ಭಕ್ತಿವೇದಾಂತ ದರ್ಶನ ಓದುಗರಿಗಾಗಿ ವಿಭಿನ್ನ ಪರಾಟ ಭಕ್ಷ್ಯಗಳನ್ನು ತಯಾರಿಸುವ ವಿಧಾನವನ್ನು ಶ್ರೀಮತಿ ಎಸ್.ವಿ.ಗಾಯಿತ್ರಿಯವರು ಬರೆದು ಕೊಟ್ಟಿದ್ದಾರೆ. ನೀವೂ ತಯಾರಿಸಿ ಭಗವಂತನಿಗೆ ಅರ್ಪಿಸಿ ಅವುಗಳ ರುಚಿಯನ್ನು
ಸವಿಯಿರಿ.
ಪರಾಟ

ಬೇಕಾಗುವ ಪದಾರ್ಥ:
ಮೈದಾ ಹಿಟ್ಟು – 500 ಗ್ರಾಂ
ವನಸ್ಪತಿ – 2 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಖಾದ್ಯತೈಲ – ಕರಿಯಲು ಬೇಕಾಗುವಷ್ಟು
ಮಾಡುವ ವಿಧಾನ : ಮೈದಾ ಹಿಟ್ಟನ್ನು ಉಪ್ಪು ಹಾಗೂ ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಮೃದುವಾಗಿರುವಂತೆ ಕಲಸಿ. ಅನಂತರ ತೆಳ್ಳಗಿನ ಶುಭ್ರ ಬಟ್ಟೆ ಮುಚ್ಚಿ ಒಂದು ಗಂಟೆ ಇಡಿ. ಅದನ್ನು ಹದಗಾತ್ರ ಉಂಡೆಗಳನ್ನಾಗಿ ಮಾಡಿಕೊಂಡು ಸುಮಾರು 7-8 ಇಂಚು ಅಗಲದ ಚಪಾತಿಗಳನ್ನು ಲಟ್ಟಿಸಿ ಮೇಲೆ ವನಸ್ಪತಿ ಸವರಿ ಲಟ್ಟಿಸಿ.
ಚಪಾತಿಯ ಮಧ್ಯಭಾಗದಿಂದ ಅಂಚಿನವರೆಗೆ ಚಾಕುವಿನಿಂದ ಒಂದು ಗೆರೆ ಎಳೆದು ಕೊಯ್ದಿರಿ, ಕತ್ತರಿಸಿದ ಒಂದು ಅಂಚನ್ನು ಸುರುಳಿ ಸುತ್ತಿಕೊಂಡು ಇಡೀ ಚಪಾತಿ ಕೋನ್ ಆಕೃತಿ ಬರುವಂತೆ ಮಾಡಿ. ಅದನ್ನು ಅಂಗೈಗಳಿಂದ ಒತ್ತಿ ತ್ರಿಕೋಣಾಕೃತಿ ಮಾಡಿ, ಅನಂತರ ಅದನ್ನು ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.
ಆಲೂಗಡೆ ಪರಾಟ

ಬೇಕಾಗುವ ಪದಾರ್ಥ : (ಹೂರಣಕ್ಕೆ)
ಆಲೂಗಡ್ಡೆ – 4-5 (ಹದಗಾತ್ರದ್ದು)
ಕೊತ್ತಂಬರಿ ಸೊಪ್ಪು – 1 ಸಣ್ಣ ಕಂತೆ
ಗರಂ ಮಸಾಲೆ ಪುಡಿ – 2 ಟೀ ಚಮಚ
ನಿಂಬೆಹಣ್ಣು – 1/2 ಹೋಳು
ಹಸಿಮೆಣಸಿನಕಾಯಿ – 3-4
ಖಾದ್ಯ ತೈಲ – 5-6 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಉದ್ದಿನ ಬೇಳೆ – 1 ಟೀ ಚಮಚ
ಕಡಲೆ ಬೇಳೆ – 1 ಟೀ ಚಮಚ
ಸಾಸಿವೆ – 1/2 ಚಮಚ
ಬೇಕಾಗುವ ಪದಾರ್ಥ : (ಪರಾಟಕ್ಕೆ)
ಗೋಧಿಹಿಟ್ಟು – 250 ಗ್ರಾಂ
ತುಪ್ಪ – 8-10 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ. ಸಿಪ್ಪೆತೆಗೆದು ಪುಡಿ ಮಾಡಿ. ಖಾದ್ಯ ತೈಲ ಬಿಸಿ ಮಾಡಿ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕಡಲೇ ಬೇಳೆ ಒಗ್ಗರಣೆ ಮಾಡಿ. ಅನಂತರ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಹಾಕಿ 3-4 ನಿಮಿಷ ಹುರಿದು ಕಿವಿಚಿದ ಆಲೂಗಡ್ಡೆ, ಗರಂಮಸಾಲೆ ಪುಡಿ ಸೇರಿಸಿ. ನಿಂಬೆರಸ ಹಿಂಡಿ ಐದು ನಿಮಿಷ ಬಿಸಿಮಾಡಿ.
ಆನಂತರ ಇದನ್ನು ಒಂದು ಅಗಲವಾದ ತಟ್ಟೆಗೆ ಹಾಕಿ ಆರಿದ ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ತೆಗೆದಿಟ್ಟುಕೊಳ್ಳಿ. ಈಗ ಗೋಧಿಹಿಟ್ಟಿಗೆ ತುಪ್ಪ ಹಾಗೂ ಉಪ್ಪನ್ನು ಹಾಕಿ ಹಿಟ್ಟನ್ನು ನೀರಿನಲ್ಲಿ ಚಪಾತಿ ಹಿಟ್ಟಿನಂತೆ ಗಟ್ಟಿಯಾಗಿ ಕಲಸಿ ಚೆನ್ನಾಗಿ ನಾದಿ ಉಂಡೆಗಳನ್ನು ಮಾಡಿ ಲಟ್ಟಿಸಿ. ಪ್ರತಿ ಹಾಳೆಗೆ ಎಣ್ಣೆ ಅಥವಾ ತುಪ್ಪ ಹಚ್ಚಿ ಅದರಲ್ಲಿ ಆಲೂಗಡ್ಡೆ ಪಲ್ಯದ ಹೂರಣದ ಉಂಡೆಗಳನ್ನಿಟ್ಟು ಹೆಚ್ಚು ದಪ್ಪವೂ ಆಗದಂತೆ ಅಥವಾ ಹೆಚ್ಚು ತೆಳ್ಳಗೂ ಆಗದಂತೆ ಲಟ್ಟಿಸಿ.
ಸಣ್ಣ ಉರಿಯಲ್ಲಿ ಎರಡೂ ಬದಿಗಳನ್ನು ಚಪಾತಿ ತವೆಯ ಮೇಲೆ ಬೇಯಿಸಿ. ಇದರೊಂದಿಗೆ ತೆಂಗಿನಕಾಯಿ ಅಥವಾ ಯಾವುದಾದರೂ ಚೆಟ್ನಿ (ಬೆಳ್ಳುಳ್ಳಿ, ಈರುಳ್ಳಿ ಬಳಸದೆ ಮಾಡಿ ಭಗವಂತನಿಗೆ ನೈವೇದ್ಯ ಮಾಡಿ ಸ್ವೀಕರಿಸಿ.
ಮೆಂತ್ಯದ ಥೇಪ್ಲಾ

ಬೇಕಾಗುವ ಪದಾರ್ಥ :
ಗೋಧಿಹಿಟ್ಟು – 250 ಗ್ರಾಂ
ಜೋಳದ ಹಿಟ್ಟು – 100 ಗ್ರಾಂ
ಮೆಣಸಿನಕಾಯಿ ಪುಡಿ – 1/2 ಟೀ ಚಮಚ
ಧನಿಯಾ ಪುಡಿ – 1/2 ಟೀ ಚಮಚ
ಅರಿಶಿನ ಪುಡಿ – 1/2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು,
1 ಚಿಕ್ಕ ಕಂತೆ ಮೆಂತ್ಯ ಸೊಪ್ಪು
ಖಾದ್ಯ ತೈಲ – ಹುರಿಯಲು ಬೇಕಾಗುವಷ್ಟು
ಮಾಡುವ ವಿಧಾನ : ಎರಡೂ ಹಿಟ್ಟನ್ನು ಚೆನ್ನಾಗಿ ಜರಡಿಹಿಡಿದು ಶುದ್ಧಗೊಳಿಸಿ. ಉಪ್ಪು, ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಅರಿಶಿನ, ಸಣ್ಣಗೆ ಹೆಚ್ಚಿದ ಮೆಂತ್ಯದ ಸೊಪ್ಪು ಸೇರಿಸಿ. ಸಾಕಷ್ಟು ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಇಡಿ. ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ತೆಳುವಾಗಿ ಲಟ್ಟಿಸಿ ತವದ ಮೇಲೆ ಬೇಯಿಸಿ. ಎರಡೂ ಬದಿ ಚೆನ್ನಾಗಿ ಬೆಂದ ಮೇಲೆ ಎಣ್ಣೆ ಹಚ್ಚಿ ಬೇಯಸಿ ತೆಗೆಯಿರಿ. ಕೃಷ್ಣಾರ್ಪಣ ಮಾಡಿ ಸೇವಿಸಿ.
ನಾನ್ ರೋಟಿ

ಬೇಕಾಗುವ ಪದಾರ್ಥ :
ಮೈದಾ ಹಿಟ್ಟು – 250 ಗ್ರಾಂ
ಬೇಕಿಂಗ್ ಸೋಡಾ – 2 ಚಿಟಿಕೆ
ಖಾದ್ಯ ತೈಲ – 4-5 ಟೇಬಲ್ ಚಮಚ
ಮೊಸರು – 1/2 ಬಟ್ಟಲು
ಸಕ್ಕರೆ – 1 ಟೇಬಲ್ ಚಮಚ
ಬಿಳಿ ಎಳ್ಳು – 2 ಟೀ ಚಮಚ
ಹಾಲು – 1/2 ಬಟ್ಟಲು
ಮಾಡುವ ವಿಧಾನ : ಹಿಟ್ಟನ್ನು ಜರಡಿ ಹಿಡಿದು ಅದಕ್ಕೆ ಸೋಡಾ ಉಪ್ಪು ಬೆರೆಸಿ. ಹಾಲು, ಸಕ್ಕರೆ ಸೇರಿಸಿ. ಅನಂತರ ಮೊಸರು ಸೇರಿಸಿ ಚೆನ್ನಾಗಿ ನಾದಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಮೃದುವಾಗಿ ನಾದಿ. ಅನಂತರ ಒಂದು ಗಂಟೆ ನೆನೆಸಿಡಿ. ಈಗ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ.
ಮೇಲೆ ಎಣ್ಣೆ ಹಾಕಿ ಮತ್ತೆ 20 ನಿಮಿಷ ಹಾಗೇ ಇಡಿ. ಅನಂತರ ಸ್ವಲ್ಪ ದಪ್ಪಕ್ಕೆ ಬಾದಾಮಿ ಆಕಾರದಲ್ಲಿ ಲಟ್ಟಿಸಿ ಎಳ್ಳು ಮೇಲಿನಿಂದ ಹಾಕಿ 6-7 ಇಂಚು ಅಗಲಕ್ಕೆ ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆಯ ಎಲೆಯ ಮೇಲೆ ತಟ್ಟಿ ಅಥವಾ ಲಟ್ಟಿಸಿ. ಚಪಾತಿ ತವ ಮೇಲೆ ಎರಡೂ ಬದಿ ಚೆನ್ನಾಗಿ ಬೇಯಸಿ ತಂದೂರಿ ಒಲೆಯಿದ್ದರೆ ಅದರ ಮೇಲೆ ಬೇಯಿಸಿ.
ಇದನ್ನು ದಾಲ್ ಅಥವಾ ಮಿಶ್ರ ತರಕಾರಿಗಳ ಕುರ್ಮಾದೊಂದಿಗೆ ಭಗವಂತನಿಗೆ ಅರ್ಪಿಸಿ ಸ್ವೀಕರಿಸಿ.
ದಾಲ್

ಬೇಕಾಗುವ ಪದಾರ್ಥ :
ತೊಗರಿ ಬೇಳೆ – 150 ಗ್ರಾಂ
ಹೆಸರು ಬೇಳೆ – 150 ಗ್ರಾಂ
ಅರಿಶಿನ ಪುಡಿ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – 1 ಟೀ ಚಮಚ
ಮೆಣಸಿನ ಕಾಯಿ ಪುಡಿ – 1 ಟೀ ಚಮಚ (ಅಗತ್ಯಕ್ಕೆ ತಕ್ಕಷ್ಟು)
ಕರಿಬೇವು – 1 ಎಸಳು
ಒಣಮೆಣಸಿನಕಾಯಿ – 2-3
ಕರಿಮೆಣಸುಕಾಳು – 3-4
ಖಾದ್ಯ ತೈಲ – 2-3 ಟೇಬಲ್ ಚಮಚ
ಮಾಡುವ ವಿಧಾನ : ಮೊದಲು ಬೇಳೆಗಳನ್ನು (ದಾಲ್) ಚೆನ್ನಾಗಿ ತೊಳೆದು ಬೇಯಿಸಿ. ಅದನ್ನು ಒಂದು ಸೌಟಿನಲ್ಲಿ ಅಥವಾ ಕಡೆಗೋಲಿನಿಂದ ಹದವಾಗಿ ಕಡೆಯಿರಿ. ಹೆಚ್ಚು ಗಟ್ಟಿಯೂ ಅಲ್ಲದ ತೆಳುವೂ ಅಲ್ಲದ ಹದವಾದ ದ್ರಾವಣ ರೂಪಕ್ಕೆ ತನ್ನಿ.
ಅನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ ಚೂರಿನ ಒಗ್ಗರಣೆ ಕೊಡಿ. ಉರಿ ಆರಿಸಿ ಅದೇ ಎಣ್ಣೆಯಲ್ಲೇ ಅರಿಶಿನ ಬಿಸಿಮಾಡಿ ಹಾಗೇ ಕರಿಮೆಣಸಿನ ಕಾಳನ್ನು ಪುಡಿಮಾಡಿ ಹುರಿಯಿರಿ.
ಅನಂತರ ಬೇಳೆಯ ದ್ರಾವಣಕ್ಕೆ ಇದನ್ನು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೆಣಸಿನಕಾಯಿ ಪುಡಿ ಸೇರಿಸಿ 5-6 ನಿಮಿಷ ಕುದಿಸಿ ಅನಂತರ ಇಳಿಸಿ. ಇದು ಮೆಂತ್ಯ ಥೇಪ್ಲಾ ಪರಾಟದೊಡನೆ ಕೂಡಾ ಭಗವಂತನಿಗೆ ಅರ್ಪಿಸಿ ಸೇವಿಸಬಹುದು.






Leave a Reply