ಕಾಲಿಯ ಮರ್ದನ

ಒಂದು ದಿವಸ ಕೃಷ್ಣ, ಬಲರಾಮನ ಜೊತೆಯಿಲ್ಲದೆ, ತನ್ನ ಸ್ನೇಹಿತರ ಹತ್ತಿರ ಹೋಗಿ, ಅವರೊಂದಿಗೆ ದನಗಳನ್ನು ಮೇಯಿಸಲು ಯಮುನಾನದಿ ದಡಕ್ಕೆ ಹೋದ. ಹಸುಗಳು ಮತ್ತು ಗೋಪಾಲಕ ಹುಡುಗರಿಗೆ ಬಾಯಾರಿಕೆಯಾಗಿ, ಅವರು ಯಮುನಾ ನದಿಯ ನೀರನ್ನು ಕುಡಿದರು.

ಆದರೆ, ಅದು ವಿಷವೊಂದರಿಂದ ಕದಡಿಹೋಗಿತ್ತು. ಹೀಗಾಗಿ ಅವರೆಲ್ಲರೂ ನದಿದಡದ ಮೇಲೆ ಪ್ರಜ್ಞೆತಪ್ಪಿಬಿದ್ದರು. ಕೃಷ್ಣ ಅವರನ್ನೆಲ್ಲ ತನ್ನ ಕೃಪಾದೃಷ್ಟಿಯಿಂದ ನೋಡಿ ಅವರನ್ನು ಮತ್ತೆ ಜೀವಂತವಾಗಿಸಿದ. ಅವರೆಲ್ಲರೂ ತಮ್ಮ ಪ್ರಜ್ಞೆ ಪಡೆದುಕೊಂಡಮೇಲೆ, ಕೃಷ್ಣನ ಅಪಾರ ಕರುಣೆಯನ್ನು ಮೆಚ್ಚಿಕೊಂಡು ಹೊಗಳಿದರು.

ಅಲ್ಲಿದ್ದ ಕಾಲಿಯ ಕಾಳಸರ್ಪದ ವಿಷದಿಂದ ಕಲುಷಿತಗೊಂಡಿದ್ದ ಯಮುನಾನದಿಯ ನೀರನ್ನು ಮತ್ತೆ ಪರಿಶುದ್ಧಗೊಳಿಸಲು, ಕೃಷ್ಣ ಅಲ್ಲಿದ್ದ ಕದಂಬ ವೃಕ್ಷವನ್ನು ಹತ್ತಿ ನೀರಿನೊಳಗೆ ಧುಮುಕಿದ. ತನ್ನ ಸ್ಥಳದೊಳಗೆ ಕೃಷ್ಣ ಪ್ರವೇಶ ಮಾಡಿದ್ದು ಕಾಲಿಯ ಕಾಳಸರ್ಪಕ್ಕೆ ಇಷ್ಟವಾಗಲಿಲ್ಲ.

ಆಗ ಅದು ಕೂಡಲೇ ಭುಸುಗುಟ್ಟುತ್ತ ಮೇಲೆದ್ದು ಕೃಷ್ಣನ ಎದೆಯನ್ನು ಕಚ್ಚಿತು. ಕೃಷ್ಣನ ಸ್ನೇಹಿತರು ಇದನ್ನು ನೋಡಿದಾಗ, ಭೂಮಿಯಮೇಲೆ ಪ್ರಜ್ಞೆತಪ್ಪಿ ಬಿದ್ದರು. ಅದೇ ಸಮಯದಲ್ಲಿ ಆ ವ್ರಜದೇಶದಲ್ಲಿ ಭೂಕಂಪ, ಮರಗಳು ಉರುಳುವುದು ಮತ್ತು ಮೃಗಪಕ್ಷಿಗಳ ಚೀರಾಟ ಮೊದಲಾದ ಅನೇಕ ಅಪಶಕುನಗಳಾದವು.

ವೃಂದಾವನವಾಸಿಗಳು ಅಂದುಕೊಂಡರು, “ಇವತ್ತು ಕೃಷ್ಣ, ಬಲರಾಮನ ಜೊತೆಯಿಲ್ಲದೆ ಕಾಡಿಗೆ ಹೊರಟುಹೋಗಿದ್ದಾನೆ. ಆದ್ದರಿಂದ ಕೃಷ್ಣನಿಗೆ ಏನು ಗತಿ ಒದಗಿ ಬಂದಿದೆಯೆಂದು ನಮಗೆ ಗೊತ್ತಿಲ್ಲ.” ಈ ರೀತಿಯಾಗಿ ಆಲೋಚಿಸಿ, ಅವರೆಲ್ಲರೂ ಕೃಷ್ಣನ ಹೆಜ್ಜೆಗುರುತುಗಳನ್ನೇ ಅನುಸರಿಸುತ್ತ ಯಮುನಾ ನದಿಯ ದಂಡೆಗೆ ಬಂದರು.

ಹತ್ತಿರದ ಸರೋವರವೊಂದರ ನೀರಿನಲ್ಲಿ ತಮ್ಮೆಲ್ಲರ ಪ್ರಾಣವೇ ಆಗಿರುವ ಶ್ರೀಕೃಷ್ಣನನ್ನು ಕಾಳಸರ್ಪವೊಂದು ಸುತ್ತಿಕೊಂಡಿರುವುದನ್ನು ನೋಡಿದರು. ಅಲ್ಲಿನ ವಾಸಿಗಳಿಗೆಲ್ಲರಿಗೂ ಮೂರು ಪ್ರಪಂಚಗಳೂ ಖಾಲಿಯಾಗಿ ಹೋಗಿರುವಂತನ್ನಿಸಿತು. ಮತ್ತು ಅವರೆಲ್ಲರೂ ನೀರಿನಲ್ಲಿ ಪ್ರವೇಶಿಸಲು ಸಿದ್ಧರಾದರು. ಆದರೆ, ಕೃಷ್ಣನ ಶಕ್ತಿಯನ್ನು ತಿಳಿದಿದ್ದ ಬಲರಾಮ ಅವರನ್ನೆಲ್ಲ ತಡೆದ.

ಆಗ ಶ್ರೀಕೃಷ್ಣ ತನ್ನ ಪ್ರೀತಿಯ ಸ್ನೇಹಿತರು ಮತ್ತು ಬಂಧುಗಳು ಎಷ್ಟು ಕೋಭೆಗೊಳಗಾಗಿದ್ದಾರೆ ಎನ್ನುವುದನ್ನು ನೋಡಿ, ತನ್ನ ದೇಹವನ್ನು ದೊಡ್ಡದಾಗಿ ಹಿಗ್ಗಿಸಿಕೊಂಡು, ಆ ಕಾಳಸರ್ಪ ತನ್ನ ಹಿಡಿತವನ್ನು ಸಡಲಿಸುವಂತೆ ಮಾಡಿ, ತಾನು ಬಿಡುಗಡೆಯಾಗುವಂತೆ ಮಾಡಿದ. ಆಮೇಲೆ, ಆ ಕಾಳಸರ್ಪದ ಹೆಡೆಯಮೇಲೆ ನಿಂತುಕೊಂಡು ನರ್ತನಮಾಡತೊಡಗಿದ.

ಹೀಗೆ ಹೆಡೆಯನ್ನು ತನ್ನ ಕಾಲಿನಿಂದ ತುಳಿಯುವುದರೊಂದಿಗೆ, ಅದ್ಭುತವಾದ ನರ್ತನದ ನೋಟದೊಂದಿಗೆ ಶ್ರೀಕೃಷ್ಣ ಆ ಕಾಲಿಯ ಸರ್ಪದ ಒಂದು ಸಾವಿರ ಹೆಡೆಗಳನ್ನು ತುಳಿದು ಅಲುಗಾಡಿಸಿಬಿಟ್ಟಿದ್ದ, ಕಾಲಿಯ ಸರ್ಪದ ದೇಹ ನಜ್ಜುಗುಜ್ಜಾಗಿ ಹೋಗಿತ್ತು. ತನ್ನ ಬಾಯಿಗಳಿಂದ ರಕ್ತವನ್ನು ಕಾರುತ್ತ, ಕಾಲಿಯ ಕೊನೆಗೆ, ಈ ಕೃಷ್ಣನೇ ಮೂಲ ಪರಮ ಪುರುಷ, ಶ್ರೀ ನಾರಾಯಣ, ಎಲ್ಲ ಚರಾಚರ ವಸ್ತುಗಳ ಪರಮಗುರು ಎಂದು ಅರ್ಥಮಾಡಿಕೊಂಡು, ಶ್ರೀಕೃಷ್ಣನ ಕೃಪಾಕಟಾಕ್ಷಕ್ಕೆ ತಲೆಬಾಗಿದ.

ಕಾಲಿಯ ಎಷ್ಟು ಆಯಾಸಗೊಂಡಿದ್ದಾನೆ ಎನ್ನುವುದನ್ನು ನೋಡಿದ ಅವನ ನಾಗಪತ್ನಿಯರು – ಅಂದರೆ, ಹೆಂಡತಿಯರು, ಶ್ರೀಕೃಷ್ಣನ ಪಾದಪದ್ಮಗಳಿಗೆ ಬಂದು ನಮಸ್ಕರಿಸಿದರು. ತಮ್ಮ ಗಂಡನ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಶ್ರೀಕೃಷ್ಣನಿಗೆ ನಾನಾ ರೀತಿಯ ಪ್ರಾರ್ಥನೆಗಳನ್ನು ಸಲ್ಲಿಸಿದರು: “ನೀನು ನಮ್ಮೆಲ್ಲರ ಈ ಕ್ರೂರಿ ಗಂಡನನ್ನು ಸರಿಯಾದ ದಾರಿಗೆ ತಂದದ್ದು ಒಳ್ಳೆಯದೇ ಆಯಿತು.

ಹಿಂದಿನ ಜನ್ಮದಲ್ಲಿ ಇವನು ಏನೇನು ಮಾಡಿ ಗಂಟುಕಟ್ಟಿಟ್ಟಿರಬೇಕು! ಇವತ್ತು ಇವನು, ಈ ಭೂಮಿಯ ತಾಯಿ, ಲಕ್ಷ್ಮಿದೇವಿಗೂ ತುಂಬ ದುರ್ಲಭವಾದಂತಹ, ದೇವೋತ್ತಮ ಪರಮ ಪುರುಷನ ಪಾದಧೂಳಿಯನ್ನು ತನ್ನ ತಲೆಯಮೇಲೆ ತೆಗೆದುಕೊಂಡು ಪಾವನನಾಗಿದ್ದಾನೆ.

ಅರಿವಿಲ್ಲದೆ ಇವನು ಮಾಡಿರುವ ತಪ್ಪನ್ನು ದಯವಿಟ್ಟು ಕರುಣೆಯಿಂದ ಕ್ಷಮಿಸು, ಮತ್ತು ಅವನನ್ನು ಬದುಕಲು ಬಿಡು.” ಈ ನಾಗಪತ್ನಿಯರ ಪ್ರಾರ್ಥನೆಗಳಿಂದ ತೃಪ್ತನಾಗಿ ಕೃಷ್ಣ ನಿಧಾನವಾಗಿ ತನ್ನ ಇಂದ್ರಿಯಗಳ ಮತ್ತು ದೇಹದ ಶಕ್ತಿಯನ್ನು ಮತ್ತೆ ಪಡೆಯುತ್ತಿದ್ದ, ಕಾಲಿಯನನ್ನು ಬಿಡುಗಡೆಮಾಡಿದ.

ಆಮೇಲೆ ಕಾಲಿಯ, ಕುಗ್ಗಿದ ದನಿಯಲ್ಲಿ ತನ್ನ ತಪ್ಪನ್ನು ತಾನು ಒಪ್ಪಿಕೊಂಡ, ಮತ್ತು ಅನೇಕವಾಗಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ, ಕೃಷ್ಣನ ಸಾರ್ವಭೌಮತ್ವವನ್ನು ತಾನು ಒಪ್ಪಿಕೊಳ್ಳುವುದಾಗಿ ಹೇಳಿದ. ಕೃಷ್ಣ ಅವನಿಗೆ ಈ ಯಮುನಾನದಿಯನ್ನು ತನ್ನ ಕುಟುಂಬ ಸಮೇತ ಬಿಟ್ಟು ಹೋಗಿ ರಮನಾಕ ದ್ವೀಪದಲ್ಲಿ ನೆಲೆಸುವಂತೆ ಹೇಳಿದ. ಆಮೇಲೆ, ಕೃಷ್ಣನ ಆಜ್ಞೆಗೆ ತಲೆಬಾಗುತ್ತ ಅವರೆಲ್ಲರೂ ಯಮುನಾ ನದಿಯಲ್ಲಿರುವ ಸರೋವರವನ್ನು ಬಿಟ್ಟು ಹೊರಟುಹೋದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi