ಗಜೇಂದ್ರ ಮೋಕ್ಷ

“ರಾಜ ಇಂದಿನಿಂದ ಏಳು ದಿನಗಳಲ್ಲಿ ಸಾವುಂಟಾಗಲಿ” ಎಂದು ಬ್ರಾಹ್ಮಣ ಪುತ್ರನು ಪರೀಕ್ಷಿತನಿಗೆ ಏಳು ದಿನಗಳಲ್ಲಿ ಸಾವು ಎನ್ನುವ ಶಾಪವಿತ್ತನು. ಅಮರಣ ಉಪವ್ಯಾಸ ವ್ರತವನ್ನು ಹೊತ್ತು ಯಮುನಾ ತೀರದಲ್ಲಿ ರಾಜನು ಆಸೀನನಾದನು. ವ್ಯಾಸ ಪುತ್ರರಾದ ಶುಕಮುನಿಗಳು ಅಲ್ಲಿಗೆ ಬಂದರು. ಭಾಗವತ ಕಥಾ ಶ್ರವಣ, ಕೀರ್ತನೆ ಆರಂಭವಾಯಿತು. ಅನೇಕ ಋಷಿವರೇಣ್ಯರು ಭಾಗವತ ಶ್ರವಣದಲ್ಲಿ ಭಾಗವಹಿಸಲು ಮತ್ತು ಪರೀಕ್ಷಿತನ ವೈಭವೋಪೇತ ಮರಣವನ್ನು ವೀಕ್ಷಿಸಲು ಅಲ್ಲಿ ಸೇರಿದರು. ದಕ್ಷ ಯಜ್ಞಭಂಗ, ವಿಶ್ವ ಸೃಷ್ಟಿಯಿಂದ ಹರಿನಾಮದ ಮಹಿಮೆ ಹೀಗೆ ಹತ್ತು ಹಲವಾರು ವಿಷಯಗಳ ಚರ್ಚೆ ನಡೆಯುತ್ತಿತ್ತು. ಪ್ರಾಸಂಗಿಕವಾಗಿ ಒಮ್ಮೆ ಶುಕಮುನಿಗಳು  “ಮಹಾವಿಷ್ಣುವು ಹರಿಮೇಧ ಮತ್ತು ಹರಿಣಿ ದಂಪತಿಗಳ ಮಗನಾಗಿ ಹರಿ ಎಂಬ ಹೆಸರಿನಿಂದ ಅವತರಿಸಿದ. ಆಗ ಭಗವಂತನು ಮೊಸಳೆ ಬಾಯಿಗೆ ಸಿಕ್ಕಿ ಮೊರೆಯಿಡುತ್ತಿದ್ದ  ಗಜರಾಜನನ್ನು ರಕ್ಷಿಸಿದನು” ಎಂದು ಹೇಳಿದರು. ಗಜೇಂದ್ರನ ಕತೆಯನ್ನು ಇನ್ನಷ್ಟು ವಿಸ್ತಾರವಾಗಿ ಕೇಳಬೇಕೆಂದು ಪರೀಕ್ಷಿತನಿಗೆ ಕುತೂಹಲ ಕೆರಳಿತು. ಶುಕಮುನಿಗಳು ಗಜರಾಜನ ಪೂರ್ವ ಜನ್ಮದ ಕತೆಯ ಸಮೇತ ಆ ಪ್ರಸಂಗವನ್ನು ವಿವರಿಸಿದರು.

ಗಜೇಂದ್ರನು ಹಿಂದಿನ ಜನ್ಮದಲ್ಲಿ ದಕ್ಷಿಣ ಭಾರತದ ದ್ರಾವಿಡ ಪ್ರಾಂತ್ಯದಲ್ಲಿದ್ದ ಪಾಂಡ್ಯ ದೇಶದ ದೊರೆಯಾಗಿದ್ದನು. ವೈಷ್ಣವನಾಗಿದ್ದ ಆತನ ಹೆಸರು ಇಂದ್ರದ್ಯುಮ್ನ. ವರ್ಣಾಶ್ರಮ ಪದ್ಧತಿಯ ಪ್ರಕಾರ ಮಹಾರಾಜನು ಸಾಂಸಾರಿಕ ಜೀವನದಿಂದ ನಿವೃತ್ತನಾಗಿ ಮಲಯಾಚಲಕ್ಕೆ ಹೋಗಿ, ಅಲ್ಲೊಂದು ಚಿಕ್ಕ ಪರ್ಣಕುಟಿ ಕಟ್ಟಿಕೊಂಡನು. ಆತ ಜಟೆ ಬಿಟ್ಟು, ವ್ರತದಲ್ಲಿರುತ್ತಿದ್ದ. ಒಮ್ಮೆ ಇಂದ್ರದ್ಯುಮ್ನನು ಮೌನವ್ರತದಲ್ಲಿದ್ದು ಭಗವಂತನ ಧ್ಯಾನದಲ್ಲಿರುವಾಗ ಅಗಸ್ತ್ಯ ಮಹರ್ಷಿಗಳು ಅಲ್ಲಿಗೆ ಬಂದರು. ಇಂದ್ರದ್ಯುಮ್ನ ಮೌನದಲ್ಲಿದ್ದು ಸ್ವಾಗತ ಕೋರಲಿಲ್ಲ ಎಂದು ಅಗಸ್ತ್ಯಮುನಿಗೆ ಕೋಪ ಬಂದಿತು. ಇಂದ್ರದ್ಯುಮ್ನನು ಬ್ರಾಹ್ಮಣನನ್ನು ಅವಮಾನಿಸಿರುವುದರಿಂದ ಅವನು ಜಡವೂ, ಮಂದವೂ ಆದ ಆನೆಯಾಗಲಿ ಎಂದು ಶಾಪ ಕೊಟ್ಟರು. ಇಂದ್ರದ್ಯುಮ್ನ ಈ ಶಾಪವನ್ನು ಭಗವಂತನ ಇಚ್ಛೆ ಎಂದು ಭಾವಿಸಿ ಸ್ವೀಕರಿಸಿದನು. ಮುಂದಿನ ಜನ್ಮದಲ್ಲಿ ಇಂದ್ರದುಮ್ಯನು ಆನೆಗಳ ರಾಜನಾಗಿ ಜನಿಸಿದನು. ಕ್ಷೀರಸಾಗರದ ಮಧ್ಯದಲ್ಲಿರುವ ತ್ರಿಕೂಟ ಪರ್ವತದ ಕಣಿವೆಯಲ್ಲಿ ವರುಣನು ಬೆಳೆಸಿದ ಋತುಮತ ಎಂಬ ಒಂದು ಉದ್ಯಾನವನವಿತ್ತು. ಈ ತ್ರಿಕೂಟ ಪರ್ವತದ ತಪ್ಪಲಿನಲ್ಲಿದ್ದ ಅರಣ್ಯದಲ್ಲಿದ್ದ ಆನೆಗಳ ದೊಡ್ಡ ಗುಂಪಿಗೆ ಗಜೇಂದ್ರ ಎಂಬ ಆನೆಯು ನಾಯಕನಾಗಿತ್ತು. ಹೆಣ್ಣಾನೆಗಳ ಗುಂಪಿನೊಡನೆ ಒಮ್ಮೆ ಗಜೇಂದ್ರನು ಸರೋವರದ ಕಡೆ ನಡೆದನು. ಗಜೇಂದ್ರನ ಭೀತಿಯಿಂದ ಹುಲಿ, ಸಿಂಹ, ಘೇಂಡಾಮೃಗ, ಹಾವು, ಶರಭದಂತಹ ಭಯಂಕರ ಪ್ರಾಣಿಗಳು ಪಲಾಯನಗೈದವು. ನರಿ, ತೋಳ, ಕಾಡೆಮ್ಮೆ, ಕರಡಿ, ಹಂದಿಗಳು, ಜಿಂಕೆ, ಕೋತಿ, ಮುಳ್ಳು ಹಂದಿ, ಮೊಲ ಮುಂತಾದ ಪ್ರಾಣಿಗಳು ಗಜೇಂದ್ರನ ಕೃಪೆಗೆ ಒಳಗಾಗಿದ್ದ ಕಾರಣ ಕಾಡಿನಲ್ಲಿ ಹಾಯಾಗಿ ಅಡ್ಡಾಡಿಕೊಂಡಿದ್ದವು.

ಗಜೇಂದ್ರನು ಹೆಣ್ಣಾನೆ ಮತ್ತು ಮರಿಯಾನೆಗಳ ಹಿಂಡಿನೊಡನೆ ತ್ರಿಕೂಟ ಪರ್ವತದಲ್ಲಿ ಸಂಚರಿಸುತ್ತಿದ್ದಾಗ ಆ ಪರ್ವತ ಕಂಪಿಸಿತು. ಮದೋನ್ಮತ್ತ ದೃಷ್ಟಿಯಿಂದ ಕೂಡಿದ ಗಜೇಂದ್ರನು ಆ ಸರೋವರದ ಮೇಲಿನಿಂದ ಬೀಸಿ ಬಂದ ಗಾಳಿಯಲ್ಲಿ ಬೆರೆತಿದ್ದ ಕಮಲ ಪುಷ್ಪಗಳ ಪರಾಗದ ವಾಸನೆಯನ್ನು ಸವಿದು ಬಾಯಾರಿಕೆಯಿಂದ ಪರಿವಾರದೊಡನೆ ಸರೋವರದ ದಂಡೆಗೆ ಬಂದನು. ಸರೋವರದಲ್ಲಿ ಇಳಿದು ಚೆನ್ನಾಗಿ ಸ್ನಾನ ಮಾಡಿದ ನಂತರ ಗಜೇಂದ್ರನು ಅದರ ಶೀತಲ ಶುಭ್ರ ನೀರನ್ನು ಕುಡಿದು ತೃಪ್ತನಾದನು. ತನ್ನ ಹೆಂಡತಿ ಮಕ್ಕಳ ಮೇಲೆ ತುಂಬಾ ಮೋಹವಿದ್ದ ಅವನು ಭ್ರಮೆಗೆ ಒಳಗಾದನು. ಏಕೆಂದರೆ ಅವನಿಗೆ ಆಧ್ಯಾತ್ಮಿಕ ಜ್ಞಾನ ಇರಲಿಲ್ಲ.

ಸೊಂಡಿಲಿನಿಂದ ನೀರನ್ನು ಮೊಗೆದು ಮೊಗೆದು ತನ್ನ ಹೆಂಡತಿ ಮಕ್ಕಳ ಮೇಲೆ ಎರಚಿದನು. ಅವನು ಆಗ ಉಂಟಾಗುತ್ತಿದ್ದ ದೈಹಿಕ ಶ್ರಮವನ್ನೂ ಲೆಕ್ಕಿಸಲಿಲ್ಲ. ಆಗ ಒಂದು ವಿಚಿತ್ರ ಘಟನೆ ನಡೆಯಿತು. ದೈವೇಚ್ಛೆಯಂತೆ ಬಲಶಾಲಿಯಾದ ಮೊಸಳೆಯೊಂದು ಕೋಪದಿಂದ  ಗಜೇಂದ್ರನ ಮೇಲೆ ದಾಳಿ ಮಾಡಿ ಕಾಲನ್ನು ಕಚ್ಚಿ ಹಿಡಿಯಿತು. ಆನೆ, ಮೊಸಳೆ ನೀರಿನ ಒಳಗೆ  ಹೊರಗೆ  ಪರಸ್ಪರರನ್ನು ಎಳೆದಾಡುತ್ತಾ ಹೋರಾಡತೊಡಗಿದವು. ಗಜಪತಿ ಕಷ್ಟದಲ್ಲಿರುವುದನ್ನು ಕಂಡು ದುಃಖಿತರಾದ ಅವನ ಪತ್ನಿಯರು ಆನೆಗೆ ಸಹಾಯ ಮಾಡಲು ಯತ್ನಿಸಿದವು. ಆದರೆ ಮೊಸಳೆಯ ದೈತ್ಯ ಶಕ್ತಿಯಿಂದಾಗಿ ಆ ಪ್ರಯತ್ನ  ಕೈಗೂಡಲಿಲ್ಲ. ಈ ಘನ ಘೋರ ಹೋರಾಟ ಒಂದು ಸಾವಿರ ವರ್ಷಗಳ ಕಾಲ ನಡೆಯಿತು. ಆಕಾಶದಲ್ಲಿ ನೆರೆದ ದೇವತೆಗಳು ಈ ಭೀಕರ ಸಮರವನ್ನು ಬೆರಗಿನಿಂದ ನೋಡುತ್ತಿದ್ದರು.

ಎಷ್ಟಾದರೂ ಮೊಸಳೆಗೆ ನೀರು ಮೂಲ ಸ್ಥಾನವಲ್ಲವೆ? ಸಾವಿರ ವರ್ಷಗಳ ಕಾಲ ಗಜೇಂದ್ರನು ನೀರಲ್ಲೇ ನಿಂತು ಹೋರಾಡಿ ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋದ. ಅದೇ ಸಮಯದಲ್ಲಿ ಜಲಚರವಾದ ಮೊಸಳೆಯ ಶಕ್ತಿ, ಉತ್ಸಾಹ  ಕ್ರಮೇಣ ಹೆಚ್ಚಾಯಿತು.

ಗಜೇಂದ್ರನಿಗೆ ತನ್ನ ಪರಿಸ್ಥಿತಿಯ ಅರಿವಾಗತೊಡಗಿತು. ಬಲಿಷ್ಠ ದೇಹವಿದ್ದೂ ತನ್ನನ್ನು ಆಪತ್ತಿನಿಂದ ಪಾರುಮಾಡಿಕೊಳ್ಳಲು ಆಗುತ್ತಿಲ್ಲವಲ್ಲಾ ಎಂದು ನೆನೆದು ಅವನು ಪ್ರಾಣಭೀತಿಯಿಂದ ತತ್ತರಿಸಿದನು. ಮರಣ ಭೀತಿಗೆ ಅಜ್ಞಾನಿಗಳು ಎಂದಾದರೂ ಹೊರತಾಗಿರುವರೇ? ನನ್ನ ಮಿತ್ರರೂ, ಬಂಧುಗಳೂ ಆದ ಆನೆಗಳು ಮೊಸಳೆಯಿಂದ ನನ್ನನ್ನು ರಕ್ಷಿಸಲಿಲ್ಲ. ಇನ್ನು ಪತ್ನಿಯರೋ ಅಸಹಾಯಕರು. ಈ ಮೊಸಳೆ ನನ್ನ ಮೇಲೆ ಆಕ್ರಮಣ ನಡೆಸಿರುವುದು ದೇವೋತ್ತಮ ಪರಮ ಪುರುಷನ ಇಚ್ಛೆಯಿಂದ. ಆದ್ದರಿಂದ ಈ ಸಂಕಟದಿಂದ ಪಾರಾಗಲು ಅವನನ್ನೇ ಆಶ್ರಯಿಸುತ್ತೇನೆ ಎಂದು ಗಜೇಂದ್ರನು ನಿಶ್ಚಯಿಸಿದನು. “ಸಂಕಟ ಬಂದಾಗ ವೆಂಕಟರಮಣ” ಎಂಬಂತೆ ಇದು ತೋರಬಹುದು. ಆದರೆ ಗಜೇಂದ್ರನಾಗಲಿ, ನಾವಾಗಲಿ ಸಂಕಟದಲ್ಲಿ  ಭಗವಂತನನ್ನಲ್ಲದೆ ಮತ್ತಾರನ್ನು ತಾನೇ ಆಶ್ರಯಿಸಬಹುದು? ಈ ಸಮಯದಲ್ಲಿ ಗಜೇಂದ್ರನು ಮಾಡಿದ ಚಿಂತನೆ ಆರ್ತ ಪ್ರಾರ್ಥನೆಯಾಗಿ ಹೊಮ್ಮಿ, ಆಧ್ಯಾತ್ಮ ಸಾಧಕರಿಗೆ ಬೆಳಕು ಬೀರುತ್ತಿದೆ.

ಭಯಂಕರವಾದ ಕಾಲಸರ್ಪ ಅನಾದಿ ರೂಪದ್ದು, ಅದು ನಿರಂತರವಾಗಿ ಎಲ್ಲರನ್ನೂ ಬೆಂಬತ್ತಿ ಬರುತ್ತಿದೆ. ಅದು ಹೆದರುವುದು ಭಗವಂತನಿಗೆ ಮಾತ್ರ. ಆದ್ದರಿಂದಲೇ ಸಕಲ ಜೀವಿಗಳಿಗೆ ಆಶ್ರಯದಾತನಾದ ಭಗವಂತನಿಗೆ ಗಜೇಂದ್ರನು ಶರಣಾದನು. ಇಲ್ಲಿ ಮೊಸಳೆ ಎಂದರೆ ಕಾಲವೆಂಬ ಪಾಶ ಅದರಡಿಯಲ್ಲಿ ಸಿಕ್ಕಿ ಗಜೇಂದ್ರ ಜರ್ಜರಿತನಾದ. ಗಜೇಂದ್ರನು ದೇವೋತ್ತಮ ಪರಮ ಪುರುಷನ ಪಾದಪದ್ಮದಲ್ಲಿ ಆಶ್ರಯ ಪಡೆದ ಸಂದರ್ಭ, ಅವನ ಪೂರ್ವಜನ್ಮ ವೃತ್ತಾಂತಗಳು ಆನಂದ ನೀಡುವಂತಹವು.

ಮೊಸಳೆಯೊಡನೆ ಸಾವಿರ ವರ್ಷಗಳ ಕಾಲ ಹೋರಾಡಿ ಗಜೇಂದ್ರನು ದಣಿದನು. ಶ್ರೀಕೃಷ್ಣನ ಕೃಪೆಯಿಂದ ಹಿಂದಿನ ರಾಜಜನ್ಮದಲ್ಲಿ  ಅರಿತಿದ್ದ ಮಂತ್ರ ಜ್ಞಾಪಕವಾಯಿತು. ಪರಿಪೂರ್ಣ ಬುದ್ಧಿಯಿಂದ ತನ್ನ ಮನಸ್ಸನ್ನು ತನ್ನ ಹೃದಯದಲ್ಲಿ ಇರಿಸಿ ಮಂತ್ರವನ್ನು ಜಪಿಸಿದನು.

ಓಂ ನಮೋ ಭಗವತೇ ತಸ್ಮೈಯತ ಏತಚ್ಚಿದಾತ್ಮಕಮ್‌ ।

ಪುರುಷಾಯಾದಿಬೀಜಾವು ಪರೇಶಾಯಭಿಧೀಮಹಿ ।

ಗಜೇಂದ್ರನು ಮಾಡಿದ ಶರಣಾಗತಿ ಪ್ರಾರ್ಥನೆಯಲ್ಲಿ ಭಕ್ತಿಪಂಥಕ್ಕೆ ಪ್ರೇರಣೆ ನೀಡುವ ಅನೇಕ ಅಂಶಗಳಿವೆ. ಅದರಲ್ಲಿ ಕೆಲವನ್ನು ಇಲ್ಲಿ ಸ್ಮರಿಸಬಹುದು.

ಪರಮಾತ್ಮನೇ ಎಲ್ಲಕ್ಕೂ ಮೂಲ ದ್ರವ್ಯ, ಪರಮ ವೇದಿಕೆ. ಈ ಬ್ರಹ್ಮಾಂಡ ಸೃಷ್ಟಿಗೆ ಅವನೊಬ್ಬನೇ ಕಾರಣಕರ್ತ, ಕಾರ್ಯ-ಕಾರಣದ ದೃಷ್ಟಿಯಿಂದ ವಿಭಿನ್ನನಾಗಿ ಗೋಚರಿಸುವವನೂ ಅವನೇ, ಸಮಸ್ತದೊಳಗೂ ಸ್ವಯಂ ಪರಿಪೂರ್ಣನಾಗಿರುವ ಭಗವಂತನಿಗೆ ನಾನು ಶರಣಾಗುತ್ತೇನೆ.

ಎಲ್ಲಕ್ಕೂ ಭಗವಂತನೇ ಸಾಕ್ಷಿ. ಅವನೇ ವೀಕ್ಷಕ ಕೂಡ, ಈ ಬ್ರಹ್ಮಾಂಡ ಕಾಣುವಂತೆ, ಕೆಲವೊಮ್ಮೆ ಕಾಣದಂತೆ ಮಾಡುವವನೂ ಆತನೇ. ಎಲ್ಲಕ್ಕೂ ಮಿಗಿಲಾಗಿರುವ ಪರಮಾತ್ಮ ನನ್ನನ್ನು ರಕ್ಷಿಸಲಿ. ಅವನ ಪ್ರಭಾವದಿಂದ ಉಂಟಾದ ಗ್ರಹಗಳು, ಗ್ರಹಪಾಲಕರೂ ಇಡೀ ಬ್ರಹ್ಮಾಂಡವೂ ನಾಶವಾದಾಗ ಕಗ್ಗತ್ತಲೆ ಕವಿಯುತ್ತದೆ. ಆಗಲೂ ಕಗ್ಗತ್ತಲೆಯ ಆಚೆಗೂ ಭಗವಂತ ಇದ್ದೇ ಇರುತ್ತಾನೆ. ಆಕರ್ಷಕ ಉಡುಪು ಧರಿಸಿ ನಾನಾ ಚಲನವಲನಗಳಿಂದ ರಂಗಭೂಮಿಯ ಮೇಲೆ ನರ್ತಿಸುವ ಕಲಾವಿದನನ್ನು ಪ್ರೇಕ್ಷಕರು ಹೇಗೆ ಗುರುತು ಹಿಡಿಯಲಾರರೋ ಅದೇ ರೀತಿ ಪರಮ ಕಲಾವಿದನಾದ ಭಗವಂತನ ಕ್ರಿಯೆ, ಲಕ್ಷಣಗಳನ್ನು ದೇವತೆಗಳಾಗಲಿ ಮಹರ್ಷಿಗಳಾಗಲಿ ಅರಿಯಲಾರರು. ಅಂದ ಮೇಲೆ  ಇನ್ನು  ಪ್ರಾಣಿಗಳಂತೆ ಬುದ್ಧಿಹೀನರಾದವರಿಗೆ ಭಗವಂತ ಅರ್ಥವಾಗುವುದೆಂತು?

ಅರಣ್ಯದಲ್ಲಿ ಬ್ರಹ್ಮಚರ್ಯ, ವಾನಪ್ರಸ್ಥ, ಸಂನ್ಯಾಸ  ವ್ರತಗಳು  ಆಚರಿಸುತ್ತಾ ವಿರಾಗಿಗಳೂ, ಮಹರ್ಷಿಗಳೂ ಭಗವಂತನ ಮಂಗಳಮಯ ಪಾದಕಮಲಗಳನ್ನು ನೋಡಲು ಬಯಸುತ್ತಾರೆ. ಅಂತಹ ಪರಮ ಪುರುಷನೇ ನನ್ನ ಗುರಿ ಎಂದು ನಾನಾ ವಿಧವಾಗಿ ಗಜೇಂದ್ರನು ಪ್ರಾರ್ಥಿಸಿದನು.

ಭಕ್ತಿಪೂರ್ವಕ ಅನುಸಂಧಾನವೇ ಗಜೇಂದ್ರನ ಶರಣಾಗತಿಯ ಮೂಲ ವಸ್ತುವಾಗಿತ್ತು. ಗಜೇಂದ್ರನು ನೃಸಿಂಹದೇವರ ಉಗ್ರರೂಪಕ್ಕೆ, ವರಾಹ ರೂಪದ ವಾಸುದೇವನ    ಮೂರ್ತಿಗೆ, ನಿರಾಕಾರವಾದವನ್ನು  ಬೋಧಿಸಿದ ಶ್ರೀ ದತ್ತಾತ್ರೇಯನಿಗೆ, ಭಗವಾನ್‌ ಬುದ್ಧನಿಗೆ ಹಾಗೂ ಇನ್ನಿತರ ಅವತಾರಗಳಿಗೆಲ್ಲಾ ನಮಸ್ಕರಿಸಿದನು. ಸಾತ್ವಿಕ, ರಾಜಸ, ತಾಮಸಗಳಲ್ಲಿ ಪ್ರಕಟಗೊಳ್ಳುವ ಲೌಕಿಕ ವ್ಯಾಪ್ತಿಯೊಳಗಿನ ಅವತಾರಗಳ ಗುಣಗಾನ ಮಾಡಿದನು.

ಗಜೇಂದ್ರನು ಇಡೀ ಸೃಷ್ಟಿಯ ಸಾಕ್ಷಿಯಾದ ಪರಮ ಪುರುಷನನ್ನು ಕುರಿತು ಸಕಲ ಲೌಕಿಕ ಶಕ್ತಿಯ ಮೂಲವಾಗಿರುವ ನೀನು ಲೌಕಿಕ ದೇಹದ ಒಡೆಯನೂ ಆಗಿರುವೆ. ಆದ್ದರಿಂದ ನೀನು ಪರಮಪೂರ್ಣ ಎಂದು ಭಗವಂತನಿಗೆ ನಮಸ್ಕರಿಸಿದನು. ಮುಂದುವರಿದು, ಇಂದ್ರಿಯಗಳ ಸಕಲ ವಿಷಯಗಳನ್ನೂ ನೋಡುತ್ತಿರುವ ಭಗವಂತನ ಅನುಗ್ರಹವಿರದಿದ್ದರೆ ಲೋಕದ ಸಂಶಯಗಳ ಸಮಸ್ಯೆಯ ಪರಿಹಾರ ಸಾಧ್ಯವಿಲ್ಲ. ಈ ಲೌಕಿಕ ಪ್ರಪಂಚವು ಭಗವಂತನ ನೆರಳು ಎಂದು ಭಕ್ತಿಪೂರ್ವಕವಾಗಿ ಭಗವಂತನನ್ನು ನಮಿಸಿದ.

ಭಗವಂತನು ಎಲ್ಲಾ ಕಾರಣಗಳಿಗೂ ಮೂಲನಾದರೂ ಅವನಿಗೆ ಯಾವುದೇ ಕಾರಣ ಪರಂಪರೆಯಿಲ್ಲ. ಪಂಚರಾತ್ರ, ವೇದಾಂತ ಸೂತ್ರಗಳಂತಹ ಶಾಸ್ತ್ರಗಳೆಲ್ಲಾ ಭಗವಂತನ ಪ್ರತಿನಿಧಿಗಳು. ಸಮಸ್ತ ವೈದಿಕ ಜ್ಞಾನಕ್ಕೂ ಆಶ್ರಯ ನಿಮ್ಮಲ್ಲಿ ನಾನು ಆಶ್ರಯ ಪಡೆದಿದ್ದೇನೆ. ಆಸ್ತಿಕರಿಗೆಲ್ಲಾ ಮುಖ್ಯ ಆಧಾರವಾಗಿರುವ  ಮೋಕ್ಷ ಪ್ರದಾಯಕನಾದ ಭಗವಂತನಿಗೆ ಗಜೇಂದ್ರನು ನಮಸ್ಕರಿಸಿದನು.

ಭಕ್ತಿ ಮಾರ್ಗದಲ್ಲಿ ಭಗವಂತನ ಮೇಲೆ ದೃಢವಾದ ಭಕ್ತಿ ಅತಿ ಮುಖ್ಯ. ಗಜೇಂದ್ರನು ಘೋರ ಕಷ್ಟದಲ್ಲಿ  ಸಿಲುಕಿದ್ದರೂ ಭಗವಂತನನ್ನು ನಿಷ್ಠೆಯಿಂದ ನಂಬಿದನು:

ಮಾದೃಕ್ಪಪನ್ನ ಪಶುಪಾಶ ವಿಮೋಕ್ಷಣಾಯ ಮುಕ್ತಾಯ

ಭೂರಿಕರುಣಾಯ ಮನೋಽಲಯಾಯ

ಸ್ವಾಂಶೇನ ಸರ್ವತನುಭೃನ್ಮನಸಿ ಪ್ರತೀತ

ಪ್ರತ್ಯಗ್ದೃಶೇ ಭಗವತೇ ಬೃಹತೇ ನಮಸ್ತೇ

ದೇವರಾದರೋ ಸರ್ವ ಸ್ವತಂತ್ರ. ನಾನಾದರೋ ಶರಣಾಗತ ಆರ್ತ. ಈ ಅಪಾಯಕರ ಸನ್ನಿವೇಶದಲ್ಲಿ ನಾನು ಸಿಕ್ಕಿಬಿದ್ದಿರುವೆ. ಆದರೆ ಖಂಡಿತವಾಗಿ ಭಗವಂತನು ನನ್ನನ್ನು ಬಿಡುಗಡೆ ಮಾಡುವನೆಂಬ ದೃಢ ವಿಶ್ವಾಸ ಗಜೇಂದ್ರನದು. ಅಲ್ಲದೆ ಅತ್ಯಂತ ಕರುಣಾಶಾಲಿಯಾದ ಭಗವಂತನು ತನ್ನನ್ನು ಬಿಡುಗಡೆ ಮಾಡಲು ಸತತವಾಗಿ ಪ್ರಯತ್ನ ಮಾಡುತ್ತಿರುವನು ಎಂಬ ದೃಢಶ್ರದ್ಧೆಯಿಂದಲೆ ಗಜೇಂದ್ರನು ಪ್ರಾರ್ಥಿಸಿದನು. ವ್ಯಾಪಕವಾದ ವಿಷ್ಣು ತತ್ತ್ವವು ಗಜೇಂದ್ರನ ಹೃದಯದಲ್ಲಿಯೂ ಇದೆ. ಆ ತತ್ತ್ವವು ಕರುಣೆಯಿಂದ ತನ್ನನ್ನು ಕಾಪಾಡದೆ ಇರದು ಎಂಬ ನಂಬುಗೆ ಗಜೇಂದ್ರನ ಸ್ತೋತ್ರಗಳ ಹಿಂದಿದ್ದ ಪ್ರೇರಣೆ.

ಎಲ್ಲಕ್ಕೂ ಮಿಗಿಲಾಗಿ ಗಜೇಂದ್ರನ ಪ್ರಾರ್ಥನೆಯನ್ನು ಕೇವಲ ಆನೆಗಳ ರಾಜನಾದ ಪ್ರಾಣಿಯೊಂದರ ಪ್ರಾರ್ಥನೆ ಎಂದು ಮಾತ್ರವೇ ತಿಳಿಯಬಾರದು. ಪ್ರಾಚೀನ ಪುರಾಣ ಗ್ರಂಥಗಳಲ್ಲಿ ನೂರಾರು ವಿಷಯಗಳನ್ನು ಸಂಕೇತಗಳ ರೂಪದಲ್ಲಿ ಅಡಕವಾಗಿ ಹೇಳಿರುತ್ತಾರೆ. ಭಗವಂತನನ್ನು ಮರೆತು ದರ್ಪದಿಂದ ಮೆರೆಯುವವರೆಲ್ಲರೂ ಪ್ರಾಣಿಗಳೇ. ಆದರೆ ಒಮ್ಮೆ ಭಗವಂತನ ಕಡೆ ಮನಸ್ಸು  ಹರಿದರೆ, ಅವನನ್ನು ಸತತವಾಗಿ ಧ್ಯಾನಿಸತೊಡಗಿದರೆ ದೇವರು ಎಂದಿಗೂ ಕೈಬಿಡುವುದಿಲ್ಲ ಎಂಬ ತತ್ತ್ವವನ್ನು ವಿಶದಪಡಿಸಲೆಂದೇ ಈ ಕಥೆಯಿರುವುದು. ಇಂದ್ರದುಮ್ಯನು ಋಷಿ ಶಾಪದಿಂದ ಗಜರಾಜನಾದಂತೆಯೇ ದೇವಲ ಋಷಿಯ ಶಾಪದಿಂದ ಹೂಹೂ ಗಂಧರ್ವನು ಮೊಸಳೆಯಾಗಿದ್ದನು. ಅವನ ಉಪಕಥೆ ಗಜೇಂದ್ರ ಮೋಕ್ಷದ ಮತ್ತೊಂದು ಎಳೆ.

ಮೊಸಳೆಯಾಗಿ ಗಜೇಂದ್ರನನ್ನು ಪೀಡಿಸಿದ ವ್ಯಕ್ತಿ ಹಿಂದೆ ಗಂಧರ್ವ ಲೋಕದಲ್ಲಿ ರಾಜನಾಗಿದ್ದ ಹೂಹೂ. ಆತ ಗಂಧರ್ವರ ರಾಜ. ಒಂದು ಸಲ ಹೂಹೂ ರಾಜ ತನ್ನ ಪರಿವಾರದ ಸ್ತ್ರೀಯರೊಡನೆ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದ. ಹಾಗೆ ಆಟವಾಡುವಾಗ ಅಲ್ಲಿ ಸ್ನಾನ ಮಾಡುತ್ತಿದ್ದ ದೇವಲಋಷಿಯ ಕಾಲನ್ನು ಹಿಡಿದೆಳೆದನು. ಆಗ ಕೋಪಗೊಂಡ ದೇವಲರು ಹೂಹೂ ರಾಜನಿಗೆ ಮೊಸಳೆಯಾಗು ಎಂದು ಶಾಪಕೊಟ್ಟರು. ಹೂಹೂ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ಋಷಿಯಲ್ಲಿ ಕ್ಷಮೆ ಕೋರಿದನು. ಕರುಣಾಶಾಲಿಯಾದ ದೇವಲರು ಮುಂದೆ ಶ್ರೀಹರಿಯು ಗಜೇಂದ್ರನನ್ನು ಉದ್ಧರಿಸಿದಾಗ ನಿನಗೆ ಶಾಪ ವಿಮೋಚನೆಯಾಗುತ್ತದೆ ಎಂದು ವರ ನೀಡಿದರು. ಅದೇ ರೀತಿ ಹೂಹೂ ರಾಜನು ಮೊಸಳೆಯಾಗಿ ಜನ್ಮ ತಳೆದು ತ್ರಿಕೋನ ಪರ್ವತದ ತಪ್ಪಲಿನಲ್ಲಿದ್ದ ಅರಣ್ಯದ ಬಳಿಯ ಸರೋವರದಲ್ಲಿ ವಾಸಿಸುತ್ತಿದ್ದನು. ಇಂದ್ರದ್ಯುಮ್ನನು ಗಜರಾಜನಾಗಿ ಜನಿಸಿ, ಪರವಾರದೊಡನೆ ಜಲಕ್ರೀಡೆಗೆಂದು ಸರೋವರ ಹೊಕ್ಕಾಗ ಅವನ ಕಾಲನ್ನು ಕಚ್ಚಿಹಿಡಿದನು. ಇಲ್ಲಿ ಗಜೇಂದ್ರನು ಕೇವಲ ಮೊಸಳೆಯಿಂದ ಪಾರಾಗಲು ಸತತವಾಗಿ ಭಗವಂತನನ್ನು ಪ್ರಾರ್ಥಿಸುತ್ತಿದ್ದಾನೆ ಎಂದು ಭಾವಿಸುವುದು ಸರಿಯಲ್ಲ. ಮೊಸಳೆಯು ಒಂದು ಲೌಕಿಕ ಸಂಕಟವೂ ಹೌದು. ಜಗತ್ತಿನ ಸಕಲ ಲೌಕಿಕ ಸಂಕಟಗಳ ಪ್ರತೀಕವೂ ಹೌದು. ಒಮ್ಮೆ ಮೊಸಳೆಯಿಂದ ಗಜೇಂದ್ರ ಪಾರಾದನೆಂದರೆ, ಅವನು ಲೌಕಿಕ ಜೀವನ ಪಥದಿಂದ ವಿಮೋಚನೆಯನ್ನು ಪಡೆದಂತೆಯೇ. ಆದ್ದರಿಂದಲೇ ಗಜೇಂದ್ರನ ಪ್ರಾರ್ಥನೆ ಲೌಕಿಕ ಜಂಜಡಗಳಿಂದ ಮುಕ್ತನಾಗಬೇಕೆಂಬ ಜೀವಿಯ ಪ್ರಾರ್ಥನೆಯಾಗಿದೆ.

ಜಗತ್ತಿನಲ್ಲಿ ಎಷ್ಟು ಆನೆಗಳು ಅದೆಷ್ಟು ಸಲ ಎಷ್ಟೊಂದು ಜಲಚರಗಳ ಬಾಯಿಗೆ ಆಹಾರವಾಗಿಲ್ಲ? ಕೇವಲ ಗಜೇಂದ್ರನಿಗೆ ಮಾತ್ರವೇ ಭಗವಂತನ ನೆನಪು ಬಂತಲ್ಲ! ಇದಕ್ಕೆ ಶ್ರೀಮದ್ಭಾಗವತದ ವ್ಯಾಖ್ಯಾನದಲ್ಲಿ ಭಕ್ತಿವೇದಾಂತ ಪ್ರಭುಪಾದರು ಸೂಕ್ತ ಸಮಾಧಾನ ಹೇಳಿರುತ್ತಾರೆ. ಲೋಕದಲ್ಲಿ ಕೆಲವು ಭಕ್ತರಿಗೆ ಭಗವಂತನ ಶ್ರವಣ, ಗಾನಗಳೇ ಸಾಕು. ಅವನ ನಾಮ ಸಂಕೀರ್ತನೆ ಮಾಡುತ್ತಾ ಸದಾ ದಿವ್ಯವಾದ ಆನಂದಸಾಗರದಲ್ಲಿ ತೇಲುತ್ತಿರುತ್ತಾರೆ. ಏಕೆಂದರೆ ಅವರಿಗೆ ಭಗವಂತನ ಸೇವೆಯ ವಿನಾ ಮತ್ತೇನೂ ಕಾಮನೆ ಇಲ್ಲ.  ಆದರೆ ಗಜೇಂದ್ರನ ಸ್ಥಿತಿ ಅದಲ್ಲ. ಅವನೀಗ ಆಪತ್ತಿನಲ್ಲಿದ್ದಾನೆ. ಅವನು ಭಗವಂತನನ್ನು ಪ್ರಾರ್ಥಿಸುತ್ತಿದ್ದಾನೆ. ಆದರೆ ಭಗವಂತನು ಬಾಹ್ಯ ಸಾಕ್ಷಾತ್ಕಾರಕ್ಕೆ ಅತೀತ ಎಂಬ ದಿವ್ಯರಹಸ್ಯ ಗಜೇಂದ್ರನಿಗೆ ಗೊತ್ತಿದೆ. ಏಕೆಂದರೆ ಗಜೇಂದ್ರನು `ಆಧ್ಯಾತ್ಮಿಕ ಯೋಗ ಗಮ್ಯ’ – ಅಂದರೆ ಆಧ್ಯಾತ್ಮಿಕ ನೆಲೆಯಲ್ಲಿ ಆತನು ಭಗವಂತನಿಗೆ ನಿಕಟವರ್ತಿ.

ಶ್ರೀಕೃಷ್ಣನನ್ನು ನೆನೆಯುತ್ತಾ, ಅವನ ಅನಂತ ನಾಮ ರೂಪಗಳನ್ನು ಗುಣಗಾನ ಮಾಡಿದಂತೆಲ್ಲಾ ಗಜೇಂದ್ರನಿಂದ ದೇವೋತ್ತಮ ಪರಮ ಪುರುಷನ ಅನಂತ ಶಕ್ತಿಯ ವರ್ಣನೆ ಹೊರ ಹೊಮ್ಮಿತು. ಭಗವಂತನಿಂದ ಹೊರಹೊಮ್ಮಿದ ಒಂದು ಶಕ್ತಿಯ ಕಿಡಿ ತಾನು, ಮತ್ತೆ ಅವನಲ್ಲಿ ಹಿಂದಿರುಗುವುದೇ ತನ್ನ ಗಂತವ್ಯ ಎಂಬ ಅರಿವು ಗಜೇಂದ್ರನಿಗೆ ಉಂಟಾಯಿತು. ಏಕೆಂದರೆ ಲೋಕದ ಎಲ್ಲಾ ಜೀವಿಗಳೂ ಭಗವಂತನ ವಿವಿಧ ರೂಪಾಂತರಗಳೇ ಎಂಬ ದರ್ಶನ ಅವನಿಗೆ ಹೊಳೆಯಿತು. ಭಗವಂತನು ಪಶು, ಪಕ್ಷಿ, ಅಸುರ, ಮಾನವ, ಸ್ತ್ರೀ-ಪುರುಷ-ನಪುಂಸಕ, ವ್ಯಕ್ತ-ಅವ್ಯಕ್ತ ಎಂಬ ಭೇದಗಳನ್ನು ಮೀರಿದ ಅನಂತಶಕ್ತಿ ಎಂಬ ಸಿದ್ಧಾಂತಕ್ಕೆ ಗಜೇಂದ್ರನು ತಲುಪಿದನು. ಗಜೇಂದ್ರನಿಗೆ ಅಂತರಂಗದಲ್ಲಿ ಪರಿಶುದ್ಧನಾದವನು ಮತ್ತು ಜಾಜ್ವಲ್ಯಮಾನವಾದ ಶ್ಲೋಕವನ್ನು ಕೀರ್ತಿಸಿದನು.

ಜಿ ಜೀವಿಷೇ ನಾಹಮಿಹಾಮುಯಾ ಕಿಮಂತರ್ಬಶ್ಚಾವೃತಯೇಭ ಯೋನ್ಯಾ ।

ಇಚ್ಛಾಮಿ ಕಾಲೇನ ನ ಯಸ್ಯ ವಿಪ್ಲವಸ್ತಸ್ಯಾತ್ಮ ಲೋಕಾವರಣಸ್ಯ ಮೋಕ್ಷಮ್‌

(8.3.25)

ಅರ್ಥಾತ್‌, ಮೊಸಳೆಯ ಆಕ್ರಮಣದಿಂದ ಬಿಡುಗಡೆಯಾದ ಬಳಿಕ ನಾನು ಮತ್ತೆ ಜೀವಿಸಬಯಸುವುದಿಲ್ಲ ಎಂಬ ಹಂತಕ್ಕೆ ಗಜೇಂದ್ರನು ಬಂದುಮುಟ್ಟಿದ. ಮೊದಲು ಪ್ರಾಣಭೀತಿಯಿಂದ ಭಗವಂತನ ಮೊರೆ ಹೊಕ್ಕ ಗಜೇಂದ್ರನು ಕ್ರಮೇಣ ಮೊಸಳೆಯು ಕಾಲನ್ನು ಹಿಡಿದಿದ್ದ ಸ್ಥಿತಿಯಲ್ಲೇ ಅದರ ಭೀತಿಯಿಂದ ಮುಕ್ತನಾದ. ಅವನಿಗೆ ಪ್ರಾಣಿ ದೇಹವನ್ನು ಹೊತ್ತು ಬದುಕುವುದಕ್ಕಿಂತ ಈ ಅಜ್ಞಾನದ ಕೋಶವಾಗಿರುವ ದೇಹದಿಂದ ಬಿಡುಗಡೆ ಹೊಂದಬೇಕೆಂಬ ಬಯಕೆ ಉದಯಿಸಿತು. ಮೋಕ್ಷದ ಬಯಕೆ ಗಜೇಂದ್ರನಲ್ಲಿ ಹುಟ್ಟಿದ್ದು ದೊಡ್ಡ ಘಟನೆ.  ಮೋಹ, ಲೋಭ ಮತ್ತು  ಕಾಮವಿದ್ದರೆ ದೇವೋತ್ತಮ  ಪರಮ  ಪುರುಷನ ಪಾದಕಮಲಗಳಲ್ಲಿ  ಮನಸ್ಸನ್ನು ಕೇಂದ್ರೀಕರಿಸಲು ಆಗುವುದಿಲ್ಲ. ಇಲ್ಲಿ ಗಜೇಂದ್ರನು   ಶ್ರೀವಿಷ್ಣುವಿಗೆ ಶರಣಾಗತನಾಗಿರುವುದರಿಂದ ಅವನಲ್ಲಿ ಭಕ್ತಿ ಉದಿಸಿ, ಚಿಗುರಿ, ಮೋಕ್ಷದ ಫಲವನ್ನು ಬಯಸತೊಡಗಿದ. ಇಂದ್ರಿಯಗಳ ಮೂಲಕ ಭಗವಂತನ ಅರಿವು ಸಾಕ್ಷಾತ್ಕಾರ ಸಾಧ್ಯವಿಲ್ಲ ಮಾತ್ರವಲ್ಲ ಇಂದ್ರಿಯ ನಿಗ್ರಹವಿಲ್ಲದವರಿಗೆ ಪರಮಾತ್ಮ ಅಗಮ್ಯ ಎಂಬ ಶ್ರದ್ಧೆ ಗಜೇಂದ್ರನಲ್ಲಿ ಮೊಳೆಯಿತು.

ಗಜೇಂದ್ರನ ಮೊರೆ ವಿಷ್ಣುವಿಗೆ ಕೇಳಿಸಿತು. ಅವನು ಭಕ್ತನೆಡೆಗೆ ಧಾವಿಸಿ ಬಂದನು. ಗಜೇಂದ್ರನು ಅವನನ್ನು ಕಂಡನು. ದೀರ್ಘಕಾಲದಿಂದ ನೀರಿನಲ್ಲಿದ್ದು ಮೊಸಳೆಯ ಬಿಗಿ ಹಿಡಿತಕ್ಕೆ ಸಿಕ್ಕಿಕೊಂಡಿದ್ದ ಗಜೇಂದ್ರನಿಗೆ ತೀವ್ರವಾಗಿ ನೋವುಂಟಾಗುತ್ತಿತ್ತು. ಚಕ್ರಧಾರಿಯಾಗಿ, ಗರುಡನ ಬೆನ್ನೇರಿ ಆಕಾಶದಲ್ಲಿ ಬರುತ್ತಿದ್ದ ನಾರಾಯಣನನ್ನು ಕಂಡೊಡನೆಯೇ ಅವನಿಗೆ ಅತೀವ ಸಂತಸವಾಯಿತು. ಗಜೇಂದ್ರನು ತನ್ನ ಸೊಂಡಿಲಿನಿಂದ ಒಂದು ಕಮಲ ಪುಷ್ಪವನ್ನು ಕೂಡಲೇ ಎತ್ತಿ ಹೀಗೆ ಹೇಳಿದನು – “ನಾರಾಯಣಖಿಲ ಗುರೋ ಭಗವನ್‌ ನಮಸ್ತೇ” – ಅಂದರೆ ಹೇ ನನ್ನ ಪ್ರಭುವೇ, ನಾರಾಯಣನೇ, ಬ್ರಹ್ಮಾಂಡ ನಾಯಕನೇ ದೇವೋತ್ತಮ ಪುರುಷನೇ, ನಿನಗೆ ನನ್ನ ಗೌರವಪೂರ್ವಕವಾದ ನಮಸ್ಕಾರಗಳನ್ನು ಅರ್ಪಿಸುತ್ತೇನೆ. ಭಕ್ತನು ತಾನು ಕಷ್ಟದಲ್ಲಿರುವಾಗ ಭಗವಂತ ಕಾಣಿಸಿಕೊಂಡರೆ ಆ ಸ್ಥಿತಿಯನ್ನು ನಿರುತ್ಸಾಹದಿಂದ ಕಾಣುವುದಿಲ್ಲ. ಏಕೆಂದರೆ ಪರಮಾತ್ಮನನ್ನು ಪ್ರಾರ್ಥಿಸಲು ಅದನ್ನು ಸದವಕಾಶವೆಂದೇ ಭಕ್ತನು ಭಾವಿಸುತ್ತಾನೆ. ಅಲ್ಲದೆ ಪರಮಾತ್ಮನನ್ನು ಕುರಿತು ಏಕಾಗ್ರಚಿತ್ತದಿಂದ ಚಿಂತಿಸಲು ಇದಕ್ಕಿಂತ ಉತ್ತಮ ಕಾಲ ಬೇರ್ಯ್ವುದಿದೆ?

ವ್ಯಕ್ತಿಯು ಅಪಾಯದ ಸ್ಥಿತಿಯಲ್ಲಿ ಸಿಲುಕಿದಾಗ ನೇರವಾಗಿ, ಭಕ್ತಿಯಿಂದ ದೇವೋತ್ತಮ ಶ್ರೀ ಹರಿಯನ್ನು ಪ್ರಾರ್ಥಿಸಿದರೆ ಅವನು ಭಗವದ್ಧಾಮಕ್ಕೆ ಹಿಂದಿರುಗುತ್ತಾನೆ ಎಂಬುದು ಗಜೇಂದ್ರನ ದೃಷ್ಟಾಂತದ ತಾತ್ಪರ್ಯ. ಗಜೇಂದ್ರನು ವ್ಯಾಕುಲನಾಗಿ ಭಗವಂತನನ್ನು ಪ್ರಾರ್ಥಿಸಿದ್ದರಿಂದ ತಕ್ಷಣವೇ ಭಗವದ್ಧಾಮಕ್ಕೆ ಹಿಂದಿರುಗುವ ಅವಕಾಶವನ್ನು ಪಡೆದನಲ್ಲವೆ?

ಹೀಗೆ ಗಜೇಂದ್ರನು ಮೊಸಳೆ ಬಾಯಿಗೆ ಸಿಲುಕಿ ಕಾತುರತೆಯಿಂದ ಪ್ರಾರ್ಥಿಸಿದಾಗ ಶ್ರೀ ಹರಿಯು ಕರುಣೆಯಿಂದ ಕೂಡಲೇ ಗರುಡನ ಬೆನ್ನಿಂದ ಕೆಳಗಿಳಿದನು, ಗಜೇಂದ್ರನನ್ನು ಮೊಸಳೆಯ ಸಮೇತ ನೀರಿನಿಂದ ಹೊರಗೆಳೆದನು. ನಂತರ ಎಲ್ಲ ದೇವರುಗಳು ನೋಡುತ್ತಿರುವಂತೆಯೇ ಶ್ರೀಹರಿಯು ತನ್ನ ಚಕ್ರದಿಂದ ಮೊಸಳೆಯ ತಲೆಯನ್ನು ಅದರ ದೇಹದಿಂದ ಬೇರ್ಪಡುವಂತೆ ಕತ್ತರಿಸಿದನು. ಆಗ ಮೊಸಳೆ ರೂಪ ಕಳೆದುಕೊಂಡ ಹೂಹೂ ರಾಜನು ಪುನಃ ಗಂಧರ್ವತ್ವವನ್ನು ಗಳಿಸಿದನು. ಅಗಸ್ತ್ಯ ಮಹರ್ಷಿ ಮತ್ತು ದೇವಲ ಮಹರ್ಷಿಗಳು ಭರತಖಂಡದ ಬೇರೆ ಬೇರೆ ಭಾಗಗಳಲ್ಲಿದ್ದ ಇಬ್ಬರು ರಾಜರಿಗೆ ಅವರ ಉದ್ಧಟತನಕ್ಕಾಗಿ ನೀಡಿದ ಶಾಪ, ಅವಿಬ್ಬರಿಗೆ ವರವಾಗಿ ಪರಿಣಮಿಸಿತು. ಶಾಪಗಳಿಂದಲೇ ಅವರಿಗೆ ಶ್ರೀ ಹರಿಯ ದರ್ಶನವಾಯಿತು. ಅಲ್ಲದೆ ಮೊಸಳೆಯಿಂದ ಮುಕ್ತಿ ಪಡೆದ ಇಂದ್ರದ್ಯುಮ್ನ (ಗಜೇಂದ್ರ)ನು ನಾರಾಯಣನಂತೆಯೇ ದಿವ್ಯ ದೇಹವನ್ನು ಪಡೆದನು.

ಭಗವಂತನು ಗಜೇಂದ್ರನನ್ನು ಉದ್ಧರಿಸುವುದರೊಂದಿಗೆ ಮೊಸಳೆ ರೂಪದಲ್ಲಿದ್ದ ಹೂಹೂ ರಾಜನನ್ನೂ ಪ್ರಾಣಿ ರೂಪದಿಂದ ಮುಕ್ತಗೊಳಿಸಿದನಲ್ಲವೆ? ಶ್ರೀ ಹರಿಯ ಕೃಪೆಯಿಂದ ಮೋಕ್ಷ ಪಡೆದ ಅವನು ಅತಿ ಸುಂದರವಾದ ಗಂಧರ್ವರೂಪ ತಳೆದನು. ನಂತರ ತನ್ನ ಮೋಕ್ಷಕ್ಕೆ ಕಾರಣನಾದ ದೇವೋತ್ತಮನಿಗೆ ಆತನು ಪ್ರದಕ್ಷಿಣೆ ಮಾಡಿ ನಮಸ್ಕಾರಗಳನ್ನು ಸಲ್ಲಿಸಿದನು. ಎಲ್ಲಾ ಪಾಪಗಳಿಂದ ಮುಕ್ತವಾದ ಗಂಧರ್ವನು ಸಕಲ ದೇವತೆಗಳ ಸಮ್ಮುಖದಲ್ಲಿ ಬ್ರಹ್ಮನ ನೇತೃತ್ವದಲ್ಲಿ ತನ್ನ ಗಂಧರ್ವ ಲೋಕಕ್ಕೆ ತೆರಳಿದನು.

ಇತ್ತ ಶ್ರೀ ಹರಿಯು ಗಜೇಂದ್ರನನ್ನು ಮೊಸಳೆಯ ಹಿಡಿತದಿಂದ ಪಾರುಮಾಡಿದಾಗ ಬ್ರಹ್ಮ, ಶಿವ, ದೇವತೆಗಳು, ಋಷಿಗಳು, ಗಂಧರ್ವರು ಪರಮಾತ್ಮನ ಗಜೇಂದ್ರ ಮೋಕ್ಷದ ಲೀಲೆಯನ್ನು ಕೊಂಡಾಡಿದರು. ಪರಮಾತ್ಮನ ಕೃಪೆಯನ್ನು ಕಂಡು ಅವರಿಗೆಲ್ಲ ತುಂಬಾ ಸಂತೋಷವಾಗಿ, ಭಗವಂತ ಮತ್ತು ಗಜೇಂದ್ರನ ಮೇಲೆ ಹೂ ಮಳೆ ಗರೆದರು. ಸ್ವರ್ಗ ಲೋಕದಲ್ಲಿ ದುಂದುಭಿಗಳು ಮೊಳಗಿದವು. ತಮ್ಮ ರಾಜ ಮುಕ್ತಿ ಮತ್ತು ಶ್ರೀ ಹರಿಯ ದರ್ಶನದಿಂದ ಪುಳಕಿತರಾದ ಗಂಧರ್ವ ಲೋಕದ ನಿವಾಸಿಗಳು ಗಾನ, ನರ್ತನದಲ್ಲಿ ತೊಡಗಿದರು. ಮಹರ್ಷಿಗಳು ಮತ್ತು ಚಾರಣ ಲೋಕ, ಸಿದ್ಧಲೋಕಗಳ ನಿವಾಸಿಗಳು ದೇವೋತ್ತಮನ ಗುಣಗಾನ ಮಾಡಿದರು.

ಗಜೇಂದ್ರನು ಸಾಕ್ಷಾತ್‌ ಪರಮಾತ್ಮನ ಸ್ಪರ್ಶ ಪಡೆದನಲ್ಲವೆ? ಅವನು ಎಲ್ಲ ಪ್ರಕಾರದ ಲೌಕಿಕ ಅಜ್ಞಾನ ಮತ್ತು ಬಂಧನಗಳಿಂದ ಬಿಡುಗಡೆ ಹೊಂದಿದನು. ಸಾರೂಪ್ಯ ಮುಕ್ತಿ ಪಡೆದ ಕಾರಣದಿಂದ ಗಜೇಂದ್ರನು ಪೀತಾಂಬರಧಾರಿಯಾಗಿ, ಚತುರ್ಭುಜನಾದನು. ಅಂದರೆ ಗಜೇಂದ್ರನಿಗೆ ಭಗವಂತನ ದೈಹಿಕ ರೂಪ, ಲಕ್ಷಣಗಳೇ ಬಂದವು. ಹೀಗೆ ಭಗವಂತನು ಮಹರ್ಷಿಗಳು, ದೇವತೆಗಳು, ಗಂಧರ್ವ, ಸಿದ್ಧ, ಚಾರಣರ ಎದುರು ಗಜೇಂದ್ರನಿಗೆ ಸಾರೂಪ್ಯ ಮುಕ್ತಿ ನೀಡಿದನು.

ತದನಂತರ ಶ್ರೀಹರಿಯು ಗರುಡನನ್ನೇರಿ ತನ್ನೊಡನೆ ಗಜೇಂದ್ರನನ್ನು ತನ್ನ ಸ್ವಧಾಮಕ್ಕೆ ಕರೆದುಕೊಂಡು ಹೋದನು.

ಆಧ್ಯಾತ್ಮಿಕ ವಿಷಯಗಳ ದೃಷ್ಟಿಯಿಂದ ಗಜೇಂದ್ರ ಮೋಕ್ಷ ಒಂದು ಅದ್ಭುತ ಕಥನ. ಋಷಿಗಳ ಶಾಪ, ಆನೆ-ಮೊಸಳೆಗಳ ಸಾವಿರ ವರ್ಷಗಳ ಘೋರ ಕಾದಾಟ, ನಾಮಸ್ಮರಣೆ, ಭಗವಂತನ ಕೃಪೆಗಳು ಈ ಕಥೆಗೆ ಒಂದು ರಮ್ಯವಾದ ತಾತ್ವಿಕ ಆವರಣ ನಿರ್ಮಿಸಿಕೊಟ್ಟಿವೆ. ಭಕ್ತಿಪಂಥದ ವಿಶಿಷ್ಟತೆ ಅರಿಯಲೂ ಈ ಕಥೆ ಸಹಾಯಕ. ನಿರಾಕಾರವಾದಿಗಳು ಬ್ರಹ್ಮ ಜ್ಯೋತಿಯಲ್ಲಿ ಲೀನವಾಗುವ ಮೋಕ್ಷದಿಂದ ತೃಪ್ತರಾಗುತ್ತಾರೆ. ಆದರೆ ಶ್ರೀ ಹರಿಯ ಭಕ್ತನಿಗೆ ಭಗವಜ್ಯೋತಿಯಲ್ಲಿ ಲೀನವಾಗಿಬಿಡುವ ಮುಕ್ತಿಯಲ್ಲಿ ಆಸಕ್ತಿಯಿಲ್ಲ. ನೇರವಾಗಿ ತಾನು ವೈಕುಂಠ ಲೋಕಕ್ಕೆ ಏರಿ, ಸದಾ ಭಗವಂತನನ್ನು ನೋಡಿ ಆನಂದಿಸುತ್ತಾ ಅವನ ಅನುಚರನಾಗಿರುವುದೇ ಭಕ್ತನ ಅಭಿಲಾಷೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi