– ಪತಿತಪಾವನ ದಾಸ
ಶ್ರೀಲ ಪ್ರಭುಪಾದರು ತಮ್ಮ ಕಾಲೇಜಿನ ಸಮಯದ ಒಂದು ಸ್ವಾರಸ್ಯಕರ ಘಟನೆ ನೆನಪಿಸಿಕೊಳ್ಳುತ್ತಾರೆ. ಅವರ ಮಿತ್ರರೊಬ್ಬರು ಅವರಿಗೆ ಹೇಳಿದ ವೃತ್ತಾಂತ ಇದು. ಆ ಮಿತ್ರರು ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾಗ ಒಂದು ಸರ್ಕಾರಿ ಕಟ್ಟಡದಲ್ಲಿ ಹಾವು ಕಡಿತದ ಕೆಲ ಪ್ರಕರಣಗಳು ನಡೆದಿದ್ದವು. ಆಗ ಹಾವಾಡಿಗನನ್ನು ಕರೆಸಲಾಯಿತು. ಆ ಹಾವಾಡಿಗ ಬಂದು ಆ ಹಾವನ್ನು ಹಿಡಿದು ತೆಗೆದುಕೊಂಡು ಹೋದ. ಇದನ್ನು ಕಂಡು, ಇದು ಹೇಗೆ ಸಾಧ್ಯ ಎಂದು ಕುತೂಹಲ ಕೆರಳಿದ ಈ ವೈದ್ಯಕೀಯ ವಿದ್ಯಾರ್ಥಿ ತನ್ನ ಕೆಲ ಮಿತ್ರರ ಜೊತೆ ಹಾವಾಡಿಗನ ಮನೆಗೆ ಹೋಗುತ್ತಾರೆ. ಆತನ ಕಸಬಿನ ಬಗ್ಗೆ ಕೇಳುತ್ತಾರೆ. ಆಗ ಹಾವಾಡಿಗ “ಹೌದು, ಮಂತ್ರಶಕ್ತಿಯಿಂದ ಹಾವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತೇವೆ” ಎಂದನು.

ಇದನ್ನು ನಂಬದ ವಿದ್ಯಾರ್ಥಿ, “ಓ ಇದೆಲ್ಲ ಬೂಟಾಟಿಕೆ, ಈ ಹಾವಿಗೆ ವಿಷವೇ ಇಲ್ಲದಿರಬಹುದು” ಎಂದಾಗ, “ಇಲ್ಲ ಹಲ್ಲೂ ಇದೆ, ವಿಷ ಕೂಡ ಇದೆ” ಎನ್ನುತ್ತ ಅಲ್ಲಿದ್ದ ಹಲವಾರು ಬುಟ್ಟಿಗಳಿಂದ ಹಾವುಗಳನ್ನು ಹೊರಬಿಟ್ಟನು. ಅವಾಕ್ಕಾದ ವಿದ್ಯಾರ್ಥಗಳ ತಂಡ ಹಾವುಗಳಿಂದ ರಕ್ಷಿಸಿಕೊಳ್ಳಲು ಇಲ್ಲಿಂದಲ್ಲಿಗೆ ಓಡಾಡಹತ್ತಿದರು. ಆಗ ಹಾವಾಡಿಗ, “ಹೆದರಬೇಡಿ, ನಾನು ಇಲ್ಲಿ ಇರುವ ತನಕ ಈ ಹಾವುಗಳು ನಿಮ್ಮನ್ನು ಏನೂ ಮಾಡುವುದಿಲ್ಲ” ಎಂದಾಗಲೇ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು. “ನಾವೂ ಕೂಡ ಹೀಗೆ ಮಂತ್ರ ಪ್ರಯೋಗ ಮಾಡಬಹುದೇ?” ಎಂದು ವಿದ್ಯಾರ್ಥಿ ಕೇಳಿದಾಗ, ಹಾವಾಡಿಗ, “ಇಲ್ಲ, ಈ ಮಂತ್ರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ, ಸಿದ್ಧಿ ಪಡೆಯಬೇಕು. ಆಗ ಮಾತ್ರ ಅದರ ಪ್ರಯೋಜನ” ಎಂದನು.
ಒಂದು ಭೌತಿಕ ಮಂತ್ರದ ಸಿದ್ಧಿಗಾಗಿ ಅಷ್ಟು ಅಭ್ಯಾಸದ ಅವಶ್ಯಕತೆ ಇದ್ದರೆ, ಪಾರಮಾರ್ಥಿಕ ಹರೇಕೃಷ್ಣ ಮಂತ್ರದ ಸಿದ್ಧಿಗಾಗಿ ನಾವು ಎಷ್ಟು ಜಾಗರೂಕರಾಗಬೇಡ ಎಂದು ಪ್ರಭುಪಾದರು ಕೇಳುತ್ತಾರೆ. ಹರೇಕೃಷ್ಣ ಮಂತ್ರದ ಜಪದಲ್ಲಿ ಹತ್ತು ಅಪರಾಧಗಳಿಂದ ನಾವು ದೂರ ಉಳಿಯಬೇಕು. ಅವುಗಳಲ್ಲಿ ಮುಖ್ಯವಾದುವು ಗಮನವಿಲ್ಲದೇ ಮಾಡುವ ಜಪ, ಮತ್ತು ಪಾಪಕಾರ್ಯಗಳನ್ನು ಮಾಡುತ್ತಲೇ ಜಪ ಮಾಡುವುದು. ಜಪದ ದೀಕ್ಷೆ ಪಡೆಯುವಾಗ ನಾಲ್ಕು ನಿಯಂತ್ರಕ ತತ್ತ್ವಗಳನ್ನು ಪಾಲಿಸುವ ಪ್ರತಿಜ್ಞೆ ಮಾಡಲಾಗುತ್ತದೆ. ಆ ತತ್ತ್ವಗಳೆಂದರೆ – ಮಾಂಸಾಹಾರದ ವರ್ಜನೆ, ಜೂಜಾಟದ ವರ್ಜನೆ, ಮಾದಕವಸ್ತು ವರ್ಜನೆ, ಮತ್ತು ಅನೈತಿಕ ಲೈಂಗಿಕತೆಯ ವರ್ಜನೆ. ಇವುಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತ್ತು ಸಾವಧಾನವಾಗಿ ಗಮನವಿಟ್ಟು ಜಪಿಸಬೇಕು.

ಪದ್ಮಪುರಾಣದಲ್ಲಿ ಹೇಳಿದ, ಹರೇ ಕೃಷ್ಣ ಜಪದಲ್ಲಿ ತಪ್ಪಿಸಬೇಕಾದ ಹತ್ತು ಅಪರಾಧಗಳು ಇಂತಿವೆ:
- ಸತಾಂ ನಿಂದಾ – ಹರಿನಾಮದ ಪ್ರಚಾರದಲ್ಲಿ ತೊಡಗಿದ ಮಹಾ ಭಕ್ತರ ನಿಂದನೆ.
- ಶಿವಸ್ಯ ಶ್ರೀ ವಿಷ್ಣೋಃ ಯ ಇಹ ಗುಣ ನಾಮಾದಿ ಸಕಲಂ ಧಿಯಾ ಭಿನ್ನಂ ಪಶ್ಯೇತ್ – ಶಿವ ಮತ್ತು ಇತರ ದೇವತೆಗಳ ನಾಮಗಳು ವಿಷ್ಣುವಿನ ನಾಮಕ್ಕೆ ಸಮ, ಅಥವಾ ಸ್ವತಂತ್ರ ಎಂದು ಪರಿಗಣಿಸುವುದು.
- ಗುರೋರ್ ಅವಜ್ಞಾ – ಗುರುವನ್ನು ಸಾಧಾರಣ ಮಾನವನೆಂದು ಪರಿಗಣಿಸಿ, ಅವರ ಅನಾದರ, ಅವಮಾನ ಮಾಡುವುದು.
- ಶ್ರುತಿಶಾಸ್ತ್ರ ನಿಂದನಮ್ – ವೈದಿಕ ಸಾಹಿತ್ಯಗಳ, ಪುರಾಣ- ಉಪನಿಷತ್ತುಗಳ ನಿಂದನೆ.
- ಅರ್ಥವಾದ – ಹರಿನಾಮದ ಮಹಿಮಯನ್ನು ಅತಿಶಯೋಕ್ತಿ ಎಂದು ಪರಿಗಣಿಸುವುದು.
- ಹರಿನಾಮ್ನಿ ಕಲ್ಪನಮ್ – ಹರಿನಾಮಕ್ಕೆ ಯಾವುದೋ ಭೌತಿಕ ಅರ್ಥವನ್ನು ಕಲ್ಪಿಸಿಕೊಳ್ಳುವುದು.
- ನಾಮ್ನೋ ಬಲಾದ್ ಪಾಪ ಬುದ್ಧಿ – ನಾನು ಏನು ಪಾಪ ಮಾಡಿದರೂ ಪರವಾಗಿಲ್ಲ, ಹರಿನಾಮ ನನ್ನನ್ನು ರಕ್ಷಿಸುತ್ತದೆ ಎಂದುಕೊಂಡು ಪಾಪ ಮಾಡುತ್ತಲೇ ಹೋಗುವುದು.
- ಧರ್ಮ-ವ್ರತ- ತ್ಯಾಗ- ಹುತಾದಿ ಸರ್ವ ಶುಭ ಕಾರ್ಯ ಸಾಮ್ಯಮ್ – ಹರಿನಾಮದ ಜಪವನ್ನು ಸಾಮಾನ್ಯ ಭೌತಿಕ ಶುಭ ಆಚರಣೆ ಎಂದು ಪರಿಗಣಿಸುವುದು.
- ಅಶ್ರದ್ಧಧಾನೇ ವಿಮುಖೇ ಅಶೃಣ್ವತಿ ಉಪದೇಶಃ – ಶ್ರದ್ಧೆ ಇಲ್ಲದವರಿಗೆ, ಕೇಳಲು ಇಚ್ಛೆ ಇರದವರಿಗೆ ಹರಿನಾಮದ ಕುರಿತು ಬೋಧಿಸುವುದು.
- ಶ್ರುತೇ ಅಪಿ ನಾಮ-ಮಾಹಾತ್ಮ್ಯೇ ಯಃ ಪ್ರೀತಿ ರಹಿತೋ ನರಃ ಅಹಂ ಮಮಾದಿ ಪರಮೋ – ಹರಿನಾಮದ ಮಹಿಮೆಯನ್ನು ಕೇಳಿದ ಮೇಲೆಯೂ ಭೌತಿಕ ಚಿಂತನೆಯ ಬದುಕನ್ನು ನಡೆಸುವುದು, ಹರಿನಾಮದ ಜಪಕ್ಕೆ ಭಕ್ತ್ಯಾದರಗಳನ್ನು ತೋರಿಸದೇ ಇರುವುದು.
ಕಲಿಯುಗದ ಪ್ರಚ್ಛನ್ನ ಅವತಾರ, ಹರಿನಾಮದ ಹರಿಕಾರ, ಶ್ರೀ ಕೃಷ್ಣ ಚೈತನ್ಯ ಮಹಾಪ್ರಭು ಅವತರಿಸಿದ್ದು ಈ ಹರೇ ಕೃಷ್ಣ ಮಂತ್ರವನ್ನು ಎಲ್ಲರಿಗೂ ನೀಡಲೆಂದೇ. ಫಾಲ್ಗುಣ ಹುಣ್ಣಿಮೆಯ ಸಂಜೆ ಬಂಗಾಳದ ಮಾಯಾಪುರದಲ್ಲಿ ಕ್ರಿ. ಶ. 1486 ರಲ್ಲಿ ಅವರು ಜನ್ಮ ತಾಳಿದರು. ನಲವತ್ತೆಂಟು ವರ್ಷಗಳ ಕಾಲ ಭುವಿಯ ಮೇಲೆ ಲೀಲೆ ತೋರಿದರು. ಜಾತಿ, ಮತ, ಧರ್ಮಗಳ ಯಾವುದೇ ಕಟ್ಟುಪಾಡಿಲ್ಲದೆ ಎಲ್ಲರಿಗೂ ಹರಿನಾಮವನ್ನು ಬೋಧಿಸಿದರು. ಇಹಾ ಹೈತೇ ಸರ್ವ ಸಿದ್ಧಿ ಹೊಯಿಬೇ ತೊಮಾರ್ – ಕೇವಲ ಹರಿನಾಮ ಕೀರ್ತನದಿಂದಲೇ ಎಲ್ಲ ತರಹದ ಆಧ್ಯಾತ್ಮಿಕ ಸಿದ್ಧಿಯನ್ನು ನಾವು ಪಡೆದುಕೊಳ್ಳಬಹುದು ಎಂದು ಅವರು ಬೋಧಿಸಿದ್ದಾರೆ.

ಈ ಕಲಿಯುಗದ ಧರ್ಮ ಹರಿನಾಮ ಸಂಕೀರ್ತನೆ ಎಂದು ಶಾಸ್ತ್ರಗಳೂ ಸಾರಿವೆ. ಧ್ಯಾನಮಾರ್ಗವಾಗಲಿ, ಭಾರಿ ಯಜ್ಞಗಳ ವಿಧಿಯಾಗಲಿ, ದೊಡ್ಡ ದೇಗುಲಗಳಲ್ಲಿ ವಿಸ್ತೃತ ವಿಗ್ರಹಾರಾಧನೆಯಾಗಲಿ ಈ ಯುಗದಲ್ಲಿ ಶ್ರೀಸಾಮಾನ್ಯರಿಗಾಗಿ ಶಿಫಾರಸು ಮಾಡಿಲ್ಲ. ಹಲವಾರು ಸಮಸ್ಯೆಗಳಿಂದ ನರಳಾಡುತ್ತಿರುವ ಈ ಯುಗದ ಮಂದಮತಿಗಳಿಗೆ ಅತಿ ಸುಲಭದ ನಾಮ ಸಂಕೀರ್ತನೆಯನ್ನು ಮಾತ್ರ ಹೇಳಲಾಗಿದೆ. “ಸುಲಭ ಪೂಜೆಯ ಮಾಡಿ ಬಲವಿಲ್ಲದವರು” ಎಂದು ದಾಸ ವರೇಣ್ಯರೂ ಹಾಡಿದ್ದಾರೆ. ನಾವು ಏನೇ ಮಾಡುತ್ತಿರಬಹುದು, ನಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ, ಬದುಕಿನಲ್ಲಿ ಹರಿಯ ಸ್ಮರಣೆ ಮಾಡಿದರೆ ಸಾಕು, ಅದೇ ಪೂಜೆ ಅಗಿಬಿಡುತ್ತದೆ ಎಂಬುದು ಅವರ ಉಪದೇಶ.
ಶ್ರೀ ಚೈತನ್ಯರೂ ಹೇಳಿದ್ದು ಅದನ್ನೇ – “ಕೀರ್ತನೀಯಃ ಸದಾ ಹರಿಃ” – ಹರಿಯನ್ನು ಕುರಿತು ಸದಾ ಕೀರ್ತಿಸಬೇಕು ಎಂದು. ಇಸ್ಕಾನ್ ಗುರುಗಳಾದ ಶ್ರೀಲ ಪ್ರಭುಪಾದರು ತಮ್ಮ ಭಕ್ತರಿಗೆ ಪ್ರತಿದಿನ ಕೊನೆಯ ಪಕ್ಷ ಹದಿನಾರು ಮಾಲೆ ಹರೇ ಕೃಷ್ಣ ಮಂತ್ರ ಜಪಿಸಬೇಕು ಎಂದು ಆಜ್ಞೆ ಮಾಡಿದ್ದಾರೆ. ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಮಾಡಬೇಕು. ಕಡೆಯ ಪಕ್ಷ ಹದಿನಾರು ಮಾಲೆ ಮಾಡಬೇಕು ಎಂದಿದ್ದಾರೆ. ಆದ್ದರಿಂದ ನಾವು ಈ ಎರಡು – ಮೂರು ತಾಸಿನ ಜಪವನ್ನು ನಾವು ಶಿಸ್ತಿನಿಂದ, ಬೆಳಗಿನ ಜಾವದಲ್ಲಿ, ಗಮನವಿಟ್ಟು ಮಾಡಬೇಕು.
ಇದರಿಂದ “ಚೇತೋ ದರ್ಪಣ ಮಾರ್ಜನಂ, ಭವಮಹಾದಾವಾಗ್ನಿ ನಿರ್ವಾಪಣಂ” – ಎಂದರೆ, ನಮ್ಮ ಮನಸ್ಸು, ಪ್ರಜ್ಞೆ ಶುದ್ಧಿಗೊಂಡು, ಭವಸಾಗರದಲ್ಲಿ ತೊಂದರೆಗಳು ಕಡಮೆಯಾಗಿ, ನಮ್ಮ ಭವರೋಗ ವಾಸಿಯಾಗುತ್ತದೆ ಎಂದು ಅರ್ಥ. ಸ್ವತಃ ಶ್ರೀ ಕೃಷ್ಣನೇ ತನ್ನ ನಾಮದ ರೂಪದಲ್ಲಿ ನಮ್ಮ ಜೊತೆ ಇರುವಾಗ, ಇನ್ನೇನು ನಮಗೆ ಚಿಂತೆ? “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಭಕ್ತಶ್ರೇಷ್ಠರು ಹಾಡಿಲ್ಲವೇ? ಅನನ್ಯವಾಗಿ ನನ್ನ ಕುರಿತು ಯಾರು ಚಿಂತಿಸುವರೋ, ಅಂಥವರ ಯೋಗಕ್ಷೇಮ ನಾನೇ ನೊಡಿಕೊಳ್ಳವೆ ಎಂದು ಶ್ರೀ ಕೃಷ್ಣ ಭಗವದ್ದೀತೆಯಲ್ಲಿ ಮಾತು ಕೊಡ ಕೊಟ್ಟಿದಾನೆ.
ಬನ್ನಿ, ಶ್ರೀ ಕೃಷ್ಣನನ್ನೇ, ಅವನನ್ನು ತಲಪಿ ಅವನ ಸೇವೆ ಮಾಡುವುದನ್ನೇ, ಜೀವನದ ಪರಮ ಗುರಿಯನ್ನಾಗಿಸಿಕೊಂಡು ಹರಿನಾಮ ಜಪಿಸೋಣ. ಹರೇ ಕೃಷ್ಣ.
************






Leave a Reply