ತನ್ನನ್ನು ಸಂಹರಸಲೆಂದೇ ಹುಟ್ಟಿರುವ ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆಂಬುದು ದುರುಳ ಕಂಸನಿಗೆ ಹೇಗೋ ತಿಳಿಯಿತು. ಬಾಲಕ ಕೃಷ್ಣನನ್ನು ಕೊಲ್ಲಲು ಆತ ಬಗೆ ಬಗೆಯ ತಂತ್ರಗಳನ್ನು ಹೂಡಿದ. ಒಂದು ಸಲ ಪೂತನಿ ಎನ್ನುವ ರಾಕ್ಷಸಿಯೊಬ್ಬಳನ್ನು ಕರೆದು, ನಗರಗಳಲ್ಲಿ, ಹಳ್ಳಿಗಳಲ್ಲಿ, ಹುಲ್ಲುಗಾವಲುಗಳಲ್ಲಿ ಇರುವ ಮಕ್ಕಳನ್ನೆಲ್ಲ ಕೊಲ್ಲುವಂತೆ ಆಜ್ಞೆಮಾಡಿದ. ಪೂತನಿ, ಗೋಕುಲಕ್ಕೆ ಬಂದು, ಯಾರ ಅನುಮತಿಯೂ ಇಲ್ಲದೆ, ನಂದ ಮಹಾರಾಜನ ಅರಮನೆಯನ್ನು ಪ್ರವೇಶಿಸಿದಳು.

ತನ್ನನ್ನು ಮಾಯಾ ಶಕ್ತಿಯಿಂದ ಒಬ್ಬ ಸುಂದರ ಯುವತಿಯಾಗಿ ಮಾರ್ಪಡಿಸಿಕೊಂಡಳು. ಮೆಲ್ಲನೆ ತಾಯಿ ಯಶೋದಾಳ ಮನೆಯೊಳಗೆ ನುಸುಳಿದಳು. ಅವಳ ಅದ್ಭುತ ಸೌಂದರ್ಯವನ್ನು ನೋಡಿ ಯಾರೂ ಅವಳನ್ನು ತಡೆಯಲಿಲ್ಲ. ಅನೇಕಾನೇಕ ಮಕ್ಕಳನ್ನು ಆಗಲೇ ಕೊಂದಿದ್ದ ಪೂತನಿ, ಒಂದು ಪುಟ್ಟ ತೊಟ್ಟಿಲಲ್ಲಿ ಬಾಲಕೃಷ್ಣ ಮಲಗಿರುವುದನ್ನು ನೋಡಿದಳು ಮತ್ತು ಆ ಮಗು ತನ್ನಲ್ಲಿ, ಬೂದಿ ಮುಚ್ಚಿದ ಕೆಂಡವನ್ನು ಹೋಲುವ ಅಪಾರ ಶಕ್ತಿಯನ್ನು ಅಡಗಿಸಿಕೊಂಡಿದೆ ಎಂದವಳಿಗೆ ಗೊತ್ತಾಯಿತು.
“ಈ ಮಗು ಎಷ್ಟೊಂದು ಶಕ್ತಿಶಾಲಿಯಾಗಿದೆಯೆಂದರೆ, ಇದಕ್ಕೆ ಈ ಕ್ಷಣದಲ್ಲೇ ಇಡೀ ವಿಶ್ವವನ್ನು ದ್ವಂಸಮಾಡುವಷ್ಟು ಶಕ್ತಿ ಇದೆ.” ಅವಳು ಅಂದುಕೊಂಡಳು.
ಪೂತನಿ ತನ್ನ ತೊಡೆಯ ಮೇಲೆ ಬಾಲಕೃಷ್ಣನನ್ನು ಮಲಗಿಸಿಕೊಳ್ಳುತ್ತಿರುವುದನ್ನು, ಯಶೋದ ಮತ್ತು ರೋಹಿಣಿ ಇಬ್ಬರೂ ನೋಡುತ್ತಿದ್ದರು. ಅವಳು ತುಂಬಾ ಸುಂದರವಾಗಿ ಉಡುಪು ಧರಿಸಿರುವುದರಿಂದ ಮತ್ತು ಕೃಷ್ಣನತ್ತ ಅವಳು ಮಾತೃವಾತ್ಸಲ್ಯವನ್ನು ತೋರಿಸುತ್ತಿದ್ದುದರಿಂದ, ಅವರಿಬ್ಬರೂ ಅವಳನ್ನು ತಡೆಯಲಿಲ್ಲ. ತನ್ನ ಮೊಲೆಗಳಿಗೆ ತುಂಬಾ ಶಕ್ತಿಶಾಲಿ ವಿಷವನ್ನು ತುಂಬಿದ್ದ ಪೂತನಿ ಅದನ್ನು ಕೃಷ್ಣನ ಬಾಯಿಯೊಳಗಿಟ್ಟಳು. ಅವನದನ್ನು ಹೀರಿದ ಕೂಡಲೇ ಸಾಯುತ್ತಾನೆ ಎಂದು ನಂಬಿಕೊಂಡಿದ್ದಳು.

ಆದರೆ, ಬಾಲಕೃಷ್ಣ ತುಂಬಾ ಕೋಪದಿಂದ ಅದಕ್ಕೆ ಬಾಯಿಟ್ಟ. ಅಲ್ಲಿದ್ದ ವಿಷದ ಹಾಲನ್ನು ಹೀರುವುದರೊಂದಿಗೆ ಆ ರಾಕ್ಷಸಿಯ ಪ್ರಾಣವಾಯುವನ್ನೂ ಹೀರಿಬಿಟ್ಟ!
ಕೃಷ್ಣ, ಅವಳ ಮೊಲೆಗಳನ್ನು ಗಟ್ಟಿಯಾಗಿ ಅದುಮಿ ಅವಳ ಉಸಿರನ್ನೇ ಹೀರೆತೊಡಗಿದಾಗ, ಪೂತನಿ ನೆಲದ ಮೇಲೆ ಬಿದ್ದಳು. ತನ್ನ ಕೈಕಾಲುಗಳನ್ನು ಹರಡಿಕೊಂಡು, “ಅಯ್ಯೋ-ಮಗುವೇ, ನನ್ನನ್ನು ಬಿಡು.” ಎಂದು ಕೂಗುತ್ತ ಅಳತೊಡಗಿದಳು. ಅವಳು ಜೋರಾಗಿ ಕಿರಿಚುತ್ತಿದ್ದಳು ಬೆವರು ಸುರಿಸುತ್ತಿದ್ದಳು. ಅವಳ ಇಡೀ ದೇಹ ಒದ್ದೆಮುದ್ದೆಯಾಗಿ ಹೋಗಿತ್ತು. ಅವಳು ಹೀಗೆ ಕಿರುಚುತ್ತಾ ಸುತ್ತುಬಿದ್ದಾಗ, ಭೂಮಿಯ ಮೇಲೆ ದೊಡ್ಡದೊಂದು ಕಂಪನದ ಅನುಭವವಾಯಿತು.
ಮೇಲಿನ-ಕೆಳಗಿನ ಗ್ರಹಗಳಲ್ಲಿ ಮತ್ತು ಎಲ್ಲ ದಿಕ್ಕುಗಳಲ್ಲಿ ಸಿಡಿಲು ಬಡಿಯಿತು ಎಂದು ಜನಗಳು ಭಾವಿಸಿದರು. ಈ ರೀತಿ ಪೂತನಿ ಎನ್ನುವ ಮಾಟಗಾತಿಯ ಭೀತಿ ಕೊನೆಗೊಂಡಿತು. ಅವಳು ಪುನಃ ತನ್ನ ಭಾರಿ ರಾಕ್ಷಸಿ ರೂಪವನ್ನು ಪಡೆದುಕೊಂಡಳು. ಕೆಳಗೆಬಿದ್ದ ಅವಳ ದೇಹ ಹನ್ನೆರಡು ಮೈಲುಗಳಷ್ಟು ದೂರ ಹರಡಿಕೊಂಡಿತು. ಅಲ್ಲಿನ ಗಿಡಮರಗಳನ್ನೆಲ್ಲ ಚೂರುಚೂರಾಗಾಗಿಸಿತು. ಜೊತೆಗೆ ಅವಳ ದೈತ್ಯಾಕಾರದ ಈ ರಾಕ್ಷಸ ದೇಹವನ್ನು ನೋಡಿ ಎಲ್ಲರೂ ಆಶ್ವರ್ಯದಿಂದ ಬೆರಗಾದರು.

ಸ್ವಲ್ಪವೂ ಹೆದರಿಕೆ ಇಲ್ಲದಂತೆ ಪೂತನಿಯ ತೊಡೆಯಮೇಲೆ ಆಡುತ್ತಿರುವ ಪುಟ್ಟ ಕೃಷ್ಣನನ್ನು ನೋಡಿ ಗೋಪಿಯರೆಲ್ಲ ಓಡಿಬಂದು ಅವನನ್ನು ಎತ್ತಿಕೊಂಡರು. ತಾಯಿ ಯಶೋದಾ, ರೋಹಿಣಿ ಮತ್ತು ಬೇರೆ ಗೋಪಿಯರೆಲ್ಲರೂ ಕೂಡಲೇ ಹಸುವೊಂದರ ಬಾಲವನ್ನು ಹಿಡಿದು ಕೃಷ್ಣ ಶರೀರಕ್ಕೆ ನೀವಾಳಿಸಿ ಬಂದಿರಬಹುದಾದ ದೋಷಗಳನ್ನೆಲ್ಲ ತೆಗೆದು ಹಾಕಿದರು.
ಇದಾದ ಮೇಲೆ, ವ್ರಜನಾಡಿನ ಎಲ್ಲ ಪ್ರಜೆಗಳೂ ಸೇರಿ ಪೂತನಿಯ ಆ ಬೃಹತ್ ದೇಹವನ್ನು ತುಂಡುತುಂಡಾಗಿ ಕತ್ತರಿಸಿ, ಸೌದೆಗಳೊಂದಿಗೆ ಸುಡಲು ಪೇರಿಸಿ ಇಟ್ಟರು. ಪೂತನಿಯ ಅಂಗಾಂಗಗಳು ಸುಡುತ್ತಿದ್ದಾಗ, ಆ ಬೆಂಕಿಯಿಂದ ಹೊರಬರುತ್ತಿದ್ದ ಹೊಗೆ ಅಗುರಿನ ಸುವಾಸನೆಯನ್ನು ಹರಡಿಸಿತು.
ಪೂತನಿಯ ಎಲ್ಲ ಪಾಪಕರ್ಮಗಳೂ ಸುಟ್ಟು ಭಸ್ಮವಾಗಿ ಅವಳು ಒಂದು ದಿವ್ಯ ದೇಹವನ್ನು ಹೊಂದಿದಳು. ದೇವೋತ್ತಮ ಪರಮ ಪುರುಷ, ಹೇಗೆ ಸರ್ವಶ್ರೇಷ್ಠ ಎನ್ನುವುದಕ್ಕೆ ಇದೊಂದು ಉದಾಹರಣೆ: ಪೂತನಿ ಅವನನ್ನು ಸಾಯಿಸಲು ಬಂದಿದ್ದಳು. ಆದರೆ, ಅವಳು ದೇವನಿಗೆ ಹಾಲನ್ನು ಉಣಿಸಿದ್ದರಿಂದ, ಕೂಡಲೇ ಪುನೀತಳಾದಳು ಮತ್ತು ಸದ್ಗತಿ ಪಡೆದುಕೊಂಡಳು.
Leave a Reply