ಮುಲ್ಕಿ ಉಗ್ರ ನರಸಿಂಹ ಮಂದಿರ

ಮಂಗಳೂರಿನಿಂದ 30 ಕಿ.ಮೀ ದೂರದಲ್ಲಿರುವ ಮುಲ್ಕಿ ಪ್ರಸಿದ್ಧ ಯಾತ್ರಾ ಸ್ಥಳ. ಶ್ರೀ ವಿಠಲನಿಗೆ ಅರ್ಪಿಸಿದ ಪೂಜಾ ಸ್ಥಳವಾದರೂ ಇಲ್ಲಿ ಶ್ರೀ ವಿಠಲನೊಂದಿಗೆ ಶ್ರೀ ವೆಂಕಟರಮಣ, ಶ್ರೀ ಉಗ್ರ ನರಸಿಂಹ ಮತ್ತು ಶ್ರೀ ಬಿಂದುಮಾಧವ ವಿಗ್ರಹಗಳೂ ಪ್ರಧಾನ ದೇವರಾಗಿ ವಿಜೃಂಭಿಸಿವೆ. ಶ್ರೀ ಕಾಶಿ ಮಠ ಸಂಸ್ಥಾನದ ಸಂಸ್ಥಾಪನಾಚಾರ್ಯ ಶ್ರೀ ವಿಜಯೀಂದ್ರ ತೀರ್ಥ ಸ್ವಾಮೀಜಿಯವರು ಪ್ರತಿಷ್ಠಾಪಿಸಿದ ಶ್ರೀ ಉಗ್ರ ನರಸಿಂಹ ಮೂರ್ತಿಯು ಅತ್ಯಂತ ಪ್ರಸಿದ್ಧವಾಗಿ ಅಸಂಖ್ಯ ಜನರನ್ನು ಆಕರ್ಷಿಸುತ್ತಿದೆ.

ಇತಿಹಾಸ

ಮೊದಲು ಇಲ್ಲಿ ಶ್ರೀ ವಿಠಲನ ಸಣ್ಣ ದೇವಸ್ಥಾನವಿತ್ತು. ಖ್ಯಾತ ಜ್ಯೋತಿಷಿ ಸೊಯಿರ ವಿಠ್ಠಲ ಭಟ್‌ ಅವರ ಇದನ್ನು ನಿರ್ಮಿಸಿದ್ದರು. ಜೈನ ಧರ್ಮದ ಅನುಯಾಯಿ ಸಾವಂತ ರಾಜನು ಇದರ ಪೋಷಕನಾಗಿದ್ದನು.

ರಾಜಕೀಯ ಗೊಂದಲದ ಕಾರಣ ಕಾರ್ಕಳದ ಜನರು ತಮ್ಮೂರಿನ ಶ್ರೀ ವೆಂಕಟರಮಣ ಮೂರ್ತಿಯನ್ನು ರಕ್ಷಿಸಲು ಅದನ್ನು ಇಲ್ಲಿನ ದೇವಸ್ಥಾನದಲ್ಲಿ ತಂದಿರಿಸಿದರು. ಆನಂತರ ಶ್ರೀ ವೆಂಕಟರಮಣ ವಿಗ್ರಹವನ್ನು ಅವರು ಕಾರ್ಕಳಕ್ಕೆ ವಾಪಸು ಕೊಂಡೊಯ್ಯಲು ಮುಂದಾದರು. ಆದರೆ ಭಗವಂತನು ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡು ತಾನು ಮುಲ್ಕಿಯಲ್ಲಿಯೇ ಉಳಿಯುಲು ಇಚ್ಛಿಸಿರುವುದಾಗಿ ತಿಳಿಸಿ ಕಾರ್ಕಳದಲ್ಲಿ ಪೂಜೆಗಾಗಿ ಮತ್ತೊಂದು ವಿಗ್ರಹ ನೀಡುವ ಆಶ್ವಾಸನೆ ಕೊಟ್ಟನು. ಈ ರೀತಿ ಶ್ರೀ ವೆಂಟರಮಣ ವಿಗ್ರಹ ಇಲ್ಲಿಯೇ ಉಳಿಯಿತು.

ಶ್ರೀ ಉಗ್ರ ನರಸಿಂಹ ಐತಿಹ್ಯ

ಈ ಅಪೂರ್ವ ವಿಗ್ರಹವು ಸ್ವಯಂಭು ಎಂದು ಪರಿಗಣಿಸಲಾಗಿದೆ. ಪ್ರಹ್ಲಾದ ಮಹಾರಾಜನು ಇದನ್ನು ಆರಾಧಿಸಿದನೆಂದು ಪ್ರತೀತಿ  ಇದೆ. ಉಗ್ರ ರೂಪದ ಈ ವಿಗ್ರಹವು ಶ್ರೀ ಕಾಶಿ ಮಠದ ಸಂಸ್ಥಾಪನಾಚಾರ್ಯ ಶ್ರೀ ವಿಜಯೀಂದ್ರ ತೀರ್ಥ ಸ್ವಾಮೀಜಿಯವರ ಸ್ವಾಧೀನಕ್ಕೆ ಬಂದಿತು.

ಅವರು ಅದನ್ನು ನಿತ್ಯ ಪೂಜೆಗೆಂದು ತಮ್ಮ ಬಳಿಯೇ ಇಟ್ಟುಕೊಳ್ಳಬೇಕೆಂದು ಇಚ್ಛಿಸಿದ್ದರು. ಆದರೆ ಭಗವಂತ ಕನಸಿನಲ್ಲಿ ಬಂದು “ನನ್ನನ್ನು ಮುಲ್ಕಿಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಾಪಿಸು. ನಾನು ಶಾಂತವಾಗಿ ಇರುವೆ ಮತ್ತು ನನ್ನಲ್ಲಿ ಆಶ್ರಯ ಪಡೆಯುವ ಭಕ್ತರ ಅಪೇಕ್ಷೆಗಳನ್ನು ಪೂರೈಸುವೆ” ಎಂದು ಆದೇಶಿಸಿದನು.

ಅದರಂತೆ ಸ್ವಾಮೀಜಿಯವರು ಕೆಲವು ಭಕ್ತರೊಂದಿಗೆ ಕೇರಳದಿಂದ ಪಾದಯಾತ್ರೆಯಲ್ಲಿ ಹೊರಟರು. ಕೆಲವು ದಿನಗಳ ಆನಂತರ ಅವರು ಸಾವಂತ ರಾಜರ ರಾಜಧಾನಿ ಪಡುಪಣಂಬೂರು ತಲುಪಿದರು. ಅಲ್ಲಿಂದ ಮುಲ್ಕಿಗೆ ತಾಸಿನ ಪ್ರಯಾಣ. ಆದರೆ ಆವೇಳೆಗೆ ಸಂಜೆಯಾಯಿತು.

ಕತ್ತಲಿನಲ್ಲಿ ಹೋಗುವುದು ಕಷ್ಟವೆನಿಸಿತು. ಹೀಗಾಗಿ ಸ್ವಾಮೀಜಿಯವರು ತಮ್ಮ ಕೆಲವು ಭಕ್ತರನ್ನು ರಾಜನ ಬಳಿಗೆ ಕಳುಹಿಸಿ ದೀಪ ತರುವಂತೆ ಆದೇಶಿಸಿದರು. ಆದರೆ ಜೈನ ಧರ್ಮ ಅನುಯಾಯಿಯಾಗಿದ್ದ ರಾಜನು ಸ್ವಾಮೀಜಿಯು ತನ್ನ ಪಂಥಕ್ಕೆ ಸೇರಿದವರಲ್ಲವೆಂದು ಅವರ ಕೋರಿಕೆಯನ್ನು ನಿರಾಕರಿಸಿದ.

ಆಗ ಸ್ವಾಮೀಜಿ ನಗುತ್ತಾ ನುಡಿದರು, “ಮೂರು ಲೋಕಕ್ಕೇ ಬೆಳಕು ನೀಡುವ ಭಗವಂತ ನಮ್ಮ ಬಳಿ ಇರುವಾಗ ಚಿಂತೆ ಯಾಕೆ? ನಾವು ಯಾತ್ರೆ ಮುಂದುವರಿಸೋಣ. “ಅವರು ಪಡುಪಣಂದೂರಿನ ಗಡಿಯನ್ನು ಇನ್ನೂ ದಾಟಿರಲಿಲ್ಲ, ಆಗ ಅರಮನೆಯ ಛಾವಣಿಗೆ ಬೆಂಕಿ ತಗುಲಿ ಜ್ವಾಲೆ ಮುಗಿಲು ಮುಟ್ಟಿತು. ಅರಮನೆ ಸಿಬ್ಬಂದಿಗೆ ಬೆಂಕಿ ನಂದಿಸಲಾಗಲಿಲ್ಲ. ಆ ಬೆಳಕಿನಲ್ಲಿ ಸ್ವಾಮೀಜಿಯವರ ತಂಡ ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಿತು.

ನರಸಿಂಹ ಪ್ರತಿಷ್ಠಾಪನೆ

ಅದು ದತ್ತ ಜಯಂತಿ ದಿನ. ಮಾರ್ಗಶಿರ ಮಾಸದ ಪೌರ್ಣಿಮೆ ನವೆಬಂರ್‌ 23, 1569, ಮುಲ್ಕಿಯಲ್ಲಿ ಶ್ರೀ ನರಸಿಂಹನ ಪ್ರತಿಷ್ಠಾಪನೆಯಾಯಿತು.

ಇತ್ತ ಪಡುಪಣಂದೂರಿನಲ್ಲಿ ಸಾವಂತನು ಅರಮನೆ ಪನರ್‌ನಿರ್ಮಾಣ ಕೈಗೊಳ್ಳಲು ನಿರ್ಧರಿಸಿದ. ಆದರೆ ಮರ ಕಡಿದಾಗಲೆಲ್ಲ ಅದರಲ್ಲಿ ಇದ್ದಲು ತುಂಬಿರುತ್ತಿತ್ತು. ರಾಜನು ಜ್ಯೋತಿಷಿಗಳ ಸಲಹೆ ಪಡೆದ. ರಾಜನು ಶ್ರೀ ಉಗ್ರ ನರಸಿಂಹ ಕೋಪಕ್ಕೆ ಗುರಿಯಾಗಿದ್ದಾನೆಂದು ಅವರು ಹೇಳಿದರು. ಅವನು ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕೆಂದು ಅವರು ಸಲಹೆ ನೀಡಿದರು. ಅವನು ಹಾಗೆ ಮಾಡಿದ ಮೇಲೆಯೇ ಎಲ್ಲವೂ ಅವನಿಗೆ ಅನುಕೂಲಕರವಾಯಿತು.

ರಾಜನು ಪುನಃ ಮಂದಿರಕ್ಕೆ ಭೇಟಿ ನೀಡಿ ಭಗವಂತನಲ್ಲಿ ವಿಚಿತ್ರ ಕೋರಿಕೆ ಸಲ್ಲಿಸಿದ. ಭಗವಂತನು (ಮೂರ್ತಿ) ವರ್ಷಕ್ಕೆ ಒಮ್ಮೆಯಾದರೂ ಅರಮನೆಗೆ ಆಗಮಿಸಿ ತನ್ನನ್ನೂ ಮತ್ತು ತನ್ನ ಕುಟುಂಬದವರನ್ನೂ ಅನುಗ್ರಹಿಸಬೇಕೆಂದು ಅವನು ಬೇಡಿದ. ಅದರಂತೆ, ಪ್ರತಿ ವರ್ಷ ವನಭೋಜನದ ದಿನದಂದು ಭಗವಂತನು ಅರಮನೆಗೆ ಭೇಟಿ ನೀಡಬೇಕೆಂದು ತೀರ್ಮಾನವಾಯಿತು. ಇಂದಿಗೂ ಶ್ರೀ ವಿಠಲನು (ವಿಗ್ರಹವು) ಪ್ರತಿ ವರ್ಷ 10 ಮೈಲಿ ದೂರದ ಪಡುಪಣಂಬೂರಿಗೆ ತೆರಳಿ ಸಾವಂತನ ವಂಶಸ್ಥರ ಪ್ರಾರ್ಥನೆಯನ್ನು ಸ್ವೀಕರಿಸಿ ಅವರನ್ನು ಆಶೀರ್ವದಿಸುವನು.

ಉಗ್ರ ನರಸಿಂಹನ ರೂಪ ಲಕ್ಷಣ

ಮುಲ್ಕಿ ಉಗ್ರ ನರಸಿಂಹನಿಗೆ ಅಷ್ಟ ಬಾಹುಗಳು- ಎರಡು ಬಾಹುಗಳು ಹಿರಣ್ಯಕಷಿಪುವಿನ ಕರುಳನ್ನು ಆಭರಣದಂತೆ ಹಿಡಿದುಕೊಂಡಿರುವುದು, ಎರಡು ಬಾಹುಗಳು ಚಕ್ರ ಮತ್ತು ಶಂಖವನ್ನು ಹೊಂದಿರುವುದು, ಎರಡು ಬಾಹುಗಳು ರಾಕ್ಷಸನ ಉದರವನ್ನು ಬಗಿಯುತ್ತಿರುವುದು ಮತ್ತು ಎರಡು ಬಾಹುಗಳು ದಾನವನನ್ನು ಬಿಗಿಯಾಗಿ ಹಿಡಿದುಕೊಂಡಿರುವುದು. ಶ್ರೀ ನರಸಿಂಹನ ಎದೆಯ ಮೇಲೆ ಭೃಗು ಲಾಂಛನವನ್ನು ನೋಡಬಹುದು.

ಪ್ರತಿಷ್ಠಾ ಪೌರ್ಣಿಮೆ ಉತ್ಸವ

ಪ್ರತಿ ವರ್ಷ ನಡೆಯುವ ಶ್ರೀ ನರಸಿಂಹನ ಪ್ರತಿಷ್ಠಾಪನೆ ಮಹೋತ್ಸವವು ಮಂದಿರದ ಪ್ರಮುಖ ಉತ್ಸವ. ಈ ಸಂದರ್ಭದಲ್ಲಿ ಭಗವಂತನ ವಿಗ್ರಹವನ್ನು ಗರ್ಭಗುಡಿಯ ಮಧ್ಯೆ ಅಂಗಣಕ್ಕೆ ಕರೆತರಲಾಗುವುದು. ಇಡೀ ದಿನ 25 ಸಾವಿರಕ್ಕೂ ಹೆಚ್ಚು ಎಳನೀರಿನ ಅಭಿಷೇಕ ನೆರವೇರಿಸಲಾಗುತ್ತದೆ. ಭಗವಂತನ ಪೂರ್ಣ ದರ್ಶನ ಪಡೆಯಲು ಅಂದು ಭಕ್ತರ ಮಹಾಪೂರವೇ ಹರಿಯುತ್ತದೆ. ಎಲ್ಲರಿಗೂ ಅಭಿಷೇಕದ ಎಳನೀರು ತೀರ್ಥ ಲಭ್ಯ. ರಾತ್ರಿ ಇಡೀ ದರ್ಶನವಿರುತ್ತದೆ. ಅನಂತರ ರಥದಲ್ಲಿ ಭಗವಂತನ ಉತ್ಸವ. ಅದು ಶ್ರೀ ನರಸಿಂಹನ ದಿನವಾದರೂ ಶ್ರೀ ಬಿಂದುಮಾಧವನೇ ಉತ್ಸವ ಮೂರ್ತಿ.

ಶ್ರೀ ವಿಜಯೀಂದ್ರ ತೀರ್ಥರು

“ಸರ್ವ ತಂತ್ರ ಸ್ವತಂತ್ರ”ರಾಗಿದ್ದ ಶ್ರೀ ವಿಜಯೀಂದ್ರ ತೀರ್ಥರು 64 ಕಲೆಗಳಲ್ಲಿ ಪಾರಂಗತರಾಗಿದ್ದರು ಮತ್ತು ಮೋಹಕ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರು ನೂರಾರು ಪುಸ್ತಕಗಳ ಕರ್ತೃಗಳಾಗಿದ್ದಾರೆ. ಸಂನ್ಯಾಸ ಸ್ವೀಕರಿಸುವ ಮುನ್ನ ಅವರ ಹೆಸರು ವಿಠ್ಠಲಾಚಾರ್ಯ ಮತ್ತು ಅವರು ಸಾರಸ್ವತ ಬ್ರಾಹ್ಮಣರಾಗಿದ್ದರು.

ಶ್ರೀ ವ್ಯಾಸ ತೀರ್ಥರ ಕೃಪೆಯಿಂದ 1517ರಲ್ಲಿ ಅವತರಿಸಿದ ಶ್ರೀ ವಿಜಯೀಂದ್ರ ತೀರ್ಥರು ಶ್ರೀ ವ್ಯಾಸ ತೀರ್ಥರಿಂದಲೇ ಶಿಕ್ಷಣ ಪಡೆದರು. ಆನಂತರ ವ್ಯಾಸ ತೀರ್ಥರು ಅವರನ್ನು ಶ್ರೀ ಸುರೇಂದ್ರ ತೀರ್ಥರಿಗೆ ಒಪ್ಪಿಸಿದರು. ತಮ್ಮ ಗುರುಗಳಿಗೆ ಸೇವೆ ಸಲ್ಲಿಸಿದ ಶ್ರೀ ವಿಜಯೀಂದ್ರರು ಅನೇಕ ವಿದ್ವಾಂಸರನ್ನು ಪರಾಜಯಗೊಳಿಸಿದರು. ಅಗ್ರಮಾನ್ಯ ವಿದ್ವಾಂಸರಾಗಿದ್ದ ಅವರು ದ್ವೈತ ಪಂಥದ ಅತ್ಯಂತ ಪಾಂಡಿತ್ಯ ಪೂರ್ಣ ಲೇಖಕರಾಗಿದ್ದರು. ಅವರು ಶ್ರೀ ವ್ಯಾಸ ತೀರ್ಥರ ಪ್ರಮುಖ ಶಿಷ್ಯರಾಗಿದ್ದರು. ಶ್ರೀ ರಾಘವೇಂದ್ರ ತೀರ್ಥರ ಪರಮ ಗುರುಗಳಾಗಿದ್ದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi