ವಿಭಿನ್ನ ಭಕ್ಷ್ಯಗಳು
ವಿಭಿನ್ನ ಭಕ್ಷ್ಯಗಳನ್ನು ಭಕ್ತಿವೇದಾಂತ ದರ್ಶನ ಓದುಗರಿಗೆಂದೇ ಶ್ರೀಮತಿ ತುಳಸಿ ವೇದವ್ಯಾಸ ಅವರು ಬರೆದು ಕಳುಹಿಸಿದ್ದಾರೆ. ತಾವೂ ಮನೆಯಲ್ಲಿ ತಯಾರಿಸಿ ಶ್ರೀ ರಾಧಾಕೃಷ್ಣರಿಗರ್ಪಿಸಿ ಸೇವಿಸಿ ನೋಡಿ.
ಕ್ಯಾರೆಟ್ ಚಿತ್ರಾನ್ನ

ಬೇಕಾಗುವ ಪದಾರ್ಥ :
ಅಕ್ಕಿಯ ಅನ್ನ (ಉದುರಾಗಿ ಬೇಯಿಸಿದ್ದು) – 1 ಪಾವು
ಕ್ಯಾರೆಟ್ (ತುರಿದದ್ದು) – 250 ಗ್ರಾಂ
ಹಸಿಮೆಣಸಿಕಾಯಿ – 2
ಅರಿಶಿಣ ಪುಡಿ
ತುಪ್ಪ ಅಥವಾ ಎಣ್ಣೆ – 1 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – ಸ್ವಲ್ಪ
ಪುಡಿ ಮಾಡಲು ಬೇಕಾಗುವ ಪದಾರ್ಥ:
ಇಂಗು – ಕಡಲೇ ಗಾತ್ರ
ಉದ್ದಿನ ಬೇಳೆ – 3 ಚಿಕ್ಕ ಚಮಚ
ಒಣ ಕೊಬ್ಬರಿ ತುರಿ – 3 ಚಿಕ್ಕ ಚಮಚ
ಒಣ ಮೆಣಸಿನ ಕಾಯಿ – 2
ಮಾಡುವ ವಿಧಾನ : ಇಂಗು, ಉದ್ದಿನ ಬೇಳೆ, ಒಣ ಮೆಣಸು ಹದವಾಗಿ ಹುರಿದು ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಜೀರಿಗೆ ಒಗ್ಗರಣೆ ಇಟ್ಟು ಅದರಲ್ಲಿ ಕರಿಬೇವು, ಕ್ಯಾರೆಟ್ ತುರಿ, ಅರಿಶಿನ ಹಾಕಿ ಹುರಿಯಿರಿ. ಈಗ ಪುಡಿ ಮಾಡಿದ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 2 ನಿಮಿಷ ಹುರಿದು ನಿಂಬೆರಸ ಸೇರಿಸಿ, ಮೊದಲೇ ಮಾಡಿಟ್ಟ ಅನ್ನದೊಂದಿಗೆ ಸೇರಿಸಿ ಹದವಾಗಿ ಕಲಸಿ.
ಕರಿಬೇವು ಚಿತ್ರಾನ್ನ

ಬೇಕಾಗುವ ಪದಾರ್ಥ :
ಅಕ್ಕಿಯ ಅನ್ನ (ಉದುರಾಗಿ ಬೇಯಸಿದ್ದು) – 1 ಪಾವು
ಕರಿಬೇವು – 1 ಚಿಕ್ಕ ಕಟ್ಟು
ತೆಂಗಿನಕಾಯಿ – 1/2 ಹೋಳು
ಹಸಿ ಮೆಣಸಿನ ಕಾಯಿ – 5
ಹುಣಸೆಹಣ್ಣು (ಬಿಸಿ ಮಾಡಿದ್ದು) – ಗೋಲಿಗಾತ್ರ
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥ:
ಎಣ್ಣೆ – 1 ದೊಡ್ಡ ಚಮಚ ಎಣ್ಣೆ
ಎಳ್ಳು – 1 ಚಿಕ್ಕ ಚಮಚ
ಇಂಗು – 1 ಚಿಟಿಕೆ
ಮಾಡುವ ವಿಧಾನ : ಕರಿಬೇವು, ತೆಂಗಿನಕಾಯಿ, ಹಸಿ ಮೆಣಸಿನ ಕಾಯಿ, ಹುಣಸೆ ಹಣ್ಣು ಇವುಗಳನ್ನು ಮಿಕ್ಸಿಯಲ್ಲಿ ತಿರುವಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಎಳ್ಳು ಹಾಕಿ ಸಿಡಿದ ಅನಂತರ ಮಸಾಲೆ ಬೆರೆಸಿ, ಉಪ್ಪು ಬೆರೆಸಿ ಮಾಡಿಟ್ಟ ಅನ್ನದೊಂದಿಗೆ ಬೆರೆಸಿ.
ಎಳ್ಳನ್ನ

ಬೇಕಾಗುವ ಪದಾರ್ಥ :
ಗಟ್ಟಿ ಬೇಯಿಸಿದ ಅನ್ನ – 1 ಬಟ್ಟಲು
ಎಳ್ಳು – 4 ಚಿಕ್ಕ ಚಮಚ
ಕರಿ ಮೆಣಸು – 2 ಚಿಕ್ಕ ಚಮಚ
ಉದ್ದಿನ ಬೇಳೆ – 2 ಚಿಕ್ಕ ಚಮಚ
ಕೊಬ್ಬರಿ ತುರಿ – 1/4 ಗಿಟಕು
ಹುಣಸೆಹಣ್ಣು (ಅಥವಾ 1 ನಿಂಬೆಹಣ್ಣು) – ಸ್ವಲ್ಪ
ಇಂಗು – 2 ಚಿಟಿಕೆ
ಸಕ್ಕರೆ – 1 ಚಮಚ
ಎಳ್ಳೆಣ್ಣೆ – 1 ದೊಡ್ಡ ಚಮಚ
ಕಡಲೇ ಬೀಜ – ಸ್ವಲ್ಪ
ಕೊಬ್ಬರಿ ಎಣ್ಣೆ – 1 ಚಮಚ
ಮಾಡುವ ವಿಧಾನ : 1 ಚಮಚ ಕೊಬ್ಬರಿ ಎಣ್ಣೆಯಲ್ಲಿ ಇಂಗು, ಉದ್ದಿನ ಬೇಳೆ, ಕರಿ ಮೆಣಸು, ಹುರಿಯಿರಿ. ಅನಂತರ ಕೊಬ್ಬರಿ, ಎಳ್ಳು ಹಾಕಿ ಹದವಾಗಿ ಹುರಿದು ಪುಡಿಮಾಡಿಕೊಳ್ಳಬೇಕು. ಬಾಣಲೆಯಲ್ಲಿ ಎಳ್ಳೆಣ್ಣೆ ಬಿಸಿ ಮಾಡಿ ಅದರಲ್ಲಿ ಕಡಲೇ ಬೀಜ ಹಾಕಿ, ಕೆಂಪಾದಾಗ, ಮಾಡಿಟ್ಟ ಉಪ್ಪು ಸಕ್ಕರೆ ಮಿಶ್ರಣ ಮಾಡಿ ಅನ್ನಕ್ಕೆ ಬೆರಸುವುದು.
ಕ್ಯಾರೆಟ್ ತೊವ್ವ

ಬೇಕಾಗುವ ಪದಾರ್ಥ :
ಕ್ಯಾರೆಟ್ (ಗುಂಡಗೆ ಕತ್ತರಿಸಿ) – 500 ಗ್ರಾಂ
ತೆಂಗಿನಕಾಯಿ – 1 ಹೋಳು
ಹೆಸರು ಬೇಳೆ – 1 ಹಿಡಿ
ಚಕ್ಕೆ- ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಹಸಿ ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ : ಕ್ಯಾರೆಟ್ ಕತ್ತರಿಸಿದ್ದು ಮತ್ತು ಹೆಸರು ಬೇಳೆಯನ್ನು ಬೇಯಿಸಿ, ಚೆಕ್ಕೆ ತುಂಡಿನೊಂದಿಗೆ ತೆಂಗಿನ ಕಾಯಿಯನ್ನು ರುಬ್ಬಿ ಇಟ್ಟುಕೊಂಡು ಬೇಯಿಸಿದ ಕ್ಯಾರೆಟ್ ಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೀಳಿದ ಹಸಿ ಮೆಣಸು, ಕರಿಬೇವು ಹಾಕಿ ಕುದಿಸಿ, (ಜಾಸ್ತಿ ಕುದಿಸಬಾರದು), ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಸಿಹಿ ಕುಂಬಳ ಕಾಯಿ ಇಡ್ಲಿ

ಬೇಕಾಗುವ ಪದಾರ್ಥ :
ಅಕ್ಕಿ ರವೆ ಹುರಿಯುವುದು – 1 ಪಾವು
ಸಿಹಿ ಕುಂಬಳಕಾಯಿ ತುರಿ – 1 ಕೆ.ಜಿ
ತೆಂಗಿನ ಕಾಯಿ ತುರಿ – 1 ಹೋಳು
ಶುಂಠಿ (ಚಿಕ್ಕದಾಗಿ ಕತ್ತರಿಸಿ) – 2 ಇಂಚು
ಹಸಿ ಮೆಣಸಿನಕಾಯಿ – 7-8
ಕೊತ್ತಂಬರಿ ಸೊಪ್ಪು (ಹೆಚ್ಚುವುದು) – 1/2 ಕಟ್ಟು
ಉಪ್ಪು – ರುಚಿಗೆ ತಕ್ಕಷ್ಟು
ಅಡಿಗೆ ಸೋಡ – 2-3 ಚಿಟಿಕೆ
ಮಾಡುವ ವಿಧಾನ : ಎಲ್ಲವನ್ನೂ ಬೆರೆಸಿ ನೀರು ಚಿಮುಕಿಸಿ ಮಿಕ್ಸಿಯಲ್ಲಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಸೋಡ ಹಾಕಿ. ಕುಕ್ಕರಿನಲ್ಲಿ ಬೇಯಸಿ.
ಮುಳ್ಳು ಸೌತಕಾಯಿ ಸಿಹಿ ಅಪ್ಪ

ಬೇಕಾಗುವ ಸಾಮಗ್ರಿ :
ಅಕ್ಕಿ – 2 ಪಾವು
ಉದ್ದಿನ ಬೇಳೆ – 1/4 ಪಾವು
ಮೆಂತ್ಯ – 1 ಚಮಚ
ಇವುಗಳನ್ನು 2 ಗಂಟೆ ನೆನೆಹಾಕಿ
ತೆಂಗಿನ ಕಾಯಿ ತುರಿದದ್ದು – 1 ಹೋಳು
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – 1 ಅಚ್ಚು
ಮುಳ್ಳು ಸೌತೆ (ಸಣ್ಣ ಗಾತ್ರ ) – 1 ಎಳೆ
ಮಾಡುವ ವಿಧಾನ : ನೆನೆಸಿದ ಅಕ್ಕಿ, ಬೇಳೆ, ಮೆಂತ್ಯ, ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿ ಇಡಿ. ಅನಂತರ ಅದಕ್ಕೆ ಉಪ್ಪು ಬೆಲ್ಲ ಮಿಕ್ಸಿಯಲ್ಲಿ ನೀರು ಬೆರಸದೆ ರುಬ್ಬಿದ ಸೌತೆ ಸೇರಿಸಿ ಅಪ್ಪದ ಗುಳಿಗೆ ತುಪ್ಪ ಹಚ್ಚಿ ಅಪ್ಪ ಹೊಯ್ದು ಎರಡೂ ಕಡೆ ಬೇಯಿಸಿ. (ಹಿಟ್ಟು ಜಾಸ್ತಿ ಹುಳಿ ಬರಬಾರದು)
ಇದೇ ಹಿಟ್ಟಿಗೆ ಬೆಲ್ಲ ಹಾಕದೆ ಸೌತೆ ಕಾಯಿ, ಹಸಿ ಮೆಣಸಿನ ಕಾಯಿ, ಹಾಕಿ ಖಾರ ಅಪ್ಪ ಮಾಡಬಹುದು.
ಕಿತ್ತಳೆ ಸಿಪ್ಪೆ ಚಟ್ನಿ

ಬೇಕಾಗುವ ಪದಾರ್ಥ :
ಹೆಚ್ಚಿದ ಕಿತ್ತಳೆ ಸಿಪ್ಪೆ – 3 ಚಮಚ
ತೆಂಗಿನ ಕಾಯಿ – 1 ಹೋಳು
ಉದ್ದಿನ ಬೇಳೆ – 2 ಚಿಕ್ಕ ಚಮಚ
ಒಣ ಮೆಣಸು – 4
ಹಸಿ ಮೆಣಸು – 2
ಹುಣಸೆ ಹಣ್ಣು – ಚೂರು
ಇಂಗು – 2 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 1 ಚಮಚ
ಕೊಬ್ಬರಿ ಎಣ್ಣೆ (ಹುರಿಯಲು) – 1 ಚಮಚ
ಮಾಡುವ ವಿಧಾನ : ಕಿತ್ತಲೆ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ತುಪ್ಪದಲ್ಲಿ ಹುರಿಯಿರಿ. ಕೊಬ್ಬರಿ ಎಣ್ಣೆಯಲ್ಲಿ ಇಂಗು, ಉದ್ದಿನ ಬೇಳೆ, ಒಣ ಮೆಣಸು ಹುರಿದು, ತೆಂಗಿನಕಾಯಿ ಉಪ್ಪು ಹುಣಸೆ ಹಣ್ಣಿನೊಂದಿಗೆ ನುಣ್ಣಗೆ ರುಬ್ಬಿ ಅದರಲ್ಲಿ ಹಸಿ ಮೆಣಸು ಕಿತ್ತಲೆ ಸಿಪ್ಪೆ ಹಾಕಿ ತಿರುವಿ ತೆಗೆಯಿರಿ. (ಹೆಚ್ಚು ನೀರು ಹಾಕಬಾರದು, ಕಿತ್ತಲೆ ಸಿಪ್ಪೆ ತಾಜಾ ಇರಬೇಕು) ಕಿತ್ತಲೆ ಸಿಪ್ಪೆಗೆ ಬದಲು ದೊಡ್ಡಪತ್ರೆ ಎಲೆ, ಬೇಯಿಸಿದ ಮಂಗಳೂರು ಸೌತೆ ಸಿಪ್ಪೆ, ಸೀಮೆಬದನೆ ಸಿಪ್ಪೆ ಬೇಯಿಸಿದ ಸುವರ್ಣಗಡ್ಡೆಯನ್ನೂ ಉಪಯೋಗಿಸಬಹುದು.






Leave a Reply