ಭಕ್ತಿವೇದಾಂತ ದರ್ಶನ ಓದುಗರಿಗಾಗಿ ವಿಭಿನ್ನ ಕಡುಬುಗಳನ್ನು ತಯಾರಿಸುವ ವಿಧಾನವನ್ನು ಶ್ರೀ ಎನ್.ಮಂಜುನಾಥ್ ಅವರು ಸಂಗ್ರಹಿಸಿಕೊಟ್ಟಿದ್ದಾರೆ. ನೀವು ತಯಾರಿಸಿ ಭಗವಂತನಿಗೆ ಅರ್ಪಿಸಿ ಅವುಗಳ ರುಚಿಯನ್ನು ಸವಿಯಿರಿ.
ಕಡುಬು
ಹೂರಣದ ಕಡುಬು

ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – ½ ಕಿಲೋ
ಕಡಲೆ ಬೇಳೆ – ½ ಕಿಲೋ
ಬೆಲ್ಲ – ½ ಕಿಲೋ
ಏಲಕ್ಕಿ – ಸ್ವಲ್ಪ
ಮಾಡುವ ವಿಧಾನ: ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ನಾದಿ ಒಂದೆಡೆ ತೆಗೆದಿಡಿ (1/2 ಗಂಟೆ ಮುಂಚಿತವಾಗಿ ನಾದಿಟ್ಟರೆ ಒಳ್ಳೆಯದು). ಇನ್ನೊಂದೆಡೆ ಕಡಲೆ ಬೇಳೆಯನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಿ. ಬೆಂದ ಆನಂತರ ನೀರನ್ನು ಬಸಿಯಿರಿ. ಆನಂತರ ಅದಕ್ಕೆ ಬೆಲ್ಲವನ್ನು ಹಾಕಿ 5 ನಿಮಿಷಗಳವರೆಗೂ ಸಣ್ಣ ಉರಿಯಲ್ಲಿಟ್ಟು ಕೆಳಗಿಳಿಸಿ.
ಬೇಳೆ-ಬೆಲ್ಲದ ಈ ಮಿಶ್ರಣವನ್ನು ರುಬ್ಬಿ ಹೂರಣ ಮಾಡಿಕೊಳ್ಳಬೇಕು. ನಾದಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು, ಚಿಕ್ಕ ಚಿಕ್ಕ ಗಾತ್ರದಲ್ಲಿ ಲಟ್ಟಿಸಿ ಅದರೊಳಗೆ ಈ ಹೂರಣವನ್ನು ತುಂಬಿ ಅರ್ಧ ಚಂದ್ರಾಕೃತಿ ಬರುವಂತೆ ಮುಚ್ಚಿ. ಆನಂತರ ಕಾಯ್ದ ಎಣ್ಣೆಯಲ್ಲಿ ಒಂದೊಂದೆ ತೇಲಿ ಬಿಡಿ. ಅವು ಕೆಂಪು ಬಣ್ಣಕ್ಕೆ ತಿರುಗಿದ ಆನಂತರ ಕರಿದು ತೆಗೆಯಿರಿ. ಆರಿದ ಕರಡಿಗೆಯಲ್ಲಿ ಶೇಖರಿಸಿ. ಅದಕ್ಕೂ ಮೊದಲು ಕೃಷ್ಣನಿಗರ್ಪಿಸಿ ಸೇವಿಸಿ.
ಮೆಣಸಿನ ಕಡುಬು

ಬೇಕಾಗುವ ಸಾಮಗ್ರಿಗಳು :
ಮೈದಾ ಹಿಟ್ಟು – 1/2 ಕಿಲೋ,
ಬೆಲ್ಲ – 1/2 ಕಿಲೋ,
ಮೆಣಸಿನ ಕಾಳು – 50 ಗ್ರಾಂ,
ಒಣ ಶುಂಠಿ – 50 ಗ್ರಾಂ
ಮಾಡುವ ವಿಧಾನ : ಮೊದಲು ಒಣಶುಂಠಿ, ಕರಿಮೆಣಸು, ಬೆಲ್ಲವನ್ನು ರುಬ್ಬಿಟ್ಟುಕೊಳ್ಳಿ. ಇನ್ನೊಂದೆಡೆ ಮೈದಾ ಹಿಟ್ಟನ್ನು ನಾದಿಕೊಂಡು ಚಿಕ್ಕ ಚಿಕ್ಕ ಗಾತ್ರದಲ್ಲಿ ಲಟ್ಟಿಸಿ. ಅದರೊಳಗೆ ಮೊದಲೇ ರುಬ್ಬಿಟ್ಟಿದ್ದ ಹೂರಣವನ್ನು ತುಂಬಿ ಮುಚ್ಚಿಕೊಳ್ಳಿ. ಸ್ಟವ್ ಮೇಲೆ ಒಂದು ಪಾತ್ರೆಯಲ್ಲಿ ನೀರನ್ನು ಕಾಯಲು ಬಿಟ್ಟು, ಅದರೊಳಗೆ ಒಂದೊಂದೆ ಬಿಡಿ. ಚೆನ್ನಾಗಿ ಬೆಂದನಂತರ ಹೊರತೆಗೆದು ಕೇಶವನಿಗೆ ಅರ್ಪಿಸಿ ಸೇವಿಸಿ. (ಇದು ಶೀತ ಉಪಶಮನಕ್ಕೆ ಉತ್ತಮ ಔಷಧಿಯೂ ಹೌದು)
ಕೊಬ್ಬರಿ ಕಡುಬು

ಬೇಕಾಗುವ ಸಾಮಗ್ರಿಗಳು :
ಮೈದಾ – 1/2 ಕಿಲೋ,
ತುರಿದ ಒಣ ಕೊಬ್ಬರಿ – 1/4 ಕಿಲೋ,
ಗಸಗಸೆ – 150 ಗ್ರಾಂ,
ಸಕ್ಕರೆ ಪುಡಿ, ಏಲಕ್ಕಿ – ಸ್ವಲ್ಪ
ಮಾಡುವ ವಿಧಾನ : ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ನಾದಿಕೊಳ್ಳಿ. ತುರಿದ ಕೊಬ್ಬರಿಯನ್ನು, ಸಕ್ಕರೆ ಮತ್ತು ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ, ಅನಂತರ ಚಿಕ್ಕ ಚಿಕ್ಕ ಗಾತ್ರದಲ್ಲಿ ಲಟ್ಟಿಸಿಕೊ೦ಡು, ಅದರೊಳಗೆ ಮೊದಲೇ ಸಿದ್ಧಪಡಿಸಿಕೊಂಡಿದ್ದ ಮಿಶ್ರಣವನ್ನು ಸೇರಿಸಿ. ಹೂರಣ ತುಂಬಿ ಅನಂತರ ಅರ್ಧಚಂದ್ರಾಕೃತಿಗೆ ಬರುವಂತೆ ಮಾಡಿ ಆನಂತರ ಕಾಯ್ದ ಎಣ್ಣೆಯಲ್ಲಿ ಬಿಡಿ.
ಶೇಂಗಾ (ಕಡಲೆ ಬೀಜ) ಕಡುಬು

ಬೇಕಾಗುವ ಸಾಮಗ್ರಿಗಳು :
ಶೇಂಗಾ (ಕಡಲೆ ಬೀಜ) – 1/2 ಕಿಲೋ,
ಬಿಳಿ ಎಳ್ಳು – 150 ಗ್ರಾಂ.,
ಸಕ್ಕರೆ – 1/4 ಕಿಲೋ,
ಏಲಕ್ಕಿ – 5.
ಮಾಡುವ ವಿಧಾನ : ಮೊದಲು ಕಡಲೆ ಬೀಜವನ್ನು ತವೆ ಮೇಲಿಟ್ಟು ಹುರಿದು ಅದರ ಸಿಪ್ಪೆಯನ್ನು ತೆಗೆಯಿರಿ. ಅನಂತರ ಕಡಲೆ ಬೀಜ, ಬಿಳಿ ಎಳ್ಳು ಮತ್ತು ಸಕ್ಕರೆ ಮೂರನ್ನು ಸೇರಿಸಿ ಪುಡಿ ಮಾಡಿಕೊಳ್ಳಿ. ಅನಂತರ ಒಣ ಮಿತ್ರಣವನ್ನು ಚಿಕ್ಕ ಚಿಕ್ಕದಾಗಿ ಲಟ್ಟಿಸಿದ ಮೈದಾ ಹಿಟ್ಟಿನಲ್ಲಿ ತುಂಬಿ, ಕಾಯ್ದ ಎಣ್ಣೆಯಲ್ಲಿ ಒಂದೊಂದೆ ತೇಲಿ ಬಿಡಿ.
ಬಿಸಿಬಿಸಿ ಗಸಗಸೆ ಕಡುಬು

ಬೇಕಾಗುವ ಪದಾರ್ಥ :
ತೊಳೆದು ಒಣಗಿಸಿದ ಅಕ್ಕಿಯಿಂದ ತಯಾರಿಸಿದ ಹಿಟ್ಟು – ಒಂದು ಲೋಟ,
ಖಾದ್ಯ ತೈಲ – 2 ಚಮಚ,
ಮೈದಾ – 2-3 ಚಮಚ,
ಗಸಗಸೆ – ಅರ್ಧ ಲೋಟ,
ತುರಿದ ಕೊಬ್ಬರಿ – ಒಂದು ಬಟ್ಟಲು,
ಪುಡಿಮಾಡಿದ ಬೆಲ್ಲ – ಒಂದು ಬಟ್ಟಲು,
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಗಸಗಸೆ ಕಡುಬು ಮಾಡಲು ಕೂಡ ಮಿಶ್ರಣ ಹಾಗೂ ಹಿಟ್ಟನ್ನು ತಯಾರಿಸಿಕೊಳ್ಳಬೇಕು.
ಮಿಶ್ರಣ ಮಾಡುವ ವಿಧಾನ : ಮೊದಲು ಗಸಗಸೆಯನ್ನು ಹದವಾಗಿ ಹುರಿದು, ಕೊಬ್ಬರಿ ತುರಿಯ ಜೊತೆ ಮಿಶ್ರಣ ಮಾಡಿ ನುಣ್ಣಗೆ ಪುಡಿ ಮಾಡಿ. ತೆಳ್ಳಗೆ ಹಚ್ಚಿದ ಪುಡಿ ಬೆಲ್ಲವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಕಲಸಿ ಮಿಶ್ರಣ ತಯಾರಿಸಿ.
ಹಿಟ್ಟು ಮಾಡುವ ವಿಧಾನ : ಒಂದು ದೊಡ್ಡ ಬಟ್ಟಲು ನೀರಿಗೆ ಅರ್ಧ ಚಮಚದಷ್ಟು ಖಾದ್ಯ ತೈಲ ಹಾಗೂ ಹದವಾಗಿ ಉಪ್ಪು ಹಾಕಿ ಒಲೆಯ ಮೇಲೆ ಇಡಿ. ಚೆನ್ನಾಗಿ ಕುದಿದ ಅನಂತರ ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟು ಹಾಕಿ 15 ನಿಮಿಷದ ಆನಂತರ ಕೆಳಗಿಳಿಸಿ. ಹಿಟ್ಟನ್ನು ಚೆನ್ನಾಗಿ ಕಲೆಸಿ, ಹಿಟ್ಟು ಆರಿದ ತರುವಾಯ ಚೆನ್ನಾಗಿ ನಾದಿಕೊಂಡ ಬಳಿಕ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ.
ಅನಂತರ ಹಪ್ಪಳದ ಹಾಳೆಗಳಂತೆ ಚಪಾತಿಯ ಮಣೆ ಮೇಲೆ ಲಟ್ಟಿಸಿ. ಕಡುಬಿನ ಅಚ್ಚಿಗೆ ಎರಡೂ ಬದಿ ಎಣ್ಣೆ ಅಥವಾ ತುಪ್ಪ ಸವರಿ ಹಿಟ್ಟಿನ ಹಾಳೆಯನ್ನು ಹಾಕಿ, ಅದರ ಮಧ್ಯೆ ಎರಡು ಚಮಚದಷ್ಟು ಗಸಗಸೆ ಮಿಶ್ರಣ ಇಟ್ಟು ಮುಚ್ಚಿ ಅಂಚಿನಲ್ಲಿ ಹೆಚ್ಚುವರಿಯಾಗಿರುವ ಹಿಟ್ಟನ್ನು ತೆಗೆದು ಎಣ್ಣೆ ಸವರಿದ ಬಾಳೆಯ ಎಲೆಯ ಮೇಲೆ ಇಲ್ಲವೆ ಎಣ್ಣೆ ಹಚ್ಚಿದ ತಟ್ಟೆಯ ಮೇಲೆ ಹಸಿ ಕಡುಬುಗಳನ್ನು ಒಂದೊಂದಾಗಿ ಜೋಡಿಸಿಡಿ. ಇದನ್ನು ಕುಕ್ಕರ್‌ನಲ್ಲಿ ಅಥವಾ ಇಡ್ಲಿಹಬೆ ಪಾತ್ರೆಯಲ್ಲಿ ಬೇಯಿಸಿದರೆ ಒಳ್ಳೆಯದು.






Leave a Reply