ಜಗನ್ನಾಥ ಮಹಾತ್ಮೆ: ಧನಂಜಯನ ಗರ್ವಭಂಗ

1727ರ ಮಾತು. ಆಗ ಧನಂಜಯ ಮೆಹ್ತಾ ಎಂಬ ಹೆಸರು ಇಡೀ ಹೈದರಾಬಾದಿನಲ್ಲೇ ಜನಜನಿತ. ಮೆಹ್ತಾ ಆಗರ್ಭ ಶ್ರೀಮಂತ. ಮೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಪಾಸ್ತಿ; ನಗ ನಾಣ್ಯ. ಆತ ಹೆಸರಿಗೆ ತಕ್ಕಂತೆ ಧನಂಜಯನೇ ಆಗಿದ್ದ! ತನ್ನ ಸಿರಿತನದ ಬಗ್ಗೆ ಸಹಜವಾಗಿಯೇ ಆತನಿಗೆ ಗರ್ವ ಮಿಶ್ರಿತ ಹೆಮ್ಮೆ ಇತ್ತು.

ಇಂಥ ಧನಂಜಯ್ ಒಮ್ಮೆ ಕುಟುಂಬ ಸಮೇತನಾಗಿ ಜಗನ್ನಾಥ ಪುರಿ ಕ್ಷೇತ್ರಕ್ಕೆ ಬಂದ. ವೈಯಕ್ತಿಕವಾಗಿ ಹೇಳುವುದಾದರೆ ಧನಂಜಯನಿಗೆ ಜಗನ್ನಾಥನ ಮೇಲೆ ಹೇಳಿಕೊಳ್ಳುವಂಥ ನಂಬಿಕೆ ಏನೂ ಇರಲಿಲ್ಲ. ಅವನ ಪಾಲಿಗೆ ದುಡೇ ದೊಡ್ಡಪ್ಪ, ದೇವರು ಎಲ್ಲಾ. ಆದರೂ ಕುಟುಂಬದವರ ಒತ್ತಾಯದ ಮೇರೆಗೆ ಆತನೂ ಪುರಿಗೆ ಬಂದಿದ್ದ.

ಹಾಗೆ ಬಂದವನಿಗೆ ಜಗನ್ನಾಥನಿಗೇ ಸವಾಲೆಸೆಯುವ ಮನಸ್ಸಾಯಿತು! ಈ ಮರದ ಕಟ್ಟಿಗೆಗಳಿಂದ ಮಾಡಿದ ಜಗನ್ನಾಥ ನನ್ನ ಮುಂದೆ ಯಾವ ಲೆಕ್ಕ ಎಂಬ ಅಹಂಕಾರ ಧನಂಜಯನಲ್ಲಿ ಮೊಳೆತಿತ್ತು. ಹೀಗಾಗಿ ಜಗನ್ನಾಥನ ತಾಕತ್ತು ಪರೀಕ್ಷಿಸಲು ಆತ ಮುಂದಾದ. ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುತ್ತಾರಲ್ಲ ಹಾಗೆ !

ಜಗನ್ನಾಥ ದೇವಾಲಯದಲ್ಲಿ ನಿತ್ಯ ದೇವರಿಗೆ ಮೂರು ಬಾರಿ ಆಹಾರ ನೈವೇದ್ಯ ಮಾಡುವುದು ಸಂಪ್ರದಾಯ. ಇದನ್ನು ತಿಳಿದುಕೊಂಡ ಧನಂಜಯ ದೇವಾಲಯದ ಅಡುಗೆ ಭಟ್ಟರಿಗೆ ಬಹಿರಂಗ ಸವಾಲು ಹಾಕಿದ. ನಾನು ಜಗನ್ನಾಥ ದೇವರಿಗೆ ಒಂದು ಲಕ್ಷರೂಪಾಯಿ ನೀಡುತ್ತೇನೆ. ಆದರೆ ಅಷ್ಟೂಹಣದಿಂದ, ಒಂದೇ ಬಾರಿಗೆ, ದೇವರಿಗೆ ಪ್ರಸಾದ ತಯಾರಿಸಬೇಕು ! ತಾಕತ್ತಿದ್ದರೆ, ನಿಮ್ಮ ಜಗನ್ನಾಥನಿಗೆ ಅಷ್ಟೂ ಪ್ರಸಾದ ಸ್ವೀಕರಿಸುವ ಸಾಮರ್ಥ್ಯವಿದ್ದರೆ ನನ್ನ ಸವಾಲು ಒಪ್ಪಿಕೊಳ್ಳಿ ಎಂದು ಗರ್ವದಿಂದ ನುಡಿದ.

ಈಗ ಒಂದು ಲಕ್ಷರೂಪಾಯಿ ದೊಡ್ಡ ಮೊತ್ತ ಎನಿಸುವುದಿಲ್ಲ ನಿಜ. ಆದರೆ ಆ ಕಾಲದಲ್ಲಿ ಒಂದು ಲಕ್ಷರೂಪಾಯಿ ಎಂದರೆ ಸಾಮಾನ್ಯ ಜನರು ಊಹಿಸಿಕೊಳ್ಳಲೂ ಆಗದಷ್ಟು ದೊಡ್ಡ ಮೊತ್ತವಾಗಿತ್ತು. ಮೇಲಾಗಿ ಆಗ ಹಣ್ಣು ತರಕಾರಿಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಬೆಲೆ ಎಷ್ಟೊಂದು ಕಡಿಮೆ ಇತ್ತೆಂದರೆ ರೂಪಾಯಿ ಮಾತು ಹಾಗಿರಲಿ, ಒಂದೆರಡು ಆಣೆ ಕೊಟ್ಟರೆ ಕೆಜಿಗಟ್ಟಲೆ ಹಣ್ಣು ತರಕಾರಿ ಪಡೆಯಬಹುದಿತ್ತು !

ಅಡುಗೆ ಭಟ್ಟರು ಎಷ್ಟೇ ದುಬಾರಿ, ರುಚಿಕಟ್ಟಾದ ಪ್ರಸಾದ ತಯಾರಿಸಿದರೂ ಒಂದು ನೂರು ರೂಪಾಯಿಯಲ್ಲಿ ಜಗನ್ನಾಥನಿಗೆ ಒಂದು ದಿನದ ಪ್ರಸಾದ ತಯಾರಿಸಬಹುದಿತ್ತು. ಅಂಥದ್ದರಲ್ಲಿ ಒಂದು ಲಕ್ಷ ರೂಪಾಯಿಯನ್ನು ಖರ್ಚು ಮಾಡುವುದು ಹೇಗೆ ?! ಹೀಗಾಗಿ ಒಂದು ಲಕ್ಷರೂಪಾಯಿ ಖರ್ಚು ಮಾಡಿ, ಅಷ್ಟೊಂದು ಪದಾರ್ಥಗಳನ್ನು ಖರೀದಿಸುವುದನ್ನು ಊಹಿಸಿಕೊಳ್ಳುವುದೂ ಅಲ್ಲಿನ ಭಟ್ಟರಿಗೆ ಕಷ್ಟವಾಯಿತು. ಇದರಿಂದ ಜಗನ್ನಾಥ ದೇವಾಲಯದ ಆರ್ಚಕರು, ಬಾಣಸಿಗರು, ಆಡಳಿತ ಮಂಡಳಿಯವರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದರು.

ಒಂದು ಕಡೆ ಈ ಸವಾಲು ಒಪ್ಪಿಕೊಳ್ಳುವಂತೆಯೂ ಇಲ್ಲ. ಇನ್ನೊಂದು ಕಡೆ ಸವಾಲು ಒಪ್ಪಿಕೊಳ್ಳದಿದ್ದರೆ ಜಗನ್ನಾಥನ ಸಾಮರ್ಥ್ಯಕ್ಕೇ ಅವಮಾನ ಮಾಡಿದಂತೆ. ಭಕ್ತನೆಂದು ಹೇಳಿಕೊಳ್ಳುವ ಶ್ರೀಮಂತನೊಬ್ಬ ಇಂಥ ವಿಲಕ್ಷಣ ಸವಾಲು ಒಡ್ಡಿದ್ದು ಸಹಜವಾಗಿಯೇ ಅವರೆಲ್ಲರಲ್ಲೂ ಬೇಸರ ಮೂಡಿಸಿತ್ತು.

ದೇವಾಲಯದ ಅರ್ಚಕರು ತಲೆ ಕೆಡಿಸಿಕೊಂಡರು. ಅವರಿಗೆ ನಿದ್ದೆಯೇ ಬಾರದು. ಈ ಶ್ರೀಮಂತನ ಮನವೊಲಿಸುವುದು ಹೇಗೆ? ಜಗನ್ನಾಥನಿಗೆ ಅಷ್ಟೊಂದು ಹಣ ಬೇಡ ಸ್ವಲ್ಪ ಕಡಿಮೆ ಹಣ ನೀಡು ಸಾಕು ಎಂದು ಹೇಳಬೇಕೆ? ಜಗನ್ನಾಥನಂಥ ಶ್ರೀಮಂತ, ಶಕ್ತಿಯುತ, ದೇವೋತ್ತಮನಿಗೆ ಇಷ್ಟೊಂದು ಹಣ ಬೇಡವೆಂದು ಆ ಧನಿಕನ ಬಳಿ ಹೇಳುವುದು ಸರಿಯೇ? ಎಂಬ ಜಿಜ್ಞಾಸೆಯಲ್ಲಿ ಅವರು ಮುಳುಗಿದರು.

ಅವರ ಮನಸ್ಸು ಇನ್ನೊಂದು ವಿಚಾರದ ಕಡೆ ಹೊರಳಿತು. ಜಗನ್ನಾಥ ದೇವಾಲಯ ಮೊದಲಿನಿಂದಲೂ ಪ್ರಸಾದ ವಿತರಣೆಗೆ ಹೆಸರುವಾಸಿ. ಜಗತ್ತಿಗೆ ಒಡೆಯನಾದ ದೇವೋತ್ತಮ ಸನ್ನಿಧಿಯಲ್ಲಿ ಆ ಕಾಲದಲ್ಲೇ ನಿತ್ಯ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ.

ಹಸಿವೆಂಬುದು ಅಲ್ಲಿ ಸುಳಿಯುತ್ತಲೇ ಇರಲಿಲ್ಲ. ಪ್ರಸಾದವೆಂದರೆ ಅಂತಿಥ ಪ್ರಸಾದವಲ್ಲ, ನಾಲ್ಕಾರು ಬಗೆಯ ಪದಾರ್ಥಗಳು, ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಭಕ್ತರಿಗೆ ಉಣಬಡಿಸಲಾಗುತ್ತಿತ್ತು. ಅಸಲಿಗೆ ಜಗನ್ನಾಥ ದೇವಾಲಯದಲ್ಲಿ ಎಲ್ಲ ಸೇವೆಗಳಿಗಿಂತಲೂ ಪ್ರಸಾದ ವಿತರಣೆ ಮತ್ತು ಸ್ವೀಕಾರಕ್ಕೆ ಹೆಚ್ಚಿನ ಮಹತ್ವ.

ದೇವರ ದರ್ಶನಕ್ಕಿಂತಲೂ ಪ್ರಸಾದ ಸೇವನೆ ಶ್ರೇಷ್ಠ ಎನ್ನುವ ಮಾತೂ ಇದೆ. ಜಗನ್ನಾಥನ ಪ್ರಸಾದಕ್ಕೆ ಅಷ್ಟೊಂದು ಮಹತ್ವವಿದೆ. ಜಾತಿ, ಧರ್ಮ, ಕುಲ, ಗೋತ್ರ, ವರ್ಣಗಳ ಭೇದವಿಲ್ಲದೆ ಎಲ್ಲರಿಗೂ ಜಗನ್ನಾಥ ಪ್ರಸಾದ ವಿನಿಯೋಗವಾಗುತ್ತದೆ. ಇಷ್ಟಾದರೂ ಒಂದೇ ಸಲಕ್ಕೆ, ಒಂದು ಲಕ್ಷರೂಪಾಯಿ ಖರ್ಚು ಮಾಡಿ ಪ್ರಸಾದ ತಯಾರಿಸಿ, ಹಂಚುವುದು ಸಾಧ್ಯವಿಲ್ಲದ ಮಾತು ! ದೇವಾಲಯದ ಅರ್ಚಕರು, ಅಡುಗೆ ಭಟ್ಟರು ಎಷ್ಟೇ ತಲೆ ಕೆಡಿಸಿಕೊಂಡರೂ ಈ ಲಕ್ಷದ ಸಮಸ್ಯೆ ಪರಿಹರಿಸುವುದು ಹೇಗೆಂದು ತಿಳಿಯಲಿಲ್ಲ.

ಕೊನೆಗೆ ಅವರೆಲ್ಲಾ ಸೇರಿ ಒಂದು ನಿರ್ಧಾರಕ್ಕೆ ಬಂದರು. ಈ ಸಮಸ್ಯೆಯನ್ನು ಜಗನ್ನಾಥನ ಮುಂದೆ ಇಡೋಣ. ಎಲ್ಲಾ ಅವನಿಚ್ಛೆಯಂತೆಯೇ ನಿರ್ಧಾರವಾಗಲಿ. ಹಾಗೆಂದು ನೇರವಾಗಿ ಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಜಗನ್ನಾಥನೇನೂ ನಮ್ಮ ಹಾಗೆ ಹುಲು ಮಾನವನಲ್ಲ. ಆತ ದೇವೋತ್ತಮ. ಎಲ್ಲರೂ ಒಂದಾಗಿ ಅವನೆದುರು ಅಹವಾಲು ಮಂಡಿಸೋಣ. ಸಾಮೂಹಿಕವಾಗಿ ಪ್ರಾರ್ಥಿಸೋಣ. ಆತನ ಆದೇಶದಂತೆಯೇ ನಡೆಯಲಿ. ಅವನ ಮಾತನ್ನು ತೆಗೆದು ಹಾಕುವ ಸಾಮರ್ಥ್ಯ ಯಾರಿಗೂ ಇಲ್ಲ ಎಂದು ತೀರ್ಮಾನಿಸಿದರು.

ಎಲ್ಲರೂ ಜಗನ್ನಾಥನೆದರು ಸೇರಿದರು. ಸಾಮೂಹಿಕವಾಗಿ ಶುಭ್ರ ಮನಸ್ಸಿನಿಂದ ಪ್ರಾರ್ಥಿಸಿದರು. ಎಲ್ಲರ ಪರವಾಗಿ ದೇವಾಲಯದ ಮುಖ್ಯ ಅರ್ಚಕ ಪಾಂಡಾ ಎಂಬುವರು ಅಹವಾಲು ಮಂಡಿಸಿದರು. ‘ಹೇ ಭಗವಾನ್! ನಿನಗೆ ಎಂಥ ಪ್ರಸಾದ ಬೇಕು, ನೀನೇ ಹೇಳು’!

ಇತ್ತ ಜಗನ್ನಾಥನಿಗೇ ಸವಾಲು ಹಾಕಿದ ಗರ್ವಿಷ್ಠ  ಧನಿಕನಿಗೆ ಹೈದರಾಬಾದಿನಲ್ಲಿ ಸಾಕಷ್ಟು ವ್ಯವಹಾರಗಳು ಕಾಯುತ್ತಿದ್ದವು. ಯಾವುದೇ ಕಾರಣಕ್ಕೂ ಆತ ಪುರಿಯಲ್ಲಿ ಹೆಚ್ಚು ದಿನ ನಿಲ್ಲುವಂತಿರಲಿಲ್ಲ.

ಹೀಗಾಗಿ ಆತ ಮುಖ್ಯ ಅರ್ಚಕರನ್ನು ಕರೆದು, ‘ನನ್ನ ಸವಾಲಿಗೆ ನಿಮ್ಮ ಉತ್ತರವೇನು? ಒಂದು ಲಕ್ಷರೂಪಾಯಿ ಬೇಡವೆ ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ. ಅರ್ಚಕರು ಶಾಂತ ರೀತಿಯಿಂದ ಉತ್ತರಿಸಿದರು. ‘ಸವಾಲನ್ನು ಜಗನ್ನಾಥನ ಮುಂದಿಟ್ಟಿದ್ದೇವೆ. ಆತನ ಉತ್ತರದ ನಿರೀಕ್ಷೆಯಲ್ಲಿದ್ದೇವೆ’ ಎಂದು ಅದುವರೆಗಿನ ಬೆಳವಣಿಗೆಗಳನ್ನು ವಿವರಿಸಿದರು.

ಆ ಶ್ರೀಮಂತನಿಗೂ ಅದೇ ಬೇಕಾಗಿತ್ತು. ಅರ್ಚಕರು, ಅಡುಗೆ ಭಟ್ಟರ ಬದಲು ನೇರವಾಗಿ ಜಗನ್ನಾಥನಿಗೇ ಸವಾಲೊಡ್ಡಲು ಆತ ಬಯಸಿದ್ದ, ಆತ ಬಯಸಿದಂತೆಯೇ ಆಗಿತ್ತು. ಭಕ್ತರೆಲ್ಲಾ ಸೇರಿ ಒಂದು ಲಕ್ಷ ರೂಪಾಯಿಯ ಸವಾಲಿಗೆ ಉತ್ತರಿಸುವ ಜವಾಬ್ದಾರಿಯನ್ನು ಜಗನ್ನಾಥನ ಹೆಗಲಿಗೇ ಹೊರಿಸಿದ್ದರು. ಹೀಗಾಗಿ ವ್ಯವಹಾರದಲ್ಲಿ ಒಂದಿಷ್ಟು ನಷ್ಟವಾದರೂ ಪರವಾಗಿಲ್ಲ. ಒಂದೆರಡು ದಿನ ಪುರಿಯಲ್ಲೇ ಉಳಿದು, ಜಗನ್ನಾಥನ ಉತ್ತರ ಕೇಳಿಕೊಂಡೇ ಹೋಗುತ್ತೇನೆ ಎಂದು ಧನಂಜಯ ನಿರ್ಧರಿಸಿದ.

ಆದರೆ ಮಹಾಮಹಿಮನಾದ ಜಗನ್ನಾಥನು ಈ ಘಟನೆ ಮೂಲಕ ತನಗೊಂದು ಸರಿಯಾದ ಪಾಠ ಕಲಿಸುತ್ತಿದ್ದಾನೆಂದು ಧನೋನ್ಮತ್ತ ಧನಂಜಯನ ಮಂಕು ಬುದ್ಧಿಗೆ ಹೊಳೆಯಲೇ ಇಲ್ಲ! ಇಡೀ ಜಗತ್ತಿನ ಮಾಲೀಕನಾದ ಜಗನ್ನಾಥನಿಗೆ ಒಂದು ಲಕ್ಷ ರೂಪಾಯಿ ಯಾವ ಲೆಕ್ಕ?!

ಧನಂಜಯನ ಮದ ಇಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ಅಂದಿನ ರಾತ್ರಿ ಎಂದಿನಂತಿರಲಿಲ್ಲ. ಆ ಬೆಳದಿಂಗಳಿಗೆ ಎಂದಿಗಿಂತಲೂ ಹೆಚ್ಚಿನ ಕಳೆ ಇತ್ತು. ಈ ರಾತ್ರಿ ಮಹತ್ತರವಾದದ್ದೇನೋ ನಡೆಯಲಿದೆ ಎಂಬಂತೆ ರಾತ್ರಿ ಬೀಗುತ್ತಿತ್ತು. ಹಾಗೆಯೇ ಆಯಿತು ! ತನ್ನ ಭಕ್ತರ ಮೊರೆ ಜಗನ್ನಾಥನಿಗೆ ಕೇಳಿಸಿತು. ಪ್ರಧಾನ ಅರ್ಚಕ ಪಾಂಡ ಅವರ ಕನಸಿನಲ್ಲಿ ಅಂದು ರಾತ್ರಿ ಶ್ರೀ ಜಗನ್ನಾಥ ಪ್ರತ್ಯಕ್ಷವಾದ.

ಆತ ಸರ್ವಜ್ಞನಲ್ಲವೇ? ಸಮಸ್ಯೆಯನ್ನು ಮತ್ತೊಮ್ಮೆ ನಿವೇದಿಸುವ ಅವಶ್ಯಕತೆ ಬರಲಿಲ್ಲ. ಪಾಂಡ ಅವರನ್ನು ಕುರಿತು ಜಗನ್ನಾಥನೇ ನಗುಮೊಗದಿಂದ ನುಡಿದ, ನನಗೆ ತಾಂಬೂಲ (ಎಲೆ-ಅಡಿಕೆ ಅಥವಾ ಪಾನ್) ಅರ್ಪಿಸುವಂತೆ ಆ ಶ್ರೀಮಂತನಿಗೆ ಹೇಳಿ. ಆದರೆ ಒಂದು ಮಾತು. ಅದಕ್ಕೆ ಎಲೆ, ಅಡಿಕೆ ಜತೆ ಸುಣ್ಣದ ಬದಲು ಮುತ್ತಿನ ಹುಡಿಯನ್ನು ಬೆರೆಸಬೇಕು. ಅದೂ ಮಾಮೂಲಿ ಮುತ್ತಿನ ಹುಡಿಯಲ್ಲ,  ಆನೆಯ ಕುಂಭಸ್ಥಳದೊಳಗಿರುವ ಅಮೂಲ್ಯ ಮುತ್ತನ್ನು ತೆಗೆದು ಹುಡಿ ಮಾಡಿ ಎಲೆ ಅಡಿಕೆ ಜತೆ ಬೆರೆಸಬೇಕು. ನನಗೆ ಬೇರೇನೂ ಬೇಡ !

ಅರೆ, ಜಗನ್ನಾಥನ ಬೇಡಿಕೆ ಕೇವಲ ಎಲೆ-ಅಡಿಕೆಯೇ! ಬರಿ ಎಲೆ-ಅಡಿಕೆಯಲ್ಲ ಅದರೊಳಗೆ ಸುಣ್ಣದ ಬದಲು ಮುತ್ತಿನ ಹುಡಿ ಬೆರೆಸಬೇಕಂತೆ. ಧನಿಕ ದನಂಜಯನಿಗೆ ಮುತ್ತು ಯಾವ ಲೆಕ್ಕ? ಒಂದು ಲಕ್ಷ ರೂಪಾಯಿ ಇಲ್ಲವೇ? ಎಷ್ಟು ಮುತ್ತು ಬೇಕಾದರೂ ಖರೀದಿಸಬಹುದು. ಆದರೆ ಜಗನ್ನಾಥ ಕೇಳಿದ್ದು ಮಾಮೂಲಿ ಮುತ್ತಲ್ಲ, ಆನೆಯ ಕುಂಭ ಸ್ಥಳದೊಳಗೆ ಹುದುಗಿರುವ ಅಮೂಲ್ಯ ಮುತ್ತು.

ನೆನಪಿರಲಿ, ಎಲ್ಲಾ ಆನೆಯ ಕುಂಭಸ್ಥಳದೊಳಗೂ ಈ ಮುತ್ತು ಇರುವುದಿಲ್ಲ. ಎಲ್ಲೋ ಲಕ್ಷಕ್ಕೊಂದು ಆನೆಯ ನೆತ್ತಿ ಸೀಳಿದರೆ ಮುತ್ತು ಸಿಗಬಹುದು ! ಹಾಗಾದರೆ ಒಂದು ಸಣ್ಣ ಮುತ್ತಿಗಾಗಿ ಈಗ ಆ ಧನಿಕ ಲಕ್ಷಾಂತರ ಆನೆಗಳ ನೆತ್ತಿ ಬಗೆಯಬೇಕು ! ಒಂದು ಆನೆಯ ಬೆಲೆಯೇ ಏನಿಲ್ಲವೆಂದರೂ ಒಂದು ಲಕ್ಷ ರೂಪಾಯಿ. ಇನ್ನು ಒಂದು ಮುತ್ತಿಗಾಗಿ ಎಷ್ಟು ಆನೆಗಳನ್ನು ಸಾಯಿಸಬೇಕೋ, ಏನೋ! ಈಗ ಧನಂಜಯ ದಂಗಾದ !! ಧನಮದದಿಂದ ಜಗನ್ನಾಥನಿಗೇ ಸವಾಲೆಸೆದ ಶ್ರೀಮಂತ ಈಗ ಎಲ್ಲರೆದುರು ತಲೆ ತಗ್ಗಿಸಬೇಕಾದ ಸ್ಥಿತಿ ತಲುಪಿದ್ದ.

ನನ್ನ ಬಳಿ ಎಷ್ಟೇ ಸಂಪತ್ತಿದ್ದರೂ ಜಗನ್ನಾಥನಿಗೆ ಯಕಶ್ಚಿತ್‌ ಒಂದು ತಾಂಬೂಲ ನೀಡಲು ನನ್ನಿಂದಾಗುತ್ತಿಲ್ಲವಲ್ಲ ಎಂಬ ಅವಮಾನ ಅವನನ್ನು ಆವರಿಸಿತು. ಒಂದು ಕ್ಷಣ ತಲೆ ಗಿರೆಂದಿತು. ನೆತ್ತಿಗೇರಿದ್ದ ಗರ್ವ ಜರ್ರನೆ ಇಳಿಯಿತು. ಜಗನ್ನಾಥನ ಸಾಮರ್ಥ್ಯ ಏನೆಂಬುದು ಅವನಿಗೆ ಅರಿವಾಗಿತ್ತು. ಅವನಿಗರಿವಿಲ್ಲದಂತೆಯೇ ಕಣ್ಣೀರು ಹನಿಹನಿಯಾಗಿ ಪಟಪಟನೆ ಉದುರಿತು.

ಧನಂಜಯ್‌ ಏನೋ ನೆನಪಿಸಿಕೊಂಡವನಂತೆ ಯಜಮಾನಿಕೆ ಸಂಕೇತವಾದ ತನ್ನ ಪೇಟವನ್ನು ಕಿತ್ತೆಸೆದ. ಕಾಲಲ್ಲಿದ್ದ ಚಪ್ಪಲಿಗಳನ್ನೂ ಕಳಚಿ ಬಿಸಾಡಿದ. ಕೈಯಲ್ಲಿ ಒಂದು ಲಕ್ಷ ರೂಪಾಯಿ ಹಿಡಿದುಕೊಂಡು, ಅಳುತ್ತಲೇ ಜಗನ್ನಾಥನ ಸನ್ನಿಧಿಗೆ ಓಡಿದ. ಸಾವಿರಾರು ಜನರು ಅವನನ್ನು ಹಿಂಬಾಲಿಸಿದರು.

ಜಗನ್ನಾಥನ ಈ ಮಹೋನ್ನತ ಲೀಲೆ ಕಂಡು ಎಲ್ಲರೂ ಮೂಕ ವಿಸ್ಮಿತರಾದರು. ಹಣದ ಸೊಕ್ಕಿನಿಂದ ಮೆರೆಯುತ್ತಿದ್ದ ಶ್ರೀಮಂತನಿಗೆ ಪಾಠ ಕಲಿಸಿದ ಜಗನ್ನಾಥನನ್ನು ಮನಸಾರೆ ಕೊಂಡಾಡಿದರು. ಇತ್ತ ಧನಂಜಯನ ಗರ್ವ ಬುಡಕಡಿದ ಬಾಳೆ ಮರದಂತೆ ನೆಲಕ್ಕುರುಳಿತ್ತು. ದೇವಾಲಯದಲ್ಲಿ ಜಗನ್ನಾಥ ವಿಗ್ರಹದೆದುರು ಆತನೂ ನೆಲದ ಮೇಲೆ ಮಂಡಿಯೂರಿ ಕುಳಿತಿದ್ದ. ದೇವೋತ್ತಮನೆದುರು ಶರಣಾಗತನಾಗಿ ದೈನ್ಯತೆಯಿಂದ ಬಿಕ್ಕಿಬಿಕ್ಕಿ ಅಳುತ್ತಿದ್ದ.

ಆತನ ಮುಖದಲ್ಲಿ ಸೋಲು ಹೆಪ್ಪುಗಟ್ಟಿದ್ದರೆ, ಕಣ್ಣುಗಳಲ್ಲಿ ಭಕ್ತಿ ಧಾರಾಕಾರವಾಗಿ ಉಕ್ಕಿ ಹರಿಯುತ್ತಿತ್ತು ! ‘ದೇವೋತ್ತಮನೇ, ನಾನು ಮಾನವ ಸಹಜ ದುರಹಂಕಾರದಿಂದ ನಿನಗೇ ಸವಾಲು ಹಾಕಿದೆ. ಈಗ ನೋಡು, ನಿನಗೆ ಒಂದು ತಾಂಬೂಲ ನೀಡುವುದಕ್ಕೂ ನನ್ನಿಂದಾಗಲಿಲ್ಲ. ಜಗನ್ನಾಥ ನನ್ನನ್ನು ಕ್ಷಮಿಸು.

ನಿನ್ನೆದುರು ನಾನು ತೃಣ ಸಮಾನ. ನನಗೆ ಚೆನ್ನಾಗಿ ಪಾಠ ಕಲಿಸಿರುವೆ. ಇಲ್ಲಿ ನನ್ನದೆಂಬುದು ಯಾವುದೂ ಇಲ್ಲ. ನನ್ನ ಬಳಿ ಇರುವುದೆಲ್ಲವೂ ನಿನ್ನದೇ. ನೀನೇ ಸರ್ವಸ್ವ. ಸರ್ವೋತ್ತಮ. ನಿನಗೇನು ಬೇಕೋ ತೆಗೆದುಕೋ, ಮೊದಲು ನನ್ನ ಹೃದಯದೊಳಗಿರುವ ಸಿಹಿಯಾದ ಕೆಂಪು ತಾಂಬೂಲವನ್ನು ಸ್ವೀಕರಿಸು…’ ಎನ್ನುತ್ತಾ ಧನಿಕ ಧನಂಜಯ, ಜಗನ್ನಾಥನಿಗೆ ಶರಣಾದ ಜಗತ್ತು ತನ್ನೊಡೆಯನ ಮತ್ತೊಂದು ಮಹೋನ್ನತ ಲೀಲೆಗೆ ಸಾಕ್ಷಿಯಾಗಿತ್ತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi