ಹಲ್ವಾಗಳು
ಗೋಧಿ ಹಲ್ವಾ

ಬೇಕಾಗುವ ಪದಾರ್ಥಗಳು :
ಬಿಳಿಗೋಧಿ – 150 ಗ್ರಾಂ
ದ್ರಾಕ್ಷಿ – 50 ಗ್ರಾಂ
ತುಪ್ಪ – 75 ಗ್ರಾಂ
ಏಲಕ್ಕಿ ಪುಡಿ – 1/2 ಟೀ ಚಮಚ
ದಳ ಕೇಸರಿ – 3-4
ನಿಂಬೆ ಹಣ್ಣಿನರಸ – 2 ಟೀ ಚಮಚ
ಕೇಸರಿ ಬಣ್ಣ – 1 ಚಿಟಿಕೆ
ಮಾಡುವ ವಿಧಾನ : ಗೋಧಿಯನ್ನು ಒಂದು ದಿನ ನೆನೆಸಿಟ್ಟು ನುಣ್ಣಗೆ ರುಬ್ಬಿತೆಳುವಾದ ಬಟ್ಟೆಯಲ್ಲಿ ಹಾಲನ್ನು ಶೋಧಿಸಿಕೊಂಡು ಆ ಹಾಲನ್ನು 1 ಗಂಟೆ ಕಾಲ ಮುಚ್ಚಿಡಿ. ದಪ್ಪತಳದ ಪಾತ್ರೆಗೆ ತುಪ್ಪ ಹಾಕಿ ಒಲೆಯ ಮೇಲಿಡಿ. ಕಾದ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ, ಕರಿದು ತೆಗೆದಿಡಿ. ಅದೇ ತುಪ್ಪಕ್ಕೆ ಸಕ್ಕರೆ ಹಾಗೂ ನೀರು ಹಾಕಿ ಗಟ್ಟಿ ಪಾಕ ಮಾಡಿ, ಮುಚ್ಚಿಟ್ಟಿರುವ ಗೋಧಿಹಾಲಿನ ಮೇಲ್ಗಡೆ ತೇಲುತ್ತಿರುವ ನೀರನ್ನು ಬಗ್ಗಿಸಿ.
ತಳದಲ್ಲಿ ಉಳಿದ ಹಾಲನ್ನು ಚಮಚದಿಂದ ಕಲಕಿ ಸಕ್ಕರೆ ಪಾಕಕ್ಕೆ ಸುರಿದು ಅದು ಗಂಟು ಕಟ್ಟದಂತೆ ಚಮಚದಿಂದ ಕಲಸುತ್ತಿರಬೇಕು. ಗೋಧಿಹಾಲು ಪಾಕದಲ್ಲಿ ಕುದಿದು ಗಟ್ಟಿಯಾದನಂತರ ನಿಂಬೆರಸ, ಕೇಸರಿ ಬಣ್ಣ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಹಾಕಿ ಕಲಸಿ ಮತ್ತೆ 4 ನಿಮಿಷ ಬೇಯಿಸಬೇಕು. ಹಲ್ವಾ ಪಾತ್ರೆಗೆ ಅಂಟಿಕೊಳ್ಳದೆ ಬೆಂದು ತುಪ್ಪ ಬಿಟ್ಟುಕೊಂಡಾಗ ಅದನ್ನು ತಟ್ಟೆಗೆ ಬಗ್ಗಿಸಿ ತಟ್ಟಿ ಆರಿದನಂತರ ಬೇಕಾದ ಆಕಾರಕ್ಕೆ ಕತ್ತರಿಸಿ, ಕೃಷ್ಣನಿಗರ್ಪಿಸಿ ಸೇವಿಸಿ.
ಸೋರೆಕಾಯಿ ಹಲ್ವಾ

ಬೇಕಾಗುವ ಪದಾರ್ಥಗಳು :
ಸೋರೆಕಾಯಿ ತುರಿ – 250 ಗ್ರಾಂ
ಸಕ್ಕರೆ – 500 ಗ್ರಾಂ
ಖೋವಾ – 250 ಗ್ರಾಂ
ಗೋಡಂಬಿ – 50 ಗ್ರಾಂ
ತುಪ್ಪ – 50 ಗ್ರಾಂ
ಏಲಕ್ಕಿಪುಡಿ – 1 ಟೀ ಚಮಚ
ಕೇಸರಿ ದಳ – 7-8
ಮಾಡುವ ವಿಧಾನ : ಒಂದು ದಪ್ಪತಳದ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಕಾಯಿಸಿ ಮೊದಲು ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. ಅನಂತರ ಅದೇ ತುಪ್ಪದಲ್ಲಿ ಸೋರೆಕಾಯಿ ಹುರಿದುಕೊಂಡು ಸಣ್ಣ ಉರಿಯಲ್ಲಿ ನೀರು ಸೇರಿಸದೆ ಬೇಯಿಸಿಟ್ಟುಕೊಳ್ಳಿ. (ಸೋರೆಕಾಯಿ ಸಿಪ್ಪೆತೆಗೆದು ತುರಿದಾಗ ಅದೇ ನೀರು ಬಿಟ್ಟುಕೊಳ್ಳುತ್ತದೆ, ಹಾಗಾಗಿ ಮತ್ತೆ ನೀರು ಬೆರೆಸುವ ಅಗತ್ಯವಿಲ್ಲ).
ಬೆಂದ ಸೋರೆಕಾಯಿ ಜೊತೆ ಖೋವಾ ಪುಡಿಮಾಡಿಕೊಂಡು ಸೇರಿಸಿ ಚೆನ್ನಾಗಿ ಕೆದಕಿ. ಅನಂತರ ಸಕ್ಕರೆ ಹಾಕಿ, ಅಂಟು ಪಾಕ ಬರಲು ಶುರುವಾದಾಗ ಸಣ್ಣ ಉರಿ ಮಾಡಿ ಉಳಿದ ತುಪ್ಪ ಬೆರೆಸಿ. ಈಗ ಹುರಿದ ಗೋಡಂಬಿ, ಏಲಕ್ಕಿ ಪುಡಿ, ಕೇಸರಿ ಎಳೆಗಳನ್ನು ಸೇರಿಸಿ. ಬಾಣಲೆಯಲ್ಲಿ ಸುತ್ತಲೂ ತುಪ್ಪ ಬಿಟ್ಟುಕೊಳ್ಳುತ್ತಿದೆ ಎನ್ನುವಾಗ ಉರಿಯಿಂದ ಕೆಳಗಿಳಿಸಿ.
ಹಲಸಿನ ಹಣ್ಣಿನ ಹಾಲ್ಬಾಯಿ

ಬೇಕಾಗುವ ಪದಾರ್ಥಗಳು :
ಅಕ್ಕಿ – 1 ಪಾವು
ಬಿಡಿಸಿದ ಹಲಸಿನ ಹಣ್ಣಿನ ತೊಳೆಗಳು – 25-30
ಅಚ್ಚು ಬೆಲ್ಲದ ಪುಡಿ – 2 ಬಟ್ಟಲು
ತೆಂಗಿನಕಾಯಿ ತುರಿ – 2 ಬಟ್ಟಲು
ಏಲಕ್ಕಿ ಪುಡಿ – 1 ಚಮಚ
ಮಾಡುವ ವಿಧಾನ : ಹಲಸಿನ ತೊಳೆಗಳನ್ನು ಬಿಡಿಸಿಕೊಳ್ಳಿ. ಅಕ್ಕಿಯನ್ನು 2-3 ಗಂಟೆಗಳ ಕಾಲ ನೆನೆಸಿಟ್ಟು ಕಾಯಿತುರಿ ಮತ್ತು ಹಲಸಿನ ತೊಳೆಗಳೊಂದಿಗೆ ನುಣ್ಣಗೆ ರುಬ್ಬಿಡಿ. ಒಂದು ದಪ್ಪತಳದ ಬಾಣಲೆಯಲ್ಲಿ ಬೆಲ್ಲಕ್ಕೆ 1 1/2 ಲೋಟ ನೀರು ಬೆರೆಸಿ ಒಲೆಯ ಮೇಲಿಡಿ. ಬೆಲ್ಲ ಕರಗಿ ಪಾಕ ಅಂಟು ಬಂದಾಗ, ರುಬ್ಬಿದ ಅಕ್ಕಿ ಹಿಟ್ಟು ಹಾಗೂ ಹಲಸಿನ ತೊಳೆ ಹಿಟ್ಟನ್ನು ಹಾಕಿ ಸೌಟಿನಿಂದ ಕಲಕುತ್ತಾ ಬೇಯಿಸಿ.
ಅನಂತರ ತುಪ್ಪವನ್ನು ಹಾಕಿ ಹಾಲ್ಬಾಯಿ ಕೈಗೆ ಅಂಟದಷ್ಟು ಬೆಂದನಂತರ ಹದ ನೋಡಿಕೊಂಡು ಏಲಕ್ಕಿಪುಡಿ ಹಾಕಿ ತುಪ್ಪ ಸವರಿದ ತಟ್ಟೆಗೆ ಬಗ್ಗಿಸಿಕೊಂಡು ಸಮಮಾಡಿ. ಆರಿದನಂತರ ಇಷ್ಟವಾದ ಆಕಾರಕ್ಕೆ ಕತ್ತರಿಸಿ, ಸೇವಿಸಿ.
ಬಾದಾಮಿ ಹಲ್ವಾ

ಬೇಕಾಗುವ ಪದಾರ್ಥಗಳು :
ಗೋಧಿ – 2 ಪಾವು
ಹಾಲು – 1/2 ಲೀಟರ್
ಸಕ್ಕರೆ – 3 ಪಾವು
ಬಾದಾಮಿ ಪುಡಿ – 2 ಬಟ್ಟಲು
ಕೇಸರಿ ದಳ – 1/2 ಚಮಚ
ಏಲಕ್ಕಿ ಪುಡಿ – 1 ಚಮಚ
ಜಾಕಾಯಿ ಪುಡಿ – 1/4 ಟೀ ಚಮಚ
ಬಾದಾಮಿ ಚೂರುಗಳು – 1/4 ಬಟಲು
ಮಾಡುವ ವಿಧಾನ : ಗೋಧಿಯನ್ನು ಚೆನ್ನಾಗಿ ಆರಿಸಿ 3 ದಿನಗಳ ಕಾಲ ನೆನೆಸಬೇಕು. ದಿನವೂ ನೀರನ್ನು ಬದಲಿಸಬೇಕು. (3 ದಿನಗಳ ಕಾಲ ಗೋಧಿ ನೆನೆಯುವುದರಿಂದ ರುಬ್ಬಲು ಅನುಕೂಲವಾಗುತ್ತದೆ, ಹಾಲು ಹೆಚ್ಚು ಬರುತ್ತದೆ). ಗೋಧಿಯನ್ನು ಬಸಿ ಹಾಕಿ ನೀರನ್ನು ಬೆರಸದೆಯೇ ರುಬ್ಬಿ. ರುಬ್ಬಿದ ಗೋಧಿಯನ್ನು ಒಂದು ಶುಭ್ರವಾದ ತೆಳುಬಟ್ಟೆಯಲ್ಲಿ ಶೋಧಿಸಿ.
ಚರಟದಲ್ಲಿರುವ ಹಾಲೆಲ್ಲ ಬರುವವರೆಗೂ ಶೋಧಿಸಿ. ಇದಕ್ಕೆ ಸ್ವಲ್ಪ ಬಿಸಿ ನೀರನ್ನು ಬೆರೆಸಿ ಚೆನ್ನಾಗಿ ಕಲಸಿ. ಅನಂತರ ಗೋಧಿಯ ಹಾಲನ್ನು 12 ಘಂಟೆಗಳ ಕಾಲ ಇಡಬೇಕು. ಮರುದಿನ ಹಾಲಿನ ಮೇಲೆ ತೇಲಾಡುತ್ತಿರುವ ನೀರನ್ನು ತೆಗೆದು ಗಟ್ಟಿ ಮಿಶ್ರಣವನ್ನು ಬಟ್ಟೆಯಲ್ಲಿ ಹಾಕಿ ಯಾವುದಾದರೂ ಕೊಕ್ಕೆಗೆ ತೂಗುಹಾಕಿ.
ಆಗ ಅದರಲ್ಲಿರುವ ನೀರೆಲ್ಲಾ ಸೋರಿಹೋಗಿ ಗಟ್ಟಿ ಗೋಧಿಹಾಲಿನ ಮಿಶ್ರಣ ದೊರೆಯುತ್ತದೆ. ಅನಂತರ ಹಾಲು ಹಾಗೂ ಸಕ್ಕರೆಯನ್ನು ಬೆರೆಸಿ ಒಂದು ದಪ್ಪ ತಳದ ಪಾತ್ರೆಯಲ್ಲಿ ಪಾಕ ಬರಲು ಸಣ್ಣ ಉರಿಯಲ್ಲಿ ಇಡಿ. ಪಾಕ ಗಟ್ಟಿಯಾಗುತ್ತಿದ್ದಂತೆ ಗೋಧಿಹಾಲಿನ ಮಿತ್ರಣವನ್ನು ಇದಕ್ಕೆ ಹಾಕಿ ಸೌಟಿನಿಂದ ಕದಕುತ್ತಿರಿ ಮತ್ತು ಸ್ವಲ್ಪ ತುಪ್ಪಹಾಕಿ, ಅದನ್ನು ಹಲ್ವಾದೊಡನೆ ಚೆನ್ನಾಗಿ ಬೆರೆಯುತ್ತಿದ್ದಂತೆ, ಉಳಿದ ತುಪ್ಪ ಬಾದಾಮಿ ಪುಡಿ, ಏಲಕ್ಕಿ ಪುಡಿ, ಜಾಕಾಯಿ ಪುಡಿ ಮತ್ತು ಕೇಸರಿದಳ ಸೇರಿಸಿ. ಹಲ್ವಾ ಗಟ್ಟಿಯಾಗುತ್ತಿದ್ದಂತೆ ಉರಿ ಆರಿಸಿ.
ತುಪ್ಪ ಸವರಿದ ಅಗಲವಾದ ತಟ್ಟೆಗೆ ಸುರಿದು ಬೇಕಾದ ಆಕಾರಕ್ಕೆ ಬಾದಾಮಿ ಚೂರುಗಳನ್ನು ಮೇಲೆ ಇರಿಸಿ ಅಲಂಕರಿಸಿ ಕೃಷ್ಣನಿಗೆ ನೈವೇದ್ಯಕ್ಕಿಟ್ಟು ಸ್ವೀಕರಿಸಿ.
ಕಡಲೇಬೇಳೆ ಹಾಲ್ಬಾಯಿ

ಬೇಕಾಗುವ ಪದಾರ್ಥಗಳು :
ಅಕ್ಕಿ – 5 ಬಟ್ಟಲು
ಕಡಲೇಬೇಳೆ – 2 ಬಟ್ಟಲು
ಬೆಲ್ಲದಪುಡಿ – 2 1/2 ಬಟ್ಟಲು
ತುಪ್ಪ – 1 1/2 ಬಟ್ಟಲು
ಕೊಬ್ಬರಿ ತುರಿ – 11/2 ಬಟ್ಟಲು
ಏಲಕ್ಕಿ ಪುಡಿ – 1 ಚಮಚ
ಮಾಡುವ ವಿಧಾನ : ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆಸಿ ನುಣ್ಣಗೆ ರುಬ್ಬಿ. 1/2 ಗಂಟೆ ಬಿಟ್ಟರೆ ರುಬ್ಬಿದ ಹಿಟ್ಟಿನ ಮೇಲೆ ತಿಳಿಯಾದ ನೀರು ನಿಲ್ಲುತ್ತದೆ. ಅದನ್ನು ಬಸಿದು ತೆಗೆಯಿರಿ. ಒಂದು ದಪ್ಪತಳದ ಪಾತ್ರೆಯಲ್ಲಿ ಕಡಲೇಬೇಳೆಯನ್ನು ಸ್ವಲ್ಪ ತುಪ್ಪ ಹಾಕಿ ಹುರಿಯಿರಿ.
ಅನಂತರ ಅದು ಮುಳುಗುವಷ್ಟು ನೀರು ಬೆರೆಸಿ ಬೇಯಿಸಿ. ಬೇಯಿಸುವಾಗ ಕೊಬ್ಬರಿ ತುರಿ ಮತ್ತು ಸ್ವಲ್ಪ ತುಪ್ಪ ಸೇರಿಸಿ. ಬೇಳೆ ಬೆಂದಿದೆ ಎನ್ನುವಾಗ ಬೆಲ್ಲದ ಪುಡಿ ಬೆರೆಸಿ ಚೆನ್ನಾಗಿ ಕೆದಕಿ. ಬೆಲ್ಲ ಕರಗಿದನಂತರ ಅಕ್ಕಿ ಹಿಟ್ಟನ್ನು ಬೆರೆಸಿ ಸೌಟಿನಿಂದ ಬಿಡದೆ ಸಣ್ಣ ಉರಿಯಲ್ಲಿ ಕೆದಕುತ್ತಿರಿ.
ಅನಂತರ ತುಪ್ಪ ಬೆರೆಸಿ ಎಲ್ಲ ಪದಾರ್ಥಗಳು ಒಂದಕ್ಕೊಂದು ಹೊಂದಿಕೊಂಡು ಪಾತ್ರೆಗೆ ಅಂಟದಂತೆ ಬಿಟ್ಟುಕೊಂಡಾಗ ತುಪ್ಪಸವರಿದ ಒಂದು ಅಗಲವಾದ ತಟ್ಟೆಗೆ ಹಾಲ್ಬಾಯಿಯನ್ನು ಸುರಿದು ಬೇಕಾದ ಆಕಾರಕ್ಕೆ ಕತ್ತರಿಸಿ. ಶ್ರೀಕೃಷ್ಣನಿಗರ್ಪಿಸಿ ಹಾಲ್ಬಾಯಿ ಪ್ರಸಾದವನ್ನು ಸ್ವೀಕರಿಸಿ.






Leave a Reply