ಪದ್ಮಿನಿ ಬಾಲು ಅವರು ಮಹಿಳೆಯರು ತಮ್ಮ ದೈನಂದಿನ ಕ್ರಿಯೆಯಲ್ಲಿ ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಳ್ಳುವ ಬಗ್ಗೆ ತಮ್ಮ ಅನುಭವವನ್ನು ಭಕ್ತಿವೇದಾಂತ ದರ್ಶನ ಓದುಗರಿಗೆ ನೀಡಿದ್ದಾರೆ.

ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ವಾಸಿಸುವ ಜನರೂ ಬಹಳ ಪುಣ್ಯವಂತರೆಂದು ನನ್ನ ಭಾವನೆ. ದೇವ ದೇವನು ಈ ಊರಿನ ಜನರ ಬಗ್ಗೆ ಬಹಳ ಕರುಣಾಮಯನು. ಇವರು ವಾಯು ಸೇವನೆಗೇ ಹೊರಡಲಿ, ಮನೆಗೆ ಸಾಮಾನುಗಳನ್ನು ತರುವ ಕೆಲಸದಲ್ಲಿರಲಿ, ಕಚೇರಿಗೆ ಸಮಯಕ್ಕೆ ತಲುಪಲು ಬಸ್ಸಿನ ಹಿಂದೆ ಓಡುತ್ತಿರಲಿ ಅಥವಾ ಮಕ್ಕಳ ಮನರಂಜಿಸಲು ಪಾರ್ಕಿಗೆ ತೆರಳಲಿ, ನೂರಾರು ದೇವಾಲಯಗಳಲ್ಲಿ ಪರಮ ದೇವೋತ್ತಮನು ವಿಗ್ರಹವಾಗಿ ದರ್ಶನವೀಯುತ್ತಾನೆ. ಅವಸರದಲ್ಲಿ ಕೈ ಮುಗಿದರೂ ಸ್ವೀಕರಿಸುತ್ತಾನೆ.
ಇಂತಹ ಜನರನ್ನು ನೋಡುವಾಗ ನನ್ನ ಮನಸ್ಸಿನಲ್ಲೊಂದು ಪ್ರಶ್ನೆ ಏಳುತ್ತದೆ. ತಂತಮ್ಮ ವೈಯಕ್ತಿಕ ಕಾರ್ಯಗಳಲ್ಲಿ ನಿರತವಾಗಿರುವಾಗ ಅನಿವಾರ್ಯವಾಗಿ ದೇವರಿಗೆ ಕೈ ಮುಗಿಯುತ್ತಿರುವವರಲ್ಲಿ ದೇವರ ದರ್ಶನವನ್ನೇ ಮುಖ್ಯ ಕಾರ್ಯವನ್ನಾಗಿಟ್ಟುಕೊಂಡು ಬಂದವರೆಷ್ಟು ಜನ, ಧ್ಯಾನ, ಪೂಜೆ, ನೈವೇದ್ಯ, ಜಪ ಇವುಗಳೂ ಸಹ ತಮ್ಮ ದಿನಚರಿಯ ಒಂದು ಮುಖ್ಯವಾದ ಅಂಗವೆಂದು ಭಾವಿಸುವವರು ಎಷ್ಟು ಮಂದಿ? ಲೌಕಿಕ ಪ್ರಾಪಂಚದ ಆಗು ಹೋಗುಗಳಲ್ಲಿ ಮುಳುಗಿದ್ದರೂ ಸಹ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬಾರದೇಕೆ ಎಂದು.
ಜನನದಿಂದ ಮರಣದಾದ್ಯಂತ ಆಶನ ವಸನಗಳನ್ನು ಕರುಣಿಸುವವನಿಗೆ ನಮ್ಮ ಧನ್ಯವಾದಗಳನ್ನರ್ಪಿಸಬೇಡವೆ? ನಮ್ಮ ವಾಸಕ್ಕಾಗಿ ಆಲಯವನ್ನು ಕರುಣಿಸುವ ಜಗತ್ಪತಿಯನ್ನು ಅದೇ ಆಲಯದ ಒಂದು ಚಿಕ್ಕ ಸ್ಥಳದಲ್ಲಿಯಾದರೂ ಸ್ಥಾಪಿಸಬೇಡವೇ? ನಮಗೆ ಹಾಲುಗಲ್ಲದ ಹಸುಳೆಗಳನ್ನಿತ್ತು ಅವರ ಮುಖದಲ್ಲಿ ಮಂದಹಾಸ ಮೂಡಿಸಿ ನಮ್ಮ ದುಗುಡಗಳನ್ನೆಲ್ಲ ದೂರ ಮಾಡುವ ದಯಾಮಯನನ್ನು ಕುರಿತು ನಮ್ಮ ಕಂದಮ್ಮಗಳಿಗೆ ತಿಳಿಸಬೇಕಲ್ಲವೇ?
ನಾವು ಅವನನ್ನು ನೆನೆಸಿಕೊಳ್ಳಲು ಮರೆತಾಗ ನಮಗೆ ಕಷ್ಟ ಕೊಟಲೆಗಳೆಂಬ ದುಃಖಾಂಜನವನ್ನು ಹಚ್ಚಿ ನಮ್ಮನ್ನು ತನ್ನೆಡೆಗೆ ಸೆಳೆದುಕೊಂಡು ಅನುಗ್ರಹಿಸಲು ಕಹ ಕಹಿಸುವ ಲೋಕಪಿತನನ್ನು ಕುರಿತು ದುಃಖ ಪರಿಹಾರಕ್ಕಾಗಿ ಬೇಡುವುದು ನಮ್ಮ ಧರ್ಮವಲ್ಲವೇ? ನಮ್ಮೆಲ್ಲ ಚಟುವಟಿಕೆಗಳನ್ನೂ ಸಾಕ್ಷೀಭೂತವಾಗಿ ಅವಲೋಕಿಸುವ ಪರಂಧಾಮನಿಗೆ ಶರಣಾಗುವುದು ನಮ್ಮ ಕರ್ತವ್ಯವಲ್ಲವೇ? ಎಂಬ ಪ್ರಶ್ನೆಗಳನ್ನು ಹಿಗ್ಗಾ ಮುಗ್ಗಾ ತಿರುಗಿಸಿ ವಾದ ಮಾಡುವವರನ್ನು ನಾನು ಕಂಡಿದ್ದೇನೆ. ಆದರೆ ಇಂತಹವರನ್ನು ನಾನು ವಿತಂಡವಾದಿಗಳೆನ್ನುತ್ತೇನೆ.

ಇವರು ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಮತ್ತು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಅನೇಕ ಕಾರಣಗಳನ್ನು ಕೊಡುತ್ತಾರೆ. ಸಂಸಾರದ ಜಂಜಾಟದಲ್ಲಿ ಅದರಲ್ಲೂ ಮಹಿಳೆಯರಿಗೆ ಕಾಲವೇ ದೊರಕುವುದಿಲ್ಲ ಎಂಬುದು ಬರಿಯ ನೆಪ. ಪ್ರಸ್ತುತದಲ್ಲಿ ನಾವು ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಕುಟುಂಬದ ಬಂಡಿಯನ್ನೆಳೆಯಲು ಗಂಡಹೆಂಡಿರಿಬ್ಬರೂ ಕೆಲಸ ಮಾಡಿ ಸಂಪಾದಿಸುವುದು ಅನಿವಾರ್ಯವಾಗುತ್ತದೆ. ಮನೆಯ ಕೆಲಸ, ಮಕ್ಕಳ ಆರೈಕೆ, ಅವರ ಶಾಲೆ, ಪಾಠ ಪ್ರವಚನಗಳು, ಕಚೇರಿಯ ಕೆಲಸ ಇವುಗಳ ಮಧ್ಯೆ ಬಿಡುವು ಸಿಗುವುದಿಲ್ಲವೆಂಬುದು ದಿಟ.
ಆದರೆ ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಕೃಷ್ಣಾರ್ಪಣ ಮನೋಭಾವದಲ್ಲಿ ಮಾಡುವುದು ಸಾಧ್ಯ ಎಂಬ ಸತ್ಯವನ್ನು ತುಂಬಿದ ಮಧ್ಯಮ ವರ್ಗದ ಕುಟುಂಬದಲ್ಲಿ ಗೃಹಿಣಿಯಾಗಿ ಮತ್ತು ಒಂದು ಕಚೇರಿಯಲ್ಲಿ ಜವಾಬ್ದಾರಿಯುತ ಪದವಿಯಲ್ಲಿ ಕೆಲಸ ಮಾಡುತ್ತಿರುವ ನಾನು ಕಂಡು ಕೊಂಡಿದ್ದೇನೆ.
ಸಾಧ್ಯವಾದರೆ ಸೂರ್ಯೋದಯಕ್ಕೆ ಒಂದು ಗಂಟೆ ಮೊದಲೇ ಬ್ರಹ್ಮ ಮುರ್ಹೂತದಲ್ಲಿ ಏಳುವುದು ಒಳ್ಳೆಯದು. ಒಬ್ಬ ಮನುಷ್ಯನಿಗೆ ಆರು ಗಂಟೆಗಳ ನಿದ್ರೆಯು ಸಾಕೆಂದು ಆರೋಗ್ಯ ವಿಜ್ಞಾನವು ಸಹ ಹೇಳುತ್ತದೆ. ಕಣ್ಣು ತೆರೆದೊಡನೇಯೇ
ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತಿ |
ಕರಮಾಲೇ ಕರೋ ವಿಷ್ಣು ಪ್ರಭಾತೇ ಕರದರ್ಶನಂ ||
ಎಂದು ಲಕ್ಷ್ಮಿ ನಾರಾಯಣ ರೂಪವನ್ನು ನಮ್ಮ ಅಂಗೈಯಲ್ಲಿ ಸಾಕ್ಷಾತ್ಕರಿಸಿಕೊಂಡು ನಂತರ,
ಸಮುದ್ರ ವಸನೇ ದೇವಿ, ಪರ್ವತ ಸ್ತನ ಮಂಡಲೇ |
ವಿಷ್ಣು ಪತ್ನೀ ನಮಸ್ತುಭ್ಯಂ, ಪಾದಸ್ಪರ್ಶಂ ಕ್ಷಮಸ್ವಮೇ ||
ಎಂದು ಭೂಮಾತೆಗೆ ನಮ್ಮ ಪಾದಸ್ಪರ್ಶದ ಅನಿವಾರ್ಯತೆಯನ್ನು ನಿವೇದಿಸಿಕೊಂಡು ಅವಳ ಕ್ಷಮೆ ಬೇಡುವುದು ವಿನಯ ಸಂಪನ್ನತೆ.
ಎದ್ದು ಹಲ್ಲುಜ್ಜಿ, ಸ್ನಾನಗಳಾದ ಮೇಲೆ ದಿನನಿತ್ಯ ಭಗವಂತನಿಗೆ ಮಂಗಳಾರತಿ ಮಾಡಿ, ಗುರುಪೂಜೆ, ತುಳಸಿ ಪೂಜೆಗಳನ್ನು ನೆರವೇರಿಸಲು ವಾಯು ವಿಹಾರಕ್ಕೆ ಹೊರೆಡಬಹುದು.

ಪ್ರತಿನಿತ್ಯವೂ ಬೆಳಗಿನ ವೇಳೆ ವಾಯು ಸಂಚಾರಕ್ಕೆ ಹೋಗುವುದು ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡು ಹೊರಟರೆ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಎಂದು ಜಪಿಸುತ್ತಾ ಮನೆಗೆ ಹಿಂದಿರುಗುವ ವೇಳೆಗೆ ಒಂದು ಗಂಟೆಯ ಕಾಲದಲ್ಲಿ ಹತ್ತು ಸುತ್ತು ಜಪ ಮಾಡಿ ಮುಗಿಸಬಹುದು. ಸಂಜೆ ಇನ್ನುಳಿದ ಆರು ಮಾಲೆಗಳನ್ನು ಜಪಿಸಿ ದಿನನಿತ್ಯ ಹದಿನಾರನ್ನು ಪೂರೈಸಿ. ಪ್ರತಿನಿತ್ಯವೂ ಮನೆಯಂಗಳವನ್ನು ಸಾರಿಸಿ ರಂಗವಲ್ಲಿಯನ್ನಿಡುವುದು ಒಳ್ಳೆಯ ಅಭ್ಯಾಸ.
ಇದೊಂದು ಶುದ್ಧೀಕರಣ ಪ್ರಕ್ರಿಯೆಯಷ್ಟೇ ಅಲ್ಲದೆ ಮನಸ್ಸಿಗೂ ಆಹ್ಲಾದಕರ. ಈ ಕೆಲಸ ಮಾಡುವಾಗಲೂ ಕೃಷ್ಣ ನಾಮದ ಜಪ ಮಾಡುವುದರಿಂದ ಅಥವಾ ಹಾಡು ಬಲ್ಲವರು ಸುಶ್ರಾವ್ಯವಾಗಿ ದೇವರ ನಾಮಗಳನ್ನು ಹಾಡಿಕೊಳ್ಳುವುದರಿಂದ ದುರಾಲೋಚನೆಗಳು ಪಲಾಯನ ಮಾಡುತ್ತವೆ.
ದಿನನಿತ್ಯದ ಕೆಲಸಗಳನ್ನು ಮಾಡುತ್ತಲೇ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಕೆಲವು ಸೂತ್ರಗಳನ್ನು ಶ್ರೀಲ ಪ್ರಭುಪಾದರು ಕೊಟ್ಟಿದ್ದಾರೆ. ಅಡುಗೆ ಮನೆಯ ಕೆಲಸಗಳನ್ನು ಪ್ರಾರಂಭಿಸುವ ಮೊದಲೇ ಸ್ನಾನ ಮಾಡಿ. ಸಾತ್ವಿಕವಾದ, ರುಚಿಕರವಾದ, ಪೌಷ್ಟಿಕವಾದ ಆಹಾರವನ್ನು ತಯಾರಿಸಿ. ಮನೆಯಲ್ಲಿ ದೇವರ ಕೋಣೆ ಪ್ರತ್ಯೇಕವಾಗಿದ್ದಲ್ಲಿ ಅದನ್ನು ಶುಚಿಯಾಗಿಡಿ. ಇಲ್ಲವಾದಲ್ಲಿ ಅಡುಗೆ ಮನೆಯಲ್ಲಿಯೇ ಒಂದು ಗೂಡಿನಲ್ಲಿ ದೇವರನ್ನು (ಕೃಷ್ಣನನ್ನು) ಪ್ರತಿಷ್ಠಾಪಿಸಿ.
ಕೆಲವಾದರೂ ಸ್ತೋತ್ರಗಳನ್ನು ಬಾಯಿಪಾಟ ಮಾಡಿಕೊಂಡು ಹೇಳುತ್ತಲೋ ಅಥವಾ ಕೃಷ್ಣ ಜಪವನ್ನು ಮಾಡುತ್ತಲೋ ದೇವರಿಗೆ ಎರಡು ದೀಪಗಳನ್ನಾದರೂ ಬೆಳಗಿಸಿ. ನೀವು ಮಡಿಯುಟ್ಟು ಮಾಡಿದ ಅಡುಗೆಯನ್ನು ನೈವೇದ್ಯ ಮಾಡಿ. ಕಾಸಿದ ಹಾಲನ್ನೋ ಹಣ್ಣನ್ನೋ ಅಥವಾ ಕೃಷ್ಣಪ್ರಜ್ಞೆಯಲ್ಲಿ ಅನುಮತಿಸಿದ ಭೋಜನವನ್ನೋ ಭಕ್ತಿಪೂರ್ವವಾಗಿ ನೀಡಿದರೆ ಆನಂದದಿಂದ ಸ್ವೀಕರಿಸುವ ಅರ್ಚಾ ಮೂರ್ತಿ ಕೃಷ್ಣ. ಹೂವು ಮತ್ತು ಸುಗಂಧ ಧೂಪಗಳನ್ನು ಒಪ್ಪಿಸಿಕೊಂಡು ಹರಸುವನು. ಕೃಷ್ಣ ಕೃಷ್ಣನಾಮ ಮತ್ತು ಕೃಷ್ಣ ಪ್ರಸಾದಗಳೆಲ್ಲವೂ ಸಾಕ್ಷಾತ್ ಶ್ರೀಕೃಷ್ಣನೇ.
ಇವೆಲ್ಲ ಕೆಲಸಗಳಿಗೂ ಕೇವಲ ಐದರಿಂದ ಹತ್ತು ನಿಮಿಷಗಳನ್ನು ಮೀಸಲಿಟ್ಟರೆ ಸಾಕು. (ಶ್ರೀಲ ಪ್ರಭುಪಾದರ ಪುಸ್ತಕಗಳು ಮತ್ತು ಉಪನ್ಯಾಸಗಳನ್ನು ಕ್ರೋಢೀಕರಿಸಲಾಗಿದೆ)

ದೇವರ ನಾಮವನ್ನು ಕೇಳುತ್ತ ಏಳುವುದರಿಂದ ಮಕ್ಕಳ ಮನಸ್ಸು ಆಹ್ಲಾದಕರವಾಗಿರುತ್ತದೆ. “ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲ” ಎಂಬ ನಾಣ್ನುಡಿ ಚಿರಪರಿಚಿತ. ತಾಯಿ ಕೃಷ್ಣಪ್ರಜ್ಞಾವಂತಳಾಗಿದ್ದಲ್ಲಿ ಮಕ್ಕಳನ್ನು ಅದೇ ಹಾದಿಯಲ್ಲಿ ನಡೆಸುವುದು ಸುಲಭ. ಪತಿಯು ನಾಸ್ತಿಕನಾಗಿದ್ದಲ್ಲಿ ಅವನನ್ನು ಅಸ್ತಿಕತೆಯತ್ತ ಸೆಳೆಯುವುದು ಪ್ರತಿಯೊಬ್ಬ ಗೃಹಿಣಿಯ ಕರ್ತವ್ಯ. ಆಗ ಕುಟುಂಬವೇ ಸಂಪೂರ್ಣವಾಗಿ ಆಧ್ಯಾತ್ಮಿಕವಾಗುತ್ತದೆ.
ಅಧ್ಯಾಪಕರೂ ಸಹ ವಿದ್ಯಾರ್ಥಿಗಳಲ್ಲಿ ಪಠ್ಯಕ್ರಮ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಆಟ ಪಾಠಗಳ ಮಧ್ಯದಲ್ಲಿಯೇ ಆಧ್ಯಾತ್ಮಿಕತೆಯ ಪಾಠವನ್ನು ಕಂಡೂ ಕಾಣದಂತೆ ಅಳವಡಿಸಿಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ ಕೃಷ್ಣಪ್ರಜ್ಞೆ ಜಾಗೃತವಾದರೆ ದೇಶದ ಸಮಸ್ಯೆಗಳಿಗೆಲ್ಲ ತಾನೇ ತಾನಾಗಿ ಪರಿಹಾರ ದೊರಕುತ್ತದೆ. ಶ್ರೀಕೃಷ್ಣನಾದರೋ ಸರ್ವದೇಶ ಸರ್ವ ಕಾಲಗಳಲ್ಲಿಯೂ ಆರಾಧನೆಗೆ ಲಭ್ಯನಾಗಿ ತನ್ನ ಕಾರುಣ್ಯಗುಣಗಳನ್ನು ತೋರಿದ್ದಾನೆ.
ಹೀಗಿರುವಾಗ ಲೌಕಿಕ ತಾಪತ್ರಯಗಳ ನಡುವೆಯೂ ಬಲವಂತವಾಗಿ ಬಿಡುವು ಮಾಡಿಕೊಂಡು ಹೋಗಿ ಪುರುಷೋತ್ತಮನ ಅರ್ಚಾವಕಾರವನ್ನು ಅನುಭವಿಸದಿದ್ದಲ್ಲಿ ಮಾನವ ಜನ್ಮವೇ ವ್ಯರ್ಥ. ಕರ್ತವ್ಯದಿಂದ ನಿವೃತ್ತಿ ಹೊಂದಿದ ನಂತರವೇ ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಳ್ಳಬೇಕೆಂಬ ತಪ್ಪು ಕಲ್ಪನೆ ಕೆಲವರಲ್ಲಿರುತ್ತದೆ. ಆದರೆ ಇತರ ಎಲ್ಲ ಕೆಲಸಗಳಿಗೂ ಅಭ್ಯಾಸ ಅಗತ್ಯವಿರುವಂತೆ ಆಧ್ಯಾತ್ಮಿಕತೆಗೂ ನಿಯಮ ಬದ್ಧ ಅಭ್ಯಾಸದ ಅಗತ್ಯವಿದೆ.
ಇನ್ನು ಉದರ ಪೋಷಣೆಗಾಗಿ ನಾವು ಮಾಡಬೇಕಾದ ಕೆಲಸದಲ್ಲಿಯೂ ಕೃಷ್ಣಪ್ರಜ್ಞಾಧಾರಿತವಾದಲ್ಲಿ ಎಲ್ಲೆಡೆಯೂ ಭ್ರಷ್ಟಾಚಾರ, ವಿಳಂಬ ಮತ್ತು ನ್ಯೂನತೆಗಳು ಕೊನೆಯಾಗುವುದರಲ್ಲಿ ಸಂದೇಹವೇ ಇಲ್ಲ. ಕೃಷ್ಣಮಯಮಿದುಂ ಜಗತ್ ಜಗತ್ತೆಲ್ಲವೂ ಕೃಷ್ಣಮಯವಾಗಬೇಕಾದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಆದ್ದರಿಂದ ಮಹಿಳೆಯರೇ, ಇಂದೇ ಕಾರ್ಯಪ್ರವೃತ್ತರಾಗಿ.
Leave a Reply