ಬಾಲಕೃಷ್ಣ ದಿನಕ್ಕೊಂದು ದಿವ್ಯ ಲೀಲೆ ಪ್ರದರ್ಶಿಸುತ್ತಾ ಇಡೀ ವೃಂದಾವನವನ್ನು ತನ್ನ ಜಾಲದಲ್ಲಿ ಬಂಧಿಸಿದ್ದ. ಇಡೀ ವೃಂದಾವನ ಕೃಷ್ಣಮಯ. ಎಲ್ಲಿ ನೋಡಿದರೂ ತುಂಟ ಕೃಷ್ಣ ಮತ್ತು ಅವನ ಹಿಂಬಾಲಕ ಗೋಪಾಲಕರ ಕೇಕೆ. ಗೋಪಿಕೆಯರ ಕಿಲಕಿಲ. ಹಸುಕರುಗಳ ಕೊರಳ ಗಂಟೆ ನಾದ. ಮೋಹನಮುರಳಿಯ ಮಂಜುಳ ನಿನಾದ.

ಹೀಗೆ ವೃಂದಾವನ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ನೋಡಿ ನಲಿಯುತ್ತಾ ಸಂತಸದಲ್ಲಿ ಮುಳುಗೇಳುತ್ತಿದ್ದರೆ, ಅತ್ತ ಬಾಲಕೃಷ್ಣನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ರಾಕ್ಷಸ ಗಣ ದಿನಕ್ಕೊಂದು ತಂತ್ರ ಹಣೆಯುತ್ತಲೇ ಇತ್ತು. ಇಂಥ ಒಂದು ಷಡ್ಯಂತ್ರದ ಭಾಗವಾಗಿಯೇ ವೃಂದಾವನಕ್ಕೆ ಬಂದವನು ಅರಿಷ್ಟಾಸುರ!
ಹೆಸರೇ ಹೇಳುವಂತೆ ಇವನೊಬ್ಬ ಭಯಂಕರ ರಕ್ಕಸ. ಗೂಳಿಯ ರೂಪ. ಆದರೆ ದೈತ್ಯ ದೇಹ. ಹರಿತವಾದ ಕೊಂಬುಗಳು, ಕಲ್ಲಿನಂಥ ಗೊರಸುಗಳು. ಇಡೀ ವೃಂದಾವನವೇ ತತ್ತರಿಸುವಂತೆ ಗುಟುರು ಹಾಕುತ್ತಾ, ಕೊಂಬುಗಳಿಂದ ನೆಲವನ್ನು ಅಗೆಯುತ್ತಾ, ಗೊರಸುಗಳಿಂದ ಆಕಾಶದೆತ್ತರಕ್ಕೆ ಧೂಳೆಬ್ಬಿಸುತ್ತಾ, ತನಗಾರೂ ಎದಿರಿಲ್ಲ ಎಂದು ಠೇಂಕರಿಸುತ್ತಾ ನುಗ್ಗಿ ಬಂದ ಅರಿಷ್ಟಾಸುರ. ಈ ದೈತ್ಯನ ಆರ್ಭಟಕ್ಕೆ ಇಡೀ ವೃಂದಾವನ ತಲ್ಲಣಿಸಿತು. ಭೂಮಿಯೇ ನಡುಗಿದ ಅನುಭವ. ಬೆದರಿದ ವ್ರಜ ನಿವಾಸಿಗಳು ಭೂಕಂಪವಾಗುತ್ತಿದೆಯೇನೋ ಎಂದೇ ಭಾವಿಸಿದರು.
ಅರಿಷ್ಟಾಸುರ ವೃಂದಾವನ ಗ್ರಾಮದೊಳಕ್ಕೆ ಕಾಲಿಡುತ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಈ ರಕ್ಕಸ ಗೂಳಿಯ ಘರ್ಜನೆ ಎಷ್ಟೊಂದು ತೀವ್ರವಾಗಿತ್ತೆಂದರೆ ಅದರ ಭಯಾನಕ ಸದ್ದಿಗೆ ಬೆದರಿ ಎಷ್ಟೋ ಗರ್ಭವತಿಯರಿಗೆ, ಗರ್ಭ ಧರಿಸಿದ್ದ ಗೋವುಗಳಿಗೆ ಗರ್ಭಪಾತವಾಯಿತು. ಈ ದೈತ್ಯಾಕೃತಿಯ ದಾಳಿ ಎದುರಿಸಲಾಗದ ಗ್ರಾಮಸ್ಥರು ಹೆದರಿ ಓಡಲಾರಂಭಿಸಿದರು.
ಗೋವುಗಳು, ಮತ್ತಿತರರ ಪ್ರಾಣಿಗಳೂ ತಮ್ಮ ಮಾಲೀಕರನ್ನು ಹಿಂಬಾಲಿಸಿದವು. ಇಡೀ ಗ್ರಾಮದಲ್ಲಿ ಭೀತಿ ಆವರಿಸಿತು. ಇನ್ನು ನಮಗಾರಿಗೂ ಉಳಿಗಾಲವಿಲ್ಲ ಎಂದೇ ಭಾವಿಸಿದ ವ್ರಜ ನಿವಾಸಿಗಳು ಬೇರೆ ದಾರಿ ಕಾಣದೇ ಅನಾಥ ರಕ್ಷಕ ಶ್ರೀ ಕೃಷ್ಣನಲ್ಲಿ ಮೊರೆ ಇಡಲಾರಂಭಿಸಿದರು.
“ಕೃಷ್ಣಾ, ಕೃಷ್ಣಾ ಕಾಪಾಡು” ಎನ್ನತ್ತಾ ಗೋಪಾಲಕರು ಬಾಲಕೃಷ್ಣನತ್ತ ಧಾವಿಸಿ ಬಂದರು. ತನ್ನ ನೆಚ್ಚಿನ ಗೋವುಗಳೆಲ್ಲಾ ತಲೆ ಬಗ್ಗಿಸಿ, ಬಾಲ ನಿಗುರಿಸಿಕೊಂಡು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ಕೃಷ್ಣ ನೋಡಿದ.
ಕೃಷ್ಣ ತಕ್ಷಣ ಅಭಯ ನೀಡಿದ, “ಹೆದರಬೇಡಿ, ಹೆದರಬೇಡಿ, ನಾನಿದ್ದೇನೆ.” ತಕ್ಷಣ ಅಲ್ಲಿಂದ ಹೊರಟವನೇ ಉನ್ಮತ್ತನಾಗಿ ನುಗ್ಗಿ ಬರುತ್ತಿದ್ದ ಅರಿಷ್ಟಾಸುರನೆದುರು ಹೋಗಿ ನಿಂತ.

“ಎಲೈ, ಕ್ಷುಲ್ಲಕ ಜೀವಿಯೇ, ಸುಮ್ಮನೇಕೆ ಗೋಕುಲ ವಾಸಿಗಳನ್ನು ಹೆದರಿಸುತ್ತಿರುವೆ? ಇದರಿಂದ ನಿನಗೇನು ಲಾಭ? ನೀನು ನನಗೆ ಸವಾಲೆಸೆಯಲು ಬಂದಿರುವವನಾದರೆ ನೇರವಾಗಿ ಕಾಳಗಕ್ಕೆ ಬಾ. ಕಾದಾಡಲು ನಾನು ಸಿದ್ಧನಿದ್ದೇನೆ” ಎಂದು ಅರಿಷ್ಟಾಸುರನಿಗೆ ಬಾಲಕೃಷ್ಣ ಸವಾಲೆಸೆದ.
ಮೊದಲೇ ಕ್ರೋದಾವೇಷಿತನಾಗಿ ವರ್ತಿಸುತ್ತಿದ್ದ ಅರಿಷ್ಟಾಸುರನ ಕೋಪ ಇದನ್ನು ಕೇಳಿ ಇಮ್ಮಡಿಸಿತು. ಕೃಷ್ಣನ ಎದೆಗೆ ತನ್ನ ಹರಿತವಾದ ಕೊಂಬುಗಳನ್ನು ಗುರಿಯಾಗಿಟ್ಟುಕೊಂಡು, ಆತನನ್ನು ಸಿಗಿದು ಹಾಕುವವನಂತೆ ಅರಿಷ್ಟಾಸುರ ನುಗ್ಗಿಬಂದ. ಕೃಷ್ಣ ಸ್ವಲ್ಪವೂ ವಿಚಲಿತನಾಗಲಿಲ್ಲ.
ಪಕ್ಕದಲ್ಲಿದ್ದ ಗೆಳೆಯನ ಹೆಗಲ ಮೇಲೆ ಕೈಯಿಟ್ಟು ಮಂದಸ್ಮಿತನಾಗಿ ನಿಂತ. ಕೃಷ್ಣ ತನ್ನನ್ನು ಈ ಪರಿ ನಿರ್ಲಕ್ಷಿಸಿದ್ದು, ರಕ್ಕಸನನ್ನು ಮತ್ತಷ್ಟು ಕೆರಳಿಸಿತು. ಮೂಗಿನ ಹೊರಳೆಗಳನ್ನು ಇನ್ನಷ್ಟು ಅಗಲವಾಗಿಸಿ ಗುಟುರು ಹಾಕುತ್ತಾ, ಬಿರುಗಾಳಿಯಂತೆ ನುಗ್ಗಿ ಬಂದ. ಅವನ ಕಣ್ಣುಗಳಂತೂ ಕೆಂಡದಂತೆ ಕೆಂಪಾಗಿದ್ದವು.
ನೆಲವನ್ನು ಅಗೆಯುತ್ತಾ, ಧೂಳೆಬ್ಬಿಸುತ್ತಾ, ಬಾಲವನ್ನು ನೆಟ್ಟಗೆ ಮಾಡಿಕೊಂಡು ಕೋಪಾವಿಷ್ಟನಾಗಿ ತಮ್ಮ ಆರಾಧ್ಯ ದೈವದ ಕಡೆಗೆ ನುಗ್ಗಿತ್ತಿರುವ ದೈತ್ಯನನ್ನು ಕಂಡು ಗೋಪಾಲಕರು ಕಂಪಿಸಿದರು. ಗೋಪಿಕೆಯರಿಗಂತೂ ನಿಂತ ನೆಲವೇ ಕಂಪಿಸಿದ ಅನುಭವ. ಆದರೆ ಕೃಷ್ಣ ಮಾತ್ರ ಒಂದಿಚ್ಚು ಕದಲಲಿಲ್ಲ.
ಅರಿಷ್ಟಾಸುರ ತೀರಾ ಸನಿಹಕ್ಕೆ ಬರುವವರೆಗೂ ಸುಮ್ಮನೆ ನಿಂತಿದ್ದ ಕೃಷ್ಣ, ಕೊನೆ ಕ್ಷಣದಲ್ಲಿ ಮಿಂಚಿನಂತೆ ಎಗರಿ ಗೂಳಿಯ ಕೊಂಬುಗಳನ್ನು ತನ್ನ ಎರಡೂ ಕೈಗಳಿಂದ ಬಲವಾಗಿ ಅದುಮಿ ಹಿಡಿದ. ನಂತರ ದೈತ್ಯ ಗೂಳಿಯನ್ನು ಅನಾಮತ್ತಾಗಿ ಎತ್ತಿ ಎರಡು ಸುತ್ತು ತಿರುಗಿಸಿ ನೆಲಕ್ಕೆ ಒಗೆದ! ನೆಲಕ್ಕೆ ಬಿದ್ದರೂ ಸೋಲೊಪ್ಪಿಕೊಳ್ಳದ ಅರಿಷ್ಟಾಸುರ ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು ಮತ್ತೆ ಮೇಲಕ್ಕೆದ್ದ. ಮತ್ತೊಮ್ಮೆ ರೋಷದಿಂದ ಕೃಷ್ಣನತ್ತ ನುಗ್ಗಿದ. ಮತ್ತೆ ಅರಿಷ್ಟಾಸುರನ ಕೊಂಬುಗಳನ್ನು ಹಿಡಿದು ಮೇಲಕ್ಕೆತ್ತಿದ ಕೃಷ್ಣ, ಈ ಬಾರಿ ತಂತ್ರ ಬದಲಿಸಿದ.

ಆತನನ್ನೇ ಎಸೆಯುವ ಬದಲು, ಅಗಸ ಬಟ್ಟೆಯನ್ನು ಕಲ್ಲಿಗೆ ಜಪ್ಪುವಂತೆ ರಕ್ಕಸನನ್ನು ನೆಲಕ್ಕೆ ಅಪ್ಪಳಿಸತೊಡಗಿದ! ಈ ರಭಸಕ್ಕೆ ಅರಿಷ್ಟಾಸುರನ ಕೊಂಬುಗಳೇ ಕಿತ್ತು ಕೈಗೆ ಬಂದವು! ಕೃಷ್ಣ ಈಗ ನೆಲದ ಮೇಲೆ ಬಿದ್ದುಕೊಂಡಿದ್ದ ರಾಕ್ಷಸನನ್ನು ಝಾಡಿಸಿ ಒದೆಯತೊಡಗಿದ. ಅರಿಷ್ಟಾಸುರ ಯಾತನೆ ತಾಳಲಾರದೇ ವಿಲವಿಲನೆ ಒದ್ದಾಡ ತೊಡಗಿದ. ಕಣ್ಣು, ಮೂಗು, ಬಾಯಿಂದ ರಕ್ತ ಕಾರುತ್ತಾ, ಮೂತ್ರ ವಿಸರ್ಜಿಸುತ್ತಾ, ಸಗಣಿ ಹಾಕಿಕೊಳ್ಳುತ್ತಾ ವಿಕಾರವಾಗಿ ಕಿರುಚಿಕೊಳ್ಳಲಾರಂಭಿಸಿದ.
ಇದೇ ವೇಳೆ ಆತನ ಕಣ್ಣುಗಳು ಗುಳಿಗಳಿಂದ ಹೊರಬಂದು ಬಿದ್ದವು. ಆತನ ಕತ್ತು ನಿಧಾನವಾಗಿ ಪಕ್ಕಕ್ಕೆ ವಾಲಿತು. ಅರಿಷ್ಟಾಸುರನ ಸಂಹಾರವಾಯಿತು. ಸಾವಿನ ಸಾಮ್ರಾಜ್ಯ ಸೇರಿದ್ದ. ಬಾಲಕೃಷ್ಣನ ಸಾಹಸದಿಂದಾಗಿ ವೃಂದಾವನಕ್ಕೆ ತಟ್ಟಿದ್ದ ಮತ್ತೊಂದು ಅಪಾಯ ದೂರಾಯಿತು. ಸುತ್ತಲೂ ನೆರೆದಿದ್ದ ಗೋಪಾಲಕರು ತಮ್ಮ ಆರಾಧ್ಯದೈವದ ಮತ್ತೊಂದು ಮಹೋನ್ನತ ಲೀಲೆ ಕಂಡು ಮನಸಾರೆ ಸುತ್ತಿಸಿದರು.
Leave a Reply