ಸಾಕ್ಷಿ ಗೋಪಾಲ

ಇಡೀ ಜಗತ್ತಿಗೆ ಭಾರತದ ಅದ್ವಿತೀಯ ಕೊಡುಗೆ – ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಷ್ಣು ಸಹಸ್ರ ನಾಮಾದಿ ಅನೇಕ ಸ್ತೋತ್ರಗಳು, ಭಾಗವತ, ಇತ್ಯಾದಿ ಇತ್ಯಾದಿ.

ಭಕ್ತಿ ರಸಸ್ವರದಿ ಭಾಗವತ ಗ್ರಂಥ ಉನ್ನತಿಯನ್ನು ಮೆರೆಸುವ ಭಕ್ತಿ ಕಾವ್ಯ ಕೂಡ ಆಗಬಲ್ಲುದು. ಶ್ರೀ ಮನ್ಮಹಾವಿಷ್ಣುವಿನ, ಶ್ರೀ ಕೃಷ್ಣನ, ದಿವ್ಯವಾದ ಕಥೆ-ಸ್ತುತಿ, ಕುರಿತಂತೆ ಶ್ರವಣ (ಆಲಿಸುವುದು) ಸ್ಮರಣಂ (ನೆನಪು ಮಾಡಿಕೊಳ್ಳುವುದು), ಕೀರ್ತನಂ (ಭಗವಂತನ ಗುಣಗಾನ), ದೇವ ದೇವೋತ್ತಮನನ್ನು ಅಚಲವಾಗಿ ಸೇವಿಸುವುದು, (ಪಾದ ಸೇವನ), ಆತನನ್ನು ಅರ್ಚಿಸುವುದು, ಪೂಜಿಸುವುದು (ಅರ್ಚನ), ಆತನಿಗೆ ಯಾವಾಗ್ಯೂ ನಮಿಸುವುದು (ವಂದನ), ಆ ದೇವೋತ್ತಮನ ದಾಸಾನುದಾಸರಾಗಿ, ದಾಸದಾಸೋಽಹಂ ಎಂಬುವ ಅಹಂ” ಇರದ ದಾಸ್ಯತ್ವದಲ್ಲಿರುವುದು (ದಾಸ್ಯ), ಅರ್ಜುನನಂತೆ ಪುಣ್ಯಶಾಲಿಯಾಗದಿದ್ದರೂ, ಶ್ರೀ ಕೃಷ್ಣನ ದಿವ್ಯ ಸ್ನೇಹವನ್ನು ಸರ್ವಥಾ ಇಷ್ಟಪಡುವುದು (ಸಖ್ಯ), ಹಾಗೂ “ನಿನ್ನುಳಿದು ನನಗಿನ್ಯಾರೂ ಇಲ್ಲ. ನನ್ನದೆಲ್ಲ ನೀನೇ ಬಲ್ಲೆ.

ನಿನಗೇ ನಿವೇದಿಸಿಕೊಳ್ಳುತ್ತಿದ್ದೇನಯ್ಯ ಮಹಾಪ್ರಭೂ!”  ಎಂಬುವ ಆತ್ಮನಿವೇದನಾ ರೂಪ. ಹೀಗೆ ಒಂಭತ್ತು ವಿಧದ ಭಕ್ತಿ ಭಾವಗಳಿಂದ ಆ ದೇವೋತ್ತಮ ಪರಮ ಪುರುಷನ ಪ್ರೀತಿ-ಅನುರಕ್ತಿಗೆ ಪಾತ್ರರಾಗಲು ಇರುವ ಏಕೈಕ ಅದ್ವಿತೀಯ ಪರಿಕರ – “ಭಕ್ತಿ”, ಭಕ್ತ-ಭಗವಂತರ ನಡುವಣ ಸೇತು, ಭಕ್ತಿ. ಪುರಂದರದಾಸರಂಥ ದಾಸವರೇಣ್ಯರು ಹಾಡುವ, “ಕೇಳನೋಹರಿ ತಾಳನೋ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ’ ಎನ್ನುವ ಕೀರ್ತನೆಯಲ್ಲಿ ಪ್ರೇಮ ಪರಮ ಪ್ರೇಮ ಸ್ವರೂಪವಾದ ಭಕ್ತಿ ಇರದ ಗಾನ ಬರೀ ವಾದ್ಯ ಮೇಳ, ಸ್ವಹೋರಾಟವಾದೀತು, ಅಷ್ಟೇ !

ಶ್ರೀಮದ್ಭಾಗವತದಲ್ಲಿ ಇಂಥ ಭಕ್ತಿ-ಭಕ್ತರ ಕಥನ ಅನೇಕ. ಅಂತಹ ಒಂದು ಕಥನ ಸಾಕ್ಷಿ ಗೋಪಾಲ. ಗೋಪಾಲನ ವಿಗ್ರಹ ತನ್ನ ಪರಿಶುದ್ಧ ಭಕ್ತರ ಸಲುವಾಗಿ ಸಾಕ್ಷಿಯಾಗಿ ವೃಂದಾವನದಿಂದ ಕಟಕ್‌ ಗೆ ಬಂದ ಸುಂದರ ನಾಡಾದ ಈಗಲೂ ಜಗನ್ನಾಥ ಪುರಿಯಿಂದ 8 ಕಿ.ಮೀ. ದೂರದಲ್ಲಿ ಸ್ವೀಕರಿಸುತ್ತಿದ್ದಾನೆ.

ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಪ್ರವಾಸದ ಸಮಯದಲ್ಲಿ ಇಲ್ಲಿಗೆ ಬಂದು ಸಾಕ್ಷಿ ಗೋಪಾಲನ ಲೀಲೆಯನ್ನು ನಿತ್ಯಾನಂದ ಪ್ರಭುಗಳಿಂದ ಶ್ರವಣ ಮಾಡಿ ಆನಂದ ತುಂದಿಲರಾದರು. ಇದರಲ್ಲಿ ಇಬ್ಬರು ಸದ್ಬ್ರಾಹ್ಮಣರ ಕೃಷ್ಣನ ಭಕ್ತಿಯನ್ನು, ಅವರ ಧರ್ಮ ನಿಷ್ಠೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ.

ಪ್ರಾಚೀನ ಭಾರತದ ಒಂದು ಗ್ರಾಮ “ವಿದ್ಯಾನಗರ.” ಆ ಗ್ರಾಮಗಳ ಹೆಮ್ಮೆ ಹಾಗೂ ವೈಭವ ಒದಗಿದ್ದು, ‘ದೈವ’ ಸಾಕ್ಷಿಯನ್ನೇ ಕರೆಯುವಂಥ ದಿವ್ಯಕ್ಷಣಗಳು! ವಿದ್ಯಾನಗರ ಗ್ರಾಮದಲ್ಲಿ ಇಬ್ಬರು ವಿಪ್ರರಿದ್ದರು. ಸಾತ್ವಿಕರು, ಪ್ರಾಮಾಣಿಕರು, ಇಬ್ಬರಿಗೂ ಪರಮ ದೇವೋತ್ತಮ ಪುರುಷ ಶ್ರೀಕೃಷ್ಣನಲ್ಲಿ ಅಪಾರವಾದ ಭಕ್ತಿ. ಆ ಗ್ರಾಮದವರು ‘ಬಡಾ ವಿಪ್ರ’, ‘ಛೋಟಾ ವಿಪ್ರ’ ಎಂಬುವ ಹೆಸರಲ್ಲಿ ಅವರನ್ನು ಕರೆಯುತ್ತಿದ್ದರು.

ಒಮ್ಮೆ ಒಂದು ಸಂದರ್ಭ, ಅವರಿಬ್ಬರೂ ಯಾತ್ರೆ ಹೊರಟರು. ಅಲ್ಲಲ್ಲಿ ಹಲವಾರು ಪವಿತ್ರ ಯಾತ್ರಾಸ್ಥಳಗಳನ್ನು ಸಂದರ್ಶಿಸಿದ ನಂತರ, ಕಟ್ಟಕಡೆಗೆ ಇಬ್ಬರೂ ಶ್ರೀಕೃಷ್ಣ ಪ್ರಭುವಿನ ಲೀಲಾ ವಿನೋದಗಳಿಗೆ ಸಮೃದ್ಧ ನೆಲೆಯಾದ ವೃಂದಾವನ ಕ್ಷೇತ್ರ ತಲುಪಿದರು. ಶ್ರೀ ವೃಂದಾವನದ ಒಂದೊಂದು ಕಲ್ಲೂ ಪರಮಾತ್ಮನ ಪಾದಾರವಿಂದ ಸ್ಪರ್ಶ ಪಡೆದ ಪವಿತ್ರ ತಾಣ.

ಪರಮಾತ್ಮನ ಬಹು ಹಿಂದಿನ ಅದ್ಭುತ ಲೀಲಾ ವಿನೋದಗಳ ದೃಶ್ಯವನ್ನು ಮತ್ತೆ ದರ್ಶಿಸುವ, ದರ್ಶನವಾಗಿ ಕಾಣುವಂಥ ಸೌಭಾಗ್ಯವೊದಗಿತಲ್ಲ ಎಂಬುದಾಗಿ ಬಡಾ-ಛೋಟಾ ವಿಪ್ರರಿಗೆ ಖುಷಿಯೇ ಖುಷಿ! ಹೀಗಿದ್ದರೂ ಇನ್ನಿತರವೆಲ್ಲದಕ್ಕಿಂತ ಹೃದಯಸ್ಪರ್ಶಿ ಎಂದವರಿಗೆ ಅನ್ನಿಸಿದ್ದು, ಅಲ್ಲಿ ಪ್ರತಿಷ್ಠಿತವಾಗಿದ್ದ ಗೋಪಾಲನ ಮನ ಮೋಹಕ ಮೂರ್ತಿ!

ಅವರ ಪ್ರವಾಸದ ಹಾದಿಯುದ್ದಕ್ಕೂ ‘ಛೋಟಾ ವಿಪ್ರ’ ‘ಬಡಾ ವಿಪ್ರ’ನಿಗೆ ಆತನ ಎಲ್ಲ ಅಗತ್ಯಗಳನ್ನು ಗಮನಿಸುತ್ತ, ಹಲವಾರು ವಿಧದಲ್ಲಿ ತೃಪ್ತಿಕರವೆನಿಸುವ ಸೇವೆ ಸಲ್ಲಿಸಿದ್ದ. ಒಂದು ದಿನ, ಒಮ್ಮೆ ಬಡಾ ವಿಪ್ರ ನುಡಿದ, “ನೀನು, ನಿನ್ನ ಮನಸಾರೆ ಸೇವೆ ಸಲ್ಲಿಸಿ, ನನ್ನನ್ನು ಬಹಳ ಋಣದಲ್ಲಿ ಇರಿಸಿ ಬಿಟ್ಟಿದೀಯೆ”, “ಅದೆಷ್ಟರ ಮಟ್ಟಿಗೆ ನೀನು ನನ್ನ ಕ್ಷೇಮ, ಅಗತ್ಯಗಳನ್ನು ಮನಗಂಡು ಸೇವಿಸುತ್ತಿದೀಯ.

ಈ ಋಣವನ್ನು ಸಲ್ಲಿಸದಿರುವುದು, ನನ್ನ ಪಾಲಿಗೆ “ಕೃತಘ್ನ” ನೆನೆಸಿಕೊಂಡು ಬಿಟ್ಟೇನೋ ಎಂಬುವ ಶಂಕೆ ನನ್ನದು. ಅದರಿಂದ ನಿನಗೆ ನಾನು ಮಾಡಬೇಕೆಂದಿರುವುದೇನೆಂದರೆ, ನಮ್ಮೂರು ಸೇರಿದ ನಂತರ ನನ್ನ ಮಗಳನ್ನು ನಿನಗೆ ಮದುವೆ ಮಾಡಿಕೊಡುವೆನಯ್ಯ.”

“ಓಹ್! ಎಂಥ ಅಸಂಬದ್ಧ ಆಲೋಚನೆ”, ಉತ್ತರಿಸಿದ ಛೋಟಾ ವಿಪ್ರ. ಬಡಾ ವಿಪ್ರನ ಪ್ರಸ್ತಾಪಕ್ಕೆ ಚಕಿತನಾಗಿ!

“ನೀನೋ ನನಗಿಂತ ಉತ್ತಮ ಶ್ರೇಣಿಯ ಬ್ರಾಹ್ಮಣ. ನಮ್ಮಿಬ್ಬರ ನಡುವೆ ವೈವಾಹಿಕ ನಂಟು ಆದರೂ ಹೇಗೆ ಸಾಧ್ಯವಾದೀತು? ನಿಜವಾಗಿ ನೀನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ”.

ಬಡಾ ವಿಪ್ರ ಮರುನುಡಿದ : ‘ನಾನು ಆ ರೀತಿ ಅಂದುಕೊಂಡಿದ್ದೇನೆ, ಹಾಗೇ ಮಾಡುವೆ”. “ಉತ್ತಮ ಜಾತಿ ಅಥವಾ ಕೀಳು ಜಾತಿ ನನಗೆ ಬರುವ ವಿಚಾರವೇ ಅಲ್ಲ, ನಿನ್ನ ಸೇವಾ ಮನೋಧರ್ಮವು ನನಗೆ ಪರಮ ಪ್ರಿಯ ಆಗಿದೆ.”

ಛೋಟಾ: “ಸರಿ ಹಾಗಿದ್ದಲ್ಲಿ, ಒಬ್ಬ ಸಾಕ್ಷಿಯೆದುರು ನೀನು ಕೊಟ್ಟ ವಾಗ್ದಾನ.

ಬಡಾ: ಈಡೇರಿಸಲು ತಯಾರಿದ್ದಿಯೇನು?

ಛೋಟಾ: “ಖಂಡಿತ”

ವೃಂದಾವನದ ಆಧಿದೈವ ಗೋಪಾಲ! ಛೋಟಾವಿಪ್ರನ ಮನದಲ್ಲಿ ಗೋಪಾಲನೇ ತನ್ನ ಸಾಕ್ಷಿಯೆಂದು ಭಾವಿಸಿದ್ದ. ಆ ಪ್ರಭುವೆದುರಲ್ಲೇ ತನ್ನ ಮಾತು ನೆರವೇರಿಸುವೆನೆಂದು ಬಡಾ ವಿಪ್ರ ಮತ್ತೆ ನುಡಿದ. ಇಬ್ಬರೂ ಪ್ರವಾಸ, ಯಾತ್ರೆ ಮುಗಿಸಿದರು.

ತೀರ್ಥಯಾತ್ರೆ ಮುಗಿಸಿ, ವಿದ್ಯಾನಗರಕ್ಕೆ ಹಿಂತಿರುಗಿದ ನಂತರ, ಛೋಟಾ ವಿಪ್ರ, ಬಡಾ ವಿಪ್ರನಿಗೆ, ಆತ ನೀಡಿದ ವಾಗ್ದಾನವನ್ನು ನೆನಪಿಸಿದ.

ಆದರೆ, ಬಡಾ ವಿಪ್ರನ ಕುಟುಂಬದವರು ಈ ಪ್ರಸ್ತಾಪವನ್ನು ಕಟುವಾಗಿ ವಿರೋಧಿಸಿದರು. “ನಮ್ಮದೇ ಉನ್ನತ ವರ್ಗದ ಕುಟುಂಬ. ಈ ಪ್ರಸ್ತಾಪ ಮುಂದುವರಿದರೆ, ನಮ್ಮ ಜಾತಿ ಮಟ್ಟವು ಇಳಿಯುವುದಷ್ಟೇ. ಅದರಿಂದಾಗಿ ನಮಗೇ ಆಪತ್ತು” ಎಂದು ಬಡಾ ವಿಪ್ರನ ಮನೆಯವರು ಕೂಗಾಡಿದರು. “ಆದರೆ ! ನಾನು ಮಾತು ಕೊಟ್ಟಿದ್ದೇನೆ” ನುಡಿದ ಬಡಾ ವಿಪ್ರ. ಕುಟುಂಬವನ್ನು ಕೋರಿದ “ನಾನು ವಚನವಿತ್ತಿರುವ ಪ್ರಯುಕ್ತ ಈಗ ಅದರಿ೦ದ ಹಿಮ್ಮುಖನಾಗುವುದು ಹೇಗೆ?”

ಬಡಾ ವಿಪ್ರನ ಮನೆಯವರು ಅವನ ಮಾತನ್ನು ಆಲಿಸುವ ಸ್ಥಿತಿಯಲ್ಲಿರಲಿಲ್ಲ. ಅವನ ಬಗ್ಗೆ ಯಾವುದೇ ಅನುಕಂಪ ಕೋರಲಿಲ್ಲ. ಅವನ ಮಗನಂತೂ ಅದೆಷ್ಟು ಉಗ್ರವಾಗಿ ಮುಂದುವರಿದನೆಂದರೆ, ಈ ವಿಚಾರವನ್ನು ಕೈಬಿಡದಿದ್ದಲ್ಲಿ ತಾನು ವಿಷ ಕುಡಿಯುವೆನೆಂದು ಅಥವಾ ತನ್ನನ್ನು ತಾನೇ ಇರಿದುಕೊಂಡು ಪ್ರಾಣ ತೊರೆಯುವೆನೆಂದು ಸಾರುವ ತನಕ! ಬಡಾ ವಿಪ್ರನ ಮಗನು ಸ್ವಲ್ಪ ಚಾಲಕಿ ಅವನು, ತನ್ನತಂದೆಗೆ ಹೀಗೆಂದನು.

ಛೋಟಾ ವಿಪ್ರನು “ನೀನು ದೇವರ ಮುಂದೆ ವಚನವನ್ನು ನೀಡಿದೆ” ಎಂದು ಹೇಳಿದಾಗ, “ನನಗೆ ಏನೂ ಜ್ಞಾಪಕವಿಲ್ಲ ಎಂದು ಬಿಡು ಮಿಕ್ಕಿದ್ದನ್ನು ನಾನು ನೋಡಿಕೊಳ್ಳುವೆ” ಎಂದನು!

ಬಡಾ ವಿಪ್ರನಿಗೆ ಇದೀಗ ಗೊಂದಲ! ದ್ವಂದ್ವ! ಮಗನೂ ಅಗತ್ಯ, ಕುಟುಂಬದವರೂ ಬೇಕು. ತನ್ನನ್ನು ಪರಿಪರಿಯಾಗಿ ಪ್ರೀತಿಯಿಂದ ಸೇವಿಸಿದ ಛೋಟಾ ವಿಪ್ರನಿಗೆ ನೀಡಿದ ಮಾತನ್ನು ಈಡೇರಿಸಬೇಕು!

ಛೋಟಾ ವಿಪ್ರನು ಶಮ, ದಮದಲ್ಲಿ ಸಂಪೂರ್ಣ ಸಾಧಿಸಿದವನಾಗಿದ್ದನು. ಅವನಿಗೆ ಬಡಾ ವಿಪ್ರನ ಮಗಳು ವಿವಾಹವಾಗುವ ಆಸೆಯಿರದಿದ್ದರೂ, ತನ್ನ ಬ್ರಾಹ್ಮಣ ಮಿತ್ರನು ಗೋಪಾಲ ವಿಗ್ರಹದ ಮುಂದೆ ನೀಡಿದ ವಚನದಿಂದ ಭ್ರಷ್ಟನಾಗುವನಲ್ಲ ಎಂಬ ಒಳ ತುಡಿತವಿತ್ತಷ್ಟೆ. ಅದೇ ಬಡಾ ವಿಪ್ರನಿಗೆ, ವಚನ ನಿಭಾಯಿಸುವ ಆಸೆಯಿದ್ದಿದ್ದರೂ ತನ್ನ ಕುಟುಂಬದವರ ಮರಣಕ್ಕೆ ಕಾರಣನಾಗುತ್ತೇನಲ್ಲ ಎಂಬ ವ್ಯಥೆಯು ಕಾಡುತ್ತಿತ್ತು. ಒಟ್ಟಿನಲ್ಲಿ ಭಾರಿ ಸಂಧಿಗ್ಧ ಸ್ಥಿತಿ ಏರ್ಪಟ್ಟಿತ್ತು.

ಛೋಟಾ ವಿಪ್ರನು ಮನೆಗೆ ಬಂದಾಗ ಬಡಾ ವಿಪ್ರನ ಮಗನು ಛೋಟಾನಿಗೆ ಕಟುವಾಗಿ ಬೈದ, ಹಾಗೂ ತನ್ನ ತಂದೆಯ ಮನಸ್ಸು ಗೆಲ್ಲಲು ‘ಎಂಥ ಉಪಾಯ ಮಾಡಿದೆ, ಎಂಬುದಾಗಿ ಕೈ ಎತ್ತಲೂ ಹೋದ!

“ನೀನು-ನಮ್ಮಪ್ಪ ಇಬ್ಬರೇ ಇದ್ದಿರಿ. ಅವರಿಗೆ ನೀನು ಭಂಗಿ ಸೊಪ್ಪು ತಿನ್ನಿಸಿ, ಅಮಲು ಬರಿಸಿ, ಅವರಲ್ಲಿದ್ದ ಹಣವನ್ನೆಲ್ಲ ಕದ್ದು ಬಿಟ್ಟಿದೀಯ. ಇಷ್ಟಲ್ಲದೇ ಅವನ ಪುತ್ರಿಯನ್ನು ನೀನು ಮದುವೆಯಾಗಬೇಕೆಂದು ನಮ್ಮನ್ನು ಪೀಡಿಸಿರುವೆ. ಪುಟ್ಟ ಮಗುವು ಚಂದ್ರನನ್ನು ಬಯಸುವಂತೆ, ನೀಚ ಜಾತಿಯ ಮಗನಾದ ನೀನು, ಉಚ್ಚಳಾದ ನನ್ನ ತಂಗಿಯನ್ನು ವರಿಸಲು ಇಚ್ಛಿಸುವೆಯಲ್ಲ ನೀನೊಬ್ಬ ಶತಮೂರ್ಖ ಎಂದು ಆರ್ಭಟಿಸಿದ.

ಹಳ್ಳಿಯ ಕೆಲವು ಗಣ್ಯರು “ಈ ಮಾತಿಗೆ ನಿನಗೆ ಯಾರಾದರೂ ಸಾಕ್ಷಿ, ಪ್ರಮಾಣ ಇದ್ದಾರೆಯೇ!” ಎಂದರು.

ಛೋಟಾ ವಿಪ್ರ ಮುಗ್ಧನಾಗಿ ನುಡಿದ: “ಖಂಡಿತ ಸಾಕ್ಷಿ ಇದ್ದಾನೆ. ವೃಂದಾವನದಲ್ಲಿರುವ ಗೋಪಾಲನೇ ಸಾಕ್ಷಿ. ಈ ಮಾತನ್ನು ಪ್ರಮಾಣೀಕರಿಸಲು ಬೇಕಾದಲ್ಲಿ ನಾನು ಅವನನ್ನೇ ಕರೆಯಬಲ್ಲೆ”.

ಹಿರಿಯರಿಗೆ, ಬಡಾ ವಿಪ್ರನನ್ನು, ತನ್ನ ವಚನಕ್ಕೆ ಅನುಸಾರ ಬದ್ಧವಾಗಿ ಮುಂದುವರಿಯಲು ಛೋಟಾ ವಿಪ್ರ ಒತ್ತಾಯಿಸಿದ್ದು, ಸಂದೇಹವಿಲ್ಲ ಹಾಗೂ ಆತನ ಸಾಕ್ಷ್ಯವೂ ಬಲವತ್ತರದ್ದೇನಿರಲಿಲ್ಲ.

ಛೋಟಾ ವಿಪ್ರನ ಮನಸ್ಸಿನ ಹಿನ್ನೆಲೆಯಲ್ಲಿ ಏನಿತ್ತೋ ಎಂದು ಅವರು ಅರಿಯದಾದರು.

ಬಡಾ ವಿಪ್ರನ ಮಗಳ ಕೈಹಿಡಿಯುವುದು ಛೋಟಾ ವಿಪ್ರನ ಘನತೆ, ಖುಷಿಯಾಗಿತ್ತೇ? ಖಂಡಿತಾ ಇಲ್ಲ. ಅಲ್ಲೊಂದು ಉನ್ನತ ಧ್ಯೇಯವಿತ್ತು. ಅದು, ಬಡಾ ವಿಪ್ರ ತಾನು ವಚನಭ್ರಷ್ಟನಾಗಿ ಪಾಪಕ್ಕೆ ಸಿಲುಕದಂತೆ ಕಾಪಾಡುವುದು ಛೋಟಾ ವಿಪ್ರನ ಉದ್ದೇಶ. ಅದೂ, ಗೋಪಾಲನೆದುರು ನೀಡಿದ ಮಾತು, ಅದನ್ನು ಅಗೌರವದಿಂದ ಕಾಣುವುದೇ? ಛೋಟಾ ವಿಪ್ರನ ಅನಿಸಿಕೆ, ಇದೇ!

ಗೋಪಾಲನೇ ಸ್ವಯಂ ಬಂದು ಸಾಕ್ಷ್ಯ ನೀಡುವ ವಿಚಾರವೆಂದರೆ, ಗ್ರಾಮದ ಜನರಿಗೆ ಛೋಟಾ ವಿಪ್ರನ ಮಾತಿನಲ್ಲಿ ನಂಬಿಕೆ ಇಲ್ಲದೇ ಅದೊಂದು ವಿಪರೀತ, ಭ್ರಮೆ ಎಂದೆನ್ನಿಸಿತು. ಇಷ್ಟಾದರೂ ಛೋಟಾ ವಿಪ್ರ ತಾನು ನಂಬಿದ ಪರಮ ಪ್ರಭುವಿನ ಅನಂತ ಕರುಣೆ ಕೃಪೆ ಕುರಿತು ಕಲ್ಲಿನಷ್ಟು ದೃಢ ಶ್ರದ್ಧೆಯಿಂದ ಇದ್ದ. ಅವನ ಹೃದಯದಲ್ಲಿ ಜ್ವಲಂತವಾಗಿ ಬೆಳಗುತ್ತಿದ್ದ ‘ಭಕ್ತಿ!ʼ ಅದರಿಂದಲೇ ಗೋಪಾಲನನ್ನೆ ಸಾಕ್ಷಿಯಾಗಿ ಕರೆತರಲು ಮತ್ತೆ ಬೃಂದಾವನಕ್ಕೆ ಹೊರಟ.

ಹೋಗುವ ಮುನ್ನ ಎಲ್ಲರ ಮುಂದೆ ಒಂದು ಲಿಖಿತ ಒಪ್ಪಂದವನ್ನು ಬರೆದ. ಗೋಪಾಲನು ಸಾಕ್ಷಿ ನೀಡಿದಲ್ಲಿ ತನ್ನ ಮಗಳನ್ನು ಛೋಟಾ ವಿಪ್ರನಿಗೆ ಕೊಡುವುದಾಗಿ ಆ ಬಡಾ ವಿಪ್ರ ಹಾಗೂ ಅವನ ಕುಟುಂಬದವರೆಲ್ಲರೂ ಸಹಿ ಹಾಕಿದರು. ಸ್ವಭಾವತಃ ನಾಸ್ತಿಕನಾಗಿದ್ದ ಆ ಬಡಾ ವಿಪ್ರನ ಮಗನು ಗೋಪಾಲನು ಬಂದು ಸಾಕ್ಷಿ ಹೇಳಲಾಗುವುದಿಲ್ಲ ಎಂದೆಣಿಸಿದ್ದನು. ಬಡಾ ವಿಪ್ರನಿಗೆ ಮತ್ತು ಈ ಛೋಟಾ ವಿಪ್ರನಿಗೆ ಗೋಪಾಲನು ಬಂದೇ ಬರುತ್ತಾನೆಂದು ಶ್ರದ್ಧೆ. ಒಟ್ಟಿನಲ್ಲಿ ಎಲ್ಲರಿಗೂ ಸಮನ್ವಯವಾಗುವಂತೆ ಕೃಷ್ಣನು ಉಪಾಯ ಮಾಡಿದನು.

ವಿದ್ಯಾನಗರದಲ್ಲಿದ್ದ ಬಡಾ ವಿಪ್ರನ ಪಾಡೋ? ಅವನ ಮನೆಯವರ ಕಠಿಣ ನಿಲುವು, ಛೋಟಾ ವಿಪ್ರನಿಗೆ ಕೊಟ್ಟ ವಾಗ್ದಾನಕ್ಕೆ ತಪ್ಪಿ ನಡೆದುದರಿಂದ ಪಾಪಕೃತ್ಯ ಎಸಗಿದೆನೆಂದೆನ್ನಿಸಿ, ಎಲ್ಲವೂ ಅವನೆದೆಯನ್ನು ಮಾನಸಿಕ ಹಿಂಸೆಗೆ ಒಳಪಡಿಸಿತು. ಬಡಾ ವಿಪ್ರನ ಎದೆಯಾಳದಿಂದ ಒಂದು ಹೃದಯ ವಿದ್ರಾವಕ ಕೂಗು, ತೀವ್ರವಾದ ಪ್ರಾರ್ಥನೆಯ ಮೊರೆ ಕೇಳಿಸಿತು.

“ನಿನ್ನ ನಮ್ರ ಸೇವಕ, ನನ್ನಂತೆಯೇ ಒಬ್ಬನಮ್ರ ಸೇವಕ, ಅಯ್ಯಾ ನನ್ನ ಪ್ರಭು ಗೋಪಾಲ, ಮುದ್ದು ಗೋಪಾಲ-ಕೃಪಾಳು ನೀನು ಬಾರಯ್ಯ ಬಂದೇ ಬರಬೇಕು ನೀನು, ಈ ಘೋರ ಪರೀಕ್ಷೆಯಿಂದ ನನ್ನನ್ನು ಪಾರುಗೊಳಿಸು.”

ಅದೇ ವೇಳೆಯಲ್ಲಿ ದೂರದ ಬೃಂದಾವನದಲ್ಲಿ ಒಂದು ನಾಟಕವೇ ನಡೆಯುತ್ತಿತ್ತು. ಅದರಲ್ಲಿ ಗೋಪಾಲ ಆಟದ ಒಲವಿನಲ್ಲಿದ್ದ.

ಛೋಟಾ ವಿಪ್ರನೋ ಮತ್ತೆ ಮತ್ತೆ ಕಾಡಿದ, ಬೇಡಿದ, ವಿದ್ಯಾನಗರಕ್ಕೆ ಬಂದು ಸಾಕ್ಷಿ ಹೇಳುವಂತೆ ಒತ್ತಾಯಿಸಿ ಪದೇ ಪದೇ ಪ್ರಾರ್ಥಿಸುತ್ತಿದ್ದ. ಅವನ ಪ್ರಾರ್ಥನೆಯನ್ನು ನಿರಾಕರಿಸಲು ಗೋಪಾಲನಿಗೆ ಅಸಾಧ್ಯವೆನಿಸತೊಡಗಿತ್ತು. ಒಂದೇ ಒಂದು ಆಟ ಆಡುವಾಸೆ ಗೋಪಾಲನಿಗೆ! “ನೋಡು, ನಾನು ಹೊರಗಿನವರ ಕಣ್ಣಿಗೆ ಕಲ್ಲು, ನಿನ್ನ ಗ್ರಾಮದವರೆಗೆ ನಡೆಯಲು ಹೇಗೆ ಆದೀತು ಹೇಳು?” “ಆಯಿತು ಬಿಡು”, ಕಲ್ಲಿನ ವಿಗ್ರಹ ನಡೆಯಲು ಸಾಧ್ಯವಿಲ್ಲ ಅಸಂಭವ ಕೂಡ. ಆದರೆ ಅದೇ ಕಲ್ಲಿನ ಮೂರ್ತಿ ನನ್ನ ಜತೆ ಹೇಗೆ ಮಾತಾಡುತ್ತಿದ್ದೀಯಲ್ಲ? ಅದು ನಡೆಯಲುಬಹುದು”.

ಛೋಟಾ ವಿಪ್ರ ಇಂತಹ ಅತೀವ ಮುಗ್ಧ ಭಕ್ತಿ, ಈ ಮುಗ್ಧತೆಯ ಜಾಣತನದ ಮಾತು, ಗೋಪಾಲನನ್ನು ಭಕ್ತನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. “ಒಳ್ಳೆಯದು ಛೋಟಾ! ಗೋಪಾಲ ತಿಳಿಸಿದ: “ನಿನ್ನೊಂದಿಗೆ ನಾನು ಬರುತ್ತೇನೆ. ಒಂದು ಷರತ್ತಿನ ಮೇರೆಗೆ, ನೀನು ಮುಂದೆ ಮುಂದೆ ನಡೆ, ನಾನು ನಿನ್ನನ್ನು ಹಿಂಬಾಲಿಸುವೆ… ನಾನು ನಿನಗೆ ಎಚ್ಚರಿಕೆ ನೀಡುತ್ತಿದ್ದೇನೆ, ಯಾವುದೇ ಕಾರಣಕ್ಕಾಗಿ ನೀನು ಹಿಂತಿರುಗಿ ನೋಡಕೂಡದು. ಹಾಗೊಂದು ವೇಳೆ ನೀನು ಹಿಂತಿರುಗಿ ನೋಡಿದರೆ, ನಾನು ಮುಂದೆ ಬರುವುದಿಲ್ಲ, ನಾನು ನಿನ್ನ ಹಿಂದೆ ಬರುತ್ತಿರುವೆನೆಂದು ಸೂಚಿಸಲು ನನ್ನ ಕಡಗಗಳ ಸದ್ದು ನಿನಗೆ ಕೇಳಿಸುತ್ತವೆ.”

ಛೋಟಾ ವಿಪ್ರ, ಗೋಪಾಲನ ಷರತ್ತಿಗೆ ಸಮ್ಮತಿಸಿ, ಇಬ್ಬರೂ ವಿದ್ಯಾನಗರದ ಹಾದಿ ಹಿಡಿದರು. ಕಡಗಗಳ ಸದ್ದು ಛೋಟಾ ವಿಪ್ರನಿಗೆ ಕೇಳಿಸುತ್ತಿತ್ತು. ಆತ ಹಿಂದಿರುಗಿ ನೋಡುವ ಸಾಹಸ ಮಾಡಲಿಲ್ಲ. ಆದರೆ ವಿದ್ಯಾನಗರದ ಹೊರವಲಯ ಸಮೀಪಿಸಿದಾಗ, “ಓಹೋ! ಏನೋ ಪ್ರಮಾದವಾಯ್ತು!’ ಎಂದು ಸಂದೇಹಿಸಿದ ಛೋಟಾ ವಿಪ್ರ ಹಿಂತಿರುಗಿ ಬಿಟ್ಟ! ಗೋಪಾಲ ಅಲ್ಲಿಯೇ ನಿಂತುಬಿಟ್ಟ! ಒಂದು ಹೆಜ್ಜೆಯೂ ಮುಂದಿಡಲಿಲ್ಲ, ಊರೋ ಇನ್ನೂ ಸಮೀಪಿಸಿದೆಯಷ್ಟೇ!

ಛೋಟಾ ವಿಪ್ರನು ಆತುರಾತುರದಿಂದ ಧಾವಿಸಿದ ಗ್ರಾಮಕ್ಕೆ, ತನ್ನ ಊರವರಿಗೆ, ತಿಳಿಸಲೋಸುಗ! ಮೊದಮೊದಲು ಯಾರೂ ನಂಬಿಲ್ಲ. ಅನಂತರ, ಇಡೀ ಗ್ರಾಮದವರು, ಛೋಟಾ ವಿಪ್ರನ ಮಾತಿನ ಸತ್ಯಾಸತ್ಯತೆಯರಿಯಲು, ಓಡಿ ಬಂದರು.

ಅಲ್ಲಿ ಆಶ್ಚರ್ಯ ಪರಂಪರೆಯೇ ಕಾದಿತ್ತು! ಛೋಟಾ ವಿಪ್ರ ಕಾತುರದ ಕಣ್ಣಿನಿಂದ, ದೈನ್ಯತೆ ಮೈವೆತ್ತಂತೆ, ಗೋಪಾಲ ಮೂರ್ತಿಯನ್ನು ಪ್ರಾರ್ಥಿಸುತ್ತಿದ್ದ. ನೀಲಾಗಸದಿಂದ ಗುಡುಗಿತು ಒಂದು ಧ್ವನಿ: “ಇದು ಸತ್ಯ… ಸಂಪೂರ್ಣ ಸತ್ಯ ಬಡಾ ವಿಪ್ರ ತನ್ನ ಮಗಳನ್ನು ಛೋಟಾನಿಗೆ ಧಾರೆಯೆರೆದು ಕೊಡುವೆನೆಂದು ವಾಗ್ದಾನ ನೀಡಿದ, ವಚನ ಬದ್ಧನಾಗಿದ್ದಾನೆ.

ಇಡೀ ಪರಿಸರ, ಗ್ರಾಮಸ್ಥರು, ನಿಶ್ಯಬ್ದ! ಎಲ್ಲರೂ ಈ ಆಕಾಶದ ಘೋಷಣೆಯನ್ನು ನೆಲಕ್ಕಂಟಿಕೊಂಡಂತೆ ಕಲ್ಪಿಸಿಕೊಂಡು ಕೇಳಿಸಿಕೊಂಡರು! ಪ್ರತ್ಯಕ್ಷನಿಂತ ಪುಟ್ಟ ಗೋಪಾಲನೆದುರು ನಿಂತು, ಇಬ್ಬರೂ ವಿಪ್ರರು ಭಕ್ತಿಯಿಂದ ನಡೆದ ಈ ಅದ್ಭುತ ಪವಾಡವನ್ನು ಗಮನಿಸಿ, ಮೂಕರಂತೆ ಇದ್ದರು.

ಬಡಾ ವಿಪ್ರನ ಪಾಡೋ? ““ತನ್ನ ಪ್ರಾರ್ಥನೆಯನ್ನು ಗೋಪಾಲ ಆಲಿಸಿದನಲ್ಲ” ಎಂದವನ ಹೃದಯ ಕೃತಜ್ಞತೆಯಿಂದ ತುಂಬಿತು.

ಮಾತನಾಡಲಾರದೆ, ಹಾಗೆ ಗೋಪಾಲನೆದುರು ಕುಸಿದ. ಅವನ ನರನಾಡಿಯು ಅನಿರ್ವಚನೀಯ ಆನಂದದಲ್ಲಿತ್ತು!

ಉಳಿದದ್ದು ಹೇಳುವುದೇನಿದೆ? ಬಡಾನ ಮಗಳ ಮದುವೆ, ಛೋಟಾನೊಂದಿಗೆ ನೆರವೇರಿತು. ಸಾಕ್ಷಿ ನೀಡಿದ  ಗೋಪಾಲನ ಆಗಮನದಿಂದ ಇಡೀ ಗ್ರಾಮದಲ್ಲಿ ಹಬ್ಬ ಸಂತಸ, ಸಂಭ್ರಮ! ಸ್ಥಳೀಯ ರಾಜನು, ಗೋಪಾಲಮೂರ್ತಿಗೊಂದು ಸುಂದರ ದೇವಾಲಯ ನಿರ್ಮಿಸಿದ. ವಿದ್ಯಾನಗರ, ಎರಡನೆಯ ಬೃಂದಾವನವೇ ಆಯಿತು.

ಸ್ವಲ್ಪ ಸಮಯ ಅಲ್ಲಿದ್ದ ಪ್ರಭು ಗೋಪಾಲ, ಅನಂತರ ಭಕ್ತರ ಕರೆಗೆ ಓಗೊಟ್ಟು ಪುರಿ (ಜಗನ್ನಾಥ)ಗೆ ಆಗಮಿಸಿದ.

ಅಲ್ಲಿಯೂ ಒಂದು ಆಶ್ಚರ್ಯಕರ ಘಟನೆಯು ಜರುಗಿತು. ಒಂದು ದಿನ, ಪುರಿಯ ಆಧಿದೈವ ಜಗನ್ನಾಥ ತನ್ನನ್ನು ಸೇವಿಸುತ್ತಿದ್ದವನೊಬ್ಬನಿಗೆ ದೂರಿದ. “ನೋಡಿ, ಇಲ್ಲಿ ನನಗೆ ನಿವೇದಿಸಿ ಇರಿಸಿದ ರುಚಿರುಚಿ ಖಾದ್ಯ, ಲಡ್ಡು ಮಿಠಾಯಿಗಳನ್ನು ಗೋಪಾಲ ಮೆಲ್ಲುತ್ತಿದ್ದಾನೆ. ಆ ನೈವೇದ್ಯವು ಅವನ ಸನ್ನಿಧಿಯ ಮೂಲಕ ನನಗೆ ಬರುವಾಗ ನನಗೆ ತಿನ್ನಲು ಏನೂ ಇರುವುದಿಲ್ಲ”.

ಭಕ್ತರೇನು ಮಾಡಿಯಾರು ಪಾಪ! ಗೋಪಾಲನಿಗೆ ಪ್ರತ್ಯೇಕವಾದೊಂದು ಮಂದಿರವನ್ನು “ಸತ್ಯವಾದಿ” ಎಂಬುವ ಊರಿನಲ್ಲಿ ನಿರ್ಮಿಸಿದರು. ಗೋಪಾಲನನ್ನು ಅಲ್ಲಿ “ಸಾಕ್ಷಿ ಗೋಪಾಲ’ ನೆಂಬುವ ಹೆಸರಲ್ಲಿ ಪ್ರತಿಷ್ಠಾಪಿಸಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi