ಮಥುರಾದ ಪವಿತ್ರ ತಾಣಗಳು

ವ್ರಜ ಮಂಡಲ ಪರಿಕ್ರಮ

ಇದು ಶ್ರೀ ಕೃಷ್ಣ ಜನಿಸಿದ ಪ್ರದೇಶ, ಇಲ್ಲಿನ ಕೇಶವ ದೇವ ದೇವಾಲಯದಲ್ಲಿ ರಾಧಾರಾಣಿ ಮತ್ತು ಕೇಶವ ವಿಗ್ರಹಗಳಿವೆ. ವ್ರಜ ಮಂಡಲದ ನಾಲ್ಕು ಪ್ರಮುಖ ವಿಗ್ರಹಗಳಲ್ಲಿ ಕೇಶವ ವಿಗ್ರಹವೂ ಒಂದು. ಇದನ್ನೂ ಕೂಡಾ ವಜ್ರನಾಭ ಪ್ರತಿಷ್ಠಾಪಿಸಿದ.

ಕೇಶವ ದೇವ ದೇವಾಲಯದ ಪಕ್ಕದಲ್ಲಿ ಜೈಲಿನಂಥ ಒಂದು ಚಿಕ್ಕ ಕೊಠಡಿ ಇದೆ. ಶ್ರೀ ಕೃಷ್ಣ ಜನಿಸಿದ್ದು ಇದೇ ಜೈಲಿನಲ್ಲಿ ಎನ್ನಲಾಗಿದೆ. ಇಲ್ಲಿಂದ 250 ಅಡಿ ದೂರದಲ್ಲಿ, ಪೋತ್ರ ಕು೦ಡದ ಬಳಿ ಇನ್ನೊಂದು ಚಿಕ್ಕ ಕೋಣೆ ಇದ್ದು, ಶ್ರೀ ಕೃಷ್ಣಜನಿಸಿದ ಜಾಗ ಇದೇ ಎಂದು ಕೆಲವರು ವಾದಿಸುತ್ತಾರೆ. ಇಲ್ಲಿ ವಸುದೇವ, ದೇವಕಿ ಮತ್ತು ಚತಿರ್ಭುಜ ಕೃಷ್ಣನ ವಿಗ್ರಹಗಳಿವೆ. ಹೆಸರಾಂತ ಇತಿಹಾಸಕಾರ ಗೌಸ್ ತನ್ನ ಪುಸ್ತಕದಲ್ಲಿ ಈ ದೇವಾಲಯವೇ ಶ್ರೀ ಕೃಷ್ಣ ಜನ್ಮಸ್ಥಳ ಎಂದು ವರ್ಣಿಸಿದ್ದಾನೆ.

ಶ್ರೀ ಕೃಷ್ಣ ಜನ್ಮಸ್ಥಳದಿಂದ ಸಮೀಪದಲ್ಲೇ ಇರುವ ಬೃಹತ್ ಸ್ನಾನದ ಕೆರಯೇ ಪೋತ್ರ ಕುಂಡ. ಇದು ಬಹಳ ಆಳವಾಗಿದ್ದು, ಈಗ ಬರಿದಾಗಿದೆ. ಇಲ್ಲಿ ಶಿಶು ಶ್ರೀ ಕೃಷ್ಣನ ವಸ್ತ್ರವನ್ನು ವಸುದೇವನು ತೊಳೆದನೆಂದು ಹೇಳಲಾಗಿದೆ.

ಪೋತ್ರ ಕು೦ಡದ ಮಗ್ಗುಲಿಗೆ ಜ್ಞಾನ ವಾಪಿ ಇದೆ. ಇದೊ೦ದು ಸು೦ದರ ಗುಹೆ. ನೆಲದೊಳಕ್ಕೆ 30 ಆಡಿ ಆಳದಲ್ಲಿದೆ. ಶ್ರೀ ಚೈತನ್ಯರು ವೃಂದಾವನಕ್ಕೆ ಬಂದಾಗ ಒಬ್ಬ ಬ್ರಾಹ್ಮಣನ ಮನೆಯಲ್ಲಿ ನೆಲೆಸಿದ್ದರು.

ಶ್ರೀ ಕೃಷ್ಣನು ಕಂಸನನ್ನು ವಧಿಸಿದ್ದು ಇಲ್ಲಿರುವ ಕಂಸ ತಿಲಾ ಎಂಬ ಬೆಟ್ಟದ ಮೇಲೆ. ಕೃಷ್ಣ- ಬಲರಾಮ ಮತ್ತು ಇತರ ಜಟ್ಟಿಗಳ ಮಧ್ಯೆ ಕುಸ್ತಿ ಸ್ಪರ್ಧೆ ನಡೆದಿದ್ದೂ ಇಲ್ಲಿಯೇ. ಈ ಬೆಟ್ಟದ ಹಿಂಭಾಗದಲ್ಲೇ ಉಗ್ರಸೇನನಿಗೆ ಶ್ರೀ ಕೃಷ್ಣ ಕಿರೀಟ ತೊಡಿಸಿದ ಸ್ಥಳವಿದೆ. ರಂಗ ಎಂದರೆ ವೇದಿಕೆ. ಶ್ರೀ ಕೃಷ್ಣನ ಪ್ರಮುಖ ಲೀಲೆಗಳಿಗೆ ವೇದಿಕೆಯಾದ್ದರಿಂದ ಈ ನೆಲಕ್ಕೆ ರಂಗ ಭೂಮಿ ಎಂಬ ಹೆಸರು. ರಂಗಭೂಮಿ ಮಥುರಾ ಮುಖ್ಯ ಅಂಚೆ ಕಚೇರಿಯ ಎದುರಿಗಿದೆ.

ಇಲ್ಲಿ ಬಿಳಿ ಬಣ್ಣದ ಮನಮೋಹಕ ವರಾಹ ವಿಗ್ರಹವಿದೆ. ವಿಷ್ಣುವಿನ ಎರಡನೇ ಅವತಾರ ವರಾಹ. ಹಿರಣ್ಯಾಕ್ಷನನ್ನು ವಧಿಸಿ, ಭೂಮಿಯನ್ನು ತನ್ನ ಮುಖದಿಂದ ಎತ್ತಿಹಿಡಿದ ಬಳಿಕ ವರಾಹ ವಿಶ್ರಾಮ ಘಟ್ಟದಲ್ಲಿ ವಿಶ್ರಾಂತಿ ಪಡೆದಿದ್ದ ಎನ್ನಲಾಗಿದೆ. ಈ ದೇವಾಲಯದ ಸಮೀಪದಲ್ಲೇ ಆದಿ ವರಾಹ, ಬಲಾರಾಮ ಮತ್ತಿತರ ಕೆಲವು ದೇವಾಲಯಗಳೂ ಇವೆ. ದ್ವಾರಕಾಧೀಶ ದೇವಾಲಯದಿಂದ ಸುಮಾರು 300 ಮೀ. ದೂರದಲ್ಲಿದೆ.

ಮಥುರಾದಲ್ಲೇ ಅತ್ಯಂತ ಪುರಾತನವಾದ ವಿಗ್ರಹಗಳ ಪೈಕಿ ಇಲ್ಲಿರುವ ಆದಿ ವರಾಹವೂ ಒಂದು. ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಮಹಾರಾಜರು ಇಲ್ಲಿಗೆ ಭೇಟಿ ನೀಡಿದ್ದರು. ದೇವಾಲಯದಲ್ಲಿ ಅವರ ಹಸ್ತಾಕ್ಷರವಿದೆ. ಇಲ್ಲಿರುವ ವಿಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ ಇದನ್ನು ಲಾಲ್ ವರಾಹ ಎ೦ದೂ ಕರೆಯಲಾಗುತ್ತದೆ. ಕಪಿಲ ಮುನಿ ಮನಸ್ಸಿನಿಂದಲೇ ಈ ವಿಗ್ರಹವನ್ನು ಸೃಷ್ಟಿಸಿದರೆಂದು ಆದಿ ವರಾಹ ಪುರಾಣದಲ್ಲಿ ಹೇಳಲಾಗಿದೆ. ಶ್ವೇತ ವರಾಹ ದೇವಾಲಯವಿರುವ ರಸ್ತೆಯಲ್ಲೇ ಸ್ವಲ್ಪ ಮುಂದೆ ಸಾಗಿದರೆ ಈ ದೇವಾಲಯ ಸಿಗುತ್ತದೆ.

ಮಥುರಾದ ಮಧ್ಯ ಭಾಗದಲ್ಲಿರುವ ಈ ದೇವಾಲಯವನ್ನು 1814ರಲ್ಲಿ ನಿರ್ಮಿಸಲಾಯಿತು. ಮಥುರಾದಲ್ಲಿರುವ ದೇವಾಲಯಗಳ ಪೈಕಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವುದು ಇಲ್ಲಿಗೆ. ಇದು ವಲ್ಲಭಾಚಾರ್ಯರ ಅನುಯಾಯಿಗಳ ಆಡಳಿತಕ್ಕೊಳಪಟ್ಟಿದೆ. ಈ ದೇವಾಲಯದ ಶಿಲ್ಪಕಲೆ ನೋಡುಗರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ವಿಶ್ರಾಮ ಘಟ್ಟದಿಂದ ಕೆಲವೇ ನಿಮಿಷ ನಡೆದರೆ ಈ ದೇವಾಲಯ ಸಿಗುತ್ತದೆ.

ಧನುರ್ಯಜ್ಞಕ್ಕಾಗಿ ಪವಿತ್ರ ಧನುಸ್ಸನ್ನು ಮುರಿದ ಬಳಿಕ ಶ್ರೀ ಕೃಷ್ಣನು ದೀರ್ಘ ವಿಷ್ಣುವಿನ ಅವತಾರ ತಾಳಿದ. ತಾನು ಕಂಸನನ್ನು ಸುಲಭದಲ್ಲಿ ಮಣಿಸಬಲ್ಲೆ ಎಂಬುದಾಗಿ ತನ್ನ ಸಹಪಾಠಿಗಳಲ್ಲಿ ವಿಶ್ವಾಸ ಮೂಡಿಸಲು ಕೃಷ್ಣ ಈ ರೂಪ ತಳೆದ. ದೀರ್ಘ ಎಂದರೆ ಬೃಹತ್ ಅಥವಾ ದೊಡ್ಡದು. ಅಂತೆಯೇ ಈ ವಿಗ್ರಹ ಬೃಹದಾಕಾರದಲ್ಲಿದೆ. ಕಮಲ, ಸಂಖ, ಚಕ್ರಧಾರಿಯಾದ ಕರಿಕಲ್ಲಿನ ವಿಷ್ಣುವಿನ ವಿಗ್ರಹ ಇಲ್ಲಿದೆ. ಈ ದೇವಾಲಯ ಭರತ್‌ ಪುರ ಗೇಟ್ ರಸ್ತೆಯಲ್ಲಿದೆ.

ಇದು ಯಮುನಾ ತಟದಲ್ಲಿರುವ ಒಂದು ಪ್ರಮುಖ ಸ್ನಾನ ಘಟ್ಟ. ಕಂಸ ಮತ್ತು ಆತನ ಎಂಟು ಸೋದರರನ್ನು ಸಂಹರಿಸಿದ ಬಳಿಕ ಕೃಷ್ಣ-ಬಲರಾಮರು ವಿಶ್ರಾಂತಿ ಪಡೆದ ಪುಣ್ಯ ಸ್ಥಳವಿದು. ವ್ರಜ ಮ೦ಡಲಕ್ಕೆ ಬರುವವರು ಮೊದಲು ಇಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಪರಿಕ್ರಮ ಆರಂಭಿಸುತ್ತಾರೆ. ಶ್ರೀ ಚೈತನ್ಯರೂ ವಿಶ್ರಾಮ ಘಟ್ಟವೂ ಸೇರಿದಂತೆ ಸುತ್ತಮುತ್ತಲಿನ 25 ಘಟ್ಟಗಳಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಹಿರಾಣ್ಯಾಕ್ಷನನ್ನು ಸಂಹರಿಸಿದ ಬಳಿಕ ವರಾಹ ರೂಪಿ ವಿಷ್ಣುವೂ ಇಲ್ಲಿಯೇ ವಿಶ್ರಮಿಸಿದ್ದನಂತೆ. ಈ ಸ್ಥಳದಲ್ಲಿ ವಿಶ್ರಾಂತಿ ಪಡೆಯುವಾಗಲೇ ವರಾಹ ದೇವನು ಭೂಮಾತೆಗೆ ಆದಿ ವರಾಹ ಪುರಾಣವನ್ನು ಹೇಳಿದ್ದು. ಅದನ್ನು ವ್ಯಾಸದೇವರು ದಾಖಲಿಸಿದ್ದು, ಪ್ರತಿ ನಿತ್ಯ ಇಲ್ಲಿ ಸಂಜೆ ಯಮುನೆಗೆ ಸೂರ್ಯಸ್ತದ ಆರತಿ ಸಲ್ಲಿಸಲಾಗುತ್ತದೆ. ಸೂರ್ಯಸ್ತದ ಸಮಯದಲ್ಲಿ ದೋಣಿ ಸವಾರಿ ಮಾಡುತ್ತಾ ಈ ಆರತಿಯನ್ನು ವೀಕ್ಷಿಸುವುದೇ ಕಣ್ಣಿಗೊಂದು ಹಬ್ಬ. 1814ರಲ್ಲಿ ಈ ಘಟ್ಟವನ್ನು ಪುರ್ನನಿರ್ಮಾಣ ಮಾಡಲಾಯಿತು.

ಈ ಘಟ್ಟದ ಪಕ್ಕದಲ್ಲೇ ಯಮುನಾ- ಯಮರಾಜ ದೇವಾಲಯವಿದೆ. ಇಲ್ಲಿ ಯಮುನಾ ದೇವಿ ಮತ್ತು ಆಕೆಯ ಸೋದರ ಯಮರಾಜನ ಪುರಾತನ ವಿಗ್ರಹಗಳಿವೆ. 4900 ವರ್ಷಗಳ ಹಿಂದೆ ವಜ್ರನಾಭ ಈ ವಿಗ್ರಹಗಳನ್ನು ಪ್ರತಿಷ್ಠಾಪಿಸಿದನು. ಈ ಪ್ರದೇಶ ಮಥುರೆಯ ಮಧ್ಯದಲ್ಲಿ ಯಮುನಾ ತೀರದಲ್ಲಿದೆ.

ವಿಶ್ರಾಮ ಘಟ್ಟದ ದಕ್ಷಿಣ ಭಾಗದಲ್ಲಿ ಅವಿಮುಖ ತೀರ್ಥ, ಗುಹ್ಯ ತೀರ್ಥ, ಪ್ರಯಾಗ ತೀರ್ಥ, ಕನಖಾಲ ತೀರ್ಥ, ತಿಂಡುಕ ತೀರ್ಥ, ವಟಸ್ವಾಮಿ ತೀರ್ಥ, ಧೃವ ಘಟ್ಟ ರಿಷಿ ತೀರ್ಥ, ಮೋಕ್ಷತೀರ್ಥ, ಕೋಟಿ ತೀರ್ಥ, ಬೋಧಿ ತೀರ್ಥ ಎಂಬ ಪವಿತ್ರ ತಾಣಗಳಿವೆ.

ವಿಶ್ರಾಮ ಘಟ್ಟದ ಉತ್ತರಕ್ಕೆ ದ್ವಾದಶ ತೀರ್ಥ, ಸಾಮ್ಯಮಣಿ ತೀರ್ಥ, ಧಾರಪತನ ತೀರ್ಥ, ನಾಗ ತೀರ್ಥ,  ಘಂಟಾಭರಣ ತೀರ್ಥ, ಬ್ರಹ್ಮತೀರ್ಥ, ಸೋಮ ತೀರ್ಥ ಘಟ್ಟ, ಸರಸ್ವತಿ ಪತನ ತೀರ್ಥ, ಚಕ್ರತೀರ್ಥ ಘಟ್ಟ ದಶಾಶ್ವಮೇಧ ಘಟ್ಟ, ವಿಘ್ನರಾಜ ಘಟ್ಟ ಎಂಬ ಪವಿತ್ರ ತಾಣಗಳಿವೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದ್ದು, ಇವುಗಳ ಮಹಿಮೆಯನ್ನು ಆದಿ ವರಾಹ ಪುರಾಣದಲ್ಲಿ ವರ್ಣಿಸಲಾಗಿದೆ.

ಐದು ವರ್ಷದ ಬಾಲಕ ಧೃವನಿಗೆ ನಾರದ ಮುನಿ ಬೋಧಿಸಿದ್ದು ಇದೇ ಸ್ಥಳದಲ್ಲಿ.  ಧೃವ ಘಟ್ಟದಲ್ಲೇ ಸ್ವಲ್ಪ ಮಟ್ಟಿಲುಗಳನ್ನೇರಿದರೆ ಒಂದು ದೊಡ್ಡ ದೇವಾಲಯವಿದೆ. ಇಲ್ಲಿ ರಾಧಾರಾಣಿ, ಕೃಷ್ಣ ಮತ್ತು ಧೃವನ ವಿಗ್ರಹಗಳಿವೆ. ಈ ದೇವಾಲಯ ಸ್ವಲ್ಪ ಮೂಲೆಯಲ್ಲಿರುವುದರಿಂದ ಇದು ಹೆಚ್ಚಿನ ಯಾತ್ರಿಗಳ ಕಣ್ಣಿಗೆ ಸುಲಭವಾಗಿ ಬೀಳುವುದಿಲ್ಲ. ಇದು ಯಮುನಾ ತೀರದಲ್ಲಿ ವಿಶ್ರಾಮ ಘಟ್ಟದಿಂದ 314 ಕಿ.ಮೀ. ದೂರದಲ್ಲಿದೆ.

ಶಿವ ಒಬ್ಬ ಶ್ರೇಷ್ಠ ವೈಷ್ಣವ. ಆತ ವ್ರಜ ಮಂಡಲದ ಸಂರಕ್ಷಕ, ಕಾವಲುಗಾರ. ಹೀಗಾಗಿ ಆತನ ಆನುಮತಿ ವಿನಃ ನಿಮ್ಮ ವ್ರಜ ಮ೦ಡಲ ಪರಿಕ್ರಮ ಯಶಸ್ವಿಯಾಗುವುದಿಲ್ಲ. ಮಥುರಾ ನಗರಿಗೆ ಸುತ್ತುವರಿದಂತೆ ನಾಲ್ಕು ಶಿವ ದೇವಾಲಯಗಳಿವೆ. ವ್ರಜ ಮ೦ಡಲದ ರಕ್ಷಣೆಗಾಗಿ ನಾಲ್ಕೂ ದಿಕ್ಕಿನಲ್ಲಿ ಶಿವ ಲಿಂಗಗಳು ನಿಂತಿವೆ. ಇವುಗಳನ್ನು ಮಥುರೆಯ ದಿಕ್ಪಾಲಕರು ಎನ್ನಲಾಗುತ್ತದೆ. ಅವುಗಳೆ೦ದರೆ, ಉತ್ತರದಲ್ಲಿ ಗೋಕರ್ಣೇಶ್ವರ ಮಹಾದೇವ, ಪೂರ್ವದಲ್ಲಿ ಪಿಪ್ಪಾಲೇಶ್ವರ ಮಹಾದೇವ, ದಕ್ಷಿಣದಲ್ಲಿ ರಂಗೇಶ್ವರ ಮಹಾದೇವ ಮತ್ತು ಪಶ್ಚಿಮದಲ್ಲಿ ಭೂತೇಶ್ವರ ಮಹಾದೇವ ದೇವಾಲಯಗಳು. ವ್ರಜಮ೦ಡಲ ಪರಿಕ್ರಮ ಕೈಗೊಳ್ಳುವವರು ಈ ದೇವಾಲಯಗಳನ್ನು ಸ೦ದರ್ಶಿಸುವುದು ಅತಿ ಮುಖ್ಯ.

ಮಥುರೆಯ ಪಶ್ಚಿಮ ದಿಕ್ಕನ್ನು ಕಾಯುವ ಶಿವ ಲಿಂಗ ಇಲ್ಲಿದೆ. ಭೂತೇಶ್ವರ ಎಂದರೆ ಭೂತಗಳ ಒಡೆಯ. ಕಂಸ ಭೂತೇಶ್ವರನನ್ನು ಪೂಜಿಸುತ್ತಿದ್ದ ಎಂದು ಸ್ಕಂದ ಪುರಾಣದಲ್ಲಿ ಹೇಳಿದೆ. ಈ ದೇವಾಲಯದಿ೦ದ 15 ಅಡಿ ದೂರದಲ್ಲಿ ಭೂತೇಶ್ವರನ ಪತ್ನಿ, ಪಾತಾಳೇಶ್ವರಿ ದೇವಿ ದೇವಾಲಯವಿದೆ. ಈ ದೇವಾಲಯದಲ್ಲಿ ಬಹಳ ಕತ್ತಲಿರುವುದರಿಂದ ಇಲ್ಲಿನ ವಿಗ್ರಹಗಳನ್ನು ನೋಡಲು ಕೃತಕ ಬೆಳಕಿನ ಅವಶ್ಯಕತೆ ಇದೆ. ಇದು ಕೃಷ್ಣ ಜನ್ಮಸ್ಥಳದಿಂದ ಒಂದು ಕಿ. ಮಿ. ದೂರದಲ್ಲಿದೆ. ವ್ರಜ ಮಂಡಲದಲ್ಲಿರುವ ನಾಲ್ಕು ಪ್ರಮುಖ ದೇವಿಯರ ದೇಗುಲಗಳಲ್ಲಿ ಇದೂ ಒ೦ದು. ಇತರ ಮೂರು ದೇವಾಲಯಗಳೆ೦ದರೆ ಗೋವರ್ಧನ ಪಟ್ಟಣದಲ್ಲಿರುವ ಮಾನಸಿ ದೇವಿ, ವೃಂದಾವನದಲ್ಲಿರುವ ಯೋಗಮಾಯಾ ಮತ್ತು ಕಾಮ್ಯವನದಲ್ಲಿರುವ ವೃಂದಾ ದೇವಿ ದೇವಾಲಯಗಳು.

ಈ ದೇವಾಲಯ ರಂಗಭೂಮಿ ಸಮೀಪದಲ್ಲೇ ಇದೆ. ಶ್ರೀ ಕೃಷ್ಣನ ಜತೆ ಕುಸ್ತಿಗೆ ಮೊದಲು ಕಂಸ ಪೂಜಿಸಿದ ಶಿವಲಿಂಗ ಈ ದೇವಾಲಯದಲ್ಲಿದೆ. ಮಥುರೆಯ ದಕ್ಷಿಣ ದಿಕ್ಕಿನ ಕಾವಲುಗಾರ ರ೦ಗೇಶ್ವರ, ದಿಕ್ಪಾಲಕ ಶಿವ ದೇವಾಲಯಗಳ ಪೈಕಿ ಇದು ಅತ್ಯಂತ ಜನಪ್ರಿಯವಾದುದು. ಇದು ರಂಗಭೂಮಿ ಮತ್ತು ಹಳೆಯ ಬಸ್‌ ನಿಲ್ದಾಣದ ನಡುವೆ ಇದೆ.

ಈ ದೇವಾಲಯದಲ್ಲಿ ತಾನಾಗಿಯೇ ಉದ್ಭವವಾದ ವಿಷ್ಣು ಮೂರ್ತಿ ಇದೆ. ಸ್ವಯಂ ಎಂದರೆ ಹುಟ್ಟಿದವನ್ನು ಎಂದರ್ಥ. 1515ರಲ್ಲಿ ಶ್ರೀ ಚೈತನ್ಯರು ದರ್ಶನ ಪಡೆದಿದ್ದರು. ಹೊಸಬರಿಗೆ ಈ ದೇವಾಲಯವನ್ನು ಹುಡುಕುವುದು ಸ್ವಲ್ಪ ಕಷ್ಟ. ಆದ್ದರಿಂದ ಸ್ಥಳೀಯರಿಂದ ಸೂಕ್ತ ಮಾರ್ಗದರ್ಶನ ಪಡೆದು ಮುಂದುವರೆಯುವುದು ಸೂಕ್ತ.

ರಾಧಾ ವಿನೋದ ವಿಹಾರಿ ವಿಗ್ರಹಗಳು ಇಲ್ಲಿವೆ. ಒಂದು ಪವಿತ್ರ ಗೋವರ್ಧನ ಶಿಲೆ. ಶ್ರೀ ಚೈತನ್ಯ ಮತ್ತು ಕೇಶವ ಮಹಾರಾಜ ಮೂರ್ತಿಗಳೂ ಈ ದೇವಾಲಯದಲ್ಲಿವೆ. ಶ್ರೀಲ ಭಕ್ತಿ ಪ್ರಜ್ನಾನ ಕೇಶವ ಗೋಸ್ವಾಮಿ ಮಹಾರಾಜರು ಈ ದೇವಾಲಯ ನಿರ್ಮಿಸಿದರು. 1959ರ ಸೆಪ್ಟೆಂಬರ್‌ನಲ್ಲಿ ಪೂಜ್ಯ ಕೇಶವ ಮಹಾರಾಜರ ಬಳಿ ಶ್ರೀಲ ಪ್ರಭುಪಾದರು ಸಂನ್ಯಾಸ ಸ್ವೀಕರಿಸಿದ್ದು ಇದೇ ದೇವಾಲಯದಲ್ಲಿ. ಸಂನ್ಯಾಸ ಸ್ವೀಕಾರಕ್ಕೂ ಮೊದಲು ಪ್ರಭುಪಾದರು ಕೆಲಕಾಲ ಇಲ್ಲಿಯೇ ತಂಗಿದ್ದರು. ಶ್ರೀ ಚೈತನ್ಯರ ವಿಗ್ರಹವನ್ನು ದೇವಾಲಯಕ್ಕೆ ನೀಡಿದವರೂ ಪ್ರಭುಪಾದರೇ. ಇದು ರಂಗೇಶ್ವರ ಮಹಾದೇವ ದೇವಾಲಯ ಮತ್ತು ಹಳೇ ಬಸ್‌ ನಿಲ್ದಾಣದ ಸಮೀಪದಲ್ಲಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi