ಯಾವಾಗ ನೀವು ಅವನನ್ನು ಪ್ರೀತಿಸುತ್ತೀರೋ, ನೀವು ಸದಾ ಅವನನ್ನು ಕಾಣುತ್ತೀರಿ
ಪ್ರಭುಪಾದರ ಉಪನ್ಯಾಸ, ಸ್ಥಳ: ಲಾಸ್ ಏಂಜಲೀಸ್, ಡಿಸೆಂಬರ್ 25, 1973
ತದ್ಧ್ಯಾನೋದ್ರಿಕ್ತಯಾ ಭಕ್ತ್ಯಾ ವಿಶುದ್ಧಧಿಷಣಾಃ ಪರೇ
ತಸ್ಮಿನ್ ನಾರಾಯಣಪದೇ ಏಕಾಂತಮತಯೋ ಗತಿಮ್ |
ಅವಾಪ್ರರ್ದುರ ವಾಪಾಂ ತೇ ಅಸದ್ಭಿರ್ವಿಷಯಾತ್ಮಭಿಃ
ವಿಧೂತ ಕಲ್ಮಷಾ ಸ್ಥಾನಂ ವಿರಜೇನಾತ್ಮ ನೈವ ಹಿ ||

“ಹೀಗೆ ಅವರು ನಿರಂತರ ಭಕ್ತಿ ಸ್ಮರಣೆಯ ಫಲವಾದ ಶುದ್ಧ ಪ್ರಜ್ಞೆಯಿಂದಾಗಿ ಆಧ್ಯಾತ್ಮಾಕಾಶವನ್ನು ಸೇರಿದರು. ಅದನ್ನು ಆಳುವವನು ಪರಮೋನ್ನತ ನಾರಾಯಣನಾದ ಪ್ರಭು ಶ್ರೀಕೃಷ್ಣ. ಯಾರು ಏಕೈಕ ಪರಮೋನ್ನತ ಪ್ರಭುವನ್ನು ಅವಿರತವಾಗಿ ಧ್ಯಾನ ಮಾಡುವರೋ ಅವರು ಮಾತ್ರ ಅಲ್ಲಿಗೆ ಹೋಗಲು ಸಾಧ್ಯ.
ಗೋಲೋಕ ವೃಂದಾವನವೆಂಬ ಹೆಸರಿನ ಈ ಶ್ರೀಕೃಷ್ಣನ ಧಾಮವನ್ನು ಬದುಕಿನ ಐಹಿಕ ಕಲ್ಪನೆಯಲ್ಲೇ ಮುಳುಗಿ ಹೋಗಿರುವವರು ಎಂದಿಗೂ ಪಡೆಯಲಾರರು. ಎಲ್ಲ ಬಗೆಯ ಭೌತ ಕಲ್ಮಷಗಳನ್ನು ತೊಳೆದುಕೊಂಡುಬಿಟ್ಟಿದ್ದುದರಿಂದ ಪಾಂಡವರು ತಮ್ಮ ಅದೇ ದೇಹಗಳಲ್ಲಿಯೇ ಆ ಧಾಮವನ್ನು ಸೇರಿದರು. -ಶ್ರೀಮದ್ ಭಾಗವತಮ್ 1.15.47-48
ಮೆಡಿಟೇಷನ್ ಎಂದರೆ ಧ್ಯಾನ ಎಂದರ್ಥ. ಪಾಂಡವರು ಶ್ರೀಕೃಷ್ಣನನ್ನು ಸದಾ ಸ್ಮರಿಸುತ್ತಿದ್ದರು. ಅವರು ಕುಳಿತುಕೊಂಡಾಗ, ಮಾತನಾಡುವಾಗ, ಊಟಮಾಡುವಾಗ, ಮಲಗುವಾಗ, ಯುದ್ಧದಲ್ಲಿ ಹೋರಾಡುವಾಗ ಸದಾ ಶ್ರೀ ಕೃಷ್ಣನನ್ನು ಸ್ಮರಿಸುತ್ತಿದ್ದರು. ಅದೇ ಕೃಷ್ಣಪ್ರಜ್ಞೆ. ಅರ್ಜುನನು ಹೋರಾಡುವಾಗ ಕೃಷ್ಣ ಅವರೊಂದಿಗೆ ಇದ್ದ. ಹಾಗೆಯೇ ಪಾಂಡವರು ಕೌರವರ ದುರ್ಯೋಧನನೊಂದಿಗೆ ರಾಜನೀತಿಕಾರಣದಲ್ಲಿ ತೊಡಗಿರುವಾಗಲೂ ಕೃಷ್ಣನು ಅಲ್ಲಿದ್ದ.
ಕೃಷ್ಣನು ಅರ್ಜುನನ ಸ್ನೇಹಿತ. ಅರ್ಜುನ ಮಾತನಾಡುವಾಗ, ತಿನ್ನುವಾಗ, ಕುಳಿತಿರುವಾಗ, ಮಲಗುವಾಗ ಸದಾ ಅವರೊಂದಿಗೆ ಇರುತ್ತಿದ್ದನು. ಕೃಷ್ಣಪ್ರಜ್ಞೆ ಎನ್ನುವುದು ಎಷ್ಟೊಂದು ಒಳ್ಳೆಯದಿದೆ ಎಂದರೆ ಪಾಂಡವರೊಂದಿಗೆ, ಅರ್ಜುನನೊಂದಿಗೆ ಶ್ರೀಕೃಷ್ಣ ಇದ್ದುಕೊಂಡು ವ್ಯವಹಾರ ಮಾಡುವಂತೆ ನಾವು ಕೂಡ ಸಾಮಾನ್ಯ ಜೀವನದಲ್ಲಿ ಇರಬಹುದು.
ಈ ರೀತಿ ಮಾಡಿಕೊಳ್ಳುವುದರಲ್ಲಿ ಏನೂ ಕಷ್ಟವಿಲ್ಲ. ನಾವು ಇದನ್ನು ಅಭ್ಯಾಸಮಾಡಬೇಕಷ್ಟೆ. ಈ ಅಭ್ಯಾಸವನ್ನು ಮಾಡಬೇಕೆಂದರೆ ‘ಭಕ್ತಿಮನೋಭಾವನೆಯುಳ್ಳ’ ಭಕ್ತನಾಗಿರಬೇಕು. ಪಾಂಡವರು ಕೃಷ್ಣನೊಂದಿಗೆ ವ್ಯವಹರಿಸಿದಂತೆ ನಾವು ಕೂಡ ವ್ಯವಹರಿಸಲು ಭಕ್ತಿಸೇವೆಯಿಂದ ಮಾತ್ರ ಸಾಧ್ಯ. ಪಾಂಡವರ ಭಕ್ತಿಗಾಗಿಯೇ ಶ್ರೀಕೃಷ್ಣ ಅವರೊಂದಿಗೆ ಅಷ್ಟೊಂದು ಆತ್ಮೀಯನಾಗಿದ್ದ.
ಹಿರಿಯ ಪಾಂಡವನಾದ ಯುಧಿಷ್ಠಿರನೊಂದಿಗೆ ನಾರದಮುನಿಗಳು ಮಾತನಾಡುವಾಗ ಪಾಂಡವರನ್ನು ಹೊಗಳಿದರು; ಜ್ಞಾನಿಗಳು, ಯೋಗಿಗಳು, ದಾರ್ಶನಿಕರು ಇವರೆಲ್ಲ ಶ್ರೀಕೃಷ್ಣನನ್ನು ತಲಪಲು ಸಾಧ್ಯವಿಲ್ಲ. ಆದರೆ, ಭಕ್ತಿಯಿಂದ ಶ್ರೀಕೃಷ್ಣ ನಿಮ್ಮ ಜೊತೆ ಗೆಳೆಯನಾಗಿ ಮತ್ತು ಕೆಲವು ಸಲ ಆಜ್ಞಾಪಾಲಕನಾಗಿ ಇದ್ದಾನೆ.”
ದುರ್ಯೋಧನನೊಂದಿಗೆ ಕೃಷ್ಣ ಮಾತನಾಡುವಾಗ ಒಂದು ಸಲ ಪಾಂಡವರು ಹೀಗೆ ಹೇಳಿದರು “ಕೃಷ್ಣ ಈ ಪತ್ರವನ್ನು ತೆಗೆದುಕೊಂಡು ದುರ್ಯೋಧನನಲ್ಲಿ ಹೋಗಿ ಅವನಿಗೆ ಕೊಡು.” ಇದಕ್ಕೆ ಕೃಷ್ಣ ಒಪ್ಪಿಕೊಂಡನು. “ನಾನು ಹೋಗುವೆನು” ಎಂದನು. ಕೃಷ್ಣ ಸಾಮಾನ್ಯ ಸೇವಕನಾಗಿ ಕೆಲಸ ನಿರ್ವಹಿಸಿದ್ದಾನೆ, ಅವನು ಪಾರ್ಥಸಾರಥಿಯಾಗಿದ್ದಾನೆ ಅಂದರೆ ಅರ್ಜುನನ ರಥದ ಸಾರಥಿಯಾಗಿ ಕೆಲಸ ಮಾಡಿದ್ದಾನೆ.
ನೀವು ಕೃಷ್ಣನ ಭಕ್ತರಾದರೆ ಈ ಜೀವನದಲ್ಲೂ ಕೂಡ ಕೃಷ್ಣನೊಂದಿಗೆ ಇರಬಹುದು. ಕೃಷ್ಣನು ಸರ್ವಶಕ್ತನಾಗಿದ್ದಾನೆ. ಕೃಷ್ಣನ ಬಗ್ಗೆ ನೀವು ನಿಜವಾದ ಭಕ್ತರಾದರೆ ಅವನು ನಿಮ್ಮ ಜೊತೆ ಮಾತನಾಡುತ್ತಾನೆ, ಊಟಮಾಡುತ್ತಾನೆ, ಕುಣಿಯುತ್ತಾನೆ ಎಲ್ಲವನ್ನೂ ನಿರ್ವಹಿಸುತ್ತಾನೆ.
ಪ್ರೇಮಾಂಜನ-ಚ್ಛುರಿತ-ಭಕ್ತಿ ವಿಲೋಚನೇನಾ ಸಂತಃ ಸದೈವ. ಯಾರು ಶ್ರೀಕೃಷ್ಣನಲ್ಲಿ ಭಕ್ತಿಯನ್ನು ಪಡೆದಿರುವ ಸಂತರೋ ಅವರು “ಪ್ರತಿಯೊಂದು ಕ್ಷಣವೂ ಕೃಷ್ಣನನ್ನು ಕಾಣುತ್ತಾರೆ. ಸದೈವ ಎಂದರೆ ಪ್ರತಿಯೊಂದು ಕ್ಷಣ. ಈ ಸಂತರು ಕೃಷ್ಣನನ್ನು ಬಿಟ್ಟು ಬೇರೆ ಏನನ್ನೂ ನೋಡುವುದಿಲ್ಲ.
ಮೂಢರು ಕೇಳುತ್ತಾರೆ – “ನೀವು ದೇವರನ್ನು ನೋಡಿದ್ದೀರಾ?”
ನಾವು ಹೇಳಬಹುದು – “ನೋಡಿದ್ದು” ಮಾತ್ರವಲ್ಲ. ಆದರೆ ಒಬ್ಬ ಸಂತನು ಪ್ರತಿಯೊಂದು ಕ್ಷಣವೂ ದೇವರನ್ನು ಕಾಣುತ್ತಿದ್ದಾನೆ :
ದೇವರನ್ನು ಒಂದೇ ಒಂದು ಸಲ ಕಾಣುವ ಪ್ರಶ್ನೆಯೇ ಇಲ್ಲ. ಸದೈವ ಪ್ರತಿಕ್ಷಣವೂ ಒಬ್ಬನು ದೇವರನ್ನು ಕಾಣುತ್ತಾನೆ.
ಒಬ್ಬನು ಪ್ರತಿಯೊಂದು ಕ್ಷಣದಲ್ಲೂ ಕೃಷ್ಣನನ್ನು ಏಕೆ ಕಾಣುತ್ತಾನೆ? ಏಕೆಂದರೆ ಕೃಷ್ಣ ನಮ್ಮಲ್ಲಿಯೇ ಇದ್ದಾನೆ. ಈಶ್ವರಃ ಸರ್ವಭೂತಾನಂ ಹೃದ್ದೇಶ ಅರ್ಜುನ ತಿಷ್ಠತಿ. ಭಗವದ್ಗೀತೆಯಲ್ಲಿ ಕೃಷ್ಣನ ಸ್ಥಾನ ಈ ರೀತಿ ಹೇಳಲ್ಪಟ್ಟಿದೆ. “ಅವನು ನಿಮ್ಮ ಹೃದಯದಲ್ಲಿಯೇ ಇದ್ದಾನೆ. ಆದ್ದರಿಂದ ನೀವು ಭಗವಂತನನ್ನು ನೋಡಲು ದೂರ ಹೋಗುವ ಅವಶ್ಯಕತೆಯಿಲ್ಲ. ಎಲ್ಲೇ ಇರಿ ನೀವು ಭಗವಂತನನ್ನು ಕಾಣಬಹುದು.
ಸರ್ವಭೂತಾನಾ೦ ಅ೦ದರೆ ಭಗವಂತನು ಜಗತ್ತಿನ ಸರ್ವ ಚೇತನಾತ್ಮಕಗಳಾದ ಮರಗಿಡಗಳು, ಪ್ರಾಣಿಗಳು, ಜಲಚರ, ಮನುಷ್ಯನಲ್ಲಿಯೇ ಅಲ್ಲ ಎಲ್ಲ ಮೃಗಗಳಲ್ಲಿಯೂ ಇದ್ದಾನೆ. ಬ್ರಹ್ಮನಂತಹ ಉನ್ನತವಾದ ಜೀವಿಯಿಂದ ಹಿಡಿದು ಸಣ್ಣ ಇರುವೆಯಲ್ಲೂ ಇದ್ದಾನೆ.
ಭಗವಂತನು ಎಲ್ಲ ಕಡೆಯೂ ಇದ್ದಾನೆ. ಅಂಡಾಂತರಸ್ಥ ಪರಮಾಣು ಚಯಾಂತರ-ಸ್ಥಂ ಭಗವಂತನು ಬ್ರಹ್ಮಾಂಡದಲ್ಲಿಯೂ ಇದ್ದಾನೆ, ನಿಮ್ಮ ಹೃದಯದಲ್ಲೂ ಇದ್ದಾನೆ, ಒಂದು ಸಣ್ಣ ಅಣುವಿನಲ್ಲಿಯೂ ಇದ್ದಾನೆ. ಆದ್ದರಿಂದ ಭಗವಂತನನ್ನು ಕಾಣಲು ಏನು ಕಷ್ಟವಿದೆ? ಅವನನ್ನು ನೋಡಲು ನೀವು ನಿಮ್ಮ ಕಣ್ಣುಗಳನ್ನು ಅರ್ಹಮಾಡಿಕೊಳ್ಳಬೇಕು.
ಅದುವೇ ಪ್ರೇಮಾಂಜನ- ಚ್ಛುರಿತ-ಭಕ್ತಿ-ವಿಲೋಚನೇನ ಶ್ಲೋಕದ ಅರ್ಥ. ನೀವು ನಿಜವಾಗಿಯೂ ಒಬ್ಬನನ್ನು ಪ್ರೀತಿಸುತ್ತಿದ್ದರೆ ಸದಾ ಅವನನ್ನು ಕಾಣುತ್ತೀರಿ. ನೀವು ಆಫೀಸ್‌ನಲ್ಲಿ ಇರುವಾಗಲೂ ನೋಡುತ್ತೀರಿ. ತಿನ್ನುವಾಗಲೂ ನೋಡುತ್ತೀರಿ. ಐಹಿಕವಾಗಿಯೇ ಇಷ್ಟೊಂದು ಸಾಧ್ಯತೆ ಇರುವಾಗ ಆಧ್ಯಾತ್ಮಿಕವಾಗಿ ಇನ್ನೂ ಎಷ್ಟೊಂದು ಸಾಧ್ಯತೆ ಇರಬಹುದು.
ಭಗವಂತನನ್ನು ಕಾಣಲು ಭಕ್ತಿಯೊಂದರಿಂದ ಮಾತ್ರ ಸಾಧ್ಯ. ಇಂದಿನ ಶ್ಲೋಕ ಭಕ್ತ್ಯಾ ವಿಶುದ್ಧಃ ಧೀಶನಃ ಪರೇ ವಿಶುದ್ಧ ಎಂದರೆ “ಪರಿಶುದ್ಧ”. ಪ್ರಸ್ತುತ ಸ್ಥಿತಿಯಲ್ಲಿ ನಮ್ಮ ಪ್ರಜ್ಞೆ ಅಷ್ಟೊಂದು ಶುದ್ಧವಾಗಿಲ್ಲ. ಆದರೆ ನಾವು ಕೃಷ್ಣನೊಂದಿಗೆ ನಮ್ಮ ಪ್ರಜ್ಞೆಯನ್ನು ಸಂಪರ್ಕವಿಟ್ಟುಕೊಂಡರೆ ನಾವು ಪರಿಶುದ್ಧರಾಗುತ್ತೇವೆ ಮತ್ತೆ ಈ ಸಂಪರ್ಕವು ಕೃಷ್ಣನ ಬಗ್ಗೆ ಕೇಳುವುದರಿಂದ ಬಹಳ ಸುಲಭವಾಗುತ್ತದೆ.
ಯಾರು ನಮ್ಮ ತರಗತಿಯಲ್ಲಿ ಹಾಜರಾಗುತ್ತಿರುವರೋ ಅವರಿಗೆ ಕೃಷ್ಣನ ಬಗ್ಗೆ ಏನೂ ಗೊತ್ತಿಲ್ಲದಿರಬಹುದು. ಆದರೆ ಕೃಷ್ಣನ ಬಗ್ಗೆ ಕೇಳಲು ಅವರಿಗೆ ಕಿವಿಗಳು ಇವೆ. ನಾವು ಕೃಷ್ಣನ ಬಗ್ಗೆ ಅನೇಕ ಅಂಶಗಳನ್ನು ಚರ್ಚಿಸುತ್ತಿದ್ದೇವೆ. ಆದ್ದರಿಂದ ಕೃಷ್ಣನ ಬಗ್ಗೆ ನಾವು ಅನೇಕ ಪುಸ್ತಕಗಳನ್ನು ಬರೆದಿದ್ದೇವೆ. ಭಗವಂತನ ಬಗ್ಗೆ ಸುಮಾರು 60 ಪುಸ್ತಕಗಳನ್ನು ಬರೆದಿರುವುದು ಜನರಿಗೆ ಇದರ ಬಗ್ಗೆ ಕಲ್ಪನೆಯೇ ಸಾಧ್ಯವಿಲ್ಲ. ಯಾವುದೇ ಧರ್ಮದಲ್ಲೂ ನಿಮಗೆ ಭಗವಂತನ ಬಗ್ಗೆ ಇಷ್ಟೊಂದು ಮಾಹಿತಿ ದೊರಕುವುದು ಸಾಧ್ಯವಿಲ್ಲ.

ನಾವು ನಮ್ಮ ಗಮನವನ್ನು ಕೃಷ್ಣಪ್ರಜ್ಞೆಯ ಕಡೆಗೆ ತಿರುಗಿಸಬೇಕು. ನಾವು ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಜಪಿಸಬಹುದು. ನಾವು ಜೀವನ ಪರ್ಯಂತ ಕೃಷ್ಣನ ಬಗ್ಗೆ ತಿಳಿದುಕೊಳ್ಳಬಹುದು. ಏಕೆಂದರೆ ಕೃಷ್ಣನಿಗೆ ಸಂಬಂಧಿಸಿದ ಸಾಹಿತ್ಯವು ಕೂಡ ವಿಪುಲವಾಗಿದೆ. ಪ್ರತಿನಿತ್ಯ 24 ಘಂಟೆಗಳ ಕಾಲ ಈ ಸಾಹಿತ್ಯವನ್ನು ನೀವು ಓದಿದರೂ ಸಹ ಇದನ್ನು ಓದಿ ಮುಗಿಸಬೇಕಾದರೆ ನಿಮ್ಮ ಜೀವನ ಪರ್ಯ೦ತ ಸಮಯ ಸವೆಯಿಸಬೇಕಾಗುತ್ತದೆ.
ನಮ್ಮ ಗುರು ಮಹಾರಾಜರು ಮಾಯಾಪುರದಲ್ಲಿ ‘ನದಿಯಾ ಪ್ರಕಾಶ’ ವೆಂಬ ದಿನಪತ್ರಿಕೆಯನ್ನು ಪ್ರಕಟಿಸಿದರು. ಒಂದು ಸಲ ಒಬ್ಬ ದೊಡ್ಡರಾಜಕಾರಣಿಯು ಅವರನ್ನು ಪ್ರಶ್ನೆ ಮಾಡಿದ. ”ಭಗವಂತನ ಪ್ರಜ್ಞೆಯ ಬಗ್ಗೆ ನೀವು ದಿನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದೀರಾ?” “ಹೌದು.” “ನೀವು ಅದರಲ್ಲಿ ಏನು ಬರೆಯುತ್ತಿದ್ದೀರಿ?’ ಎಂದು ರಾಜಕಾರಣಿ ಆಶ್ಚರ್ಯಚಕಿತನಾದನು.
ರಾಜಕಾರಣಿಗಳು ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ರಾಜಕಾರಣದ ನಿರುಪಯುಕ್ತ ವಿಚಾರಗಳೇ ತುಂಬಿರಬೇಕೆಂದು ನಿರೀಕ್ಷಿಸುತ್ತಾರೆ. ದಿನಪತ್ರಿಕೆಗಳಲ್ಲಿ ಆಧ್ಯಾತ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆಯೂ ವಿಷಯ ಇರುತ್ತವೆ ಎಂದು ಅವರು ಯೋಚಿಸುವುದೇ ಇಲ್ಲ. ಅವರಿಗೆ ಇದರ ಬಗ್ಗೆ ಯಾವುದೇ ಜ್ಞಾನವಿಲ್ಲ, ಅವರಿಗೆ ಆಧ್ಯಾತ್ಮಿಕ ಜಗತ್ತು ಕೂಡ ಎಂಬುದೊಂದು ಇದೆ ಎಂಬ ಪರಿಜ್ಞಾನವೂ ಇಲ್ಲ.
ನಮ್ಮ ಗುರುಮಹಾರಾಜರು ವಿವರಿಸಿದರು; ನೀವು ಏಕೆ ಇಷ್ಟೊಂದು ಚಿಕ್ಕ ದಿನಪತ್ರಿಕೆಯ ಬಗ್ಗೆ ಯೋಚಿಸುತ್ತಿದ್ದೀರಿ? ನಿಮಗೆ ಆಧ್ಯಾತ್ಮಿಕ ಜಗತ್ತು ಗೊತ್ತಿಲ್ಲ. ಭಗವಂತನ ಪೂರ್ಣ ಸೃಷ್ಟಿಯಲ್ಲಿ ಈ ಐಹಿಕ ಜಗತ್ತು ಕೇವಲ ಕಾಲುಭಾಗವಾಗಿದೆ. ಮುಕ್ಕಾಲು ಭಾಗ ಆಧ್ಯಾತ್ಮಿಕ ಜಗತ್ತಾಗಿದೆ. ಈ ಕಾಲುಭಾಗದಲ್ಲಿ ಅನಂತವಾದ ವಿಶ್ವಗಳಿವೆ.
ಇದು ಆನೇಕ ಬ್ರಹ್ಮಾಂಡಗಳಲ್ಲಿ ನಾವು ಇರುವ ಬ್ರಹ್ಮಾಂಡವೂ ಒಂದು ಪ್ರತಿಯೊಂದು ಬ್ರಹ್ಮಾಂಡದಲ್ಲಿ ಲಕ್ಷಾಂತರ ಗ್ರಹಗಳಿವೆ. ಈ ಪೃಥ್ವಿ (ಭೂಮಿ) ಗ್ರಹ ಬ್ರಹ್ಮಾಂಡದಲ್ಲಿ ಒಂದು ಚಿಕ್ಕ ಗ್ರಹವಾಗಿದೆ. ಈ ಒಂದು ಪೃಥ್ವಿ ಗ್ರಹದಲ್ಲಿ ಅನೇಕ ನಗರಗಳಿವೆ. ಪ್ರತಿಯೊಂದು ನಗರಗಳಲ್ಲಿಯೂ ಎಷ್ಟೊಂದು ಸುದ್ದಿ ಪತ್ರಿಕೆಗಳಿವೆ. ಪ್ರತಿಯೊಂದು ಸುದ್ದಿ ಪತ್ರಿಕೆಗಳಿಗೆ ಎಷ್ಟೊಂದು ಮುದ್ರಣಗಳಿವೆ. ಇದು ಐಹಿಕ ಜಗತ್ತಿನ ಸ್ಥಿತಿ.
ಈ ಆಧ್ಯಾತ್ಮಿಕ ಜಗತ್ತನ್ನು ಪರಿಗಣಿಸಿದರೆ ಇದು ಐಹಿಕ ಜಗತ್ತಿಗಿಂತಲೂ ಮೂರು ಪಟ್ಟು ದೊಡ್ಡದಾಗಿದೆ. ಇದರಲ್ಲಿ ಅನೇಕ ಆಧ್ಯಾತ್ಮಿಕ ಗ್ರಹಗಳು, ಅನೇಕ ವಿಶ್ವಗಳು, ಅನೇಕ ಚಟುವಟಿಕೆಗಳು ಇವೆ. ಆದ್ದರಿಂದ ಭಗವಂತನ ಬಗ್ಗೆ ದಿನಕ್ಕೊಂದು ಪತ್ರಿಕೆಯಲ್ಲಿ ನಿಮಿಷಕ್ಕೊಂದು ಪತ್ರಿಕೆಯನ್ನು ಪ್ರಕಟಿಸಬಹುದು. ದುರ್ದೈವವಾಗಿ ಇಲ್ಲಿ ಗ್ರಾಹಕರು ಇಲ್ಲ.
ಅದೇ ನಮಗೆ ಕಷ್ಟವಾಗಿರುವುದು. ಲೌಕಿಕ ವಿಷಯಗಳಿಗೆ ಸಾಕಷ್ಟು ಜನ ಗ್ರಾಹಕರು, ಓದುಗರು ಸಿಗುತ್ತಾರೆ. ಆದರೆ ಆಧ್ಯಾತ್ಮಿಕ ವಿಷಯಗಳಿಗೆ ಗ್ರಾಹಕರಿಲ್ಲ. ನೀವು ಒಂದು ದಿನಪತ್ರಿಕೆಯ ಬಗ್ಗೆ ಯೋಚಿಸುತ್ತಿದ್ದೀರಿ. ನಾವು ಪ್ರತಿಯೊಂದು ಸೆಕೆಂಡಿಗೂ ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಿ ಸಿದಂತೆ ಸುದ್ದಿ ಪತ್ರಿಕೆಯನ್ನು ಪ್ರಕಟಿಸಬಹುದು.
ನಾವು ಆಧ್ಯಾತ್ಮಿಕ ಜಗತ್ತಿನ ಸಮಾಚಾರದ ಬಗ್ಗೆ ಆಸಕ್ತಿ ಹೊಂದಿರಬೇಕು. ಯಾವ ಮನುಷ್ಯ – ಏಕಾಂತ ಮತಯೋ ಗತಿ – ”ಈ ಜೀವನದಲ್ಲಿ ನಾನು ಭಗವದ್ಭಾಮವೆಂಬ ನನ್ನ ಮನೆಗೆ ಪುನಃ ಮರಳಬೇಕು” ಎ೦ದು ಯೋಚಿಸುತ್ತಾನೆಯೋ ಅಂತಹವನು ಕೃಷ್ಣಪ್ರಜ್ಞೆ ಪಡೆಯುತ್ತಾನೆ. ಆ ಸಂಕಲ್ಪವನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ.
ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ |
ಬಹುಶಾಖಾ ಹ್ಯನನ್ತಾಶ್ಚ
ಬುದ್ಧಯೋಽವ್ಯವಸಾಯಿನಾಮ್ ||
“ಯಾರು ಈ ಮಾರ್ಗದಲ್ಲಿ ಇರುವವರೋ ಅವರು ದೃಢಸಂಕಲ್ಪವನ್ನು ಹೊಂದಿರುತ್ತಾರೆ ಮತ್ತು ಅವರಿಗೆ ಒಂದೇ ಗುರಿ, ಪ್ರೀತಿಯ ಕುರುನಂದನನೇ, ನಿಶ್ಚಯ ಸ್ವಭಾವವಿಲ್ಲದವರ ಬುದ್ದಿಗೆ ಅನೇಕ ಶಾಖೆಗಳಿರುತ್ತವೆ.”
ಒಬ್ಬಈ ರೀತಿ ಯೋಚಿಸಬೇಕು. ”ಈ ಜೀವನ ನಾಯಿ, ಬೆಕ್ಕುಗಳಂತೆ ಸಾಮಾನ್ಯ ಜೀವನವಲ್ಲ. ಇದು ಮಾನವ ಜೀವನ, ನನ್ನಲ್ಲಿ ಪ್ರಗತಿಪೂರ್ಣ ಬುದ್ಧಿಮತ್ತೆ ಇದೆ. ನಾನು ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಂಡರೆ ಈ ಜೀವನದಲ್ಲಿಯೇ ಭಗವದ್ಧಾಮಕ್ಕೆ ಮರಳಬಹುದು. ಆದ್ದರಿಂದ ನಾನೇಕೆ ನಾಯಿ ಬೆಕ್ಕುಗಳಂತೆ ನನ್ನ ಸಮಯವನ್ನು ಹಾಳು ಮಾಡಿಕೊಳ್ಳಬೇಕು?” ಈ ಸಂಕಲ್ಪದ ಆವಶ್ಯಕತೆಯೂ ಇದೆ.
ನಾಯಿ ಮತ್ತು ಬೆಕ್ಕುಗಳು ತಿನ್ನುವುದರಲ್ಲಿ ಮಲಗುವುದರಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ಮಗ್ನವಾಗಿದ್ದು ಒಂದು ದಿನ ಅವು ಸಾಯುತ್ತವೆ. ಆದ್ದರಿಂದ ಅವರ ರೀತಿಯಲ್ಲಿ ನಾನೇಕೆ ನನ್ನ ಜೀವನವನ್ನು ವ್ಯರ್ಥಮಾಡಿಕೊಳ್ಳಲಿ? ನನಗೆ ಒಳ್ಳೆಯ ಬುದ್ಧಿ ಇದೆ. ಕೃಷ್ಣ ನನಗೆ ಒಳ್ಳೆಯ ಜೀವನವನ್ನು ಕೊಟ್ಟಿದ್ದಾನೆ. ನಾನು ಒಂದು ಒಳ್ಳೆಯ ಕೋಣೆಯಲ್ಲಿ ಮಲಗಿಕೊಳ್ಳಬಹುದು. ನಾಯಿ, ಬೆಕ್ಕುಗಳಂತೆ ಹಾದಿಯಲ್ಲಲ್ಲ.”
ಕೃಷ್ಣ ನಮಗೆ ಒಳ್ಳೆಯ ಆಹಾರ – ಹಣ್ಣುಗಳು, ಧಾನ್ಯಗಳು, ಹಾಲು ತನಗೆ ಸಮರ್ಪಿಸುವಂತಹ ಆಹಾರವನ್ನೆಲ್ಲ ಕೊಟ್ಟಿದ್ದಾನೆ. ಮಾನವ ಜೀವಿಗಳಿಗೆ, ಪ್ರಾಣಿಗಳಿಗೆ ಬೇರೆ ಬೇರೆ ರೀತಿಯ ಆಹಾರವನ್ನು ಅವನು ಒದಗಿಸಿದ್ದಾನೆ. ಕೃಷ್ಣ ಹಂದಿಗಳಿಗೆ ಹೇಸಿಗೆ ಮತ್ತು ಮನುಷ್ಯರಿಗೆ ಹಾಲು, ಧಾನ್ಯ ಇತರ ವಸ್ತುಗಳನ್ನು ಕೊಟ್ಟಿದ್ದಾನೆ.
ಎಲ್ಲರ ಆಹಾರ ಎಲ್ಲರಿಗೂ ಅನ್ವಯವಾಗುವುದಿಲ್ಲ. ಒಬ್ಬ ಮನುಷ್ಯನಿಗೆ ಆಗುವ ಆಹಾರ ಇನ್ನೊಬ್ಬನಿಗೆ ವಿಷ” ಹೇಸಿಗೆ ಎಂಬುದು ಒಂದು ತರಹದ ಆಹಾರ. ಎಲ್ಲವೂ ಒಂದು ರೀತಿಯ ಆಹಾರ. ಕಲ್ಲು ಕೂಡ ಆಹಾರವೇ. ಪಾರಿವಾಳಗಳು ಕೂಡ ಕಲ್ಲಿನ ಹರಳುಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ.
ಆಫ್ರಿಕಾದ ಅರಣ್ಯದಲ್ಲಿರುವ ಗೊರಿಲ್ಲಾಗಳು ಕಬ್ಬಿಣದ ಗುಂಡುಗಳಿಗಿಂತಲೂ ಗಟ್ಟಿಯಾಗಿರುವ ಹಣ್ಣುಗಳನ್ನು ತಿನ್ನುತ್ತವೆ. ನೀವು ಬುಲೆಟನ್ನು ಸುತ್ತಿಗೆಯಿಂದ ಬಡಿದು ಬಗ್ಗಿಸಬಹುದು. ಆದರೆ ಆ ಹಣ್ಣನ್ನು ಬಗ್ಗಿಸಲು ಸಾಧ್ಯವಿಲ್ಲ. ಹೇಗೆ ನೀವು ಶೇಂಗಾಬೀಜ ತಿನ್ನುತ್ತೀರೋ ಹಾಗೆಯೇ ಗೊರಿಲ್ಲಗಳು ಆ ಹಣ್ಣುಗಳನ್ನು ಅಗಿಯುತ್ತವೆ. (ನಗು…)
ಯಾವ ಮಾನವ ಜೀವಿಗಳು ಭಗವದ್ಧಾಮಕ್ಕೆ ಮರಳಬೇಕೆಂದು ಇದ್ದಾರೋ ಅವರಿಗೂ ಕೂಡ ಒಂದು ರೀತಿಯ ಆಹಾರವಿದೆ. ಅವರಿಗೆ ಮಾಂಸ ಭೋಜನವಿಲ್ಲ. ಭಗವದ್ಧಾಮಕ್ಕೆ ಹೋಗುವವರಿಗೆ ಕಚೋರಿ, ರಸಗುಲ್ಲಾ, ಪೂರಿಸಾಗು ಆಹಾರವಾಗಿದೆ. “ನೀವು ಏನನ್ನು ತಿನ್ನುತ್ತೀರೋ ಅದೇ ಆಗಿರುತ್ತೀರಿ.”
ನೀವು ಹೇಸಿಗೆ ತಿಂದರೆ ಅದರಂತೆಯೇ ಆಗುತ್ತೀರಿ. ಇದೆಲ್ಲ ಆದ ಮೇಲೆ ನಿಮ್ಮ ದೇಹ ಕೂಡ ಹೇಸಿಗೆಯಾಗಿರುತ್ತದೆ. ಮರಣದನಂತರ ನಮ್ಮ ದೇಹ ಹೇಸಿಗೆ, ಬೂದಿ ಅಥವಾ ಭೂಮಿಯಾಗುತ್ತದೆ. ಭೂಮಿಯಲ್ಲಿ ಈ ದೇಹವನ್ನು ಹೂಳಿದಾಗ ದೇಹ ಸ್ವಲ್ಪಕಾಲದನಂತರ ಮಣ್ಣಾಗಿ ಭೂಮಿಯಾಗುತ್ತದೆ.

ಹಿಂದೂಗಳ ರೀತಿ ಅದನ್ನು ಸುಟ್ಟರೆ ಅದು ಬೂದಿಯಾಗುತ್ತದೆ. ಪಾರ್ಸಿಗಳಂತೆ ಸತ್ತನಂತರ ಈ ದೇಹವನ್ನು ಎಸೆದರೆ ಅದು ಪ್ರಾಣಿಗಳಿಂದ, ಹದ್ದುಗಳಿಂದ ತಿನ್ನಲ್ಪಡುತ್ತದೆ. ಆಗ ಈ ದೇಹವು ಹದ್ದಿನ ದೇಹದಲ್ಲಿ ಹೇಸಿಗೆಯಾಗುತ್ತದೆ ಅಷ್ಟೆ.
ನಮ್ಮ ಈ ಸುಂದರವಾದ ದೇಹವು ಸತ್ತನಂತರ ಬೂದಿ, ಭೂಮಿ ಇಲ್ಲ ಹೇಸಿಗೆಯಾಗುತ್ತದೆ. ನಾವು ಈ ಬೂದಿ, ಭೂಮಿ, ಹೇಸಿಗೆಯಾಗಲು ಇಷ್ಟೊಂದು ಶ್ರಮಪಡುತ್ತಿದ್ದೇವೆ. ದೇಹದಲ್ಲಿ ವಾಸಿಸುವವನನ್ನು ಮರೆತುಬಿಟ್ಟಿದ್ದೇವೆ. ಪ್ರಗತಿ ಹೊಂದಿದ ವಿಜ್ಞಾನಿಗಳೊಂದಿಗೆ ನಮ್ಮ ಆಧುನಿಕ ಸಮಾಜದ ಸ್ಥಿತಿ ಇದಾಗಿದೆ.
ಯಾರು “ನಾನು ಈ ದೇಹವಾಗಿದ್ದೇನೆ” ಎಂದು ಯೋಚಿಸುತ್ತಾರೋ ಅವರು ಮೂರನೆಯ ದರ್ಜೆಯ ಮೂಢರು. ಪ್ರಸ್ತುತ ಈಗಿನ ಜಗತ್ತು ಕೇವಲ ಮೂರನೆಯ ದರ್ಜೆಯ ಮೂಢರನ್ನು ಹೊಂದಿದೆ. ಇಲ್ಲಿ ಪ್ರತಿಯೊಬ್ಬರು “ನಾನು ಅಮೆರಿಕನ್”, “ನಾನು ಭಾರತೀಯ”, “ನಾನು ಬಿಳಿಯ”, “ನಾನು ಕರಿಯ”, “ನಾನು ಹಿಂದೂ, “ನಾನು ಮುಸ್ಲಿಂ’, “ನಾನು ಕ್ರೈಸ್ತ” ಎಂದು ಯೋಚಿಸುತ್ತಿರುತ್ತಾರೆ. ಇದು ”ನಾನು ಈ ದೇಹ” ಎ೦ದು ಸದಾ ಯೋಚಿಸುವಂಥದ್ದಾಗಿದೆ ಅಷ್ಟೆ.
ಈ ಒಂದು ತಪ್ಪು ಕಲ್ಪನೆಯಿಂದ ನಾವು ಶುದ್ಧರಾಗಬೇಕು. ವಿರಜೇನ ಆತ್ಮನೈವ, ವಿರಜೇನ ಎಂದರೆ ಸಂಪೂರ್ಣವಾಗಿ ಶುದ್ಧವಾಗುವುದು. ರಜ ಎಂದರೆ ಐಹಿಕ ಜಗತ್ತು” ಮತ್ತು ವಿ ಎಂದರೆ ವಿಗತ’ ”ಇಲ್ಲದಿರುವುದು, ನಾವು ಸಂಪೂರ್ಣವಾಗಿ ಪರಿಶುದ್ಧತೆಯ ಹಂತಕ್ಕೆ ಬರುವುದು ಬಹಳ ಕಷ್ಟವಾಗಿರುವುದು.
ಆದುದರಿಂದ ಇಲ್ಲಿ ಹೇಳಲ್ಪಟ್ಟಿದೆ, ಅವಪುರ್ ದುರವಪಂ. ಈ ಹಂತವನ್ನು ನಾವು ನಮ್ಮ ಜೀವನದಲ್ಲಿ ತಲಪುವುದು ಬಹಳ ಕಷ್ಟವಿದೆ. ಆದರೆ ಪಾಂಡವರು ಇದನ್ನು ಸಾಧಿಸಿದರು. ಯಾರಿಗೆ ಇದು ಕಷ್ಟವಾಗಿದೆ? ಅಸದ್ ಭಿಃ, ಯಾರು ಅಶಾಶ್ವತವಾದುವುಗಳಿಗೆ ಅಂಟಿಕೊಂಡಿರುತ್ತಾರೋ ಅವರಿಗೆ.
ಅಸತ್ ಎಂದರೆ ಆಶಾಶ್ವತವಾದುದು ಎರಡು ರೀತಿಯ ವಸ್ತುಗಳಿವೆ. ಅವುಗಳಲ್ಲಿ ಒಂದು ಶಾಶ್ವತವಾದುದು, ಮತ್ತೊಂದು ಅಶಾಶ್ವತವಾದುದು. ಅಶಾಶ್ವತವಾದ ವಸ್ತುಗಳು ಕೆಲವು ನಿಮಿಷಗಳು, ಕೆಲವು ಘಂಟೆಗಳು, ಕೆಲವು ವರ್ಷಗಳವರೆಗೂ ಮಾತ್ರ ಇರಬಹುದು. ಈ ಐಹಿಕ ಜಗತ್ತು ಅಸತ್ ಎಂದರೆ ಅಶಾಶ್ವತವಾಗಿದೆ.
ಏಕೆಂದರೆ ಐಹಿಕ ದೇಹವು ಅಸ್ತಿತ್ವದಲ್ಲಿರುವುದಿಲ್ಲ. ಅದು ಎಲ್ಲರಿಗೂ ಗೊತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಈ ದೇಹವು ನಿರ್ದಿಷ್ಟ ದಿನಾಂಕದಲ್ಲಿ ಹುಟ್ಟಿ ಹಲವು ವರ್ಷಗಳವರೆಗೂ ಮುಂದುವರಿದು ತಮ್ಮ ಉಪಪದಾರ್ಥವನ್ನು ತಯಾರಿಸಿ, ವಿವಿಧ ರೂಪಗಳಲ್ಲಿ ಬದಲಾವಣೆ ಹೊಂದಿ ವೃದ್ಧಾಪ್ಯ ಪಡೆದು ಒಂದು ದಿನ ಕೃಶವಾಗಿ ಮರಣ ಹೊಂದುತ್ತದೆ.
ಇವುಗಳಿಗೆ ಷಡ್ ವಿಕಾರ “ಆರು ಬದಲಾವಣೆ” ಎಂದು ಹೇಳಲಾಗುತ್ತದೆ. ಇದು ಪ್ರಗತಿಯಲ್ಲ. ಒಬ್ಬ ವಯಸ್ಸಿನಲ್ಲಿ ಪ್ರಗತಿ ಹೊಂದುತ್ತಿದ್ದಾನೆ ಎಂದರೆ ಅದು ನಿಜವಾದ ಪ್ರಗತಿಯಲ್ಲ. ಅವನು ಸಾವಿಗೆ ಹೋಗುತ್ತಿದ್ದಾನೆ ಎಂದರ್ಥ. ನಾನು 78 ವರ್ಷದವನಾಗಿದ್ದೇನೆ. ಆದ್ದರಿಂದ ನಾನು ಈಗಾಗಲೇ 78 ವರ್ಷ ಸತ್ತಿದ್ದೇನೆ. ನನಗೆ ಬಹುಶಃ 2 ರಿಂದ 5 ವರ್ಷ ಆಯಸ್ಸು ಉಳಿದಿರಬಹುದು. ಜನರು ಹೇಳುತ್ತಾರೆ “ಪ್ರಗತಿ ಹೊಂದಿದ ಯುಗ’ ಎನ್ನುತ್ತಾರೆ. ಅಲ್ಲ ಇದು ಸಾವಿನಲ್ಲಿ ಪ್ರಗತಿ ಹೊಂದುತ್ತಿರುವುದು ಎಂದರ್ಥ.
ಇದೇ ಅಸತ್ ಎನ್ನುವುದರ ಅರ್ಥ. ನಾನು ಎಂಬ ದೇಹ ಉಳಿಯುವುದಿಲ್ಲ. ಅದು ಹುಟ್ಟಿದ ಕ್ಷಣದಿಂದಲೇ ಸಾಯುತ್ತಿದೆ. ನೀವು ಒಬ್ಬತಾಯಿಯ ಬಳಿ ನಿಮ್ಮ ಮಗುವಿಗೆ ಎಷ್ಟು ವಯಸ್ಸು ಅಂತ ಕೇಳಿ. ಆಗ ತಾಯಿ ಹೇಳುತ್ತಾಳೆ ನನ್ನ ಮಗುವಿಗೆ ಒಂದು ತಿಂಗಳು” ಎಂದು. ಅಂದರೆ ಮಗು ಈಗಾಗಲೇ ಒಂದು ತಿಂಗಳು ಸತ್ತಿದೆ ಎಂದರ್ಥ. ಅದು ಸಾಯುವುದಕ್ಕೆ ಕೆಲವು ವರ್ಷಗಳು, ತಿಂಗಳು ಆ ಮಗುವಿಗೆ ಉಳಿದಿದೆಯೆಂದು ಅರ್ಥ. ಅವನು ಸಾವಿಗಾಗಿ ಕಾಯುತ್ತಿದ್ದಾನೆ.
ನಮ್ಮ ಜೀವಿತಾವಧಿಯೂ ಕೂಡ ಅಸತ್, ಐಹಿಕ ಅಸ್ತಿತ್ವವೂ ಕೂಡ ಅಸತ್. ಆದ್ದರಿಂದ ನರೋತ್ತಮದಾಸ ಠಾಕುರರು ಈ ರೀತಿ ಹಾಡುತ್ತಾರೆ. ಸತ್‌ಸಂಗ ಛಾಡಿ ಕೈನು ಅಸತೇ ವಿಲಾಸ ತೇ ಕಾರಣೇ ಲಗೀಲ ಯೇ ಕರ್ಮಬಂಧ ಫನ್ ಸಾ. “ನಾನು ಆಧ್ಯಾತ್ಮಿಕ ಸಮಾಜದ ಸತ್ಸಂಗವನ್ನು ಬಿಟ್ಟು ಐಹಿಕ ಸಮಾಜದೊಂದಿಗೆ ಬೆರೆತಿದ್ದೇನೆ. ಆದ್ದರಿಂದ ನಾನೊಂದು ಕರ್ಮದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಒಂದು ಕ್ರಿಯೆ ಮತ್ತೊಂದು ಪ್ರಕ್ರಿಯೆಯನ್ನು ಉಂಟುಮಾಡುತ್ತದೆ.”
ಅಶಾಶ್ವತವಾದ ವಸ್ತುಗಳೊಂದಿಗೆ ಯಾರು ಬೆರೆತಿರುವರೋ ಅವರಿಗೆ ಆಧ್ಯಾತ್ಮಿಕ ಸಾಕ್ಷಾತ್ಕಾರ ಕಷ್ಟ, ಏಕೆ? ವಿಷಯಾತ್ಮಾಭಿಃ, ಏಕೆಂದರೆ ಅವರು ಐಹಿಕ ಜೀವನದಲ್ಲಿ ನಾಲ್ಕು ತತ್ತ್ವಗಳಿಗೆ ಆಕರ್ಷಿತರಾಗಿದ್ದಾರೆ ತಿನ್ನುವುದು, ಮಲಗುವುದು, ಲೈಂಗಿಕ ಜೀವನ ಮತ್ತು ಸಾವು. ಈ ನಾಲ್ಕು ವಿಷಯಗಳ ಆಸಕ್ತಿಗಿಂತಲೂ ನಾವು ಮೇಲ್ಮಟ್ಟಕ್ಕೆ ಹೋಗಬೇಕು.
ಒಬ್ಬ ಬುದ್ಧಿನೆಟ್ಟಗಿರುವನು ಇದನ್ನು ಯೋಚಿಸಬೇಕು. ”ಈ ಎಲ್ಲ ಆಸಕ್ತಿಗಳು ಪ್ರಾಣಿಗಳಿಗೂ ಕೂಡ ಇವೆ. ಆದ್ದರಿಂದ ಇವಷ್ಟೇ ವಸ್ತುಗಳಲ್ಲಿ ನಾನು ಆಸಕ್ತಿ ಹೊ೦ದಿದರೆ ನನಗೂ, ಒಂದು ನಾಯಿಗೂ ಏನು ವ್ಯತ್ಯಾಸವಿದೆ?” ಅದರಲ್ಲಿ ಹೆಚ್ಚಿನದೇನು ಇದೆ? ಇದಕ್ಕೆ ಸಂಬಂಧಿಸಿದ ವಿವರಣೆ ಭಗವದ್ಗೀತೆಯಲ್ಲಿ ಇದೆ.
ಅವಿನಾಶಿ ತುತದ್ ವಿದ್ಧಿಯೇನ ಸರ್ವಂ ಇದ ನ ತತಂ, ಈ ದೇಹವು ನಾಶವಾಗುವಂತದ್ದು. ಅದು ಅಸತ್, ಆದರೆ ಇದಕ್ಕಿಂತಲೂ ಭಿನ್ನವಾಗಿ ಮತ್ತೊಂದು ಏನೋ ಇದೆ ಅದೇ ಸತ್. ಅಂದರೆ ಶಾಶ್ವತವಾದುದು. ಅದೇನು? ಅದು ದೇಹದಾದ್ಯ೦ತ ಹರಡಿಕೊಳ್ಳುವಂತದ್ದು. ನಮ್ಮ ದೇಹವನ್ನು ಜಿಗುಟಿಕೊಂಡರೆ ಅದು ನೋಯುತ್ತದೆ ಏಕೆ? ಏಕೆಂದರೆ ಅಲ್ಲಿ ಪ್ರಜ್ಞೆಯಿದೆ.
ಪ್ರಜ್ಞೆಯು ಶಾಶ್ವತವಾಗಿದೆ. ಪ್ರಜ್ಞೆ ಎಂಬುದು ಈ ಶರೀರದಿಂದ ಹೊರಟುಹೋದರೆ ನೀವು ಈ ದೇಹದ ಕೈಯನ್ನು ಕತ್ತರಿಸಿದರೂ ಅಲ್ಲಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ.
ಯಾರು ಈ ಪ್ರಜ್ಞೆಯನ್ನು, ಅದರ ಮೂಲವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ಆಧ್ಯಾತ್ಮಿಕ ಜೀವನದ ಪ್ರಾರಂಭಿಕತೆಯೇ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ನಡೆಯುತ್ತದೆ. ಭಗವದ್ಗೀತೆಯಲ್ಲಿ ದೇಹಿನೋಸ್ಮಿನ್ ಯಥಾ ದೇಹೇ. ಈ ಅಶಾಶ್ವತವಾದ ದೇಹದಲ್ಲಿ ದೇಹದ ಮಾಲೀಕನಿದ್ದಾನೆ.
ಆ ಮೂಲ ಅಂಶವನ್ನು ಅರ್ಥ ಮಾಡಿಕೊಳ್ಳಿ, ಈ ಅಂಶವನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ? ವಿದೂತ-ಕಲ್ಮಷ ಯಾರು ಎಲ್ಲ ಪಾಪಗಳಿಂದ ಶುದ್ಧಿಪಡೆದುಕೊಂಡು ಬಂದಿರುತ್ತಾರೆ.” ಆದ್ದರಿಂದ ನಾವು ಸೂಚಿಸುತ್ತೇವೆ – “ಪಾಪಕರ್ಮಗಳಲ್ಲಿ ತೊಡಗಬೇಡಿರಿ.” ಪಾಪಕರ್ಮಗಳು ಯಾವುವು? ಮಾಂಸಾಹಾರ, ಅಮಲು ಪದಾರ್ಥ ಸೇವನೆ, ಜೂಜು ಮತ್ತು ಅನೈತಿಕ ಲೈಂಗಿಕತೆ.
ಆಧ್ಯಾತ್ಮಿಕ ಜೀವನವನ್ನು ಅರ್ಥಮಾಡಿಕೊಳ್ಳಬೇಕಾದರೆ ಇವೆಲ್ಲವುಗಳಿಂದ ಶುದ್ಧಮಾಡಿಕೊಂಡಿರಬೇಕು. “ನನಗೇನು ಬೇಕು ಅದನ್ನೇ ಮಾಡುತ್ತೇನೆ.” ಈ ರೀತಿ ನೀವು ಯೋಚಿಸಿದರೆ ಈ ಐಹಿಕ ಜೀವನದಲ್ಲಿ ಬದುಕಿನ ಅನಂತರ ಪುನಃ ಅಲ್ಲಿಯೇ ಹುಟ್ಟಿ ಬರಬೇಕು. ಅದು ಇಲ್ಲಿ ಮುಖ್ಯವಾದ ಅಂಶ.
ಧನ್ಯವಾದಗಳು.






Leave a Reply