ಪುರಿ ರಥಯಾತ್ರೆ

ಜಗನ್ನಾಥ ಸ್ವಾಮಿಯ ಮಹಾಉತ್ಸವ

ಸುಮಾರು 5000 ವರ್ಷಗಳ ಹಿಂದೆ ಅವತರಿಸಿದ ಶ್ರೀಕೃಷ್ಣನು ಒಮ್ಮೆ ಸೂರ್ಯಗ್ರಹಣದ ಸಂದರ್ಭದಲ್ಲಿ ಯಾಗಗಳನ್ನು ಆಚರಿಸಲು ದ್ವಾರಕೆಯನ್ನು ತೊರೆದು ಕುರುಕ್ಷೇತ್ರಕ್ಕೆ ಬರುತ್ತಾನೆ. ವೃಂದಾವನ ನಿವಾಸಿಗಳು ಆಗ ಅಲ್ಲಿಗೆ ಬರುತ್ತಾರೆ. ಮಾತ್ರವಲ್ಲ, ತಮ್ಮ ಆರಾಧ್ಯೆ ದೈವವನ್ನು ರಥದಲ್ಲಿ ಕುಳ್ಳಿರಿಸಿ ವೃಂದಾವನಕ್ಕೆ ಕರೆದೊಯ್ಯುತ್ತಾರೆ. ಇದರ ದ್ಯೋತಕವಾಗಿ ಪ್ರತಿ ವರ್ಷ ಪುರಿಯಲ್ಲಿ ರಥಯಾತ್ರೆ ನಡೆಯುತ್ತದೆ. ಈ ರಥಯಾತ್ರೆಯ ಕೆಲವು ರೋಚಕ, ಕುತೂಹಲಕಾರಿ ವಿವರಗಳನ್ನು ಓದುಗರಿಗಾಗಿ ನೀಡಿದ್ದಾರೆ ಎಂ.ಎ.ದಯಾಶಂಕರ.

ರಥೋತ್ಸವ, ರಥಯಾತ್ರೆಗಳು ಭಾರತದ ಎಲ್ಲಾ ದೇವಾಲಯಗಳಲ್ಲೂ ಅನೂಚನವಾಗಿ ನಡೆದು ಬಂದಿದೆ. ಈ ರಥೋತ್ಸವಾದಿಗಳಲ್ಲಿ ಅತೀ ಹೆಚ್ಚು ಭಕ್ತಾಧಿಗಳನ್ನು ಆಕರ್ಷಿಸುವುದು ಮತ್ತು ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿರುವುದು ಪುರಿಯ ಜಗನ್ನಾಥ ಸ್ವಾಮಿಯ ರಥಯಾತ್ರೆ.

ಪ್ರತಿ ವರ್ಷ ಆಷಾಢ ಹುಣ್ಣಿಮೆಯ ನಂತರದ ಬಿದಿಗೆಯ ದಿನ ರಥಯಾತ್ರೆ ಮಹೋತ್ಸವ ಜರುಗುತ್ತದೆ.

ಕುಂಭ ಮೇಳದ ಹೊರತಾಗಿ, ಜಗತ್ತಿನ ಬೇರಾವ ಭಾಗದಲ್ಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ನೆರೆಯುವ ಇನ್ನೊಂದು ಉತ್ಸವವಿಲ್ಲ. ಅಕ್ಷರಶಃ ಲಕ್ಷಗಟ್ಟಲೆ ಭಕ್ತರು ಜಮಾಯಿಸಿ, ರಥಾರೂಢ ಭಗವಂತನ ದರ್ಶನದಿಂದ ಅಂದು ಪುನೀತರಾಗುತ್ತಾರೆ.

ರಥಯಾತ್ರೆ, ಅದರ ವೈದಿಕ-ಸಾಂಸ್ಕೃತಿಕ ಹಿನ್ನೆಲೆ ಇಸ್ಕಾನ್‌ನಲ್ಲಿ ರಥಯಾತ್ರೆ ಆರಂಭ ಮುಂತಾದ ವಿವರಗಳನ್ನು ಭಕ್ತಿವೇದಾಂತ ದರ್ಶನದಲ್ಲಿ ವಿವರವಾಗಿ ಪ್ರಕಾಶನ ಮಾಡಲಾಗಿದೆ. ಈ ಲೇಖನದಲ್ಲಿ ಜಗನ್ನಾಥ ಸ್ವಾಮಿಯ ರಥಯಾತ್ರೆಯ ವೈಭೋಗ-ವಿವರಗಳನ್ನು ನೀಡಲು ಯತ್ನಿಸಲಾಗಿದೆ.

ಪೂರ್ವ ತಯಾರಿ

‘ರಥ’ ಎಂಬುದು ದೇವರ ದಿವ್ಯ ವಾಹನ. ಆಗಮೋಕ್ತವಾಗಿ ಇದನ್ನು ತಯಾರಿಸಿ, ಸಂಪ್ರೋಕ್ಷಣಾದಿಗಳಿಂದ ಶುದ್ದೀಕರಿಸಿ, ಪ್ರತಿ ವರ್ಷಾಚರಣೆಯಲ್ಲಿ ಉಪಯೋಗಿಸುವುದು ಎಲ್ಲಾ ದೇವಾಲಯದ ಸಂಪ್ರದಾಯ. ದೇವರ ಗುಡಿಯಂತೆಯೇ ರಥಕ್ಕೂ ಪ್ರತ್ಯೇಕ ರಥ ಮಂದಿರ ನಿರ್ಮಿಸಿ, ರಥವನ್ನು ಸಂರಕ್ಷಿಸಲಾಗುತ್ತದೆ. ಯಾವ ಕಾರಣಕ್ಕೂ ರಥವನ್ನು ಭಿನ್ನ ಮಾಡುವುದಿಲ್ಲ. ತಾನಾಗೇ ಜೀರ್ಣವಾದ ರಥವನ್ನು ಸಹ ಒಡೆಯುವುದಿಲ್ಲ. ರಥವನ್ನು ಪರಂಪರೆಯಿಂದ ರಕ್ಷಿಸಿಕೊಳ್ಳುತ್ತಾರೆ.

ಆದರೆ ಪುರಿಯ ಜಗನ್ನಾಥ ಸ್ವಾಮಿಯ ರಥದ ‘ಕತೆ’ ಬಹಳ ವಿಶಿಷ್ಟವಾಗಿದೆ. ಜಗನ್ನಾಥ ಸ್ವಾಮಿಯ ಈ ರಥಗಳು ಪ್ರತಿ ವರುಷ ನಿರ್ಮಿಸಲ್ಪಡುತ್ತವೆ. ಅಕ್ಷಯ ತೃತೀಯದ ದಿನ ವಿಶೇಷ ಮುಹೂರ್ತದಲ್ಲಿ ರಥ ನಿರ್ಮಾಣ ಆರಂಭವಾಗುತ್ತದೆ. ರಥಯಾತ್ರೆ ಮುಗಿದ ನಂತರ, ಇಡೀ ರಥವನ್ನು ಭಾಗಭಾಗವಾಗಿ ಮಾಡಿ, ಜಗನ್ನಾಥಸ್ವಾಮಿಯ ‘ಭೋಗ’ ತಯಾರಿಸುವ ಅಡುಗೆಮನೆಯ ಉರುವಲಾಗಿ ಬಳಸಲಾಗುತ್ತದೆ.

ರಥಯಾತ್ರೆಯಲ್ಲಿ 3 ಮುಖ್ಯ ರಥಗಳಿರುತ್ತವೆ. ಮೊದಲನೆಯದು ಗಾತ್ರದಲ್ಲಿ ಎಲ್ಲದಕ್ಕಿಂತ ದೊಡ್ಡದು-ನಂದಿ ಘೋಷ, ಶ್ರೀ ಜಗನ್ನಾಥನ ರಥ, ಎರಡನೆಯದು-ತಾಲ ಧ್ವಜ-ಶ್ರೀ ಬಲಭದ್ರನ (ಶ್ರೀಬಲರಾಮ ರಥ. ಮೂರನೆಯದು ಮಧ್ಯಮ ಗಾತ್ರ- ಎರಡು ರಥದ ಮಧ್ಯೆ ಚಲಿಸುವುದು-ದೇವಿರಥ-ಪದ್ಮಧ್ವಜ ಅಥವಾ ಸುಭದ್ರಾ ದೇವಿಯ ರಥ.

ಮೂರು ರಥಗಳನ್ನು ಇಂತಿಷ್ಟೆ ಮರದ ಹಲಗೆ-ತುಂಡುಗಳಿಂದ ಇಂತಹದೇ ಕ್ರಮದಲ್ಲಿ ನಿರ್ಮಿಸಬೇಕೆಂಬ ಕಟ್ಟಳೆಗಳಿವೆ. ಜಗನ್ನಾಥ ಸ್ವಾಮಿಯ ರಥವನ್ನು ಒಟ್ಟು 742 ಮರದ ಹಲಗೆ, ತುಂಡುಗಳನ್ನು ಉಪಯೋಗಿಸಿ ರಚಿಸಿದರೆ (ಚಕ್ರದಿಂದ ಕಲಶದ ವರೆಗಿನ ಸಮಗ್ರ ಸುರಂಟೆಯನ್ನು ಪರಿಗಣಿಸಿ ಈ ಲೆಕ್ಕ!) ಬಲಭದ್ರ ಸ್ವಾಮಿಯ ರಥವು, 731 ಮರದ ಹಲಗೆ ತುಂಡುಗಳಿಂದ ಮತ್ತು ಸುಭದ್ರ ದೇವಿಯ ರಥವು 711 ಮರದ ಹಲಗೆ ತುಂಡುಗಳಿಂದ ನಿರ್ಮಾಣವಾಗುತ್ತದೆ.

ಶತಮಾನಗಳಿಂದ ನಡೆದು ಬಂದಿರುವ ಈ ರಥ ನಿರ್ಮಾಣವು ಪರಂಪರವಾಗಿ ಬಂದಿರುವ 42 ವಂಶಗಳ ಸರಿಸುಮಾರು, 2700 ಕುಶಲ ಕರ್ಮಿಗಳ ಸೇವೆಯಾಗಿದೆ. ಚಕ್ರದ ನಿರ್ಮಾಣವು ಒಂದು ವಂಶದ ಕೆಲಸವಾದರೆ, ಪೀಠದ ನಿರ್ಮಾಣ ಇನ್ನೊಂದು ವಂಶದ ಕೆಲಸವಾಗಿದೆ. ಕಲಶದ ನಿರ್ವಹಣೆ ಮತ್ತೊಂದು ವಂಶದ ಪಾರುಪತ್ಯಕ್ಕೆ ಸೇರಿದೆ. ಇದು ಎಷ್ಟು ಶ್ರದ್ಧೆ ಸಂಭ್ರಮಗಳಿಂದ ನಡೆದು ಬಂದಿದೆಯೆಂದರೆ, ಒಟ್ಟಾರೆ ರಥದ ಎತ್ತರ ಇಷ್ಟೇ ಇರಬೇಕೆಂದು ನಿಶ್ಚಯವಾಗಿದ್ದು, ಬೇರೆ, ಬೇರೆ, ಗುಂಪುಗಳಿಂದ ನಿರ್ಮಾಣವಾಗಿದ್ದರೂ ಸಹ, ಅದೇ ಎತ್ತರವನ್ನು ತಪ್ಪದೆ ಕಾಯ್ದುಕೊಳ್ಳಲಾಗುತ್ತದೆ.

ರಥದ ವಿವರಗಳು

ಜಗನ್ನಾಥ, ಹೆಸರೇ ಹೇಳುವಂತೆ, ಜಗತ್ತಿಗೆ ಸ್ವಾಮಿ. ಅವನ ಈ ಬೃಹತ್ ರಥೋತ್ಸವಕ್ಕೆ, ಬೃಹತ್ ರಥಗಳ ನಿರ್ಮಾಣವಾಗುತ್ತದೆ. ಜಗನ್ನಾಥ ಸ್ವಾಮಿಯ ರಥವನ್ನು ಗರುಡ ಧ್ವಜ, ನಂದಿ ಘೋಷ ಎಂದು ಕರೆಯುತ್ತಾರೆ. ರಥದ ಮುಂದಣ ಪತಾಕೆಗಳಲ್ಲಿ ಗರುಡ ವೈನತೇಯನ ಚಿತ್ರಗಳಿರುತ್ತದೆ. ಈ ರಥದ ಚಾಲಕನಿಗೆ ‘ಮತಾಲಿ’ ಎಂದು ಹೆಸರು.

ಹದಿನಾರು ಬೃಹತ್ ಅಚ್ಚು ಮತ್ತು ಗಾಲಿಗಳ ಮೇಲೆ, ರಥದ ನಿರ್ಮಾಣವಾಗಿರುತ್ತದೆ. ಪ್ರತಿ ಚಕ್ರದಲ್ಲಿ ಹದಿನಾರು ‘ಸ್ಟೋಕ್ಸ್’ ಇರುತ್ತದೆ. ಈ ರಥದ ಅಭಿಮಾನಿ ಋಷಿ- ‘ಪಾಂಡು’. ನಾಲ್ಕು ದ್ವಾರಗಳಿರುವ ಈ ರಥ 23 ಘನ ಅಡಿಗಳ ಎತ್ತರವಿರುತ್ತದೆ. ರಥದ ಎಲ್ಲೆಡೆ ಅಸಂಖ್ಯ ಪತಾಕೆಗಳು, ವಿಗ್ರಹಗಳು ಇರುತ್ತವೆ. ಪ್ರಧಾನ ಪತಾಕೆಯನ್ನು ರಕ್ತ ಚಂದನ ಮರದಿಂದ ಮಾಡಿದ ಸ್ಥಂಬದ ಮೇಲೆ ನಿಲ್ಲಿಸಿರುತ್ತಾರೆ. ಕೊಕ್ಕಿನಲ್ಲಿ ಹಾವನ್ನು ಕಚ್ಚಿ ಹಿಡಿದಿರುವ ಗರುಡನ ವರ್ಣಚಿತ್ರವನ್ನು ಇದರಲ್ಲಿ ಬಿಡಿಸಿರುತ್ತಾರೆ.

ಇಡೀ ರಥವನ್ನು ಮೂವತ್ತೆರಡು ಭಾಗವಾಗಿ ವಿಂಗಡಿಸಲಾಗಿದೆ. ಪ್ರತಿ ಭಾಗಕ್ಕೂ ಒಬ್ಬರು ಅಧಿದೇವತೆ ಇರುತ್ತಾರೆ. ಉದಾ : ಭದ್ರ ಪೀಠ-ಕೂರ್ಮ ದೇವತೆ, ಕಲಶ-ಬ್ರಹ್ಮದೇವತೆ ಹೀಗೆ.

ಅತೀ ಮುಖ್ಯವಾದ ಅಂಶವೆಂದರೆ, ಬೇರೆಲ್ಲಾ ರಥಗಳಿಗೆ 4 ಚಕ್ರಗಳಿದ್ದರೆ, ಜಗನ್ನಾಥ ಸ್ವಾಮಿಯ ರಥಕ್ಕೆ 16 ಚಕ್ರಗಳಿರುತ್ತವೆ. ಚಕ್ರಗಳು ಹೆಚ್ಚಾದಾಗ, ಉಂಟಾಗುವ ತಾಂತ್ರಿಕ ತೊಂದರೆಗಳು, ಕ್ಲಿಷ್ಟತೆಗಳನ್ನು ಇಲ್ಲಿ ಕರಾರುವಕ್ಕಾಗಿ ನಿರ್ಮೂಲನೆ ಮಾಡಿದೆ. ಇದರಿಂದ ಪ್ರಾಚೀನ ಒರಿಸ್ಸಾದಲ್ಲಿ ಇದ್ದ ತಂತಜ್ಞಾನದ ನೈಪುಣ್ಯತೆ ತಿಳಿದು ಬರುತ್ತದೆ.

ತಾಲಧ್ವಜ : ಬಲಭದ್ರ ಸ್ವಾಮಿಯ ರಥವನ್ನು ತಾಲಧ್ವಜವೆನ್ನುತ್ತಾರೆ. ಅನಂತಶೇಷನ ಅವತಾರವೇ ಬಲರಾಮರು. ಈ ರಥದ ಎತ್ತರವು 21 ಘನ ಅಡಿಗಳು. ರಥದ ಅಭಿಮಾನಿ ಋಷಿ- ಅಂಗೀರಸ. ರಥಾಧಿಪ-ಬೃಹತ್ ನಾಸ. ಆದಿಶೇಷನು ರಥ ಸಂರಕ್ಷಕ ದೇವತೆ. ರಥಕ್ಕೆ 14 ಚಕ್ರಗಳಿವೆ. ನೀಲಿ ಮತ್ತು ಕೆಂಪು ಬಣ್ಣದ ಬೃಹತ್ ಪತಾಕೆಗಳಿವೆ. ಧ್ವಜ ಸ್ತಂಭವನ್ನು ಸಪ್ತಕಾಂಡವೆಂಬ ಮರದಿಂದ ನಿರ್ಮಿಸುತ್ತಾರೆ. ಧ್ವಜದ ಚಿಹ್ನೆ ನೇಗಿಲು-ಹಲ. ಪತಾಕೆಯ ಬಣ್ಣವೇ, ರಥಕ್ಕೂ ಇರುತ್ತದೆ.

ದೇವಿ ಧ್ವಜ : ಇದು ಸುಭದ್ರಾ ದೇವಿಯ ರಥ. ನಂದಿ ಘೋಷ ಮತ್ತು ತಾಲ ಧ್ವಜದ ಮಧ್ಯೆ ದೇವಿ ಧ್ವಜ ಬಿಜಂಗೈಯುತ್ತದೆ. ಕೆಂಪು ಮತ್ತು ಕಪ್ಪು ಬಣ್ಣದ ಪತಾಕೆಗಳು. ಎತ್ತರ ಇಪ್ಪತ್ತು ಘನ ಅಡಿಗಳು, ಧ್ವಜದ ಲಾಂಛನ ರಥಾದಿಪ – ಶ್ರೀಸುದರ್ಶನ. ಭದ್ರಕಾಳಿ ವಿಮಲರು ರಥ ಸಂರಕ್ಷಕರು. ರಥಕ್ಕೆ 12 ಚಕ್ರಗಳಿವೆ.

ರಥವನ್ನು “ಪದ್ಯಕಾಷ್ಠ” ಎಂಬ ಮರದಿಂದ ನಿರ್ಮಿಸಬೇಕೆಂಬ ನಿಯಮವಿದೆ. ಈ ಮರದ ಉಪಲಬ್ದಿಯೇ ಈಗ ಇಲ್ಲವಾಗಿದೆ. ಹಾಗಾಗಿ ಬಲಭದ್ರನ ರಥವನ್ನು ನಿರ್ಮಿಸುವ ಸಪ್ತಕಾಂಡ ಮರದಿಂದ ನಿರ್ಮಿಸುತ್ತಾರೆ. ಮೂರೂ ರಥದ ನಿರ್ಮಾಣಕ್ಕೆ ಬೇಕಾದ ಮರವನ್ನು ಪುರಿಯ ಮಹಾರಾಜನ ವಂಶಸ್ಥರು ಪೂರೈಸುತ್ತಾರೆ.

ವಿಧಿ ವಿಧಾನ

ರಥದ ನಿರ್ಮಾಣದಿಂದ ರಥದ ಉಪಸಂಹಾರದವರೆಗೂ ವಿವಿಧ ವಿಧಿ ವಿಧಾನಗಳನ್ನು ಕಟ್ಟು-ಕಟ್ಟಳೆಗಳನ್ನು ಶತಮಾನಗಳಿಂದ ಪಾಲಿಸಿಕೊಂಡು ಬರಲಾಗಿದೆ. “ವನಯಾಗ”ವೆಂಬ ವಿಶೇಷ ಪೂಜೆಯು ಎಲ್ಲಾ ಕಾರ್ಯದ ನಾಂದಿ. ಅಕ್ಷಯ ತೃತೀಯದ ದಿನ ಈ ಪೂಜೆ ನಡೆದು, ವೃಕ್ಷಗಳಿಂದ ಕತ್ತರಿಸಿ ತಂದ ಮರವನ್ನು ಪೂಜಿಸಲಾಗುತ್ತದೆ. ಅಂದೇ ರಥದ ನಿರ್ಮಾಣ ಆರಂಭ.

ರಥ ನಿರ್ಮಾಣವಾದ ನಂತರ, ದೇವಾಲಯದ ಸೇವಕ ವರ್ಗದವರಿಗೆ, ವಿವಿಧ ಜವಾಬ್ದಾರಿ ಹಂಚಲಾಗುತ್ತದೆ. ಈ ಸೇವಕ ವರ್ಗದಲ್ಲಿ ಗುಡಿಸುವವರಿಂದ, ಮಹಾರಾಜರವರೆಗೆ ಎಲ್ಲರೂ ಇರುತ್ತಾರೆ. ಆಷಾಢ ಮಾಸದ ಕೃಷ್ಣ ಪಕ್ಷದ ಪ್ರಥಮ ದಿನದಂದು ಈ ರಥಗಳನ್ನು ದೇವಾಲಯದ ‘ಸಿಂಹ ದ್ವಾರ’ದ ಬಳಿ ತಂದು ನಿಲ್ಲಿಸಲಾಗುತ್ತದೆ. ಉತ್ತರಾಭಿಮುಖವಾಗಿ ನಿಂತ ರಥಗಳು, ಯಾವ ಗಳಿಗೆಯಲ್ಲಿ ಬೇಕಾದರೂ, ಚಲಿಸುವ ಸ್ಥಿತಿಯಲ್ಲಿ ಸನ್ನದ್ಧವಾಗಿ ಅಂದಿನಿಂದಲೇ ನಿಲ್ಲುವುದು ವಿಶೇಷ.

ಭೋಗ – ವೈಭೋಗ

ಜಗನ್ನಾಥಸ್ವಾಮಿಯ ವೈಶಿಷ್ಟ್ಯಗಳು ಬೇರಾವ ದೇವರುಗಳಿಗೂ ಇಲ್ಲ. ಭಗವಂತನ ಅರ್ಚನಾ ಮೂರ್ತಿಯಿಂದ ಹಿಡಿದು, ರಥಯಾತ್ರೆಯವರೆಗೂ ಎಲ್ಲವೂ ವಿಶಿಷ್ಟ. ಎಲ್ಲ ದೇವಾಲಯಗಳ ಆಚರಣೆಗಿಂತ ಭಿನ್ನ. ಅಂತೆಯೇ ಸ್ವಾಮಿಯ ನಿತ್ಯ ನೈಮಿತ್ಯದ ಪೂಜೆಗಳ ಸಮಯದಲ್ಲಿ ಸಲ್ಲಿಸಲಾಗುವ ವಿವಿಧ ನಿವೇದನೆಗಳು (ಭೋಗ್) ಸಹ, ವೈಶಿಷ್ಟತೆಯನ್ನು ಮೆರೆದಿವೆ.

ಜಗನ್ನಾಥಸ್ವಾಮಿಯ ‘ಭೋಗ’ಗಳ ಪಾಕಶಾಲೆ, ಜಗತ್ತಿನ ಬೃಹತ್ ಪಾಕಶಾಲೆ. 680 ಜನ ನುರಿತ ಪಾಕ ತಜ್ಞರಿಲ್ಲಿ ಹಗಲೂ ರಾತ್ರಿ ಸೇವೆ ಸಲ್ಲಿಸುತ್ತಾರೆ. ಅನ್ನ ಪ್ರಸಾದಗಳು, ವಿವಿಧ ತರಕಾರಿಗಳಿಂದ ತಯಾರಿಸಿದ ವ್ಯಂಜನಗಳು, ಕರಿದ ಹುರಿದ ತಿಂಡಿಗಳು, ಸಿಹಿ ತಿಂಡಿ ತೀರ್ಥಗಳು ಸೇರಿ 56 ಬಗೆಬಗೆಯ ಆಹಾರವನ್ನು ಪ್ರತಿಬಾರಿಯೂ ಸೇರಿದಂತೆ 7 ಬಾರಿ ನಿವೇದನೆ ಮಾಡಲಾಗುತ್ತದೆ.

ಮಣ್ಣಿನ ಮಡಕೆಗಳಲ್ಲಿ ಆಹಾರ ತಯಾರಿಸಿ, ಆಹಾರ ತುಂಬಿದ ಈ ಮಡಕೆಗಳನ್ನು ನೇರವಾಗಿ ಸ್ವಾಮಿಗೆ ಅರ್ಪಿಸಲಾಗುತ್ತದೆ. ನಂತರ ಇದನ್ನು ವಿಮಲ ದೇವಿಗೆ ಅರ್ಪಿಸಲಾಗುತ್ತದೆ. ಈ ಅರ್ಪಣೆಯ ನಂತರ ಆಹಾರ ಪದಾರ್ಥಗಳು “ಮಹಾ ಪ್ರಸಾದ’ವಾಗುತ್ತದೆ. ದೇವಾಲಯದ ಪಾಕಶಾಲೆಗೆ ‘ರೋಸಘರ್’ ಎಂದು ಹೆಸರು.

240 ಬೃಹತ್ತಾದ ಒಲೆಗಳಿವೆ. ಮಣ್ಣಿನ ಮಡಕೆಗಳಲ್ಲಿ ಪ್ರತ್ಯೇಕವಾಗಿ ನಿವೇದನೆಗಳನ್ನು ತಯಾರಿಸುತ್ತಾರೆ. ಒಂದು ಒಲೆಯಲ್ಲಿ 9-10 ಮಡಕೆಗಳನ್ನು ಒಮ್ಮೆಲೇ ಇಟ್ಟು ಬೇಯಿಸಬಹುದಾಗಿದೆ. “ಛತ್ತೀಸ್ ನಿಯಾಗ” ಹೆಸರಿನ 36 ವಂಶಸ್ಥರು ಭಗವಂತನ ವಿವಿಧ ನಿವೇದನೆಗಳನ್ನು ವಿವಿಧ ಹಂತದಲ್ಲಿ ಸಿದ್ಧಪಡಿಸಿ ಅರ್ಪಿಸುವ ಸೇವೆಯನ್ನು ಪರಂಪರೆಯಿಂದ ಸಲ್ಲಿಸುತ್ತಾ ಬಂದಿದ್ದಾರೆ.

ಈ ಅಡುಗೆ ಮನೆಯಲ್ಲಿ ಒಂದು ಲಕ್ಷ ಜನರಿಗೆ, ಆಹಾರವನ್ನು ತಯಾರಿಸಬಹುದಾಗಿದೆ ಎಂದರೆ, ಇದರ ವಿಸ್ತೀರ್ಣ ಮತ್ತು ವೈವಿಧ್ಯತೆ ಕಲ್ಪಿಸಿಕೊಳ್ಳಬಹುದಾಗಿದೆ. ಅಂದ ಹಾಗೆ ಇದು ಬೆಂಗಳೂರಿನ ಇಸ್ಕಾನ್ ಅಥವಾ ಧರ್ಮಸ್ಥಳದಂಥ ಯಾಂತ್ರೀಕೃತ ಅಡುಗೆ ಮನೆಯಲ್ಲ, ಹದಿನೇಳನೇ ಶತಮಾನದಲ್ಲಿ ಕಳಿಂಗದ ಅರಸರು, ಕಟ್ಟಿಸಿರುವ ಪುರಾತನವಾದ, ಅಡುಗೆ ಮನೆ.

ದಿನವೂ 56 ಬಗೆ ಬಗೆಯ ಭಕ್ಷ್ಯಗಳ ನಿವೇದನೆ ನಡೆಯುವುದರಿಂದ ಜಗನ್ನಾಥಸ್ವಾಮಿಗೆ “ಛಪ್ಪನ ಭೋಗಿ” ಎಂದೂ ಭಕ್ತರು ಕರೆಯುತ್ತಾರೆ. ಮಕರ ಸಂಕ್ರಾಂತಿಯಂದು 84 ಬಗೆಯ ಅಡುಗೆ ಸ್ವಾಮಿಗೆ ಅರ್ಪಿತವಾಗುತ್ತದೆ.

ಗಡಿಯಾರದಂತೆ, ನಿರಂತರವಾಗಿ ಇದು ನಡೆಯುತ್ತಿರುತ್ತದೆ. ಸಾಮಾನ್ಯ ದಿನ ಹಬ್ಬ ಹರಿದಿನ, ರಥಯಾತ್ರೆಯ ದಿನ… ಉಹೂಂ! ಒಂದೇ ಒಂದು ದಿನ ಒಂದು ಕ್ಷಣದ ತಡವಿಲ್ಲ. ಎಲ್ಲಾ ಕರಾರುವಾಕ್ಕು ! ಪ್ರತಿ ಹಬ್ಬಕ್ಕೆ, ಪ್ರತಿ ಹೊತ್ತಿಗೆ, ಪ್ರತಿ ವಿಶೇಷಕ್ಕೆ ಇಂತಹ ಕಟ್ಟಳೆಯಿಂದ, ಇಂತಹ ಪದಾರ್ಥದಿಂದ ಇಂತಹ ಅಡುಗೆಯೇ ಆಗಬೇಕೆಂಬ ನಿಯಮಗಳಿವೆ.

ಹಾಗೆಯೇ, ಇಂತಹ ಪದಾರ್ಥದಿಂದ ಇಂತಹ ಅಡುಗೆಯೇ ಆಗಬೇಕೆಂಬ ನಿಯಮಗಳಿವೆ. ಹಾಗೆಯೇ, ಇಂತಹ ದಿನ ಇಂತಹ ಆಹಾರವನ್ನು ಇಂತಿಂಥ ವಂಶಸ್ಥರೇ ತಯಾರಿಸಿ ಇಂತಿಂತಹ ಸಮಯದಲ್ಲಿ ಅರ್ಪಿಸಬೇಕೆಂಬ ಕಟ್ಟಲೆಗಳಿವೆ. ಇವು ಶತಮಾನಗಳಿಂದ ನಡೆದು ಬಂದಿದೆ.

ಮಹಾ ಪ್ರಸಾದವನ್ನು ತಯಾರಿಸುವ ಪುಣ್ಯದ ಕಾರ್ಯ ನಿರ್ವಹಿಸುವ ಅಡುಗೆಯವರಿಗೆ “ಸೂಸಕಾರ” ರೆಂದು ಹೆಸರಿದೆ.

ಜನಾಥಸ್ವಾಮಿಗೆ ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯದ ವೈಭೋಗವಿದ್ದರೂ, ನಿವೇದನೆಗಳು ಮಾತ್ರ ಆಹಾರ ತಯಾರಾದ ಮಣ್ಣಿನ ಮಡಕೆಯಲ್ಲೇ ನೇರವಾಗಿ ಅರ್ಪಣೆಯಾಗುತ್ತವೆ.

‘ಮಹಾ ಪ್ರಸಾದವನ್ನು’ ದೇವಾಲಯದ ಈಶಾನ್ಯದ ಭಾಗ – ದೇವಮೂಲೆಯಲ್ಲಿರುವ ‘ಆನಂದ ಬಜಾರ’ ಎಂಬ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾರಲಾಗುತ್ತದೆ. ಹಾಗಾಗಿ “ಆನಂದ ಬಜಾರ” ಜಗತ್ತಿನ ಅತೀ ದೊಡ್ಡ ತೆರೆದಂಗಣದ ಹೋಟೆಲ್ ಆಗಿದೆ. ದಿನವೊಂದಕ್ಕೆ ಸರಾಸರಿ, 45000 ಜನ ಇಲ್ಲಿ ಮಹಾ ಪ್ರಸಾದವನ್ನು ಕೊಂಡು, ಸೇವಿಸುತ್ತಾರೆ. ಯಾವುದೇ ಮತ, ಪಂಥ, ಪಕ್ಷ ಆಚಾರ ವಿಚಾರ ಭೇದವಿಲ್ಲದೆ, ಭಗವಂತನ ಪ್ರಸಾದ ಇಲ್ಲಿ ಎಲ್ಲರಿಗೂ ಲಭ್ಯವಿದೆ.

‘ಕಾಜಾ’ ಹೆಸರಿನ ಸಿಹಿ ಪ್ರಸಾದ ತುಂಬಾ ಜನಪ್ರಿಯತೆ ಹೊಂದಿದ್ದು ಸಹಸ್ರಾರು ಕಾಜಾಗಳು ದಿನಂಪ್ರತಿ ಮಾರಾಟವಾಗುತ್ತವೆ.

‘ಮಹಾಪ್ರಸಾದ’ದ ಬಹು ರೋಚಕ ಅಂಶವೆಂದರೆ, ಮಣ್ಣಿನ ಮಡಕೆಯಲ್ಲಿರುವುದರಿಂದ ಇದು ಬಹು ಹೊತ್ತಿನವರೆಗೂ ಬಿಸಿಯಾಗಿದ್ದು, ಕೆಡದಂತೆ ದೀರ್ಘಕಾಲ ಉಳಿದಿರುತ್ತದೆ. ಅಂತೆಯೇ, ಇದರಲ್ಲಿರುವ ನಿಗೂಢತೆಯೆಂದರೆ, ಭಗವಂತನಿಗೆ ಅರ್ಪಣೆಯಾಗುವವರೆಗೂ ಈ ಪಾತ್ರೆಗಳಿಂದ ಒಂದಿನಿತೂ ವಾಸನೆ ಹೊರಹೊಮ್ಮುವುದಿಲ್ಲ. “ಮಹಾಪ್ರಸಾದ” ವಾದೊಡನೆ, ಘಮ ಘಮ ಪರಿಮಳ ಹೊರ ಸೂಸತೊಡಗುತ್ತದೆ.

ಚೇರ ಪಹನ್ನಾರ

ಪುರಿಯ ಮಹಾರಾಜರು ಪರಿವಾರ ಸಮೇತರಾಗಿ, ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಧಾವಿಸುತ್ತಾರೆ. ಮೂರು ರಥಗಳ ಮುಂದೆ ಇರುವ ಪುಟ್ಟವೇದಿಕೆಗಳಿಂದ ಆರಂಭಿಸಿ, ಮುಂಭಾಗದ ರಸ್ತೆಯ ಸ್ವಲ್ಪ ಭಾಗವನ್ನು ಬಂಗಾರದ ಹಿಡಿಕೆಯ ಕಸ ಪೊರಕೆಗಳಿಂದ ಗುಡಿಸುತ್ತಾರೆ. ಮೂರು ರಥದಲ್ಲಿರುವ ದೇವರುಗಳಿಗೆ ಪ್ರಣಾಮ ಸಲ್ಲಿಸುತ್ತಾರೆ.

ರಥಯಾತ್ರೆಯ ದಿನ

ರಥಯಾತ್ರೆಯ ದಿನ, ವಿಗ್ರಹಗಳಿಗೆ, ನೈಮಿತ್ಯಿಕ ಪೂಜೆಯ ನಂತರ, ವಿಶೇಷ ಅಲಂಕಾರಗಳನ್ನು ಮಾಡಲಾಗುವುದು. ದೇವಾಲಯದ ಪಾಕಶಾಲೆಯಲ್ಲಿ ಹೋಮ ವಿಧಿಗಳು ನಡೆಯುವುವು.

ನಂತರ ದ್ವಾರ ಪಾಲಕ ಪೂಜೆ, ‘ಕೋಥ ಭೋಜ’ ಹೆಸರಿನ ವಿಶೇಷ ನಿವೇದನೆಗಳು, ನಂತರ ಷೋಡಶೋಪಚಾರ, ಪೂಜೆ, 116 ವಿಧದ ಸೇವೆಗಳು, ದೇವಾಲಯದ ವಿವಿಧ ಹುದ್ದೆಯ ಪರಿಚಾರಕರಿಂದ ನಿಗದಿತ ಸೇವೆಗಳು, ಕೊನೆಯಲ್ಲಿ ಪುರೋಹಿತ ವರ್ಗದವರಿಂದ ಮಂಗಳಾರತಿ ಸೇವೆ. ಈ ಸೇವೆಗಳ ನಂತರ, ರತ್ನ ಸಿಂಹಾಸನದಲ್ಲಿ ಕುಳ್ಳಿರಿಸಿ, ಈ ಮೂರ್ತಿಗಳನ್ನು ರಥದೆಡೆಗೆ ಕೊಂಡೊಯ್ಯಲಾಗುತ್ತದೆ.

ರಥದೆಡೆಗೆ ಬರುವಾಗ ಈ ವಿಗ್ರಹಗಳಿಗೆ ಹೂವಿನ ಕಿರೀಟವನ್ನು ಹಾಕಿರುತ್ತಾರೆ. ಜಾತಿ, ಮತ, ಪಂಥ, ಪಕ್ಷ ಭೇದವಿಲ್ಲದೆ ಭಗವಂತನನ್ನು ಮುಟ್ಟಲೂ ಈ ಸಮಯದಲ್ಲಿ ಅವಕಾಶವಿರುತ್ತದೆ. ದಂಡ-ಪಹಂಡಿ-ಎ೦ದು ಈ ಮೆರವಣಿಗೆಯ ಪರಿಕ್ರಮಕ್ಕೆ ಹೆಸರು. ಪಹಂಡಿ ಯಾತ್ರೆಯಲ್ಲಿ ಮುಂಚೂಣಿಯಲ್ಲಿ “ಸುದರ್ಶನ” ವಿಗ್ರಹ.

ಈ ವಿಗ್ರಹವು, ಸುಪ್ರಸಿದ್ಧ ಬೈಸಿ ಪಂಚದ ಇಪ್ಪತ್ತು ಮೆಟ್ಟಿಲಿನ ಹಜಾರದ ಏಳನೇ ಮೆಟ್ಟಿಲು ದಾಟಿದಾಕ್ಷಣ ಬಲರಾಮರ ವಿಗ್ರಹ ಪರಿಕ್ರಮಕ್ಕೆ ಸೇರ್ಪಡೆಯಾಗುತ್ತದೆ. ಹಿಂದೆಯೇ, ವಾದ್ಯಗಾರರ ತಂಡವಿರುತ್ತದೆ. ಬಲಭದ್ರರು ಏಳು ಮೆಟ್ಟಿಲು ಇಳಿದೊಡನೆ ಸುಭದ್ರೆಯವರು ಪ್ರವೇಶಿಸುತ್ತಾರೆ. ಏಳು ಮೆಟ್ಟಿಲು ಸುಭದ್ರೆ ಇಳಿದೊಡನೆ, ಜಗನ್ನಾಥಸ್ವಾಮಿ ಈ ಪರಿಕ್ರಮವನ್ನು ಸೇರಿಕೊಳ್ಳುತ್ತಾರೆ. ದೇವರ ವಿಗ್ರಹಗಳು, ರಥಾರೂಢವಾದ ಮೇಲೆ, ಪರಿಕ್ರಮವು, ಉಪಶಾಂತಿ ಹೊಂದುತ್ತದೆ.

ಪಹಂಡಿ ಯಾತ್ರೆಯಲ್ಲಿ ಬಂದ ಸುದರ್ಶನ, ಸುಭದ್ರೆಯರು ರಥದಲ್ಲಿ ಆಸೀನರಾಗುತ್ತಾರೆ. ‘ವಿಮಾನ ವಡೂ’ ಗರು ರಾಮ ಮತ್ತು ಕೃಷ್ಣರ ವಿಗ್ರಹಗಳನ್ನು ಬಲರಾಮ ರಥದಲ್ಲಿಯೂ ಮದನ ಮೋಹನರ ವಿಗ್ರಹವನ್ನು ಜಗನ್ನಾಥ ರಥದಲ್ಲಿಯೂ ಇರಿಸುತ್ತಾರೆ. ನಂತರ ‘ಕೇಥ ಸುವಾನಿವಾಸ’ರು ಜಗನ್ನಾಥ ರಥದಲ್ಲಿ ಎರಡು ಪೆಟ್ಟಿಗೆಗಳನ್ನು ತಂದು ಇರಿಸುತ್ತಾರೆ.

ಈ ಪೆಟ್ಟಿಗೆಗಳಲ್ಲಿ, ಒಂಬತ್ತು ದಿನದ ಯಾತ್ರೆಗೆ ಬೇಕಾಗಬಹುದಾದ ದೇವರ ದಿವ್ಯ ಆಭರಣಗಳು, ವಸ್ತ್ರಗಳು ಮತ್ತಿತರ ವಸ್ತು ಇರುತ್ತವೆ. ನಂತರ ಎಲ್ಲಾ ವಿಗ್ರಹಗಳಿಗೆ ಹೊಸದಾದ ವಸ್ತ್ರಗಳ ಮತ್ತು ಹೂವಿನ ಅಲಂಕಾರ ನಡೆಯುತ್ತದೆ. ನಂತರ ಬೇದ ಪಹನ್ನಾರ ನಿಧಿ ನಡೆಯುತ್ತದೆ.

ರಥದ ಚಲನೆ

ರಥ ಎಳೆಯುವುದೇ, ಇಡೀ ಉತ್ಸವದ ಪ್ರಮುಖ ಘಟ್ಟ ಜೈಜಗನ್ನಾಥ, ಜೈ ಜಗನ್ನಾಥ ಘೋಷಣೆ ಮುಗಿಲು ಮುಟ್ಟಿರುತ್ತದೆ. ಭಾವುಕ ಭಕ್ತರು, ಹರಿನಾಮ ಸಂಕೀರ್ತನೆಯಲ್ಲಿ ಮುಳುಗಿರುತ್ತಾರೆ. ರಥಕ್ಕೆ ಕಟ್ಟಿದ ಉದ್ದವಾದ ಹಗ್ಗಕ್ಕೆ, ಹೇಗಾದರೂ ಮಾಡಿ, ತಮ್ಮ ಕೈಜೋಡಿಸಿ ರಥ ಎಳೆಯುತ್ತಾರೆ. ಲಕ್ಷಾಂತರ ಜನರು ಸೇರಿ, ರಥ ಎಳೆಯುವ ಈ ಪ್ರಕ್ರಿಯೆಯು ಇಡೀ ವಾತಾವರಣದಲ್ಲಿ ವಿದ್ಯುತ್‌ ಸಂಚಲನ ಮೂಡಿಸುತ್ತದೆ.

ಗ್ರಾಂಡ್ ಟ್ರಂಪ್ ರಸ್ತೆಯಲ್ಲಿ ಜನಸಾಗರದ ಮಧ್ಯೆ ಈ ರಥಗಳು, ಮುಂದುವರೆದು, ಗುಂಡೀಚ ಮಂದಿರ ತಲುಪುತ್ತವೆ. ಹಿರಿಯರಾದ ಬಲಭದ್ರರು, ನಂತರ ಸುಭದ್ರ, ನಂತರ ಜಗನ್ನಾಥರ ರಥಗಳು ಒಂದರ ಹಿಂದೆ ಒಂದರಂತೆ ಇಲ್ಲಿ ನಿಲ್ಲುತ್ತವೆ. ಬಲಭದ್ರರನ್ನು ಮೊದಲು ಇಳಿಸಲಾಗುತ್ತದೆ. ನಂತರ ಸುಭದ್ರೆ, ನಂತರ ಜಗನ್ನಾಥರನ್ನು ಇಳಿಸಲಾಗುತ್ತದೆ.

ಈ ವಿಗ್ರಹಗಳಿಗೆ ದಶಾವತಾರದ ವೇಷ ಅಲಂಕಾರ ಮಾಡಲಾಗುತ್ತದೆ. ರಥಯಾತ್ರೆಯ ಕಾಲದಲ್ಲಿ ಹಣ್ಣು ಮತ್ತು ಕೇಕುಗಳನ್ನು ಮಾತ್ರ ಭಗವಂತನಿಗೆ ಅರ್ಪಿಸಲಾಗುತ್ತದೆ. ನಿತ್ಯವೂ ಷೋಡಶೋಪಚಾರ ಪೂಜೆ, ಸಂಧ್ಯಾರತಿಗಳು ನಡೆಯುತ್ತವೆ. ರಥದ ಸಲಾಕೆಗಳು, ಪರದೆಗಳನ್ನು ಇಳಿಸಲಾಗಿರುತ್ತದೆ. ರಥದ ಸಂರಕ್ಷಣೆಗಾಗಿ ವಿಶೇಷ ಮುತುವರ್ಜಿ ವಹಿಸಲಾಗುತ್ತದೆ.

ರಥಗಳ ಸಂರಕ್ಷಣೆ

ಶಾಸ್ತ್ರಗಳಲ್ಲಿ ರಥದ ಸಂರಕ್ಷಣೆಗಾಗಿ ವಿಧಿಸಿರುವ ಎಲ್ಲಾ ವಿಧಿ ವಿಧಾನಗಳನ್ನು ಇಲ್ಲಿ ಕಡ್ಡಾಯವಾಗಿ ಪಾಲಿಸಲಾಗುತ್ತದೆ. ಇದಲ್ಲದೆ, ದೇವಾಲಯದ ನೌಕರ ವರ್ಗ ಸಹ ರಕ್ಷಣೆಯಲ್ಲಿ ಪಾಲ್ಗೊಳ್ಳುತ್ತದೆ. ರಕ್ಷಣಾ ಕಾರ್ಯದ ಮೇಲುಸ್ತುವಾರಿಗಾಗಿಯೇ, ದೇವಾಲಯದಿಂದ ವಿಶೇಷ ಬಹುಮಾನಗಳನ್ನು ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಜನರೂ ಸಹ ಶ್ರದ್ಧಾ ಭಕ್ತಿಗಳಿಂದಲೇ ನಡೆದುಕೊಳ್ಳುತ್ತಾರೆ. ರಥದ ಯಾವುದೇ ಭಾಗಕ್ಕಾದರೂ ಎಲ್ಲಿಯಾದರೂ ಸಣ್ಣ ಊನಾಗದ ಹಾಗೆ ಕಾಳಜಿ ಹೊಂದಿರುತ್ತಾರೆ. ರಥಯಾತ್ರೆಯ ವಿಧಿ ವಿಧಾನಗಳು ಉಕ್ತವಾಗಿರುವ ಗ್ರಂಥವಾದ “ಪುರುಷೋತ್ತಮ ಮಹಾತ್ಮೆ”ಯಲ್ಲಿ, ರಥವೇನಾದರೂ ಮುರಿದರೆ, ಯಾವ ಭಾಗಕ್ಕಾದರೂ ಏನಾದರು ಅವಗಢ ಸಂಭವಿಸಿದರೆ ಅದಕ್ಕೆ ಬೇಕಾದ ಕ್ರಮ ಏನೆಂದು ವಿವರಿಸಲಾಗಿದೆ.

ಬೆಕ್ಕು, ನಾಯಿ ಮುಂತಾದ ಪ್ರಾಣಿಗಳು ರಥದ ಬಳಿ ಸುಳಿಯದಂತೆ ವಿಶೇಷ ಮುತುವರ್ಜಿ ವಹಿಸಲಾಗುವುದು. ದೇವತೆಗಳನ್ನು ಆಹ್ವಾನಿಸಿ, ಕಾವಲು ಹಾಕಲಾಗುವುದು. ಆದಾಗ್ಯೂ, ಲಕ್ಷಗಟ್ಟಲೆ ಜನರನ್ನು ಈ ಭಯೋತ್ಪಾದನೆಯ ದಿನಗಳಲ್ಲಿ ನಿಯಂತ್ರಿಸುವುದು ಬಹು ಕಷ್ಟದ ಕೆಲಸವೇ ಸರಿ. ಜಗನ್ನಾಥ ಸ್ವಾಮಿಯ ಕೃಪೆ ಮಾತ್ರದಿಂದಲೇ ಪ್ರತಿ ವರ್ಷ ಇದು ಯಶಸ್ವಿಯಾಗಿ ನಡೆಯುತ್ತಿದೆ.

ಹೇರ ಪಂಚಮಿ

ರಥಯಾತ್ರೆಯ ಐದನೆಯ ದಿನ ನಡೆಯುವ ಒಂದು ಕ್ರಿಯೆ. ಮಹಾಲಕ್ಷ್ಮಿಯು ಜಗನ್ನಾಥಸ್ವಾಮಿಯ ರಥಯಾತ್ರೆಗೆ ತನ್ನನ್ನು ಕರೆಯದಿರುವ ಬಗ್ಗೆ ಕೋಪಗೊಂಡು, ಜಗನ್ನಾಥ ರಥದ ಒಂದು ಭಾಗಕ್ಕೆ ಹಾನಿಯುಂಟು ಮಾಡುತ್ತಾಳೆ. ಈ ಕ್ರಿಯೆಯಲ್ಲಿ ಇಂತಿಂಥ ಸೇವಕ ವರ್ಗ ಮಾತ್ರ ಭಾಗವಹಿಸಬೇಕೆಂಬ ಕಟ್ಟಳೆಯಿದೆ. ಅವರು ಮಾತ್ರ ಮಾಡುತ್ತಾರೆ.

ಜಗನ್ನಾಥ ಸ್ವಾಮಿಯಿಲ್ಲದಿರುವ ಈ ಸಮಯದಲ್ಲಿ ನಿರಾಸೆಗೊಂಡ ಪತ್ನಿಯಂತೆ ಮಹಾಲಕ್ಷ್ಮೀ ಪ್ರತಿಕ್ರಿಯಿಸುತ್ತಾಳೆ. ಜಗನ್ನಾಥಸ್ವಾಮಿಯ ಉಗ್ರಾಣ ಪ್ರವೇಶಿಸಿ ಹಠ ಮಾಡುತ್ತಾಳೆ. ರಾಜೋಚಿತವಾದ ಪ್ರಸಾದಗಳನ್ನು ಅರ್ಪಿಸಿದರೂ, ನಿರಾಕರಿಸಿ, ಸಾಮಾನ್ಯ ಒರಿಯಾ ಹೆಂಗಸರಂತೆ, ಅನ್ನ-ಬೇಳೆ ಮಾತ್ರ ಸ್ವೀಕರಿಸುತ್ತಾಳೆ. ಹೇರ ಪಂಚಮಿಯ ಮುಂಜಾನೆ, ಸ್ನಾನ ಆಭರಣಗಳ ಸೇವೆಯನ್ನು ಸ್ವೀಕರಿಸಿರುತ್ತಾರೆ. ನಂತರ, “ಪಂತಿ ಭೋಗ” ಹೆಸರಿನ ನೈವೇದ್ಯಗಳನ್ನು ಪೂಜಾರಿಗಳು ಅರ್ಪಿಸುತ್ತಾರೆ.

ಪುರಿಯ ಮಂದಿರದಲ್ಲಿರುವ ಹೆಸರಾಂತ ಆಲದ ಮರದ ಕೆಳಗೆ ಕಟ್ಟಿರುವ ತನ್ನ ವಸತಿಯಲ್ಲಿ ಇಟ್ಟಿರುವ ಅಲಂಕೃತ ಪಲ್ಲಕ್ಕಿಯಲ್ಲಿ ಸಾಗಿ ಬಂದು, ಗುಂಡೀಚ ಮಂದಿರ ತಲುಪುತ್ತಾಳೆ. ಪತಿ ಮಹಾಪಾತ್ರ ಹೆಸರಿನ ಅಧಿಕಾರವುಳ್ಳ ದೇವಾಲಯ ಸಿಬ್ಬಂದಿ, ಆಕೆಯನ್ನು ಆದರಿಸಿ, ಸ್ವಾಗತಿಸುತ್ತಾನೆ.

ಇದೇ ಸಮಯದಲ್ಲಿ ಮಧ್ಯಾಹ್ನದ ಆರತಿಗಳು ಜಗನ್ನಾಥನಿಗೆ ಗುಂಡೀಚ ಮಂದಿರದ ಒಳಗೆ ನಡೆಯುತ್ತವೆ. ಜಗನ್ನಾಥಸ್ವಾಮಿಯ ಒಂದು ಹಾರವನ್ನು ತಂದು ಆಕೆಗೆ ಅರ್ಪಿಸಲಾಗುತ್ತದೆ. ಈ ಹಾರದೊಂದಿಗೆ, ಲಕ್ಷ್ಮಿದೇವಿಯು ಜಗನ್ನಾಥಸ್ವಾಮಿಯ ರಥಕ್ಕೆ ಬರುತ್ತಾಳೆ. ಸ್ವಲ್ಪಭಾಗವನ್ನು ಸಾಂಕೇತಿವಾಗಿ ಜಖಂಗೊಳಸಿ, ತಮ್ಮ ನಿವಾಸಕ್ಕೆ ಮರುಳುತ್ತಾಳೆ.

ಹೇರ ಪಂಚಮಿ ದಿನದಂದು ಮೂವರು ನೇಮತ್ಯಿಕ ಪೂಜಾರಿಗಳಿಗೆ, ಮೂರು ರಥದಿಂದ ತಂದ ಹಾರ ಹಾಕಿ ಗೌರವಿಸಲಾಗುತ್ತದೆ.

ರಥದ ವಿವಿಧ ಭಾಗಗಳು

1. ಕುವರ  

2. ಭದ್ರಪೀಠ  

3. ಅದಭದ್ರ  

4. ಕೀಲಕ  

5. ಅರಷ್ಟಾಂಬ  

6. ಚಕ್ರಸೇವಿ ತುಂಬಿಕ ಆದ ಪರಿಧಿ

7. ಕವಚ  

8. ಗ‌ರ್‌ಗರ  

9.ಹಂಸ ಮೌಲಿ  

10, ಕೂರ್ಮ  

11. ರಥ ಬರಾದ್ರಿ  

12. ಪರಸ್ಥ

13. ಪೀಠ  

14. ದೇವ ಪೀಠ  

15. ಕಸಾವ್ಹಕ  

16. ವೈಯಾನಕ  

17. ಕರ್ಣಸ್ಥಂಭ  

18. ನಟಸ್ಥಂಬ  

19, ಚೊಂಡ ಕುವರ  

20. ಪರಾರ್ಥ  

21. ದ್ವೀತೀಯ ಕುವರ

22. ಸ್ಥಂಬ ನೇಮಿ  

23. ಪ್ರಾಧಾನ ಕುವರ  

24. ವೇಕಿ  

25. ಸೌಡಿ  

26, ರಾಸಿ ಪಟ್ಟ

27. ದಟ್ ಗಿಜಿಕ್  

28. ಕವೋತಲಿ

29.ಭದ್ರವೈಲೆ  

30. ಸೌತಿ  

31. ಕಲಶ  

32. ಆಯುಧ.

ಬುಧಯಾತ್ರೆ ಅಥವಾ ಪುನರಾಗಮನ ಉತ್ಸವ

ಗುಂಡೀಚ ಮಂದಿರದಲ್ಲಿ 7 ದಿನಗಳ ವಾಸದ ನಂತರ, ಎಲ್ಲಾ ದೇವರುಗಳು, ವಾಪಸ್ಸು ಜಗನ್ನಾಥ ಮಂದಿರ ತಲುಪುವ ಉತ್ಸವವೇ, ಪುನರಾಗಮನ ಉತ್ಸವ ಅಥವಾ ಬುಧಯಾತ್ರೆ.

ಗುಂಡೀಚ ಮಂದಿರದ ವಾಸದ ಅವಧಿಯಲ್ಲಿ ನಿತ್ಯವೂ ಜಗನ್ನಾಥ ಸ್ವಾಮಿಯು ತನ್ನ ಪರಿವಾರ ದೇವತೆಗಳ ಜೊತೆ, ವಿವಿಧ ಸೇವೆಗಳನ್ನು ಸ್ವೀಕರಿಸುತ್ತಿರುತ್ತಾನೆ. ಅಡಪ ಅಭದ ಎಂಬ ವಿಶೇಷ ಮಹಾಪ್ರಸಾದ (ಒಂದು ರೀತಿಯ ಬೇಯಿಸಿದ ಅನ್ನ) ವನ್ನು ಭಕ್ತರು ಪಡೆಯುತ್ತಿರುತ್ತಾರೆ.

“ಬುಧ”ಯಾತ್ರೆಯ ದಿನ ಬಲರಾಮ-ಸುಭದ್ರ-ಜಗನ್ನಾಥ ಸ್ವಾಮಿಯವರು ತಮ್ಮ ತಮ್ಮ ರಥಕ್ಕೆ ವಾಪಸ್ಸು ಆಗಮಿಸುತ್ತಾರೆ. ಈ ಪರಿಕ್ರಮಕ್ಕೆ ದಧಿ ಪಹಂಡಿ ಎಂದು ಹೆಸರು. ಮದನ ಮೋಹನ, ಕೃಷ್ಣ-ರಾಮ, ಸುದರ್ಶನರೂ ತಮ್ಮ ತಮ್ಮ ರಥ ಏರುತ್ತಾರೆ.

ಬಲಭದ್ರನ ರಥವು ಮೊದಲಿಗೆ ಹೊರಡುತ್ತದೆ. ಹಿಂದೆಯೇ ಸುಭದ್ರೆಯ ರಥ ಎರಡೂ ಸಂಚರಿಸುತ್ತಾ ಎಲ್ಲೂ ನಿಲ್ಲದೆ ಮುಖ್ಯ ಮಂದಿರ ತಲುಪುತ್ತವೆ.

ಗುಂಡೀಚ ಮಂದಿರದಿಂದ, ಜಗನ್ನಾಥಸ್ವಾಮಿಯ ರಥವು ನಂತರದಲ್ಲಿ ಹೊರಡುತ್ತದೆ. ಜಗನ್ನಾಥಸ್ವಾಮಿಯ ಚಿಕ್ಕಮ್ಮ, ಅರ್ಧಂಸಿನಿ ಗುಡಿಯ ಮಂದೆ ರಥವು ನಿಲ್ಲುತ್ತದೆ.

ವಿವಿಧ ಜವಾಬ್ದಾರಿ ಹೊರುವ ದೇವಾಲಯ ಅಧಿಕಾರಿ ವರ್ಗ

1 ಸೂರ ಬಿಡು,

2 ದಕ್ಷಿಣ-ದ್ವಾರಪಾಲಕ,

3. ಪಿಧಿಹಾರಿ,

4. ಮುಡುಲಿ,

5. ಸುಧಾಸೂರ,

6. ಮುರಾಸ್ವ,

7. ಪಂಡ,

8. ಪತಿ ಮಹಾಪಾತ್ರ,

9. ದೈವಪತಿ,

10. ಪಲಿಯಾ,

11. ಕುಂಠಿಯಾ,

12. ಗಂಗದಮೇಕಪ,

13. ವಿಮಾನವಡು,

14. ಗಂಥರ,

15. ಛತಾರ,

16. ಕಹಾಲಿಯಾ,

17, ತಮಟೆಗಾರ,

18, ಅಕ್ಕಸಾಲಿ,

19. ಪುರಿಯ ಮಹಾರಾಜ,

20. ಲೆಂಕ,

21. ಪೈಕ,

22. ಕೊತಸು ನಾಸಿಯ,

23. ರಾಘವ ರಾಸಮತಾ.

‘ಅಜ್ಜಿಮಾಲಾ’ ಹೆಸರಿನ ಹೂವಿನ ಹಾರಗಳ ಧಾರಣೆಯ ನಂತರ ಸ್ವಾಮಿಯ ಗಿಣ್ಣುಗಳಿಂದ ತಯಾರಿಸಿದ ಭಕ್ಷ್ಯವನ್ನು ಸ್ವೀಕರಿಸುತ್ತಾನೆ.

ಈ ಸಮಯಕ್ಕೆ ಲಕ್ಷ್ಮೀದೇವಿಯ ವಾಹನವನ್ನು “ಭಾಹನಿ” ಮಂಟಪಕ್ಕೆ ತರಲಾಗುತ್ತದೆ. ಇಲ್ಲಿಂದ ಜಗನ್ನಾಥಸ್ವಾಮಿಯ ರಥವನ್ನು ಲಕ್ಷ್ಮಿದೇವಿಯು ವೀಕ್ಷಿಸುತ್ತಾಳೆ. ಹತ್ತಿರಕ್ಕೆ ಬಂದ ಮೇಲೆ, ಲಕ್ಷ್ಮೀದೇವಿ ರಥಕ್ಕೆ ಒಮ್ಮೆ ಪ್ರದಕ್ಷಿಣೆ ಬರುತ್ತಾಳೆ. ದೈತ ಪತಿ ಹೆಸರಿನ ದೇವಾಲಯ ಅಧಿಕಾರಿಯು ಭಗವಂತ ಧರಿಸಿದ ಹೂವಿನ ಹಾರವನ್ನು ಲಕ್ಷ್ಮಿದೇವಿಗೆ ಅರ್ಪಿಸಿ, ಭಗವಂತನ ಶುಭಾಶೀರ್ವಾದಗಳನ್ನು ವಿನಂತಿಸುತ್ತಾನೆ. ನಂತರ ಲಕ್ಷ್ಮಿದೇವಿ ತಮ್ಮ ಮನೆಗೆ ವಾಪಸ್ಸಾಗುತ್ತಾಳೆ.

ಈ ವಿಧಾನಗಳ ನಂತರ ಜಗನ್ನಾಥಸ್ವಾಮಿಯ ರಥ ಸಿಂಹದ್ವಾರದ ಬಳಿಗೆ ಬರುತ್ತದೆ. ಅಷ್ಟುಹೊತ್ತಿಗೆ ರಾತ್ರಿಯಾಗಿರುತ್ತದೆ. ಮೂವರೂ, ರಾತ್ರಿಯನ್ನು ರಥಾರೂಢರಾಗಿಯೇ ಕಳೆಯುತ್ತಾರೆ. ಮರುದಿನ ಬಡಾ ಏಕಾದಶಿ, ಎಲ್ಲಾ ವಿಗ್ರಹಗಳಿಗೆ ಹಣ್ಣು ಮತ್ತು ಧಾನ್ಯರಹಿತ ಖಾದ್ಯಗಳ ನಿವೇದನೆ ನಡೆಯುತ್ತದೆ. ಆ ದಿನ ಅರ್ಪಿಸುವ ಸುವವೇಶ ಮತ್ತು ಅದರಪನ ಭೋಗಗಳು ಒರಿಸ್ಸಾದಾದ್ಯಂತ ಸಾವಿರಾರು ಜನರನ್ನು ಆಕರ್ಷಿಸುತ್ತವೆ.

ಬುದಾ ಪೆಹಂಡಿ

ದ್ವಾದಶಿಯ ದಿನ, ಪುನರಪಿ, ದದಿಪೆಹಂಡಿ ಪರಿಕ್ರಮದಲ್ಲಿಯೇ, ಮೂರ್ತಿಗಳು ದೇವಾಲಯವನ್ನು ಪ್ರವೇಶಿಸುತ್ತವೆ. ತಮ್ಮ ರತ್ನ ಸಿಂಹಾಸನವನ್ನು ಏರುತ್ತಾರೆ. ಅಂದು ಲಕ್ಷ್ಮೀ ದೇವಿಯ ದಾಸಿಯರು (ದೇವಾಲಯದ ಸ್ತ್ರೀ ಸಿಬ್ಬಂದಿ) ಭಗವಂತನನ್ನು ಸಿಂಹದ್ವಾರದಲ್ಲಿ ತಡೆಯಲೆತ್ನಿಸುತ್ತಾರೆ. ಅವರಿಗೆ ಭಗವಂತನ ಶೇಷ ಪ್ರಸಾದ ನೀಡಿ, ಸ್ವಾಂತ್ವನಗೊಳಿಸಿ, ಪಹಂಡಿ ಮುಂದುವರಿಯುತ್ತದೆ. ದಾಸಿಯರು ಬಂದು ಬಾಗಿಲು ಮುಚ್ಚಿ, ತೆಗೆದು ಮತ್ತೊಮ್ಮೆ ಕಾಟ ಕೊಡುತ್ತಾರೆ.

ಈ ಸಮಯದಲ್ಲಿ ‘ದೈತ’ ಹೆಸರಿನ ಜಗನ್ನಾಥನ ದೂತರ ಜೊತೆ, ಚರ್ಚೆ ವಾಗ್ವಾದಗಳ ಪದ್ಯಗಳನ್ನು ಇಬ್ಬರೂ ಹಾಡುತ್ತಾರೆ. ಈ ವಿಧಾನಕ್ಕೆ ‘ದ್ವಾರ ಮೋಚನ ಸಂಪ್ರದಾಯ’ ಎಂದು ಹೆಸರು. ಈ ಪರಿಕ್ರಮವನ್ನು ಆ ಸಮಯದ ಸಂವಾದವನ್ನು ಆಲಿಸಲು ಸಹಸ್ರಾರು ಭಕ್ತರು ಸುತ್ತಲೂ ನೆರದಿರುತ್ತಾರೆ. ಲಕ್ಷ್ಮಿದೇವಿಗೆ ನಾಟಕೀಯವಾಗಿ ಜಗನ್ನಾಥ ಸ್ವಾಮಿ ಛೇಡಿಸುವುದು, ಲಕ್ಷ್ಮಿದೇವಿ ಉತ್ತರಿಸುವುದು, ಲಕ್ಷ್ಮಿದೇವಿಗೆ ಜಗನ್ನಾಥಸ್ವಾಮಿ ಸ್ವಾಂತ್ವನಗೊಳಿಸಲು, ಮುತ್ತು ರತ್ನದ ಆಭರಣಗಳ ಉಡುಗೆ ತೊಡುಗೆ ಉಡುಗೊರೆ ನೀಡುವುದು ನಡೆಯುತ್ತದೆ.

ಇದು ತುಂಬ ಜನಪ್ರಿಯವಾದ ಘಟ್ಟವಾಗಿದೆ. ಅತಿ ಹೆಚ್ಚಿನ ಜನ ಮುಖ್ಯಯಾತ್ರೆಗೆ ಬಂದವರು, ಊರಿಗೆ ಹೋಗಿದ್ದರೂ ಇದಕ್ಕಾಗಿಯೇ ವಾಪಸ್ಸು ಬಂದು ವೀಕ್ಷಿಸುತ್ತಾರೆ. ದ್ವಾರ ಮೋಚನ ಸಂಪ್ರದಾಯದ ನಂತರ, ಆರತಿ ನಡೆದು, ಸ್ವಾಮಿ ದೇವಾಲಯ ಒಳಪ್ರವೇಶ ಮಾಡುತ್ತಾರೆ. ಮತ್ತೊಮ್ಮೆ ಷೋಡಶೋಪಚಾರ ನಡೆಯುತ್ತದೆ. ಸ್ವಾಮಿಯವರು ಗರ್ಭಗುಡಿ ಸೇರಿ, ಭಕ್ತರಿಗೆ ದರ್ಶನ ನೀಡುವುದರೊಂದಿಗೆ, ರಥೋತ್ಸವ ಮಂಗಳವಾಗುತ್ತದೆ.

ವೇಷ: ಜಗನ್ನಾಥ ಸ್ವಾಮಿಯ ವಿವಿಧ ಅಲಂಕಾರಗಳು

ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯ ವಿಗ್ರಹಗಳಿಗೆ ಸಾಂಪ್ರದಾಯಕವಾದ ಹಲವು ಅಲಂಕಾರಗಳಿವೆ. ಇದಕ್ಕೆ “ವೇಷ”ಗಳೆಂದು ಕರೆಯುತ್ತಾರೆ. ವಿಶೇಷ ವೇಷಧಾರಣೆ ಯಾದಾಗಲೆಲ್ಲ ಸಹಸ್ರಾರು ಜನರು ದೇವಾಲಯದಲ್ಲಿನೆರೆದು, ಆನಂದಿಸುತ್ತಾರೆ. ರಥಯಾತ್ರೆಯ ಸಮಯದಲ್ಲಿ ಭಗವಂತ ಮತ್ತವನ ಪರಿವಾರ ದೇವತೆಗಳೆಲ್ಲರೂ ಸೇರಿದಂತೆ ದಶಾವತಾರ ವೇಷ ಧರಿಸಿರುತ್ತಾರೆ. ಹಲವು ಪ್ರಸಿದ್ಧ ವೇಷಗಳ ಮಾಹಿತಿ ಇಲ್ಲಿದೆ.

ಪುರಿಯ ಜಗನ್ನಾಥಸ್ವಾಮಿಗೆ ಒಟ್ಟು 36 ಬಗೆಯ ವೇಷಗಳಿವೆ. ಇವುಗಳಲ್ಲಿ ಹದಿನೆಂಟು ವೇಷಗಳು ತುಂಬಾ ವಿಶೇಷವಾಗಿದ್ದು, ಈ ವೇಷಗಳ ಧಾರಣೆಯ ಸಮಯದಲ್ಲಿ ದರ್ಶನಕ್ಕೆ ವಿಶೇಷವಾಗಿ ಭಕ್ತರು ಎಲ್ಲೆಡೆಯಿಂದ ಧಾವಿಸಿ ಬರುತ್ತಾರೆ.

1. ಪದ್ಮ ವೇಷ (ಕಮಲ ವೇಷ): ವಿಗ್ರಹದ ಮುಖಾರವಿಂದವೆಲ್ಲ ಕಮಲದ ರೀತಿಯಲ್ಲಿ ಹೊಳೆಯುತ್ತಿರುತ್ತದೆ. ಕೈಗಳು ಕಮಲದಂತೆಯೇ ಕಂಗೊಳಿಸುತ್ತಿರುತ್ತವೆ. ವಿವಿಧ ಹೂವುಗಳಿಂದ ಭಗವಂತನನ್ನು ಅಲಂಕರಿಸಲಾಗುತ್ತದೆ.

2. ಬಡಾ ಸಿಂಗಾರ್ ವೇಷ: ಭಗವಂತನಿಗೆ ಸುಂದರವಾದ ಹೂವುಗಳಿಂದ ನಮ್ಮ ಪುಷ್ಪಾಲಂಕಾರ ರೀತಿಯಲ್ಲಿ ಅಲಂಕರಿಸಿರುತ್ತಾರೆ. ಈ ವೇಷವನ್ನು ದಿನವೂ ರಾತ್ರಿ ಶಯನೋತ್ಸವಕ್ಕೆ ಮುಂಚೆ ಹಾಕಲಾಗುತ್ತದೆ. ಪುಷ್ಪಾಲಂಕಾರಕ್ಕೆ ಬೇರಾವ ಅಲಂಕಾರವು ಸಾಟಿಯೇ ಇಲ್ಲ ಎಂದು ಭಾವುಕ ಭಕ್ತರು ವರ್ಣಿಸುತ್ತಿರುತ್ತಾರೆ.

3. ಸುನಾ ವೇಷ : ಬಂಗಾರದ ಒಡವೆಗಳಿಂದ, ಕವಚಗಳಿಂದ, ರತ್ನಾಭರಣಗಳಿಂದ ದೇವರನ್ನು ಅಲಂಕರಿಸಲಾಗುತ್ತದೆ. ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ ರಥಾರೂಢರಾಗಿದ್ದಾಗಲೆ, ಭಗವಂತನು ಈ ವೇಷವನ್ನು ಧರಿಸುತ್ತಾನೆ.

4. ಗಜ ಉದ್ಧರಣ ವೇಷ : ಗಜೇಂದ್ರ ಮೋಕ್ಷವನ್ನು ನೆನಪಿಸುವ ಈ ಅಲಂಕಾರ ಜನಪ್ರಿಯ ಅಲಂಕಾರಗಳಲ್ಲೊಂದು. ಇದೇ ರೀತಿ ಪುರಾಣ ಪ್ರಸಂಗದ ಹಲವಾರು ವೇಷಗಳಿವೆ. ಬಲಭದ್ರಸ್ವಾಮಿಗೆ ಹಾಕುವ ಪ್ರಲಂಭಾಸುವಧ ವೇಷ ಸಹ ಭಾಗವತ ಕಥಾ ಸಂದರ್ಭದ್ದೇ ಆಗಿದೆ. ಕಾಲೀಯ ದಮನ, ವನಭೋಗಿ, ಮುಂತಾದ ಅಲಂಕಾರಗಳು ಭಾಗವತದಿಂದ ಉದ್ಧೃತವಾದ ಪ್ರಸಂಗವನ್ನು ನೆನಪಿಸುತ್ತದೆ. ಒಟ್ಟಾರೆಯಾಗಿ ಭಾಗವತ ಆಧರಿಸಿದ 12 ವೇಷಗಳಿವೆ.

5. ದಶಾವತಾರ ವೇಷ : ದಶಾವತಾರ ವೇಷದಲ್ಲಿ ವಾಮನ ವೇಷ, (ವಾಮನ ಅಲಂಕಾರ) ರಘುನಾಥ ವೇಷ, (ಶ್ರೀರಾಮನ ಅಲಂಕಾರ), ನೃಸಿಂಗ ವೇಷ (ಶ್ರೀ ನರಸಿಂಹ ಅಲಂಕಾರ) ಪ್ರಮುಖವಾಗಿದೆ. ಈ ಅಲಂಕಾರಗಳನ್ನು ಆಯಾ ಅವತಾರ ಉತ್ಸವದ ದಿನ ಭಗವಂತ ಧರಿಸುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi