ಗೋವರ್ಧನ‌ ಪೂಜೆ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯರಾದ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು  ನವೆಂಬರ್‌ 4, 1966 ರಂದು ನ್ಯೂಯಾರ್ಕ್‌ ‌ನಲ್ಲಿ ಮಾಡಿದ ಉಪನ್ಯಾಸ.

ಇಂದ್ರದೇವನ ಕ್ರೋಧದಿಂದ ವ್ರಜವಾಸಿಗಳನ್ನು ರಕ್ಷಿಸಲು ಗೋವರ್ಧನ‌ ಗಿರಿಯನ್ನು ಎತ್ತಿದ   ಶ್ರೀ ಕೃಷ್ಣನ ಲೀಲೆಯನ್ನು ಕೊಂಡಾಡಲು ಗೋವರ್ಧನ‌ ಪೂಜೆಯನ್ನು ನೆರವೇರಿಸಲಾಗುತ್ತದೆ.

ಗೋವರ್ನಧಾರಿ‌, ಗಿರಿಧಾರಿ ಶ್ರೀಕೃಷ್ಣನು  ಗೋವರ್ಧನ‌ ಗಿರಿಯನ್ನು ಎತ್ತಿದನು. ವೈದಿಕ ಸಾಹಿತ್ಯದ ಪ್ರಕಾರ, ಅನೇಕ ದೇವತೆಗಳಿದ್ದಾರೆ. ಗ್ರೀಕ್‌ ಪುರಾಣದಲ್ಲಿಯೂ ನೋಡಬಹುದು. ಜಲದೇವತೆ, ಸಿಡಿಲುಗುಡುಗಿನ ದೇವತೆಯ ಪ್ರಸ್ತಾಪವಿದೆ. ಇವು ಕಲ್ಪನೆಯಲ್ಲ. ಅವು ವಾಸ್ತವಾಂಶ. ಆದರೆ ಜ್ಞಾನದ ಅಭಾವದ ಕಾರಣ ನಮಗೆ ಐಹಿಕ ಪ್ರಕೃತಿಯನ್ನು ಹೇಗೆ ನಿಯಂತ್ರಿಸಲಾಗುತ್ತಿದೆ ಎನ್ನುವುದು ಗೊತ್ತಿಲ್ಲ.

 ಕೃಷ್ಣನು ಈ ಲೋಕದಲ್ಲಿ ಅವತರಿಸಿದಾಗ, ಗೋಪಾಲಕನ ಪಾತ್ರವನ್ನು ನಿರ್ವಹಿಸುತ್ತಿದ್ದಾಗ, “ದೇವರು ಆವಿರ್ಭಾವಿಸಿದ್ದಾನೆ.‌ ಅವನು ಭೂಲೋಕದಲ್ಲಿದ್ದಾನೆ. ವೃಂದಾವನದಲ್ಲಿ ಗೋಪಾಲಕ ಬಾಲಕನ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ . . “ ಎನ್ನುವುದು ಇಡೀ ಬ್ರಹ್ಮಾಂಡದಲ್ಲಿಯೇ ತಿಳಿದಿತ್ತು. ಭಗವಂತನ ಅವತಾರವಾದಾಗ, ಕೆಲವರು ನಂಬುತ್ತಾರೆ, ಕೆಲವರು ನಂಬುವುದಿಲ್ಲ.  ಕೃಷ್ಣನು ನಿಜವಾಗಿಯೂ ಈ ಭೂಮಿಯ ಮೇಲೆ ಉಪಸ್ಥಿತನಿದ್ದಾಗ,  ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ಎಲ್ಲರೂ ಅರ್ಥಮಾಡಿಕೊಂಡಿರಲಿಲ್ಲ, ಈಗಲೂ ಎಷ್ಟೋ ಜನರು ಅರ್ಥಮಾಡಿಕೊಂಡಿಲ್ಲ. 

ಕೆಲವೇ ಜನರು, ಪಾಂಡವರು, ವೃಂದಾವನದ ಗೋಪಿಯರು ಹೀಗೆ ಬೆರಳೆಣಿಕೆಯಷ್ಟು ಜನರು ಮಾತ್ರ ಅವನು ದೇವೋತ್ತಮ ಪರಮ ಪುರುಷ ಎಂದು ಅರ್ಥ‌ ಮಾಡಿಕೊಂಡಿದ್ದರು.  ಬೇರೆ ಎಲ್ಲರೂ, “ಅವನು ನಮ್ಮಂತೆ  ಸಾಮಾನ್ಯ ಮನುಷ್ಯ. ಆದರೆ ಹೆಚ್ಚು ಶಕ್ತಿಶಾಲಿ ಅಷ್ಟೆ” ಎಂದು ಭಾವಿಸಿದ್ದರು. “ಗೋಪಾಲಕ ಬಾಲಕನನ್ನು ದೇವರೆಂದು ಭಾವಿಸಿದ್ದಾರೆ, ಮೂರ್ಖರು” ಎಂದು ಇತರ ಲೋಕಗಳ ದೇವತೆಗಳೂ ಭಾವಿಸಿದ್ದರು.

ಮುಖ್ಯವಾಗಿ ಸ್ವರ್ಗದ ದೇವತೆ ಇಂದ್ರನು, “ಯಾವ ದೇವರು ಬಂದಿರುವುದು? ನನ್ನ ಭಗವಂತ ಬರುವುದು ಸಾಧ್ಯವಿಲ್ಲ” ಎಂದು ಭಾವಿಸಿದ್ದನು. ಅದು ಸ್ವಲ್ಪ ಊಹೆಯಾಗಿತ್ತು. “ಹೌದು, ನಿಜವಾಗಿಯೂ ನಾನು ಬಂದಿದ್ದೇನೆ.” ಎಂದು ಇಂದ್ರನಿಗೆ ತೋರಿಸುವುದು  ಕೃಷ್ಣನ ಉದ್ದೇಶವಾಗಿತ್ತು. ಅದೇ ಘಟನೆಯೇ ಗೋವರ್ಧನ‌ ಪೂಜೆಗೆ ಹಿನ್ನಲೆ.

ಭಗವಾನ್‌ ಅಪಿ ತತ್ರೈವ ಬಲದೇವೇನ ಸಂಯುತಃ |

ಅಪಶ್ಯನ್ ನಿವಸನ್‌ ಗೋಪಾನ್‌ ಇಂದ್ರಯಾಗ-ಕೃತೋದ್ಯಮಾನ್‌ || 10.24.1

ವೈದಿಕ ಪದ್ಧತಿಯ ಪ್ರಕಾರ , ದೇವತೆಗಳಿಗೆ ಗೌರವ ಮತ್ತು ಪ್ರಣಾಮಗಳನ್ನು ಸಲ್ಲಿಸಲು ಅನೇಕ ವಿಧವಾದ ಯಜ್ಞಗಳಿವೆ. ಸೂರ್ಯನು ಬೆಳಕು ನೀಡುವಂತೆ, ಚಂದ್ರನು ಬೆಳಕನ್ನು ಪೂರೈಸುವಂತೆ ಇಂದ್ರನು ಮೋಡಗಳನ್ನು ಪೂರೈಸುತ್ತಾನೆ.  “ ದೇವಯಜ್ಞದಿಂದ ನೀವು ದೇವತೆಗಳನ್ನು ತೃಪ್ತಿಪಡಿಸಬೇಕು” ಎಂದು ವೈದಿಕ ಸಾಹಿತ್ಯದಲ್ಲಿ ಸೂಚಿಸಲಾಗಿದೆ.

 ವೃಂದಾವನದ ಆ ಗ್ರಾಮದಲ್ಲಿ  ಕೃಷ್ಣನ ಸಾಕುತಂದೆ ನಂದ ಮಹಾರಾಜನು ವಾಸಿಸುತ್ತಿದ್ದ. ಅವನೂ ಮತ್ತು ಅವನ ಸಹವರ್ತಿಗಳು ಪ್ರತಿ ವರ್ಷ‌ ಇಂದ್ರ ಯಜ್ಞ ಮಾಡುತ್ತಿದ್ದರು.  ಮೂಲತಃ ಕೃಷಿಕರಾಗಿದ್ದರಿಂದ ಅವರು ಮಳೆ ಅವಲಂಬಿತರು. ನಂದ ಮಹಾರಾಜನೂ ಕೂಡ ಕೃಷಿಯಲ್ಲಿ ನಿರತನಾದವನು. ಅವನ ಬಳಿ ಅಪಾರ ಸಂಖ್ಯೆಯಲ್ಲಿ ಗೋವುಗಳಿದ್ದವು.

ವ್ಯಾಪಾರಿ ವರ್ಗ‌, ವೈಶ್ಯ ಸಮುದಾಯ – ಅವರಿಗೆ ಮೂರು ವಿಷಯಗಳನ್ನು ಶಿಫಾರಸು ಮಾಡಲಾಗಿದೆ – ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ (ಗೀತೆ 18.44). ನಂದ ಮಹಾರಾಜನು ವೈಶ್ಯ ಸಮುದಾಯಕ್ಕೆ ಸೇರಿದವನು. ಅವನು ತುಂಬಾ ಶ್ರೀಮಂತನೂ ಆಗಿದ್ದನು. ಅವನು 9,00,000 ಗೋವುಗಳನ್ನು ರಕ್ಷಿಸುತ್ತಿದ್ದನು.

ಮೊದಲು ವೈದಿಕ ನಾಗರಿಕತೆಯ ಪ್ರಕಾರ ವ್ಯಕ್ತಿಯ ಶ್ರೀಮಂತಿಕೆಯು ಅವನು ಹೊಂದಿದ ಧಾನ್ಯ ದಾಸ್ತಾನು ಮತ್ತು ಪಶು (ಗೋವು ಇತ್ಯಾದಿ) ಸಂಖ್ಯೆಗಳ ಮೇಲೆ ನಿರ್ಧಾರವಾಗುತ್ತಿತ್ತು.  ಧಾನ್ಯೇನ ಧನವಾನ್‌.  ಬ್ಯಾಂಕ್‌ ಖಾತೆಯಲ್ಲಿನ ಮೊತ್ತವಲ್ಲ. ಆಗೆಲ್ಲಾ ಬ್ಯಾಂಕುಗಳಿರಲಿಲ್ಲ, ಕಾಗದದ ಹಣವೂ ಇರಲಿಲ್ಲ. ಅವರ ಬಳಿ ಧಾನ್ಯ ಮತ್ತು ಹಾಲು ಇರುತಿತ್ತು. ಅದರಿಂದ ನಾನಾ ಆಹಾರ ಪದಾರ್ಥಗಳನ್ನು ತಯಾರಿಸಬಹುದಿತ್ತು. ಅದು ಆರ್ಥಿಕ  ಅಭಿವೃದ್ಧಿಯ ಮಟ್ಟ.

 ಇಂದ್ರನನ್ನು ಪ್ರಸನ್ನಗೊಳಿಸಲು ಅವರು ಯಜ್ಞದ ಸಿದ್ಧತೆ ಮಾಡುತ್ತಿದ್ದಾರೆ. ಅವನು ಸಾಕಷ್ಟು ಮಳೆಯನ್ನು ಪೂರೈಸುತ್ತಿದ್ದಾನೆ. ಮಳೆ ಇಲ್ಲದೆ ಕೃಷಿಕಾರ್ಯ‌ಯಶಸ್ವಿಯಾಗದು. ಆದುದರಿಂದ ಯಜ್ಞದ ತಯ್ಯಾರಿ. ಕೃಷ್ಣ ಮತ್ತು ಬಲರಾಮ ಈ ಸಿದ್ಧತೆಗಳನ್ನು ಗಮನಿಸುತ್ತಿದ್ದರು. ಕೃಷ್ಣನು ಕಿರಿಯ ಮತ್ತು ಬಲರಾಮ ಹಿರಿಯ. ಬಲರಾಮನು ರೋಹಿಣಿಯ ಪುತ್ರನಾದರೆ ಕೃಷ್ಣನು ದೇವಕಿಯ ಪುತ್ರ. 

ಅವರು ವಸುದೇವನ ಪತ್ನಿಯರು. ಗೋವರ್ಧನಗಿರಿಯ ಪ್ರಸಂಗ ನಡೆದಾಗ ಬಲರಾಮನಿಗೆ ಸುಮಾರು ಎಂಟು ವರ್ಷ‌ ಮತ್ತು ಕೃಷ್ಣನಿಗೆ ಏಳು ವರ್ಷ.‌ ಹೀಗೆ, ಭಗವಾನ್‌ ತತ್ತ್ರೈವ ಬಲದೇವ ಸಂಯುತಃ.  ದೇವೋತ್ತಮ ಪರಮ ಪುರುಷನಾದ ಕೃಷ್ಣನು ಬಲದೇವನೊಂದಿಗೆ ನೋಡಿದನು. ಏನನ್ನು? “ತನ್ನ ತಂದೆಯೂ ಸೇರಿದಂತೆ ಎಲ್ಲ ಗೋಪಾಲಕರು ಇಂದ್ರಯಜ್ಞದ ತಯ್ಯಾರಿಯಲ್ಲಿ ಇರುವುದನ್ನು ನೋಡಿದರು.”

ಅವನು ದೇವೋತ್ತಮ ಪರಮ ಪುರುಷ. ಅವರೇನು ಮಾಡುತ್ತಿದ್ದಾರೆ ಮತ್ತು ಉದ್ದೇಶ ಏನೆನ್ನುವುದು ಅವನಿಗೆ ಗೊತ್ತು. ಪ್ರತಿಯೊಬ್ಬರ  ಹೃದಯಗಳಲ್ಲಿಯೂ ನೆಲೆಸಿರುವುದರಿಂದ ಅವನಿಗೆ ಎಲ್ಲವೂ ತಿಳಿದಿದೆ. ಆದರೆ ಅವನು ಗೋಪಬಾಲಕನ ಪಾತ್ರವನ್ನು ನಿರ್ವಹಿಸುತ್ತಿದ್ದುದರಿಂದ ಏನೂ ಗೊತ್ತಿಲ್ಲವೆಂಬಂತೆ ತನ್ನ ತಂದೆ ಮತ್ತು ಇತರ ಹಿರಿಯರ ಬಳಿ ಏನಾಗುತ್ತಿದೆ ಎಂದು ವಿಚಾರಿಸಿದ.

ಇಲ್ಲಿ ತದ್‌ ಅಭಿಜ್ಞೋ ಅಪಿ ಎಂದು ಬಳಸಲಾಗಿದೆ. ಅಂದರೆ “ಅವನಿಗೆ ಎಲ್ಲವೂ ಗೊತ್ತು.” ಅವನು ಭಗವಾನ್.‌ ಅವನಿಗೆ ಹಿಂದಿನದು, ಪ್ರಸ್ತುತದ್ದು ಮತ್ತು ಭವಿಷ್ಯದ್ದು ಎಲ್ಲವೂ ಗೊತ್ತಿದೆ. ಅಲ್ಲಿ ಜ್ಞಾನದ ಅಭಾವ ಇಲ್ಲ.

ನಾನು ಅನೇಕ ಬಾರಿ ವಿವರಿಸಿದ್ದೇನೆ. ಭಗವಾನ್‌ ಎಂದರೆ ಎಲ್ಲ ಆರು ಐಶ್ವರ್ಯಗಳನ್ನು ಹೊಂದಿರುವವನು, ಸಿರಿ ಸಂಪತ್ತು, ಶಕ್ತಿ, ಕೀರ್ತಿ‌, ಸೌಂದರ್ಯ‌, ಜ್ಞಾನ ಮತ್ತು ತ್ಯಾಗ. ಆದುದರಿಂದ ಭಗವಂತನಿಗೆ ಜ್ಞಾನದ ಕೊರತೆ ಇರುವುದಿಲ್ಲ. ಅವನಿಗೆ ಎಲ್ಲವೂ ತಿಳಿದಿರಬೇಕು. ಆದುದರಿಂದ, ತಂದೆಯ ಬಳಿ ಅವರೇನು ಮಾಡುತ್ತಿದ್ದಾರೆ ಎಂದು ಕೇಳುವುದರ ಪ್ರಯೋಜನವೇನು? ಅವನಿಗೇ ಎಲ್ಲ ಗೊತ್ತು ಎಂದು ಕೇಳಬಹುದು.

ಅವನಿಗೆ ತಿಳಿದಿದ್ದರೂ ಬಾಲಕನ ಪಾತ್ರವನ್ನು ನಿರ್ವಹಿಸುತ್ತಿದ್ದುದರಿಂದ  ಮತ್ತು ತಂದೆಗೆ “ಕೃಷ್ಣನು ನನ್ನ ಮಗ” ಎನ್ನುವುದು ಗೊತ್ತಿದ್ದರಿಂದ . . .  ಅವನು ದೇವೋತ್ತಮ ಪರಮ ಪುರುಷನೆಂದು ಅವರು ಗುರುತಿಸಲಿಲ್ಲ. ಅವನು ಸಾಮಾನ್ಯ ಪುತ್ರ  ಎಂದು ಭಾವಿಸಿದರು. ಅವನೂ “ವಿನಮ್ರ ಮಗನಂತೆ”  ತನ್ನ ತಂದೆಯ ಹಿರಿಯ ಮಿತ್ರರನ್ನು ಮತ್ತು ಸಹವರ್ತಿಗಳನ್ನು ಕಂಡು ವಿಚಾರಿಸಿದನು.

ನಂದ ಮಹಾರಾಜನನ್ನು ಕೇಳಿದನು, “ತಂದೆಯೇ, ನಾನು ಅತ್ಯಂತ ವಿನಯದಿಂದ ವಿಚಾರಿಸುತ್ತಿರುವೆ. ಏನಿದು ಸಿದ್ಧತೆ? ಯಾವುದೋ ಯಜ್ಞ ಕಾರ್ಯ‌ ಮಾಡಲು ಏಕೆ ಇಷ್ಟು ಗಡಿಬಿಡಿಯಲ್ಲಿರುವೆ? ಕಾರಣ ಏನು? ಫಲಿತಾಂಶವೇನು?” ಯಾರಿಗೆ ? ಯಾರನ್ನು ಪ್ರಸನ್ನಗೊಳಿಸಲು ಪ್ರಯತ್ನಿಸುತ್ತಿರುವಿರಿ? ಈ ಯಜ್ಞದ ಉದ್ದೇಶವೇನು? ನನಗೆ ಅರ್ಥವಾಗುತ್ತಿಲ್ಲ.  ನನಗೆ ದಯೆಯಿಟ್ಟು ವಿವರಿಸುವಿರಾ? ನಾನು ಆತಂಕಗೊಂಡಿರುವೆ. ದಯೆಮಾಡಿ ವಿವರಿಸುವಿರಾ? ನಾನು ನಿಮ್ಮ ವಿಧೇಯ ಪುತ್ರ, ನನಗೆ ಹೇಳುವಿರಾ?”

“ಅದು ಗೌಪ್ಯವಾದುದೆಂದು ನೀವು ಭಾವಿಸಿದರೆ, ಅದನ್ನು ಹೇಳಲಾಗದೆಂದು ಭಾವಿಸಿದರೆ . . . ಯಜ್ಞವನ್ನು ಬಹಿರಂಗವಾಗಿ ಮಾಡುತ್ತಿರುವ ನಿಮ್ಮಂತಹ ವ್ಯಕ್ತಿಯು ಅದನ್ನು ನನಗೆ ವಿವರಿಸುವುದಿಲ್ಲ ಎಂದು ಭಾವಿಸುವೆ.”  “ಸಂತ ಪುರುಷರಾದ ಸಾಧುಗಳಿಗೆ ರಹಸ್ಯ ಎನ್ನುವುದಿಲ್ಲ.

ನಮ್ಮ ಸಾಮಾನ್ಯ ಸಾಮಾಜಿಕ ವ್ಯವಹಾರಗಳಲ್ಲಿ, ಖಾಸಗಿ ಮತ್ತು ಸಾರ್ವಜನಿಕ‌ ಜೀವನದ ನಡುವೆ ವ್ಯತ್ಯಾಸಗಳಿವೆ.

ನೋಡಿ ಈಗ ಯಾರೋ ಒಬ್ಬರು ಶಿಕ್ಷಕರು. ಅವರು ತುಂಬಾ ಒಳ್ಳೆಯ ಶಿಕ್ಷಕರು. ಚೆನ್ನಾಗಿ ಬೋಧಿಸುತ್ತಿದ್ದರು. ಆದರೆ ಅವರ ಖಾಸಗಿ ಜೀವನ ಅಷ್ಟೇನೂ ಚೆನ್ನಾಗಿರಲಿಲ್ಲ. ಆಗ ಅವರು ಶಿಕ್ಷಕರೇ ಅಲ್ಲ.‌ ಅವರು ಸಾಧು  ಅಲ್ಲ. ಇದು ವೈದಿಕ ಕಲ್ಪನೆ.  

ವ್ಯಕ್ತಿಯು ತನ್ನ ನಡವಳಿಕೆಯಂತೆ ಗುರುವಾಗಬೇಕು. ಅದರಲ್ಲಿ ರಹಸ್ಯ ಅಥವಾ ಖಾಸಗಿ ಎನ್ನುವುದಿಲ್ಲ.  “ಖಾಸಗಿ ವ್ಯಕ್ತಿತ್ವ  ಏನೆನ್ನುವುದರ ಬಗೆಗೆ ನಮಗೆ ಚಿಂತೆ ಇಲ್ಲ. ಅವರ ಬೋಧನೆ ಬಗೆಗಷ್ಟೇ ನಮ್ಮ ಕಾಳಜಿ” ಎಂದು ಈಗ ಯೋಚಿಸಬಹುದು. ಇಲ್ಲ, ಅಂತಹ ರೀತಿಯ ಶಿಕ್ಷಣದಿಂದ ಏನೂ ಪರಿಣಾಮ ಇರುವುದಿಲ್ಲ.

 ಶ್ರೀ ಚೈತನ್ಯ ಮಹಾಪ್ರಭು ಹೇಳಿದರು, ಆಪನಿ ಆಚರಿ ಪ್ರಭು ಜೀವೇರ ಶಿಖಾಯ್.  ಶಿಕ್ಷಕನು ತಾನು ಏನು ಬೋಧಿಸುವನೋ ಅದನ್ನು ತನ್ನ ಜೀವನದಲ್ಲಿ ಆಚರಿಸಿ ತೋರಿಸಬೇಕು. ಅದೇ ಆಚಾರ್ಯ‌ ಎನ್ನುವುದರ ಅರ್ಥ. ‌ ಆದುದರಿಂದ ಕೃಷ್ಣನು ಹೇಳಿದನು, “ನಿನಗೆ ಏನನ್ನೂ  ಬಹಿರಂಗಪಡಿಸುವುದು ಸಾಧ್ಯವಿಲ್ಲ. ನಿನಗೆ ಏನನ್ನೂ ಖಾಸಗಿಯಾಗಿ ಇಟ್ಟುಕೊಳ್ಳುವುದು ಸಾಧ್ಯವಿಲ್ಲ. ದಯೆಯಿಟ್ಟು ಬಹಿರಂಗಪಡಿಸು.”  ಮತ್ತು “ಅದು ತುಂಬಾ ರಹಸ್ಯವಾದರೂ ನಾನು ನಿನ್ನ ಪುತ್ರ. ನೀನು ನನಗೆ ವಿವರಿಸಬಹುದು. ನಾನು ನಿನ್ನ ಶುಭಚಿಂತಕ.”

 “ಇದೇನು ಮೂಢನಂಬಿಕೆಯೇ?” ಕೃಷ್ಣನು ಹೇಗೆ ಮಾತನಾಡುತ್ತಿದ್ದಾನೆ, ನೋಡಿ. “ಇದೇನು ಮೂಢನಂಬಿಕೆಯೇ ಅಥವಾ ಅದರಲ್ಲಿ ಏನಾದರೂ ವಾಸ್ತವ ಪರಿಣಾಮ ಇದೆ. “ ಯಾವುದೇ ಧಾರ್ಮಿಕ ವಿಧಿಗಳನ್ನು ಮೂಢನಂಬಿಕೆಯಿಂದ ಮಾಡಬಾರದು. ಅದು ಕೃಷ್ಣನ ಶಿಫಾರಸು.  ಜನರು ಮೂಢನಂಬಿಕೆಯಿಂದ  ಯಾವುದನ್ನೇ ಆಚರಿಸುವುದನ್ನು ಕೃಷ್ಣನು ಒಪ್ಪುವುದಿಲ್ಲ. ಉದಾಹರಣೆಗೆ, ನೀವು ಯಾವುದೇ ಯಜ್ಞ ಅಥವಾ ವಿಧಿ ಆಚರಣೆ ಮಾಡುವಾಗ ನಿಮಗೆ ಅದರ ಫಲದ ಸ್ಪಷ್ಟ ಜ್ಞಾನವಿರಬೇಕು.

“ಈ ಯಜ್ಞದ ಫಲದ ಬಗೆಗೆ ನಿಮಗೆ ವಿಶ್ವಾಸವಿದೆಯೇ? “ ಅವನು ತನ್ನ ತಂದೆಯನ್ನು ಕೇಳುತ್ತಿದ್ದಾನೆ.  “ನೀವು ದೇವತೆಗಳನ್ನು ತೃಪ್ತಿಪಡಿಸುವಿರೋ ಅಥವಾ  ನೀವು ಮಾಡುತ್ತಿರುವುದು  ಕೇವಲ ಪದ್ಧತಿಯೇ? ಗ್ರಾಮದ ಪರಂಪರೆಯೇ? ನನಗೆ ನಿಮ್ಮಿಂದ ಕೇಳುವ ಕುತೂಹಲವಿದೆ. ದಯೆಯಿಟ್ಟು ವಿವರಿಸಿ.”

ತಂದೆಯು ವಿವರಿಸುತ್ತಾನೆ, “ನನ್ನ ಪ್ರೀತಿಯ ಮಗುವೇ, ನೀರು ಅತ್ಯಗತ್ಯ. ಏಕೆಂದರೆ ಮಳೆಯಿಲ್ಲದೆ ನಾವು ಏನನ್ನೂ ಉತ್ಪಾದಿಸಲಾರೆವು. ಮಳೆಯನ್ನು ದೇವತೆ ಇಂದ್ರನು ನಿಯಂತ್ರಿಸುತ್ತಾನೆ. ಅವನು ಮೇಘ, ಮೋಡದ ಮಾಲೀಕ. ಅವನು ಮೋಡವನ್ನು ಕಳುಹಿಸಬಹುದು ಅಥವಾ ನಿಲ್ಲಿಸಬಹುದು. ಅವನು ಭಗವಂತನ ಪ್ರತಿನಿಧಿ. ಆದುದರಿಂದ ಅವನಿಗೆ ಅಧಿಕಾರವಿದೆ. ಅವನು ಮಳೆಯನ್ನು ಸುರಿಸಿದರೆ ಜನರಿಗೆ ಅವರ ಉತ್ಪನ್ನ ಲಭಿಸುತ್ತದೆ.

“ಆದುದರಿಂದ ಇದು ನಮ್ಮ ಕರ್ತವ್ಯ.‌ ಅವನು ನಮಗೆ ನೀರನ್ನು ಪೂರೈಸುವುದರಿಂದ ಈ ಯಜ್ಞದ ಮೂಲಕ ನಾವು ಅವನಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ.‌” ಇದು ವೈದಿಕ ಆದೇಶ.  ನಾವು ಆಯಾ ಇಲಾಖೆಯ ತೆರಿಗೆಯನ್ನು ಪಾವತಿಸಿದಂತೆ.

ನಂದ ಮಹಾರಾಜನು ಮತ್ತೂ ನುಡಿದನು, “ ಧಾನ್ಯಗಳನ್ನು ಬೆಳೆಯಲು ನೀರು ತುಂಬಾ ಮುಖ್ಯ. ಆದುದರಿಂದ ನಾವು ಇಂದ್ರನನ್ನು ತೃಪ್ತಿಪಡಿಸಬೇಕು. ಮಗುವೇ, ನಾವು ನಮ್ಮ ಪರಂಪರೆಯನ್ನು ಬಿಡಬಾರದು. ಇದು ನಮ್ಮ ವಂಶದ ಹಿರಿಯರಿಂದ ನಡೆದು ಬರುತ್ತಿದೆ. ನಾವು ಇದನ್ನು ಬಿಡಬಾರದು.” ನಂದ ಮಹಾರಾಜನಿಗೆ ಕೃಷ್ಣನ ಉದ್ದೇಶ ಅರ್ಥವಾಯಿತು. “ಅವನು ಬುದ್ಧಿವಂತ ಬಾಲಕ. ಅವನು ಇದನ್ನೆಲ್ಲಾ ಕೇಳುತ್ತಿದ್ದಾನೆ. ನನ್ನನ್ನು ತಡೆಯಲು ಅವನು ಈ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ.” ಮಗನಂತೆ ಈ ತಂದೆಯೂ ಬುದ್ಧಿವಂತ.

ಅದಕ್ಕೆ ಕೃಷ್ಣನೂ ಉತ್ತರಿಸುತ್ತಾನೆ, ಅವನು ನಾಸ್ತಿಕನಂತೆ ಮಾತನಾಡುತ್ತಾನೆ, “ಈ ಇಂದ್ರನನ್ನು ತೃಪ್ತಿಪಡಿಸುವ ಅಗತ್ಯವಿಲ್ಲ. ನೀವು ಕಾಲಹರಣ ಮಾಡುತ್ತಿರುವಿರಿ. ಎಲ್ಲರೂ ತಾವು ಪಡೆದ ಪ್ರಕೃತಿ ಗುಣದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರಕೃತಿಯಂತೆ ನಾವು ವ್ಯಾಪಾರಿ ಜನ. ಅದು ನಮಗೆ ಫಲ ನೀಡುತ್ತದೆ. ಈ ದೇವತೆಗಳನ್ನು ನಾವು ಯಾಕೆ ಪೂಜಿಸಬೇಕು?”

ಕೃಷ್ಣನು ದೇವತೆಗಳನ್ನು ಪೂಜಿಸುವುದನ್ನು ಒಪ್ಪುವುದಿಲ್ಲ. ಅದನ್ನು ಭಗವದ್ಗೀತೆಯಲ್ಲಿಯೂ (7.20) ಹೇಳಿದ್ದಾನೆ. ಅವನು ಕರ್ಮಕ್ಕೆ ಒತ್ತು ನೀಡುತ್ತಾನೆ. “ನೀವು ಈ ದೇವತೆ ಅಥವಾ ಆ ದೇವತೆಯನ್ನು ಪೂಜಿಸುವುದರ ಬಗೆಗೆ ಯೋಚಿಸಬೇಡಿ. ನೀವು ನಿಮ್ಮ ಕಾರ್ಯಕ್ಕೆ ಪ್ರಾಮಾಣಿಕರಾಗಿರಿ. ಅದು ನಿಮಗೆ ಒಳ್ಳೆಯ ಫಲವನ್ನು ನೀಡುತ್ತದೆ. ಧರ್ಮಗ್ರಂಥಗಳ ಪ್ರಕಾರ ನಾವು ವೈಶ್ಯರು.  ನಾವು ವೈಶ್ಯರಂತೆ ಇರಬೇಕು.

ನಾವು ಕೃಷಿಕರು ಮತ್ತು ನಾವು ಗೋ ಸಂರಕ್ಷಣೆ ಮಾಡುತ್ತಿದ್ದೇವೆ.  ನಮ್ಮ ವ್ಯವಹಾರಕ್ಕೆ ನಾವು ಪ್ರಾಮಾಣಿಕರಾಗಿರುವುದು ನಮ್ಮ ಕರ್ತವ್ಯ. ಈ ದೇವತೆ ಅಥವಾ ಆ ದೇವತೆಯನ್ನು ಪೂಜಿಸುವುದರಿಂದ ಪ್ರಯೋಜನವೇನು? ಮೋಡದಿಂದ ಮಳೆಯಾಗುತ್ತದೆ. ಅದು ಕೃಷಿಗೆ ನೆರವಾಗುತ್ತದೆ. ಈ ಮಹೇಂದ್ರನನ್ನು ಕುರಿತು ಏಕೆ ಚಿಂತಿಸುವೆ?

“ನಾವು ಈ ಗ್ರಾಮದ ವಾಸಿಗಳು. ಈ ಭೂಮಿಯನ್ನು ಪೂಜಿಸಬೇಕು. ಗೋವರ್ಧನನನ್ನು ಪೂಜಿಸಿ. “  ಕೃಷ್ಣನು ಗೋವರ್ಧನದಲ್ಲಿ‌ ಗೋವುಗಳನ್ನು ಮೇಯಿಸುತ್ತಿದ್ದನು. ಆದುದರಿಂದ  ಅವನು ಪರೋಕ್ಷವಾಗಿ ಸೂಚಿಸಿದನು, “ಗೋವರ್ಧನನನ್ನು ಪೂಜಿಸುವುದು ನಮ್ಮ ಕರ್ತವ್ಯ.”  ಕೃಷ್ಣನ ಮಾತಿನ ಫಲವೇನು?

ಕೃಷ್ಣನು ಹೀಗೆ ಮಾತನಾಡಿದಾಗ, ನಂದ ಮಹಾರಾಜನರು ಯಜ್ಞವನ್ನು ನೆರವೇರಿಸದಿರಲು ಒಪ್ಪಿದನು. ವೃಂದಾವನದ ವಾಸಿಗಳಿಗೆ ಕೃಷ್ಣನನ್ನು ಕಂಡರೆ ಅದೆಷ್ಟು ಪ್ರೀತಿಯಿತ್ತೆಂದರೆ ಅವನು ಏನು ಹೇಳಿದರೂ ಅವರು ಅದಕ್ಕೆ ಒಪ್ಪುತ್ತಿದ್ದರು. ಕೃಷ್ಣನು ಬಾಲಕನಾದರೂ ತನ್ನ ತಂದೆ ಮತ್ತು ಅಲ್ಲಿದ್ದ ಹಿರಿಯರಿಗೆ “ಈ ಯಜ್ಞ ಮಾಡುವ ಅಗತ್ಯ ಇಲ್ಲ” ಎಂದು ಮನವರಿಕೆ ಮಾಡಿಕೊಡುವುದರಲ್ಲಿ  ಯಶಸ್ವಿಯಾದನು.

ಅವರು ಯಜ್ಞವನ್ನು ನಿಲ್ಲಿಸಿದ್ದರಿಂದ ಇಂದ್ರನು ಕೋಪಗೊಂಡನು. ಅವನು ವರ್ಷಧಾರೆಯನ್ನು ಹರಿಸಿದನು ಮತ್ತು ಎಲ್ಲೆಡೆ ಪ್ರವಾಹ ಉಂಟಾಯಿತು.  ಇಡೀ ವ್ರಜಭೂಮಿಯು ಜಲಾವೃತಗೊಂಡಿತು. ಪಶುಗಳು ಮತ್ತು ಜನರು ಭಯಭೀತರಾದರು.  ಅವರು ಕೃಷ್ಣನಲ್ಲಿಗೆ ಬಂದರು,”ನಮ್ಮನ್ನು ರಕ್ಷಿಸು, ಕೃಷ್ಣ ರಕ್ಷಿಸು” ಎಂದು ಕೋರಿದರು. ಆಗ ಅವನು “ನಾನು ನಿಮಗೆ ರಕ್ಷಣೆ ನೀಡುವೆ” ಎಂದನು.

 ಅವನು ಆರೇಳು ವರ್ಷದ‌ ಬಾಲಕನಾಗಿದ್ದರೂ ಗೋವರ್ಧನ ಗಿರಿಯನ್ನು ಎತ್ತಿದನು. ಅದು ದೊಡ್ಡ ಗಿರಿಯಾಗಿದ್ದರೂ ಕೃಷ್ಣನು ಎತ್ತಿ ಏಳು ದಿನಗಳ ಕಾಲ ತನ್ನ ಕೈಯಲ್ಲೇ ಹಿಡಿದಿಟ್ಟುಕೊಂಡಿದ್ದನು.

ಇತ್ತ ಇಂದ್ರನು ಕೃಷ್ಣನ ಶಕ್ತಿ ಕಂಡು ದಿಗ್ಭ್ರಮೆಗೊಂಡನು. ಆಗ ಅವನ ಅಹಂಕಾರ ಇಳಿಯಿತು. ಕೃಷ್ಣನು ದೇವೋತ್ತಮ ಪರಮ ಪುರುಷ ಎನ್ನುವುದು ತಿಳಿಯಿತು. ತನ್ನ ತಪ್ಪನ್ನು ಅರಿತು ಕೃಷ್ಣನನ್ನು ಕುರಿತು ಪ್ರಾರ್ಥಿಸಿದನು. ಕ್ಷಮೆ ಯಾಚಿಸಿದನು. ಅನಂತರ ಎಲ್ಲವೂ ಯಥಾಸ್ಥಿತಿಗೆ ಬಂದಿತು. ಪ್ರವಾಹದ ವೇಗ ತಗ್ಗಿತು. ಜನರು ಹರ್ಷಚಿತ್ತರಾದರು. ಕೃಷ್ಣನ ಸಾಹಸವನ್ನು ಕೊಂಡಾಡಿದರು.

ಗೋವರ್ಧನ ಗಿರಿಯನ್ನು ಎತ್ತಿದ್ದರಿಂದ ಅವನು ಗಿರಿಧಾರಿಯಾದನು. ಪ್ರತಿ ವರ್ಷ‌ ಗೋವರ್ಧನ‌ ಪೂಜೆಯನ್ನು ಮಾಡಲಾಗುವುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi