ಅಜಾಮಿಳನ ಜೀವನ ವೃತ್ತಾಂತ

ಕಾನ್ಯಕುಬ್ಜ ಎನ್ನುವ ಹೆಸರಿನ ನಗರದಲ್ಲಿ ಅಜಾಮಿಳ ಎಂಬೊಬ್ಬ ಬ್ರಾಹ್ಮಣನಿದ್ದನು. ಒಂದು ಸಲ ಈ ಬ್ರಾಹ್ಮಣ ಅಜಾಮಿಳನು ಹೂವು ಹಣ್ಣುಗಳನ್ನು ಕುಯ್ದು ತರಲು ಅರಣ್ಯಕ್ಕೆ ಹೋದನು.

ಅವನು ಮನೆಗೆ ಹಿಂತಿರುಗುತ್ತಿದ್ದಾಗಿನ ಹಾದಿಯಲ್ಲಿ ಒಂದೆಡೆ ಒಬ್ಬ ನಾಚಿಕೆಗೆಟ್ಟ ಕಾಮುಕನು ವೇಶ್ಯೆಯೊಬ್ಬಳನ್ನು ಬಲವಾಗಿ ಆಲಂಗಿಸಿಕೊಂಡು ಚುಂಬಿಸುತ್ತಿದ್ದುದನ್ನು ಕಂಡನು. ಅ ವೇಶ್ಯೆಯು ಪಾನಮತ್ತಳಾಗಿದ್ದಳು. ಹಾಗಾಗಿ ಕಣ್ಣುಗಳು ತಿರುಗುತ್ತಿದ್ದವು. ಆಕೆಯ ವಸ್ತ್ರಗಳು ಸರಿದಿದ್ದವು. ಅಜಾಮಿಳನು ಅವಳನ್ನು ನೋಡಿದಾಗ, ಅವನ ಎದೆಯಾಳದಲ್ಲಿ ಸುಪ್ತವಾಗಿದ್ದ ಲೈಂಗಿಕ ಬಯಕೆಗಳು ಎಚ್ಚೆತ್ತವು. ಒಬ್ಬ ಸ್ತ್ರೀಯನ್ನು ಕಣ್ಣೆತ್ತಿ ಕೂಡ ನೋಡಬಾರದೆಂಬ ಶಾಸ್ತ್ರವಚನಗಳೇನೋ ಅವನಿಗೆ ನೆನಪಾದವು.

ಆದರೆ ಮನ್ಮಥನ ಬಲತ್ಕಾರದಿಂದ ಅವರು ತನ್ನ ಮನಸ್ಸನ್ನು ಹತೋಟಿಯಲ್ಲಿಡದಾದ. ಹೀಗೆ ಆ ಬ್ರಾಹ್ಮಣನು ತನ್ನ ವಿವೇಕವನ್ನೆಲ್ಲಾ ಕಳೆದುಕೊಂಡು ಸದಾ ಆ ವೇಶ್ಯೆಯನ್ನು ಕುರಿತೇ ಚಿಂತಿಸುತ್ತಿದ್ದ. ಅತಿ ಸ್ವಲ್ಪಕಾಲದಲ್ಲೇ ಆ ವೇಶ್ಯೆಯನ್ನು ತನ್ನ ಮನೆಯ ಆಳಾಗಿ ನಿಯಮಿಸಿಕೊಂಡ. ಅಷ್ಟೇ ಅಲ್ಲ ಬ್ರಾಹ್ಮಣನ ಎಲ್ಲ ಲಕ್ಷಣಗಳನ್ನೂ ತ್ಯಜಿಸಿದ.

ಹೀಗೆ ಅಜಾಮಿಳನು ತನ್ನ ತಂದೆಯಿಂದ ಬಂದಿದ್ದ ಹಣವನ್ನೆಲ್ಲಾ ಆ ವೇಶ್ಯೆಯನ್ನು ತೃಪ್ತಿಪಡಿಸಲು ಬಳಸಿದ. ಗೌರವಾನ್ವಿತ ಕುಟುಂಬದಿಂದ ಬಂದವಳೂ, ಬಹು ಚೆಲುವೆಯೂ ಆಗಿದ್ದ ತನ್ನ ಹೆಂಡತಿಯನ್ನು ಕೂಡ ಅವನು ಬಿಟ್ಟುಬಿಟ್ಟ. ಹಣಕ್ಕಾಗಿ ಅಜಾಮಿಳನು ಇತರರನ್ನು ಬಂಧಿಸಿ ಪೀಡಿಸುತ್ತಿದ್ದ. ಅವರೊಡನೆ ಜೂಜಾಡಿ ಅವರನ್ನು ಕಪಟದಿಂದ ಸೋಲಿಸುತ್ತಿದ್ದ.

ಕೆಲವರನ್ನು ನೇರವಾಗಿಯೇ ಸುಲಿದ. ಹೀಗೆ ಅವನು ಅತ್ಯಂತ ಹೇಯ ಹಾಗೂ ಪಾಪಪೂರಿತ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾಲ ಕೆಳೆಯುತ್ತಿದ್ದಾಗ ಅವನ ಆಯಸ್ಸು ಎಂಬತ್ತೆಂಟು ವರ್ಷಗಳಷ್ಟು ಕಳೆಯಿತು. ಆ ಮುದುಕಿನಿಗೆ ಹತ್ತು ಜನ ಮಕ್ಕಳಾದರು. ಆ ಮಕ್ಕಳಲ್ಲಿ ಕೊನೆಯವನು ನಾರಾಯಣ ಎಂಬ ಹೆಸರಿನ ಮಗು. ಮೂರ್ಖ ಅಜಾಮಿಳನು ಸಾಯುವ ಹೊತ್ತು ಬಂತು. ಆ ಹೊತ್ತಿನಲ್ಲಿ ಅವನು ವಿಶೇಷವಾಗಿ ತನ್ನ ಕೊನೆಯ ಮಗು ನಾರಾಯಣನನ್ನೇ ಕುರಿತು ಚಿಂತಿಸುತ್ತಿದ್ದ.

ಇತ್ತ ಅಸಹ್ಯವಾಗಿ ಕಾಣುತ್ತಿದ್ದ ಹಾಗೂ ಕೈಗಳಲ್ಲಿ ಹಗ್ಗಗಳನ್ನು ಹಿಡಿದಿದ್ದ ಮೂವರನ್ನು ಅಜಾಮಿಳನು ಕಂಡನು. ಆ ದೂತರು ಅವನನ್ನು ಯಮರಾಜನ ಧಾಮಕ್ಕೆ ಕರೆದೊಯ್ಯಲು ಬಂದಿದ್ದರು. ತನ್ನ ಕೊನೆಯ ಮಗುವಿನಲ್ಲಿ ಬಹು ವಾತ್ಸಲ್ಯವನ್ನಿರಿಸಿಕೊಂಡಿದ್ದ ಅಜಾಮಿಳನು ಅವನ ಮಗುವಿನ ಹೆಸರು ಹಿಡಿದು ಜೋರಾಗಿ ಕೂಗಿದ. ಹೀಗೆ ಕಣ್ಣೀರುಗರೆಯುತ್ತಾ ಹೇಗೋ ಅಂತು ಅಜಾಮಿಳನು ನಾರಾಯಣನ ಪವಿತ್ರನಾಮವನ್ನು ಜಪಿಸಿದ.

ತಮ್ಮ ಒಡೆಯನ ಹೆಸರನ್ನು ಅಜಾಮಿಳನು ಅಪರಾಧ ರಹಿತವಾಗಿ ಜಪಿಸಿದ್ದನ್ನು ಕೇಳಿದ ವಿಷ್ಣುದೂತರು ಆ ಕೂಡಲೇ ಅವನಿದ್ದ ಸ್ಥಳಕ್ಕೆ ಬಂದರು. ಅಜಾಮಿಳನು ತುಂಬ ಆತಂಕದಿಂದ ನಾರಾಯಣನ ಹೆಸರನ್ನು ಜಪಿಸಿದ್ದ. ಯಮದೂತರು ಅಜಾಮಿಳನ ಹೃದಯಾಂತರಾಳದಿಂದ ಅವನ ಆತ್ಮವನ್ನು ಕೀಳುವುದರಲ್ಲಿದ್ದರು. ಆಗ ಪ್ರತಿಧ್ವನಿ ನೀಡುವಂತಹ ಧ್ವನಿಯಲ್ಲಿ ಮಾತನಾಡಿದ ವಿಷ್ಣುದೂತರು ಅಜಾಮಿಳನ ಪ್ರಾಣವನ್ನೊಯ್ಯದಂತೆ ಯಮದೂತರನ್ನು ತಡೆದರು.

ಆಗ ಯಮದೂತರು, “ಯಮರಾಜನ ಅಧಿಕಾರ ವ್ಯಾಪ್ತಿಗೆ ಸವಾಲೆಸೆಯುವಷ್ಟು ಉದ್ಧಟರಾದ ನೀವು ಯಾರು?” ಎಂದು ಕೇಳಿದರು. ವಾಸುದೇವನ ದೂತರು ನಸುನಕ್ಕು ಗುಡಿಗಿನ ಹಾಗೆ ಗರ್ಜಿಸುವ ಧ್ವನಿಯಲ್ಲಿ ಹೇಳಿದರು: “ಅಜಾಮಿಳನು ತನ್ನ ಪಾಪಕರ್ಮಗಳಿಗೆ ಈಗಾಗಲೇ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾನೆ. ದಿಟದಲ್ಲಿ ಅವನು ಪಾಪ ನಿವೃತ್ತಿ ಮಾಡಿಕೊಂಡಿರುವುದು ಬರಿಯ ಒಂದು ಜನ್ಮದಲ್ಲಿ ಮಾಡಿದ ಪಾಪಕ್ಕೆ ಮಾತ್ರ ಅಲ್ಲ. ಮಿಲಿಯ ಗಟ್ಟಲೆ ಜನ್ಮಗಳಲ್ಲಿ ಎಸಗಿದ ಪಾಪಕೃತ್ಯಗಳಿಗೂ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾನೆ.

ಏಕೆಂದರೆ ಅವನು ಅಸಹಾಯಕ ಸ್ಥಿತಿಯಲ್ಲಿ ನಾರಾಯಣನ ಪವಿತ್ರನಾಮವನ್ನು ಜಪಿಸಿದ. ಪಾಪ ಮಾಡಿದ ವ್ಯಕ್ತಿಗಳು ಭಗವಾನ್‌ ಹರಿಯ ನಾಮಜಪವನ್ನು ಒಂದು ಸಲ ಮಾಡಿದ ಮಾತ್ರಕ್ಕೆ ಪರಿಶುದ್ಧರಾಗುವಷ್ಟು ವೇದಗಳಲ್ಲಿ ಹೇಳಲಾಗಿರುವ ಪ್ರಾಯಶ್ಚಿತ್ತ ವಿಧಿಗಳನ್ನು ನೇರವೇರಿಸಿ ಅಥವಾ ಪಾಪನಿವೃತ್ತಿ ಮಾಡಿಕೊಂಡರೂ ಪರಿಶುದ್ಧರಾಗುವುದಿಲ್ಲ.

ಒಂದು ನಿರ್ದಿಷ್ಟ ಔಷಧಕ್ಕೆ ಇರುವ ಪರಿಣಾಮ ಮಾಡುವ ಶಕ್ತಿಯನ್ನು ತಿಳಿಯದೆ ಒಬ್ಬ ವ್ಯಕ್ತಿಯು ಮದ್ದನ್ನು ಸೇವಿಸಿದರೆ ಅಥವಾ ಸೇವಿಸುವಂತೆ ಬಲಾತ್ಕರಿಸಲ್ಪಟ್ಟರೆ ಅವನಿಗೆ ತಿಳಿಯದಂತೆಯೇ ಅದು ಕಾರ್ಯವೆಸಗುತ್ತದೆ. ಏಕೆಂದರೆ ಅದರ ಶಕ್ತಿಯ ರೋಗಿಗೆ ಅದರ ಬಗೆಗಿರುವ ತಿಳುವಳಿಕೆಯನ್ನು ಅವಲಂಬಿಸಿಲ್ಲ. ಅದೇ ರೀತಿ, ಬೆಂಕಿಯು ಒಣಹುಲ್ಲನ್ನು ಸುಟ್ಟು ಬೂದಿ ಮಾಡಿಬಿಡುವಂತೆ, ತಿಳಿದಾಗಲಿ ತಿಳಿಯದೆಯಾಗಲಿ ಜಪಿಸಿದ ಪ್ರಭುವಿನ ಪವಿತ್ರನಾಮವು ವ್ಯಕ್ತಿಯ ಪಾಪಕರ್ಮಗಳ ಪ್ರತಿಕ್ರಿಯೆಗಳನ್ನೆಲ್ಲಾ ಸುಟ್ಟು ಬೂದಿ ಮಾಡುತ್ತದೆ.”

ಹೀಗೆಂದು ಹೇಳಿ ವಿಷ್ಣುದೂತರು ಅಜಾಮಿಳನನ್ನು ಯಮದೂತರ ಪಾಶಗಳಿಂದ ಬಿಡಿಸಿದರು. ಅನಿವಾರ್ಯವಾಗಿದ್ದ ಮರಣದಿಂದ ಅವನನ್ನು ರಕ್ಷಿಸಿದರು. ಅಜಾಮಿಳನು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದುದು ದೇವೋತ್ತಮ ಪರಮ ಪುರುಷನ ಆಜ್ಞಾಪಾಲಕರಾದ ವಿಷ್ಣುದೂತರ ಗಮನಕ್ಕೆ ಬಂತು. ಆದ್ದರಿಂದ ಅವರು ಇದ್ದಕ್ಕಿದ್ದಂತೆ ಅವನಿದ್ದ ಸ್ಥಳದಿಂದ ಮಾಯವಾದರು.

ಯಮದೂತರು ಹಾಗೂ ವಿಷ್ಣುದೂತರ ಮಧ್ಯೆ ನಡೆದ ಸಂಭಾಷಣೆಯನ್ನು ಕೇಳಿದ ಮೇಲೆ, ಪ್ರಕೃತಿ ಗುಣಗಳ ಅಧೀನದಲ್ಲಿ ಕಾರ್ಯಮಾಡುವ ಧರ್ಮತತ್ವಗಳನ್ನು ಅಜಾಮಿಳನು ಅರ್ಥಮಾಡಿಕೊಳ್ಳಲು ಸಮರ್ಥನಾದ. ಹೀಗೆ ಅವನು ಪೂರ್ಣ ಪರಿಶುದ್ಧ ಭಕ್ತನಾದ. ಆಗ ಅವನು ತನ್ನ ಪೂರ್ವದ ಪಾಪ ಕಾರ್ಯಗಳನ್ನು ಜ್ಞಾಪಕಕ್ಕೆ ತಂದುಕೊಳ್ಳುವುದು ಸಾಧ್ಯವಾಯಿತು.

ಅವುಗಳನ್ನು ಮಾಡಿದ್ದಕ್ಕಾಗಿ ಅವನು ಬಹುವಾಗಿ ವಿಷಾದಿಸಿದ. ಹೀಗೆ ಲೋಕದ ಎಲ್ಲ ಆಕರ್ಷಣೆಗಳಿಂದ ಮುಕ್ತನಾದವನಾಗಿ ಅವನು ಕೂಡಲೇ ಹರಿದ್ವಾರಕ್ಕೆ ಹೋಗಿ, ಅಲ್ಲೊಂದು ವಿಷ್ಣುದೇಗುಲದಲ್ಲಿ ನೆಲೆ ನಿಂತು, ಭಕ್ತಿಯೋಗ ಕ್ರಮವನ್ನು ಅಭ್ಯಾಸ ಮಾಡಿದ. ಅವನ ಬುದ್ಧಿ ಹಾಗೂ ಮನಸ್ಸು ಎರಡು ಪ್ರಭುವಿನ ರೂಪದ ಮೇಲೆ ನಿಂತಾಗ ಬ್ರಾಹ್ಮಣ ಅಜಾಮಿಳನು ಪುನಃ ಅದೇ ನಾಲ್ವರು ಸ್ವರ್ಗೀಯ ವ್ಯಕ್ತಿಗಳನ್ನು ಕಂಡ.

ವಿಷ್ಣುದೂತರನ್ನು ನೋಡಿದವನೇ ಅಜಾಮಿಳನು ದೇಹತ್ಯಾಗ ಮಾಡಿದ. ಅವನ ತನ್ನ ಮೂಲ ಆಧ್ಯಾತ್ಮಿಕ ಶರೀರವನ್ನು ಮರಳಿ ಪಡೆದ. ಆ ದೇಹವು ಭಗವಂತನ ಸಂಗಾತಿಗೆ ಒಪ್ಪುವಂತಹದಾಗಿತ್ತು. ವಿಷ್ಣುದೂತರ ಜೊತೆಯಲ್ಲಿ ಹೊರಟ ಅಜಾಮಿಳನು ಒಂದು ಬಂಗಾರದ ವಿಮಾನವನ್ನು ಏರಿ ಕುಳಿತ. ವಾಯುಮಾರ್ಗದಲ್ಲಿ ಸಂಚರಿಸುತ್ತಾ ಅವನು ನೇರವಾಗಿ ಐಶ್ವರ್ಯದೇವತೆಯ ರಮಣನಾದ ವಿಷ್ಣುವಿನ ಧಾಮಕ್ಕೆ ಹೋದ. ಮರಣ ಸಮಯದಲ್ಲಿ ಯಾತನೆಪಡುತ್ತಾ ಅಜಾಮಿಳನು ಪ್ರಭುವಿನ ಪವಿತ್ರನಾಮವನ್ನು ಉಚ್ಚರಿಸಿದ.

ಅವನ ಕೂಗು ಅವನ ಮಗನನ್ನು ಉದ್ದೇಶಿಸಿ ಹಾಕಲಾದದ್ದಾದರೂ ಅವನು ಭಗವದ್ಧಾಮಕ್ಕೆ ಮರಳಿದ. ಆದ್ದರಿಂದ ನಾವು ಪ್ರಭುವಿನ ಪವಿತ್ರ ನಾಮವನ್ನು ಅಪರಾಧವಿಲ್ಲದಂತೆ ಹಾಗೂ ಶ್ರದ್ಧೆಯಿಂದ ಜಪಿಸಿದರೆ ನಾವು ದೇವೋತ್ತಮನಲ್ಲಿಗೇ ಮರಳುತ್ತೇವೆ ಎನ್ನುವುದರಲ್ಲಿ ಅನುಮಾನವೆಲ್ಲಿದೆ?

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi