-ಶ್ರೀಮತಿ ಪದ್ಮಿನಿ ಬಾಲು
ಪೂರ್ವ ದಿಗಂತದಲ್ಲಿ ಸೂರ್ಯನು ಇಣುಕಿ ನೋಡುವ ಸನ್ನಾಹ ನಡೆಸುತ್ತಿದ್ದ. ಅರುಣ ಕಿರಣಗಳು ಭೂಮಿಯ ಮೇಲಿನ ಅಚರ ಚರಾದಿ ವಸ್ತುಗಳಿಗೆಲ್ಲ ಚಿನ್ನದ ಮೆರುಗನ್ನು ಲೇಪಿಸುತ್ತಿದ್ದವು. ಒಂಟಿಕಾಲಿನಲ್ಲಿ ನಿಂತು ಕಣ್ಣುಮುಚ್ಚಿ ತಪೋನಿರತರಾದ ಋಷಿಗಳನ್ನು ನೆನಪಿಸುತ್ತಿದ್ದ ಕೋಳಿಗಳು ಕೋ, ಕ್ಕೋ ಎಂದವು. ನಂದಗೋಕುಲದಲ್ಲಿ ಗೋಪಿಯರು ನಿದ್ದೆಯಿಂದೆದ್ದು ಮೈಮುರಿದು, ಆಕಳಿಸಿ ಕೃಷ್ಣಾ ಎಂದು ಕೈಮುಗಿದರು.

ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿ ಮಿಂದು ನೀರು ತರಲೆಂದು ಕೊಡಗಳನ್ನೆತ್ತಿಕೊಂಡು ಮನೆಯಿಂದ ಹೊರಬಂದರು. ಗೋಪಾಲಕರು ಹೊದಿಕೆಯನ್ನು ಕೆಡವಿ ಎದ್ದು ತಮ್ಮ ತಾಯಂದಿರಿಗೂ ಮಿಗಿಲಾದ ಗೋಮಾತೆಯ ಸೇವೆಗೆ ಹೊರಟರು.
ಅಂಬಾ ಎಂದು ಕೂಗುತ್ತಿದ್ದ ಕರುಗಳ ಮೈಯನ್ನು ಮಮತೆಯಿಂದ ನೆಕ್ಕುತ್ತಿದ್ದ ಹಸುಗಳ ಮೈದಡವಿ ಅವುಗಳಿಗೆ ಮೇವು ನೀರನ್ನುಣಿಸಿ ಹಾಲು ಕರೆಯುವ ಮೊದಲು ಬಚ್ಚಿಕೊಳ್ಳದಂತೆ ಕರುಗಳ ಹಗ್ಗಕ್ಕೆ ಮೊತ್ತೊಂದು ಜೀರುಕುಣಿಕೆ ಬೀರಿ ಗಂಡಸರು ಒಳನಡೆಯುವ ವೇಳೆಗೆ ಮಡಿಯುಟ್ಟ ಹೆಂಗಳೆಯರು ನೀರು ತುಂಬಿದ ಕೊಡಗಳನ್ನು ಸೊಂಟದಲ್ಲಿರಿಸಿಕೊಂಡು ಮನೆಯ ಕಡೆ ಹೆಜ್ಜೆಯಿಡುತ್ತಿದ್ದರು. ಅವರು ಮುಡಿಯಿಂದ ಸೋರುತ್ತಿದ್ದ ನೀರು ಮಣ್ಣಿನ ಮೇಲೆ ಬಿದು ಸುವಾಸನೆಯೇಳುತ್ತಿತ್ತು.
ಅವರ ಕಾಲುಂಗುರ ಕಡಗಗಳ ಕಿಣಿ ಕಿಣಿ ನಾದ, ಗೆಜ್ಜೆಯ ಗಲ ಗಲ ಧ್ವನಿ, ಬಳೆಗಳ ಸದ್ದು ಮಾತನಾಡುವ ಮೆಲುದನಿಗಳು ಹಸುಗಳ ಕೊರಳ ಗಂಟೆ, ಕರುಗಳ ಅಂಬಾ ಕೂಗಿಗೆ ಶ್ರುತಿ ಮೇಳೈಸುತ್ತಿದ್ದವು. ಗೋಪಿಯರು ಬಿಂದಿಗೆಯನ್ನಿಳಿಸಿ ಹಾಲುಕರೆಯಲು ವೇಳೆಯಾಯಿತೆಂದು ಪಾತ್ರೆಗಳನ್ನೆತ್ತಿಕೊಂಡು ಕೊಟ್ಟಿಗೆಯ ಕಡೆ ಲಗುಬಗೆಯಿಂದ ನಡೆದರು.
ಇತ್ತ ಗೋಪರ ರಸ ನಂದಗೋಪಾಲನ ಮನೆಯಲ್ಲಿ ಯಶೋದೆ, ರೋಹಿಣಿ ಮತ್ತು ನಂದ ಗೋಪರು ಎದ್ದು ಕಣ್ಣುಜ್ಜಿ ಕೈ ಮುಗಿದು ತುಂಬು ನಿದ್ದೆಯಲ್ಲಿ ನಸುನಗುತ್ತಿದ್ದ ಕೃಷ್ಣ ಬಲರಾಮರಿಬ್ಬರಿಗೂ ಮೈತುಂಬಾ ಹೊದೆಸಿ ಒಳನಡೆದರು. ಯಶೋದೆ ಶುಭ್ರವಾಗಿ ಮಿಂದು ಮಡಿಯುಟ್ಟು ಕೂದಲನ್ನು ಮುಡಿದು ಕುಂಕುಮ ಕಾಡಿಗೆಗಳನ್ನಿಟ್ಟುಕೊಂಡಳು. ನಾಮದುಂಡೆ ಕುಂಕುಮ ಕರಡಿಗೆಯನ್ನಿಟ್ಟು ಕುಳಿತ ನಂದಗೋಪ.
ನಂತರ ಹಸುಗಳಿಗೆ ಮೇವು ನೀಡುವ, ಹಾಲು ಕರೆಯುವ, ಗಡಿಗೆಗಳನ್ನಿಡುವ, ಕೊಟ್ಟಿಗೆ ಗುಡಿಸುವ, ಎಳೆಗರುಗಳು ಹಸುಗಳ ಕೆಚ್ಚಲಿನಿಂದ ಹಾಲು ಹೀರುವ ಸದ್ದುಗಳಿಂದ ಮನೆಯಲ್ಲ ತುಂಬಿ ಹೋಯಿತು. ನಂದಗೋಕುಲವನ್ನು ಮನದಣಿಯೆ ಕಾಣುವ ಆಸೆಯಿಂದ ಸೂರ್ಯ ಮೂಡಣದಲ್ಲಿ ಮೇಲೇರತೊಡಗಿದನು.

ಕೃಷ್ಣ ಬಲರಾಮರು ನಿದ್ರೆ ಕಳೆದು ಕಮಲದಂತಹ ಕಣ್ಣುಗಳನ್ನು ತೆರೆದರು. ಅವರ ನೋಟದಿಂದ ಲೋಕವೇ ಪಾವನವಾಯಿತು. ಹಾಸಿಗೆಯಲ್ಲಿ ಮಲಗಿ ಇಬ್ಬರೂ ನಗುತ್ತಾ ಕೊಸರಾಡುತ್ತ ಸ್ವಲ್ಪಕಾಲ ಕಳೆದರು. ನಂತರ ಎದ್ದು ಬಂದು ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದ ಅಮ್ಮನ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಆಟವಾಡುತ್ತ ಕೆಲಸಮಯ ಕಳೆಯಿತು. ಯಶೋದೆ ತಾಯಿ ಆಗತಾನೆ ಕರೆದ ಉಗುರು ಬೆಚ್ಚಗಿದ್ದ ಸುವಾಸನೆಯೇಳಿಸುತ್ತಿದ್ದ ನೊರೆ ಹಾಲಿಗೆ ಜೇನು ತುಪ್ಪ ಬೆರೆಸಿ ಮಕ್ಕಳಿಬ್ಬರಿಗೂ ಕುಡಿಯಲು ಕೊಟ್ಟಳು.
ತೃಪ್ತಿಯಿಂದ ಹಾಲನ್ನು ಹೀರಿ ತುಟಿಯ ಮೇಲಿದ್ದ ಬಿಳಿನೊರೆಯ ಮೀಸೆಯನ್ನು ಹಿಂಗೈನಿಂದ ತೀಡಿ ಆಟಕ್ಕಾಗಿ ಹೊರಗೋಡುತ್ತಿದ್ದ ಅಣ್ಣತಮ್ಮಂದಿರನ್ನು ಉಪಾಯದಿಂದ ಒಲಿಸಿ, ಪ್ರೀತಿಯಿಂದ ಮೀಯಿಸಿ ಮೈಯೊರೆಸಿದಳು. ಸಾಂಬ್ರಾಣಿಯ ಧೂಪದಲ್ಲಿ ಅವರ ಕೂದಲನ್ನು ಕಾಯಿಸಿ ಹೆಣೆದಳು. ಹೊಸ ಪೀತಾಂಬರವನ್ನುಡಿಸಿ ಹಣೆಗೆ ತಿಲಕವನ್ನಿಟ್ಟಳು. ಆಭರಣಗಳನ್ನು ಕೊಡಿಸಿ ಕೆನ್ನೆಗೆ ದೃಷ್ಟಿ ಬೊಟ್ಟನ್ನಿಟ್ಟಳು.
“ಮಕ್ಕಳೇ, ಆಡಿಕೊಳ್ಳಿ ಆದರೆ ಜೋಪಾನ” ಎಂದು ಎಚ್ಚರಿಸಿ ಯಶೋದೆ ಕೆಲಸ ಬೊಗಸೆ ನೋಡಲು ಒಳನಡೆದಳು.
ಕೃಷ್ಣನಿಗಾದರೋ ಪಕ್ಕದ ಮನೆಯ ಬೆಣ್ಣೆ ಎದುರು ಮನೆಯ ಹಾಲು, ಹಿಂದಿನ ಮನೆಯ ಮೊಸರುಗಳ ಮೇಲೆ ಗಮನ. ತಾನೊಬ್ಬನೇ ಹೊರಗೆ ಹೋದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುವೆನೆಂದರಿತ ಕೃಷ್ಣ ಬಲರಾಮನನ್ನೂ ತನ್ನ ಸಂಗಡ ಬರುವಂತೆ ಕರೆದ.
“ಅಣ್ಣಾ, ನಾವಿಬ್ಬರೂ ಹೊರಗೆ ಹೋಗೋಣ. ನಿನ್ನೆಯ ದಿನ ಆಟವಾಡಿದಂತೆ ಇಂದೂ ಆಡೋಣ” ಎಂದ.
ಹಿಂದಿನ ದಿನ ಕೃಷ್ಣ ಸಂಗಡ ಅಕ್ಕಪಕ್ಕದ ಮನೆಗಳಿಗೆ ಹೋಗಿ ಬೆಣ್ಣೆ ಮುದ್ದೆಗಳನ್ನು ಕದ್ದು ಮೆದ್ದು ಸಿಕ್ಕಿಹಾಕಿಕೊಂಡದ್ದು, ಚಿಕ್ಕಮ್ಮಂದಿರೆಲ್ಲ ನಂದಗೋಪನ ಮನೆಗೆ ಬಂದು ಯಶೋದೆಯ ಬಳಿ ದೂರು ಹೇಳಿದ್ದು, ಎಲ್ಲವನ್ನೂ ನೆನಸಿಕೊಂಡ ಬಲರಾಮ ಬಲು ಸಂಭಾವಿತನಂತೆ, “ಇಲ್ಲಪ್ಪ, ನಾನು ಬರುವುದಿಲ್ಲ. ಮನೆಯಲ್ಲೇ ಆಡಿಕೊಳ್ಳೋಣ. ಹೊರಗೆ ಹೋದರೆ ಅಮ್ಮ ಬೈದಾರು” ಎಂದು ಹಿಂದೆ ಸರಿದ.
ಕೃಷ್ಣನ ಕಾಲು ಮನೆಯಲ್ಲಿ ನಿಲ್ಲಲಿಲ್ಲ. ಮೆಲ್ಲಗೆ ಪಕ್ಕದ ಮನೆ, ಎದುರು ಮನೆ ಎಂದು ಹುಡುಕಿ ಹೊರಟ. ಇಷ್ಟರಲ್ಲಿ ಎಲ್ಲರ ಮನೆಯಲ್ಲೂ ಮೊಸರು ಕಡೆದು ಬೆಣ್ಣೆಯ ಗಡಿಗೆಗಳನ್ನು ಮಾಡಿನಲ್ಲಿರಿಸಿದ್ದರು. ಮಾಡಿಗೆ ಹತ್ತಲು ಕೃಷ್ಣ ಪ್ರಯತ್ನಿಸಿದ. ಆದರೆ ಸಾಧ್ಯವಾಗಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದು ಜೋಲು ಮೋರೆ ಹಾಕಿಕೊಂಡು ಮನೆಗೆ ಹಿಂದಿರುಗಿದ.

ಮನೆಯಲ್ಲಿ ಯಶೋದೆ ಗಡಿಗೆಯಲ್ಲಿ ಮೊಸರನ್ನಿಟ್ಟುಕೊಂಡು ಕಡೆಯತೊಡಗಿದ್ದಳು. ಸೀರೆಯ ಸೆರಗನ್ನು ಸೊಂಟಕ್ಕೆ ಸಿಗಿಸಿ, ಬಲಗಾಲನ್ನು ಮುಂದಿಟ್ಟು ಎಡಗಾಲನ್ನು ಸ್ವಲ್ಪವೇ ಹಿಂದಿಟ್ಟು ಬಾಗಿದ ಭಂಗಿಯಲ್ಲಿ ನಿಂತು ಬೆವರಿದ ಹಣೆಯಲ್ಲಿ ಅಂಟಿಕೊಂಡಿದ್ದ ಮುಂಗುರುಳುಗಳನ್ನು ಹಿಂಗೈನಿಂದ ಆಗಾಗ ಸರಿಸುತ್ತ ಬೆಣ್ಣೆ ಕಡೆಯುತ್ತಿದ್ದ ಮಾತೆಯನ್ನು ಕಂಡ ಕೃಷ್ಣನಿಗೆ ಮಮತೆಯುಕ್ಕಿ ಬಂತು. ಓಡಿಹೋಗಿ ತನ್ನ ಪುಟ್ಟ ಕೈಗಳಿಂದ ಅವಳ ಕಾಲುಗಳನ್ನು ಬಳಸಿ ಹಿಡಿದ. ಗಡಿಗೆಯೊಳಗಿಂದ “ಜೊರ್, ಜೊರ್,” ಎಂಬ ಸದ್ದಿನೊಡನೆ ಬೆಣ್ಣೆ ಬಿಳಿ ಮುದ್ದೆಯಾಗಿ ಮೇಲೇಳುತ್ತಿತ್ತು.
“ಅಮ್ಮಾ ಅದೇನು ಶಬ್ದ. ಬೆಳ್ಳಗೆ ಗಡಿಗೆಯಲ್ಲಿ ಇರುವುದೇನು?” ಎಂದು ಮುಗ್ಧತೆಯನ್ನು ನಟಿಸುತ್ತಾ ಕೃಷ್ಣ ಅಮ್ಮನನ್ನು ಕೇಳಿದ.
“ಅದು ಬಿಳಿಯ ಗುಮ್ಮ, ಗಡಿಗೆಯೊಳಗಿನ ಗುಮ್ಮ, ನೋಡು ಹೇಗೆ ಶಬ್ದ ಮಾಡುತ್ತಿದೆ. ಹತ್ತಿರ ಬಂದರೆ ತಿಂದು ಬಿಟ್ಟೀತು ಜೋಕೆ, ದೂರ ಇರು ಮಗು” ಎಂದು ಅಮ್ಮ ಎಚ್ಚರಿಸಿದಳು.
ಬಹಳ ಹೆದರಿದವನಂತೆ ಕೃಷ್ಣ ಮುಖ ಮಾಡಿದ. “ಅಯ್ಯೋ ನನ್ನ ಅಮ್ಮ. ನಾನು ದೂರ ಹೋದರೇನು? ಗಡಿಗೆಯೊಳಗಿನ ಗುಮ್ಮ ನಿನ್ನನ್ನು ಬಿಟ್ಟೀತೆ? ಅದು ನಿನ್ನನ್ನು ತಿಂದು ಬಿಟ್ಟರೆ ನಾನೇನು ಮಾಡುವುದು. ಇರು ನಾನು ಅದಕ್ಕೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ” ಎಂದು ಕೃಷ್ಣ ಗಡಿಗೆಯೊಳಗೆ ಕೈಹಾಕಿ ಎರಡು ಕೈಗಳಿಂದಲೂ ಬೆಣ್ಣೆಯ ಮುದ್ದೆಗಳನ್ನು ಚಾಚಿ ತೆಗೆದು ನುಂಗಿ ಬಿಟ್ಟ, “ಗಡಿಗೆಯ ಗುಮ್ಮ ಮಾಯವಾಗಿ ಬಿಟ್ಟ” ಎಂದು ಚಪ್ಪಾಳೆ ತಟ್ಟಿ ನಗತೊಡಗಿದ.
Leave a Reply