ಏಕಾದಶಿಯನ್ನು ಕಟ್ಟುನಿಟ್ಟಾಗಿ ಆಚರಿಸಬೇಕು. ಅದೇ ರೀತಿ ಆಗ ಸ್ವೀಕರಿಸುವ ಏಕಾದಶೀ ಫಲಾಹಾರದ ಬಗೆಗೂ ನೇಮ ನಿಷ್ಠೆ ಬೇಕು. ಏಕಾದಶಿಯಂದು ತಯಾರಿಸಿ ಸ್ವೀಕರಿಸಬಹುದಾದ ಕೆಲವು ಹೊಸ ಬಗೆಯ ಉಪಾಹಾರಗಳನ್ನು ಈ ಬಾರಿ ನಮ್ಮ ಓದುಗರಿಗೆ ತಿಳಿಸಿದ್ದೇವೆ. ಹರೇ ಕೃಷ್ಣ ಜಪ ಮಾಡುತ್ತಲೇ ಇದನ್ನು ಶ್ರದ್ಧೆಯಿಂದ ತಯಾರಿಸಿ ಕೃಷ್ಣನಿಗೆ ಅರ್ಪಿಸಿ ಸವಿಯಿರಿ.
ಪನೀರ್ ಪರಾಟ

ಬೇಕಾಗುವ ಸಾಮಾನು :
ರಾಜ್‌ಗಿರ ಹಿಟ್ಟು – 1 ಕಪ್
ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿದ ಆಲೂಗೆಡ್ಡೆ – 1/4 ಕಪ್
ಕರಿ ಮೆಣಸು ಪುಡಿ – ಅರ್ಧ ಟೀ ಸ್ಪೂನ್
ಕಲ್ಲುಪ್ಪು – ರುಚಿಗೆ ತಕ್ಕಷ್ಟು
ಲಟ್ಟಿಸಲು, ರಾಜ್‌ಗಿರ ಹಿಟ್ಟು ಬೇಯಿಸಲು – ಎಣ್ಣೆ ಅಥವಾ ತುಪ್ಪ
ಹೂರಣಕ್ಕೆ :
ತುರಿದ ತಾಜಾ ಪನೀರ್ – 1 ಕಪ್
ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ – 2 ಟೀ ಸ್ಪೂನ್
ನಿಂಬೆ ರಸ – ಅರ್ಧ ಟೀ ಸ್ಪೂನ್
ಸಕ್ಕರೆ – ಅರ್ಧ ಟೀ ಸ್ಪೂನ್
ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಹೂರಣದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಆರು ಸಮಭಾಗವಾಗಿ ಮಾಡಿಟ್ಟುಕೊಳ್ಳಿ. ರಾಜ್‌ಗಿರ ಹಿಟ್ಟು, ಆಲೂಗೆಡ್ಡೆ, ಮೆಣಸು ಪುಡಿ ಮತ್ತು ಉಪ್ಪನ್ನು ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಾದಷ್ಟು ನೀರು ಹಾಕಿ ಹಿಟ್ಟು ಕಲಸಿ. ಇದನ್ನು ಆರು ಸಮಭಾಗವಾಗಿ ಮಾಡಿ. ರಾಜ್‌ಗಿರ ಹಿಟ್ಟನ್ನು ಬಳಸಿ ಚಪ್ಪಾತಿಯಂತೆ ಲಟ್ಟಿಸಿ. ಚಕ್ರಾಕಾರದಲ್ಲಿರಲಿ. ಒಂದೊಂದು ಚಪಾತಿಯ ಮಧ್ಯ ಭಾಗದಲ್ಲಿ ಒಂದೊಂದು ಹೂರಣ ಇಟ್ಟು ಮಡಿಚಿ. ಪುನಃ ಲಟ್ಟಿಸಿ. ನಾನ್ ಸ್ಟಿಕ್ ತವಾವನ್ನು ಕಾಯಿಸಿ. ಸ್ವಲ್ಪ ಎಣ್ಣೆ ಅಥವಾ ತುಪ್ಪ ಬಳಸಿ ಪರಾಟ ಬೇಯಿಸಿ. ಹಸಿರು ಚಟ್ನಿ ಅಥವಾ ಗಟ್ಟಿ ಮೊಸರಿನೊಂದಿಗೆ ತಿನ್ನಲು ನೀಡಿ.
ಸಬ್ಬಕ್ಕಿ ವಡೆ (ಸಾಬುದಾನ ವಡೆ)

ಬೇಕಾಗುವ ಸಾಮಾನು :
ಸಬ್ಬಕ್ಕಿ – 1 ಕಪ್
ಆಲೂಗೆಡ್ಡೆ – 1
ಕಡಲೆಕಾಯಿ ಬೀಜ – 1/3 ಕಪ್
ಕತ್ತರಿಸಿದ ಹಸಿ ಮೆಣಸಿನಕಾಯಿ – 2
ತಾಜಾ ಕೊತ್ತಂಬರಿ ಸೊಪ್ಪು – 3 ಟೇಬಲ್ ಸ್ಪೂನ್
ಕಾಡು ಗೋ ಹಿಟ್ಟು (ಬಕ್‌ವೀಟ್) – ಮುಕ್ಕಾಲು ಕಪ್ ಅಥವಾ ಅಗತ್ಯವಾದಷ್ಟು
ಉಪ್ಪು – 1 ಟೀ ಸ್ಪೂನ್
ವಡೆ ಕರಿಯಲು – ತುಪ್ಪ ಅಥವಾ ರಿಫೈನ್ಡ್ ಎಣ್ಣೆ
ಮಾಡುವ ವಿಧಾನ : ಸಾಬುದಾನ (ಸಬ್ಬಕ್ಕಿ) ವನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನೀರು ಹಾಕಿ 5-6 ಗಂಟೆ ನೆನೆಸಿಡಿ. ಅದು ಚೆನ್ನಾಗಿ ನೆಂದು, ಮೃದುವಾಗಿ, ದೊಡ್ಡದಾಗುತ್ತದೆ. ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿ. ಕಡಲೆಕಾಯಿ ಬೀಜವನ್ನು ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿಟ್ಟುಕೊಳ್ಳಿ. ಒಂದು ಅಗಲವಾದ ಪಾತ್ರೆಯಲ್ಲಿ ನೆನೆಸಿದ ಸಬ್ಬಕ್ಕಿ, ಆಲೂಗೆಡ್ಡೆ, ಕಡಲೆಕಾಯಿ ಬೀಜದ ಪುಡಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಾಡು ಗೋಹಿಟ್ಟು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕಲಸಿಡಿ. ತುಪ್ಪ ಅಥವಾ ಎಣ್ಣೆಯನ್ನು ಪ್ಯಾನ್‌ನಲ್ಲಿ ಕುದಿಸಿ. ಎರಡೂ ಕೈ ಬಳಸಿ ವಡೆಯನ್ನು ತಟ್ಟಿ ಎಣ್ಣೆಯಲ್ಲಿ ಬೇಯಿಸಿ. ವಡೆಯನ್ನು ಕಾಗದದ ಟವೆಲ್‌ನಲ್ಲಿ ಇಟ್ಟರೆ ಎಣ್ಣೆ ಹೀರಿಕೊಳ್ಳುತ್ತದೆ. ಬಿಸಿಯಲ್ಲಿ ತಿಂದರೆ ರುಚಿ ಹೆಚ್ಚು.
ಪಕೋಡ

ಬೇಕಾಗುವ ಸಾಮಾನು :
ಸಿಂಗೋಡ ಹಿಟ್ಟು – 1 ಕಪ್
ಉಪ್ಪು – ಅರ್ಧ ಟೀ ಸ್ಪೂನ್
ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು – 1 ಟೇಬಲ್ ಸ್ಪೂನ್
ನೀರು – 1 ಕಪ್ ಅಥವಾ ಅಗತ್ಯವಾದಷ್ಟು
ಆಲೂಗೆಡ್ಡೆ ದೊಡ್ಡದು – 2
ಕರಿಯಲು ಎಣ್ಣೆ.
ಮಾಡುವ ವಿಧಾನ : ಹಿಟ್ಟು, ಉಪ್ಪು, ಕೊತ್ತಂಬರಿ ಸೊಪ್ಪನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿ. ಸುಮಾರಾಗಿ ಗಟ್ಟಿಯಾದ ಹಿಟ್ಟಾಗುವವರೆಗೂ, ಅಗತ್ಯವಿದ್ದಷ್ಟು ನೀರು ಹಾಕಿ ಕಲಸಿರಿ. ಆಲೂಗೆಡ್ಡೆಯ ಸಿಪ್ಪೆ ತೆಗೆದು ತೆಳ್ಳಗಿನ ಹೋಳು ಮಾಡಿಕೊಳ್ಳಿ. ಪ್ಯಾನ್‌ನಲ್ಲಿ ಎಣ್ಣೆಯನ್ನು ಕಾಯಿಸಿ. ಆಲೂಗೆಡ್ಢೆಯನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಬೇಯಿಸಿ. ಪಕೋಡವನ್ನು ಕಾಗದದ ಟವೆಲ್‌ನಲ್ಲಿ ಇಟ್ಟರೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಟೊಮ್ಯಾಟೊ ಚಟ್ನಿಯೊಂದಿಗೆ ತಿನ್ನಲು ನೀಡಿ.
ಚಟ್ನಿಗೆ ಬೇಕಾದ ಸಾಮಾನು :
ಕತ್ತರಿಸಿದ ಟೊಮ್ಯಾಟೊ – 6
ತುಪ್ಪ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಚೂರು ಮಾಡಿದ ಶುಂಠಿ – 2 ಟೇಬಲ್ ಸ್ಪೂನ್
ಎರಡು ಭಾಗ ಮಾಡಿದ ಹಸಿರು ಮೆಣಸಿನಕಾಯಿ – 1
ಮಾಡುವ ವಿಧಾನ : ಪ್ಯಾನ್‌ನಲ್ಲಿ ತುಪ್ಪವನ್ನು ಕಾಯಿಸಿ. ಜೀರಿಗೆ ಹಾಕಿ. ಅದು ಕಂದು ಬಣ್ಣಕ್ಕೆ ಬಂದ ಮೇಲೆ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಕೆದಕಿರಿ. ಟೊಮ್ಯಾಟೊಗಳನ್ನು ಹಾಕಿ ಚೆನ್ನಾಗಿ ಕಲಕಿರಿ. 15-20 ನಿಮಿಷ ಬೇಯಿಸಿ. ಅನಂತರ ಒಲೆಯಿಂದ ಕೆಳಗಿಳಿಸಿ. ಪಕೋಡದೊಂದಿಗೆ ನೀಡಿ.
ಟಿಪ್ಸ್ – ಅಡುಗೆಯಲ್ಲಿ ಉಪ್ಪು ಹೆಚ್ಚಾದಾಗ
1] ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗ ಮಾಡಿ. ಉಪ್ಪು ಹೆಚ್ಚಾಗಿರುವ ಸಾಂಬಾರ್, ಕರಿಗೆ ಹಾಕಿ. 10-15 ನಿಮಿಷ ಬೇಯಿಸಿ. ಆಲೂ ಉಪ್ಪನ್ನು ಹೀರಿಕೊಳ್ಳುತ್ತದೆ. ಅನಂತರ ಆಲೂವನ್ನು ಹೊರತೆಗೆಯಿರಿ.
2] ಎಳನೀರು ಹಾಕಬಹುದು.
3] ಸೂಪ್‌ಗೆ ಉಪ್ಪು ಹೆಚ್ಚಾಗಿದ್ದರೆ ಸ್ವಲ್ಪ ಸಕ್ಕರೆ ಹಾಕಿ.
4] ರಾಯತ/ಪಚಡಿ ಉಪ್ಪುಪ್ಪಾಗಿದ್ದರೆ ತೆಂಗಿನಕಾಯಿಯನ್ನು ಚೆನ್ನಾಗಿ ರುಬ್ಬಿ ಅದಕ್ಕೆ ಸೇರಿಸಿ.






Leave a Reply