ಅಹಂಕಾರದ ಫಲ

ದೇವ ಗುರುವಿಗೆ ಅವಮಾನ

– ಡಾ. ಬಿ.ಆರ್. ಸುಹಾಸ್

ಅಹಂಕಾರೋನ್ಮತ್ತ ದೇವೆಂದ್ರನು ಸಭೆಗೆ ಆಗಮಿಸಿದ ಆಚಾರ್ಯ ಬೃಹಸ್ಪತಿಗಳನ್ನು ಆದರಿಸದೆ ಅಹಂಕಾರ ತೋರಿದ. ಅವಮಾನಿತರಾದ ಆಚಾರ್ಯರು ಅಲ್ಲಿಂದ ಹೊರಟುಹೋದರು. ಬ್ರಹ್ಮನ ಸಲಹೆಯಂತೆ ವಿಶ್ವರೂಪನನ್ನು ಆಚಾರ್ಯರನ್ನಾಗಿ ಸ್ವೀಕರಿಸಿದ ಇಂದ್ರ, ಅವನು ಅಸುರರಿಗೆ ಹವಿಸ್ಸು ಅರ್ಪಿಸುವುದನ್ನರಿತು, ಅವನನ್ನು ಸಂಹರಿಸಿದ. ಅದಕ್ಕೆ ಪ್ರತೀಕಾರವಾಗಿ ಅವನ ತಂದೆ ತ್ವಷ್ಟನು ವೃತ್ರಾಸುರನನ್ನು ಸೃಷ್ಟಿಸಿದ.

ದಧೀಚಿ ಮಹರ್ಷಿಗಳ ಬೆನ್ನೆಲುಬಿನಿಂದ ಮಾಡಿದ ವಜ್ರಾಯುಧ ಮತ್ತು ಶ್ರೀ ವಿಷ್ಣುವಿನ ಅನುಗ್ರಹದಿಂದ ವೃತ್ರಾಸುರನ ವಧೆ ಸಾಧ್ಯವಾಯಿತು. ಹೀಗೆ ಅಹಂಕಾರದ ಫಲ ಅನುಭವಿಸಿದ ದೇವೇಂದ್ರ ಪಶ್ಚಾತ್ತಾಪದಿಂದ ಪಾಪಮುಕ್ತನಾದ.

ಅದೊಂದು ವೈಭವೋಪೇತವಾದ ಸಭೆ. ದೇವರಾಜನಾದ ಮಹೇಂದ್ರನ ಸ್ವರ್ಗ ಸಭೆ. ಪೂರ್ಣಚಂದ್ರನಂತೆ ಹೊಳೆಹೊಳೆಯುತ್ತಿದ್ದ ಶ್ವೇತ ಛತ್ರದಿಂದ ಅಲಂಕೃತವಾಗಿದ್ದ ರತ್ನಮಯವಾದ ಸಿಂಹಾಸನದಲ್ಲಿ ಶಚೀದೇವಿಯ ಒಟ್ಟಿಗೆ ಕುಳಿತು ತ್ರಿಲೋಕೇಶ್ವರನಾದ ದೇವೇಂದ್ರನು ಅತುಳೈಶ್ವರ್ಯದಿಂದ ಮೆರೆಯುತ್ತಿದ್ದ.

ಎರಡೂ ಬದಿಗಳಲ್ಲಿ, ಮರುತ್ತರು, ವಸುಗಳು, ರುದ್ರಾದಿತ್ಯರು, ಋಭುಗಳು, ವಿಶ್ವದೇವತೆಗಳು, ಸಾಧ್ಯರು, ಸಿದ್ಧಚಾರಣರು, ಮಹಾಮುನಿಗಳು, ಅಶ್ವಿನಿಕುಮಾರರು, ಗಂಧರ್ವಾಪ್ಸರೆಯರು, ವಿದ್ಯಾಧರರು, ಕಿನ್ನರಕಿಂಪುರುಷರು, ಪಕ್ಷಿಗಳು, ಉರಗಗಳು, ಎಲ್ಲರೂ ತಮತಮಗೆ ಉಚಿತವಾದ ಸೊಗಸಾದ ಆಸನಗಳಲ್ಲಿ ಮಂಡಿಸಿದ್ದರು.

ಗಾನ ವಿಶಾರದ ಗಂಧರ್ವರು ಕೋಗಿಲೆಗಳು ನಾಚುವಂತೆ ಹಾಡುತ್ತಿದ್ದರೆ, ಸೌಂದರ್ಯನಿಧಿಗಳಂತಿದ್ದ ಅಪ್ಸರೆಯರು ಲತೆಗಳನ್ನು ನಾಚಿಸುವ ತಮ್ಮ ತೆಳುನಡುಗಳನ್ನು ಬಳುಬಳುಕಿಸಿ ಅದ್ಭುತವಾಗಿ ನರ್ತಿಸುತ್ತಿದ್ದರು.

ಸುಂದರಾಂಗನೆಯರು ಚಾಮರಗಳನ್ನು ಬೀಸುತ್ತಾ ಇಂದ್ರನಿಗೆ ಸೇವೆ ಮಾಡುತ್ತಿರಲು, ಪಕ್ಕದಲ್ಲಿ ಶಚಿಯಿರಲು, ಸುತ್ತಲಿನ ಒಡೋಲಗದಲ್ಲಿ ಸಕಲ ದೇವವೃಂದವೇ ನೆರೆದಿರಲು, ನಕ್ಷತ್ರಗಳ ನಡುವಿನ ಚಂದ್ರಮನಂತೆ ಕಂಗೊಳಿಸುತ್ತಿದ್ದ ಇಂದ್ರನು, ಚಾಮರಸೇವೆಯ ಗಾಳಿಯ ಅಮಲಿನಲ್ಲೂ ಗಂಧರ್ವಾಪ್ಸರೆಯರ ಗಾನನಾಟ್ಯಗಳ ಗುಂಗಿನಲ್ಲೂ ತೇಲುತ್ತಾ, ಅಹಂಕಾರವೆಂಬ ಮೋಡದಿಂದ ಆವೃತನಾದನು.

”ಆಹಾ….!. ಆಹಾ….!! ಈ ಸಕಲ ವೈಭವಕ್ಕೂ ನಾನೇ ಅಲ್ಲವೇ ದೊರೆ….?!” ಎಂದು ಬೀಗಿದ ಆ ಸ್ವರ್ಗಾಧಿಪತಿಯ ತುಟಿಯಂಚಿನಲ್ಲಿ ಕಿರುನಗೆಯು ಮಿಂಚಿತು.

ಜ್ಞಾನವೇ ಮೂರ್ತಿವೆತ್ತಂತೆ ತಮ್ಮ ಉಜ್ವಲ ಕಾಂತಿಯಿಂದ ಬೆಳಗುತ್ತಿದ್ದ ಮಹಾತ್ಮರೊಬ್ಬರು ಇಂದ್ರಸಭೆಗೆ ಧಿಡೀರನೆ ಆಗಮಿಸಿದರು. ದೇವಾಸುರರಿಬ್ಬರೂ ನಮಸ್ಕಾರ ಯೋಗ್ಯರಾದ ಆ ಮಹಾಧೀಮಂತರು ಬೇರಾರೂ ಆಗಿರದೇ, ದೇವತೆಗಳ ಗುರುಗಳಾದ ಬೃಹಸ್ಪತಿಗಳಾಗಿದ್ದರು. ಅವರು ಸಭಾಪ್ರವೇಶ ಮಾಡಿದುದನ್ನು ನೋಡಿದರೂ, ಮದಾಂಧನಾಗಿದ್ದ ದೇವೇಂದ್ರನು ತನ್ನ ಸಿಂಹಾಸನದಿಂದ ಎದ್ದು ಅವರನ್ನು ಗೌರವಿಸಲಿಲ್ಲ.

ವಿದ್ಯೆ, ಧನ, ರೂಪ, ಯೌವನ, ಇವು ಒಂದೊಂದು ಇದ್ದರೂ ಅಹಂಕಾರ ಉಂಟಾಗುತ್ತದೆ. ಇನ್ನು ಈ ನಾಲ್ಕೂ ಒಟ್ಟಿಗಿದ್ದರೆ….? ಇಂದ್ರನಿಗೂ ಹಾಗೆಯೇ ಆಗಿತ್ತು. ತನ್ನ ಅಭ್ಯುದಯಕ್ಕೆ ಕಾರಣೀಭೂತರಾದ ತನ್ನ ಗುರುಗಳನ್ನೇ ಅವನು ಗೌರವಿಸಲಿಲ್ಲ.

ಬೃಹಸ್ಪತಿಗಳಿಗೆ ಅವಮಾನವಾಯಿತು. ಐಶ್ವರ್ಯಮದಯುಕ್ತನಾಗಿ ಇಂದ್ರನು ಹೀಗೆ ಮಾಡಿರುವನೆಂದು ಅರಿತ ಅವರು ಕೂಡಲೇ ಮೌನವಾಗಿ ತಮ್ಮ ಮನೆಗೆ ಹೊರಟು ಹೋದರು.

ಮಳೆ ಸುರಿದ ಬಳಿಕ ಮೋಡ ಕರಗುವಂತೆ, ಈ ದುರ್ಘಟನೆ ನಡೆದ ಕೂಡಲೇ ಇಂದ್ರನಿಗೆ ಅಹಂಕಾರದ ನಶೆ ಇಳಿಯಿತು. ಗುರುಗಳನ್ನು ಗೌರವಿಸದ ತನ್ನ ತಪ್ಪನ್ನು ಮನಗಂಡ ಅವನು ಈಗ ಪಶ್ಚಾತ್ತಾಪಪಡುತ್ತಾ ಸಭಾಮಧ್ಯದಲ್ಲೇ ತನ್ನನ್ನೇ ತಾನು ಖಂಡಿಸಿಕೊಂಡನು.

”ಅಯ್ಯೋ! ಅಲ್ಪಬುದ್ಧಿಯ ನಾನು ಎಂಥ ತಪ್ಪು ಮಾಡಿಬಿಟ್ಟೆ! ಛೆ! ಐಶ್ವರ್ಯದಿಂದ ಗುರುಗಳನ್ನೇ ಅವಮಾನಿಸಿಬಿಟ್ಟೆನಲ್ಲಾ…..! ಯಾವ ಐಶ್ವರ್ಯದ ದೆಸೆಯಿಂದ ದೇವತೆಗಳ ರಾಜನಾದರೂ ನಾನು ಇಂಥ ಆಸುರೀಭಾವಕ್ಕಿಳಿದನೋ, ಅಂಥ ಐಶ್ವರ್ಯವನ್ನು ಯಾವ ಪಂಡಿತನು ತಾನೇ ಪ್ರಶಂಸಿಸುತ್ತಾನೆ?

ಪರಮಶ್ರೇಷ್ಠನಾದ ಸಿಂಹಾಸನದಲ್ಲಿ ಆಸೀನನಾದವನು, ಎದುರಿಗೆ ಮಹಾತ್ಮನೊಬ್ಬನು ಬಂದಾಗ ಏಳಬೇಕಿಲ್ಲವೆಂದು ಯಾರಾದರೂ ಹೇಳಿದರೆ, ಅವನಿಗೆ ಧರ್ಮ ತಿಳಿದಿಲ್ಲವೆನ್ನಬೇಕು. ಕುಮಾರ್ಗವನ್ನು ಬೋಧಿಸುವ ಇಂಥ ಮೂರ್ಖರೂ ಅವರ ಅನುಯಾಯಿಗಳೂ ಗಾಢಾಂಧಕಾರದ ತಮಸ್ಸಿನಲ್ಲಿ ಕಲ್ಲಿನ ದೋಣಿಯಂತೆ ಮುಳುಗುವರು.

ಆದ್ದರಿಂದ ನಾನೀಗಲೇ ಓಡಿಹೋಗಿ ಬ್ರಾಹ್ಮಣೋತ್ತಮರಾದ ನನ್ನ ಗುರುಗಳ ಪಾದಗಳ ಮೇಲೆ ನನ್ನ ತಲೆಯಿಟ್ಟು ಅವರನ್ನು ಪ್ರಸನ್ನಗೊಳಿಸಲು ಯತ್ನಿಸುತ್ತೇನೆ…!”

ಹೀಗೆ ಯೋಚಿಸಿ ದೇವೇಂದ್ರನು ಕೂಡಲೇ ಬೃಹಸ್ಪತಿಗಳ ಮನೆಗೆ ಓಡಿದನು. ಆದರೆ ಅವನ ಮನವನ್ನರಿತ ಬೃಹಸ್ಪತಿಗಳು ಅವನಿಗೊಂದು ಪಾಠವನ್ನು ಕಲಿಸಲು ಅದೃಶ್ಯರಾಗಿ ಮನೆಯನ್ನೂ ಬಿಟ್ಟು ಹೊರಟುಹೋದರು. ಅವರನ್ನು ಅವರ ಮನೆಯಲ್ಲಿ ಕಾಣದೇ ಖಿನ್ನನಾದ ಇಂದ್ರನು ಇತರ ದೇವತೆಗಳಿಂದೊಡಗೂಡಿ ಅವರಿಗಾಗಿ ಎಲ್ಲೆಲ್ಲೂ ಹುಡುಕಿದನು. ಆದರೆ ಅವರು ಎಲ್ಲೂ ಕಾಣಸಿಗದೇ, ಇಂದ್ರನಿಗೆ ಶಾಂತಿಯೇ ಇಲ್ಲದಂತಾಯಿತು.

ದೇವೇಂದ್ರನ ಈ ಶೋಚನೀಯ ಪರಿಸ್ಥಿತಿಯ ಬಗ್ಗೆ ಕೇಳಿ ತಿಳಿದ ಅಸುರರು, ಇದೇ ಸರಿಯಾದ ಸಮಯವೆಂದು ಬಗೆದು, ತಮ್ಮ ಗುರುಗಳಾದ ಶುಕ್ರಾಚಾರ್ಯರ ಸಲಹೆ ಪಡೆದು ದೇವತೆಗಳ ಮೇಲೆ ಯುದ್ಧ ಸಾರಿದರು. ಬಲಗರ್ವಿತರಾದ ಅವರಿಗೂ ಗುರುಗಳಿಲ್ಲದೇ ಬಲಹೀನರಾದ ದೇವತೆಗಳಿಗೂ ಭಯಂಕರ ಯುದ್ಧ ನಡೆಯಿತು.

ಆ ಯುದ್ಧದಲ್ಲಿ ಅನೇಕ ದೇವತೆಗಳು ಅಸುರರ ತೀಕ್ಷ್ಣ ಅಂಬುಗಳಿಗೆ ಆಹುತಿಯಾದರು. ಅನೇಕರು ತಮ್ಮ ತೋಳ್ತೊಡೆಗಳನ್ನು ಕಳೆದುಕೊಂಡು ತೀವ್ರ ಗಾಯಗಳಿಗೊಳಗಾದರು. ಕೆಟ್ಟೆವೋ ಬಿಟ್ಟೆವೋ ಎಂದು ಇಂದ್ರ ಸಮೇತರಾಗಿ ಅವರೆಲ್ಲರೂ ಬ್ರಹ್ಮದೇವನ ಬಳಿಗೆ ಓಡಿಹೋಗಿ ಅವನಿಗೆ ತಲೆಬಾಗಿ ಶರಣಾದರು.

“ಅಯ್ಯೋ ಸುರಶ್ರೇಷ್ಠರೇ !’ ಬಹ್ಮನು ದೇವತೆಗಳ ಚಿಂತಾಜನಕ ಸ್ಥಿತಿಗೆ ಮರುಗಿ ಹೇಳಿದ, “ಐಶ್ವರ್ಯಮದದಿಂದ ಗುರುಗಳನ್ನು ಅವಮಾನಿಸಿ ನಿಮಗೀ ಅಭದ್ರ ಸ್ಥಿತಿಯುಂಟಾಗಿದೆ. ಹೀಗೆ ಅವರನ್ನು ಅವಮಾನಿಸಿದುದರಿಂದಲೇ, ನೀವು ಸಮೃದ್ಧರಾಗಿದ್ದರೂ ನಿಮಗಿಂತ ಬಲಹೀನರಾಗಿದ್ದ ನಿಮ್ಮ ವೈರಿಗಳಿಂದ ಪರಾಜಿತರಾಗಿದ್ದೀರಿ.

ಎಲೈ ಇಂದ್ರ! ಈ ಮೊದಲು ನಿನ್ನ ವೈರಿಗಳಾದ ಅಸುರರೂ ತಮ್ಮ ಗುರುಗಳನ್ನು ಉಪೇಕ್ಷಿಸಿ ಬಲಹೀನರಾಗಿದ್ದರು. ಆದರೆ ಈಗ ಅವರು ತಮ್ಮ ಗುರುಗಳನ್ನು ಭಕ್ತಿಯಿಂದ ಸೇವಿಸಿದ ಕಾರಣ ಅವರು ಎಷ್ಟು ಶಕ್ತಿವಂತರಾಗಿದ್ದಾರೆಂದರೆ ನನ್ನ ಲೋಕವನ್ನೂ ವಶಪಡಿಸಿಕೊಳ್ಳಬಲ್ಲವರಾಗಿದ್ದಾರೆ. ಶುಕ್ರಾಚಾರ್ಯರಲ್ಲಿ ಅಚಲ ಶ್ರದ್ಧಾಭಕ್ತಿಗಳನ್ನಿರಿಸಿರುವ ಅವರು, ದೇವತೆಗಳನ್ನೇಕೆ ಲೆಕ್ಕಿಸುತ್ತಾರೆ ಹೇಳು?!”

ಬ್ರಹ್ಮನ ಮಾರ್ಮಿಕ ನುಡಿಗಳು ದೇವೇಂದ್ರನಲ್ಲಿ ಮತ್ತೆ ಮತ್ತೆ ಪಶ್ಚಾತ್ತಾಪದ ಅಲೆಗಳನ್ನೆಬ್ಬಿಸಿದವು. ಅವನು ತಲೆಬಾಗಿಸಿ ಮೌನವಾಗಿ ಕೇಳುತ್ತಿದ್ದ.

“ದೇವೇಂದ್ರ!” ಬ್ರಹ್ಮನು ಸಾಂತ್ವನಗೊಳಿಸುವಂತೆ ಮೆಲ್ಲನೆ ಹೇಳಿದ, ‘ಬ್ರಾಹ್ಮಣರನ್ನೂ ಭಗವಂತನನ್ನೂ ಗೋವುಗಳನ್ನೂ ಗುರುಹಿರಿಯರನ್ನೂ ಶ್ರದ್ಧಾಭಕ್ತಿಗಳಿಂದ ಸಂಪೂಜಿಸುವವನಿಗೆ ಎಂದಿಗೂ ಅಭದ್ರತೆಯುಂಟಾಗುವುದಿಲ್ಲ. ಈಗ ನೀವು ಹೀಗೆ ಮಾಡಿ, ಎಲ್ಲರೂ ತ್ವಷ್ಟಪ್ರಜಾಪತಿಯ ಪುತ್ರನಾದ ವಿಶ್ವರೂಪನ ಬಳಿಗೆ ಬೇಗನೆ ಹೋಗಿ ಅವನನ್ನು ನಿಮ್ಮ ಗುರುವನ್ನಾಗಿ ಸ್ವೀಕರಿಸಿ.

ತಪಸ್ವಿಯೂ ಆತ್ಮವಂತನೂ ಆದ ಅವರನ್ನು ನೀವು ಸಂಪೂಜಿಸಿದರೆ, ಅವನು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಪೂರೈಸುವನು. ಅವನು ಮಾಡುವ ಅಸುರಪರ ಧೋರಣೆಗಳನ್ನೆಲ್ಲಾ ನೀವು ಸಹಿಸಿಕೊಳ್ಳಬೇಕಷ್ಟೆ.”

ಬ್ರಹ್ಮದೇವನು ಕೊನೆಯಲ್ಲಿ ಎಚ್ಚರಿಕೆಯನ್ನು ನೀಡಿದರೂ ದೇವತೆಗಳು ಅದನ್ನು ಗಣನೆಗೆ ತೆಗೆದುಕೊಳ್ಳದೇ, ಅವನ ಸಲಹೆಯಿಂದ ಆತಂಕ ನೀಗಿ ತುಷ್ಟರಾದರು; ಅವನಿಗೆ ಪುನಃ ನಮಸ್ಕರಿಸಿ ಎಲ್ಲರೂ ವಿಶ್ವರೂಪನ ಆಶ್ರಮಕ್ಕೆ ತೆರಳಿದರು.

ದೇವತೆಗಳನ್ನು ಸ್ವಾಗತಿಸಿದ ವಿಶ್ವರೂಪನನ್ನು ಪ್ರೀತಿಯಿಂದ ಆಲಂಗಿಸಿಕೊಂಡು ಅವನಿಗೆ ಹೇಳಿದರು, ”ಹೇ ವಿಶ್ವರೂಪ ! ನಿನಗೆ ಮಂಗಳವಾಗಲಿ! ನಾವೀಗ ನಿನ್ನ ಅತಿಥಿಗಳಾಗಿ ಬಂದಿದ್ದೇವೆ. ಕಿರಿಯನಾದ ನೀನು, ನಮ್ಮನ್ನು ನಿನ್ನ ಪಿತೃಗಳೆಂದೆಣಿಸಿ ನಮ್ಮ ಕಾಮನೆಗಳನ್ನು ಪೂರೈಸಬೇಕಾಗಿದೆ.

ಹೇ ಬ್ರಾಹ್ಮಣೋತ್ತಮ, ಸ್ವತಃ ತನಗೇ ಪುತ್ರರಿದ್ದರೂ ಒಬ್ಬ ಪುತ್ರನ ಪರಮೋಚ್ಚ ಧರ್ಮವೆಂದರೆ ತನ್ನ ಪಿತೃಗಳ ಸೇವೆ ಮಾಡುವುದಾಗಿರುತ್ತದೆ, ಇನ್ನು ಬ್ರಹ್ಮಚಾರಿಗಳ ಮಾತೇನು?

“ಎಲೈ ವಿಶ್ವರೂಪ, ಆಚಾರ್ಯನು ವೇದಗಳ ಮೂರ್ತಸ್ವರೂಪವೇ ಆಗಿರುತ್ತಾನೆ. ತಂದೆಯು ಬ್ರಹ್ಮನ ಪ್ರತಿನಿಧಿಯಾಗಿರುತ್ತಾನೆ. ಸಹೋದರನು ಇಂದ್ರನ ಪ್ರತಿನಿಧಿಯಾಗಿರುತ್ತಾನೆ. ತಾಯಿಯು ಸಾಕ್ಷಾತ್ ಭೂಮಿಯ ಪ್ರತಿನಿಧಿಯಾಗಿರುತ್ತಾಳೆ. ಸಹೋದರಿಯು ದಯೆಯ ಮೂರ್ತ ಸ್ವರೂಪವೇ ಆಗಿರುತ್ತಾಳೆ.

ಅತಿಥಿಯು ಸ್ವಯಂ ಧರ್ಮದ ಪ್ರತಿನಿಧಿಯಾಗಿರುತ್ತಾನೆ. ಅಭ್ಯಾಗತನು ಅಗ್ನಿಯ ಪ್ರತಿನಿಧಿಯಾಗಿರುತ್ತಾನೆ. ಸಕಲ ಜೀವಿಗಳೂ ಪರಮಾತ್ಮನಾದ ಶ್ರೀಹರಿಯ ಪ್ರತಿನಿಧಿಗಳಾಗಿರುತ್ತಾರೆ. ಆದ್ದರಿಂದ ನಮ್ಮನ್ನೂ ನಿನ್ನ ಪಿತೃಗಳೆಂದು ಪರಿಗಣಿಸಿ ನಿನ್ನ ತಪಃಫಲದ ಬಲದಿಂದ, ಶತ್ರುಗಳಿಂದ ಪರಾಜಿತರಾಗಿರುವ ನಮ್ಮನ್ನು ರಕ್ಷಿಸು.

ಅರ್ಥಾತ್ ನಮ್ಮ ಪ್ರಾರ್ಥನೆ ಇಷ್ಟೇ; ಬ್ರಾಹ್ಮಣೋತ್ತಮನೂ ಬ್ರಹ್ಮಜ್ಞಾನಿಯೂ ಆದ ನೀನು ನಮಗೆ ಗುರುವಾಗು. ನಿನ್ನನ್ನು ಗುರುವನ್ನಾಗಿ ಪಡೆದ ನಾವು ನಿನ್ನ ತೇಜಸ್ಸಿನ ಬಲದಿಂದ ನಮ್ಮ ಶತ್ರುಗಳನ್ನು ಸುಲಭವಾಗಿ ಗೆಲ್ಲುತ್ತೇವೆ. ನೀನು ನಮಗಿಂತ ವಯಸ್ಸಿನಲ್ಲಿ ಕಿರಿಯನೆಂದು ಸಂಕೋಚಪಡಬೇಡ, ವೇದಮಂತ್ರಗಳ ಇಲ್ಲದೇ ಜ್ಞಾನದ ವಿಷಯದಲ್ಲಿ ವಯಸ್ಸನ್ನು ಪರಿಗಣಿಸಬೇಕಿಲ್ಲ.”

ದೇವತೆಗಳು ನಮ್ಮ ಪೌರೋಹಿತ್ಯ ಸ್ವೀಕರಿಸಬೇಕೆಂದು ವಿಶ್ವರೂಪನನ್ನು ಕೇಳಿಕೊಂಡಾಗ ಅವನು ಪ್ರಸನ್ನನಾಗಿ, ಮೃದುಮಧುರವಾಗಿ ಹೇಳಿದನು, ”ಹೇ ದೇವತೆಗಳೇ! ಪೌರೋಹಿತ್ಯ ಮಾಡುವುದರಿಂದ ಬ್ರಾಹ್ಮಣನ ಬ್ರಾಹ್ಮತೇಜಸ್ಸು ಕಡಮೆಯಾಗುತ್ತದೆ. ಆದರೆ ಲೋಕಪಾಲಕರೇ ಆದ ನೀವು ಬಂದು ಯಾಚಿಸಿದರೆ, ನಿಮ್ಮ ಶಿಷ್ಯನೇ ಆಗಿರುವ ನಾನು ನಿರಾಕರಿಸುವುದಾದರೂ ಎಂತು?! ತಪಸ್ಸನ್ನೇ ಐಶ್ವರ್ಯವನ್ನಾಗಿ ಉಳ್ಳ ಬ್ರಾಹ್ಮಣರಿಗೆ, ಹೊಲಗಳಲ್ಲಿ ಧಾನ್ಯಗಳನ್ನಾರಿಸಿ ಜೀವಿಸುವ ಶಿಲೋಂಫ ವೃತ್ತಿಯೇ ಧನ.

ಇಷ್ಟರಿಂದಲೇ ಅವರು ತಮ್ಮ ಕುಟುಂಬಪೋಷಣೆ ಮಾಡುತ್ತಾ ಸತ್ಕಾರ್ಯಗಳನ್ನೂ ಮಾಡುತ್ತಾರೆ. ಇಂಥವರು ಧನದಾಸೆಗಾಗಿ ಪೌರೋಹಿತವನ್ನು ವೃತ್ತಿಯಾಗಿ ಸ್ವೀಕರಿಸಿದರೆ, ಇವರನ್ನು ಅಲ್ಪಮತಿಗಳೆಂದು ಹೇಳಲಾಗುತ್ತದೆ! ಇನ್ನು ನಾನು ಹೇಗೆ ತಾನೇ ನಿಮ್ಮ ಪೌರೋಹಿತ್ಯ ಸ್ವೀಕರಿಸಲಿ?”

ದೇವತೆಗಳು ಏನೂ ಹೇಳಲಾಗದೇ ಮೌನವಾಗಿದ್ದರು. ಆದರೆ ಅವರ ಕಂಗಳಲ್ಲಿ ಯಾಚನಾದೃಷ್ಟಿ ಇತ್ತು.

ವಿಶ್ವರೂಪ ಮುಂದುವರಿಸಿದ, “ಆದರೂ ನಾನು ನಿಮಗೆ ನಿರಾಕರಿಸುವುದಿಲ್ಲ. ನಿಜವಾಗಿ ಹೇಳಬೇಕಾದರೆ ಹಿರಿಯರಾದ ನೀವೇ ನನಗೆ ಗುರುಸ್ಥಾನದಲ್ಲಿರುವಿರಿ! ನೀವು ಪ್ರಾರ್ಥಿಸಿದುದೆಲ್ಲವನ್ನೂ ನನ್ನ ಪ್ರಾಣಾರ್ಥಗಳನ್ನೇ ಮುಡಿಪಾಗಿಟ್ಟು ಸಾಧಿಸಿಕೊಡಲು ಯತ್ನಿಸುತ್ತೇನೆ.”

ಹೀಗೆ ಹೇಳಿ ವಿಶ್ವರೂಪನು ದೇವತೆಗಳಿಗೆ ಗುರುವಾಗಲು ಒಪ್ಪಿದನು. ಇದರಿಂದ ಅವರು ಬಹಳ ಹರ್ಷಿಸಿದರು.

ಅನಂತರ ವಿಶ್ವರೂಪನು ನಿತ್ಯವೂ ದೇವತೆಗಳಿಗೆ ಆಸಕ್ತಿಯಿಂದ ಪೌರೋಹಿತ್ಯ ಮಾಡತೊಡಗಿದನು. ಅವನು ದೇವೇಂದ್ರನಿಗೆ ನಾರಾಯಣಕವಚವೆಂಬ ಮಹಾಮಂತ್ರವನ್ನು ಕಲಿಸಿದನು. ಈ ವೈಷ್ಣವೀ ಮಹಾವಿದ್ಯೆಯಿಂದ ಅವನು, ಶುಕ್ರಾಚಾರ್ಯರ ವಿದ್ಯೆಯ ದೆಸೆಯಿಂದ ರಾಕ್ಷಸರು ಅಪಹರಿಸಿದ್ದ ದೇವತೆಗಳ ಸಮಸ್ತ ಐಶ್ವರ್ಯವನ್ನೂ ಪುನಃ ಪಡೆದು ದೇವತೆಗಳಿಗೆ ಹಿಂದಿರುಗಿಸಿದನು.

ಇದರಿಂದ ದೇವತೆಗಳ ಆನಂದಕ್ಕೆ ಪಾರವಿಲ್ಲದಂತಾಯಿತು. ಇಂದ್ರನು ಅಸುರರನ್ನು ಪುನಃ ಗೆದ್ದು ತಿಲೋಕಾಧಿಪತಿಯಾದನು.

ವಿಶ್ವರೂಪನು ಮೂರು ಶಿರಗಳನ್ನು ಪಡೆದಿದ್ದನು. ಅವನು ತನ್ನ ಒಂದು ಶಿರದಿಂದ ಸೋಮರಸವನ್ನು ಕುಡಿಯುತ್ತಿದ್ದನು; ಇನ್ನೊಂದು ತಲೆಯಿಂದ ಸುರಾಪಾನ ಮಾಡುತ್ತಿದ್ದನು; ಮೂರನೆಯ ತಲೆಯಿಂದ ಅನ್ನವನ್ನು ತಿನ್ನುತ್ತಿದ್ದನು. ಈ ವಿಶ್ವರೂಪನಿಗೆ ದೇವತೆಗಳು ತಂದೆಯ ಕಡೆಯಿಂದ ಬಾಂಧವರಾಗಿದ್ದರು.

ಆದ್ದರಿಂದ ಯಜ್ಞಯಾಗಗಳನ್ನು ಮಾಡಿದಾಗ ದೇವತೆಗಳ ನಾಮಗಳನ್ನು ಉಚ್ಚಸ್ವರದಿಂದ ಘೋಷಿಸುತ್ತಾ ಅವರಿಗೆ ಹವಿಸ್ಸನ್ನು ಅಗ್ನಿಯಲ್ಲಿ ಅರ್ಪಿಸುತ್ತಿದ್ದನು. ಆದರೆ ಇವನಿಗೆ ತಾಯಿಯ ಕಡೆಯಿಂದ ಅಸುರರೂ ಬಂಧುಗಳಾಗಿದ್ದರು. ಆದ್ದರಿಂದ ದೇವತೆಗಳಿಗೆ ತಿಳಿಯದಂತೆ ಅವರಿಗೂ ಹವಿರ್ಭಾಗಗಳನ್ನರ್ಪಿಸುತ್ತಿದ್ದನು.

ಒಂದು ದಿನ, ವಿಶ್ವರೂಪನು ರಹಸ್ಯವಾಗಿ ಮಾಡುತ್ತಿದ್ದ ಈ ಮೋಸದ ಆಚಾರವನ್ನು ದೇವೇಂದ್ರನು ಕಂಡುಕೊಂಡುಬಿಟ್ಟನು. ಪುನಃ ತನ್ನ ಶತ್ರುಗಳಾದ ಅಸುರರ ಬಲವರ್ಧನೆಯಾಗಿ ಎಲ್ಲಿ ತನ್ನನ್ನು ಸೋಲಿಸುವರೋ ಎಂದು ಹೆದರಿದನು; ವಿಶ್ವರೂಪನ ಮೇಲೂ ಅವನಿಗೆ ವಿಪರೀತ ಕೋಪ ಬಂದಿತು.

ಕೂಡಲೇ ಅವನು ವಿಶ್ವರೂಪನ ಮೂರೂ ತಲೆಗಳನ್ನು ಕತ್ತರಿಸಿಹಾಕಿದನು. ಆಗ, ಸೋಮರಸವನ್ನು ಕುಡಿಯುತ್ತಿದ್ದ ತಲೆಯು ಕಪಿಂಜಲಪಕ್ಷಿಯಾಗಿ ಹಾರಿಹೋಯಿತು. ಸುರಾಪಾನ ಮಾಡುತ್ತಿದ್ದ ತಲೆಯು ಕಲವಿಂಕ ಪಕ್ಷಿಯಾಗಿ ಹಾರಿಹೋಯಿತು. ಅನ್ನ ತಿನ್ನುತ್ತಿದ್ದ ತಲೆಯು ತಿತ್ತಿರೀ ಪಕ್ಷಿಯಾಗಿ ಹಾರಿಹೋಯಿತು.

ಬ್ರಾಹ್ಮಣನನ್ನು ಕೊಂದುದರ ಕಾರಣ, ಇಂದ್ರನಿಗೆ ಬ್ರಹ್ಮಹತ್ಯಾದೋಷ ಅಂಟಿಕೊಂಡಿತು. ಯದ್ಯಪಿ ಸ್ವಯಂ ಅವನು ಆ ದೋಷವನ್ನು ನಿವಾರಿಸಲು ಸಮರ್ಥನಿದ್ದರೂ ಒಂದು ವರ್ಷ ಅದನ್ನನುಭವಿಸಿದನು; ಅನಂತರ ಅವನು ತನ್ನನ್ನು ಶುದ್ಧೀಕರಿಸಿಕೊಳ್ಳಲು ಆ ಬಹ್ಮಹತ್ಯಾದೋಷವನ್ನು ಭೂಮಿ, ನೀರು, ವೃಕ್ಷಗಳು, ಮತ್ತು ಸ್ತ್ರೀಯರಿಗೆ ಹಂಚಿದನು. ಹೀಗೆ ಇವುಗಳಿಗೆ ದೋಷವನ್ನು ಹಂಚಿದ ಕಾರಣ, ಇವುಗಳಿಗೆ ಅವನು ವರಗಳನ್ನೂ ದಯಪಾಲಿಸಿದ.

ಇಂದ್ರನು ಭೂಮಿಗೆ, ಅದರಲ್ಲುಂಟಾಗುವ ಹಳ್ಳಗಳು ಸಹಜವಾಗಿಯೇ ಮುಚ್ಚಿಕೊಳ್ಳಲೆಂದು ವರ ನೀಡಿದನು; ಆಕಾರಣ, ಭೂಮಿಯು ಅವನ ಬ್ರಹ್ಮಹತ್ಯಾದೋಷದ ನಾಲ್ಕನೆಯ ಒಂದು ಭಾಗವನ್ನು ಸ್ವೀಕರಿಸಿತು. ಇದರಿಂದ ಭೂಮಿಯಲ್ಲಿ ಮರುಭೂಮಿಗಳುಂಟಾದವು.

ದೇವೇಂದ್ರನು ವೃಕ್ಷಗಳಿಗೆ, ಅವುಗಳ ರೆಂಬೆಕೊಂಬೆಗಳನ್ನು ಕತ್ತರಿಸಿದರೂ ಅವು ಪುನಃ ಚಿಗುರುವುದೆಂಬ ವರ ನೀಡಿದನು. ಆದ್ದರಿಂದ ವೃಕ್ಷಗಳು ಅವನ ಬ್ರಹ್ಮಹತ್ಯಾದೋಷದ ಕಾಲುಪಾಲನ್ನು ಸ್ವೀಕರಿಸಿದವು. ಇದರಿಂದ, ವೃಕ್ಷಗಳ ಕಾಂಡಗಳಿಂದ ಆಗಾಗ ರಸ ಸುರಿಯುತ್ತದೆ. (ಇದನ್ನು ಕುಡಿಯಬಾರದೆನ್ನುತ್ತಾರೆ)

ದೇವೇಂದ್ರನು ಸ್ತ್ರೀಯರಿಗೆ ನಿರಂತರವಾಗಿ ಕಾಮಸುಖವನ್ನನುಭವಿಸಬಹುದೆಂಬ ವರಪ್ರದಾನ ಮಾಡಿ, ತನ್ನ ಬ್ರಹ್ಮಹತ್ಯಾದೋಷದ ಕಾಲುಪಾಲನ್ನು ಅವರಿಗೆ ಹಂಚಿದನು. ಇದರಿಂದ ಅವರಿಗೆ ಪ್ರತಿ ತಿಂಗಳೂ ರಜೋದರ್ಶನವಾಗುತ್ತದೆ.

ದೇವೇಂದ್ರನು ಕಡೆಗೆ ನೀರಿಗೆ ತನ್ನ ಬ್ರಹ್ಮಹತ್ಯಾದೋಷದ ಕೊನೆಯ ಒಂದು ಪಾಲನ್ನು ಹಂಚಿ, ಅದನ್ನು ಯಾವುದೇ ವಸ್ತುವಿಗೆ ಬೆರೆಸಿದರೂ ಆ ವಸ್ತುವಿನ ಪ್ರಮಾಣ ಹೆಚ್ಚಾಗುವುದೆಂಬ ವರ ನೀಡಿದನು. ದೋಷವನ್ನು ಪಡೆದುದರಿಂದ ನೀರಿನಲ್ಲಿ ಗುಳ್ಳೆಗಳೂ ನೊರೆಯೂ ಉಂಟಾಗುತ್ತದೆ. ಅದ್ದರಿಂದ ಯಾರಾದರೂ ನೀರನ್ನು ಸಂಗ್ರಹಿಸುವಾಗ ಇವನ್ನು ನಿವಾರಿಸಬೇಕು.

ಹೀಗೆ ದೇವೆಂದ್ರನು ತನ್ನ ಬ್ರಹ್ಮಹತ್ಯಾದೋಷವನ್ನು ಈ ನಾಲ್ವರಲ್ಲಿ ಹಂಚಿ, ಅದನ್ನು ನಿವಾರಿಸಿಕೊಂಡು ಶುದ್ಧನಾದನು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi