ವಿದ್ಯಾರ್ಥಿಗಳಿಗಾಗಿ ಗೀತಾ ಸಂದೇಶ

ಶ್ರೀಮದ್‌ ಭಗವದ್ಗೀತೆಯಲ್ಲಿ ಮನುಷ್ಯಜೀವನವನ್ನು ಶ್ರೀಮಂತಗೊಳಿಸುವ ಸಾರ್ಥಕಗೊಳಿಸುವ ಮಹೋನ್ನತ ವಿಚಾರಗಳ ಲಹರಿ ಹರಿದಿದೆ.

ನಮ್ಮನ್ನು ಆಗಾಗ ಕಾಡುವ ಪ್ರಶ್ನೆಗಳು ಹಲವು. ನಾವು ಯಾರು? ಈ ಲೋಕಕ್ಕೆ ಏಕೆ ಬಂದೆವು? ಹೇಗೆ ಬಂದೆವು? ಹೇಗೆ ಹೋಗುವೆವು? ಎಲ್ಲಿಗೆ ಹೋಗುವೆವು? ಮತ್ತೆ ಇಲ್ಲಿಗೆ ಬರುತ್ತೇವೆಯೇ? ಬಂದರೆ ಹೇಗೆ ಬರುತ್ತೇವೆ? ಬರದಿದ್ದಲ್ಲಿ ಎಲ್ಲಿರುವೆವು? ಈ ಜಗತ್ತನ್ನೂ ನಮ್ಮನ್ನೂ ಬಂಧಿಸುವ ಶಕ್ತಿ ಯಾವುದು? ನಿಯಂತ್ರಕನೊಬ್ಬ ಇದ್ದಾನೆಯೆ? ಇದ್ದರೆ ಅವನ ಸ್ವರೂಪವೇನು? ನಮಗೂ ಅವನಿಗೂ ಏನು ಸಂಬಂಧ?

ಸೂಕ್ಷ್ಮ ಚಿಂತನಶೀಲರಾದ ಮಾನವರೆಲ್ಲರಲ್ಲೂ ಇಂಥ ಆಲೋಚನೆಗಳು ಎದ್ದಿರಲು ಸಾಧ್ಯ.

ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶ ಮಾಡಿದ ನೆಪದಲ್ಲಿ ಇಡೀ ಮಾನವ ಕುಲಕೋಟಿಯೇ ಆತ್ಮಜ್ಞಾನ ಹೊಂದಲು ಮಾರ್ಗದರ್ಶನ ನೀಡಿದ ಧೀಮಂತ ಶ್ರೀಕೃಷ್ಣ.

ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು ಮಾನವಹೃದಯದಲ್ಲಿ ಕೃಷ್ಣಪ್ರಜ್ಞೆಯ ಅರಿವು ಮೂಡಿಸಿ ಜನ ತಮ್ಮ ನಿಜ ಸ್ವರೂಪ ವನ್ನೂ ಶ್ರೇಷ್ಠತೆಯನ್ನೂ ಮನಗಾಣುವಂತೆ ಮಾಡಿದ ಮಹಾತಪಸ್ವಿಗಳು; ಅಸಾಧ್ಯವಾದುದನ್ನು ಸಾಧಿಸಿದ ಸಿದ್ಧ ಪುರುಷರು.

ಜಗತ್ತೆಲ್ಲ ಮಾಂಸಾಹಾರದ ರುಚಿಗೆ ಬಾಯಿಬಿಟ್ಟು ಅಡ್ಡಹಾದಿ ಹಿಡಿಯುತ್ತಿರುವಾಗ ಭಾರತದೇಶದಲ್ಲಿ ಭದ್ರವಾಗಿ ಬೇರೂರಿದ್ದ ಸಾತ್ವಿಕ ಶಾಕಾಹಾರದ ಕ್ರಾಂತಿಯನ್ನು ಜಗತ್ತಿನಲ್ಲೆಲ್ಲ ಮೊಳಗಿಸಿದ ಮೇರುವ್ಯಕ್ತಿ. ಪ್ರಾಣಿಹಿಂಸೆಯಿಲ್ಲದೆ ಮನುಷ್ಯ ಸುಖಿಯಾಗಿ ಆನಂದದಿಂದ ಬಾಳಬಹುದೆಂದು ಪ್ರತಿಪಾದಿಸಿದ ಮಾಹಾಮಾನವತಾವಾದಿ.

ಈ ಪುಟ್ಟ ಪುಸ್ತಕದಲ್ಲಿರುವ ‘ಮರಣಕಾಲದ ಔನ್ನತ್ಯ, ನಾವು ಎಂದರೆ ನಮ್ಮ ದೇಹಗಳಲ್ಲ,  ಬ್ರಹ್ಮಾಂಡದಾಚೆಗಿನ ಅ೦ಬರʼ ಮುಂತಾದ ಒಂಬತ್ತು ಕಿರು ಲೇಖನಗಳಲ್ಲಿ ಭಾರತೀಯ ತತ್ತ್ವಶಾಸ್ತ್ರ ಜೀವನ ದೃಷ್ಟಿಗಳ ಸೊಗಸಾದ ನಿರೂಪಣೆಯಿದೆ.

ಭಗವದ್ಗೀತೆಯನ್ನಾಧರಿಸಿದ ಈ ವಿಚಾರ ವಿಮರ್ಶೆಗಳಲ್ಲಿ ಶ್ರೀಕೃಷ್ಣವಾಣಿಯ ಸಾರವು ಸರಳವಾದ ಸಂದೇಶರೂಪದಲ್ಲಿ ವಿದ್ಯಾರ್ಥಿಗಳಿಗಾಗಿ, ಆರಂಭಿಕ ಸ್ತರದ ಜಿಜ್ಞಾಸುಗಳಿಗಾಗಿ ದೊರೆತಿದೆ.

ಫಲಭರಿತವಾದ ಮಹಾವೃಕ್ಷವೊಂದರ ಕೆಳಗೆ ನಿಂತು ಕೈಗೆಟುಕಿದ ಪುಟ್ಟ ಹಣ್ಣನ್ನು ತಿಂದು ಅದರ ರುಚಿಗೆ ಮಾರುಹೋಗಿ ಎತ್ತರ ರೆಂಬೆಯಲ್ಲಿರುವ ದೊಡ್ಡ ಹಣ್ಣನ್ನು ಕಿತ್ತು ತಿನ್ನಬೇಕೆಂಬ ಆಸೆಯುಂಟಾಗುವಂತಿದೆ ಈ ಕಿರು ಹೊತ್ತಗೆ. ಇದನ್ನು ಓದಿದ ಮೇಲೆ ಪ್ರಭುಪಾದ ಸ್ವಾಮಿಗಳ ‘ಭಗವದ್ಗೀತೆ ಯಥಾರೂಪ’, ‘ಜನನ ಮರಣಗಳಾಚೆ’ ಮುಂತಾದ ಮಹತ್ತರ ಕೃತಿಗಳನ್ನು ಓದುವ ಮನಸ್ಸಾಗುವುದರಲ್ಲಿ ಸಂದೇಹವೇ ಇಲ್ಲ.

ಪುಸ್ತಕದ ಕಡೆಯಲ್ಲಿ ನೀಡಿರುವ ಅನುವಾದ ಸಹಿತವಾದ ಗೀತಾ ಪ್ರಮುಖ ಶ್ಲೋಕಗಳು ಗೀತೆಯ ಸಾರಸ್ವರೂಪವನ್ನು ವಿದ್ಯಾರ್ಥಿಗಳ ಕಣ್ಣೆದುರು ತಂದು ನಿಲ್ಲಿಸುತ್ತದೆ. ಇದರಲ್ಲಿ ಅಡಕವಾಗಿರುವ ಶ್ರೀಲಪ್ರಭುಪಾದರ ಕಿರುಪರಿಚಯವೂ ಹೊತ್ತಗೆಯ ಮೌಲ್ಯವನ್ನು ಮೇಲೆರಿಸಿದೆ. ಇಲ್ಲಿರುವ ಮಾದರಿ ಪ್ರಶ್ನೆಗಳು, ಉತ್ತರಗಳು, ಅಧ್ಯಯನಕ್ಕೆ, ಅಭ್ಯಾಸಕ್ಕೆ ತುಂಬ ಪೂರಕವಾಗಿದೆ.

ಈ ಪುಟ್ಟ ಪುಸ್ತಕ ವಿದ್ಯಾರ್ಥಿಯ ಮಿತ್ರನಾಗಲು ಇನ್ನೇನುಬೇಕು? ಹಾಳೆಗಳ ನಡುವೆ ಬೆಚ್ಚಗೆ ಅವಿತಿರುವ ಬಣ್ಣದ ಚಿತ್ರಗಳೂ ಕುತೂಹಲ ಮೂಡಿಸಿ ಓದಲು ಪ್ರೇರೇಪಿಸುತ್ತವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi