ಶ್ರೀಲ ಪ್ರಭುಪಾದರ ಗುರಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರಿಗೆ ಅತಿ ಪ್ರಿಯವಾದ ಪ್ರಸಾದ ಕಿಚಡಿ. ಹೆಸರು ಬೇಳೆ ಮತ್ತು ಅಕ್ಕಿಯ ಕಿಚಡಿ ಒಂದು ಪೌಷ್ಠಿಕ ಮತ್ತು ರುಚಿಕರ ಖಾದ್ಯ. ಇದರಲ್ಲಿ ಎರಡು ವಿಧ.

ಒಂದು ದ್ರವರೂಪದ (ಗಂಜಿಯಂಥ) ಕಿಚಡಿಯಾದರೆ, ಇನ್ನೊಂದು ಗಟ್ಟಿಯಾದ (ಅನ್ನದಂಥ) ಕಿಚಡಿ. ಎರಡೂ ರೀತಿಯ ಕಿಚಡಿಗಳೂ ತಮ್ಮದೇ ಆದ ಸ್ವಾದದಿಂದ ನಿಮ್ಮ ಮನ ಗೆಲುವುದರಲ್ಲಿ ಸಂಶಯವಿಲ್ಲ. ಕಿಚಡಿಯ ಒಂದು ವಿಶೇಷತೆ ಎಂದರೆ ಇದನ್ನು ನೀವು ಮುಂಜಾನೆ ಉಪಹಾರ, ಸಂಜೆಯ ಲಘು ಉಪಹಾರ, ಊಟಕ್ಕಾಗಿ ಸಿದ್ಧಪಡಿಸಬಹುದು. ಕಿಚಡಿಯನ್ನು ಬಡಿಸಿಕೊಳ್ಳುವಾಗ ಅದರ ಜತೆ ಸದಾ ಲಿಂಬೆ ರಸ ಬೆರೆಸಿ, ಇದು ಕಿಚಡಿಯ ರುಚಿಯ ಜತೆಗೆ ಅದರ ಪೌಷ್ಠಿಕತೆಯನ್ನೂ ಹೆಚ್ಚಿಸುತ್ತದೆ.
ಹೆಸರು ಬೇಳೆಯಲ್ಲಿ ಯಥೇಚ್ಛ ಕಬ್ಬಿಣಾಂಶ ಇದ್ದರೆ, ಲಿಂಬೆ ರಸದಲ್ಲಿ ವಿಟಮಿನ್ “ಸಿ” ಸಮೃದ್ಧವಾಗಿದೆ. (ಇಲ್ಲಿ ನಾವು ವಿವರಿಸಿರುವುದು ಗಟ್ಟಿಯಾದ ಕಿಚಡಿ ತಯಾರಿಸುವ ವಿಧಾನ)
- ಹೆಸರು ಬೇಳೆ: 1/3 ಕಪ್ (85 ಗ್ರಾಂ)
- ಬಾಸ್ಮತಿ ಅಕ್ಕಿ (ಯಾವುದೇ ಉದ್ದನೆಯ ಅಕ್ಕಿಯಾದರೂ ಆದೀತು): 1 ಕಪ್ (250 ಗ್ರಾಂ)
- ತುಪ್ಪ/ ಎಣ್ಣೆ: 3 ಚಮಚ
- ಗೋಡಂಬಿ ಹೋಳು: 1/3 ಕಪ್
- ಜೀರಿಗೆ: ಎರಡು ಚಮಚ
- ಹಸಿಮೆಣಸು: ಸಣ್ಣಗೆ ಹೆಚ್ಚಿದ ಚೂರುಗಳು / ೧ ಚಮಚ
- ಹಸಿ ಶುಂಠಿ: 2 ಚಮಚ
- ಇಂಗು: ರುಚಿಗೆ ತಕ್ಕಷ್ಟು
- ಹೂಕೋಸು: 400 ಗ್ರಾಂ. ಹೂಗಳನ್ನು ಚಿಕ್ಕ ಚಿಕ್ಕ ಎಸಳುಗಳನ್ನಾಗಿ ಹೆಚ್ಚಿಕೊಳ್ಳಿ
- ನೀರು: 5-6 ಕಪ್
- ಉಪ್ಪು: ಒಂದೂವರೆ ಚಮಚ
- ಬೆಣ್ಣೆ: ಒಂದು ಚಮಚ
- ಬಟಾಣಿ: 2-3 ಕಪ್
ಕಿಚಡಿ ತಯಾರಿಸಲು ಬೇಕಾಗುವ ಕಾಲಾವಧಿ 40 ರಿಂದ 45 ನಿಮಿಷಗಳು
ಅಕ್ಕಿ ಮತ್ತು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ನಾಲ್ಕು ಲೀಟರ್ ಸಾಮರ್ಥ್ಯದ ನಾನ್‌ಸ್ಟಿಕ್ ಬಾಣಲೆಯಲ್ಲಿ, ಸಣ್ಣ ಉರಿಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಬಿಸಿ ತುಪ್ಪದಲ್ಲಿ ಗೋಡಂಬಿಯನ್ನು ಹುರಿಯಿರಿ. ಗೋಡಂಬಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಅದನ್ನು ಚಮಚದ ಸಹಾಯದಿಂದ ಹೊರಕ್ಕೆ ತೆಗೆದು, ಪಕ್ಕಕ್ಕಿಟ್ಟುಕೊಳ್ಳಿ. ಅದೇ ತುಪ್ಪದಲ್ಲಿ ಜೀರಿಗೆಯನ್ನು ಹುರಿಯಿರಿ.
ಅದು ಚಿನ್ನದ ಬಣ್ಣಕ್ಕೆ ತಿರುಗಿದ ತಕ್ಷಣ ಮೆಣಸು ಮತ್ತು ಶುಂಠಿ ಸೇರಿಸಿ. ಬಳಿಕ ಹೂಕೋಸನ್ನು ಬೆರೆಸಿ ಒಂದು ನಿಮಿಷ ಮಗುಚುತ್ತಿರಿ. ಕೊನೆಗೆ ಅಕ್ಕಿ ಮತ್ತು ಹೆಸರು ಬೇಳೆ ಸೇರಿಸಿ. ನಂತರ ಒಂದು ನಿಮಿಸ ದೊಡ್ಡ ಉರಿಯಲ್ಲಿ ಬೇಯಿಸಿ. ಅದು ಜೋರಾಗಿ ಕುದಿಯಲಾರಂಭಿಸಿದ ನಂತರ ಉರಿಯನ್ನು ಕಡಿಮೆ ಮಾಡಿ. ಪಾತ್ರೆಯನ್ನು ಅರ್ಧ ಮಾತ್ರ ಮುಚ್ಚಿಡಿ. ಕಿಚಡಿ ನಿಧಾನವಾಗಿ ಬೇಯಲಿ. ಆಗಾಗ ಮುಗುಚುತ್ತಿರಿ.
ಅಕ್ಕಿ ಮತ್ತು ಹೆಸರು ಬೇಳೆ ಪೂರ್ತಿ ಬೇಯುವ ತನಕ, ಅಂದರೆ ಸುಮಾರು 30 ರಿಂದ 40 ನಿಮಿಷ ಬೇಯಿಸಿ. (ಕಿಚಡಿಗೆ ನೀರು ಕಡಿಮೆಯಾಗಿದೆ ಎನಿಸಿದರೆ ಒಂದು ಲೋಟ ಬಿಸಿ ನೀರು ಬೆರೆಸಿ) ಕಿಚಡಿಯನ್ನು ಒಲೆಯಿಂದ ಕೆಳಕ್ಕಿಸುವ ಮೊದಲು ಅದಕ್ಕೆ ಉಪ್ಪು, ಬೆಣ್ಣೆ, ಹುರಿದ ಗೋಡಂಬಿ, ಬೇಯಿಸಿದ ಬಟಾಣಿ, ಟೊಮ್ಯಾಟೋ ಹೋಳು, ಕರಿಬೇವಿನ ಸೊಪ್ಪು ಬೆರೆಸಿ. ಒಂದು ನಿಮಿಷ ಹಾಗೇ ಮುಚ್ಚಿಡಿ.
-ಇಸ್ಕಾನ್ ಅನ್ನಕೂಟ, ಬೆಂಗಳೂರು.
Leave a Reply