ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ, ಶ್ರೀಲ ಪ್ರಭುಪಾದರ ಗುರು, ಗೌಡಿಯ ಮಠದ ಸಂಸ್ಥಾಪಕ ಅವರು ಹೇಳಿದ ಕಥೆ.
ಒಂದು ದಿನ ಕುರುಡ ತನ್ನ ಮಾವನ ಮನೆಗೆ ಹೋಗುತ್ತಿದ್ದ. ಕೈಯಲ್ಲಿ ಒಂದು ಊರುಗೋಲನ್ನು ಹಿಡಿದುಕೊಂಡು ಅದರ ಸಹಾಯದಿಂದ ಸಾಗುತ್ತಿದ್ದ. ಹೀಗೆ ಒಂದು ಹೊಲದ ಮೂಲಕ ಹಾದು ಹೋಗುವಾಗ ಆತನಿಗೆ ಗೋವುಗಳನ್ನು ಮೇಯಿಸುತ್ತಿದ್ದ ಗೋಪಾಲಕ ಎದುರಾದ. “ಅಣ್ಣಾ, ನನಗೆ ಮಾವನ ಮನೆಗೆ ಹೋಗಲು ಸಹಾಯ ಮಾಡುವೆಯಾ?” ಎಂದು ಆತ ಗೋಪಾಲಕನನ್ನು ಕೇಳಿದ.

“ನನಗೆ ಪುರುಸೊತ್ತಿಲ್ಲ. ನಾನು ಇಷ್ಟೊಂದು ಗೋವುಗಳನ್ನು ನೋಡಿಕೊಳ್ಳಬೇಕು. ನಾನು ನಿನ್ನೊಂದಿಗೆ ನಿನ್ನ ಮಾವನ ಮನೆಗೆ ಬಂದರೆ ಈ ಗೋವುಗಳೆಲ್ಲ ತಪ್ಪಿಸಿಕೊಂಡು ಬಿಡುತ್ತವೆ. ನಾನು ನಿನಗೆ ಬೇರೆ ರೀತಿಯಲ್ಲಿ ಸಹಾಯ ಮಾಡಬಲ್ಲೆ. ನಾನೊಂದು ಬುದ್ಧಿವಂತ ಮತ್ತು ನಂಬಿಗಸ್ಥ ಗೋವನ್ನು ನಿನಗೆ ಕೊಡುತ್ತೇನೆ. ನೀನು ಅದರ ಬಾಲ ಹಿಡಿದುಕೋ, ಅದು ನಿನ್ನನ್ನು ಸುರಕ್ಷಿತವಾಗಿ ಮಾವನ ಮನೆಗೆ ಕರೆದೊಯ್ಯುತ್ತದೆ” ಎಂದು ಆ ಗೋಪಾಲಕ ಕುರುಡನಿಗೆ ಹೇಳಿದ.
ಹೀಗೆ ಗೋಪಾಲಕನ ಸಲಹೆ ಮೇರೆಗೆ ಕುರುಡ ಗೋವಿನ ಬಾಲವನ್ನು ಗಟ್ಟಿಯಾಗಿ ಹಿಡಿದುಕೊಂಡು ಮಾವನ ಮನೆಯತ್ತ ಹೊರಟ. ಗೋವು ಮುಂದೆ ಮುಂದೆ ಸಾಗಿತು. ಕುರುಡ ಅದರ ಬಾಲ ಹಿಡಿದು ಹಿಂದೆ ಸಾಗಿದ. ಆದರೆ ಸ್ವಲ್ಪ ಹೊತ್ತಿಗೆ ಆತ ಗೋವಿನ ಬಾಲವನ್ನು ಜೋರಾಗಿ ಜಗ್ಗಲಾರಂಭಿಸಿದ. ಅದಕ್ಕೆ ಭಯವಾಯಿತು. ಭಯ ಮತ್ತು ಗಾಬರಿಯಿಂದ ಓಡಲಾರಂಭಿಸಿತು. ಗೋವಿನ ಓಟದ ವೇಗಕ್ಕೆ ಹೊಂದಿಕೊಳ್ಳಲಾಗದ ಕುರುಡ ಮುಗ್ಗರಿಸಿ ಬಿದ್ದ. ಬಿದ್ದರೂ ಬಾಲ ಬಿಡಲಿಲ್ಲ. ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡ.

ಗೋವು ಆತನನ್ನು ದರ ದರನೆ ಎಳೆದುಕೊಂಡು ಓಡಲಾರಂಭಿಸಿತು. ಕುರುಡನನ್ನು ಕಲ್ಲು, ಮುಳ್ಳು, ಹೊಂಡ, ಗುಂಡಿ, ಪೊದೆಗಳ ಮೇಲೆಲ್ಲಾ ಎಳೆದುಕೊಂಡು ಓಡಿದ ಗೋವು, ನಡು-ನಡುವೆ ಹಿಂಗಾಲುಗಳಿಂದ ಆತನಿಗೆ ಜಾಡಿಸಿ ಒದೆಯುತ್ತಿತ್ತು. ಇದರಿಂದ ಕುರುಡನ ಬಟ್ಟೆಗಳೆಲ್ಲಾ ಸಂಪೂರ್ಣ ಚಿಂದಿಯಾದವು. ಮೈತುಂಬಾ ಗಾಯಗಳಾಗಿ ರಕ್ತ ಸುರಿಯಲಾರಂಭಿಸಿತು. ಇಷ್ಟಾದರೂ ಆತ ಗೋವಿನ ಬಾಲ ಬಿಡಲೇ ಇಲ್ಲ.
ಕೊನೆಗೂ ಗೋವಿನ ಬಾಲ ಹಿಡಿದ ಕುರುಡ ಮಾವನ ಮನೆ ತಲುಪಿದ. ಬಟ್ಟೆ ಹರಿದು ಬೆತ್ತಲಾಗಿ, ಮೈತುಂಭಾ ಗಾಯಗಳಾಗಿ ಆತ ಅತ್ಯಂತ ದಯನೀಯ ಸ್ಥಿತಿ ತಲುಪಿದ್ದ. ಆತನ ಅವಸ್ಥೆ ನೋಡಿ ಗೋವುಕಳ್ಳನಿರಬೇಕೆಂದು ತಪ್ಪಾಗಿ ಭಾವಿಸಿದ ಮಾವನ ಮನೆಯ ಸೇವಕರು ಮತ್ತಷ್ಟು ಥಳಿಸಿದರು. ಕಷ್ಟಪಟ್ಟು ಆತನ ಕೈಯಿಂದ ಗೋವಿನ ಬಾಲ ಬಿಡಿಸಿದರು. ಆ ಕುರುಡ ಇನ್ನಿಲ್ಲದ ಹಿಂಸೆ ಅನುಭವಿಸಿದ.

ಹೀಗೆ ಮೋಸ ಪ್ರವೃತ್ತಿ ಹೊಂದಿರುವ ಮೂರ್ಖರು ಸೂಕ್ತ “ಸದ್ಗುರು” (ಆಧ್ಯಾತ್ಮಿಕ ಗುರು) ವಿನ ಮೊರೆ ಹೋಗುವ ಬದಲು ಕಪಟ ಗುರುಗಳ ಸಲಹೆ ಪಡೆಯುತ್ತಾರೆ. ಇದರಿಂದಾಗಿ ಈ ಕಥೆಯು ಕುರುಡನಂತೆ ಇನ್ನಿಲ್ಲದ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ನಮ್ಮನ್ನು ದೈವತ್ವದೆಡೆಗೆ ಕೊಂಡೊಯ್ಯುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅನಧಿಕೃತ ದೈವ ಪ್ರತಿನಿಧಿಯು ನಮ್ಮನ್ನು ನೈಜ ಕಲ್ಯಾಣದೆಡೆ ಕರೆದೊಯ್ಯಲಾರ. ಆದ್ದರಿಂದ ಪ್ರತಿಯೊಬ್ಬರೂ ಸದ್ಗುರು ಶ್ರೀಕೃಷ್ಣನ, ಕೃಷ್ಣಪ್ರಜ್ಞೆಯನ್ನು ಸಂಪೂರ್ಣವಾಗಿ ಅರಿತ ಗುರುವಿನಲ್ಲಿ ಮೊರೆಹೋಗಬೇಕು.
(ಆಕರ:ಉಪಖ್ಯಾನೆ ಉಪದೇಶ)
Leave a Reply