ಭಕ್ತಿವೇದಾಂತ ದರ್ಶನ ಓದುಗರಿಗಾಗಿ ವಿಭಿನ್ನ ಪಾಯನಗಳನ್ನು ತಯಾರಿಸುವ ವಿಧಾನವನ್ನು ಶ್ರೀಮತಿ ಎಸ್.ಪಿ. ಗಾಯತ್ರಿ ಶೆಣೈರವರು ಸಂಗ್ರಹಿಸಿಕೊಟ್ಟಿದ್ದಾರೆ. ನೀವೂ ತಯಾರಿಸಿ ಭಗವಂತನಿಗೆ ಅರ್ಪಿಸಿ ಅವುಗಳ ರುಚಿಯನ್ನು ಸವಿಯಿರಿ.
ಪಾಯಸ ವಿಶೇಷ
ಗೋಧಿ ಪಾಯಸ

ಬೇಕಾಗುವ ಪದಾರ್ಥಗಳು :
250 ಗ್ರಾಂ ಜವೆಗೋಧಿ (ಬೋಕನ್ ವೀಟ್)
300 ಮಿಲಿ ಲೀಟರ್ ಹಾಲು
ಅರ್ಧ ಹೋಳು ತೆಂಗಿನಕಾಯಿ ತುರಿ
1 ಅಚ್ಚು ಬೆಲ್ಲದ ಪುಡಿ
50 ಗ್ರಾಂ ಗೋಡಂಬಿ
50 ಗ್ರಾಂ ದ್ರಾಕ್ಷಿ
1/4 ಟೀ ಚಮಚ ಜಾಯಿಕಾಯಿ ಪುಡಿ ಅಥವಾ
1/4 ಟೀ ಚಮಚ ಏಲಕ್ಕಿ ಪುಡಿ
1/2 ಟೀ ಚಮಚ ತುಪ್ಪ
ಮಾಡುವ ವಿಧಾನ: ಗೋಧಿಗೆ ಸ್ವಲ್ಪ ನೀರು ಚುಮುಕಿಸಿ 5 ನಿಮಿಷ ನೆನೆಸಿಡಿ. ಅನಂತರ ಒರಳಿನಲ್ಲಿ ಕುಟ್ಟಿ ಹೊಟ್ಟು ತೆಗೆದು ಗೋಧಿರವೆಯನ್ನು ಬೇರ್ಪಡಿಸಿಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಸಿದ್ಧವಾಗಿ ದೊರೆಯುವ ದಪ್ಪ ಗೋಧಿ ರವೆ (ಬ್ರೋಕನ್ ವೀಟ್) ಯನ್ನು ಉಪಯೋಗಿಸಬಹುದು. ಈಗ ಶುದ್ಧಗೊಳಿಸಿದ ಗೋಧಿರವೆಯನ್ನು ನೀರಿನಲ್ಲಿ ಬೇಯಿಸಿ.
ಕಾಯಿತುರಿ, ಬೆಲ್ಲ ಹಾಗೂ ಜಾಯಿಕಾಯಿ ಪುಡಿ ಅಥವಾ ಏಲಕ್ಕಿ ಪುಡಿಯನ್ನು ಒಟ್ಟಿಗೆ ನುಣ್ಣಗೆ ರುಬ್ಬಿಟ್ಟುಕೊಂಡು 4-5 ಬಟ್ಟಲು ನೀರಿನಲ್ಲಿ ಚೆನ್ನಾಗಿ ಕದಡಿ. ಬೆಂದ ಗೋಧಿಗೆ ಈ ಮಿಶ್ರಣವನ್ನು ಬೆರೆಸಿ ಹಾಗೂ 10 ನಿಮಿಷ ಕುದಿಸಿ ತುಪ್ಪ ಕಾಯಿಸಿ, ಗೋಡಂಬಿ ಹಾಗೂ ದ್ರಾಕ್ಷಿ ಹುರಿದು ಇದಕ್ಕೆ ಬೆರೆಸಿ ಇನ್ನೆರಡು ನಿಮಿಷ ಪಾಯಸವನ್ನು ಕುದಿಸಿ, ಸಿದ್ಧಗೊಂಡ ಗೋಧಿ ಪಾಯಸವನ್ನು ಶ್ರೀಕೃಷ್ಣನಿಗರ್ಪಿಸಿ ಸ್ವೀಕರಿಸಿ.
ಬೂದುಗುಂಬಳಕಾಯಿ ಪಾಯಸ

ಬೇಕಾಗುವ ಪದಾರ್ಥಗಳು :
500 ಗ್ರಾಂ ಬೂದುಗುಂಬಳಕಾಯಿ
200 ಗ್ರಾಂ ಗೋದಿ ಶಾವಿಗೆ
300 ಮಿಲಿ ಲೀಟರ್ ಹಾಲು
250 ಗ್ರಾಂ ಸಕ್ಕರೆ
10-15 ಗೋಡಂಬಿ
15-20 ಒಣದ್ರಾಕ್ಷಿ
8-10 ಟೀ ಚಮಚ ತುಪ್ಪ
50 ಗ್ರಾಂ ಬಾದಾಮಿ
ಮಾಡುವ ವಿಧಾನ : ಬೂದು ಕುಂಬಳಕಾಯಿ ತೊಳೆದು ಸಿಪ್ಪೆ ತೆಗೆದಿಡಿ. ಅನಂತರ ಇದನ್ನು ಸಣ್ಣಗೆ ತುರಿದು ಅಥವಾ ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ ಹಬೆಯಲ್ಲಿ ಬೇಯಿಸಿ. ಬಾದಾಮಿಯನ್ನು 1 ನಿಮಿಷ ನೀರಿನಲ್ಲಿ ನೆನೆಸಿ, ಸಿಪ್ಪೆ ಬಿಡಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ ದ್ರಾಕ್ಷಿ ಗೋಡೆಯನ್ನು ಹುರಿದಿಟ್ಟುಕೊಳ್ಳಿ.
ಇದಕ್ಕೆ ಮತ್ತಷ್ಟು ತುಪ್ಪ ಹಾಕಿ ಬಿಸಿ ಮಾಡಿ ಶಾವಿಗೆ ಸ್ವಲ್ಪ ಕಂದುಬಣ್ಣಕ್ಕೆ ತಿರುಗುವವರೆಗೂ ಹುರಿದಿಟ್ಟುಕೊಳ್ಳಿ. ಈಗ ಹಾಲಿಗೆ 2-3 ಲೋಟ ನೀರು ಬೆರೆಸಿ ಬೆಂದ ಕುಂಬಳಕಾಯಿ ಹಾಗೂ ಶಾವಿಗೆಯನ್ನು ಹಾಲಿನಲ್ಲಿ 10 ನಿಮಿಷ ಬೇಯಿಸಿ. ಸಕ್ಕರೆ ಹಾಗೂ ಬಾದಾಮಿಯನ್ನು ನುಣ್ಣಗೆ ರುಬ್ಬಿಈ ಮಿಶ್ರಣಕ್ಕೆ ಬೆರೆಸಿ, ಮತ್ತೆ 5 ನಿಮಿಷ ಕುದಿಸಿ ಕೆಳಗಿಳಿಸಿ. ಹಾಗೂ ಹುರಿದ ದ್ರಾಕ್ಷಿಗೋಡಂಬಿಯನ್ನು ಬೆರೆಸಿ ಕೇಶವನಿಗೆ ಸಮರ್ಪಿಸಿ ಪ್ರಸಾದವನ್ನು ಸ್ವೀಕರಿಸಿ.
ಹೆಸರುಬೇಳೆ ಪಾಯಸ

ಬೇಕಾಗುವ ಪದಾರ್ಥಗಳು :
200 ಗ್ರಾಂ ಹೆಸರುಬೇಳೆ
1 ಅಚ್ಚು ಬೆಲ್ಲ
1 ತೆಂಗಿನಕಾಯಿ
1 ಟೀ ಚಮಚ ಏಲಕ್ಕಿ ಪುಡಿ
50 ಗ್ರಾಂ ಗೋಡಂಬಿ
50 ಗ್ರಾಂ ದ್ರಾಕ್ಷಿ
1/2 ಟೇಬಲ್ ಚಮಚ ತುಪ್ಪ
ಮಾಡುವ ವಿಧಾನ : ಹೆಸರುಬೇಳೆ ಪಾಯಸವನ್ನು 2-3 ವಿಧಾನಗಳಲ್ಲಿ ಮಾಡಬಹುದು. ಅವುಗಳಲ್ಲಿ 2 ವಿಧಾನವನ್ನು ಇಲ್ಲಿ ಕೊಟ್ಟಿದೆ. ನೀವೂ ಪ್ರಯೋಗಿಸಿ – ಕೃಷ್ಣನಿಗೆ ಪ್ರಸಾದ ರೂಪದಲ್ಲಿ ಸಮರ್ಪಿಸಿ.
ವಿಧಾನ – 1: ಹೆಸರುಬೇಳೆಯನ್ನು ಹದವಾಗಿ ಕೆಂಪುಬಣ್ಣಕ್ಕೆ ಬರುವವರೆಗೂ ಹುರಿದಿಡಿ. ತೆಂಗಿನಕಾಯಿ ತುರಿಯನ್ನು ರುಬ್ಬಿ ಅದರಿಂದ ತೆಂಗಿನ ಹಾಲನ್ನು ಬೇರ್ಪಡಿಸಿಟ್ಟಿಕೊಳ್ಳಿ ಹಾಗೂ ಚರಟವನ್ನು ಬಿಸಾಡಿ. ಒಂದು ದಪ್ಪತಳದ ಪಾತ್ರೆಯಲ್ಲಿ ಈ ತೆಂಗಿನಹಾಲನ್ನು 2-3 ಲೋಟ ನೀರಿಗೆ ಬೆರೆಸಿ, ಇದಕ್ಕೆ ಹುರಿದ ಹೆಸರುಬೇಳೆ ಹಾಕಿ ಬೇಯಿಸಿ. ಇದು ಅರ್ಧ ಬೆಂದಾಗಿದೆ ಎನ್ನುವಾಗ ಬೆಲ್ಲದ ಪುಡಿ, ಏಲಕ್ಕಿ ಪುಡಿ ಸೇರಿಸಿ 10 ನಿಮಿಷ ಕುದಿಸಿ. ಅನಂತರ ತುಪ್ಪ ಬಿಸಿಮಾಡಿ ದ್ರಾಕ್ಷಿ, ಗೋಡಂಬಿ ಹುರಿದು ಇದಕ್ಕೆ ಬೆರೆಸಿ. ಈಗ ಹೆಸರುಬೇಳೆ ಪಾಯಸ ಸಿದ್ಧ.
ವಿಧಾನ – 2 : ಈ ಪಾಯಸಕ್ಕೂ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳ ಜೊತೆಗೆ 10-15 ಖರ್ಜೂರದ ಸಣ್ಣ ಸಣ್ಣ ಚೂರುಗಳು ಹಾಗೂ 2 ಬಾಳೆಹಣ್ಣಿನ (ನೇಂದ್ರಬಾಳೆ ಅಥವಾ ಏಲಕ್ಕಿ ಬಾಳೆ ಹಣ್ಣು) ಸಣ್ಣ ಚೂರುಗಳನ್ನು ಹೆಸರುಬೇಳೆ ಅರ್ಧ ಬೆಂದಾಗಿದೆ ಎನ್ನುವಾಗ ಬೆರೆಸಿ, ಅನಂತರ ಬೆಲ್ಲದ ಪುಡಿ, ಏಲಕ್ಕಿ ಪುಡಿ, ದ್ರಾಕ್ಷಿ ಗೋಡಂಬಿಯನ್ನು ಸೇರಿಸಿ. ಮುತ್ತೈದು ನಿಮಿಷ ಕುದಿಸಿದರೆ ಹೆಸರುಬೇಳೆ-ಖರ್ಜೂರ ಪಾಯಸ ಸಿದ್ಧ.
ಅಕ್ಕಿ ಸಪ್ಪೆ ಪಾಯಸ (ಖೀರಿ)

ಸಾಮಾನ್ಯವಾಗಿ ದಕ್ಷಿಣಕನ್ನಡ ಜಿಲ್ಲೆಯವರು ಇದನ್ನು ಹೆಚ್ಚಾಗಿ ಮಾಡುತ್ತಾರೆ.
ಬೇಕಾಗುವ ಪದಾರ್ಥಗಳು :
200 ಗ್ರಾಂ ಅಕ್ಕಿ
1/2 ಹೋಳು ತೆಂಗಿನಕಾಯಿ
2-3 ಅರಿಶಿನದ ಎಲೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ : ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಲು ಹಾಕಿ. ಇದಕ್ಕೆ ತೆಂಗಿನಕಾಯಿ ತುರಿಯನ್ನು ರುಬ್ಬಿ, ಸೋಸಿ ತೆಗೆದ ಹಾಲನ್ನು ಬೆರೆಸಿ 10-15 ನಿಮಿಷ ಕುದಿಸಿ. ಈಗ ಅರಿಶಿನದ ಎಲೆ (ಅರಿಶಿನ ಕೊಂಬಿನ ಎಲೆಗಳನ್ನು ಗಂಟುಕಟ್ಟಿ ಈ ಪಾಯಸದಲ್ಲಿ ಹಾಕಿ ಮತ್ತೈದು ನಿಮಿಷ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಕುದಿಸಿ.
ಇದಕ್ಕೆ ಅರಿಶಿನದ ಎಲೆ ಹಾಕುವುದರಿ೦ದ ಅದರ ಪರಿಮಳ ಹೆಚ್ಚಾಗಿರುವುದರಿಂದ ಏಲಕ್ಕಿ ಪುಡಿಯ ಅಗತ್ಯವಿಲ್ಲ. ಮತ್ತು ಸಪ್ಪೆ ಖೀರಿ ಅಥವಾ ಪಾಯಸದೊಂದಿಗೆ ಯಾವುದಾದರೂ ಪಲ್ಯ ಅಥವಾ ಮಸಾಲೆ ಸಾರಿನೊಡನೆ ಬೆರೆಸಿ ಸ್ವೀಕರಿಸಬಹುದು. ಶ್ರೀ ರಾಧಾಕೃಷ್ಣನಿಗೆ ನೈವೇದ್ಯಮಾಡಿ ಸ್ವೀಕರಿಸುವುದನ್ನು ಮರೆಯದಿರಿ.






Leave a Reply