೇ ಎಂದು ಹೇಗೆ ಹೇಳುವಿರಿ? ಭೌತಿಕವಾಗಿ ಇಬ್ಬರೂ ಒಂದೇ ಆಗಿದ್ದರೆ, ಪುರುಷರು ಯಾಕೆ ಗರ್ಭ ಧರಿಸುವುದಿಲ್ಲ? ಇದು ಪ್ರಾಕೃತಿಕ ಭೇದ. ಕೆಲವೊಮ್ಮೆ ನಾನು ಭೇದವೆಣಿಸುತ್ತಿದ್ದೇನೆ ಎಂದು ಜನರ ಭಾವನೆ. ಆದರೆ ಆ ಭೇದ ಆಗಲೆ ಜನ್ಮತಃ ಕಾಣಿಸಿಕೊಂಡಿದೆ. ಹೀಗಿದ್ದರೂ ಸಹ ಕೃಷ್ಣನೊಡನೆ ಸಂಬಂಧದ ವಿಷಯ ಬಂದಾಗ – “ನಾನು ಜೀವಾತ್ಮ, ನನ್ನ ಕರ್ತವ್ಯ ಭಗವತ್ ಸೇವೆ” – ಎಂದು ಯೋಚಿಸಿದಾಗ ಇಬ್ಬರೂ ಒಂದೆ.
ನಾವು ಕೃತಕವಾಗಿ ಸಮಾನತೆ ಕಲ್ಪಿಸಬಾರದು ಎಂಬುದು ನಮ್ಮ ಪ್ರಸ್ತಾವ. ಹಾಗೆ ಮಾಡಿದರೆ ಅದು ವಿಫಲವಾಗುತ್ತದೆ. ಈಗಾಗಲೇ ವಿಫಲಗೊಂಡಿದೆ. ಉದಾಹರಣೆಗೆ, ಲಂಡನ್ನಲ್ಲಿ ನಾನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೋಡಿದೆ. ನಾನು ಆಕೆಗೆ ವಿನೋದಕ್ಕಾಗಿ ಹೇಳಿದೆ – `ನಾನು ನಿನ್ನ ಕೈ ಹಿಡಿದೊಯ್ದರೆ – ನೀನೇನು ಮಾಡುವೆ? ಸುಮ್ಮನೆ ಅಳುತ್ತೀಯಷ್ಟೆ. ನೀನು ಪೊಲೀಸ್ ಅಧಿಕಾರಿಯಾಗಿದ್ದು ಪ್ರಯೋಜನವೇನು?” ಒಬ್ಬ ಪೊಲೀಸ್ ಅಧಿಕಾರಿಗೆ ಬೇಕಿರುವುದು ದೇಹದಾರ್ಢ್ಯ. ಎಲ್ಲಾದರೂ ದೊಂಬಿ, ಗೂಂಡಾಗಿರಿ ಆದರೆ ಆತ ಆ ರೌಡಿಯ ಕೆನ್ನೆಗೆ ಬಾರಿಸಿ, ಹಿಡಿತರಬಹುದು. ಆದರೆ ಮಹಿಳೆ ಅಲ್ಲಿ ಮಾಡುವುದೇನು? ಆದುದರಿಂದ ನಾವು – `ವಾಸ್ತವಕ್ಕೆ ಬನ್ನಿ’ ಎನ್ನುತ್ತೇವೆ. ಕೃತಕ ಸಮಾನತೆ ಬಹಳಕಾಲ ಉಳಿಯದು.

ನಾವೆಲ್ಲರೂ ಒಂದೇ; ನಿಸ್ಸಂದೇಹವಾಗಿ. ಏಕೆಂದರೆ ನಾವೆಲ್ಲರೂ ಚೇತನಾತ್ಮರು `ಅಸ್ಮಿನ್ ದೇಹೇ’. ಪ್ರತಿಯೊಬ್ಬರ ಭೌತಿಕ ಶರೀರದೊಳಗೂ ಒಂದು ಆತ್ಮವಿದೆ. ಅದನ್ನು ಮೊದಲು ನಾವು ತಿಳಿಯಬೇಕು. ಅದನ್ನು ನಾವು ಅದೇ ನೆಲೆಗಟ್ಟಿನ ಮೇಲೆ ರೂಢಿಸಿ, ನಮ್ಮೊಳಗೆ ಅದರ ಬಗ್ಗೆ ಜ್ಞಾನಪ್ರಾಪ್ತಿಯಾಗಬೇಕು; ಆಗ ನಾವೆಲ್ಲರೂ ಒಂದೆ. ಅಲ್ಲಿ ತಲ್ಲಣಕ್ಕೆ ಎಡೆಯಿಲ್ಲ. ಇದು ಬೇಕು. ನಾವು ಅದನ್ನು ಒತ್ತಿ ಹೇಳುತ್ತಿದ್ದೇವೆ – ಕೃತಕರಾಗಿ ನಾವು ಎಲ್ಲರೂ ಒಂದೇ ಎಂದು ಹೇಳುವುದಾದರೆ, ಅದು ಪರಿಣಾಮಕಾರಿಯಾಗದು. ನಾವೆಲ್ಲರೂ ಆಧ್ಯಾತ್ಮಿಕವಾಗಿ ಸಮಾನರು ಎಂಬುದನ್ನು ತಿಳಿಯಿರಿ. ಅದು ಪ್ರಯೋಜನಕಾರಿ. ಅದು ವಿಶ್ವದ ಎಲ್ಲೆಡೆ ಶಾಂತಿ, ಸೌಖ್ಯವನ್ನು ನೆಲೆಗೊಳಿಸುತ್ತದೆ.






Leave a Reply