ಗೈನೆಸ್ವಿಲ್ಲೆ, 29ನೇ ಜುಲೈ 1971
ಸಂದರ್ಶಕ: ಸಕಲ ವೈದಿಕ ಸಾಹಿತ್ಯ ಗ್ರಂಥಗಳು ಹಾಗೂ ಗುರುಶಿಷ್ಯ ಪರಂಪರೆಯ ಎಲ್ಲ ಮಹಾನ್ ಸಂತರು ದೃಢಪಡಿಸಿರುವಂತೆ ಅವನಿಗೆ (ಕೃಷ್ಣನಿಗೆ) ನಿರಂತರತೆ, ಆನಂದ ಹಾಗೂ ಜ್ಞಾನಗಳನ್ನೊಳಗೊಂಡ ದೇಹವಿದೆ. ಭಗವಂತನಿಗೆ ಅಸೀಮ ರೂಪಗಳೂ, ವಿಸ್ತರಣೆಗಳೂ ಇವೆ.

ಇರುತ್ತ ಅವನ ರೂಪಗಳಲ್ಲೆಲ್ಲಾ ಅವನ ಮೂಲರೂಪ – ದಿವ್ಯ ರೂಪ – ಗೋಪಾಲ ಬಾಲಕನದ್ದಾಗಿದೆ. ಈ ರೂಪವನ್ನು ಅವನು ತನ್ನ ಬಹು ಆಪ್ತ ಅಂತರಂಗದ ಭಕ್ತರಿಗೆ ಮಾತ್ರ ತೋರ್ಪಡಿಸುತ್ತಾನೆ. ವೈದಿಕ ಸಾಹಿತ್ಯ ಕೃತಿಗಳಲ್ಲಿ ಕೃಷ್ಣನು ಬೋಧಿಸುವುದು ಹೀಗೆಯೇ ಇದೆ. ನಾನು ಈಗ ಪ್ರಸ್ತಾಪಿಸಿದನಲ್ಲ ಗುರುಶಿಷ್ಯ ಪರಂಪರೆಯ ಸಂತರ ವಿಷಯ, ಅವರಲ್ಲೊಬ್ಬರು ನಮ್ಮ ಇಂದಿನ ಸಂಭಾಷಣೆಯ ಕಾಲದ ಅತಿಥಿಯಾಗಿದ್ದಾರೆ.
ಅವರು ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು. ಕೃಷ್ಣ ಸಿದ್ಧಾಂತವನ್ನಿವರು ಪಾಶ್ಚಾತ್ಯ ಜಗತ್ತಿಗೆ ಬೋಧಿಸಿದವರಲ್ಲಿ ಆದ್ಯರು. ಈ ಮಹನೀಯರು ಕೃಷ್ಣ ತತ್ತ್ವವನ್ನು ಬರೀ ಬಾಯಿ ಮಾತಿನಲ್ಲಷ್ಟೇ ಅಲ್ಲದೆ ಆಚರಣೆಯಲ್ಲಿಯೂ ಬೋಧಿಸುತ್ತಾರೆ.
ಅವರು ಈ ದೇಶಕ್ಕೆ 1965ರಲ್ಲಿ ಆಗಮಿಸಿದರು. ಬ೦ದದ್ದು ಅವರ ಗುರುವಿನಾಜ್ಞೆಯನ್ನು ಶಿರಸಾವಹಿಸಿ ಕೃಷ್ಣಭಕ್ತರಾಗಿ ಅವರು ಐದು ನೂರು ವರ್ಷಗಳ ಹಿಂದೆ ಭಾರತದಲ್ಲಿ ಅವತರಿಸಿದ ಶ್ರೀ ಚೈತನ್ಯ ಮಹಾಪ್ರಭುಗಳ ಪರಂಪರೆಯ ತತ್ತ್ವ ಪ್ರತಿಪಾದಕರು. ಅಷ್ಟೇ ಏಕೆ ಐದು ಸಾವಿರ ವರ್ಷಗಳ ಹಿಂದೆ ಸ್ವಯಂ ಶ್ರೀಕೃಷ್ಣನೇ ಈ ಭೂಮಿಯಲ್ಲಿದ್ದು ತನ್ನ ಬೋಧನೆಗಳನ್ನು ಸಾದರಪಡಿಸಿದ ಕಾಲಕ್ಕೆ ಸೇರಿದವರಾಗಿದ್ದಾರೆ. ಆ ಪ್ರಭುಪಾದರಿಗೆ ಹಾರ್ದಿಕ ಸ್ವಾಗತ. ಪೂಜ್ಯರೆ, ಕೃಷ್ಣಪ್ರಜ್ಞೆ ಎಂದರೇನು?
ಪ್ರಭುಪಾದ: ಪ್ರತಿ ಜೀವಿಯೂ ಕೃಷ್ಣನ ವಿಭಿನ್ನಾಂಶ ಎಂಬುದು ಕೃಷ್ಣ ಪ್ರಜ್ಞೆ ಎನ್ನುವುದರ ಅರ್ಥ. ಕೃಷ್ಣನಿಗೆ ಅನೇಕ ವಿಸ್ತರಣೆಗಳಿವೆ. ಅಂಥ ವಿಸ್ತರಣೆಗಳನ್ನು ವೈಯಕ್ತಿಕ ವಿಸ್ತರಣೆ ಹಾಗೂ ಪ್ರತ್ಯೇಕಿತ ವಿಸ್ತರಣೆ (ಜೀವಾತ್ಮ) ಎಂದು ಕರೆಯಲಾಗಿದೆ. ನಾವು – ಎಂದರೆ ಜೀವಿಗಳು – ಜೀವಾತ್ಮರು ಅಥವಾ ವಿಭಿನ್ನಾಂಶಗಳಾಗಿದ್ದೇವೆ.
ಆದರೆ ನಮಗೂ ಕೃಷ್ಣನಿಗೂ ಆಪ್ತ ಸಂಬಂಧ ಇದ್ದೂ ನಾವು ಹೇಗೋ ಅಂತು ಐಹಿಕ ಪ್ರಕೃತಿಯ ಸ್ಪರ್ಶಕ್ಕೆ ಸಿಕ್ಕಿ ಅವನಿಂದ ಪ್ರತ್ಯೇಕಿಸಲ್ಪಟ್ಟಿದ್ದೇವೆ. ಹೀಗಾಗಿ ನಾವು ಕೃಷ್ಣನ ವಿಭಿನ್ನಾಂಶರು ಎಂಬುದನ್ನುಮರೆತೇ ಬಿಟ್ಟಿದ್ದೇವೆ. ಇದು ವಸ್ತುಸ್ಥಿತಿ. ಶ್ರೀಮಂತನ ಪುತ್ರನು ಹೇಗೋ ಏನೋ ತನ್ನ ತಂದೆಯನ್ನು ಮರೆತು ಬೀದಿ ಬೀದಿ ಅಲೆಯುತ್ತಿರುತ್ತಾನಲ್ಲ ಇದೂ ಹಾಗೇ.
ಈ ಶ್ರೀಮಂತಪುತ್ರ ಸುಮ್ಮನೆ ಮರೆತುಬಿಟ್ಟಿದ್ದಾನೆ. ಆದ್ದರಿಂದ ನಮ್ಮ ಕೃಷ್ಣ ಪ್ರಜ್ಞಾ ಚಳವಳಿ ಏನು ಮಾಡುತ್ತಿದೆಯೆಂದರೆ – ಜೀವಿಗಳು ಕೃಷ್ಣನ ವಿಭಿನ್ನಾಂಶರು ಎಂಬ ಮೂಲ ಪ್ರಜ್ಞೆಯನ್ನು ಪುನರ್ ಸೃಷ್ಟಿಸಿ ಕೊಡಲು ಪ್ರಯತ್ನಿಸುತ್ತಿದೆ. ನಾವು ಈ ಜಗತ್ತಿನಲ್ಲಿ ಇದ್ದುಕೊಂಡು ತ್ರಿವಿಧ ತಾಪಗಳನ್ನೇಕೆ ತಾನೆ ಅನುಭವಿಸಬೇಕು, ಹೇಳಿ? ಆದ್ದರಿಂದ ನಾವು ಆ ಮೂಲ ಪ್ರಜ್ಞೆಯನ್ನು ಪುನರುಜೀವಗೊಳಿಸಲು ಪ್ರಯತ್ನಿಸುತ್ತಿದ್ದೇವೆ.
ಕೃಷ್ಣ ಪ್ರಜ್ಞೆಯೇ ಮೂಲ ಪ್ರಜ್ಞೆ. ಪ್ರಭುವಿನ ಕುಟುಂಬದಲ್ಲಿ ಹುಟ್ಟಿದವನೊಬ್ಬನ ಕುಟುಂಬದ ಹೆಸರು ಪ್ರಭುವಿನದಾಗಿರಬೇಕು. ಆದರೆ ದುರ್ದೈವವಶಾತ್ ಪ್ರಭುವಿನ ಕುಟುಂಬದಲ್ಲಿ ಹುಟ್ಟಿದಾತನು ತನ್ನ ಕುಟುಂಬವನ್ನು ಮರೆತು ಯಾವುದೋ ಪರಿಚಾರಕನ ಕುಟುಂಬದ ಹೆಸರನ್ನು ಒಪ್ಪಿಕೊಂಡಿದ್ದಾನೆ. ಇಡೀ ವೈದಿಕ ಸಾಹಿತ್ಯದ ಗುರಿ ಜೀವಿಯು ಮೂಲಪ್ರಜ್ಞೆಗೆ ಮರಳುವಂತೆ ಮಾಡುವುದೇ ಆಗಿದೆ – ಅಹಂ ಬ್ರಹ್ಮಾಸ್ಮಿ.
ಸಂದರ್ಶಕ: ನಾನು ಈ ಮೊದಲು ಹೇಳಿದಂತೆ ನೀವು ಈ ದೇಶಕ್ಕೆ 1965ರಲ್ಲಿ ಬಂದಿರಿ. ನೀವು ಬಂದದ್ದು ನಿಮ್ಮ ಗುರುಗಳ ಆಣತಿಯ ಮೇರೆಗೆ. ಅಂದಹಾಗೆ ನಿಮ್ಮ ಗುರುಗಳು ಯಾರು?
ಪ್ರಭುಪಾದ: ಓಂ ವಿಷ್ಣುಪಾದ ಪರಮಹಂಸ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಪ್ರಭುಪಾದರು ನನ್ನ ಗುರು.
ಸಂದರ್ಶಕ: ನಾವು ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಗುರು ಪರಂಪರೆಯ ಬಗೆಗೆ ಮಾತನಾಡುತ್ತಿದ್ದೆವು. ಆ ಗುರು ಪರಂಪರೆ ಕೃಷ್ಣನ ತನಕ ಹೋಗುತ್ತದೆ, ಅಲ್ಲವೆ? ನಿಮ್ಮ ಗುರುಗಳು ನೀವು ಬರುವುದಕ್ಕೆ ಮೊದಲು ಇದ್ದವರೋ ಹೇಗೆ?
ಪ್ರಭುಪಾದ: ಹೌದು. ನಮ್ಮ ಗುರು ಪರಂಪರೆ 5000 ವರ್ಷಗಳದ್ದು. ಸ್ವಯಂ ಕೃಷ್ಣರ ಕಾಲದ್ದು.
ಸಂದರ್ಶಕ: ನಿಮ್ಮ ಗುರುಗಳು ಈಗಲೂ ಇದ್ದಾರೆಯೋ?
ಪ್ರಭುಪಾದ: ಇಲ್ಲ. ಅವರು 1936ರಲ್ಲಿ ಕಣ್ಮರೆಯಾದರು.
ಸಂದರ್ಶಕ: ಎಂದಮೇಲೆ ಪ್ರಸ್ತುತ ಈ ಹೊತ್ತು ಕೃಷ್ಣ ಪ್ರಜ್ಞಾ ಚಳವಳಿಯ ಮುಖಂಡರು ನೀವು. ಸರಿ ತಾನೆ?
ಪ್ರಭುಪಾದ: ನನಗೆ ಅನೇಕ ದೈವ ಸಹೋದರರಿದ್ದಾರೆ. ಆದರೆ ವಿಶೇಷವಾಗಿ ನನಗೆ ಪ್ರಚಾರ ಮಾಡಬೇಕೆಂಬ ನಾನು ಹಿರಿಯನ ಸ್ಥಾನದಲ್ಲಿ ನಿಲ್ಲಬೇಕೆಂಬ ಆಜ್ಞೆ ಮೊದಲಿನಿಂದಲೇ ನೀಡಲಾಗಿತ್ತು. ನಾನು ನನ್ನ ಗುರುಗಳನ್ನು ಸಂತೋಷಪಡಿಸಲು ಯತ್ನಿಸುತ್ತಿದ್ದೇನೆ.
ಸಂದರ್ಶಕ: ನಿಮ್ಮನ್ನು ಈ ದೇಶಕ್ಕೆ – ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ – ಕಳುಹಿಸಲಾಯಿತು. ಇದು ನಿಮ್ಮ ಕಾರ್ಯಕ್ಷೇತ್ರಕ್ಕೆ ಸೇರಿದ ರಾಜ್ಯ, ಹೌದು ತಾನೆ?
ಪ್ರಭುಪಾದ: ಹಾಂ ಏನಂದಿರಿ? ಇದು ನನ್ನ ರಾಜ್ಯ ಅಲ್ಲ. ”ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಿಗೆ ಹೋಗಿ ಕೃಷ್ಣ ಪ್ರಜ್ಞಾ ಸಿದ್ಧಾಂತ ಬೋಧಿಸು’ ಎಂದು ನನ್ನ ಗುರುಗಳು ಹೇಳಿದರು.
ಸಂದರ್ಶಕ: ಇಂಗ್ಲಿಷ್ ಮಾತನಾಡುವ ಜನರುಳ್ಳ ದೇಶಗಳವರಿಗೆ?
ಪ್ರಭುಪಾದ: ಹೌದು ವಿಶೇಷತಃ ಪಾಶ್ಚಾತ್ಯ ಜಗತ್ತಿಗೆ ನನ್ನ ಗುರುಗಳು ಹೇಳಿದ್ದು ಅದನ್ನೇ.
ಸಂದರ್ಶಕ: ಹದಿನೈದು ಹದಿನಾರು ವರ್ಷಗಳ ಹಿಂದೆ ನೀವು ಈ ದೇಶಕ್ಕೆ ಬಂದು ಬೋಧನೆ ಪ್ರಾರಂಭಿಸಿದಾಗ…
ಪ್ರಭುಪಾದ: ಹದಿನೈದು ಹದಿನಾರು ವರ್ಷಗಳ ಹಿಂದಲ್ಲ.
ಸಂದರ್ಶಕ: ಕ್ಷಮಿಸಿ. ಐದಾರು ವರ್ಷಗಳ ಹಿಂದೆ ಬಂದಿರಿ. ಆಯಿತು. ಧರ್ಮ ಎನ್ನುವುದು ಅಪರಿಚಿತವಾಗಿದ್ದ ದೇಶಕ್ಕೇನೂ ನೀವು ಬರಲಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಅನೇಕ ಧರ್ಮಗಳು ಮನೆ ಮಾಡಿಕೊಂಡಿವೆ. ಈ ದೇಶದಲ್ಲಿನ ಬಹುಪಾಲು ಜನ ತಾವು ಧರ್ಮಾಸಕ್ತರು ಎಂದುಕೊಳ್ಳಲು ಇಷ್ಟಪಡುತ್ತಾರೆ ಎಂದು ನನಗೆ ತೋರುತ್ತದೆ; ಜನ ದೇವರಲ್ಲಿ ನಂಬುಗೆಯುಳ್ಳವರು.

ಒಂದಲ್ಲ ಒಂದು ರೀತಿ ಧರ್ಮತತ್ತ್ವಕ್ಕೆ ತಮ್ಮನ್ನು ತೆತ್ತುಕೊಂಡವರು ಈ ಜನ. ಈಗಾಗಲೇ ಈ ದೇಶ ನಂಬಿರುವ ಧರ್ಮತತ್ತ್ವ ಗಳಿಗೆ ಹೊಸದಾಗಿ ಏನನ್ನು ಸೇರಿಸಲು ಸಾಧ್ಯ ಎಂದು ನಿಮಗನಿಸುತ್ತದೆ. ನೀವು ಇಲ್ಲಿಗೆ ಬಂದು ನಿಮ್ಮ ಹೊಸತತ್ತ್ವವನ್ನು ಬಿತ್ತಲು ಏನೋ ಬಲವತ್ತರ ಕಾರಣವಿರಬೇಕು.
ಪ್ರಭುಪಾದ: ನಾನು ನಿಮ್ಮ ದೇಶಕ್ಕೆ ಮೊದಲ ಸಲ ಬಂದಾಗ ಬಟ್ಲರ್ನ ಒಬ್ಬ ಭಾರತೀಯನ ಅತಿಥಿಯಾಗಿದ್ದೆ.
ಸಂದರ್ಶಕ: ಪೆನ್ಸಿಲ್ವೇನಿಯಾದಲ್ಲಿ ಅಲ್ಲವೆ?
ಪ್ರಭುಪಾದ: ಹೌದು, ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಅದೊಂದು ಪುಟ್ಟ ರಾಷ್ಟ್ರವಾಗಿದ್ದರೂ ಅಲ್ಲಿ ಭಾರಿ ಸಂಖ್ಯೆಯ ಇಗರ್ಜಿಗಳಿದ್ದುದನ್ನು ಕಂಡು ಸಂತೋಷಪಟ್ಟೆ.
ಸಂದರ್ಶಕ: ಅಲ್ಲಿ ಬಹುಸಂಖ್ಯೆಯ ಇಗರ್ಜಿಗಳಿವೆ, ಹೌದು.
ಪ್ರಭುಪಾದ: ಬಹಳ ಚರ್ಚುಗಳಿವೆ ಅಲ್ಲಿ. ಆ ದೇಶದ ಅನೇಕ ಚರ್ಚುಗಳಲ್ಲಿ ನಾನು ಉಪನ್ಯಾಸ ಮಾಡಿದೆ. ನನ್ನ ಅತಿಥೇಯರು ಅದಕ್ಕೆ ಏರ್ಪಾಟು ಮಾಡಿದರು. ಆದರೆ ನಾನಿಲ್ಲಿಗೆ ಬಂದುದರ ಉದ್ದೇಶ ಈಗಾಗಲೇ ಇರುವ ಧರ್ಮವ್ಯವಸ್ಥೆ ಒಂದನ್ನು ಸೋಲಿಸಲು ಅಲ್ಲ. ನನ್ನ ಉದ್ದೇಶ ಅದಾಗಿರಲೇ ಇಲ್ಲ. ನಮ್ಮ ಉದ್ದೇಶ – ಭಗವಾನ್ ಚೈತನ್ಯರ ಉದ್ದೇಶ – ಭಗವಂತನನ್ನು ಹೇಗೆ ಪ್ರೀತಿಸುವುದು ಎಂಬುದನ್ನು ತೋರಿಸಿಕೊಡುವುದಾಗಿದೆ, ಅಷ್ಟೆ.
ಸಂದರ್ಶಕ: ನನ್ನದೊಂದು ಪ್ರಶ್ನೆಯಿದೆ. ಕೇಳಲೆ? ನೀವೀಗ ಕೈಗೊಂಡಿದ್ದೀರಲ್ಲ ದೈವ ಪ್ರೀತಿಯನ್ನು ಕಲಿಸುವ ಕೆಲಸ, ಅದು ಇಲ್ಲಿ ಧರ್ಮವ್ಯವಸ್ಥೆಗಿಂತ ಬೇರೆಯಾದದ್ದು ಅಥವಾ ನಿಮ್ಮ ದೃಷ್ಟಿಯಲ್ಲಿ ಉತ್ತಮವಾದದ್ದು ಎಂದು ನೀವು ಬಂದಾಗ ನಿಮಗನ್ನಿಸಿತೇ? ಈ ಬಗೆಗೆ ಈ ಕ್ಷಣ ನಿಮಗೇನನ್ನಿಸುತ್ತದೆ? ಈ ದೇಶದಲ್ಲಿ ಹಾಗೂ ಪಾಶ್ಚಾತ್ಯ ಜಗತ್ತಿನಲ್ಲಿ ಈಗ ಹಾಲಿ ಇರುವ ಧರ್ಮ ಪ್ರಕ್ರಿಯೆ ಶತಮಾನಗಳ ಕಳೆಯದು.
ಪ್ರಭುಪಾದ: ನಿಮ್ಮ ಮಾತು ನಿಜ. ಇರುತ್ತ ನಾವು ಭಗವಾನ್ ಚೈತನ್ಯರ ಹೆಜ್ಜೆ ಜಾಡಿನಲ್ಲಿ ನಡೆಯುತ್ತಿದ್ದೇವೆ. ಚೈತನ್ಯರೇ ಸ್ವಯಂ ಕೃಷ್ಣನೇ ಎಂಬುದಾಗಿ ಪರಿಗಣಿಸಲಾಗಿದೆ. ವೈದಿಕ ಸಾಹಿತ್ಯವನ್ನು ಆಧರಿಸಿ ನಾವೂ ಚೈತನ್ಯರನ್ನು ಕೃಷ್ಣನೆಂದು ಒಪ್ಪಿಕೊಂಡಿದ್ದೇವೆ.
ಸಂದರ್ಶಕ: ಅವರು ಯಾರು ಪ್ರಭು ಎಂದಿರಿ?
ಪ್ರಭುಪಾದ: ಭಗವಾನ್ ಚೈತನ್ಯರು.
ಸಂದರ್ಶಕ: ಹೌದು, ಹೌದು. ಈಗ್ಗೆ ಐನೂರು ವರ್ಷಗಳ ಹಿಂದೆ ಭರತಖಂಡದಲ್ಲಿ ಅವತರಿಸಿದವರು ಅಲ್ಲವೆ?
ಪ್ರಭುಪಾದ: ಹೌದು.
ಸಂದರ್ಶಕ: ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ಇರುವ ಸಂಬಂಧಕ್ಕಿಂತ ಹೆಚ್ಚಿನ ಒತ್ತು ಈ ಸಂಬಂಧದ ಮೇಲೆ ಬೀಳಬೇಕು ಅಂತ ಅಲ್ಲವೆ?
ಪ್ರಭುಪಾದ: ಹಾಗಲ್ಲ. ಮೊಟ್ಟಮೊದಲಿಗೆ ದೇವರೊಂದಿಗೆ ಕಡಿದುಹೋಗಿರುವ ನಮ್ಮ ಸಂಬಂಧವನ್ನು ನಾವು ಪುನರ್ ಸ್ಥಾಪಿಸಿಕೊಳ್ಳಬಹುದು. ಅರ್ಥವಾಯಿತೆ? ಹೀಗಾದಾಗ ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ನಡುವೆ ಏರ್ಪಡುವ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು. ಮುಖ್ಯವಾದ ಅಂಶವನ್ನೇ ಕಳೆದುಬಿಟ್ಟರೆ ವಸ್ತುತಃ ಯಾವ ಸಂಬಂಧವೂ ಇರುವುದಿಲ್ಲ.
ಈಗ ನೋಡಿ. ನೀವು ಅಮೆರಿಕದವರು. ಇನ್ನೊಬ್ಬರು ಅಮೆರಿಕನ್ ಇದ್ದಾರೆನ್ನಿ. ನೀವಿಬ್ಬರೂ ಅಮೆರಿಕದವರು ಎಂದು ಹೇಳಿಕೊಳ್ಳುವುದಕ್ಕೆ ಮುಖ್ಯ ಕಾರಣವಾಗಿರುವುದು ಅಮೆರಿಕ. ಆದ್ದರಿಂದ ದೇವರು ಎಂದರೇನೆಂಬುದನ್ನು ನೀವು ಅರ್ಥಮಾಡಿಕೊಂಡ ಹೊರತು ನಾನೇನು ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ.
ನೀವು ಯಾರೆ೦ಬುದನ್ನು ನಾನೂ ಅರ್ಥಮಾಡಿಕೊಳ್ಳಲಾರೆ. ಆದ್ದರಿಂದ ಮೊದಲಿಗೆ ನಾವು ದೇವರೊಂದಿಗೆ ಕಳೆದುಹೋಗಿರುವ ನಮ್ಮ ಸಂಬಂಧವನ್ನು ಪುನರ್ಸ್ಥಾಪಿಸಬೇಕು. ಆ ಬಳಿಕ ನಾವು ವಿಶ್ವಭ್ರಾತೃತ್ವವನ್ನು, ಸ್ಥಾಪಿಸಬಹುದು; ಆ ಬಗೆಗೆ ಮಾತನಾಡಬಹುದು. ಒಂದು ರಾಷ್ಟ್ರದ ಪ್ರಜೆ ಎಂದರೆ ಆ ರಾಷ್ಟ್ರದಲ್ಲಿ ಹುಟ್ಟಿದ ವ್ಯಕ್ತಿ ಎಂದು ತಾನೆ ಅರ್ಥ?
ನಿಮ್ಮ ದೇಶದಲ್ಲಿ, ಅಷ್ಟೇಕೆ ಬೇರೆ ಯಾವ ದೇಶದಲ್ಲೂ ಪ್ರಾಣಿಗಳನ್ನು ಆಯಾ ರಾಷ್ಟ್ರದ ಪ್ರಜೆಗಳೆಂದು ಗಣಿಸುವುದಿಲ್ಲ. ಆಯಾ ರಾಷ್ಟ್ರದ ಪ್ರಜೆಗಳಾಗುವ ಹಕ್ಕು ಪ್ರಾಣಿಗಳಿಗೇಕಿಲ್ಲ? ಇದೀಗ ಅಪೂರ್ಣ ಜ್ಞಾನ. ಇಲ್ಲಿ ದೈವಪ್ರಜ್ಞೆ ಇಲ್ಲ. ಆದ್ದರಿಂದ ಒಂದು ರಾಷ್ಟ್ರದಲ್ಲಿ ಹುಟ್ಟಿದ ಮನುಷ್ಯನನ್ನು ಮಾತ್ರ ಆ ರಾಷ್ಟ್ರದ ಪ್ರಜೆ ಎಂದು ಗಣಿಸುತ್ತಾರೆ: ಇತರರನ್ನು ಅಲ್ಲ.
ಸಂದರ್ಶಕ: ಹೌದು. ಅದೇನೋ ಸರಿ. ಆದರೆ ಈ ತಾರತಮ್ಯ ನೀವು ಪ್ರತಿಪಾದಿಸುತ್ತಿರುವ ಧಾರ್ಮಿಕ ತತ್ತ್ವಗಳನ್ನು ಆಧರಿಸಿ ಆದದ್ದಲ್ಲ.
ಪ್ರಭುಪಾದ: ಹಾಗಲ್ಲ. ನಾನು ಹೇಳುತ್ತಿರುವುದು ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಸಂಗತಿ. ತಾತ್ತ್ವಿಕತೆ ಇಲ್ಲದ ಧರ್ಮ ಬರೀ ಒಂದು ಭಾವಾತಿರೇಕ ಅಷ್ಟೆ.
ಸಂದರ್ಶಕ: ಇಂಥ ವಿಧಿ ನಿಷೇಧಗಳಿರುವುದಕ್ಕೆ ಸೂಕ್ತ ಕಾರಣಗಳೂ ಇವೆ ಎಂದು ನಿಮಗನಿಸುವುದಿಲ್ಲವೇ, ಈ ಸಂದರ್ಭದಲ್ಲಿ?
ಪ್ರಭುಪಾದ: ಒಪ್ಪಿದೆ. ಆದರೆ ತತ್ತ್ವಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ವಿಧಿ ನಿಷೇಧಗಳನ್ನು ರೂಪಿಸಬೇಕು. ಹಾಗಲ್ಲದಿದ್ದರೆ ಅಂಥ ವಿಧಿನಿಷೇಧಗಳು ಭಾವಾತಿರೇಕ ಆಗುತ್ತವೆ; ದೋಷಯುಕ್ತವೂ ಹೌದು. ತಾತ್ತ್ವಿಕತೆ ಇಲ್ಲದ ಧರ್ಮ ಭಾವಾತಿರೇಕ ಹಾಗೂ ಧರ್ಮವನ್ನು ಅವಲಂಬಿಸದ ತಾತ್ತ್ವಿಕತೆ ಮಾನಸಿಕ ಊಹಾಪೋಹ ಎನ್ನಿಸಿಕೊಳ್ಳುತ್ತದೆ. ಧರ್ಮ ಹಾಗೂ ತತ್ತ್ವ ಎರಡನ್ನೂ ಒಟ್ಟು ಸೇರಿಸಬೇಕು. ಆಗ ಅದು ಪರಿಪೂರ್ಣವಾಗುತ್ತದೆ.
ಸಂದರ್ಶಕ: ಪ್ರಪಂಚದ ಈ ಭೂಭಾಗದಲ್ಲಿ ಕೊನೆಯ ಪಕ್ಷ ಪಾಶ್ಚಿಮಾತ್ಯ ಜಗತ್ತಿನಲ್ಲಿ ನನಗೆ ತಿಳಿದ ಮಟ್ಟಿಗೆ ನಾವು ಧರ್ಮದ ಮೇಲೆ ಸಾಕಷ್ಟು ಒತ್ತು ಹಾಕುತ್ತೇವೆ…

ಪ್ರಭುಪಾದ: ತತ್ತ್ವಶಾಸ್ತ್ರಾಧಾರಿತ ಧರ್ಮದ ಮೇಲೆ ತಾನೆ?
ಸಂದರ್ಶಕ: ನಾನು ಒತ್ತಿಹೇಳಲು, ಪ್ರಬಲವಾಗಿ ಪ್ರತಿಪಾದಿಸಲು ಬಯಸುವ ವಿಷಯ ಯಾವುದೆಂದರೆ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ ವ್ಯವಹರಿಸುವ ರೀತಿಯ ಧರ್ಮಕ್ಕೆ ನಾವು ಹೆಚ್ಚಿನ ಪ್ರಾಧಾನ್ಯ ನೀಡುತ್ತೇವೆ. ಈಗ…
ಪ್ರಭುಪಾದ: ತಪ್ಪು ನಾವು ಹೇಳುವುದು ಅದನ್ನಲ್ಲ.
ಸಂದರ್ಶಕ: ಕೃಷ್ಣ ಪ್ರಜ್ಞಾ ಆಂದೋಲನದಲ್ಲಿ….
ಪ್ರಭುಪಾದ: ತಾಳಿ ತಾಳಿ ನಾವು ಹೇಳುವುದು ಸ್ಪಷ್ಟವಾಗಬೇಕು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಹೇಗೆ ವ್ಯವಹರಿಸುತ್ತಾನೆ ಎಂಬುದು ನಮ್ಮ ಕಾಳಜಿಯಲ್ಲ. ನಮ್ಮ ವಿಚಾರ ಯಾವುದೆಂದರೆ…
ಸಂದರ್ಶಕ: ಒಬ್ಬ ಮನುಷ್ಯ ಇನ್ನೊಬ್ಬನೊಡನೆ ವ್ಯವಹರಿಸುವ ರೀತಿ ನಿಮ್ಮ ಕೃಷ್ಣ ಪ್ರಜ್ಞಾ ಚಳವಳಿಯ ಒಂದು ಭಾಗವಲ್ಲವೇ?
ಪ್ರಭುಪಾದ: ಅಲ್ಲ, ಅಲ್ಲ.
ಸಂದರ್ಶಕ: ಅದು ಮುಖ್ಯವಲ್ಲ ಎನ್ನುತ್ತೀರಾ?
ಪ್ರಭುಪಾದ: ನಾವು ಏನು ಹೇಳುತ್ತೇವೆಂದರೆ….
ಸಂದರ್ಶಕ: ಉದಾಹರಣೆಗೆ ಹತ್ತು ದೈವಾಜ್ಞೆಗಳನ್ನು ತೆಗೆದುಕೊಳ್ಳೋಣ. ಹತ್ತು ದೈವಾಜ್ಞೆಗಳು ಯಾವುವೆಂಬುದನ್ನು ನೀವು ಬಲ್ಲಿರಿ. ಆ ದೈವಾಜ್ಞೆಗಳು ಒಟ್ಟು ಮನುಷ್ಯ ಇನ್ನೊಬ್ಬ ಮನುಷ್ಯನೊಳಗೆ ಹೇಗೆ ವ್ಯವಹರಿಸುತ್ತಾನೆ ಎಂಬುದಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆ. “ಕಳಬೇಡ, ಕೊಲಬೇಡ’ ಮುಂತಾದ ದೈವಾಜ್ಞೆಗಳು.
ಪ್ರಭುಪಾದ: ಕೊಲ್ಲಬೇಡ ಎಂದು ಕ್ರಿಸ್ತ ಹೇಳಿದ್ದರ ಅರ್ಥ, ಮನುಷ್ಯನನ್ನು ಮಾತ್ರ ಕೊಲ್ಲಬೇಡ ಎಂಬ ರೀತಿಯಲ್ಲಲ್ಲ ಎಂದು ನಾನು ಹೇಳುತ್ತೇನೆ. ಕ್ರಿಸ್ತ ಹಾಗೆಂದು ಹೇಳಲಿಲ್ಲ. ಆ ಅರ್ಥ ಬರುವ ಹಾಗೆ ಎಂದೂ ಮಾತನಾಡಲಿಲ್ಲ ಎನಿಸುತ್ತದೆ ನನಗೆ. ಇದಕ್ಕೆ ರುಜುವಾತು ಎಲ್ಲಿದೆ? “ಕೊಲ್ಲಬೇಡ ಎಂದರೆ ಮನುಷ್ಯನನ್ನು ಮಾತ್ರ ಕೊಲ್ಲಬೇಡ ಅಂತ ಅರ್ಥ.” ಎಂದು ಕ್ರಿಸ್ತ ಯಾವತ್ತೂ ಹೇಳಲಿಲ್ಲ. ಯಾವ ಪ್ರಾಣಿಯನ್ನಾಗಲಿ ಕೊಲ್ಲಬಾರದು ಎಂದು ಆ ಮಾತಿಗೆ ಅರ್ಥವುಂಟು.,
ಸಂದರ್ಶಕ: ಯಾವುದೇ ಪ್ರಾಣಿಯನ್ನು?
ಪ್ರಭುಪಾದ: ಹೌದು. ಯಾವುದೇ ಜೀವವನ್ನು ಕೊಲ್ಲಲಾಗದು. ಅದೇ ಧರ್ಮ.
ಸಂದರ್ಶಕ: ಆ ದೈವಾಜ್ಞೆಯನ್ನು ನಿಮ್ಮ ರೀತಿಯಲ್ಲಿ ಎಂದೂ ವ್ಯಾಖ್ಯಾನಿಸಲಾಗಿಲ್ಲ.
ಪ್ರಭುಪಾದ: ಆದರೆ ನೀವು ಆ ವಾಕ್ಯವನ್ನು ಬೇರೊಂದು ರೀತಿಯಲ್ಲಿ ಅರ್ಥೈಸಿಬಿಟ್ಟಿದ್ದೀರಿ. ಕ್ರಿಸ್ತ ಹೇಳಿದ್ದು “ಕೊಲ್ಲಲಾಗದು” ಎಂದು, ‘ಮನುಷ್ಯನನ್ನು ಕೊಲ್ಲಬೇಡಿ’ ಎಂದಲ್ಲ. ನೀವು ಹಾಗೆಲ್ಲ ಏಕೆ ಅರ್ಥ ಮಾಡುತ್ತೀರಿ?
ಸಂದರ್ಶಕ: ಕೃಷ್ಣ ಪ್ರಜ್ಞಾ ಆಂದೋಲನದ ನಿಷ್ಠ ಅನುಯಾಯಿಯನ್ನು ಗುರುತಿಸುವುದು ಹೇಗೆ? ಅವನ ನಡತೆ ಎಂದರೆ ಅವನ ಗುಣಗಳು ಹೇಗಿರುತ್ತವೆ? ಅಂಥ ಅನುಯಾಯಿಯ ಬಾಹ್ಯ ವಆಚರಣೆಗಳು ಹೇಗಿರುತ್ತವೆ?
ಪ್ರಭುಪಾದ: ಹೌದು ಕೃಷ್ಣ ಭಕ್ತನನ್ನು ಅವನ ನಡೆತೆಯಿಂದ ಗುರುತು ಹಿಡಿಯಬೇಕು. ಅವನು ಅಂತ್ಯತ ಸಭ್ಯ, ನಮ್ರ ಮನುಷ್ಯನಾಗಿರುತ್ತಾನೆ. ಅಷ್ಟೆ ನೀವು ಅವನಲ್ಲಿ ಯಾವ ಕುಂದನ್ನೂ ಎಣಿಸಲಾರಿರಿ. ಅದೀಗ ಪರಿಪೂರ್ಣ ಕೃಷ್ಣ ಪ್ರಜ್ಞೆ. ಕೃಷ್ಣ ಭಕ್ತರು ಮಾಂಸಹಾರಿಗಳಾಗಿರಬಾರದೆಂಬುದು ಒಂದು ನಿಷೇಧ.
ಸಂದರ್ಶಕ: ಮಾಂಸಾಹಾರಿಗಳಾಗಿರಬಾರದು?
ಪ್ರಭುಪಾದ: ಅಷ್ಟೇ ಅಲ್ಲ ಕೃಷ್ಣ ಭಕ್ತರು ಅಕ್ರಮ ಲೈಂಗಿಕ ವ್ಯವಹಾರ ನಡೆಸುವುದೂ ನಿಷಿದ್ಧ. ಅವರು ಮದ್ಯಸೇವನೆ ಮಾಡಬಾರದು ಎಂಬುದು ಇನ್ನೊಂದು ನಿಷೇಧ. ಮೇಲಾಗಿ ಅವರು ಧೂಮಪಾನ ಮಾಡಬಾರದು. ಎಂದ ಮೇಲೆ ಉಳಿದ ಮಾದಕ ವಸ್ತು ಸೇವನೆ ಬಗೆಗೆ ಹೇಳಬೇಕೇನು? ಜೂಜಿನಲ್ಲಿ ತೊಡಗುವ ಬಗೆಗೂ ಅವರ ಮೇಲೆ ನಿಷೇಧವಿದೆ. ಕೃಷ್ಣ ಭಕ್ತರು ಈ ನಾಲ್ಕು ವಿಧಿ ವಿಷೇಧಗಳನನು ಅನುಸರಿಸಬಲ್ಲವರಾದರೆ ಅವರು ಪರಿಪೂರ್ಣ ಮಾನವರಾಗುತ್ತಾರೆ. ಶಂಕೆ ಬೇಡ.
ಸಂದರ್ಶಕ: ಒಳ್ಳೆ ಕೃಷ್ಣಭಕ್ತೆಯರೂ ಆಗುತ್ತಾರೆಂದು ಭಾವಿಸಬಹುದೆ?
ಪ್ರಭುಪಾದ” ಭಕ್ತರು, ಭಕ್ತೆಯರು, ಯಾವುದೂ ಆಗಬಹುದು.
ಸಂದರ್ಶಕ: ಸ್ತ್ರೀ, ಪುರುಷ ಎರಡೂ ಆಗಬಹುದಲ್ಲ. ಧರ್ಮದ ವಿಚಾರದಲ್ಲಿ ಹೆಂಗಸರಿಗೂ ಒಂದು ಸ್ಥಾನವಿದೆ, ಅಲ್ಲವೆ?
ಪ್ರಭುಪಾದ: ಸ್ತ್ರೀ ಪುರುಷರು ಸಮಾನ ಹಕ್ಕುಳ್ಳವರಾಗಿದ್ದಾರೆ. ನಮ್ಮ ಚಳವಳಿಯಲ್ಲಿ ಸ್ತ್ರೀ ಪುರುಷರು ಇಬ್ಬರೂ ಇದ್ದಾರೆ. ಮದುವೆಯಾದವರೂ ನಮ್ಮಲ್ಲಿಗೆ ಬಂದು ಸೇರುತ್ತಿದ್ದಾರೆ. ಅವರೆಲ್ಲ ಇದೇ ತತ್ತ್ವಗಳನ್ನು ಆಚರಿಸುತ್ತಿದ್ದಾರೆ. ಆದ್ದರಿಂದ ನಮ್ಮ ಈ ನಾಲ್ಕು ತತ್ತ್ವಗಳು ಪರಿಪೂರ್ಣ ಜೀವನದ ನಾಲ್ಕು ಕಂಬಗಳು.
ಅದೇ ನೋಡಿ, ನಮ್ಮ ಜನ ಈ ನಾಲ್ಕರಲ್ಲಿ – ಎಂದರೆ ಹಾದರ, ಮಾಂಸಾಹಾರ, ಮದ್ಯಸೇವನೆ ಹಾಗೂ ಜೂಜು – ನಿರತರಾದರೆ ಈ ನಾಲ್ಕೂ ಪಾಪಯುತ ಬದುಕಿನ ಆಧಾರಸ್ತಂಭಗಳಾಗುತ್ತವೆ. ಆದ್ದರಿಂದ ಈ ನಾಲ್ಕು ನಿಷೇಧಿತ ಅಂಶಗಳನ್ನು ತೆಗೆದುಹಾಕಿದರೆ ಆಗ ಈ ನಿಷೇಧಿತ ಭಾಗಗಳೇ ಪರಿಪೂರ್ಣ ಬದುಕಿನ ಆಧಾರಸ್ತಂಭಗಳಾಗುತ್ತವೆ.






Leave a Reply