ಸಂಸ್ಕೃತ ಮೂಲ – ಡಾ. ಜನಾರ್ದನ ಹೆಗಡೆ, ಕಥಾಶತವಲ್ಲರೀ
ಭಾಷಾನುವಾದ – ಪತಿತಪಾವನ ದಾಸ
ಹಿಂದೆ ಧ್ಯಾನಚಂದ ಎಂಬ ಒಬ್ಬ ವ್ಯಾಪಾರಿ ಇದ್ದನು. ಅವನು ದೊಡ್ಡ ಭಗವದ್ಭಕ್ತನಾಗಿದ್ದನು. ಅವನು ಪ್ರತಿದಿನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ದೇವರ ಪೂಜೆ ಮಾಡಿ ಅಂಗಡಿಗೆ ಹೋಗುತ್ತಿದ್ದ.
ಮಧ್ಯಾಹ್ನದವರೆಗೆ ಅಂಗಡಿ ನಡೆಸುತ್ತಿದ್ದ. ಅನಂತರದ ಕಾಲ ಧ್ಯಾನ, ಭಗವತ್ ಕಾರ್ಯಾದಿಗಳಲ್ಲಿ ಕಳೆಯುತ್ತಿದ್ದನು.

ಒಮ್ಮೆ ನಗರದ ಮಹಾಧನಿಕನಾದ ಲಕ್ಷ್ಮೀಪತಿ ಎಂಬುವನು ಧ್ಯಾನಚಂದನನ್ನು ತನ್ನ ಮನೆಗೆ ಕರೆಸಿ ಅವನ ತಲೆಗೆ ಒಂದು ಟೋಪಿ ತೊಡಿಸಿ ಹೇಳಿದ, “ಮಹಾಮೂರ್ಖನಿಗೆ ಕೊಡಲು ಈ ಟೋಪಿಯನ್ನು ನಾನು ಮಾಡಿಸಿದೆ. ನೀವೇ ಇದಕ್ಕೆ ಅರ್ಹರು.”
“ನನ್ನನ್ನು ಮೂರ್ಖನೆಂದು ತಾವು ಏಕೆ ಭಾವಿಸುವಿರಿ?”
“ನೀವು ಒಬ್ಬ ವ್ಯಾಪಾರಿ. ವ್ಯಾಪಾರಿಯ ಧರ್ಮ ಧನಸಂಪಾದನೆ. ಆದರೂ ನೀವು ಧನಸಂಪಾದನೆಗೆ ಅನಾದರ ತೋರುವಿರಿ. ಸ್ವಲ್ಪ ಸಮಯವನ್ನು ಮಾತ್ರ ಧನಸಂಪಾದನೆಗೆ ಉಪಯೋಗಿಸುವಿರಿ. ನಿಮ್ಮಂತಹ ಮೂರ್ಖರು ಬೇರೆ ಯಾರು ಇರಲಿಕ್ಕೆ ಸಾಧ್ಯ? ಆದ್ದರಿಂದಲೇ ಈ ಟೋಪಿಯನ್ನು ನಿಮಗೆ ನೀಡಿದೆ. ಸರಿಯಲ್ಲವೇ ಇದು?” ಎಂದನು.
ಧ್ಯಾನಚಂದ ಪ್ರತ್ಯುತ್ತರ ಏನೂ ನೀಡಲಿಲ್ಲ. ಅವನ ವ್ಯವಹಾರವಂತೂ ಮೊದಲಿನ ಹಾಗೆಯೇ ಮುಂದುವರಿಯಿತು. ಬಂಧು-ಬಾಂಧವರು ಕೂಡ ಆತನ ಮೂರ್ಖತನದ ಬಗ್ಗೆ ಉಪಹಾಸ ಮಾಡುತ್ತಿದ್ದರು. ಆದರೂ ಕೂಡ ಆತನು ಅರ್ಧ ದಿನ ಮಾತ್ರ ವ್ಯಾಪಾರಕ್ಕೆ ಉಪಯೋಗಿಸಿ ಉಳಿದ ಸಮಯವನ್ನು ಧ್ಯಾನ – ಸತ್ಕಾರ್ಯಗಳಲ್ಲಿ ವಿನಿಯೋಗ ಮಾಡುತ್ತಿದ್ದ.
ಮುಂದೆ ಕೆಲ ವರ್ಷಗಳ ಅನಂತರ ಧನಿಕ ಲಕ್ಷ್ಮೀಪತಿ ಅಸ್ವಸ್ಥನಾದನು. ಅವನ ಅಂತಿಮ ಕಾಲ ಕೂಡ ಬಂದೇ ಬಿಟ್ಟಿತು.
ಆಗ ಆತನನ್ನು ನೋಡಲು ಹೋದ ವ್ಯಾಪಾರಿ ಧ್ಯಾನಚಂದ ಕೇಳಿದ, “ಸ್ವಾಮಿ ಪರಲೋಕದಲ್ಲಿ ಸುಖ-ಜೀವನ ನಡೆಸಲು ವ್ಯವಸ್ಥೆ ಮಾಡಲು ಅಲ್ಲಿಗೆ ಯಾರನ್ನಾದರೂ ಕಳಿಸಿರುವಿರಿ ತಾನೆ?”
“ಏನು ಕೇಳುತ್ತಿದ್ದೀರಿ ಧ್ಯಾನಚಂದ?” ಆಶ್ಚರ್ಯದಿಂದ ನುಡಿದ ಲಕ್ಷ್ಮೀಪತಿ.
“ಅಲ್ಲ, ಪರಲೋಕದಲ್ಲಿ ಇರಲು ಒಳ್ಳೆಯ ವ್ಯವಸ್ಥೆ ಬೇಕಲ್ಲವೇ? ಸುಖವಾಗಿರಲು ಒಳ್ಳೆಯ ಮನೆ ಇರದಿದ್ದರೆ, ಒಳ್ಳೆಯ ನಿದ್ರೆ ಹೇಗೆ ಬರುವುದು? ತಮ್ಮ ಸೇವೆಗಾಗಿ ಸೇವಕರು ಕೂಡ ಇರಲೇಬೇಕಲ್ಲವೆ?” ಧ್ಯಾನಚಂದ ಕೇಳಿದನು.
“ಪರಲೋಕದಲ್ಲಿ ವ್ಯವಸ್ಥೆ ಮಾಡಲು ಯಾರಿಗೂ ಕಳಿಸಲು ಸಾಧ್ಯವಿಲ್ಲ. ನನ್ನ ಜೊತೆ ಯಾರು ಕೂಡ ಬರಲೂ ಸಾಧ್ಯವಿಲ್ಲ. ಬಂಧು-ಬಾಂಧವರು, ಸಂಪತ್ತು, ವ್ಯಾಪಾರ – ಇವು ಯಾವುವೂ ನನ್ನ ಜೊತೆ ಒಯ್ಯಲು ಸಾಧ್ಯವಿಲ್ಲ. ಒಬ್ಬಂಟಿಯಾಗಿಯೋ ನಾನು ಹೋಗಬೇಕು.”
“ಹಾಗಾದರೆ ಈ ಟೋಪಿಯನ್ನು ಧರಿಸಲು ತಾವೇ ಯೋಗ್ಯವಾದ ವ್ಯಕ್ತಿ.” ಎನ್ನುತ್ತಾ ಧ್ಯಾನಚಂದನು ತನ್ನ ತಲೆಯಮೇಲಿದ್ದ ಟೋಪಿಯನ್ನು ತೆಗೆದು ಲಕ್ಷ್ಮೀಪತಿಯ ತಲೆಯ ಮೇಲೆ ಇಟ್ಟನು.
“ಏನು ಮಾಡುತ್ತಾ ಇದ್ದೀರಿ ಮಿತ್ರ?” ಆಶ್ಚರ್ಯದಿಂದ ಕೇಳಿದನು ಲಕ್ಷ್ಮೀಪತಿ.

ಆಗ ಧ್ಯಾನಚಂದ ನುಡಿದ, “ಪರಲೋಕಕ್ಕೆ ಏನನ್ನೂ ಒಯ್ಯಲು ಸಾಧ್ಯವಿಲ್ಲ ಎಂದು ತಿಳಿದಿದ್ದೂ ನೀವು ಪೂರ್ತಿ ಜೀವನ ಕೇವಲ ಧನ ಸಂಪಾದನೆಗೆ ಬಳಸಿದಿರಿ. ಆದರೆ ಇದೀಗ ಧನವೂ ಸಹಾಯ ಮಾಡದು; ಪತ್ನಿ, ಪುತ್ರ, ಬಾಂಧವರೂ ಸಹಾಯ ಮಾಡಲಾರರು. ಶಾಶ್ವತ ಉಪಯೋಗಕ್ಕಾಗಿ ಏನೂ ಸಂಪಾದಿಸದೆ, ಅಶಾಶ್ವತ ಜೀವನಕ್ಕಾಗಿ ಎಷ್ಟೊಂದು ಸಂಪಾದಿಸಿದ್ದೀರಿ. ಇದು ಮಹಾಮೂರ್ಖತನ ಅಲ್ಲವೇ?
ಆದ್ದರಿಂದ ದೊಡ್ಡ ಮೂರ್ಖರು ನೀವೇ. ಹಾಗಾಗಿ ಈ ಟೋಪಿ ನೀವೇ ಧರಿಸಬೇಕು.”
Leave a Reply